ಸಿದ್ಧರಾಮನು ಕಲ್ಯಾಣದಿಂದ ಹಿಂದಿರುಗಿಬಂದ ನಂತರ ಆತ ಮೊದಲಿನಂತೆ ಮಲ್ಲಿನಾಥನ ದೇಗುಲಕ್ಕೆ ಹೋಗುವುದು ಕಡಮೆಯಾದದ್ದನ್ನು ಬೊಮ್ಮಯ್ಯ, ಕೇದಾರ ಗುರು ಮೊದಲಾದವರು ಗಮನಿಸಿದರು.  ದೇವಸ್ಥಾನದ ಭಕ್ತಜನಪ್ರಿಯವಾದ ಆರತಿ-ಅಭಿಷೇಕ-ಅರ್ಚನೆ ಇತ್ಯಾದಿಗಳು ಕ್ರಮಬದ್ಧವಾಗಿ ನಡೆಯುತ್ತಿದ್ದರೂ, ಈವರೆಗೂ ನಡೆದುಕೊಂಡು ಬಂದಿದ್ದ ನಿತ್ಯ ಹೋಮಗಳನ್ನು ಸಿದ್ಧರಾಮನ ಸೂಚನೆಯ ಮೇರೆಗೆ ನಿಲ್ಲಿಸಲಾಗಿತ್ತು.  ದಾನ-ಧರ್ಮ-ಹಾಗೂ ಸತ್ರದ ದಾಸೋಹ ಕ್ರಿಯೆಗಳೇನೋ ನಿರಾತಂಕವಾಗಿ ನಡೆಯುತ್ತಿದ್ದವು.  ಸಿದ್ಧರಾಮನು ತನ್ನ ಮಠದೊಳಗಣ ಕಿರುಪೂಜಾಮಂದಿರದಲ್ಲಿ ತನ್ನ ಇಷ್ಟಲಿಂಗ ಪೂಜೆ ಹಾಗೂ ಜಪತಪಗಳಲ್ಲಿ ಮಗ್ನನಾಗಿರುತ್ತಿದ್ದನು.  ಆಗಾಗ ಕೇದಾರಗುರುವಿನೊಂದಿಗೆ, ತಾನು ಕಲ್ಯಾಣದ ಶರಣರ ಮಹಾಮನೆಯಲ್ಲಿ ನಡೆಯುತ್ತಿದ್ದ ಅಪೂರ್ವ ಘಟನಾವಳಿಗಳನ್ನೂ, ಬಸವ-ಅಲ್ಲಮ-ಚನ್ನಬಸವ ಈ ಮಹಾವ್ಯಕ್ತಿಗಳಿಂದ ಸಂಭವಿಸುತ್ತಿರುವ ಅನನ್ಯ ಸಾಮಾಜಿಕ-ಧಾರ್ಮಿಕ ಆಂದೋಳನದ ಸ್ವರೂಪವನ್ನು ವಿವರಿಸುತ್ತಾನೆ.  ಶರಣ ಧರ್ಮದಲ್ಲಿ ಶ್ರದ್ಧೆಯುಳ್ಳವರಿಗೆ, ದೇವಸ್ಥಾನ ಹಾಗೂ ಸ್ಥಾವರಲಿಂಗಾರ್ಚನೆಗಳ ನಿರರ್ಥಕತೆಯನ್ನು ಕುರಿತು ಮಾತನಾಡುತ್ತಾನೆ.  ಬಹುಜನಸಾಮಾನ್ಯರಿಗೆ, ದೇವಸ್ಥಾನಗಳು ಅಗತ್ಯವೆನ್ನುವುದು ನಿಜವಾದರೂ, ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡು, ದೈವತ್ವದ ಕಲ್ಪನೆಯನ್ನು ದೇವಸ್ಥಾನದಿಂದ ಮನುಷ್ಯನ ಶರೀರಕ್ಕೆ ಸ್ಥಳಾಂತರಗೊಳಿಸುವ ಇಷ್ಟಲಿಂಗಾರಾಧನೆಯ ವಿಶೇಷತೆಯನ್ನು ಸಿದ್ಧರಾಮನು ಪ್ರಶಂಸಿಸುತ್ತಾನೆ.  ಹಾಗೆ ನೋಡಿದರೆ ಯಾವ ದೇವರು – ಎಲ್ಲೆಲ್ಲಿಯೂ ಇರುವ ದೇವರು, ತನ್ನ ಇಷ್ಟಲಿಂಗದಲ್ಲಿಯೂ ಇರುವ ಹಾಗೆ ದೇಗುಲದ ಸ್ಥಾವರಲಿಂಗದಲ್ಲಿಯೂ ಇದ್ದಾನೆ  ಅನ್ನುವುದು ತರ್ಕಬದ್ಧವಾಗಿಯೂ ಸರಿ ಎನ್ನುವುದು ನಿಜವಾದರೂ, ಇಷ್ಟಲಿಂಗದ ಮೂಲಕ ಆ ದೈವತ್ವದ ಸಾನಿಧ್ಯ, ತನ್ನೊಂದಿಗೆ, ತನ್ನಲ್ಲಿಯೇ ನಿರಂತರವಾಗಿ ಇದೆ ಎನ್ನುವ ಆತ್ಮೀಯತೆ ಭಕ್ತನಲ್ಲಿ ಮೈದುಂಬಿಕೊಳ್ಳಲು, ಶರಣ ಧರ್ಮದ ಈ ಇಷ್ಟಲಿಂಗದ ಕಲ್ಪನೆ ಬಹುಮುಖ್ಯವಾದ ಪಾತ್ರವಹಿಸುತ್ತದೆ ಅನ್ನುವುದನ್ನು ವಿವರಿಸುತ್ತಾನೆ.  ಅಷ್ಟೇ ಅಲ್ಲ ‘ಅಂಗದ ಮೇಲೆ ಲಿಂಗ ಉಳ್ಳವರನೆಲ್ಲ ಸಂಗಮನಾಥನೆಂಬೆ’ ಎಂದ ಬಸವಣ್ಣನವರ ಮಾತು, ಪ್ರತಿಯೊಬ್ಬ ವ್ಯಕ್ತಿಯನ್ನೂ ಸಾಕ್ಷಾತ್ ಆ ದೈವದ ‘ಜಂಗಮದೇವಸ್ಥಾನ’ವೆಂದೇ ಭಾವಿಸುವ ಒಂದು ಉದಾತ್ತ ಧಾರ್ಮಿಕ ಭಾವವನ್ನು ಹೇಗೆ ಪ್ರಚೋದಿಸುತ್ತದೆಂಬುದನ್ನು ಕೇಳಿ, ಕೇದಾರಗುರು ಮೊದಲಾದವರು ಈ ಹೊಸ ಚಿಂತನೆಗಳಿಂದ ಆಶ್ಚರ್ಯಗೊಳ್ಳುತ್ತಾರೆ.  ಇದನ್ನೆಲ್ಲ ಆಲಿಸುತ್ತ ಕೇದಾರಗುರು ಹೇಳಿದರು : ‘ಅಯ್ಯನವರೇ, ನಿಸ್ಸಂದೇಹವಾಗಿಯೂ ಈ ಶರಣ ಧರ್ಮ, ಈ ಕಾಲಮಾನದ ಅಗತ್ಯದ ಪೂರೈಕೆಗಾಗಿಯೇ ಮೂಡಿದ್ದೆಂದು ತೋರುತ್ತದೆ. ಇದು ಈವರೆಗೂ ನಾವು ನಂಬಿಕೊಂಡು ಬಂದ ಮಾರ್ಗವನ್ನು ನಿಜವಾದ ಅಧ್ಯಾತ್ಮದಲ್ಲಿ ಪುನರ್ ವ್ಯಾಖ್ಯಾನಗೊಳಿಸುವ ಒಂದು ಅಪೂರ್ವವಾದ ಪ್ರಯೋಗದಂತೆ ತೋರುತ್ತದೆ.  ನಿಮ್ಮ ನೇತೃತ್ವದಲ್ಲಿ ನಾವೂ ಈ ಮಹಾಪ್ರವಾಹದೊಂದಿಗೆ ಬೆರೆಯುವುದು ಅನಿವಾರ್ಯವೆಂದೇ ನನಗೆ ತೋರುತ್ತದೆ.  ಒಂದು ರೀತಿಯಲ್ಲಿ ನೀವು ಮಹಾನುಭಾವಿ ಅಲ್ಲಮಪ್ರಭುವಿನೊಂದಿಗೆ ಕಲ್ಯಾಣಕ್ಕೆ ಹೋದದ್ದು ಒಳಿತೇ ಆಯಿತು.  ತಾವು ಹೋದನಂತರ, ಬಹುಕಾಲ ನೀವು ಹಿಂದಿರುಗದೆ ಇದ್ದುದನ್ನು ನೋಡಿ, ನೀವು ಬಾರದೆ ಹೋದರೆ ಏನು ಗತಿ ಎಂದು ನಾವು ಕೆಲವರು ತಳಮಳಗೊಂಡದ್ದೂ ಉಂಟು.  ಅಂತೂ ನೀವು ಬಂದಿರಿ ನಮಗೆಲ್ಲ ಧೈರ್ಯವೇ ಮರಳಿ ಬಂದಂತಾಯಿತು’.  ಕೇದಾರ ಗುರುವಿನ ಒಂದೊಂದು ಮಾತನ್ನೂ ಸಾವಧಾನದಿಂದ ಆಲಿಸಿದ ಸಿದ್ಧರಾಮನು ಹೇಳಿದ : ‘ನಾನು ಕಲ್ಯಾಣಕ್ಕೆ ಹೋಗಬಹುದೆಂದು ಮೊದ ಮೊದಲು ಕಲ್ಪಿಸಿಕೊಂಡೇ ಇರಲಿಲ್ಲ.  ಅಲ್ಲಮಪ್ರಭು ಬಂದದ್ದೂ ಆಕಸ್ಮಿಕ, ಅವರ ಪ್ರೇರಣೆಯಂತೆ ನಾನು ಕಲ್ಯಾಣಕ್ಕೆ ಹೋದದ್ದೂ ಆಕಸ್ಮಿಕವೇ.  ಅಲ್ಲಲ್ಲ, ಅದೂ ಮಲ್ಲಯ್ಯನ ಇಚ್ಛೆಯೇ.  ನನ್ನ ನಂಬಿಕೆಯಲ್ಲಿ, ನನ್ನ ಕಾರ್ಯವಿಧಾನಗಳಲ್ಲಿ ಒಂದು ಹೊಸ ಪರಿವರ್ತನೆಯಾಗಲಿ ಎಂದೇ ಮಲ್ಲಯ್ಯ ನನ್ನನ್ನು ಕಲ್ಯಾಣದ ಶರಣರ ಸಂಗಕ್ಕೆ ಕಳುಹಿಸಿರಬಹುದು.  ಆದರೆ ನನ್ನ  ಕಾರ್ಯಕ್ಷೇತ್ರ ಸೊನ್ನಲಿಗೆಯೆ ಹೊರತು ಕಲ್ಯಾಣವಲ್ಲ.  ಶ್ರೀಶೈಲದ ಮಲ್ಲಯ್ಯನವರು ನನ್ನನ್ನು ನಿಯೋಜಿಸಿರುವುದು ಸೊನ್ನಲಿಗೆಯ ಕರ್ಮಭೂಮಿಯಲ್ಲಿ.  ಆದ್ದರಿಂದಲೆ ಇನ್ನಷ್ಟು ಕಾಲ ತಮ್ಮ ಜತೆಗೆ ಇರಬೇಕೆಂದು ಬಸವಣ್ಣನವರು ನನ್ನನ್ನು ಕೇಳಿಕೊಂಡರೂ ನಾನು ಬಸವಣ್ಣನವರಿಗೆ ಹೇಳಿದೆ : ‘ಅಣ್ಣನವರೇ ಕೂಡಲಸಂಗನು, ನಿಮಗೆ ಯಾವ ನಿರ್ದೇಶನವನ್ನು ನೀಡಿ ನಿಮ್ಮನ್ನು ಈ ಕಲ್ಯಾಣ ಕಾರ್ಯರಂಗಕ್ಕೆ ನಿಯೋಜಿಸಿದ್ದಾನೋ ಅದೇ ಕೂಡಲಸಂಗನು ಶ್ರೀಶೈಲದ ಮಲ್ಲಯ್ಯನಾಗಿ, ಸೊನ್ನಲಿಗೆಯ ಕರ್ಮಭೂಮಿಯಲ್ಲಿ ನನ್ನನ್ನು ನಿಯೋಜಿಸಿದ್ದಾನೆ.  ಇನ್ನು ನನಗೆ ಅಪ್ಪಣೆ ಕೊಡಿ ನಾನು ಬರುತ್ತೇನೆ’ ಎಂದು ಅವರಿಗೆ ಹೇಳಿ ಮರಳಿ ಬಂದೆ.  ನೀವೆಂದಂತೆ ಈ ಕಾಲಮಾನದ ಅಗತ್ಯವಾದ ಶರಣಧರ್ಮದ ಪ್ರವಾಹದಿಂದ ಹೊರತಾದ ಧಾರೆಯಾಗಿ ಈ ಸೊನ್ನಲಿಗೆ ಇನ್ನು ಇರಲಾರದು!’.

ಈ ನಡುವೆ ಹಾವಿನಹಾಳ ಕಲ್ಲಯ್ಯನಿಗೆ, ತಾನೊಲಿದು ಮದುವೆಯಾದ ಚೆನ್ನವ್ವನಲ್ಲಿ ಒಂದು ಹೆಣ್ಣುಮಗು ಹುಟ್ಟಿತು.  ಆ ಮಗುವನ್ನೂ ಹೆಂಡತಿಯನ್ನೂ ಕರೆದುಕೊಂಡು ಬಂದ ಸಿದ್ಧರಾಮನ ಆಶೀರ್ವಾದವನ್ನು ಬೇಡಿದನು.  ಸಿದ್ಧರಾಮನು ಅವರ ದಾಂಪತ್ಯ ಜೀವನವನ್ನು ಕಂಡು ತುಂಬ ಸಂತೋಷಪಟ್ಟನು.  ಅ ಮಗುವಿನ ಮಲ್ಲಿಕಾರ್ಜುನನ ದೇವಾಲಯದಲ್ಲಿ ನಾಮಕರಣ ಸಮಾರಂಭವನ್ನು ಏರ್ಪಡಿಸಲಾಗಿತ್ತು.  ಮಗುವಿಗೆ ಕಲ್ಲವ್ವೆ ಎಂಬ ನಾಮಕರಣವಾಯಿತು.

ಒಂದುದಿನ ತಮ್ಮ ಆಪ್ತ ಶಿಷ್ಯ ಕಲ್ಲಯ್ಯನನ್ನೂ, ಅಣ್ಣ ಬೊಮ್ಮಯ್ಯನನ್ನು ಕರೆದು, ಸಿದ್ಧರಾಮನು, ಕೆರೆಯ ನಡುವಣ ಪ್ರಶಸ್ತವಾದ ಸ್ಥಳವೊಂದಲ್ಲಿ ಒಂದು ಗೊಪೆಯನ್ನು ನಿರ್ಮಿಸುವ ಬಗ್ಗೆ ಆಲೋಚಿಸಿದನು.  ತಾನು ಸಾಧ್ಯವಾದಷ್ಟು ಬೇಗ, ಎಲ್ಲ ಕೆಲಸಗಳಿಂದಲೂ ಬಿಡುಗಡೆ ಪಡೆದು, ಆ ಗೊಪೆಯನ್ನು ಪ್ರವೇಶಿಸಿ ಧ್ಯಾನಲೀನನಾಗುವುದು ಸಿದ್ಧರಾಮನ ಉದ್ದೇಶವಾಗಿತ್ತು.

ಕೆಲವು ದಿನಗಳನಂತರ ಸೊನ್ನಲಿಗೆಗೆ, ಕಲ್ಯಾಣದಿಂದ ಕೆಲವು ಶರಣರು ಬಂದರು.  ಎತ್ತುಗಳ ಮೇಲೆ ಕೆಲವು ಗಂಟುಮೂಟೆಗಳನ್ನು ಹೇರಿಕೊಂಡು, ಸೊನ್ನಲಿಗೆಯ ದಾರಿಯನ್ನು ಎರಡು ದಿನ ತುಳಿದು ಬಂದ ಆ ಶರಣರು ಆಯಾಸದಿಂದ ಕಳೆಗುಂದಿ, ಸಿದ್ಧರಾಮನ ಮಠದಲ್ಲಿ ಒಂದು ಮಧ್ಯಾಹ್ನ ವಿಶ್ರಾಂತಿ ಪಡೆದು, ಸಂಜೆಗೆ ಏಕಾಂತವಾಗಿ ಸಿದ್ಧರಾಮನನ್ನು ಕಂಡರು.  ಕಲ್ಯಾಣದ ಶರಣರನ್ನು ಕಂಡು ಸಿದ್ಧರಾಮನಿಗೆ ತುಂಬ ಸಂತೋಷವಾದರೂ, ಆ ಶರಣರ ಮುಖದಲ್ಲಿ ಅಂತಹ ಸಂತೋಷವಿರಲಿಲ್ಲ.  ಸಿದ್ಧರಾಮನು ಅವರನ್ನು ಕುರಿತು ಬಸವಣ್ಣ ಚನ್ನಬಸವಾದಿಗಳ ಯೋಗಕ್ಷೇಮವನ್ನು ವಿಚಾರಿಸಿದನು.  ಆದರೆ ಆಗಂತುಕರು ಆತಂಕಗೊಂಡ ದನಿಯಿಂದ ತಿಳಿಸಿದ ಸಂಗತಿ ತುಂಬ ಗಾಬರಿಗೊಳಿಸುವಂಥದಾಗಿತ್ತು : ‘ಅಯ್ಯನವರೇ, ನಿಮಗೆ ಗೊತ್ತಿರುವಂತೆ ಕಲ್ಯಾಣದಲ್ಲಿ ಮೊದಲಿನಿಂದಲೂ ಬಸವಣ್ಣನವರ ಕಾರ್ಯವನ್ನು ವಿರೋಧಿಸುವ ಸನಾತನಿಗಳ ತಂಡವೊಂದು ಇದ್ದೇ ಇದೆ.  ಅವರೆಲ್ಲ ಸೇರಿ ಬಸವಣ್ಣನವರು ಹೊಲೆ-ಹದಿನೆಂಟು ಜಾತಿಗಳವರಿಗೆಲ್ಲ ಲಿಂಗ ಕಟ್ಟಿ ಸನಾತನ ಧರ್ಮವನ್ನು ನಾಶಮಾಡುತ್ತಿದ್ದಾರೆ ಎಂದು ದೊರೆ ಬಿಜ್ಜಳನಿಗೆ ದೂರು ಸಲ್ಲಿಸುತ್ತಲೇ ಬಂದಿದ್ದಾರೆ.  ಪವಿತ್ರವೂ ಪ್ರಾಚೀನವೂ ಆದ ಧರ್ಮವನ್ನು ಬಸವಣ್ಣ ‘ವರ್ಣಸಂಕರ’ದ ಮೂಲಕ ಅಪವಿತ್ರಗೊಳಿಸುತ್ತಿದ್ದಾನೆ, ಆದ ಕಾರಣ ಈ ವರ್ಣಸಂಕರದ ಮಹಾ ಅನಾಹುತದಿಂದ ಪ್ರಭುಗಳಾದವರು ಧರ್ಮವನ್ನು ರಕ್ಷಿಸಬೇಕು, ಹಾಗೆ ರಕ್ಷಿಸುವುದು ರಾಜನಾದವನ ಕರ್ತವ್ಯ ಎಂದು ಈ ಜನ ದಿನ ಬೆಳಗೂ ರಾಜರಲ್ಲಿ ಮೊರೆಯಿಡುತ್ತಿದ್ದರು.  ಬಿಜ್ಜಳ ಚಕ್ರವರ್ತಿಗಳಾದರೋ, ಬಸವಣ್ಣನವರ ಈ ವ್ಯಕ್ತಿ ಪ್ರಭಾವದಿಂದ, ತಮ್ಮ ರಾಜಕೀಯ ವರ್ಚಸ್ಸಿಗೆ ಎಲ್ಲಿ ಕುಂದುಬಂದೀತೋ ಎಂದು ಅಂಜುವ ಸ್ವಭಾವದವರು.  ಇಂಥ ಪರಿಸ್ಥಿತಿಯಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಮಧುವರಸರ ಮಗಳಿಗೂ, ಅಂತ್ಯಜ ಕುಲದಲ್ಲಿ ಹುಟ್ಟಿದ ಹರಳಯ್ಯನವರ ಮಗನಿಗೂ ಇಷ್ಟರಲ್ಲಿಯೆ ಬಸವಣ್ಣನವರು ಮದುವೆ ಮಾಡುತ್ತಾರೆಂಬ ಸುದ್ದಿ ಕಲ್ಯಾಣವನ್ನೆಲ್ಲ ಕಾಡುಕಿಚ್ಚಿನಂತೆ ವ್ಯಾಪಿಸಿದೆ.  ಈ ಮದುವೆಯಿಂದಾಗುವ ಮತ್ತೊಂದು ಮಹಾಸ್ಫೋಟ ಸಾಮಾನ್ಯ ಸ್ವರೂಪದ್ದಾಗಿರುವುದಿಲ್ಲವೆಂದು ಊಹಿಸಿ, ಚನ್ನಬಸವಣ್ಣನವರು, ವಚನ ಭಂಡಾರದಿಂದ ಕೆಲವು ಲಿಖಿತ ವಚನಗಳ ಕಟ್ಟುಗಳನ್ನು ನಮ್ಮ ಕಡೆ ಕೊಟ್ಟು ಇವುಗಳನ್ನೆಲ್ಲಿಯಾದರೂ ಸುರಕ್ಷಿತವಾದ ಸ್ಥಳಗಳಲ್ಲಿ ಭದ್ರವಾಗಿರಿಸುವ ವ್ಯವಸ್ಥೆ ಮಾಡಿರಿ ಎಂದು ನಮ್ಮನ್ನು ನಿಯೋಜಿಸಿದ್ದಾರೆ.  ನಾವು ವರ್ತಕರ ವೇಷಹಾಕಿಕೊಂಡು, ಎತ್ತುಗಳ ಮೇಲೆ ಈ ಕಟ್ಟುಗಳನ್ನಿರಿಸಿಕೊಂಡು ಹೇಗೋ ಇಲ್ಲಿಗೆ ತಲುಪಿದ್ದೇವೆ.  ನಾವು ಕಲ್ಯಾಣವನ್ನು ಬಿಟ್ಟು ಎರಡು ದಿನಗಳಾಯಿತು.  ಈಗೇನೇನಾಗಿದೆಯೋ ಹೇಳಬಲ್ಲವರು ಯಾರು? ಈ ವಚನಗಳ ಕಟ್ಟುಗಳಲ್ಲಿ ಕೆಲವನ್ನು ನಾವು ನಿಮ್ಮ ಮಠದಲ್ಲಿ ಇರಿಸಿ ಹೋಗುತ್ತೇವೆ.  ಅದರ ಭದ್ರತೆಯ ಜವಾಬ್ದಾರಿ ತಮ್ಮದು’ ಎಂದರು.  ಸಿದ್ಧರಾಮನಿಗೆ ಪರಿಸ್ಥಿತಿ ಅರ್ಥವಾಯಿತು.  ‘ಜವಾಬ್ದಾರಿ ಏನು ಬಂತು! ಇದೊಂದು ಪೂಜ್ಯವಾದ ಕರ್ತವ್ಯವೆಂದು ನಾನು ಭಾವಿಸುತ್ತೇನೆ.   ಅಷ್ಟೇ  ಅಲ್ಲ ಇದು ಶ್ರೀ ಗುರುಚನ್ನಬಸವಣ್ಣನವರ ಅನುಗ್ರಹ ಎಂದೇ ಭಾವಿಸುತ್ತೇನೆ’ ಎಂದ.

ಕಲ್ಯಾಣದ ಶರಣರು ಬಂದು ಹೋದ ಒಂದೆರಡು ವಾರದೊಳಗೆ ಒಂದು ಮುಂಜಾನೆ ಹತ್ತಾರು ಕುದುರೆ ಸವಾರರು ಸೊನ್ನಲಿಗೆಗೆ ಬಂದರು.  ಅವರು ಬಿಜ್ಜಳನ ಕಡೆಯ ಅಧಿಕಾರಿಗಳೆಂಬುದನ್ನು ಊರ ಜನ ಗುರುತಿಸಲು ತಡವಾಗಲಿಲ್ಲ.  ಅವರ ನಡುವೆ ಅತ್ಯಂತ ಸಾತ್ವಿಕನಂತೆ ತೋರುವ ವ್ಯಕ್ತಿಯೊಬ್ಬ ಗಂಭಿರವಾಗಿ ಮಠದ ಕಡೆ ನಡೆದು, ಅಂಗಳದಲ್ಲಿ ಕುಳಿತು ಕರುವೊಂದಕ್ಕೆ ತಮ್ಮ ಕೈಯಿಂದಲೆ ಮೇವು ತಿನ್ನಿಸುತ್ತ ಕುಳಿತಿದ್ದ ಸಿದ್ಧರಾಮನಿಗೆ ನಮಸ್ಕರಿಸಿದನು.  ಸಿದ್ಧರಾಮನು ಆ ವ್ಯಕ್ತಿಯನ್ನು ನೋಡುತ್ತಲೆ ಮುಖದಲ್ಲಿ ಮಂದಹಾಸ ತುಳುಕಿತು.  ‘ಓ ಸೊಡ್ಡಳ ಬಾಚರಸರು! ನಿಮ್ಮನ್ನು ಕಂಡದ್ದು, ಸಂತೋಷ, ಬರಬೇಕು, ಬರಬೇಕು’ ಎಂದನು ಸಿದ್ಧರಾಮ.  ಕಲ್ಯಾಣದಲ್ಲಿ ರಾಜ ಬಿಜ್ಜಳನ ಕರಣಶಾಲೆಯ ಅಧಿಕಾರಿಯೂ ಬಸವಣ್ಣನವರ ಮಹಾಮನೆಯ ಹಿರಿಯ ಶರಣರಲ್ಲಿ ಒಬ್ಬರೂ ಆದ ಸೊಡ್ಡಳ ಬಾಚರಸರನ್ನು ಕಂಡು, ಕಲ್ಯಾಣದಿಂದ ಮತ್ತೆ ಯಾವ ಪ್ರಕ್ಷುಬ್ಧವಾದ ಸುದ್ದಿ ಬಂದಿದೆಯೋ ಎಂದು ಒಂದು ಕ್ಷಣ ಸಿದ್ಧರಾಮನು ಚಿಂತಿಸಿದನು.  ಸೊಡ್ಡಳನ ಮುಖದಲ್ಲಿಯೂ ಅಂತಹ ಉತ್ಸಾಹವೇನೂ ಇರಲಿಲ್ಲ.  ಸಿದ್ಧರಾಮನನ್ನು ಕುರಿತು ಬಾಚರಸನು ಹೇಳಿದ : ‘ಅಯ್ಯನವರೇ ಕಲ್ಯಾಣದ ಬಗ್ಗೆ ನಿಮಗೆ ಶರಣರಿಗೆ ಸಂಬಂಧಿಸಿದಂತೆ, ಒಳ್ಳೆಯ ಸುದ್ದಿಯನ್ನು ತಂದು ಹೇಳುವ ಭಾಗ್ಯ ನನಗಿಲ್ಲ’ ಅನ್ನುತ್ತ, ಹರಳಯ್ಯ – ಮದುವಯ್ಯನವರ ಮಕ್ಕಳಿಗೆ ನಡೆದ ಮದುವೆಯ ನಂತರ, ಚಕ್ರವರ್ತಿ ಬಿಜ್ಜಳನು ಅವರನ್ನು ಕ್ರೂರವಾಗಿ ದಂಡಿಸಿದ್ದನ್ನೂ, ಆ ಘಟನೆಯಿಂದ ಮನನೊಂದು ಬಸವಣ್ಣನವರು ಕಲ್ಯಾಣವನ್ನೆ ತೊರೆದು ಕಪ್ಪಡಿಯ ಸಂಗಮಕ್ಕೆ ಹೋದುದನ್ನೂ, ಅನಂತರ ನಡೆದ ಬಿಜ್ಜಳನ ಕೊಲೆಯಿಂದ ಇಡೀ ಕಲ್ಯಾಣನಗರ ರಣರಂಗವಾದದ್ದನ್ನೂ, ಅಲ್ಲಮ ಮೊದಲಾದವರು ಶ್ರೀಶೈಲದ ಕದಳಿಯ ಕಡೆಗೂ, ಚನ್ನಬಸವ ಮೊದಲಾದವರು ಉಳುವಿಯ ಕಡೆಗೂ ಹೋದದ್ದನ್ನೂ ತಿಳಿಸಿದನು.  ಈಗ ಕಲ್ಯಾಣ ಬಿಜ್ಜಳನ ತಮ್ಮ ಕರ್ಣದೇವನ ಹತೋಟಿಯಿಂದ ಬಹುಮಟ್ಟಿಗೆ ಶಾಂತವಾಗಿರುವುದರಿಂದ, ಕರ್ಣದೇವನು ಈಗ ಕಲ್ಯಾಣದಲ್ಲಿ ಪಟ್ಟಾಭಿಷಿಕ್ತನಾಗಲು ಯೋಚಿಸಿ, ಮಹಾಯೋಗಿಗಳಾದ ತಮ್ಮ ಕೈಯಿಂದ ಈ ಸಮಾರಂಭ ನಡೆಯಬೇಕೆಂದು ಆಶಿಸಿ, ನಿಮ್ಮನ್ನು ಕರೆದುಕೊಂಡು ಬರುವಂತೆ ಅರಮನೆಯ ಪ್ರತಿನಿಧಿಯಾಗಿ ನನ್ನನ್ನು ಕಳುಹಿಸಿದ್ದಾನೆ – ಎಂದು ಬಾಚರಸನು ಬಿನ್ನಹ ಮಾಡಿದನು.

ಸೊಡ್ಡಳನಿಂದ ಕಲ್ಯಾಣದ ನಾಶದ ಸುದ್ದಿಯನ್ನು ಕೇಳಿ ಸಿದ್ಧರಾಮನು ಸ್ವಲ್ಪ ಹೊತ್ತು ದಿಗ್‌ಭ್ರಾಂತನೆಂಬಂತೆ ಮೌನವಾಗಿ ಕುಳಿತನು.  ಎಂಥ ಉಜ್ವಲವಾದ ಕಾಲ ಇಷ್ಟು ಬೇಗ ಮುಕ್ತಾಯಕ್ಕೆ ಬಂದಿತೆ – ಎಂದು ಬೆರಗುಗೊಂಡನು.  ಯಾವ ಕಲ್ಯಾಣ, ಶರಣ ಜನ ಕಿರಣ ಕೇಂದ್ರವಾಗಿತ್ತೋ, ಯಾವ ಕಲ್ಯಾಣ ತನ್ನ ಬದುಕಿನಲ್ಲೂ ಒಂದು ಮಹತ್ತಾದ ಪರಿವರ್ತನೆಯನ್ನು ತಂದಿತ್ತೋ ಅದು ಈ ಸ್ಥಿತಿಗೆ ಬರಬೇಕೆಂಬುದೂ ಸಂಗಮನಾಥನ ಸಂಕಲ್ಪವಾಗಿತ್ತೆ, ಎಂದು ಮನದೊಳಗೆ ಕೊರಗಿದನು.  ಆತ ಹೇಳಿದ:  ‘ಬಾಚರಸರೆ, ನಿಮ್ಮ ಅರಸರಿಗೆ ದಯಮಾಡಿ ತಿಳಿಸಿರಿ,  ಮಲ್ಲಿಕಾರ್ಜುನನ ಸೇವೆಯಲ್ಲಿ ತೊಡಗಿಕೊಂಡಿರುವ ನನಗೂ ನಿಮ್ಮ ಕಲ್ಯಾಣದ ರಾಜಕಾರಣಕ್ಕೂ ಏನೇನೂ ಸಂಬಂಧವಿಲ್ಲ, ನಾನೆಂದೂ ಪುರೋಹಿತನ ಕೆಲಸ ಮಾಡಿದವನಲ್ಲ; ಈಗಲೂ ಮಾಡಲು ಇಷ್ಟಪಡುವವನಲ್ಲ.  ನಿಮ್ಮ ರಾಜರಿಗೆ ಹೇಳಿ, ನಾನೆಂದೂ ಸೊನ್ನಲಿಗೆಯನ್ನು ಬಿಟ್ಟು ಕದಲುವವನಲ್ಲ -ಎಂದು. ಇದಕ್ಕಿಂತ ಹೆಚ್ಚು ಹೇಳಲಾರೆ’.

ಸೊಡ್ಡಳ ಬಾಚರಸನಿಗೆ ಅರ್ಥವಾಯಿತು.  ಆತ ನಿಧಾನವಾಗಿ ಮೇಲೆದ್ದು ಸಿದ್ಧರಾಮನಿಗೆ ನಮಸ್ಕರಿಸಿ ತನ್ನ ಜತೆಯ ಸವಾರರೊಂದಿಗೆ, ಸದ್ದಿಲ್ಲದೆ ಹೊರಟೇ ಹೋದನು.

ಸಿದ್ಧರಾಮನು ಈಗ ಮೊದಲಿಗಿಂತ ಹೆಚ್ಚು ಮೌನಿಯೂ ಅಂತರ್ಮುಖಿಯೂ ಆಗಿ ತೋರತೊಡಗಿದ.  ಅವನ ಸುತ್ತ ಅವನೇ ಕಟ್ಟಿ ಬೆಳೆಯಿಸಿದ ವ್ಯವಸ್ಥೆ ಎಂದಿನಂತೆ ತಿರುಗುತ್ತಿತ್ತು.  ಸಿದ್ಧರಾಮನನ್ನು ಕಾಣಲು, ಅವನ ಆಶೀರ್ವಾದವನ್ನು ಪಡೆಯಲು ದಿನವೂ ಬರುತ್ತಿದ್ದ ಜನಜಂಗುಳಿ ಕಡಮೆ ಪ್ರಮಾಣದ್ದೇನೂ ಆಗಿರಲಿಲ್ಲ.  ಇದನ್ನೆಲ್ಲ ನೋಡುತ್ತ ನಾನು ಇನ್ನೂ ಎಷ್ಟುದಿನ ಈ ವ್ಯವಹಾರಗಳಲ್ಲಿ ತೊಡಗುವುದು? ಕಲ್ಯಾಣದ ಮಹಾಶರಣರೆಲ್ಲರೂ ತಾವು ಮರ್ತ್ಯಕ್ಕೆ ಬಂದ ಕಾರ್ಯ ಮುಗಿಯಿತೋ ಎಂಬಂತೆ, ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ತಮ್ಮ ನಿಜದ ನೆಲೆಯನ್ನು ಅರಸಿಕೊಂಡು ಹೊರಟೇಹೋದರು.  ಹೀಗಿರುವಾಗ ನಾನಿನ್ನೂ ಈ ಜಗದ ಜಂಜಡಗಳಲ್ಲಿ ಮುಳುಗುವುದರಲ್ಲಿ ಅರ್ಥವಿಲ್ಲ ಅನ್ನಿಸಿತು ಸಿದ್ಧರಾಮನಿಗೆ.  ಈ ನಡುವೆ ನಿರ್ಮಿತವಾಗುತ್ತಿದ್ದ ಕೆರೆಯ ನಡುವಣ ಗೊಪೆಯ ಕಾರ್ಯವೂ ಮುಕ್ತಾಯದ ಹಂತಕ್ಕೆ ಬಂದಿತ್ತು.  ಸೊನ್ನಲಿಗೆಯ ಜನಕ್ಕೆ ಹಾಗೂ ಸಿದ್ಧರಾಮನ ಶಿಷ್ಯ ಸಮೂಹಕ್ಕೆ ಈ ಶ್ರೀಗುರು ಇನ್ನು ಹೆಚ್ಚು ಕಾಲ ತಮ್ಮ ಜತೆಗೆ ಇರಲಾರರು ಎಂಬ ಸತ್ಯ ಮನವರಿಕೆಯಾಗತೊಡಗಿತ್ತು.

ಒಂದು ರಾತ್ರಿ ಸಿದ್ಧರಾಮನು ತನ್ನ ಹತ್ತಿರದವರಾದ ಅಣ್ಣ ಬೊಮ್ಮಯ್ಯನನ್ನೂ ಹಾವಿನಹಾಳ ಕಲ್ಲಯ್ಯನನ್ನೂ ಮತ್ತು ಕೇದಾರ ಗುರುವನ್ನೂ ಕರೆದು ಹೇಳಿದನು : ‘ಕಲ್ಲಯ್ಯ, ನಾನು ಮಲ್ಲಯ್ಯನ ನಿರ್ದೇಶನದಂತೆ, ಈ ಸೊನ್ನಲಿಗೆಯ ಕರ್ಮಭೂಮಿಯಲ್ಲಿ ಇಷ್ಟು ಕಾಲ ಸೇವೆ ಸಲ್ಲಿಸಿದ್ದಾಯಿತು.  ಇನ್ನು ಮುಂದೆ ಕೇದಾರಗುರು ಈ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಈವರೆಗೆ ಇಲ್ಲಿ ನಡೆಯುತ್ತಿದ್ದ ಕಾಯಕಯೋಗವನ್ನು ಮುಂದುವರಿಸಬೇಕೆಂಬುದು ನನ್ನ  ಅಪೇಕ್ಷೆಯಾಗಿದೆ.  ಜೀವರಲ್ಲಿ ಶಿವನನ್ನು ಕಾಣುತ್ತ ನಮ್ಮ ನಮ್ಮ ಕೈಯಲಾಗುವಷ್ಟು ಕೆಲಸ ಮಾಡುತ್ತ ಜನದ ಭಕ್ತಿ, ಶ್ರದ್ಧೆ ಹಾಗೂ ವೈಚಾರಿಕತೆಗಳನ್ನು ಎಚ್ಚರಿಸುವ ಈ ಕಾರ್ಯದಲ್ಲಿ ನೀವೂ ಕೇದಾರಗುರುಗಳಿಗೆ ನೆರವಾಗಿ ನಿಲ್ಲಬೇಕು.  ನನಗೆ ಕರೆ ಬಂದಿದೆ.  ಇಷ್ಟರಲ್ಲಿಯೇ ನಾನು ಗೊಪೆಯನ್ನು ಪ್ರವೇಶಿಸಿ ನಿತ್ಯ ಸಮಾಧಿಯಲ್ಲಿ ಲೀನವಾಗುತ್ತೇನೆ.’

ಸಿದ್ಧರಾಮನ ಮಾತನ್ನಾಲಿಸಿ  ಮೂವರೂ ಕಂಬನಿದುಂಬಿ ಮೌನವಾಗಿ ಕೈಮುಗಿದು ನಿಂತರು.  ಕೊಠಡಿಯ ಮೂಲೆಯಲ್ಲಿ ತೂಗುಹಾಕಿದ್ದ ನಂದಾದೀಪವು ನಿಶ್ಚಲವಾಗಿ ಬೆಳಗುತ್ತಿತ್ತು.  ಮಲ್ಲಿನಾಥನ ದೇವಾಲಯದ ಗಂಟೆಗಳ ದನಿ ಅಲೆಯಲೆಯಾಗಿ ತೇಲಿಬರುತ್ತಿತ್ತು.

೧೯೯೭