ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯರಾಗಿ, ಅನೇಕ ಹಿಂದೂಸ್ಥಾನಿ ಗಾಯಕರಿಗೆ ಸಮರ್ಥ ಹಾರ್ಮೋನಿಯಂ ಸಾಥಿದಾರರಾಗಿ, ಶ್ರೇಷ್ಠ ಸಂಗೀತ ಶಿಕ್ಷಕರೆನಿಸಿ ಹೆಸರು ಗಳಿಸಿರುವ ಹಾವೇರಿಯ ಶ್ರೀ ಶಿವಯ್ಯ ಆರಾಧ್ಯಮಠರು ಕನ್ನಡ ನಾಡಿನ ಅಪರೂಪದ ಕಲಾವಿದರು. ದಿನಾಂಕ ೫-೧೦-೧೯೧೫ ರಂದು ಹಾವೇರಿ ಜಿಲ್ಲೆಯ ದೇವಿ ಹೊಸೂರು ಗ್ರಾಮದಲ್ಲಿ ಜನಿಸಿದ ಶಿವಯ್ಯ ಆರಾಧ್ಯಮಠ ಅವರು ಸಂಗೀತದ ಮನೆತನದಿಂದಲೇ ಬಂದವರು. ಕನ್ನಡ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮುಂದೆ ಸಂಗೀತಕ್ಕೆ ಶರಣುಹೋದರು. ಗದಗಿನ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಯಾಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಗುರುಕುಲ ಪದ್ಧತಿಯಲ್ಲಿ ಹಾರ್ಮೋನಿಯಂ, ಗಾಯನ ಹಾಗೂ ತಬಲಾ ವಾದನದಲ್ಲಿ ಶಿಕ್ಷಣ ಪಡೆದು ತಬಲಾ ವಿಶಾರದ ಎಂದು ಹೆಸರು ಮಾಡಿದರೂ ಇವರ ಖ್ಯಾತಿ ವಿಶಾಲವಾಗಿ ಪಸರಿಸಿದ್ದು ಹಾರ್ಮೋನಿಯಂ ವಾದಕರಾಗಿ.

ಸಂಗೀತ ವಿದ್ಯೆ ಪಡೆದನಂತರ ಅವರು ಕೆಲವು ವರ್ಷ ಗೋಕಾಕ ನಾಟಕ ಕಂಪನಿಯಲ್ಲಿ ೧೫ ವರ್ಷ ಕೆಲಸ ಮಾಡಿದರು. ಹಾವೇರಿಯ ನಗರಸಭೆ ಪ್ರೌಢಶಾಲೆಯಲ್ಲಿ ಸಂಗೀತ ಅಧ್ಯಾಪಕರಾಗಿ ನೇಮಕಗೊಂಡು ಇಪ್ಪತ್ನಾಲ್ಕು ವರ್ಷಗಳ ಕಾಲ ಸತತ ಸೇವೆ ಮಾಡಿ ನಿವೃತ್ತಿ ಪಡೆದಿದ್ದು ನಂತರ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಸಂಗೀತ ಪರೀಕ್ಷೆಗಳ ಪರೀಕ್ಷಕರಾಗಿ, ಅದರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅನೇಕ ಶಿಷ್ಯ ಸಂಪತ್ತನ್ನು ಹೊಂದಿದ್ದಾರೆ.

ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಗುರು ಬಸವಾರ್ಯ ಕೆರೂರ, ಮೃತ್ಯುಂಜಯ ಬುವಾ ಪುರಾಣಿಕ ಮಠ, ಪುಟ್ಟರಾಜ ಗವಾಯಿ, ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಮುಂತಾದ ಅನೇಕ ಸಂಗೀತ ವಿದ್ವಾಂಸರ ಗಾಯನಕ್ಕೆ ಹಾರ್ಮೋನಿಯಂ ಸಾಥಿ ಮಾಡಿರುವುದಲ್ಲದೆ ಇಂದಿನ ಯುವ ಪೀಳಿಗೆಯ ಕಲಾಕಾರರ ಕಾರ್ಯಕ್ರಮಕ್ಕೂ ಯಾವ ತಾರತಮ್ಯವೂ ಇಲ್ಲದೆ ಪಕ್ಕವಾದ್ಯ ಸಹಕಾರ ತಬಲವೇ ಆಗಲಿ, ಹಾರ್ಮೋನಿಯಂ ವಾದನವೇ ಆಗಲಿ ಉತ್ತಮ ಮಾರ್ಗದರ್ಶನ ನೀಡಿ ಉತ್ತೇಜಿಸುವ ನಿಸ್ಪೃಹ ವ್ಯಕ್ತಿ ಆರಾಧ್ಯಮಠ ಅವರು. ಇವರ ಹಾರ್ಮೋನಿಯಂ ಸೋಲೋವಾದನ ಅತ್ಯಂತ ಹೆಸರುವಾಸಿ.

ಇವರ ಪಾಂಡಿತ್ಯವನ್ನು ಮನಗಂಡ ಅನೇಕ ವೀರಶೈವ ಮಠಾಧಿಪತಿಗಳು ಇವರನ್ನು ಗೌರವಿಸಿ ಸನ್ಮಾನಿಸಿ ಶಾಲು ಖಿಲ್ಲತ್ತುಗಳನ್ನು ನೀಡಿದ್ದಾರೆ. ತಾಲಚತುರ, ಆಚಾರ್ಯ ಸೇವಾ ಭೂಷಣ ಪ್ರಶಸ್ತಿ ಬಂದಿವೆ.

ಫಕೀರೇಶ ಅಗಡಿ, ನೀಲಕಂಠಪ್ಪ ಬಡಿಗೇರ, ಗೀತಾ ಗೋಡಖಿಂಡಿ, ಮೀನಾಕ್ಷಿ ಅಗ್ನಿ ಹೋತ್ರಿ ಇವರ ಶಿಷ್ಯರ ಪೈಕಿ ಪ್ರಮುಖರು.

ಹೀಗೆ ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉತ್ತಮ ಹಾರ್ಮೋನಿಯಂ ವಾದಕರಾಗಿ, ಗಾಯನ, ತಬಾಲ ವಾದನದಲ್ಲೂ ಸಾಕಷ್ಟು ಪಾಂಡಿತ್ಯವಿರುವ ಶಿವಯ್ಯ ಆರಾಧ್ಯಮಠ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಸಶ್ತಿ ನೀಡಿ ಗೌರವಿಸಿದೆ.