ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಗಡಿಯಲ್ಲಿರುವ, ಮತ್ತು ಒಂದು ಕಾಲಕ್ಕೆ ಅಪ್ಪಟ ಕನ್ನಡಿಗರ ನೆಲೆಯೇ ಆಗಿದ್ದ, ಈಗಿನ ಸೊಲ್ಲಾಪುರ ನಗರವು, ಸುಮಾರು ಎಂಟುನೂರು ವರ್ಷಗಳಿಗೂ ಹಿಂದೆ, ಒಂದು ಸಣ್ಣ ಹಳ್ಳಿಯಾಗಿತ್ತು.  ಆಗ ಅದರ ಹೆಸರು ಸೊನ್ನಲಿಗೆ.  ಎತ್ತ ನೋಡಿದರೂ ಬರೀ ಬಯಲು ಸೀಮೆಯ ಪ್ರದೇಶ ಅದು.  ಅಲ್ಲಲ್ಲಿ ಹೊಲ-ಗದ್ದೆಗಳು.  ಈ ಸೊನ್ನಲಿಗೆ ಎಂಬ ಹಳ್ಳಿಯಲ್ಲಿ ಮೊರಡಿಯ ಮುದ್ದಗೌಡ ಸಾಕಷ್ಟು ಅನುಕೂಲವಂತ.  ದೊಡ್ಡಮನೆ.  ಮನೆಯಲ್ಲಿ ಸಾಕಷ್ಟು ದನ-ಕರುಗಳು; ಆಳು-ಕಾಳುಗಳು, ಅವನ ಹೆಂಡತಿ ಸುಗ್ಗವ್ವೆ.  ಮುದ್ದಗೌಡನಿಂದ ಆಕೆಯಲ್ಲಿ ಐದಾರುಮಕ್ಕಳು.  ಅವರಲ್ಲಿ ಹಿರಿಯವನು ಬೊಮ್ಮಯ್ಯ. ಈ ಮನೆಯವರ ಕುಲದೇವತೆ ಧೂಳಿಮಾಕಾಳ.  ಸೊನ್ನಲಿಗೆಯ ಊರಬಾಗಿಲಲ್ಲೇ ಧೂಳಿಮಾಕಾಳನ ಗುಡಿ.  ಗುಡಿಯ ಸುತ್ತ ಕೆಲವು ಬೇವಿನ ಮರಗಳು.  ಅಲ್ಲಿಂದಾಚೆ ಕೊಂಚ ದೂರದಲ್ಲಿ ಮುದ್ದಗೌಡನಿಗೆ ಸೇರಿದ ಹೊಲಗಳ ಹರಹು.  ಆಳು-ಕಾಳುಗಳನ್ನಿರಿಸಿಕೊಂಡು ಜೋಳ, ನವಣೆ, ತೊಗರಿ, ಹತ್ತಿ ಇತ್ಯಾದಿಗಳನ್ನು ಬೆಳೆದುಕೊಂಡು, ಧೂಳಿಮಾಕಾಳನಿಗೆ ಕಾಲಕಾಲಕ್ಕೆ ಪೂಜೆ-ಹರಕೆಗಳನ್ನು ಸಲ್ಲಿಸಿಕೊಂಡು ಊರವರಿಗೆಲ್ಲ ಬೇಕಾದವನಾಗಿದ್ದ ಮುದ್ದಗೌಡ.  ಹೀಗಿರುವಾಗ ಒಂದು ದಿನ ಬೆಳಿಗ್ಗೆ :

ಊರಿಗೆ ಊರೇ ಸಂಭ್ರಮಗೊಳ್ಳುವಂಥ ಅನಿರೀಕ್ಷಿತವಾದ ಘಟನೆಯೊಂದು ಸಂಭವಿಸಿತು.  ಮಂಗಳವೇಡೆಯ ದಿಕ್ಕಿನಿಂದ ಯಾರೋ ಮಹಾತ್ಮರೊಬ್ಬರು ತಮ್ಮ ಶಿಷ್ಯ ಪರಿವಾರದೊಂದಿಗೆ ಬಂದು, ಊರ ಹೊರಗಿನ ಧೂಳಿ ಮಾಕಾಳನ ಗುಡಿಯ ಬದಿಯಿಂದ ಹಾದು, ಈ ಊರಿನ ಗೌಡರ ಮನೆ ಎಲ್ಲಿ ಎಂದು ಕೇಳುತ್ತ ಬರುತ್ತಿದ್ದಾರೆ.  ವರ್ಷದಲ್ಲಿ ಒಂದು ಸಲವೋ ಎರಡು ಸಲವೋ, ಚಾಳುಕ್ಯ ಚಕ್ರವರ್ತಿಗಳ ಕಡೆಯ ಅಶ್ವಾರೋಹಿ ಸೈನಿಕರೋ, ಕಂದಾಯದ ಅಧಿಕಾರಿಗಳೋ ಬರುತ್ತಿದ್ದುದನ್ನು ಬಲ್ಲ ಈ ಊರಜನ ಇಂದು ಅದ್ಯಾರೋ ಮಹಾತ್ಮರೊಬ್ಬರು ತಮ್ಮ ಊರಿನೊಳಗೆ ದಯಮಾಡಿಸುತ್ತಿದ್ದಾರೆಂಬುದನ್ನು ಕೇಳಿ, ಧಾವಿಸಿನೋಡುತ್ತಾರೆ.  ಮಹಾತೇಜಸ್ವಿಯಾದ ವ್ಯಕ್ತಿಯೊಬ್ಬರು, ಹಲವು ಆನೆಗಳ ನಡುವಣ ಗಜರಾಜನಂತೆ ಕೆಲವು ಶಿಷ್ಯರ ನಡುವೆ ಗಂಭೀರವಾಗಿ ನಡೆದುಬರುತ್ತಿದ್ದಾರೆ.  ಆ ವ್ಯಕ್ತಿ ಜಟ್ಟಿಯ ಮೈಕಟ್ಟಿನ, ಎತ್ತರವಾದ ಆಳು.  ಮೈ ತುಂಬ ಭಸ್ಮವನ್ನು ಲೇಪಿಸಿಕೊಂಡಿದ್ದಾನೆ; ತಲೆಯಮೇಲೆ ತನ್ನ ಜಟೆಯನ್ನು ಮಕುಟದಂತೆ ಎತ್ತಿ ಕಟ್ಟಿದ್ದಾನೆ.  ಕೊರಳಲ್ಲಿ ರುದ್ರಾಕ್ಷಿಯ ಮಾಲೆ; ಹಣೆಯಲ್ಲಿ ಎದ್ದು ಕಾಣುವ ತ್ರಿಪುಂಡ ಭಸ್ಮ; ಮೈಯಲ್ಲಿ ಕಂಥೆ; ಕೈಯಲ್ಲಿ ಯೋಗದಂಡ; ಕಣ್ಣಲ್ಲಿ ಉಜ್ವಲವೂ ಕಠೋರವೂ ಆದ ಹೊಳಪು.  ಭಕ್ತಿ-ಗೌರವಗಳ ಜತೆಗೆ ಭಯವನ್ನೂ ಉಂಟುಮಾಡುವ ಈ ತೇಜೋಮಯ ವ್ಯಕ್ತಿ ಯಾರಿರಬಹುದೆಂದು ಬಾಯಿಬಿಟ್ಟು ಕೇಳುವ ಧೈರ್ಯ ಯಾರೊಬ್ಬರಿಗೂ ಬರಲಿಲ್ಲ.  ಸದ್ದಿಲ್ಲದೆ, ಆ ಮಹಾವ್ಯಕ್ತಿಯನ್ನು ಜನ ಹಿಂಬಾಲಿಸಿದರು.  ಆತ ತಾನು ನಡೆಯುವ ದಾರಿಯನ್ನೂ ಗುರಿಯನ್ನೂ ತಾನೇ ಬಲ್ಲೆನೆಂಬ ನಿರ್ಧಾರದಂತೆ ನೇರವಾಗಿ ಮುದ್ದಗೌಡನ ಮನೆಯ ಬಾಗಿಲಿಗೇ ಬಂದಿದ್ದಾನೆ.  ಅದ್ಯಾವಾಗಲೋ ಮುದ್ದಗೌಡನ ಮಡದಿ ಸುಗ್ಗವ್ವೆ, ಕೈಯಲ್ಲಿ ಫಲ-ಪುಷ್ಪಗಳ ತಟ್ಟೆಯನ್ನು ಹಿಡಿದು ಮನೆಯ ಮುಂಬಾಗಿಲಿಗೆ ಬಂದು ಮೂಕ ವಿಸ್ಮಯಳಾಗಿ ನಿಂತಿದ್ದಾಳೆ.  ಬಂದ ಈ ಮಹಾತೇಜಸ್ವಿ ಬಾಗಿಲಬಳಿ ನಿಂತ ಸುಗ್ಗವ್ವೆಯನ್ನು ದಿವ್ಯಾಶ್ಚರ್ಯವೆಂಬಂತೆ ದಿಟ್ಟಿಸುತ್ತಿದ್ದಾನೆ.  ಜನವೆಲ್ಲ, ಬೆರಗಾಗಿದ್ದಾರೆ; ಅವರ ಶಿಷ್ಯರು ಸಂಭ್ರಮಾನ್ವಿತರಾಗಿದ್ದಾರೆ.  ತಾನು ಏನು ಮಾಡಬೇಕೆಂಬುದನ್ನೂ ಮರೆತವಳಂತೆ ಸುಗ್ಗವ್ವೆ ನಿಂತಿದ್ದಾಳೆ.  ಆ ಮಹಾತೇಜಸ್ವಿ ಕೆಲವು ನಿಮಿಷಗಳ ಕಾಲ ಎವೆಯಿಕ್ಕದೆ ಸುಗ್ಗವ್ವೆಯ ಕಣ್ಣುಗಳನ್ನೆ ದಿಟ್ಟಿಸಿ ನೋಡುತ್ತಿದ್ದಾನೆ.  ನೋಡುತ್ತಿದ್ದಂತೆ, ಆ ಮಹಾತೇಜಸ್ವಿಯ ಕಣ್ಣೊಳಗಿಂದ ಏನೋ ಚೈತನ್ಯಮಯವಾದ ದೀಪ್ತಿಯೊಂದು ಸುಗ್ಗವ್ವೆಯ ಕಣ್ಣುಗಳ ಮೂಲಕ ಆಕೆಯ ತನು-ಮನಗಳನ್ನು ವ್ಯಾಪಿಸಿದಂತಾಯಿತು.  ಒಂದು ಕ್ಷಣ ಆ ಚೈತನ್ಯ ಸ್ಪಂದನದಿಂದ, ತತ್ತರಿಸಿದ ಸುಗ್ಗವ್ವೆ ಸುಧಾರಿಸಿಕೊಂಡು, ಕೈಮುಗಿದು, ‘ಪೂಜ್ಯರೆ ತಾವು ಯಾರು, ತಾವು ಬಂದ ಕಾರಣವೇನು ದಯಮಾಡಿ ಅಪ್ಪಣೆ ಕೊಡಿಸಬೇಕು’ ಎಂದು ಕೇಳಿದಳು.

ಜನ ನಿಬ್ಬೆರಗಾಗಿ, ಕುತೂಹಲದಿಂದ ದಿಟ್ಟಿಸುತ್ತಿರುವಾಗ ಆ ಮಹಾವ್ಯಕ್ತಿಯ ಶಿಷ್ಯರಲ್ಲಿ ಒಬ್ಬ ಹೀಗೆ ನುಡಿದ :

‘ತಾಯಿ ಕೇಳು, ಇವರು ಮಹಾತೇಜಸ್ವಿಯೂ ಪರಮಾದ್ವೆ ತ ಸಂಪನ್ನರೂ ಆದ ರೇವಣಸಿದ್ಧರು.  ಸಾಕ್ಷಾತ್ ಶಿವನ ರೂಪಾದ ಇವರು ಈ ಲೋಕದಲ್ಲಿ ಪ್ರಕಟವಾಗಿಯೂ ಗುಪ್ತವಾಗಿಯೂ ಸಂಚಾರ ಮಾಡುತ್ತ ಶಿವಾದ್ವೆ ತ ಜ್ಞಾನ ಪ್ರಕಾಶಕವಾದ ಉಪದೇಶದಿಂದ ಜನರನ್ನು ಕೃತಾರ್ಥರನ್ನಾಗಿ ಮಾಡುವ ಮಹಾಪುರುಷರು.’

ಶಿಷ್ಯನು ಇನ್ನೂ ತನ್ನ ಮಾತನ್ನು ಮುಂದುವರಿಸುತ್ತಿದ್ದನೊ ಏನೊ.  ಅಷ್ಟರಲ್ಲಿ ರೇವಣಸಿದ್ಧರು ಸನ್ನೆಯಿಂದ ಅತನನ್ನು ತಡೆದು –

‘ತಾಯಿ ನಾವು ನಿಮಗೊಂದು ಲೋಕ ಕಲ್ಯಾಣಕರವಾದ ವಾರ್ತೆಯನ್ನು ತಿಳಿಸಲೆಂದೇ ಇಲ್ಲಿಯವರೆಗೆ ಬಂದೆವು.  ಇಂದಿನಿಂದ ಸುಮಾರು ಒಂದು ವರ್ಷದ ಅವಧಿಯೊಳಗೆ, ಅಪ್ರತಿಮ ಶಿವಯೋಗಯುತನಾದ ಒಬ್ಬ ಮಗ ನಿನ್ನ ಪುಣ್ಯೋದರದಲ್ಲಿ ಜನಿಸುತ್ತಾನೆ.  ಆತನನ್ನು ನೀನು ತುಂಬ ಜಾಗರೂಕತೆಯಿಂದ ನೋಡಿಕೊಳ್ಳಬೇಕು.  ಯಾಕೆಂದರೆ ಆತ ಈ ಲೋಕದ ಎಲ್ಲರಂತೆ ಇರುವ ಬಾಲಕನಲ್ಲ.  ಅವನ ನಡವಳಿಕೆಗಳನ್ನು ಕಂಡು ನೀನು ಗೊಂದಲಗೊಳ್ಳಬೇಡ.  ಅವನ ಕಾರಣದಿಂದ ಈ ಸೊನ್ನಲಿಗೆ ಎಂಬ ಸಣ್ಣ ಹಳ್ಳಿ ಲೋಕವಿಖ್ಯಾತವಾದ ತೀರ್ಥಕ್ಷೇತ್ರವಾಗಿ ಪರಿಣಮಿಸುತ್ತದೆ.  ಆದರೆ, ಅವನ ಹೆಸರನ್ನು ಮಾತ್ರ   ಸಿದ್ಧರಾಮ ಎಂದು ಇರಿಸಬೇಕು.  ತಿಳಿಯಿತೆ?’

ಸುಗ್ಗವ್ವೆಗೆ ದಿಗ್‌ಭ್ರಮೆಯಾಯಿತು.  ಆಕೆ ಹೇಳಿದಳು ‘ಪೂಜ್ಯರೆ, ಎಂಥ ಮಾತು ಹೇಳುತ್ತೀರಿ ನೀವು, ನಾನು ಏನು, ನನ್ನ ವಯಸ್ಸೇನು? ಇನ್ನು ಮಕ್ಕಳನ್ನು ಹೆರದಂತೆಯೆ ಆಗಿರುವ ಈ ವಯಸ್ಸಿನ ನನಗೆ ಮತ್ತೆ ಮಗುವಾಗುವುದೆಂದರೇನು?  ಮಗು ಹುಟ್ಟುವುದಾದರೆ ಹಿಂದೆಯೆ ಹುಟ್ಟುತ್ತಿರಲಿಲ್ಲವೆ?  ಲೋಕವೇ ನಗುವ ಮಾತನಾಡಿದಿರಿ ನೀವು’.

ರೇವಣಸಿದ್ಧರು ಹೇಳಿದರು : ‘ತಾಯಿ, ನೀನು ಹೇಳುತ್ತಿರುವುದು ಸಾಮಾನ್ಯ ಶಿಶುವಿನ ಜನನದ ಸಂದರ್ಭವನ್ನು ಕುರಿತು.  ಆದರೆ ಈಗ ನಿನಗೆ ಜನಿಸಲಿರುವ ಶಿಶುವಿನ ಪರಿಯೇ ಬೇರೆ.  ಪರಿಚಿತವಾದ ಲೋಕಸಾಧಾರಣವಾದ ಮಾನದಂಡಗಳಿಂದ ಅಸಾಧಾರಣವೂ ಲೋಕಾತೀತವೂ ಆದ ಘಟನೆಗಳನ್ನು ಅಳೆಯಲು ಹೋಗಬಾರದು.  ನಾವಿನ್ನು ಬರುತ್ತೇವೆ.  ನಿನಗೆ ಶುಭವಾಗಲಿ, ನೋಡು, ಹುಟ್ಟುವ ಮಗುವಿಗೆ ಸಿದ್ಧರಾಮ – ಎಂದು ಹೆಸರಿಡುವುದನ್ನು ಮಾತ್ರ ಮರೆಯಬೇಡ.  ತಿಳಿಯಿತೆ?’

ಹೀಗೆಂದವರೆ ರೇವಣರು ತಮ್ಮ ಶಿಷ್ಯಪರಿವಾರ ಸಮೇತರಾಗಿ ನಿಧಾನವಾಗಿ ನಡೆದು, ಹೊರಟು ಹೋದರು.  ತಮ್ಮ ಕಣ್ಣೆದುರಿಗೆ ಸಂಭವಿಸಿದ ಪ್ರಸಂಗಕ್ಕೆ ಊರ ಜನ ಮೂಕವಿಸ್ಮಿತರಾದರು.

* * *

ಅತ್ತ ರೇವಣಸಿದ್ಧರು ಸೊನ್ನಲಿಗೆಯಿಂದಾಚೆ ಹೋದ ಮೇಲೆ, ಕಾರ್ಯಾಂತರದಿಂದ ಪಕ್ಕದ ಊರಿಗೆ ಹೋಗಿದ್ದ ಮುದ್ದಗೌಡ ಮನೆಗೆ ಹಿಂದಿರುಗಿ, ಅಂದು ಬೆಳಗ್ಗೆ ನಡೆದ ಘಟನೆಯ ಬಗ್ಗೆ ತಿಳಿದು ಅತ್ಯಂತ ಆಶ್ಚರ್ಯಪಟ್ಟನು.  ಧೂಳಿಮಾಕಾಳನ ಲೀಲೆಯೇ ಲೀಲೆ.  ಇದರ ಮೇಲೆ ನಮ್ಮದೇನಿದೆ ಎಂದು ಸಮಾಧಾನ ಮಾಡಿಕೊಂಡನು.

ಕಾಲಕಳೆಯಿತು.  ಸುಗ್ಗವ್ವೆಗೆ ಗರ್ಭಿಣಿಯ ಲಕ್ಷಣಗಳು ತಲೆದೋರಿದವು.  ರೇವಣರು ಹೇಳಿದಂತೆ ಒಂದು ವರ್ಷವೇಕೆ, ಇನ್ನೂ ಮೊದಲೆ ಒಂದು ಶುಭ ಮುಹೂರ್ತದಲ್ಲಿ ಸುಗ್ಗವ್ವೆ ಗಂಡು ಮಗುವೊಂದಕ್ಕೆ ಜನ್ಮವಿತ್ತಳು.  ಮುದ್ದಗೌಡನ ಮನೆಗೆ ಮನೆಯೇ ಸಂಭ್ರಮದಿಂದ ತುಂಬಿತ್ತು.  ಹುಟ್ಟಿದ ಮಗುವಿಗೆ ಸಿದ್ಧರಾಮ ಎಂದು ಹೆಸರಿಡಬೇಕೆಂದು ರೇವಣಸಿದ್ಧರು ಸೂಚಿಸಿದ್ದರೂ, ಅದನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದ, ತಂದೆ- ತಾಯಂದಿರು ಆ ಮಗುವಿಗೆ, ತಮ್ಮ ಕುಲದೈವವಾದ ‘ಧೂಳಿ ಮಾಕಾಳ’ನೆಂದು ಹೆಸರಿಟ್ಟರು!

ಮಗ ಹುಟ್ಟಿದ ಗಳಿಗೆಯ ಪ್ರಭಾವವೋ ಏನೋ, ದಿನದಿಂದ ದಿನಕ್ಕೆ ಮುದ್ದಗೌಡನ ಆಸ್ತಿ-ಪಾಸ್ತಿಗಳು ವರ್ಧಿಸತೊಡಗಿ ಆತ ಸೊನ್ನಲಿಗೆಯಲ್ಲಿ ತುಂಬ ಗಣ್ಯನಾದ ವ್ಯಕ್ತಿ ಎನ್ನಿಸಿಕೊಂಡನು.  ಅವನ ಹೆಂಡತಿ ಸುಗ್ಗವ್ವೆಗೂ, ಅಪರವಯಸ್ಸಿನಲ್ಲಿ ಅನಿರೀಕ್ಷಿತವಾಗಿ ಹುಟ್ಟಿದ ಮಗನ ಮೇಲೆ ಅಸಾಧಾರಣವಾದ ಅಕ್ಕರೆ.  ಆದರೆ ಈ ದಂಪತಿಗಳಿಗೆ ಒಂದೇ ಕೊರಗು.  ಕಣ್ಣೆದುರಿಗೆ ಬೆಳೆಯುತ್ತಿರುವ ಈ ಮಗ, ತಂದೆ-ತಾಯಂದಿರು ‘ಧೂಳಿಮಾಕಾಳಿ’ ಎಂದು ಎಷ್ಟು ಕರೆದರೂ ಉತ್ತರವನ್ನೇ ಕೊಡುವುದಿಲ್ಲ.  ‘ಸಿದ್ಧರಾಮ’ ಎಂದು ಕರೆದರೆ ಓ ಅನ್ನುತ್ತಾನೆ ಅಷ್ಟೆ.  ಆದರೆ ತಂದೆತಾಯಂದಿರು ಮಕ್ಕಳಿಂದ ನಿರೀಕ್ಷಿಸಬಹುದಾದ ಯಾವ ಬಾಲಲೀಲೆಗಳನ್ನೂ ಅವನಲ್ಲಿ ಕಾಣಲಾಗಲಿಲ್ಲ.  ತನ್ನ ಪಾಡಿಗೆ ತಾನು ಜಡನಂತೆ, ಮೂಕನಂತೆ, ತನಗೂ ಈ ಲೋಕವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲದಂತೆ ನಿರ್ಲಿಪ್ತನಾಗಿ ಇದ್ದುಬಿಡುತ್ತಾನೆ.  ಒಂದು ದಿನವಾದರೂ ತಾನಾಗಿಯೇ ಅದು ಬೇಕು ಇದು ಬೇಕು, ಎಂದು ಅಪ್ಪ-ಅಮ್ಮಂದಿರನ್ನು ಕಾಡಿಬೇಡಿ ಪೀಡಿಸಿದವನೂ ಅಲ್ಲ.  ಹಾಗೆಯೇ ತಮ್ಮ ಸಾಂಸಾರಿಕವಾದ ಯಾವುದೇ ವ್ಯವಹಾರಗಳಲ್ಲೂ ಅವನಿಗೆ ಆಸಕ್ತಿಯೇ ಇಲ್ಲದ ಈ ಮಗನ ನಾಳಿನ ಭವಿಷ್ಯ ಹೇಗಿದ್ದೀತು ಎಂಬ ತಲ್ಲಣ ಮುದ್ದಗೌಡನನ್ನು ಕಾಡುತ್ತಿತ್ತು.  ಇವನಿಗೆ ಏನಾದರೂ ಒಂದು ಕೆಲಸ ಹಚ್ಚಿ ಅದರಲ್ಲಿ ಅವನು ತೊಡಗಿಕೊಳ್ಳುವಂತೆ ಮಾಡಿದರೆ ಮಗ ಹಾದಿಗೆ ಬರಬಹುದೇನೋ ಎಂದು ಮುದ್ದಗೌಡ ಯೋಚಿಸಿ, ಕೊನೆಗೆ ಊರ ಮಕ್ಕಳ ಜತೆಗೆ, ತಮ್ಮ ಮನೆಯ ದನಕರುಗಳನ್ನು ಕಾಯಲು ಕಳುಹಿಸುವ ನಿರ್ಧಾರ ಮಾಡಿದನು.  ಒಂದು ದಿನ, ಅಕ್ಕಪಕ್ಕದ ಮನೆಯ ಮಕ್ಕಳ ಜತೆಗೆ ಸಿದ್ಧರಾಮನನ್ನು ಜತೆಗೂಡಿಸಿ, ತಮ್ಮ ಮನೆಯ ದನಕರುಗಳ ಜತೆಗೆ ಇವನನ್ನೂ ಕರೆದೊಯ್ಯಿರಿ ಎಂದು ಅವರನ್ನು ಒಪ್ಪಿಸಿ ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನು ಕಟ್ಟಿಕೊಟ್ಟು, – ಸಿದ್ಧರಾಮನನ್ನು ಕಳುಹಿಸಿಕೊಟ್ಟನು.  ತನ್ನ ತಂದೆ ವಹಿಸಿದ ಈ ಹೊಸ ಕಾರ್ಯವನ್ನು, ಯಾವ ಮರುಮಾತನ್ನೂ ಆಡದೆ ಸಂತೋಷದಿಂದ ವಹಿಸಿಕೊಂಡು ಊರಾಚೆ ಹೊಲಗಳನ್ನು ದಾಟಿಕೊಂಡು, ದನಗಳಿಗೆ ಮೇವು ದೊರೆಯುವ ಕಾವಲ ಕಡೆಗೆ ಹೊರಟನು ಸಿದ್ಧರಾಮ.  ಆ ಮೇಹುಗಾಡಿನ ಮಧ್ಯೆ ಸಣ್ಣದೊಂದು ಹಳ್ಳ;  ಅತ್ತ ಇತ್ತ ವಿರಳವಾದ ಮರಗಳು, ಹೊದರುಗಳು.  ದನಗಳು ತಮ್ಮ ಪಾಡಿಗೆ ತಾವು ಮೇಯುತ್ತಿರುವಾಗ, ಸಿದ್ಧರಾಮ ತನ್ನ ಜತೆಗಾರರೊಂದಿಗೆ ಯಾವುದೇ ಆಟಪಾಟಗಳಲ್ಲಿ ತೊಡಗದೆ, ತನ್ನ ಪಾಡಿಗೆ ತಾನು ಹಳ್ಳದಲ್ಲಿ ಕೈಕಾಲ್ ಮುಖ ತೊಳೆದುಕೊಂಡು, ಬದಿಯಲ್ಲೆ ಬೆಳೆದ ಮಾವಿನ ಮರದ ಬುಡವನ್ನು ಸೇರಿ ಕುಳಿತುಕೊಂಡು, ಶಿವಲಿಂಗಾಕಾರವೊಂದನ್ನು ರಚಿಸಿ, ಆಯ್ದು ತಂದ ಹೂವುಗಳಿಂದ ಪೂಜಿಸುತ್ತ ಕುಳಿತುಕೊಳ್ಳುವನು.  ದನ ಕಾಯಲು ಬಂದ ಜತೆಯ ಹುಡುಗರು, ಸಿದ್ಧರಾಮನ, ಈ ಪೂಜೆಯನ್ನು ಹಾಗೂ ಎಷ್ಟು ಹೊತ್ತಾದರೂ ಆತ ಅಲ್ಲಿಂದ ಕದಲದೆ ಇರುವ ಸ್ಥಿತಿಯನ್ನು ಕಂಡು ಬೆರಗುಗೊಳ್ಳುತ್ತಾರೆ.  ನಡುಹಗಲ ಹೊತ್ತಿಗೆ ಧ್ಯಾನದಿಂದ ಎಚ್ಚತ್ತ ಸಿದ್ಧರಾಮ ಮನೆಯಿಂದ ತಾನು ತಂದ ಬುತ್ತಿಯನ್ನು ತನ್ನ ಪೂಜಾ ಮೂರ್ತಿಗೆ ನೈವೇದ್ಯ ಮಾಡಿ, ತಾನು ಅದರ ಬಹುಭಾಗವನ್ನು ತನ್ನ ಓರಗೆಯ ಹುಡುಗರಿಗೆ ಹಂಚಿ, ತಾನು ಉಳಿದ ಸ್ವಲ್ಪ ಭಾಗವನ್ನು ಮಾತ್ರ ಸ್ವೀಕರಿಸುತ್ತಾನೆ.  ಬಂದ ಜತೆಗಾರರು, ಚಿನ್ನಿ-ಮರ ಕೋತಿ-ಜೂಟಾಟಗಳಲ್ಲಿ ತೊಡಗಿ ಸಂಜೆಯ ತನಕ ವಿವಿಧ ವಿನೋದಗಳಲ್ಲಿ ತೊಡಗಿಕೊಂಡರೂ, ಸಿದ್ಧರಾಮ ಅವುಗಳಲ್ಲಿ ಯಾವ ಆಸಕ್ತಿಯನ್ನೂ ತೋರಿಸದೆ ತನ್ನ ಪಾಡಿಗೆ ತಾನು ಏಕಾಂತವಾಗಿ ಕೂತು ಅಂತರ್ಮುಖಿಯಾಗಿ ಬಿಡುತ್ತಾನೆ; ಇಲ್ಲವೆ, ಜುಳುಜುಳು ಹರಿಯುವ ಹಳ್ಳದ ನೀರಿನಲ್ಲಿ ಕಾಲು ಇಳಿಯಬಿಟ್ಟುಕೊಂಡು ಕೂಡುತ್ತಾನೆ; ಗಿಡದಿಂದ ಗಿಡಕ್ಕೆ ಹಾರುವ ಬಗೆಬಗೆಯ ಹಕ್ಕಿಗಳನ್ನು ನೋಡುತ್ತಾನೆ; ಗುಮ್ಮಟದ ಹಾಗೆ ಕವುಚಿಕೊಂಡ ಆಕಾಶವನ್ನೂ, ಅಲ್ಲಿ ತೇಲುವ ಮೋಡಗಳ ವಿವಿಧ ವಿನ್ಯಾಸಗಳನ್ನೂ ಕಣ್ಣರಳಿಸಿ ನೋಡುತ್ತಾನೆ.  ಸಂಜೆಯಾಗತೊಡಗಿದಂತೆ ಅಲ್ಲಲ್ಲಿ ಮೇಯುವ ದನ-ಕರುಗಳನ್ನು ಒಂದೆಡೆ ತರುಬಿಕೊಂಡು ತನ್ನ ದನಗಾಹಿ ಗೆಳೆಯರೊಂದಿಗೆ ಮನೆಗೆ ಹಿಂದಿರುಗುತ್ತಾನೆ.

ಕರುಕಾಯುವ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಿತು.  ಮನೆಯಿಂದ, ಜನದಿಂದ ದೂರವಾದ ಹುಲ್ಲುಗಾವಲ ನಡುವಣ ಮರ-ಗಿಡಗಳ ಏಕಾಂತದಲ್ಲಿ ದಿನವೂ ಸಿದ್ಧರಾಮನ ಮನಸ್ಸು, ತನ್ನೊಳಗೆ ಅಡಗಿದ್ದ ಶಿವಭಕ್ತಿಯನ್ನು ಮೆಲ್ಲಮೆಲ್ಲಗೆ ವಿಕಾಸಗೊಳಿಸಿಕೊಳ್ಳತೊಡಗಿತ್ತು.  ದೈನಂದಿನ ಪೂಜೆ ಧ್ಯಾನ-ಚಿಂತನಾದಿಗಳು ಅವನಿಗರಿಯದ ಅಂತರಾಳಗಳಿಂದ ಅನಿರ್ವಚನೀಯವಾದ ಆನಂದದ ಸೆಲೆಯನ್ನು ತೆರೆಯುತ್ತಿದ್ದವು.  ಆದರೆ ಅದರ ಮೂಲವೆಲ್ಲಿ, ಅದರ ಸ್ವರೂಪವೇನು ಎಂಬುದು ಮಾತ್ರ ಅವನಿಗೆ ಗೊತ್ತಾಗುತ್ತಿರಲಿಲ್ಲ.  ಈ ಆನಂದ, ಜಗತ್ತಿನ ಉಳಿದೆಲ್ಲ ಸಂಸರ್ಗಗಳಿಂದ ಅವನ  ವ್ಯಕ್ತಿತ್ವವನ್ನು ಬಿಡಿಸಿ, ದಿನದಿಂದ ದಿನಕ್ಕೆ ಹೊಸಬಗೆಯ ಅನುಭವಗಳನ್ನು ತಂದುಕೊಡತೊಡಗಿತ್ತು.  ಹೀಗೆಯೇ ದಿನಗಳುರುಳಿದವು.  ಸಿದ್ಧರಾಮನು ನೋಡನೋಡುತ್ತಲೇ ಹದಿನೈದು-ಹದಿನಾರು ವರ್ಷದ ಬಾಲಕನಾಗಿ ಬೆಳೆದು ನಿಂತನು.

ಯಾವುದರಲ್ಲೂ ಆಸಕ್ತಿಯಿಲ್ಲದ ಜಡದ ಮುದ್ದೆಯಂತಿದ್ದ ಈ ಮಗ ಕರುಗಾಯುವ ನೆಪದಲ್ಲಾದರೂ ಒಂದಿಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡು ಹರೆಯಕ್ಕೆ ಬಂದನಲ್ಲ, ಇನ್ನುಮೇಲಾದರೂ ಮನೆಯ ವ್ಯವಸಾಯದ ಮೇಲುಸ್ತುವಾರಿಯನ್ನು ವಹಿಸಿದರೆ ಅವನು ತಾನಾಗಿಯೇ ನಮ್ಮ ದಾರಿಗೆ ಬರುತ್ತಾನೆ ಎನ್ನುವುದು ಮುದ್ದಗೌಡನ ಎಣಿಕೆಯಾಗಿತ್ತು.  ಇನ್ನೂ ಸ್ವಲ್ಪ ದಿನ ಕಳೆಯಲಿ, ಕರುಗಾಯುವ ಕೆಲಸದಿಂದ ಅವನನ್ನು, ಬೇರೆಯ ಜವಾಬ್ದಾರಿಗಳ ಕಡೆ ತಿರುಗಿಸಿದರಾಯಿತು ಎಂದುಕೊಂಡನು ಅವನ ತಂದೆ.

ಒಂದು ದಿನ ದನ-ಕರುಗಳನ್ನು ಹೊಡೆದುಕೊಂಡು ಬಂದ ಸಿದ್ಧರಾಮ, ಅವುಗಳ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಜತೆಯ ಹುಡುಗರಿಗೆ ಒಪ್ಪಿಸಿ, ತನ್ನ ತಂದೆಯ ನವಣೆಯ ಹೊಲದ ಬದಿಯ ಹೊಂಗೆಯಮರದ ಕೆಳಗೆ ಕುಳಿತುಕೊಂಡನು.  ದೂರ ದೂರದವರೆಗೂ ಹಬ್ಬಿಕೊಂಡ ನವಣೆಯ ಪೈರು ತೆನೆಗಳ ಭಾರದಿಂದ ಜಗ್ಗುತಿತ್ತು.  ಬೀಸುವ ಗಾಳಿಗೆ ತೂಗುತ್ತಾ, ತನ್ನನ್ನು ಹೆತ್ತು-ಎತ್ತಿದ ಭೂತಾಯಿಗೆ ವಂದಿಸುವಂತೆ ತೋರುತ್ತಿತ್ತು.  ಹೊಂಗೆಯ ಮರದ ನೆರಳ ಕೆಳಗೆ ಕೂತ ಸಿದ್ಧರಾಮನ ಮನಸ್ಸು, ಈ ಜೀವ ಜಗತ್ತುಗಳ ಗಾಢವಾದ ಚಿಂತನೆಯಲ್ಲಿ ತೊಡಗಿತ್ತು.  ಈ ಜೀವನ ಎಂದರೆ ಏನು?  ಇದರ ಅರ್ಥವೇನು? ಗುರಿಯೇನು? ಮನುಷ್ಯನ ಬದುಕು ಎಷ್ಟು ನಶ್ವರವಾದದ್ದು?  ಹಾಗೆಯೆ ಕೇವಲ ಉಣ್ಣುವ, ಉಡುವ, ಪಡುವ ಈ ನಿರಂತರ ಹಾಗೂ ಸೀಮಿತ ವ್ಯವಹಾರದಿಂದಾಚೆಗೆ ಬೇರೊಂದು ನೆಲೆಯಿಲ್ಲವೆ? ಈ ನರ ಸಮುದ್ರವೆಂಬುದೊಂದು ಕೊಳಚೆಯೊಳಗಣ ಚಿಕ್ಕ ಮಹಾಕೊಳಚೆಯಲ್ಲಿ ತೇಲಿಮುಳುಗುವ ಈ ಮನುಷ್ಯ ಪ್ರಾಣಿಗೆ ಇದರಿಂದ ಬಿಡುಗಡೆಯಿಲ್ಲವೆ?  ಇರುವುದಾದರೆ ಅದನ್ನು ಕಾಣುವುದು ಹೇಗೆ?  ಅದನ್ನು ತೋರಿಸುವವರು ಯಾರು?  – ಇತ್ಯಾದಿ ಚಿಂತನೆಗಳಲ್ಲಿರುವಾಗಲೆ ಅನತಿದೂರದಲ್ಲಿ ಯಾರೋ ಬರುತ್ತಿರುವ ಮರ್ಮರ ಸ್ವರ ಕೇಳಿದಂತಾಯಿತು.  ನೋಡುತ್ತಾನೆ ಜಂಗಮರೊಬ್ಬರು, ನವಣೆಯ ಹೊಲದ ಪಕ್ಕದಿಂದ ತನ್ನ ಕಡೆಯೇ ಬರುತ್ತಿದ್ದರು.  ಯಾರಿರಬಹುದು ಇವರು ಎಂದು ಆತ ಅಂದುಕೊಳ್ಳುತ್ತಿರುವಾಗಲೇ, ಆ ತೇಜಸ್ವಿಯಾದ ವ್ಯಕ್ತಿ ಎದುರಿಗೆ ಬಂದು ನಿಂತಿದ್ದರು.  ಕಾವಿಯ ನಿಲುವಂಗಿ; ಹೆಗಲಲ್ಲಿ ಜೋಳಿಗೆ; ದೃಢವಾದ ಮೈಕಟ್ಟಿನ ಮಾಟ, ಪ್ರಶಾಂತವಾದ ಹಾಗೂ ಸಾತ್ವಿಕವಾದ ಮುಖಮಂಡಲ.  ಹಣೆಯ ಮೇಲೆ ವಿಭೂತಿಯ ಪಟ್ಟೆಗಳು; ಏನನ್ನೋ ಕಂಡ ಅಪೂರ್ವ ತೃಪ್ತಿಯಿಂದ ಕಾಂತಿಯುಕ್ತವಾದ ಕಣ್ಣುಗಳು; ಎತ್ತಿ ಶಿಖೆಯಾಕಾರದಲ್ಲಿ ಕಟ್ಟಿದ ತಲೆಗೂದಲು; ಗಡ್ಡ ಮೀಸೆಗಳಿಂದ ಶೋಭಿತವಾದ ಮುಖದಲ್ಲಿ ಮುಗುಳುನಗೆ.  ಯಾರಿರಬಹುದು ಇವರು ಎಂದು ಅನ್ನಿಸಿದರೂ ಇವರು ನನ್ನವರೇ ಎಂಬ ಚಿರಪರಿಚಿತ ಭಾವವನ್ನು ಉಕ್ಕಿಸುವ ವ್ಯಕ್ತಿತ್ವ.  ತನ್ನೆದುರಿಗೆ ನಿಂತ ಜಂಗಮಮೂರ್ತಿ ಅವ್ಯಾಜವಾದ ವಾತ್ಸಲ್ಯದಿಂದ ತನ್ನನ್ನೇ ದಿಟ್ಟಿಸುತ್ತಿದೆ.  ಸಿದ್ಧರಾಮ ತಾನಾಗಿಯೆ ಬಾಗಿ ಅವರಿಗೆ ನಮಸ್ಕರಿಸಿದ.  ಅವರು ಓಂಕಾರ ಸಹಿತವಾಗಿ ಆಶೀರ್ವಾದ ಮಾಡಿದರು.  ಸಿದ್ಧರಾಮನಿಗೆ ಯಾವುದೋ ಜನ್ಮಾಂತರದ ಬಂಧುವೊಬ್ಬರು ತನ್ನನ್ನು ಹುಡುಕಿಕೊಂಡು ಬಂದಂತೆ ತೋರಿತು.  ಅವನು ಕೇಳಿದ : ‘ಪೂಜ್ಯರೆ, ತಾವು ಯಾರು?’ ಅವರು ಹೇಳಿದರು : ‘ಮಗೂ, ನನ್ನ ಹೆಸರು ಮಲ್ಲಯ್ಯ, ನಾನಿರುವುದು ಪರ್ವತದಲ್ಲಿ’ – ಎಂದರು.  ‘ಪರ್ವತ ಅಂದರೆ….’ ಎಂದು ತೊದಲಿದ ಸಿದ್ಧರಾಮ.  ಅವರು ‘ಯಾಕೆ? ಪರ್ವತ ಅಂದರೆ ತಿಳಿಯಲಿಲ್ಲವೆ? ಪರ್ವತ ಅಂದರೆ ಶ್ರೀಶೈಲ’ ಎಂದರು.

ಸಿದ್ಧರಾಮನಿಗೆ ಅದನ್ನು ಕೇಳಿ ರೋಮಾಂಚನವಾಯಿತು.  ಈ ಮೊದಲೇ ಅವರಿವರ ಬಾಯಲ್ಲಿ ಶ್ರೀಶೈಲದ ಹೆಸರು ಕೇಳಿದ್ದ.  ತನ್ನ ಮನೆಯಲ್ಲೂ ಒಮ್ಮೆ ಶ್ರೀಶೈಲದ ಹಾಗೂ ಶ್ರೀಶೈಲಕ್ಕೆ ಯಾತ್ರೆ ಹೋಗುವ ಪ್ರಸ್ತಾಪ ಬಂದಿತ್ತು.  ಮೊದಲಿಂದಲೂ ಅಷ್ಟೆ.  ಶ್ರೀಶೈಲವೆಂಬ ಹೆಸರು ಅವನಲ್ಲಿ ಅನಿರ್ವಚನೀಯವಾದ ಪುಳಕವನ್ನೇಳಿಸುತ್ತಿತ್ತು.  ಯಾವುದೋ ಅಶರೀರ ಸೂತ್ರವೊಂದು ತನ್ನನ್ನೂ ಶ್ರೀಶೈಲವನ್ನೂ ಒಂದುಗೂಡಿಸಿದ ಅನುಭವವಾಗುತ್ತಿತ್ತು.  ಈಗ ತನ್ನೆದುರಿನ ಈ ಜಂಗಮರು ತಾವು ಶ್ರೀಶೈಲದಿಂದ ಬಂದೆವೆಂದು ಹೇಳುತ್ತಿದ್ದಾರೆ.  ನಾನೂ ಇವರ ಜತೆಗೆ ಶ್ರೀಶೈಲಕ್ಕೆ ಹೋಗಲೆ – ಎಂಬ ಆಲೋಚನೆ ಅವನಲ್ಲಿ ಸುಳಿಯಿತು.  ಈ ವಿಷಯವನ್ನು ಆಮೇಲೆ ಪ್ರಸ್ತಾಪಿಸಿದರಾಯಿತು ಅಂದುಕೊಂಡು, ಆತ ತಾನು ಕರುಗಾಯಲೆಂದು ದಿನವೂ ಹೋಗುತ್ತಿದ್ದಾಗ ಹೆಗಲ ಮೇಲೆ ಹಾಕಿಕೊಳ್ಳುತ್ತಿದ್ದ ಕಂಬಳಿಯನ್ನು ಹೊಂಗೆಮರದ ನೆರಳಲ್ಲಿ ಹಾಸಿ ದಯಮಾಡಿ ಕುಳಿತುಕೊಳ್ಳಿ ಎಂದು ಕಣ್ಣಿನಲ್ಲೇ ಕೇಳಿಕೊಂಡನು.  ಸಿದ್ಧರಾಮನ ಇಂಗಿತವನ್ನರಿತ ಜಂಗಮರು ಆ ಹಾಸುಗಂಬಳಿಯಮೇಲೆ ಕುಳಿತುಕೊಂಡರು.  ಸಿದ್ಧರಾಮನು ಸಂಭ್ರಮದಿಂದ, ನವಣೆಯ ತೆನೆಗಳನ್ನು ಕಿತ್ತು ಅದರ ಹಾಲುಗಾಳುಗಳನ್ನು ಬಿಡಿಸಿ ಅವರೆದುರಿಗೆ ಕಂಬಳಿಯಮೇಲೆ ಸುರಿದನು.  ರಸವುಳ್ಳ ಕಂಪುಳ್ಳ ನವಣೆಯ ಕಾಳುಗಳನ್ನು ಆ ಜಂಗಮರು ಹಿಡಿಯಲ್ಲಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡರು.  ‘ಬಹಳ ರುಚಿಯಾಗಿವೆ’ ಎಂದು ಪ್ರಶಂಸಿಸಿದರು.  ‘ನಾನೂ ಬರುತ್ತೇನೆ ನಿಮ್ಮ ಜತೆಗೆ ಶ್ರೀಶೈಲಕ್ಕೆ, ನನ್ನನ್ನೂ ಕರೆದುಕೊಂಡು ಹೋಗಿ’ ಎಂದು ದೀನವಾಗಿ ನುಡಿದನು ಸಿದ್ಧರಾಮ.  ‘ಹೌದೆ, ನೀನೂ ಬರುತ್ತೀಯಾ? ಆಗಲಿ ಬರುವೆಯಂತೆ’ ಎಂದರು ಜಂಗಮರು.  ಸಿದ್ಧರಾಮನಿಗೆ ಮಹದಾನಂದವಾಯಿತು.  ‘ನಿನ್ನ ತಂದೆತಾಯಂದಿರನ್ನು ಕೇಳಬೇಡವೆ’ ಎಂದರು ಜಂಗಮರು.  ಸಿದ್ಧರಾಮನ ಮುಖ ಖಿನ್ನವಾಯಿತು.  ‘ಯಾವ ತಂದೆ, ಯಾವ ತಾಯಿ? ನನಗೆ ನೀವೆ ತಂದೆ-ತಾಯಿ.  ನಿಮ್ಮನ್ನು ನಾನು ಬಿಟ್ಟಿರಲಾರೆ’ ಎಂದ ಸಿದ್ಧರಾಮ.  ‘ಹಾಗಾದರೆ, ಒಂದು ಕೆಲಸ ಮಾಡು.  ನೀನೀಗ ಕೊಟ್ಟೆಯಲ್ಲ ಈ ಕಾಳುಗಳು, ಅಷ್ಟರಿಂದ ನನ್ನ ಹಸಿವು ಹಿಂಗಲಿಲ್ಲ.  ಆದಕಾರಣ ಮನೆಗೆ ಹೋಗಿ ಒಂದಷ್ಟು ಮಜ್ಜಿಗೆ-ಅಂಬಲಿ ಮಾಡಿಸಿಕೊಂಡು ತರುತ್ತೀಯಾ?’ ಎಂದರು ಜಂಗಮರು.

ಸಿದ್ಧರಾಮನ ಮನಸ್ಸು ಡೋಲಾಯಮಾನವಾಯಿತು.  ಒಂದು ಕಡೆ, ಈ ಜಂಗಮರು ಕೇಳುವ ಮಜ್ಜಿಗೆ-ಅಂಬಲಿಯನ್ನು ತಂದುಕೊಟ್ಟು, ಅವರು ಸವಿಯುವುದನ್ನು ಕಂಡು ಸುಖಿಸಬೇಕು ಎಂಬ ಆಸೆ; ಮತ್ತೊಂದು ಕಡೆ, ನಾನು ಮನೆಗೆ ಹೋಗಿ ಹಿಂದಿರುಗಿ ಬರುವುದರೊಳಗಾಗಿ ಇವರು ಇಲ್ಲಿ ಇಲ್ಲದೆ ಹೊರಟುಹೋದರೆ ಏನು ಗತಿ, ಎಂಬ ಚಿಂತೆ.  ಜಂಗಮರೆಂದರು ‘ಹೋಗಿ ಬಾ ಮಗೂ, ಹೋಗಿ ಬಾ, ನಾನು ನಿನಗಾಗಿ ಕಾಯುತ್ತೇನೆ’.

* * *

ಎಂದೂ ಮಧ್ಯಾಹ್ನದ ಹೊತ್ತಿನಲ್ಲಿ ಮನೆಗೆ ಬಾರದ ಮಗ ಇಂದೇಕೆ ಬಂದನೆಂಬುದು, ತಾಯಿ ಸುಗ್ಗವ್ವೆಗೆ ಒಂದು ಸಂಭ್ರಮದ ಒಗಟಾಯಿತು.  ಕರೆದರೆ ಓಗೊಡದಂತೆ ಜಡನಾಗಿ ಮೂಕನಂತೆ ವರ್ತಿಸುತ್ತಿದ್ದ ಮಗ ಈ ದಿನ ಮಜ್ಜಿಗೆ-ಅಂಬಲಿ ಬೇಕೆಂದು ತಾನಾಗಿಯೆ ಬಾಯಿಬಿಟ್ಟು ಕೇಳಿದ್ದು ಒಂದು ಅಪೂರ್ವ ಪವಾಡದಂತೆ ತೋರಿತು ಸುಗ್ಗವ್ವೆಗೆ.  ಅತ್ಯಂತ ಸಡಗರದಿಂದ ಆಕೆ ಅಡುಗೆಗೆ ತೊಡಗಿ, ಮಜ್ಜಿಗೆ-ಅಂಬಲಿಯ ಬದಲು ಸೊಗಸಾದ ಅನ್ನಮಾಡಿ, ಬೆಳ್ಳನೆಯ ಕೆನೆಮೊಸರು ಹಾಕಿ ಕಲಸಿ, ಶುಂಠಿ ಮೆಣಸುಗಳನ್ನು ಬೆರಸಿ ಬುತ್ತಿ ಮಾಡಿ ಬಾಳೆಯೆಲೆಯಲ್ಲಿ ಹಾಕಿ ಅದನ್ನೊಂದು ಬಟ್ಟೆಯಗಂಟು ಕಟ್ಟಿ ಅವನ ಕೈಗೆ ಕೊಟ್ಟಳು.  ಮರುಮಾತಾಡದೆ ಆ ಬುತ್ತಿಯ ಗಂಟು ಹಿಡಿದು ಸಿದ್ಧರಾಮ ಒಂದೇ ಉಸಿರಿಗೆ ಮನೆಯ ಹೊಸಿಲು ದಾಟಿ ಹೊಲದ ಕಡೆ ಓಡಿದನು.  ಅವನ ಸಂಭ್ರಮವನ್ನು ಕಂಡು ತಾಯಿ ಸುಗ್ಗವ್ವೆ ಬಹುಕಾಲಾನಂತರದ ಈ ಒಂದು ದಿನ ಅತ್ಯಂತ ಸಂತೋಷಪಟ್ಟಳು.

ಮನೆಯಿಂದ ದೌಡಾಯಿಸಿ, ನವಣೆಯ ಹೊಲದ ಬದಿಯ ಹೊಂಗೆಯ ಮರದ ಬಳಿಗೆ ಬಂದನು.  ನೋಡುತ್ತಾನೆ, ಮಜ್ಜಿಗೆ ಅಂಬಲಿಯನ್ನು ತಾ ಎಂದು ತನ್ನನ್ನು ಮನೆಗೆ ಕಳುಹಿಸಿದ ಆ ಮಲ್ಲಯ್ಯನೆ ಇಲ್ಲ.  ದೂರದೂರದವರೆಗೂ ಹಸಿರು ತೆನೆದೂಗುವ ಗದ್ದೆಯ ಮೇಲೆ ಮಧ್ಯಾಹ್ನದ ಬಿಸಿಲು ಹರಹಿಕೊಂಡಿತ್ತು.  ಹೊಂಗೆಯ ಮರ ತನಗೇನೂ ತಿಳಿಯದೆಂಬಂತೆ ತಣ್ಣೆಳಲನ್ನು ತನ್ನ ಬುಡಕ್ಕೆ ಕಪ್ಪಗೆ ಚೆಲ್ಲಿ ತೆಪ್ಪಗಿತ್ತು.  ಮರದ ಕೆಳಗೆ ಅವರು ಕೂತುಕೊಳ್ಳಲೆಂದು ಸಿದ್ಧರಾಮನು ಹಾಸಿದ ಕರಿಯ ಕಂಬಳಿ ಅನಾಥವಾಗಿ ಬಿದ್ದಿತ್ತು.  ಸಿದ್ಧರಾಮನು ಪ್ರಿತಿಯಿಂದ ಬಿಡಿಸಿಕೊಟ್ಟ ನವಣೆಯ ಹಸಿಯ ರಸವುಳ್ಳ ಕಾಳುಗಳು ಇನ್ನೂ ಆ ಕಂಬಳಿಯ ಮೇಲಿದ್ದುವು.  ಆದರೆ ಮಲ್ಲಯ್ಯ ಮಾತ್ರ ಇಲ್ಲ!  ‘ಎಲ್ಲಿ ಹೋದರು ಈ ಮಲ್ಲಯ್ಯ?  ಮನಸ್ಸಿನಲ್ಲಿ ಜನ್ಮಾಂತರದ ಬಾಂಧವ್ಯಗಳ ನೆನಪು ಉಕ್ಕಿಸಿದ ಮಲ್ಲಯ್ಯ ಎಲ್ಲಿ ಹೋದರು?  ನಾನು ನಿನಗಾಗಿ ಕಾಯುತ್ತೇನೆ ಎಂದರಲ್ಲ, ಅವರೆಲ್ಲಿ ಈಗ.  ಇವರನ್ನು ನಂಬುವುದಾದರೂ ಹೇಗೆ?  ಬಾ ಎಂದು ಹೇಳಿ ಬಯಲಾಗಿ ಹೋದ ಈ ಸ್ವಾಮಿ ಈಗ ಹೋದನೆಲ್ಲಿಗೆ?  ಇಲ್ಲ, ಅವರನ್ನು ಕಾಣದೆ ನಾನು ಇರಲಾರೆ.  ಅವರನ್ನು ಕೂಗಿ, ಕರೆದು, ಹುಡುಕಿ ನಮ್ಮ ಈ ಊರಿಗೆ ಕರೆದು ತಂದೇ ತರುತ್ತೇನೆ.  ‘ಹೋಗಿ ಬಾ ಮಗೂ ಹೋಗಿ ಬಾ ನಾನು ನಿನಗಾಗಿ ಕಾಯುತ್ತೇನೆ’ ಎಂದರಲ್ಲ.  ಹಾಗಾದರೆ ಅವರೆಲ್ಲಿ ಕಾಯುತ್ತಿರಬಹದು.  ಶ್ರೀಶೈಲವಲ್ಲವೆ, ಅವರು ತಾವು ಇರುವುದಾಗಿ ಹೇಳಿದ್ದು?  ನಾನು ಅತ್ತಕಡೆಗೆ ಹೋಗುತ್ತೇನೆ.  ಅವರು ಎಲ್ಲಿದ್ದರೂ ಸರಿ.  ಹುಡುಕಿಯೇ ಹುಡುಕುತ್ತೇನೆ’ – ಅಂದುಕೊಂಡ ಸಿದ್ಧರಾಮ.

ಸಿದ್ಧರಾಮನಿಗೆ, ಯಾವುದೂ ಬೇಡವಾಯಿತು.  ಮಲ್ಲಯ್ಯನ ಅಗಲಿಕೆಯಿಂದ ದುಃಖ ಉಮ್ಮಳಿಸಿತು.  ಕೆನ್ನೆಗಳ ಮೇಲೆ ಕಂಬನಿ ಹರಿದು ಗೆರೆ ಬರೆಯಿತು.  ಮಲ್ಲಯ್ಯ, ಮಲ್ಲಯ್ಯ ಎಂದು ಆ ಹೊಲದ ಉದ್ದಗಲಕ್ಕೂ ಓಡಾಡಿದ; ಹೊದರು ಹೊದರುಗಳ ಹಿಂದೆ ಹುಡುಕಿದ; ಹಳ್ಳದ ದಂಡೆಯಲ್ಲಿ, ಹಾಳುಗುಡಿಗಳ ಮೂಲೆಗಳಲ್ಲಿ ಹೋಗಿ ನೋಡಿದ.  ಅಲ್ಲೆಲ್ಲೂ ಮಲ್ಲಯ್ಯ ಕಾಣಲಿಲ್ಲ.  ಗೊತ್ತು ಗುರಿಯಿಲ್ಲದೆ ನಡೆದ.  ಉಟ್ಟ ಬಟ್ಟೆಗಳು ಮಲಿನವಾಗಿ, ತಲೆಯ ಕೂದಲು ಅಸ್ತವ್ಯಸ್ತವಾಗಿ, ಕಣ್ಣುಗಳು ಅತ್ತೂ ಅತ್ತೂ ಊದಿಕೊಂಡು ನೋಡುವವರಿಗೆ ಉನ್ಮತ್ತನಂತೆ ತೋರಿದ.  ಹಾಗೆಯೇ ಹೋಗುತ್ತಿರುವಾಗ ಶ್ರೀಶೈಲಕ್ಕೆ ಯಾತ್ರೆ ಹೊರಟ ಭಕ್ತಾದಿಗಳ ಮೇಳವೊಂದು ಎದುರಾಯಿತು.  ಮಾತುಮಾತಿಗೆ ಮಲ್ಲಯ್ಯ ಮಲ್ಲಯ್ಯ ಎಂದು ತೊದಲುವ ಈ ಹದಿನಾರರ ಹರೆಯದ ಈ ಹುಡುಗನನ್ನೂ ಅವನ ಅವಸ್ಥೆಯನ್ನೂ ಕಂಡ ಜನ ‘ಯಾರಪ್ಪ ಆ ಮಲ್ಲಯ್ಯ, ನಿನ್ನ ತಂದೆಯೆ? ಅವನೆಲ್ಲಿದ್ದಾನೆ’ ಎಂದು ವಿಚಾರಿಸಿದರು.  ಸಿದ್ಧರಾಮನ ಹಂಬಲವನ್ನೂ, ಅವನ ದೈವೋನ್ಮಾದವನ್ನು ಕಂಡ ಜನ ‘ನಿನಗೆ ಬೇಕಾದದ್ದು ಶ್ರೀಶೈಲದ ಮಲ್ಲಯ್ಯನೆ?’ ಎಂದು ಕೇಳಿದಾಗ ‘ಹಾ! ಅವನೇ ಅವನೇ, ಆ ಮಲ್ಲಯ್ಯನೇ ನನಗೆ ಬೇಕಾದವನು.  ತೋರಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಿರಯ್ಯ’ ಎಂದು ಅಂಗಲಾಚಿದನು ಸಿದ್ಧರಾಮ.  ಜನ ಬೆರಗಾದರು, ಲೋಕದಲ್ಲಿ ಹೊನ್ನಿಗಾಗಿ ಅತ್ತವರಿದ್ದಾರೆ.  ಮಣ್ಣಿಗಾಗಿ ಅತ್ತವರಿದ್ದಾರೆ, ಹೆಣ್ಣಿಗಾಗಿ ಅತ್ತವರಿದ್ದಾರೆ.  ಆದರೆ ಈ ಪ್ರಾಯದ ಹುಡುಗ ಶ್ರೀಶೈಲದ ಮಲ್ಲಯ್ಯನಿಗಾಗಿ ಅಳುತ್ತಿದ್ದಾನಲ್ಲ.  ಅವನ ಪುಣ್ಯವೇ ಪುಣ್ಯ.  ಅಂದುಕೊಂಡರು.  ಆತನನ್ನು ಸಮಾಧಾನ ಮಾಡಿ ‘ನಾವೂ ಶ್ರೀಶೈಲದ ಮಲ್ಲಿಕಾರ್ಜುನನ ದರ್ಶನಕ್ಕೆ ಹೋಗುತ್ತಿದ್ದೇವೆ.  ನಮ್ಮ ಜತೆಗೆ ನೀನೂ ಬಾ’ ಅಂದರು.  ಒಮ್ಮೆ ಕಂಡು ಮತ್ತೆ ಕಣ್ಮರೆಯಾದ ಆ ಮಲ್ಲಯ್ಯನನ್ನು ಕಾಣುವ ತವಕದಿಂದ ಸಿದ್ಧರಾಮ ಆ ಪರಿಶೆಯ ಜತೆಯಲ್ಲಿ ಶ್ರೀಶೈಲದ ಕಡೆಗೆ ಪಯಣಮಾಡಿದ.

ಕೆಲವು ದಿನಗಳ ಪಯಣದ ನಂತರ ಸಿದ್ಧರಾಮನನ್ನೊಡಗೊಂಡ ಯಾತ್ರಿಕರ ತಂಡ, ಆ ಮಹಾಪರ್ವತದ ದುರ್ಗಮ ಅರಣ್ಯ ಪಥಗಳನ್ನೇರಿ, ಶ್ರೀಶೈಲ ಕ್ಷೇತ್ರವನ್ನು ತಲುಪಿತು.  ಮರುದಿನ ಮುಂಜಾನೆ ಸ್ನಾನಾದಿಗಳನ್ನು ಪೂರೈಸಿಕೊಂಡು ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟ ಆ ಯಾತ್ರಿಕರೊಡನೆ ಸಿದ್ಧರಾಮನೂ, ಮಲ್ಲಿಕಾರ್ಜುನನ ಮಹಾದೇವಾಲಯವನ್ನು ಪ್ರವೇಶಿಸಿದನು.  ಅಂದು ಹೊಲದಲ್ಲಿ ಕಂಡ ಆ ಮಲ್ಲಯ್ಯ ಇಲ್ಲಿರುವನೆ?  ಅವನನ್ನು ತಾನು ಕೇಳಬೇಕು, ತನ್ನನ್ನು ಹೀಗೆ ಬಿಟ್ಟು ಬಂದದ್ದು ಸರಿಯೆ – ಎಂದು ಮನಸ್ಸಿನಲ್ಲಿ ಅಂದುಕೊಂಡ.  ಭಕ್ತಾದಿಗಳ ಜತೆ ಮುಂದುವರಿದು ದೇವಸ್ಥಾನದೊಳಗೆ ಬಂದ.  ಗರ್ಭಗುಡಿಯ ಬಾಗಿಲಿಗೆ ಒಂದು ತೆರೆ ಹಾಕಲಾಗಿತ್ತು.  ಒಳಗೆ ದೇವರಿಗೆ ಅಭಿಷೇಕ- ಅಲಂಕಾರಾದಿಗಳು ಮುಗಿದು, ಬಾಗಿಲ ತೆರೆಸರಿದು ಮಹಾ ಮಂಗಳಾರತಿಯಾಗಬೇಕು.  ಕುತೂಹಲದ ಸೂಜಿಮೊನೆಯ ಮೇಲೆ ಕೂತಿತ್ತು ಸಿದ್ಧರಾಮನ ಮನಸ್ಸು.  ಕ್ಷಣಗಳು ಯುಗವಾದವು.  ಕೊನೆಗೂ ತೆರೆ ಸರಿಯಿತು.  ಮಹಾಮಂಗಳಾರತಿ ಶುರುವಾಯಿತು.  ‘ಅದೋ ನೋಡು ಮಗು-ಅವನೇ ಮಲ್ಲಿಕಾರ್ಜುನ, ಅವನೇ ಪರ್ವತದ ಮಲ್ಲಯ್ಯ, ನಮಸ್ಕಾರ ಮಾಡು’ ಅಂದರು ಸಹಯಾತ್ರಿಕರಾದ ಕೆಲವರು.  ಸಿದ್ಧರಾಮ ನೋಡುತ್ತಾನೆ, ಎಲ್ಲಿ ತಾನು ಕಂಡ ಮಲ್ಲಯ್ಯ?  ಕಾಯ ನಿಲುವಂಗಿ ತೊಟ್ಟ, ಭಸ್ಮವಿರಾಜಿತ ಲಲಾಟವುಳ್ಳ, ತುರುಗಿದ ಗಡ್ಡಮೀಸೆಯ ಮುಖ ಮಂಡಲದಲ್ಲಿ ಮಂದಹಾಸವನ್ನು ತುಂಬಿಕೊಂಡ ಆ ಮಲ್ಲಯ್ಯ ಎಲ್ಲಿ?  ಅದರ ಬದಲು ಪುಷ್ಪಾಲಂಕಾರ ಭೂಷಿತವಾದ ಸ್ಥಾವರಲಿಂಗದ ಈ ಶಿಲೆ ಎಲ್ಲಿ!  ಧೂಪದ ಹೊಗೆ ಮಂದವಾಗಿ ಹರಡಿದೆ.  ಎಣ್ಣೆಯ ಹಣತೆಗಳು ಇಕ್ಕೆಲ್ಲದಲ್ಲೂ ಉರಿಯುತ್ತಿವೆ.  ತಾನು ಹಿಂದೆ ಕಂಡ ಮಲ್ಲಯ್ಯನಿಗೂ, ಈ ಜನ ತನಗೆ ತೋರಿಸುತ್ತಿರುವ ಶಿಲಾಲಿಂಗದ ಮಲ್ಲಯ್ಯನಿಗೂ ಎಲ್ಲಿಯ ಹೋಲಿಕೆ!  ‘ಅಲ್ಲ, ಅಲ್ಲ.  ಇದು ನನ್ನ ಮಲ್ಲಯ್ಯನಲ್ಲ’ ಎಂದು ಅಳುತ್ತಾ ಕೂಗಿದನು ಸಿದ್ಧರಾಮ.  ‘ಹೌದು ಮಗು, ಇವನೇ ಮಲ್ಲಯ್ಯ, ಶ್ರೀಶೈಲದ ಮಲ್ಲಿನಾಥ’ ಎಂದು ಸಮಾಧಾನ ಹೇಳಿದರು ಹಲವರು ಭಕ್ತರು.  ‘ಅಲ್ಲ, ಇವನಲ್ಲ.  ನನಗೆ ಗೊತ್ತಿಲ್ಲವೇ ಮಲ್ಲಯ್ಯ  ಹೇಗಿದ್ದಾನೆಂದು’.  ಹೀಗೆನ್ನುತ್ತಾ ಸಿದ್ಧರಾಮ ಜನದ ಗುಂಪನ್ನು ಸೀಳಿಕೊಂಡು ಹೊರಕ್ಕೆ ಓಡಿದನು.  ನಿಜಕ್ಕೂ ಈ ಹುಡುಗನಿಗೆ ತಲೆಕೆಟ್ಟಿರಬೇಕು-ಅಂದುಕೊಂಡರು  ದೇಗುಲದ ಅರ್ಚಕರೂ ಮತ್ತು ಯಾತ್ರೆಗೆ ಬಂದ ಭಕ್ತರೂ.

ಸಿದ್ಧರಾಮ ಹೊಕ್ಕದ್ದು ತಾನು ಇದುವರೆಗೂ ಕಂಡರಿಯದ ಕಗ್ಗಾಡಿನೊಳಕ್ಕೆ.  ಸೊನ್ನಲಿಗೆಯ ಬಟ್ಟ ಬಯಲು ನಾಡಿನಲ್ಲಿ ಅಲೆದಾಡಿದ ಕಣ್ಣುಗಳು ಈಗ ಈ ಬೆಟ್ಟಗಳ ದಟ್ಟವಾದ ಮಹಾವೃಕ್ಷಗಳ ಇಕ್ಕಟ್ಟಿನಲ್ಲಿ ತನ್ನ ಬದುಕಿನ ಗುರಿಯನ್ನು ಅರಸುತ್ತಿವೆ.  ಆ ಗುರಿ ಬೇರೆ ಯಾವುದೂ ಅಲ್ಲ; ಅದು ಮಲ್ಲಯ್ಯ.  ಊರ ಹೊಲದ ಬಳಿ ಕಾಣಿಸಿಕೊಂಡು, ಮನಸ್ಸನ್ನು ಸೂರೆಗೈದು ಶ್ರೀಶೈಲಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ಅನಂತರ ಇದ್ದಕ್ಕಿದ್ದ ಹಾಗೆ ಕಾಣೆಯಾದ ಆ ಮಲ್ಲಯ್ಯ.  ಅವನನ್ನು ತೋರಿಸುತ್ತೇವೆ ಬಾ ಎಂದು, ಈ ಶ್ರೀಶೈಲಕ್ಕೆ ಕರೆದುಕೊಂಡು ಬಂದು ಇವನೇ ನೋಡು ಈ ಮಲ್ಲಯ್ಯ ಎಂದು ಆ ಮಂದಿ, ತೋರಿಸಿದ್ದು ಗುಡಿಯೊಳಗೆ ಕೂತ ಲಿಂಗಾಕಾರದ ಲಿಂಗವನ್ನು.  ಅಲ್ಲ, ಅದು ನಾನು ಕಂಡ ಮಲ್ಲಯ್ಯನಲ್ಲ, ನನಗೆ ಬೇಕಾದ ಮಲ್ಲಯ್ಯನಲ್ಲ.  ಹಾಗಾದರೆ ತಾನು ಪರ್ವತದ ಮಲ್ಲಯ್ಯ ಎಂದು ಹೇಳಿದನಲ್ಲ, ಅವನು ಎಲ್ಲಿರಬಹದು?

ಈ ಬಗೆಯ ವಿವಿಧ ಚಿಂತೆಗಳಲ್ಲಿ ತೊಡಗಿತ್ತು ಬಾಲಕನಾದ ಸಿದ್ಧರಾಮನ ಮನಸ್ಸು.  ಆ ಕಾಡಿನ ನಡುವೆ ಕಲ್ಲು ಬಂಡೆಯೊಂದರ ಮೇಲೆ ಕೂತ ಸಿದ್ಧರಾಮನ ಮನಸ್ಸು, ಆ ಪರ್ವತಾರಣ್ಯ ವಿಸ್ತೀರ್ಣದ ಮೇಲೆ ಹಬ್ಬಿಕೊಂಡ ಹೊಂಬಿಸಿಲನ್ನಾಗಲೀ, ಸುತ್ತ ಕೋಟೆಗಟ್ಟಿದಂತೆ ನಿಂತ ಮಹಾವೃಕ್ಷಗಳ ದಟ್ಟ ಹಸುರಿನ ಭೀಷ್ಮತೆಯನ್ನಾಗಲೀ ಅವಲೋಕಿಸುವ ಸ್ಥಿತಿಯಲ್ಲಿರಲಿಲ್ಲ.  ಮನಸ್ಸಿನ ತುಂಬ ತುಂಬಿಕೊಂಡದ್ದು ಒಂದೇ ಮೂರ್ತಿ, ಅದು ಮಲ್ಲಯ್ಯನದು.  ಏನಾದರೂ ಸರಿ, ಅವನನ್ನು ಕಂಡೇ ಕಾಣಬೇಕು ಎಂದು  ಸಂಕಲ್ಪಿಸಿ ಮೇಲೆದ್ದ.  ಮತ್ತೆ ಪ್ರಾರಂಭವಾಯಿತು ಅರಣ್ಯದ ಅಪರಿಚಿತ ಪಥಗಳಲ್ಲಿ ಮಲ್ಲಯ್ಯನನ್ನು ಕುರಿತ ಅನ್ವೇಷಣೆ : ‘ಯಾವೆಡೆಯೊಳಗೆ ಅಡಗಿರುವೆಯೋ ಮಲ್ಲಯ್ಯ, ಕರೆದರೆ ಯಾಕೆ ಓ ಅನ್ನುವುದಿಲ್ಲವೋ ನನ್ನ ಮಲ್ಲಯ್ಯ, ಈ ಅನಾಥನಾದ ಹುಡುಗ ಕರೆದರೇನು ಮಹಾ ಅನ್ನುವ ಉಪೇಕ್ಷೆಯೋ?’ ಎಂದು ತನ್ನಲ್ಲಿ ತಾನೇ ಆಲಾಪಿಸುತ್ತ ಗಿಡಗಿಡಗಳ ನಡುವೆ, ಹೊದರು-ಹೊದರುಗಳ ನಡುವೆ, ಮಾರ್ದನಿಗೊಡುವ ಬಂಡೆಗಳ ನಡುವೆ, ಮಲ್ಲಯ್ಯ, ಮಲ್ಲಯ್ಯ ಎಂದು ಕೂಗಿ ಕೂಗಿ ಸಿದ್ಧರಾಮನ ಗಂಟಲು ಕಟ್ಟಿ ಹೋಯಿತು; ಅತ್ತೂ ಅತ್ತೂ ಅವನ ಕಣ್ಣೀರೆಲ್ಲವೂ ಬತ್ತಿ ಹೋಯಿತು.  ಮನಸ್ಸಿನ ತುಂಬ ಇನ್ನು ಮಲ್ಲಯ್ಯ ದೊರೆಯುವುದೇ ಇಲ್ಲವೇನೋ ಎಂಬಂತಹ ನಿರಾಸೆಯೊಂದು ಕವಿಯತೊಡಗಿತ್ತು.

ಆ ನಿರಾಸೆಯೇ-ಮೂರ್ತೀಭವಿಸಿದಂತೆ ಸಿದ್ಧರಾಮನ ಕಣ್ಣೆದುರಿಗೆ ಹಠಾತ್ತನೆ ಬಾಯ್ದೆರೆದುಕೊಂಡ ಕಣಿವೆಯ ವಿಸ್ತೀರ್ಣವೊಂದು ಗೋಚರಿಸಿತು.  ಅತ್ತಿತ್ತ ಗೋಡೆಗಳಂತೆ ನಿಂತ ಪರ್ವತಗಳ ಮುಂದೆ ಭೈರವನ ಬಾಯ ಪಾತಾಳದಾಕಳಿಕೆಯಂತೆ, ಆಳವಾಗಿ, ಅಗಲವಾಗಿ, ಚಾಚಿಕೊಂಡ ಆ ಕಣಿವೆ ರುದ್ರ-ಮನೋಹರವಾಗಿತ್ತು.  ಈ ಕಣಿವೆಯೆ ಶ್ರೀಶೈಲ ಪರ್ವತದೊಳಗೆ ರುದ್ರಗಮ್ಮರಿ ಎಂದು ಹೆಸರಾದ ಸ್ಥಳ.  ಸಿದ್ಧರಾಮ ತನಗರಿವಿಲ್ಲದೆಯೆ ಆ ರುದ್ರಗಮ್ಮರಿಯ ಅಂಚಿಗೆ ಬಂದಿದ್ದನು.  ನೋಡುತ್ತಾನೆ ಕೆಳಗೆ ತಳವೇ ಕಾಣದಂತೆ ಆಳವಾಗಿದೆ ಆ ಕಣಿವೆ.  ಮಧ್ಯಾಹ್ನದ ಬಿಸಿಲು ಆ ಕಂದರ ವಿಸ್ತೀರ್ಣದೊಳಕ್ಕೆ ಇಳಿದು ಆ ಕಣಿವೆಯ ತಳದ ಆಳವನ್ನು  ಅಳೆಯುವ ಸಾಹಸದಲ್ಲಿ ತೊಡಗಿದೆ.  ತಳಾತಳದ ಅರಣ್ಯದ ನಡುವೆ, ಹರಿಯುವ ಹಳ್ಳ ಹೊಳೆಗಳು ಅಲ್ಲಿ ಕಂಡು ಇಲ್ಲಿ ಕಾಣದಾಗಿ, ಮಧ್ಯಾಹ್ನದ ಬಿಸಿಲಲ್ಲಿ ತುಂಡುತುಂಡಾದ ಬೆಳ್ಳಿಯ ಗೆರೆಗಳಂತೆ ಹೊಳೆಯುತ್ತಿವೆ.  ಆ ರುದ್ರಗಮ್ಮರಿಯ ತುದಿಯಲ್ಲಿ ನಿಂತ ಸಿದ್ಧರಾಮನ ಮನಸ್ಸಿನಲ್ಲಿ  ಹಠಾತ್ತಾದ ನಿಶ್ಚಯವೊಂದು ರೂಪುಗೊಳ್ಳತೊಡಗಿತ್ತು.  ಇಷ್ಟು ಕರೆದು ಹಂಬಲಿಸಿದರೂ ಮಲ್ಲಯ್ಯ ದೊರೆಯದಿದ್ದ ಮೇಲೆ ಇನ್ನು ಈ ಬದುಕಿಗೆ ಅರ್ಥವೇನಿದೆ?  ಯಾರು, ನಾನು ನಿನಗಾಗಿ ಕಾಯುತ್ತೇನೆ ಬಾ ಮಗೂ ಎಂದು ಕರೆದನೋ, ಆ ನನ್ನ ಜನ್ಮಾಂತರದ ಬಂಧುವಾದ ಮಲ್ಲಯ್ಯನೇ ಹೀಗೆ ನನ್ನನ್ನು ವಂಚಿಸುವುದಾದರೆ ನಾನು ಜೀವಿಸಿ ಏನು ಪ್ರಯೋಜನ?  ಮಲ್ಲಯ್ಯನಿಲ್ಲದ ಈ ಜಗತ್ತು ಯಾಕೆ ಬೇಕು?  ಇರುವುದೊಂದೇ ದಾರಿ, ಹೀಗೆ ಮಲ್ಲಯ್ಯನಿಂದ ಪರಿತ್ಯಕ್ತವಾದ ಈ ಶರೀರವನ್ನು, ಈ ಆಳವಾದ ಕಮರಿಗೆ ನೈವೇದ್ಯ ಮಾಡುವುದಷ್ಟೇ.  ಬೇಕಾಗಿಲ್ಲ ನನಗೆ ನನ್ನ ಮಲ್ಲಯ್ಯನನ್ನು ಕಾಣದ ಈ ಬದುಕು,  -ಹೀಗಂದುಕೊಳ್ಳುತ್ತಾ, ಆ ರುದ್ರಗಮ್ಮರಿಯ ಅಂಚಿನ ಅಗಲವಾದ ಬಂಡೆಯೊಂದರ ಮೇಲೆ ನಿಂತು, ಎರಡು ಕೈಗಳನ್ನೂ ಮೇಲೆತ್ತಿ ಹಾರಿಬೀಳಲು ಸಂಕಲ್ಪ ಮಾಡಿದ ಸಿದ್ಧರಾಮ.

‘ಹೋ ! ಹೋ ! ನಿಲ್ಲು ನಿಲ್ಲು’ ಎಂದು ಕೂಗಿತು ಒಂದು ದನಿ.  ರುದ್ರಗಮ್ಮರಿಯ ಅಂಚಿನಲ್ಲಿ ದೃಢ ಸಂಕಲ್ಪದಂತೆ ನಿಂತ ಸಿದ್ಧರಾಮ ಆ ದನಿಯನ್ನು ಕೇಳಿ ಚಕಿತನಾದ.  ‘ನಿಲ್ಲು, ಸಿದ್ಧರಾಮ ನಿಲ್ಲು, ದುಡುಕಬೇಡ’ ಎಂದು ಮತ್ತೊಮ್ಮೆ ಕೇಳಿಬಂದ ದನಿಗೆ ಸಿದ್ಧರಾಮ, ಹಿಂದಿರುಗಿ ನೋಡುತ್ತಾನೆ.  ಅವರೇ, ಅವರೇ, ಮಲ್ಲಯ್ಯ! ಅಂದು ತನ್ನೂರ ನವಣೆಯ ಹೊಲದ ಬಳಿ ಕಾಣಿಸಿಕೊಂಡರಲ್ಲ ಆ ಮಲ್ಲಯ್ಯನೇ ಇವರು.  ಕರುವಿನ ಬಳಿಗೆ ಧಾವಿಸುವ ತಾಯಿ -ಹಸುವಿನಂತೆ ತನ್ನತ್ತಲೇ ಬರುತ್ತಿದ್ದಾರೆ.  ಅದೇ ಕಾವಿಯ ನಿಲುವಂಗಿ; ಅದೇ ಜೋಳಿಗೆ; ಭಸ್ಮವಿರಾಜಿತವಾದ ಅದೇ ಹಣೆಯ ಮೇಲೆ ಶ್ರೀ ಶೈಲದೇಗುಲದ ಗೋಪುರದಂತೆ ಅವರ ತಲೆಗೂದಲು; ಗಡ್ಡ ಮೀಸೆಗಳ ನಡುವೆ ಕಾಂತಿಯುಕ್ತವಾದ ಮುಖ.  ಅವರು ಬಂದವರೇ ಸಿದ್ಧರಾಮನನ್ನು ತಬ್ಬಿಕೊಂಡು ‘ಎಂಥ ಅನಾಹುತ ಮಾಡಿಬಿಡುತ್ತಿದ್ದೆ ಮಗೂ’, ಎಂದು ಮೃದುವಾಗಿ ನುಡಿದು, ತಲೆದಡವಿ, ಕೆನ್ನೆಗಳನ್ನು ಸವರಿದರು.  ಅಪೂರ್ವವಾದ ಆನಂದ ಸಾಂತ್ವನದಲ್ಲಿ ಕ್ಷಣ ಕಾಲ ಮೌನವಾದ ಸಿದ್ಧರಾಮ ಹೇಳಿದ : ‘ನೀವು ಹೀಗೆ ಮಾಡಬಹುದೆ? ನಾನು ಮನೆಗೆ ಹೋಗಿ ನಿಮಗಾಗಿ ಮೊಸರನ್ನವನ್ನು ತರುವುದರ ಒಳಗೆ ಹೀಗೆ ಕಾಣೆಯಾಗಬಹುದೆ? ಎಂಥವರು ನೀವು.’  ಮುನಿಸುಬೆರೆತ ಅವನ ಪ್ರೀತಿಯ ಆಕ್ಷೇಪಣೆಗೆ ನಸುನಕ್ಕರು ಮಲ್ಲಯ್ಯ.  ‘ಅವತ್ತೇನಾಯಿತು ಗೊತ್ತೆ? ನೀನು ನನಗಾಗಿ ಮಜ್ಜಿಗೆ ಅಂಬಲಿ ತರುತ್ತೇನೆಂದು ಹೇಳಿ ಮನೆಗೆ ಹೋದೆಯಲ್ಲ.  ಆಗ ಅಲ್ಲೇ ಪಕ್ಕದ ಹಳ್ಳಿಯ ಕೆಲವು ಭಕ್ತರು ಹೊಲದ ಬಳಿ ನನ್ನನ್ನು ಕಂಡರು.  ತಮ್ಮ ಮನೆಯ ಮಗುವೊಂದಕ್ಕೆ ಹಠಾತ್ತನೆ ಹಾವೊಂದು ಕಚ್ಚಿ,  ಅದರ ಗತಿ ಈಗಲೋ ಆಗಲೋ ಅನ್ನುವ ಹಾಗಾಗಿದೆ ತಾವು ಬಂದು ವಿಭೂತಿ ಮಂತ್ರಿಸಿದರೆ ಮಗು ಬದುಕಿಕೊಳ್ಳುತ್ತದೆ, ದಯಮಾಡಿ ಬನ್ನಿ ಎಂದು ಅಂಗಲಾಚಿದರು.  ನನಗೆ ನಿಮ್ಮೂರ ಸುತ್ತಮುತ್ತ ಸಾಕಷ್ಟು ಭಕ್ತರ ಮನೆಗಳಿವೆ.  ನಾನು ಆಗಾಗ ಆ ಪ್ರದೇಶದಲ್ಲಿ ಸಂಚಾರಮಾಡುವುದರಿಂದ, ಬಹುಕಾಲದಿಂದ ಅವರಿಗೆಲ್ಲ ನಾನು ಗೊತ್ತು.  ಶಿವನ ಇಚ್ಛೆ ಇದ್ದರೆ ಕಷ್ಟದಲ್ಲಿರುವ ಮಗುವಿಗೆ, ನನ್ನ ವಿಭೂತಿ ಮಂತ್ರಿಸಿದರೆ ಒಳ್ಳೆಯದಾದರೂ ಆಗಬಹುದೆಂದು ಆ ಭಕ್ತರ ಮನೆಗೆ ಹೋದೆ.  ಶ್ರೀಶೈಲದ ಮಲ್ಲಿಕಾರ್ಜುನನ ಕೃಪೆ.  ಮಗು ಆಶ್ಚರ್ಯಕರವಾಗಿ ಯಥಾಸ್ಥಿತಿಗೆ ಬಂತು.  ಅಲ್ಲಿಂದ ಮತ್ತೆ ನಿಮ್ಮ ಹೊಲದ ಹತ್ತಿರ ಬಂದು ನೋಡುತ್ತೇನೆ -ತಡವಾದದ್ದರಿಂದಲೋ ಏನೊ ನೀನು ನನಗಾಗಿ ಕಾದು ಮುನಿಸಿಕೊಂಡು ಹೊರಟೆ ಹೋಗಿದ್ದೀಯ ಅನ್ನಿಸಿತು.  ಹೊಲದ ಬದಿಯ ಹೊಂಗೆಯ ಮರದ ಕೆಳಗೆ ನೀನು ನನಗಾಗಿ ಹಾಸಿದ ಕಂಬಳಿ ಅಲ್ಲೇ ಇತ್ತು.  ನೀನಿರಲಿಲ್ಲ.  ಅಲ್ಲಲ್ಲಿ ನಿನ್ನ ಗುರುತು ಹೇಳಿ ವಿಚಾರಿಸಿದೆ.  ನನಗೆ ಮಾರನೆಯ ದಿನ ತಿಳಿಯಿತು ‘ಮಲ್ಲಯ್ಯ, ಮಲ್ಲಯ್ಯ ಎಂದು ಹಂಬಲಿಸುವ, ಅರೆಮರುಳನಂಥ ಹುಡುಗನೊಬ್ಬ ಶ್ರೀಶೈಲದ ಪರಿಶೆಯ ಜನದ ಜತೆಗೆ ಹೋದ ಎಂದು.  ನನಗೆ ಗೊತ್ತಿತ್ತು ನೀನು ನನ್ನನ್ನು ಹುಡುಕಿಕೊಂಡು ಬಂದೇ ಬರುತ್ತೀಯ ಶ್ರೀಶೈಲಕ್ಕೆ ಎನ್ನುವುದು.  ನಾನು ನಿನ್ನೆ ಸಂಜೆ ನಮ್ಮ ಇಲ್ಲಿನ ಮಠಕ್ಕೆ ಹಿಂದಿರುಗಿದೆ.  ಬೆಳಿಗ್ಗೆ ಮಲ್ಲಿಕಾರ್ಜುನ ದೇವಾಲಯದಲ್ಲಿ ಪೂಜೆಯ ವೇಳೆ ಯಾರೋ ಒಬ್ಬ ಹುಡುಗ ತೀರಾ ವಿಲಕ್ಷಣವಾಗಿ ನಡೆದುಕೊಂಡು ದೇವಸ್ಥಾನದಿಂದಾಚೆ ಓಡಿಹೋಗಿ ಕಾಡಿನೊಳಗೆಲ್ಲೋ ಮರೆಯಾದ ಎಂದು ನನಗೆ ಸುದ್ದಿ ಬಂತು.  ಅದು ನೀನಲ್ಲದೆ ಬೇರಾರೂ ಇರಲಾರದೆಂದು ನನಗೆ ಅನ್ನಿಸಿತು.  ಬೆಳಗಿನಿಂದ ನಾನೂ ನಿನ್ನನ್ನು ಹುಡುಕಿ ಹುಡುಕಿ ಅಲೆದು ಕಡೆಗೆ ಈ ರುದ್ರಗಮ್ಮರಿಯ ಶಿಖರದಲ್ಲಿ ನಿನ್ನನ್ನು ಕಂಡದ್ದಾಯಿತು.’

ಮಲ್ಲಯ್ಯನವರ ಮಾತನ್ನು ಕೇಳಿ ಸಿದ್ಧರಾಮನಿಗೆ ಸಮಾಧಾನವಾಯಿತು.  ಇಲ್ಲ, ಈ ಮಲ್ಲಯ್ಯ ತಾನು ಭಾವಿಸಿದಂತೆ ಅಂಥ ನಿಷ್ಕರುಣಿಯೇನಲ್ಲ.  ನಾನು  ಇವನಿಗಾಗಿ ಹಂಬಲಿಸಿದಂತೆ ಇವನೂ ನನ್ನನ್ನು ವಾತ್ಸಲ್ಯದಿಂದ ಹುಡುಕಿಕೊಂಡು ಬಂದಿದ್ದಾನೆ.  ನಿಜಕ್ಕೂ ಈತ ಕರುಣೆಯ ಮೂರ್ತಿ.  ಗಿರಿಗಹ್ವರಗಳಲ್ಲಿ ಅರಸಿ ತೊಳಲಿ ಬಳಲಿ ಸುತ್ತ ಹತ್ತೂ ಕಡೆಗೆ ಹುಡುಕಿ ಹಗಲೆನ್ನದೆ ಇರುಳೆನ್ನದೆ ನಾನು ಅರಸುತ್ತ ಬಂದರೆ, ನಾನಿದ್ದೇನೆ ಬಾ ಮಗನೆ ಎಂದು ಕರೆದು ನನ್ನ ಕಂಬನಿಯನ್ನು ತೊಡೆದು ತನ್ನ ನಿಜವ ತೋರಿದ ಮಲ್ಲಯ್ಯನನ್ನು ಕಂಡು ನಾನು ಕೃತಾರ್ಥನಾದೆ – ಎಂದುಕೊಂಡನು ಸಿದ್ಧರಾಮ.  ಕೈಹಿಡಿದು ಕರುಣೆಯಿಂದ ನಡೆಯಿಸಿಕೊಂಡು ಬಂದ ಮಲ್ಲಯ್ಯನವರು, ಸಿದ್ಧರಾಮನನ್ನು ಶ್ರೀಶೈಲದ ತಮ್ಮ  ಮಠಕ್ಕೆ ಕರೆದುಕೊಂಡು ಹೋದರು.

ಸಿದ್ಧರಾಮನ ಬದುಕು ಪಶುಪಾಲನಾವೃತ್ತಿಯಿಂದ ಈಗ ಪಶುಪತಿಯಾದ ಮಲ್ಲಿಕಾರ್ಜುನನ ಶ್ರೀಶೈಲದ ಮಠದಲ್ಲಿ ತನ್ನ ಮೊದಲ ನೆಲೆಯನ್ನು ಕಂಡುಕೊಂಡಂತಾಯಿತು.  ಮಲ್ಲಯ್ಯನವರ ಮಾರ್ಗದರ್ಶನ ಹಾಗೂ ಆಶ್ರಯದಲ್ಲಿ ಸಿದ್ಧರಾಮನ ಬದುಕು ಬೇರೊಂದು ಎಚ್ಚರದೊಳಕ್ಕೆ ಅರಳಿಕೊಳ್ಳತೊಡಗಿತು.  ಮಲ್ಲಯ್ಯನವರಿಗೆ ಇನ್ನೂ ಕೆಲವು ಶಿಷ್ಯರಿದ್ದರೂ, ಅವರಿಗೆ ಸಿದ್ಧರಾಮನ ಮೇಲೆ ಅವ್ಯಾಜವಾದ ಕರುಣೆ ಹಾಗೂ ಪ್ರೀತಿ.  ಮಲ್ಲಯ್ಯನವರು ತಮ್ಮ ದೈನಂದಿನ ಪೂಜೆ-ಹೋಮ-ಹವನಾದಿ ಕರ್ಮಗಳಲ್ಲಿ ಸಿದ್ಧರಾಮನನ್ನು ಜತೆಗೂಡಿಸಿಕೊಳ್ಳುತ್ತಾರೆ; ಧರ್ಮಕ್ಕೆ  ಸಂಬಂಧಿಸಿದ ಶಾಸ್ತ್ರಗಳನ್ನು ಕುರಿತು ಅವುಗಳ ಅರ್ಥವನ್ನು ವಿವರಿಸುತ್ತಾರೆ; ಒಂದುದಿನ ಅವರು ಸಿದ್ಧರಾಮನನ್ನು ಕೇಳಿದರು; ‘ಯಾಕೆ ಮಗೂ ನೀನು ಶ್ರೀಶೈಲಕ್ಕೆ ಬಂದಾಗ, ಮಲ್ಲಿಕಾರ್ಜುನ ದೇವಾಲಯದಲ್ಲಿ ‘ಛೇ ಇವನು ಮಲ್ಲಯ್ಯನಲ್ಲ’ ಎಂದು, ಅವತ್ತಿನ ಪೂಜೆಗೂ ನಿಲ್ಲದೆ ದೇವಾಲಯದಾಚೆ ಓಡಿಹೋದೆಯಂತೆ?’.  ಸಿದ್ಧರಾಮ ಹೇಳಿದ:  ‘ಶ್ರೀಶೈಲಕ್ಕೆ ನನ್ನನ್ನು ಸೆಳೆದದ್ದು ನಿಮ್ಮ ಶ್ರೀಮೂರ್ತಿ, ನಾನು ಕಾಣಲು ಬಯಸಿದ್ದು ನಿಮ್ಮನ್ನೇ ಹೊರತು ಆ ದೇವಾಲಯದ ಕಲ್ಲನ್ನಲ್ಲ’.

ಮಲ್ಲಯ್ಯನವರು ಮೆಲ್ಲನೆ ನಕ್ಕರು.  ‘ನೀನು ಕಾಣಲು ಬಯಸಿದ್ದು ನನ್ನನ್ನೇ ಎಂಬುದೇನೋ ನಿಜವೆ.  ಆದರೆ ನಾನೇನೂ ದೇವರಲ್ಲವಲ್ಲ? ನಾನೂ ನಿನ್ನಂತೆಯೇ ಒಬ್ಬ ಮನುಷ್ಯ.  ಅಷ್ಟೇ ಅಲ್ಲ, ಆ ಶ್ರೀಶೈಲದ ಮಲ್ಲಿಕಾರ್ಜುನನ ಸೇವೆಯಲ್ಲಿ ತೊಡಗಿದ ಅಸಂಖ್ಯಾತರಲ್ಲಿ ನಾನೂ ಒಬ್ಬ’.

‘ಹಾಗಾದರೆ, ಜನ ಯಾವುದನ್ನು ಮಲ್ಲಿಕಾರ್ಜುನ ಎಂದು ಪೂಜಿಸುತ್ತಾರೋ, ಆ ದೇವಾಲಯದೊಳಗಿನ ಕಲ್ಲು, ದೇವರೆ?’

‘ಹಾದು, ಅದೇ ದೇವರು.  ಅದು ಕಲ್ಲೆಂದವರಿಗೆ ಕಲ್ಲು; ದೇವರೆಂದವರಿಗೆ ದೇವರು’

‘ಹಾಗೆಂದರೇನು’

‘ದೇವರೆಂದರೇನೆಂದುಕೊಂಡಿರುವೆ.  ಇಡೀ ಜಗತ್ತನ್ನು ನಿರ್ಮಿಸಿರುವ ಹಾಗೂ ನಿಯಂತ್ರಿಸಿರುವ ಒಂದು ಮಹಾಚೈತನ್ಯ. ಅದನ್ನು ಮನುಷ್ಯರಾದವರು ಯಾವ ಯಾವ ಭಾವದಲ್ಲಿ ಯಾವ ಯಾವ ರೂಪವನ್ನು ಕೊಟ್ಟು ಆರಾಧಿಸುತ್ತಾರೋ, ಅದು ಆಯಾ ರೂಪದಲ್ಲಿ ಅವರವರಿಗೆ ದೇವರು.  ಶೈವರಾದವರು ಶಿವನೆಂದು ಕರೆದು, ಅವನನ್ನು ಲಿಂಗರೂಪದಲ್ಲಿ ಪೂಜಿಸುತ್ತಾರೆ.  ಈ ಲಿಂಗ ಆ ಪರಾತ್ಪರವಾದ ಚೈತನ್ಯಕ್ಕೆ ಒಂದು ಸಂಕೇತ ಮಾತ್ರ.  ಈ ಸಂಕೇತ ಅಥವಾ ಆಕಾರದಲ್ಲಿ ಶ್ರದ್ಧೆ ನಿಷ್ಠೆಗಳು ಗಟ್ಟಿಗೊಳ್ಳಬೇಕಾದದ್ದೆ ಮೊದಲ ಹಂತ.  ಪರಾತ್ಪರವಾದ ಅನಂತರ ಯಾವ ಚೈತನ್ಯವು ಹೀಗೆ ಸಾಕಾರರೂಪದಲ್ಲಿ ನಮ್ಮ ಶ್ರದ್ಧೆ ಭಕ್ತಿಗಳನ್ನು ಉದ್ದೀಪಿಸುತ್ತದೆಯೋ, ಅದೇ ಈ ಜೀವ ಜಗತ್ತಿನ ವಿವಿಧ ರೂಪಗಳಾಗಿ ಅಭಿವ್ಯಕ್ತಗೊಂಡಿದೆ  ಎಂಬುದನ್ನು ಅರಿತುಕೊಳ್ಳುವುದೆ ಶಿವಯೋಗದ ಉದ್ದೇಶ.  ಆ ಅರಿವಿನ ನೆಲೆಯಲ್ಲಿ, ತಾನು ತನ್ನ ಇಷ್ಟದೈವದ ವಿಚಾರದಲ್ಲಿ ಬೆಳೆಯಿಸಿಕೊಂಡ ಭಕ್ತಿ ರೂಪವಾದ ಪ್ರೀತಿ- ಅನುರಕ್ತಿಗಳು ಲೋಕದ ಸಮಸ್ತ ಜೀವರುಗಳನ್ನೂ ಪ್ರೀತಿಸುವ ಲೋಕಾನುಕಂಪೆಯಾಗಿ ವಿಸ್ತರಣಗೊಳ್ಳಬೇಕು.  ಜೀವರಲ್ಲಿ ಶಿವನನ್ನು ಕಾಣುತ್ತ ಅವರ ಶ್ರೇಯಸ್ಸಿಗಾಗಿ ಶ್ರಮಿಸುವುದೇ ನಿಜವಾದ ಧರ್ಮ.  ನಾನು ಹೇಳುವ ಈ ಮಾತು ನಿನ್ನ ಮನಸ್ಸಿನಲ್ಲಿ ಸ್ಥಾಯಿಯಾಗಿರಲಿ. ತಿಳಿಯಿತೆ?’

‘ಆರ್ಥವಾಯಿತು ಗುರುದೇವ, ಅರ್ಥವಾಯಿತು.  ಈ ನಿಮ್ಮ ಮಾತು ನನ್ನ ದಾರಿಗೊಂದು ದೀಪವಾದಂತಾಯಿತು’, ಎಂದ ಸಿದ್ಧರಾಮ.  ಸ್ವಲ್ಪ ಹೊತ್ತು ಅವರ ಮಾತನ್ನು ಮನನ ಮಾಡುವನಂತೆ ಮೌನವಾಗಿದ್ದು ಮತ್ತೆ ಕೇಳಿದ : ‘ಪೂಜ್ಯರೆ ತಾವು ನನಗೆ  ಆಶ್ರಯಕೊಟ್ಟ ನಿಮ್ಮ ಈ ಮಠ ಎಷ್ಟು ಹಳೆಯದು? ತಮ್ಮ ಗುರುಗಳು ಯಾರು?’

‘ನಮ್ಮ ಮಠ’! ಮಲ್ಲಯ್ಯನವರು ನಕ್ಕರು.  ಈ ಮಠ ಎಷ್ಟು ಹಳೆಯದೋ ಗೊತ್ತಿಲ್ಲ.  ತೀರಾ ಪ್ರಾಚೀನವಾದದ್ದು ಎಂದು ಕೇಳಿ ಬಲ್ಲೆ.  ಇದು ಲಕುಲೀಶ ಪಾಶುಪತ ಎಂಬ ಶೈವಸಿದ್ಧಾಂತಕ್ಕೆ ಸೇರಿದ ಮಠ.  ಶ್ರೀಶೈಲ ಈ ಪಂಥದ ಕೇಂದ್ರ ಎಂದು ಹೇಳುತ್ತಾರೆ.  ಈ ಶ್ರೀಶೈಲದಲ್ಲಿ ಶೈವ  ಪಂಥದ ವಿವಿಧ ಶಾಖೆಗಳಿಗೆ ಸೇರಿದ ಎಷ್ಟೋ ಜನ ಸಾಧುಗಳು ಸಿದ್ಧರು ತಪಸ್ಸು ಮಾಡುತ್ತಿದ್ದಾರೆ ಎಂದು ನಾವು ಕೇಳಿದ್ದೇವೆ.  ನಾವಿರುವ ಈ ಮಠದ ಪರಂಪರೆಯಲ್ಲಿ ಅನೇಕರು ಆಗಿ ಹೋಗಿದ್ದಾರೆ.  ನನ್ನ ಗುರುಗಳು ಯಾರೆಂದು ಕೇಳಿದೆಯಲ್ಲವೆ? ಕೇಳು, ಹೇಳುತ್ತೇನೆ “ಮಹಾತೇಜಸ್ವಿಗಳೂ, ಸಿದ್ಧಸಂತಾನ ನಾಯಕರೂ, ಆದ ರೇವಣಸಿದ್ಧರು ನನ್ನ ಗುರುಗಳು.  ಅವರ ಹೆಸರು ಕೇಳಿದ್ದೀಯ?”

“ಹೌದು ಪೂಜ್ಯರೆ ಕೇಳಿದ್ದೇನೆ.  ಅವರು ನಮ್ಮೂರು ಸೊನ್ನಲಿಗೆಗೂ ಬಂದಿದ್ದರಂತೆ  – ನಾನು ಹುಟ್ಟುವ ಒಂದು ವರ್ಷ ಮೊದಲು.  ಹೀಗೆಂದು ನಮ್ಮ ಮನೆಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ನನ್ನ ಚಿಕ್ಕಂದಿನಲ್ಲಿ ಕೇಳಿದ್ದೇನೆ”.

‘ಹೌದೆ? ನಿಮ್ಮೂರಿಗೂ ಬಂದಿರಬಹುದು.  ನಿಂತಲ್ಲಿ ನಿಲ್ಲದೆ ಸದಾ ಸಂಚಾರ ಮಾಡುತ್ತಿರುವುದೇ ಅವರ ಸ್ವಭಾವ.  ಈ ಶ್ರೀಶೈಲಕ್ಕೆ ಹತ್ತಿರದ ಕೊಲ್ಲಿಪಾಕಿ ಎಂಬ ಊರೇ ಅವರ ಜನ್ಮಸ್ಥಳ.  ಇಲ್ಲಿಗೂ ಬಂದಿದ್ದರು ಒಂದೆರಡು ಸಲ.  ಆಮೇಲೆ ಎಲ್ಲಿ ಹೋದರೋ.  ಯಾವುದಕ್ಕೂ  ಕಟ್ಟುಗೊಳ್ಳದ ಒಂದು ನಿರಂಕುಶ ಮದಗಜದಂತೆ ಅವರ ಸಂಚಾರ.  ಅವರು ಸಂಚಾರ ಮಾಡದ ಸ್ಥಳವೇ ಇಲ್ಲ ಈ ದೇಶದಲ್ಲಿ ಅನ್ನುತ್ತಾರೆ ತಿಳಿದವರು.  ಅವರೊಬ್ಬ ಮಹಾಸಿದ್ಧರು’.

‘ಸಿದ್ಧರೆಂದರೆ ಹಲವು ಬಗೆಯ ಯೋಗಸಿದ್ಧಿಗಳನ್ನು ಪಡೆದುಕೊಂಡವರೆಂದು ಅರ್ಥವಲ್ಲವೆ? ಅವರು ಯಾವ ಬಗೆಯ ಸಿದ್ಧರು?’

‘ಈ ಲೋಕದಲ್ಲಿ ಅನೇಕ ಬಗೆಯ ಸಿದ್ಧರಿದ್ದಾರೆ – ಅನೇಕ ರೀತಿಯ ಯಂತ್ರ  -ತಂತ್ರಗಳನ್ನು ವಶಪಡಿಸಿಕೊಂಡು ಜನರನ್ನು ಬೆರಗುಗೊಳಿಸುವವರು; ಬಹುಬಗೆಯ ವಾಮಾಚಾರಗಳಿಂದ ಜನರ ಭಯ – ಭಕ್ತಿಗಳನ್ನು ಗಳಿಸಿಕೊಳ್ಳುವವರು.  ಅನೇಕ ರೀತಿಯ ಕುಟಿಲವಿದ್ಯೆಗಳನ್ನು ಸಾಧಿಸಿಕೊಂಡು ಅಧ್ಯಾತ್ಮದ ಹಾದಿಯಿಂದ ವಿಮುಖರಾದ ಸಿದ್ಧರ ಉದಾಹರಣೆಗಳು ಸಾಕಷ್ಟಿವೆ.  ಈ ಬಗೆಯ ಅಲ್ಪವಿದ್ಯಾ ಸಾಮರ್ಥ್ಯಗಳಿಂದ ಏನೂ ಪ್ರಯೋಜನವಿಲ್ಲ.  ಈ ಕ್ಷುದ್ರ ವಿದ್ಯೆಗಳಿಂದ ಸಾಧಕನು ಸಾಧ್ಯವಾದಷ್ಟು ದೂರವಿರಬೇಕು.  ಆದರೆ ರೇವಣಸಿದ್ಧರು ಯೋಗಿಗಳ ಯೋಗಿ, ಈಗ ಹೇಳಿದ ಕುಟಿಲಸಿದ್ಧರಿಗೆ ಕುಠಾರಪ್ರಾಯರು ಇವರು.  ವೇದವೇದಾಂತ ಸಮ್ಮತವಾದ ಶ್ರೇಷ್ಠವಾದ ಶಿವಾದ್ವೆ ತವನ್ನು ಪ್ರಸಾರ ಮಾಡಿ, ಜನರನ್ನು ವಿವಿಧ ಮತ ಭ್ರಾಂತಿಗಳಿಂದ ಪಾರುಮಾಡಿದವರು. ಅವರೂ ಅನೇಕ ಪವಾಡಗಳನ್ನು ಸಾಮರ್ಥ್ಯಗಳನ್ನು ಮೆರೆದರೆಂದು ಜನ ಹೇಳುತ್ತಾರೆ.  ಮಾಡಿರಬಹುದು; ಪವಾಡಗಳಂತೆ ತೋರುವ ಕೆಲವು ಮಹಿಮಾ ವಿಶೇಷಗಳನ್ನು ಪ್ರಕಟಿಸಿರಬಹುದು.  ಅದೇನೂ ಬಹುಮುಖ್ಯವೆಂದು ಪರಿಗಣಿಸಬೇಕಾದ ಸಂಗತಿ ಅಲ್ಲ.  ಆದರೆ ಅವರು ಎಷ್ಟರ ಮಟ್ಟಿಗೆ ಮಹಾಸಿದ್ಧರಾಗಿದ್ದಾರೋ, ಅಷ್ಟರ ಮಟ್ಟಿಗೆ ಲೋಕದ ಜನ ಸಾಮಾನ್ಯರ ಸುಖದುಃಖಗಳಿಗೂ ಸ್ಪಂದಿಸಬಲ್ಲವರಾಗಿದ್ದರು.  ಬನವಾಸಿ, ಮಂಗಳವಾಡ, ಕಂಚಿ ಮೊದಲಾದ ರಾಜ್ಯಗಳ ರಾಜರುಗಳಿಂದ ಪೂಜನೀಯರಾದ ಇವರು, ಕೆರೆಗಳನ್ನು ಕಟ್ಟಿಸಿ ಜೀವರಾಶಿಗಳ ಬಾಯಾರಿಕೆಯನ್ನು ನೀಗಿಸಿದರು, ಅನ್ನಸತ್ರಗಳನ್ನು ಕಟ್ಟಿಸಿ ಬಡಬಗ್ಗರ ಹಸಿವನ್ನು ಹಿಂಗಿಸಿದರು, ದೇವಸ್ಥಾನಗಳನ್ನು ಕಟ್ಟಿಸಿ, ಲಿಂಗ ಪ್ರತಿಷ್ಠಾಪನೆ ಮಾಡಿ ಜನರ ಶ್ರದ್ಧಾಭಕ್ತಿಗಳನ್ನು ವರ್ಧಿಸಿದರು.  ಇದು ಅತ್ಯಂತ ಮುಖ್ಯವಾದ ಸಂಗತಿ.  ನೀನೂ ಇಷ್ಟರಲ್ಲಿಯೆ ಸೊನ್ನಲಿಗೆಗೆ ಹೋಗಿ, ನಾಳೆ ಮಾಡಬೇಕಾದ ಕಾರ್ಯ ಮತ್ತು ಮುಂದುವರಿಸಬೇಕಾದ ಸಂಪ್ರದಾಯವೂ ನನ್ನ ಗುರು ರೇವಣಸಿದ್ಧರ ಪರಂಪರೆಗೆ ಸೇರಿದ್ದೇ.

ಅದುವರೆಗೂ ಮಲ್ಲಯ್ಯನವರ ಮಾತನ್ನು ಆಲಿಸುತ್ತಿದ್ದ ಸಿದ್ಧರಾಮನಿಗೆ, ‘ಇಷ್ಟರಲ್ಲಿಯೆ ನೀನು ಸೊನ್ನಲಿಗೆಗೆ ಹೋಗಿ ನಾಳೆ ಮಾಡಬೇಕಾದ ಕಾರ್ಯವೂ ಇದೇ,’ ಎಂಬ ನಿರ್ದೇಶನದ ಮಾತನ್ನು ಕೇಳಿದ ಒಡನೆಯೆ, ಅತೀವವಾದ ದುಃಖವಾಯಿತು.  ಆತ ಮಲ್ಲಯ್ಯನವರ ಪಾದಗಳನ್ನು ಹಿಡಿದು –

“ಬೇಡ ಗುರುವೇ ಬೇಡ, ನನ್ನನ್ನು ಇಲ್ಲಿಂದ ಎಲ್ಲಿಗೂ ಕಳುಹಿಸಬೇಡಿ, ನಿಮ್ಮನ್ನು ಅಗಲಿ ನಾನಿರಲಾರೆ.  ನಿಮ್ಮನ್ನೇ ನಂಬಿ ಇಲ್ಲಿಗೆ ಬಂದೆ.  ನನ್ನನ್ನು ನಿಮ್ಮ ಕಾರುಣ್ಯದ ಬೆಳಕಿನಿಂದಾಚೆಗೆ ನೂಕಬೇಡಿ.  ನಾನು ಇಲ್ಲೇ ನಿಮ್ಮ ಸನ್ನಿಧಿಯಲ್ಲೇ ಸೇವೆ ಮಾಡಿಕೊಂಡು ಬದುಕುತ್ತೇನೆ’ ಎಂದು ಕಂಬನಿದುಂಬಿ ಅಂಗಲಾಚಿದನು.

ಮಲ್ಲಯ್ಯನವರು ಹೇಳಿದರು : ‘ಮಗೂ ಇಷ್ಟುಕಾಲ ನಮ್ಮಲ್ಲಿದ್ದು ನೀನು ಕಲಿತದ್ದು ಇಷ್ಟೇ ಏನು? ನೀನು ಇಲ್ಲಿಯೇ ನಮ್ಮ ಸನ್ನಿಧಿಯಲ್ಲಿ ಇದ್ದುಕೊಂಡು, ಬದುಕನ್ನು ನೂಕುವುದು ಆ ಮಲ್ಲಿಕಾರ್ಜುನನ ಇಚ್ಛೆ ಎಂದು ತಿಳಿದೆಯೇನು?  ಯಾರು ಯಾರು ಯಾವ ಕಾಲಕ್ಕೆ ಏನೇನು ಆಗಬೇಕು ಏನೇನು ಮಾಡಬೇಕು ಅನ್ನುವುದು ಈ ಮೊದಲೇ ಭಗವತ್ಸಂಕಲ್ಪದಲ್ಲಿ ಲಿಖಿತವಾಗಿದೆ.  ಇಷ್ಟು ಮಾತ್ರ ನಿಜ : ಈ ಶ್ರೀಶೈಲ ನಿನ್ನ ನಿಲುಗಡೆಯ ನೆಲೆ ಅಲ್ಲ.  ನಿನ್ನ ಕಾರ್ಯ ಕ್ಷೇತ್ರ ಸೊನ್ನಲಿಗೆ.  ಅಲ್ಲಿ ನೀನು ಮಾಡಬೇಕಾದದ್ದು ಬಹಳ ಇದೆ.  ಹಾಗೆಯೆ ನೀನು ಮಾಡಬೇಕಾದುದೇನು ಎನ್ನುವುದನ್ನು ನಾನು ಸೂಕ್ಷ್ಮವಾಗಿ  ಸೂಚಿಸಿದ್ದೇನೆ.  ನನ್ನಿಂದ ನೀನು ಅಗಲಿ ಹೋಗುತ್ತಿದ್ದೇನೆ ಎಂಬ ಶಂಕೆ ಬೇಡ.  ನನ್ನ ಪ್ರೀತಿ  – ಆಶೀರ್ವಾದಗಳು ಸದಾ ನಿನ್ನ ಜತೆಗೆ ಇವೆ.  ನಾನೂ ಆಗಾಗ ಬಂದು ನೀನೇನು ಮಾಡುತ್ತೀಯ ಎಂಬುದನ್ನು ನೋಡುತ್ತೇನೆ.  ಹೋಗಿ ಬಾ ಮಗೂ ಹೋಗಿ ಬಾ.  ಮಲ್ಲಿಕಾರ್ಜುನನೆ ಸದಾ ನಿನ್ನ ಜತೆಗೆ ಇರುವಾಗ ನಿನಗೇತರ ಭಯ?’