(ಎಲ್ಲರೂ ಬಾಗಿಲ ಕಡೆಗೆ ಆಶ್ಚರ್ಯದಿಂದ ನೋಡುತ್ತಿರುವಾಗ ಬಸವಣ್ಣ ಬಂದು ಬಾಗಿಲಲ್ಲಿ ನಿಂತುಕೊಳ್ಳುವನು. ಅನಿರೀಕ್ಷಿತವಾಗಿ ಬಿಜ್ಜಳನನ್ನು ನೋಡಿದ ಬಸವಣ್ಣ ಚಕಿತನಾಗಿಮಹಾರಾಜರು!” ಎಂದು ಉದ್ಗಾರ ತೆಗೆದು ಕೈಮುಗಿಯುವನು. ಆದರೆ ಮಧ್ಯೆ ಸಾವಂತ್ರಿಯ ಸಡಗರ ಮುಗಿಲು ಮುಟ್ಟಿದೆ.)

 

ಬಿಜ್ಜಳ : (ಎದ್ದುನಿಂತು) ಬಾ ಬಸವಾ ಬಾ (ಸ್ವಾಗತಿಸಲೆಂಬಂತೆ ಕೈ ಚಾಚುವನು.)

ಸಾವಂತ್ರಿ : (ಭಾವುಕಳಾಗಿ ಕಣ್ಣೀರುಗರೆಯುತ್ತ) ನನ್ನಪ್ಪಾ ನನ್ನಯ್ಯಾ ನನ್ನ ತಂದೇ,
ನನ್ನ ಮನೆಗೆ ಬಂದಿರಾ ಬಸವ ದೇವರೇ!
ಸೂಳೆಯ ಮನೆತನಕ ಪಾದ ಬೆಳೆಸಿದಿರಾ ನನ್ನಪ್ಪಾ!
ನನ್ನ ಬದುಕನ್ನು ಪಾವನಗೊಳಿಸಿದಿರಿ ತಂದೇ!
(ಎನ್ನುತ್ತ ಹೋಗಿ ಬಸವಣ್ಣನ ಪಾದಕ್ಕೆ ನಮಸ್ಕರಿಸಿ ಸೀರೆ ಸೆರಗಿನಿಂದ ಅವನ ಪಾದ ಒರೆಸುವಳು. ಬಸವಣ್ಣ ಅವಳನ್ನೆಬ್ಬಿಸುತ್ತ)

ಬಸವಣ್ಣ : ಏಳು ತಾಯಿ!

ಬಿಜ್ಜಳ : ಏನಿದು ಬಸವಣ್ಣಾ! ದೇಶದ ಮಹಾರಾಜ ಮತ್ತು ಮಂತ್ರಿವರ್ಯರು
ಕಲ್ಯಾಣದ ಸೂಳೆಯ ಮನೆಯಲ್ಲಿ ಭೇಟಿಯಾಗುವುದೆಂದರೆ
ಇದು ಯೋಗಾಯೋಗವೋ! ಕರ್ಮಧರ್ಮ ಸಂಯೋಗವೊ!

ಬಸವಣ್ಣ : ಹೌದು ಪ್ರಭು, ಸಾವಂತ್ರಿಯಂಥ ಪುಣ್ಯವಂತೆಯ ಮನೆಯಲ್ಲಿ
ಮಹಾರಾಜರು ಮತ್ತು ಮಾಜಿ ಮಂತ್ರಿ ಸೇರುವುದು
ಯೋಗಾಯೋಗವೇ! ಇದರಂಥ ಪವಿತ್ರ ಗಳಿಗೆ ಪುಣ್ಯವಂತರಿಗಲ್ಲದೆ
ಬೇರೆಯವರಿಗೆ ಸಿಕ್ಕುವುದುಂಟೆ?
ತಮ್ಮ ಸರಸ ಕ್ಷಣಗಳಿಗೆ ಭಂಗ ತಂದೆನೇ ಮಹಾಪ್ರಭು?

ಬಿಜ್ಜಳ : ಎಲ್ಲಿಯ ಸರಸ ಮಾರಾಯಾ.
ರಾಜಕಾರಣದಿಂದ ಬೇಸರವಾದಾಗ ಕೊಂಚ ಮನರಂಜನೆ
ಇರಲಿ ಅಂತ ಕಾಮಾಕ್ಷಿ ಇದ್ದಳು. ನಿನ್ನ ಸಂಗಯ್ಯ
ಬಂದು ಅವಳನ್ನೂ ಅಪಹರಿಸಿ ಬಿಟ್ಟ!
ಈ ಬಡಪಾಯಿ ಬಿಜ್ಜಳನಿಗೆ ಇನ್ನೇನುಳಿಯಿತು ಈ ರಾಜ್ಯದಲ್ಲಿ!
ನೀನೇನು ಇಲ್ಲಿ? ನಿನಗಿನ್ನೂ ಬೇಕಾದಷ್ಟು ವಯಸ್ಸಿದೆ.
ಹುಳಿಬ್ಯಾಳಿ ಸಾರು ತಿಂದು ತಿಂದು ನಾಲಗೆಯ ರುಚಿಕೆಟ್ಟು
ಬೇರೆ ರುಚಿಯ ಆಸ್ವಾದಕ್ಕಾಗಿ ಇಲ್ಲಿಗೆ ಬಂದೆಯೇನೋ
ಅಂದುಕೊಂಡೆ.

ಬಸವಣ್ಣ : ಹಾಗೇನಿಲ್ಲ ಪ್ರಭು, ಇದ್ದಕ್ಕಿದ್ದ ಹಾಗೆ ಮುಗ್ಧ ಸಂಗಯ್ಯ
ಮನೆಯಲ್ಲಿ ಹೇಳದೆ ಕೇಳದೇ ಮಾಯವಾದ.
ಚಿಂತೆಯಾಗಿ ಹುಡುಕುತ್ತಿದ್ದಾಗ ಇಲ್ಲಿದ್ದಾನೆ ಅಂತ
ಯಾರೋ ಹೇಳಿದರು. ಕರೆದುಕೊಂಡು ಹೋಗೋಣ
ಅಂತ ಬಂದೆ.

ಬಿಜ್ಜಳ : ಹಾಗೋ? ಆಹಾ ನಿನ್ನ ಸಂಗಯ್ಯನೋ
ಅವನ ಲಿಂಗಪೂಜೆಯೋ – ಹೋಗಿ ನೋಡು,
ಸಾವಂತ್ರಿ ಬಸವನಿಗೆ ಸಂಗಯ್ಯನನ್ನ ತೋರಿಸು.

ಸಾವಂತ್ರಿ : ಸಂಗಯ್ಯನವರು ಇಲ್ಲಿದ್ದಾರೆ ನೋಡ್ರಿ ಅಣ್ಣಾವರ….
(ಬಸವಣ್ಣ ಹೋಗಿ ನೋಡಿ ಭಾವುಕನಾಗಿ ಕೈಮುಗಿಯುವನು.)

ಬಸವಣ್ಣ : ಸಾವಂತ್ರೀ ತಾಯೀ, ನೀನೇ ಧನ್ಯಳು, ಧನ್ಯಳಾದೆ ತಾಯಿ!
ಸಂಗಯ್ಯ ಲಿಂಗಪೂಜೆಯಿಂದ ಈ ಪರಿ ತೃಪ್ತನಾದುದನ್ನು
ಅವನ ಮುಖದಲ್ಲಿ ನಾನು ಈವರೆಗೆ ಕಂಡಿರಲಿಲ್ಲ!

ಸಾವಂತ್ರಿ : ನಿಮ್ಮ  ದಯೆ ನನ್ನಪ್ಪ. ಸ್ವಲ್ಪ ಹಾಲು ಹಣ್ಣು ಕೊಡಲೆ ತಂದೆ?

ಬಸವಣ್ಣ : ಬೇಡ ತಾಯಿ. ಸಂಗಯ್ಯನನ್ನು ಕಂಡು ಊಟ ಮಾಡಿದಷ್ಟು
ಸಂತೋಷವಾಯಿತು.

ಸಾವಂತ್ರಿ : ನೀವು ಮೂರು ದಿನಗಳಿಂದ ಏನೂ ತೆಗೆದುಕೊಂಡಿಲ್ಲವೆಂದು ಕೇಳಿದೆ.
ಸ್ವಲ್ಪ ಹಾಲನ್ನಾದರೂ ತಕ್ಕೊಂಡರೆ ನನಗೆ
ಆನಂದವಾಗುತ್ತದೆ.

ಬಸವಣ್ಣ : ಒತ್ತಾಯ ಮಾಡಬೇಡ ತಾಯಿ.
ಇವತ್ತು ಶಿವರಾತ್ರಿ. ನನಗೆ ತೃಪ್ತಿಯಾಗಿದೆ, ತಾಯೀ ತೃಪ್ತಿಯಾಗಿದೆ!

ಬಿಜ್ಜಳ : ಓಹೊ ಈ ಸೂಳೆ ನಿನ್ನ ತಾಯಿಯೊ?

ಬಸವಣ್ಣ : ಸಂಗಯ್ಯನಿಗೆ ತಾಯಿಯಾದವಳು ನನಗೂ
ತಾಯಿಯಾಗೋದು ನನ್ನ ಭಾಗ್ಯವಲ್ಲವೆ ಪ್ರಭು?
ನನ್ನನ್ನು ತನ್ನ ಮಗ ಎಂದು ತಾಯಿ ಸಾವಂತ್ರಿ
ಒಪ್ಪಿಕೊಂಡರೆ ನಾನು ಧನ್ಯನಾದೆ.

ಸಾವಂತ್ರಿ : ಈ ಸೂಳೆಯ ಬದುಕನ್ನ ಪಾವನಗೊಳಿಸಿದಿರಿ ನನ್ನಯ್ಯಾ?
ಸಮಗಯ್ಯ ನನ್ನ ಮನೆಗೆ ಬಂದರು! ಮಹಾತ್ಮಾ
ಬಸವಣ್ಣನವರು ನನ್ನ ಮನೆಗೆ ಬಂದರು! ಇಂಥಾ
ಅನಿರೀಕ್ಷಿತ ಭಾಗ್ಯದಿಂದ ಈ ಸೂಳೆಯ ಜನ್ಮ
ಸಾರ್ಥಕವಾಯಿತು ನನ್ನಯ್ಯಾ!

ಬಿಜ್ಜಳ : ಈ ಜನಕ್ಕೆ ಅದೇನು ಮಾಟ ಮಾಡಿದ್ದೀ ಬಸವ?
ಕಲ್ಯಾಣದ ಒಬ್ಬರಲ್ಲೂ ಸ್ವಾಮಿ ಭಕ್ತಿ ಇಲ್ಲ.
ಇದ್ದದ್ದೆಲ್ಲಾ ಬಸವ ಭಕ್ತೀನೇ! ಬಸವ ಭಕ್ತಿ,
ಸ್ವಾಮಿ ಭಕ್ತಿ, ಎರಡರಲ್ಲಿ ಯಾವುದು ಹೆಚ್ಚು ಅಂತ
ಒರೆಗೆ ಹಚ್ಚಲೇಬೇಕಲ್ಲ!

ಬಸವ : ತಮ್ಮ ಸರಸದ ಸಮಯದಲ್ಲಿ ಒಂದೆರಡು ನಿಮಿಷ
ಕದ್ದರೆ ಎಷ್ಟೊಂದು ಅಸೂಯೆ ಪಡುವಿರಲ್ಲ ಪ್ರಭು!
ನಾನೆಂದಾದರೂ ತಮ್ಮ ಎದುರಾಳಿಯಾಗಬಲ್ಲೆನೆ?

ಬಿಜ್ಜಳ : (ಸಂಗಯ್ಯನನ್ನು ತೋರಿಸಿ) ನನ್ನ ಎದುರಾಳಿಯನ್ನ
ಒಳಗೇ ಕೂರಿಸಿದ್ದೀಯಲ್ಲ! ಬಿಡು ಬಿಡು ಅದು ಇನ್ನೊಂದು ಕತೆ.
ಮಹಾರಾಜ ಮತ್ತವನ ಅರಮನೆ ಕೂಡ
ಇವರ ದೃಷ್ಟಿಯಲ್ಲಿ ಯಃಕಶ್ಚಿತ ಅನಿಸುವ ಪವಾಡ ಮಾಡಿದ್ದೀಯಲ್ಲ!

ಬಸವಣ್ಣ : ನಾನ್ಯಾವ ಸೀಮೆಯ ಪವಾಡ ಪುರುಷ ಪ್ರಭು!

ಬಿಜ್ಜಳ : ಈ ಪಾಮರ ಬಿಜ್ಜಳನಿಗಾಗಿ
ಕೈಲಾಸ ವೈಕುಂಠಗಳು ವೇಶ್ಯೆಯ ಮನೆಯಲ್ಲಿ ಅವತರಿಸುವಂತೆ
ಮಾಡಿದೀಯಲ್ಲ, ಇದು ಪವಾಡದ ಸಂಗತಿ ಅಲ್ಲವೆ?
ನೀನೇ ನೋಡು: ಒಂದು ಕಡೆ ಲಿಂಗಪೂಜೆಯಲ್ಲಿ
ನಿರತರಾದ ಮುಗ್ಧ ಸಂಗಯ್ಯ ದೇವರು!
ಇನ್ನೊಂದೆಡೆಗೆ ಮಹಾತ್ಮಾ ಬಸವಣ್ಣನವರು!
ಮಧ್ಯೆ ಬಡಪಾಯಿ ಮಹಾರಾಜ ಬಿಜ್ಜಳ!
ಇದಕ್ಕಿಂತ ಇನ್ನೊಂದು ಪವಾಡ ಇದೆಯೆ?

ಬಸವಣ್ಣ : ಇಂಥ ಪವಾಡ ಮಾಡಿ ಮಾಡಿ,
ನಾನೂ ನಗೆಮಾರಿ ತಂದೆಯಾಗಿದ್ದೇನೆ; ಏನು ಮಾಡಲಿ ಪ್ರಭು?
ಎಲ್ಲಿ, ಯಾವಾಗ, ಯಾವ ಪವಾಡ ಮಾಡ್ತೀನೋ
ತಿಳೀಧಾಂಗ ಆಗಿದೆ. ದಿನಾ ನನ್ನ ಹೆಸರಿಗೆ
ಪವಾಡಗಳ ಕಟ್ಟುತ್ತಾರೆ.

ಸಾವಂತ್ರಿ : ತಮ್ಮ ಹೆಸರಿನಲ್ಲೂ ಪವಾಡಗಳು ಬೇಕಾದಷ್ಟಿವೆ ಪ್ರಭು,
ಹೇಳಲೇನು?

ಬಿಜ್ಜಳ : ನೋಡು ನೋಡು ನೀನು ನನಗೆ ಹೇಳೇ ಇಲ್ಲ!
ಒಂದು ಹೇಳು ಕೇಳೋಣ.

ಸಾವಂತ್ರಿ : ಒಂದಾನೊಂದು ಕಾಲದಲ್ಲಿ ಬಿಜ್ಜಳ ಮಹಾರಾಜರ ಆಸ್ಥಾನದಲ್ಲಿ
ಕ್ರಮಿತ ಅಂತ ಒಬ್ಬ ಪುರೋಹಿತ ಇದ್ದ.
ಅವನ ಪೂಜಾಶಾಸ್ತ್ರ ಮಾಡುವ ಪ್ರತಿಭೆಗೆ
ಮರುಳಾದ ಮಹಾರಾಜರು
“ಏನು ಬೇಕು ಕೇಳಿಕೊ ಕ್ರಮಿತ” ಅಂದರಂತೆ.
ಅವನು ದಿನಕ್ಕೆರಡು ನಿಮಿಷ ತಮ್ಮ ಕಿವಿ ಕೊಡಿ ಸ್ವಾಮಿ”
ಅಂದನಂತೆ. ಮಹಾರಾಜರು “ತಥಾಸ್ತು” ಅಂದರು.
ಅಂದಿನಿಂದ ಅವನು ದಿನಾಲು ಬಂದು
ಎರಡು ನಿಮಿಷ ಮಹಾರಾಜರ ಕಿವಿಯಲ್ಲಿ
ರಾಜ್ಯದ ಸ್ಥಿತಿಗತಿಗಳನ್ನು ಹೇಳುತ್ತಿದ್ದ.
ಮೊದಮೊದಲು ನಿಜವನ್ನೇ ಹೇಳಿ, ತಮ್ಮನ್ನು ವಿಶ್ವಾಸಕ್ಕೆ
ತಗೊಂಡ. ಆಮೇಲೆ ಇದ್ದದ್ದು ಇಲ್ಲದ್ದು ಬೆರೆಸಿ ಹೇಳಿದ.
ಆಮೇಲಾಮೇಲೆ ಬರೀ ಇಲ್ಲದ್ದನ್ನೇ ಹೇಳಿ ಹೇಳಿ,
ರಾಜರು ನಂಬಿ ನಂಬಿ ಒಂದು ವರ್ಷದಲ್ಲಿ
ಕ್ರಮಿತ ಮಂತ್ರಿಯಾದ. ಮಂತ್ರಿ ಪೇದೆಯಾದನಂತೆ ಪ್ರಭು!

ಬಿಜ್ಜಳ : ಕೇಳಿದಿಯಾ ಬಸವ ಈ ತುಂಟ ಹೆಣ್ಣಿನ ಮಾತನ್ನ?

ಸಾವಂತ್ರಿ : ಇದು ನನ್ನದಲ್ಲ ಪ್ರಭು, ಜಾನಪದ ಪ್ರತಿಭೆ!
ಇಂಥ ಇನ್ನೂ ಅನೇಕ ಪವಾಡಗಳು ತಮ್ಮ ಹೆಸರಿನಲ್ಲಿವೆ.
ಇನ್ನೂ ಒಂದೆರಡು ಹೇಳಲೇ ಪ್ರಭು?

ಬಿಜ್ಜಳ : ಬೇಡ ಮಾರಾಯ್ತಿ. ಅಪರೂಪಕ್ಕೆ ನನ್ನ ಮೇಲೆ
ಕೋಪಗೊಂಡಿದ್ದ ಬಸವಣ್ಣ ನಿನ್ನ ಮನೆಯಲ್ಲಿ ಸಿಕ್ಕಿದಾನೆ.
ಸ್ವಲ್ಪ ಅಂತರಂಗ ಮಾತಾಡುತ್ತೇವೆ.
ಬೇಕಾದರೆ ನೀನೂ ಇರು, ಆದರಿಂದ ನಮಗೇನೂ ತೊಂದರೆ
ಇಲ್ಲ. ಅಲ್ಲವೆ ಬಸವಣ್ಣ?
ಬಸವಣ್ಣ : ಆಯ್ತು ಪ್ರಭು. ಹಾಗೆಯೇ ತಮ್ಮಲ್ಲಿ ಕೇಳಬೇಕೆಂದಿದ್ದ
ಒಂದು ಮಾತು ಗಂಟಲಲ್ಲೇ ಉಳಿದಿದೆ.
ಕೇಳಲೆ ಪ್ರಭು?

ಬಿಜ್ಜಳ : ಸಂಕೋಚ ಬೇಡ. ಕೇಳು ಬಸವಣ್ಣಾ.

ಬಸವಣ್ಣ : ಹರಳಯ್ಯನ ಮಗ ಶೀಲವಂತನ ಬಗ್ಗೆ ತಮ್ಮಲ್ಲಿ
ಇನ್ನೂ ಕೋಪವಿದೆಯೇ ಪ್ರಭು?

ಬಿಜ್ಜಳ : ಖಂಡಿತ ಇಲ್ಲ.

ಬಸವಣ್ಣ : ಅವನ ಜೀವನಕ್ಕೆ ಅಪಾಯವಿದೆಯೆಂದು ಕೇಳಿ
ಚಿಂತೆಯಾಗಿದೆ. ದಯಮಾಡಿ ರಕ್ಷಣೆ ಕೊಡುವಿರಾ?

ಬಿಜ್ಜಳ : ಇಗೊ ಮಾತು ಕೊಟ್ಟಿದ್ದೇನೆ. ಇನ್ನು ಮೇಲೆ
ನಿಶ್ಚಿಂತನಾಗಿರು, ಬಸವಣ್ಣ. ಅವನ ಚಿಂತೆ ನನ್ನದು.
ಯಾರಲ್ಲಿ?

ದ್ವಾರಪಾಲಕ : (ಪ್ರವೇಶಿಸಿ) ಮಹಾಪ್ರಭು.

ಬಿಜ್ಜಳ : ಕೊತವಾಲ ಅಥವಾ ಅಂಗರಕ್ಷಕ ಅಥವಾ ಯಾರಿದ್ದರೆ
ಅವರನ್ನು ಕರೆ.
(ದ್ವಾರಪಾಲಕ ಹೋಗಿ ರಾಜಭಟನನ್ನು ಕರೆದು ತರುವನು, ರಾಜಭಟ ನಮಿಸಿ ನಿಲ್ಲುವನು.)

ಬಿಜ್ಜಳ : ನೋಡಪ್ಪ, ಈ ಕ್ಷಣವೆ ಹೋಗಿ ಕೊತವಾಲನಿಗೆ ಹೇಳು:
ಶೀಲವಂತ ಎಲ್ಲಿದ್ದರಲ್ಲಿ ಅವನಿಗೆ ಬಿಗಿ ಭದ್ರತೆ
ಕೊಡಬೇಕು. ತಿಳಿಯಿತೆ? ಹೋಗು.

ರಾಜಭಟ : ಅಪ್ಪಣೆ ಪ್ರಭು. (ಹೋಗುವನು.)

ಬಿಜ್ಜಳ : ಈಗ ಅಂತರಂಗಕ್ಕೆ ಬರೋಣ.
ನೀನು ಮಂತ್ರಿ ಪದವಿಗೆ ರಾಜೀನಾಮೆ ಕಳಿಸಿದ್ದು
ನನಗೆ ತಲುಪಿದೆ. ನಾನಿನ್ನೂ ಅದನ್ನು ಒಪ್ಪಿಲ್ಲ.

ಬಸವಣ್ಣ : ‘ರಾಜೀನಾಮೆ ನೀಡಿ ನಿಮ್ಮೂರಿಗೆ ಹೊರಡಬಹುದು’ ಅಂತ
ತಾವು ಹೇಳಿದ ಮೇಲೆ ಆ ಪದವಿಯಲ್ಲಿ ನಾನು
ಮುಂದುವರಿಯಲಾರೆ ಪ್ರಭು. ನನ್ನನ್ನು ತಮ್ಮಲ್ಲಿಗೆ
ಕಳಿಸಿದವನು ಕೂಡಲ ಸಂಗಯ್ಯ.
ಅವನ ಆಜ್ಞೆಬರುವತನಕ ಇಲ್ಲಿಯೇ ಇರುವುದೆಂದು
ತೀರ್ಮಾನಿಸಿದ್ದೇನೆ. ಅವನ ಆಜ್ಞೆ ಬಂದ ತಕ್ಷಣ ಹೊರಡುತ್ತೇನೆ.
ಅಲ್ಲಿಯವರೆಗೆ ಕಲ್ಯಾಣದಲ್ಲಿ ಇರಲು ಅವಕಾಶ ಮಾಡಿಕೊಡಬೇಕೆಂದು
ಕೇಳಿಕೊಳ್ಳುತ್ತೇನೆ ಪ್ರಭು.

ಬಿಜ್ಜಳ : ನನ್ನ ವಿರುದ್ಧ ಧರ್ಮಯುದ್ಧ ಸಾರಿದಂತಿದೆ.

ಬಸವ : ಧರ್ಮಯುದ್ಧವಾದರೆ ತತ್ವಗಳ ಘರ್ಷಣೆ ಇರಬೇಕು.
ಇಲ್ಲಿ ಹಾಗಿಲ್ಲ. ತಾವಾಡುವುದು ನಾಟಕ ಎಂದು
ಚಾಡಿಕೋರರಿಗೂ ಗೊತ್ತಿದೆ. ರಾಜಾಶ್ರಯಕ್ಕಾಗಿ ನಾನು
ಸುಳ್ಳು ಹೇಳಲಾರೆ ಪ್ರಭು.

ಬಿಜ್ಜಳ : ಅರಮನೆಯ ಎದುರು ಮಹಾಮನೆ ಎದ್ದಾಗಲೇ
ನೀನು ನನ್ನಿಂದ ದೂರವಾದೆ ಬಸವಣ್ಣ.

ಬಸವ : ಹೌದು ಪ್ರಭು, ಹೊಸಗಾಳಿ ಬೀಸತೊಡಗಿತು.
ಹೊಸಗಾಳಿಯ ಜೀವಂತಿಕೆಯ ಉಸಿರಾಡಿದವರು ಬದಲಾವಣೆ
ಬೇಕೆಂದರು. ನಾವೂ ಮನುಷ್ಯರೆಂದರು. ಯಜ್ಞಪಶುವಿಗೇ
ಬಾಯಿಬಂದು ವಚನಂಗಳ ಹಾಡಿತು.
ಸಾವಿರಾರು ವರ್ಷಗಳ ಹಿಂದಿನ ಗಾಳಿಯನ್ನೇ ತಮ್ಮ
ವ್ಯವಸ್ಥೆ ಈಗಲೂ ಉಸಿರಾಡುತ್ತಿದೆ. ಉಸಿರಾಡಿದರೆ
ಅದು ಉಳಿಯಬಹುದೇ? ಯೋಚನೆ ಮಾಡಬಾರದೆ ಪ್ರಭು?

ಬಿಜ್ಜಳ : ಹೊಸಗಾಳಿಯ ಹೆಸರಿನಲ್ಲಿ ನೀನು ವರ್ಣಸಂಕರ,
ವರ್ಣಾಶ್ರಮ ಧರ್ಮವನ್ನ ಪ್ರಶ್ನಿಸುವಂಥ ಮದುವೆ
ಮಾಡಬಹುದೆ?

ಬಸವ : ಅದು ವರ್ಣಸಂಕರದ ಮದುವೆಯಲ್ಲ ಪ್ರಭು,
ಅನುಭವ ಮಂಟಪದ ಸಿದ್ಧಾಂತ. ಒಂದು ಕಾಲಕ್ಕೆ
ಮಧುವರಸರು ಬ್ರಾಹ್ಮಣರಾದುದು ನಿಜ. ಹರಳಯ್ಯನವರು
ಶೂದ್ರರಾಗಿದ್ದುದೂ ನಿಜ. ಆದರೆ ಅವರು ಲಿಂಗದೀಕ್ಷೆ
ತಗೊಂಡು ಶಿವಧರ್ಮದವರಾಗಿದ್ದಾರೆ. ಶರಣರಾದ
ಮೇಲೆ ಹರಳಯ್ಯ ಅಂತ್ಯಜನಲ್ಲ, ಮಧುವರಸ ವಿಪ್ರನಲ್ಲ.
ಶರಣರಿಗೆ ಜಾತಿಭೇದವಿಲ್ಲ. ಆದ್ದರಿಂದ ಅದು
ಸ್ವಜಾತಿಯ ಸ್ವಧರ್ಮದ ವಿವಾಹ. ಜಾತೀಯತೆಯನ್ನ
ನಿರ್ನಾಮ ಮಾಡುವ ವೀರಸಾಹಸ, ಈವರೆಗಿನ ನಮ್ಮ ಸಿದ್ಧಾಂತ
ಬರೀ ವಚನವಾಗಿತ್ತು. ಈಗ ಕೃತಿಯಾಯಿತು.

ಬಿಜ್ಜಳ : ನಿಮ್ಮ ಸಿದ್ಧಾಂತವನ್ನು ಜೀರ್ಣಿಸಿಕೊಂಬ ಶಕ್ತಿ
ಸಮಾಜಕ್ಕಿಲ್ಲ ಬಸವಣ್ಣ.

ಬಸವಣ್ಣ : ಸಮಾಜವೆಂದರೆ ಕೇವಲ ಅಗ್ರಹಾರವೇ ಪ್ರಭು,
ಇನ್ನುಳಿದ ಧರ್ಮಬಾಹಿರ ಜನ ಶೇಕಡಾ ತೊಂಬತ್ತರಷ್ಟು
ಇರುವಾಗ?

ಬಿಜ್ಜಳ : ಎಲ್ಲರಿಗೂ ಅವರವರಿಗೆ ಎಂಥ ಧರ್ಮದ ಅಗತ್ಯವಿದೆಯೋ
ಅದನ್ನು ಅಲ್ಲಲ್ಲಿ ಅವರವರಿಗೆ ಕಲ್ಪಿಸಿಕೊಡುವ ಶಕ್ತಿ
ವ್ಯವಸ್ಥೆಗಿದೆ. ವ್ಯವಸ್ಥೆಯಲ್ಲಿರುವ ದೇವರು ಎಲ್ಲರ
ಯೋಗಕ್ಷೇಮ ನೋಡಬಲ್ಲವನಾಗಿದ್ದಾನೆ. ಇದು ಅನಿವಾರ್ಯ!
ಈ ಅನಿವಾರ್ಯವನ್ನು ನಾವು ಹತ್ತು ಸಾವಿರ ವರ್ಷಗಳಿಂದ
ಬದುಕುತ್ತ ಬಂದಿದ್ದೇವೆ. ಈ ಮಧ್ಯೆ ನೀನು ಬಂದು
ಜನಗಳಲ್ಲಿ ಇಲ್ಲದ ಅಗತ್ಯಗಳನ್ನು ಗುರುತಿಸಿ
ಅವನ್ನು ಕೊಡಬಲ್ಲ ದೇವರನ್ನು ಕೊಡುತ್ತೇನೆನ್ನುವುದು
ಅಹಂಕಾರದ ಮಾತಲ್ಲವೆ?

ಬಸವಣ್ಣ : ಸಾವಿರ ವರ್ಷ ನಡೆದುಕೊಂಡು ಬಂದದ್ದಕ್ಕೇ
ಅದು ಸತ್ಯ ಮತ್ತು ನಿರಂತರವಾಗಬೇಕಿಲ್ಲ ಪ್ರಭು.
ಸುಳ್ಳು ಮತ್ತು ಅನ್ಯಾಯಗಳೂ ಆಗಿರಬಹುದು.
ಯಾಕಂದರೆ ಇವೂ ಸಾವಿರಾರು ವರ್ಷಗಳಿಂದ ಇವೆಯಲ್ಲ!
ಕೆಲವು ಪ್ರತಿಷ್ಠಿತರಿಗೆ ಮಾತ್ರ ಸತ್ಯವಾಗಿ, ಉಳಿದವರಿಗೆ
ಅದು ಅಸತ್ಯವೆಂದು ಖಾತ್ರಿಯಾಗಿದ್ದರೆ – ಆ ಉಳಿದವರು
ತಮಗೆ ಅಸತ್ಯವೆನಿಸಿದ್ದನ್ನು ತಿರಸ್ಕರಿಸುವ ಹಕ್ಕು ಅವರಿಗೆ
ಇದೆಯಲ್ಲವೆ? ನನಗೆ ಸತ್ಯವಾದದ್ದು ತಮಗೂ
ಸತ್ಯವಾಗಲೇಬೇಕೆಂದು ಹೇಳಲಾಗುವುದಿಲ್ಲ.

ಬಿಜ್ಜಳ : ನೀನು ಸತ್ಯವನ್ನು ಹ್ಯಾಗೆ ನಿರ್ಧರಿಸುತ್ತಿ?

ಬಸವಣ್ಣ : ಅನುಭವದಿಂದ. ನಮಗಾದ ಸುದೀರ್ಘವಾದ
ಅನುಭವದಿಂದ ಯಾವುದು ಸತ್ಯವೂ, ನಿರಂತರವೂ
ಆಗಿದೆ ಎಂದು ಖಾತ್ರಿಯಾಗುತ್ತದೆ.
ಅದು ಹುಡುಕಿ ಹುಡುಕಿ ಕಸವೆನಿಸಿದ್ದನ್ನು ಬಿಸಾಕಿ,
ಹಿತಕರವಾದದ್ದನ್ನು ಉಳಿಸಿಕೊಂಡು ಬದುಕುತ್ತದೆ.
ಅಷ್ಟೇ ಅಲ್ಲ, ಕಾಲಕ್ಕೆ ತಕ್ಕಂತೆ ಅದು ಬದಲಾಗಲೂಬಹುದು.
ಅದನ್ನು ಕೂಡ ಅನುಭವವೇ ನಿರ್ಧರಿಸುತ್ತದೆ.

ಬಿಜ್ಜಳ : ಇದನ್ನೇ ನಾನು ಪದ್ಧತಿ ಅಂದೆ.

ಬಸವಣ್ಣ : ಅದು ಇಬ್ಬರಲ್ಲಿ ತಮಗೆ ಮಾತ್ರ ಅನುಕೂಲಕರವಾಗಿದ್ದು
ನನಗದು ಅನುಕೂಲವಾಗಿಲ್ಲವಾದರೆ ಅದನ್ನು
ನಿರಾಕರಿಸುವ ಹಕ್ಕು ನನಗಿದೆ.
ದೀರ್ಘ ಅನುಭವ ಅಂತ ಹೇಳಿದೆ. ದೀರ್ಘ ಅನುಭವ
ಅಂದರೆ ಇಬ್ಬರ ಅನುಭವದ ಮೊತ್ತವೇ ಹೊರತು
ತಮ್ಮೊಬ್ಬರದೇ ಅಲ್ಲ. ನಿಮ್ಮ ಪದ್ಧತಿಯ ದೇವರು
ಕೆಲವರನ್ನು ಮುಟ್ಟುತ್ತದೆ, ಕೆಲವರನ್ನು ದೂರ ಇಡುತ್ತದೆ.
ನನ್ನ ಪ್ರಕಾರ ಅದು ನನ್ನ ದೇವರಲ್ಲ. ನನ್ನ ದೇವರೇ
ಆಗಿದ್ದರೆ ಇಬ್ಬರನ್ನೂ ಮುಟ್ಟಬೇಕು, ಇಲ್ಲಾ
ಇಬ್ಬರನ್ನೂ ದೂರ ಇಡಬೇಕು. ಅಂದರೆ ಇಬ್ಬರಿಗೂ
ಸಮಾನವಾಗಿರಬೇಕು. ಅಂಥ ದೇವರು ನನಗೆ ಬೇಕು.
ಇಲ್ಲದಿದ್ದರೆ ನನಗೆ ಆ ದೇವರೇ ಬೇಡ.

ಬಿಜ್ಜಳ : ಹೊಸ ದೇವರು, ಹೊಸ ಧರ್ಮ – ವ್ಯವಸ್ಥೆಯನ್ನು ವಿರೋಧಿಸುವ
ಸಂಸ್ಥೆಯೊಂದು ಬೇಕೇ ಬೇಕು – ಅಂತಲ ನೀನು ಹೇಳೋದು?

ಬಸವಣ್ಣ : ಪ್ರಭು ತಮಗೇ ತಿಳಿದಿರುವಂತೆ ಇವರು ಧರ್ಮಬಾಹಿರರು.
ಅವರಿಗೂ ಒಂದು ಧರ್ಮದ ಅಗತ್ಯವಿದೆ, ತಮ್ಮೊಂದಿಗೆ
ಮಾತಾಡುವ ದೇವರ ಅಗತ್ಯ ಇದೆ ಅಂತ ನಾನು
ಹೇಳಿದರೆ ವ್ಯವಸ್ಥೆಯ ವಿರೋಧಿ ಸಂಸ್ಥೆ ಅನ್ನುತ್ತೀರಲ್ಲ?
ಅವರು ಮನುಷ್ಯರೆಂದು ಒಪ್ಪುವುದಕ್ಕೇ ತಾವು ಸಿದ್ಧರಿಲ್ಲ!
ಅಂದಮೇಲೆ ನಾನೇನು ಹೇಳಲಿ?

ಬಿಜ್ಜಳ : ಅಂದರೆ ಅದಿಲ್ಲದೆ ಅವರೀಗ ಕತ್ತಲೆಯಲ್ಲಿದ್ದಾರೆಯೊ?
ಅವರಿಗೆ ಹೊಸ ಧರ್ಮ, ದೇವರನ್ನು ಕೊಟ್ಟು
ನೇರ ಕೈಲಾಸಕ್ಕೆ ಕರೆದೊಯ್ಯುತ್ತೀರೊ?

ಬಸವಣ್ಣ : ಅದನ್ನ ನಿಮ್ಮ ವ್ಯವಸ್ಥೆಯೂ ಮಾಡಲಾರದು ಪ್ರಭು.
ತಮ್ಮ ರಾಜ್ಯದಲ್ಲಿ ಧರ್ಮವಿದೆ, ಕೆಲವೇ ಪ್ರತಿಷ್ಠಿತರಿಗೆ!
ಅದನ್ನವರು ಬಡ ಜನಗಳ ಮೇಲೆ ಹೇರುತ್ತಿದ್ದಾರೆ. ಈ ಜನಕ್ಕೆ
ದೇವರನ್ನು ತಲುಪುವ, ಮುಟ್ಟುವ, ಅವನೊಂದಿಗೆ
ಮಾತಾಡುವ, ಕಷ್ಟಸುಖ ಹೇಳಿಕೊಳ್ಳುವ ಅವಕಾಶವಿಲ್ಲ.
ದೇವರ ಜೊತೆಗೆ ದೇವಭಾಷೆಯಲ್ಲೇ ಮಾತಾಡಬೇಕು.
ಮಹಾಮನೆಯಲ್ಲಾದರೆ ದೇವರು ಭಕ್ತರ ಭಾಷೆಯಲ್ಲೇ
ಮಾತಾಡುತ್ತಾನೆ. ಈಗ ದೇವರು ಮತ್ತು ಭಿಕಾರಿಗಳು
ಪರಸ್ಪರ ಅವರವರೇ ಮಾತಾಡಿಕೊಳ್ಳುತ್ತಾರೆ. ಆ ಮೂಲಕ
ಅವರಿಗೂ ಧರ್ಮ ಅಂತ ಒಂದು ಸಿಕ್ಕಿದೆ. ಆತ್ಮವಿಶ್ವಾಸ
ಸಿಕ್ಕಿದೆ. ಅವರು ಯಾರ ಗೋಜಿಗೂ ಹೋಗದೇ ತಮ್ಮ
ಧರ್ಮವನ್ನು ತಾವು ಪಾಲಿಸುತ್ತಾರೆ. ಕಾಯಕ ಮಾಡುತ್ತಾರೆ.
ಕೊಡಬೇಕಾದ ತೆರಿಗೆ ಕೊಡುತ್ತಾರೆ. ಸಾಲದೆ?

ಬಿಜ್ಜಳ : ಸರಿ, ನೀವು ಕಟ್ಟುವ ಕಲ್ಯಾಣಕ್ಕೆ
ಬಸವಣ್ಣನಂತೆ ಒಬ್ಬ ಬಿಜ್ಜಳನೂ ಬೇಕೆಂಬುದನ್ನು
ಅರಿಯದೆ ಹೋದಿರಲ್ಲಾ ಬಸವಣ್ಣಾ!
ನೀವು ನಿಮ್ಮ ಕನಸಿಗೆ ರೂಪ ಕೊಡುತ್ತಿರುವಾಗ
ನಾನೂ ನಿಮ್ಮ ಪಕ್ಕದಲ್ಲಿಯೇ ಇದ್ದೆ. ಅದರಲ್ಲಿ
ನನಗೇನಾದರೂ ಒಂದು ಸ್ಥಳ ಇದೆಯೇ? ಅಂತ
ಹುಡುಕಿದೆ. ಆಸನಗಳಿರಲಿ, ಕೂರಲಿಕ್ಕೆ ಅಂಗೈಯಗಲ
ನೆಲವೂ ಉಳಿದಿರಲಿಲ್ಲ! ಅಷ್ಟು ಜನ ಶರಣರು
ಒಟ್ಟಾಗಿ ಕುಳಿತಿದ್ದರೆ ಉಳಿದವರಿಗೆ ಸ್ಥಳವೆಲ್ಲಿ?

ಬಸವಣ್ಣ : ತಾವಿರುವ ಕಲ್ಯಾಣವನ್ನೇ ಕುಡಲ ಸಂಗಮವಾಗಿಸಲು
ಪ್ರಯತ್ನಿಸಿದೆವು ಪ್ರಭು. ತಮ್ಮನ್ನು ಸಿಂಹಾಸನದಲ್ಲಿಯೇ
ಕೂರಿಸಿ ವ್ಯವಸ್ಥೆಯ ನಿಂತ ನೀರಿಗೇ ಹರಿವು ನೀಡಿ,
ಹೊಸದರೊಂದಿಗೆ ಸೇರಿಸಿ ಶಿವಪುರವೆಂಬ ಕೂಡಲ ಸಂಗಮವನ್ನ
ರೂಪಿಸಬೇಕೆಂಬುದು ನಮ್ಮ ಕನಸಾಗಿತ್ತು.
ಆದರೆ ತಾವು ಕತ್ತಲೆಗೆ ಒಯ್ಯುವ ಹಳೆಯ ರಸ್ತೆಗಳಲ್ಲೇ
ನಡೆಯಬಯಸಿದಿರಿ. ಆದ್ದರಿಂದ ನಾವು ಭಿನ್ನ ದಾರಿ
ತುಳಿಯಲೇಬೇಕಾಯಿತು.

ಬಿಜ್ಜಳ : ನಾನು ಹೇಳಿದ್ದು ರಾಜ ಅಂದರೆ ಕಾನೂನು ಕಟ್ಟಳೆಗಳು.

ಬಸವಣ್ಣ : ರಾಜನ ಕಾನೂನಿಗೆ ದೈವಪ್ರಜ್ಞೆ ಆಧಾರವಾಗಿರಬೇಕು.
ಮನುಷ್ಯನ ಆತ್ಮಗೌರವದ ಬಗ್ಗೆ ಸಮ್ಮತಿ ಇರಬೇಕು.
ಎಲ್ಲಿಯತನಕ ಕಾನೂನು ಇವನ್ನು ಮೀರುವದಿಲ್ಲವೋ
ಅಲ್ಲಿತನಕ ತಾವು ರಾಜರು. ಮೀರಿದ್ದರಿಂದ ನಾವು
ಬೇರೆ ದಾರಿ ಹುಡುಕಬೇಕಾಯಿತು ಪ್ರಭು.

ಬಿಜ್ಜಳ : ನಿನ್ನನ್ನು ಮೀರಿದ ಜಗತ್ತಿನೊಂದಿಗೆ ವ್ಯವಹರಿಸುತ್ತಿದ್ದೀ
ಬಸವಣ್ಣಾ. ಇದು ಲೌಕಿಕ. ನಿನ್ನಂಥವರು ಹಿಂದೆಯೂ ಆಗಿ
ಹೋಗಿದ್ದಾರೆ, – ವ್ಯವಸ್ಥೆಯನ್ನ ತೊಳೆಯುತ್ತೇವೆಂದವರು. ಅವರಿಗೆ
ದಕ್ಕಿದ್ದೂ ತೊಳೆಯುವ ಸರದಿಯಷ್ಟೆ. ಹೋಗಲಿ ಇಲ್ಲಿ
ನಿನ್ನ ಪಾತ್ರವೇನು? ನೀನೂ ಒಬ್ಬ ಬ್ರಾಹ್ಮಣ. ನಿರಾಕರಿಸಲ್ಪಟ್ಟವನಲ್ಲ.
ಕಲ್ಯಾಣದಿಂದ ಕೂಡಲ ಸಂಗಮದವರೆಗಿನ
ಯಾತ್ರೆಯಲ್ಲಿ ನಿನ್ನ ಪಾತ್ರವೇನು? ಹುತಾತ್ಮನೊ? ದಳ್ಳಾಳಿಯೊ?

ಬಸವಣ್ಣ : ನಾನವರ ಗೆಳೆಯ. ಅವರವನಲ್ಲದೆ ಅವರ ಕೆಲಸ
ಮಾಡುತ್ತಿರುವುದರಿಂದ ದಳ್ಳಾಳಿ. ಕಾನೂನು ಮೀರಿ
ನೀವು ಕೊಂದರೆ ಹುತಾತ್ಮ.

ಬಿಜ್ಜಳ : ನೀನು ಖಂಡಿತವಾಗಿ ನನ್ನ ಮೇಲೆ ಯುದ್ಧಸಾರಿದಂತಿದೆ ಬಸವಣ್ಣ.

ಬಸವಣ್ಣ : ಇಲ್ಲ ಪ್ರಭು, ನಾನು ಯುದ್ಧ ಸಾರಲೂ ಇಲ್ಲ.
ಮಾಡಲೂ ಇಲ್ಲ. ಮಹಾರಾಜರಿಗೆ ಗಾಯಗಳಾಗಿದ್ದರೆ ಅವು
ತಮ್ಮನ್ನು ತಾವೇ ಇರಿದುಕೊಂಡು ಮಾಡಿಕೊಂಡ
ಗಾಯಗಳು. ಅಥವಾ ಪ್ರೇಯಸಿಯರು ಕಚ್ಚಿ ಮಾಡಿದ ಗಾಯಗಳು.

ಬಿಜ್ಜಳ : ಸದ್ಯ ನಕ್ಕೆಯಲ್ಲಾ ಮಾರಾಯಾ!
ನಿನ್ನ ಮುಖ ಅರಳಿದ್ದನ್ನು ನೋಡಿ
ವರ್ಷಗಳಾಗಿದ್ದವು!

ಸಾವಂತ್ರಿ : ಪ್ರಭುಗಳು ಮತ್ತು ಅಣ್ಣನವರು ಅಪ್ಪಣೆ ಕೊಟ್ಟರೆ
ಕೊನೆಯದಾಗಿ ಒಂದು ಮಾತು ಹೇಳಬಹುದೆ?

ಬಿಜ್ಜಳ : ಹೇಳು.

ಸಾವಂತ್ರಿ : ಅಣ್ಣನವರು ಕೂಡಲ ಸಂಗಮಕ್ಕೆ ಒಂದು ದಾರಿಯನ್ನು
ತೋರಿಸಿದರು. ಎರಡೂ ಬದಿಗೆ ಗಿಡಗಳ ಸಾಲು –
ಹ್ಯಾಗೆ ನೆಡಬೇಕೆಂದು ಮಳಲಿನ ಮೇಲೆ ಬರೆದು
ತೋರಿಸಿದರು. ನೂರು ವರ್ಷಗಳಾದ ಮೇಲೆ ಈ ದಾರಿ
ಹ್ಯಾಗಿರುತ್ತದೆಂದು ನೋಡಿದರೆ: ಗಿಡಗಳು ಮರಗಳಾಗಿ
ದಾರಿಕಾಕರಿಗೆ ನೆರಳಾಗಿ, ತಂಪಿಗೆ ಆಸರೆಯಾಗಿ
ಆದರ್ಶದ ಕೂಡಲ ಸಂಗಮಕ್ಕೆ ಒಯ್ಯುವ ದಾರಿಗುಂಟ ಬೆಳೆದಿದ್ದುವು.
ಆದರೆ ಅಷ್ಟರಲ್ಲಿ ರಾಜಭಟರು ಬಂದು ಮಳಲಿನಲ್ಲಿ
ಬರೆದ ದಾರಿಯನ್ನೂ ಮುಚ್ಚಿ ಮರಗಿಡಗಳನ್ನು ತುಳಿದು,

ಅಳಿಸಿಬಿಟ್ಟರು ಸ್ವಾಮಿ. ಕೂಡಲ ಸಂಗಮದ
ದಾರಿಯನ್ನು ನೀವೇ ಮುಚ್ಚಿಸಿದಿರಿ.

ಬಿಜ್ಜಳ : ಆಯ್ತು ಸಾವಂತ್ರಿಯ ಮಾತಿನೊಂದಿಗೆ ಇಂದಿನ ಚರ್ಚೆಯನ್ನ
ಮುಗಿಸೋಣ, ನಮ್ಮ ಮಾತು ಅಪೂರ್ಣವಾದರೂ.
ನಿನ್ನ ರಾಜೀನಾಮೆಯ ಬಗ್ಗೆ ಪುನಃ ಆಲೋಚನೆ
ಮಾಡುವ ಅವಕಾಶವಿದೆ ಅಂದುಕೊಂಡಿದ್ದೇನೆ.

ಬಸವ : ಇಲ್ಲ ಪ್ರಭು. ಶರಣರ ಎಳಹೂಟೆಯಂದೇ, ಅವರೊಂದಿಗೇ
ನನ್ನ ಪ್ರಾಣ ಹಾರಿಹೋಗಿದೆ. ಈಗ ಉಳಿದಿರೋದು ಅದರ
ನೆರಳು ಮಾತ್ರ. ಅಂದಿನಿಂದ ನನಗೇನೇನೂ ತಿಳಿಯದೆ
ಏನೇನೋ ಮಾತಾಡುತ್ತಿದ್ದೇನೆ. ಅಲ್ಲದ್ದನ್ನಾಡಿದ್ದರೆ ಕ್ಷಮಿಸಿರಿ.

ಬಿಜ್ಜಳ : ಇನ್ನೊಂದು ವಿಷಯ ಬಗೆಹರಿಯಬೇಕು.
ಅರಮನೆಯಲ್ಲಿ ಕಳುವಾದ ಸರವನ್ನು ಮುಗ್ಧ ಸಂಗಯ್ಯ
ಈ ದಿನ ಸಾವಂತ್ರಿಗೆ ಬೆಲೆಯಾಗಿ ಕೊಟ್ಟಿದ್ದಾನೆ. ಹ್ಯಾಗೆಂದು
ತೀರ್ಮಾನವಾಗಬೇಕು. ತಾನಾಗಿ ಒಪ್ಪಿಕೊಂಡರೆ ಮುಗಿಯಿತು.