ಬಸವಣ್ಣ : (ಆಘಾತ ಹೊಂದಿ) ಸಾಧ್ಯವಿಲ್ಲವಲ್ಲ!
ಸಾವಂತ್ರೀ, ಇದೇನು ಮಾತು ತಾಯೀ?

ಸಾವಂತ್ರಿ : ರತ್ನದ ಸರವನ್ನು ಮುಗ್ಧ ಸಂಗಯ್ಯನವರು ಬೆಲೆಯಾಗಿ
ಕೊಟ್ಟುದು ನಿಜ ಅಣ್ಣಾ. ಆದರೆ ಇದರಲ್ಲೇನೋ
ಮೋಸವಿದೆಯೆಂದು ನನ್ನ ಅಂಬೋಣ. ಕಾಮಾಕ್ಷಿಯೂ
ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಪ್ರಭುಗಳಿಗೇ
ಕೊಟ್ಟಿದ್ದೇನೆ.

ದ್ವಾರಪಾಲಕ : (ಪ್ರವೇಶಿಸಿ) ಪ್ರಭು, ತಮ್ಮನ್ನು ನೋಡಲು ಕ್ರಮಿತರು ಒಬ್ಬರನ್ನ
ಕಳಿಸಿದ್ದಾರೆ. ಅವರು ಕಾಯುತ್ತಿದ್ದಾರೆ ಪ್ರಭು.

ಬಿಜ್ಜಳ : ಒಳಕ್ಕೆ ಕಳಿಸು.

ಹರಿಹರ : (ಪ್ರವೇಶಿಸಿ) ಮಹಾಪ್ರಭುಗಳು ಕ್ಷಮಿಸಬೇಕು.
ತಮ್ಮ ಮಾತಿನಲ್ಲಿ ಸರದ ಪ್ರಸ್ತಾವ ಬರಲೆಂದು ಕಾಯುತ್ತಿದ್ದೆವು.
ಅನಿವಾರ್ಯವಾಗಿ ಹೀಗೆ
ಪ್ರವೇಶಿಸಬೇಕಾಯಿತು ಪ್ರಭು.

ಬಿಜ್ಜಳ : ಅನಿವಾರ್ಯ ಪ್ರಸಂಗ ಅದೇನೆಂದು ಹೇಳೋಣವಾಗಲಿ ಪಂಡಿತರೆ.

ಹರಿಹರ : ಇಂದು ಸಂಜೆ ಅರಮನೆಯ ಆಳುಗಳೆಲ್ಲ
ಸಂಜೆಯ ಮಹಾಪೂಜೆಯ ಗಡಿಬಿಡಿಯಲ್ಲಿದ್ದಾಗ
ರತ್ನದ ಸರ ಕಳುವಾಯಿತು. ಕಳ್ಳ ಓಡಿ ಹೋಗುವಾಗ
ನಾವು ಅವನನ್ನ ಬೆದರಿಸೆದೆವು. ಆದರೂ ಓಡಿಹೋದ.

ಬಿಜ್ಜಳ : ಕಳ್ಳ ಯಾರೆಂದು ತಿಳಿಯಿತೋ?

ಹರಿಹರ : ಇನ್ನೂ ಸಾಧ್ಯವಾಗಿಲ್ಲ ಪ್ರಭು. ನಮಗವನ ಬಾಹ್ಯ ಚಹರೆ
ಕಂಡಿತೇ ವಿನಾ ವಿವರಗಳು
ಕಾಣಲಿಲ್ಲ. ನಾವು ಕಂಡಂತೆ ಆ ಕಳ್ಳ ಒಬ್ಬ ತರುಣ ಜಂಗಮ.

ಬಿಜ್ಜಳ : ಅದು ಸರಿ ಪಂಡಿತರೇ, ನೀವ್ಯಾಕೆ ಇಲ್ಲಿಗೆ ಬಂದಿರೆಂದು
ತಿಳಿಯಲಿಲ್ಲವಲ್ಲ!

ಹರಿಹರ : ಅದನ್ನೇ ಹೇಳಬೇಕೆಂದು ಬಂದೆವು: ಸದರಿ ಜಂಗಮನು
ಸೂಳೆ ಸಾವಂತ್ರಿಯ ಮನೆಯಲ್ಲಿರುವನೆಂದು ಯಾರೋ
ಹೇಳಿದರು. ಈ ಸಂಗತಿಯನ್ನು ಎರಡನೆಯ ಧರ್ಮರಾಯ –
ನಂತಿರುವ ಪ್ರಭುಗಳ ಗಮನಕ್ಕೆ ತರೋಣವೆಂದು
ಬಂದೆವು.

ಬಿಜ್ಜಳ : ನೀವು ಬಂದವರು ಎಷ್ಟು ಜನ?

ಹರಿಹರ : ನಾವು ಒಬ್ಬರೇ!

ಬಿಜ್ಜಳ : ಓಹೋ ಹಾಗೊ! ಇರಲಿ. ಕದ್ದವನು ಒಬ್ಬ ತರುಣ ಜಂಗಮ.
ರತ್ನದ ಸರ ಸಾವಂತ್ರಿಯ ಮನೆಯಲ್ಲಿ ಸಿಕ್ಕಿದೆ…..

ಬಸವಣ್ಣ : ಪಂಡಿತರೆ, ಇಲ್ಲಿ ಬನ್ನಿರಿ.
(ಹರಿಹರ ಹಿಂಜರಿಯುವನು.) ಬನ್ನಿ ಸ್ವಾಮೀ. ನೀವು ಸರ ಕದ್ದ
ಹುಡುಗನನ್ನ ನೋಡಿದಿರಲ್ಲವೆ? ಅವನೊಬ್ಬ ತರುಣ
ಜಂಗಮ ಅಂದಿರಿ.

ಹರಿಹರ : ಹೌದು.

ಬಸವಣ್ಣ : ನೋಡಿದರೆ ನಿಮಗವನ ಗುರುತು ಸಿಗುವುದೆ?

ಹರಿಹರ : ಸಿಕ್ಕೇ ಸಿಗುತ್ತದೆ.

ಬಸವಣ್ಣ : ಹಾಗಿದ್ದರಿಗೊ ಒಳಗೆ ನೋಡಿರಿ: ಹಾಸಿಗೆಯ ಮೇಲೊಬ್ಬ
ಹುಡುಗ ಲಿಂಗಪೂಜೆ ಮಾಡಿಕೊಳ್ತಿದಾನಲ್ಲ…

ಹರಿಹರ : ಲಿಂಗಪೂಜೆ! ಛೀ ಛೀ!

ಬಸವಣ್ಣ : ಸ್ವಯಂ ಕಳ್ಳನನ್ನು ನೋಡಿದವರೇ ಹೀಗಂದರೆ ಹ್ಯಾಗೆ?
ಆ ಲಿಂಗಪೂಜೆ ಮಾಡಿಕೊಂಬ ಹುಡುಗನೇ
ಕಳ್ಳನಾಗಿರಬಹುದ? ನೋಡ್ರಿ

ಹರಿಹರ : (ಹೋಗಿ ನೋಡಿ) ಆಶ್ವರ್ಯ! ಪರಮಾಶ್ಚರ್ಯ! ಹೌದು ಸ್ವಾಮೀ
ನಾವು ಅರಮನೆಯಲ್ಲಿ ಕಂಡ ತರುಣ ಜಂಗಮ
ಇವನೇ!

ಬಸವಣ್ಣ : ಪ್ರಭು, ನಾನು ನನ್ನ ಹಾಗೂ ತಮ್ಮ ಸಂಬಂಧಗಳ
ನೆನೆದು ಹೇಳುತ್ತೇನೆ: ಮುಗ್ಧ ಸಂಗಯ್ಯ ಕಳ್ಳನಲ್ಲ.
ಈ ಬಗ್ಗೆ ತಾವು ಯಾರನ್ನಾದರೂ ಕೇಳಬಹುದು.

ಹರಿಹರ : ನಮ್ಮ ಜೊತೆಗೊಬ್ಬ ಶರಣಮ್ಮ ಬಂದಿದ್ದಾಳೆ, ಸಾಕ್ಷಿಗೆ.
ಅವಳನ್ನು ಕರೆಸಬಹುದೇ ಪ್ರಭು?

ಬಿಜ್ಜಳ : ಆಗಬಹುದು. (ದ್ವಾರಪಾಲಕನಿಗೆ) ನೋಡಯ್ಯಾ ಹೊರಗೊಬ್ಬ
ಶರಣಮ್ಮ ನಿಂತಿದ್ದಾಳಂತೆ. ಕರೆದುಕೊಂಡು ಬಾ.
(ಎಲ್ಲರೂ ಬಾಗಿಲ ಕಡೆಗೆ ನೋಡುತ್ತಿರುವಂತೆ ಕಾಶಮ್ಮ ಅವಳ ಹಿಂದೆ ದಾಮೋದರ ಬರುವರು. ಹರಿಹರ ಮಗನ ಮುಖ ನೋಡಿ ತಿರಸ್ಕಾರದಿಂದ ಬೇರೆ ಕಡೆಗೆ ನೊಡುವರು. ಕಾಶವ್ವ ಬಸವಣ್ಣನನ್ನು ನೋಡಿದ್ದೇ ಭಾವುಕಳಾಗಿ ಕೈಮುಗಿಯುವಳು)

ಕಾಶವ್ವ : ನನ್ನಪ್ಪಾ, ನನಗೆ ಇಲ್ಲಿ ದರ್ಶನ ಕೊಟ್ಟೆಯಲ್ಲಾ ತಂದೇ ಬಸವಾ! ಬಸವಾ!
(ಬಸವಣ್ನನ ಕಾಲಿಗೆರಗುವಳು.) ಯಾಕೆ ಕರೆಸಿದಿ ನನ್ನಯ್ಯಾ?
ಅಣ್ಣನವರು ಸಾಕ್ಷಿ ಹೇಳಲು ಕರೀತಾರೆ ಬಾ ಅಂತ
ಈಯಪ್ಪ ಕರೆತಂದ.

ಬಸವಣ್ಣ : (ಬಿಜ್ಜಳನನ್ನ ತೋರಿಸಿ) ಮಹಾರಾಜರು! ನಮಸ್ಕಾರ ಮಾಡಮ್ಮಾ.
(ಕಾಶಮ್ಮ ಬಿಜ್ಜಳನಿಗೂ ನಮಸ್ಕರಿಸುವಳು.)

ಹರಿಹರ : ಕಾಶೀ, ಈ ದಿನ ಜಂಗಮರ ಹುಡುಗನೊಬ್ಬ ಬಂದು
ನಿನ್ನ ಮನೆಯಲ್ಲಿ ರತ್ನದ ಸರವನ್ನಿಟ್ಟಿದ್ದ, ಅಲ್ಲವೆ?

ಕಾಶವ್ವ : ಹೌಂದು ಸ್ವಾಮಿ. ರಾಜಭಟ್ರು ಬರ್ತಾರೇಂತ ನಮ್ಮನೇಲಿ
ಅಡಿಕ್ಕೊಂಡು ಕೂತ. ರಾಜಭಟರು ಬಂದು ಹೋಗೋತಂಕ
ಸುಮ್ಮನೆ ಬಿದ್ದುಕೊಂಡಿದ್ದ. ಆಮ್ಯಾಲೆ ಆ ಸರವ ನಮ್ಮನೇಲೇ
ಬಿಟ್ಟು ಓಡಿಹೋದ.

ಹರಿಹರ : ಆಯ್ತು, ನೀನಿನ್ನು ಹೊರಡು. ಹೊರಡೀಗ.
ಪ್ರಭುಗಳಿಗೆ ಈಗ ಖಾತ್ರಿಯಾಗಿರಬೇಕೆಂದು ನಂಬುತ್ತೇವೆ.

ಬಿಜ್ಜಳ : ಇರಿ ಸ್ವಾಮಿ, ಯಾಕೆ ಅವಸರ ಮಾಡ್ತೀರಿ?
ಆಕೆ ಹೇಳಿದ್ದು ಜಂಗಮರ ಹುಡುಗ ಸರವನ್ನ
ಆಕೆಯ ಮನೆಯಲ್ಲಿ ಬಿಟ್ಟ.
ಅದು ಸಾವಂತ್ರಿಯ ಮನೆಗೆ ಹ್ಯಾಗೆ ಬಂತು?

ಹರಿಹರ : ಹಾಗೊ? ಹಾಗಿದ್ದರೆ ಈಗ ನೋಡ್ರಿ:
ಏನೇ ಕಾಶಿ, ನಿಮ್ಮ ಮನೆಯಲ್ಲಿ ಅಡಗಿದವನು
ಜಂಗಮರ ಹುಡುಗ, ಕಾವೀ ಬಟ್ಟೆ ಧರಿಸಿದ್ದ! ಅಲ್ಲವೆ?

ಕಾಶವ್ವ : ಹೌದು ಸ್ವಾಮಿ.

ಹರಿಹರ: ಕೇಳಿದಿರಾ ಪ್ರಭು? ಕಾಶೀ ನೀನಿನ್ನು ಹೊರಡು.

ಸಾವಂತ್ರಿ : ಕಾಶವ್ವಾ ಇಲ್ಲಿ ಬಾ. (ಕಾಶವ್ವ ಸಾವಂತ್ರಿಯ ಬಳಿಗೆ ಹೋಗುವಳು.)
ಒಳಗಡೆ ಕೂತಾನಲ್ಲ ಒಬ್ಬ ಜಂಗಮ, –
ನಿನ್ನ ಮನೆಗೆ ಸರ ತಂದವನು ಅವನೇ ಏನಮ್ಮ?

ಕಾಶವ್ವ : ಅಲ್ಲ! ಇವನು ಸಂಗಯ್ಯ. ಆ ಜಂಗಮರ ಹುಡುಗ
ಬೇರೆ. ಅವನೇ ಸಂಗಯ್ಯಂಗೆ ಆ ಸರ ಕೊಟ್ಟು
ನಿನ್ನ ಮನೆ ತೋರಿಸಿ ಅಲ್ಲಿಗೆ ಹೋಗು ಅಂತ ಕಳಿಸಿದ!

ಹರಿಹರ : (ತನ್ನ ಮಗ ದ್ವಾರದಲ್ಲಿ ನಿಂತುದನ್ನು ಅರಿತು)
ಮಹಾಪ್ರಭು, ಈ ಹೆಂಗಸು ಏನು ಮಾತಾಡುತ್ತಿದೆ ಅಂತ
ಅದಕ್ಕೇ ಗೊತ್ತಿಲ್ಲ. ಬೇಕಾದರೆ ಕಾವೀ ಧರಿಸಿದ
ಯಾರೇ ಒಬ್ಬನನ್ನು ತೋರಿಸಿದರೂ ಇವನೇ ಕಳ್ಳ ಎನ್ನುತ್ತದೆ.
ತೋರಿಸಲ? (ದನಿ ನಡುಗಿಸುತ್ತ) ಸಿದ್ಧಮಾಡಿ ತೋರಿಸಲು ಅಪ್ಪಣೆ ಕೊಡಿ
ಮಹಾಪ್ರಭು, ತಾವು ನಮ್ಮ ಧರ್ಮರಾಯರು!

ಬಿಜ್ಜಳ : ಅಯ್ತು, ತೋರಿಸಿ ಸ್ವಾಮಿ.

ಹರಿಹರ : ದಾಮೋದರ…. (ಕೂಡಲೇ ಅವಕಾಶಕ್ಕಾಗಿ ಕಾಯುತ್ತಿದ್ದ ದಾಮೋದರ ನಾಟಕೀಯವಾಗಿ ಕಾಣಿಸಿಕೊಳ್ಳುತ್ತಾನೆ)
ಕಾಶೀ ನಿಮ್ಮ ಮನೆಯಲ್ಲಿ ಅಡಗಿದ್ದುಕೊಂಡು ಆಮೇಲೆ
ಸರವನ್ನು ಅಲ್ಲೇ ಬಿಟ್ಟು ಹೋದವನು ಇವನ ಹಾಗೇ ಇದ್ದನ?

ಕಾಶವ್ವ : ಇವನ ಹಂಗೇ ಯಾಕೆ? ಇವನೇ?
ರಾಜಭಟರು ಹೋದಮ್ಯಾಲೆ ನನ್ನ ಮುದುಕ
ಅದ್ಯಾಕೋ ಸತ್ತ ಹೆಗ್ಗಣ ನಾರತೈತಲ್ಲ? – ಅಂತ ಒಳಗಡೆ ಹೋದ.
ಒಳಗ ಸರ ಇತ್ತು! ಅದನ್ನ ಹೊರಗ ಒಗೀಬೇಕೆಂದಿವಿ,
ಅಷ್ಟರಾಗ ಈ ಹುಡುಗ ಬಂದು ಸರ ನಂದು ಅಂತ
ತಕ್ಕೊಂಡ!

ದಾಮೋದರ : ಅಪ್ಪಣೆ ಇಲ್ಲದೆ ಬಂದಿದ್ದೇನೆ; ಮಹಾಪ್ರಭುಗಳು ಕ್ಷಮಿಸಬೇಕು,
ನಡೆದದ್ದನ್ನ ಈ ತಾಯಿ ಹೇಳಿದ್ದು ಸರಿಯಾಗಿದೆ.

ಬಿಜ್ಜಳ : ಅಂದರೆ ನೀನೇ ಸರದ ಕಳ್ಳ ಅಂತಲ?

ದಾಮೋದರ : ಹೌದು ಮಹಾಪ್ರಭು. ಅದನ್ನ ತಿಳಿಸುವುದಕ್ಕೇ ನಾನು ಬಂದೆ.

ಹರಿಹರ : ಇದ್ಯಾಕೋ ನಮ್ಮ ಕೈ ಮೀರಿ ಹೋಯ್ತು ಪ್ರಭು!
ಈತ ಯಾರೋ ನಮಗೆ ಗೊತ್ತಿಲ್ಲ. ಅರಮನೆಯಲ್ಲಿ ನಾವು ಇವನನ್ನು
ನೋಡಲೂ ಇಲ್ಲ. ಮಹಾಮನೆಯವರು
ತಮಗೆ ಬೇಕಾದವರನ್ನು ರಕ್ಷಿಸಲು ನಕಲಿ
ಜಂಗಮನನ್ನು ಸೃಷ್ಟಿಸಲೂ ಬಲ್ಲರು!
ತಮ್ಮಂಥವರನ್ನು ನಂಬಿಸಲೂ ಬಲ್ಲರು.

ಬಿಜ್ಜಳ : ನಾಲಗೆ ಮೇಲೆ ನಿಯಂತ್ರನವಿರಲಿ ಪಂಡಿತರೆ (ಖೆಕ್ಕರಿಸಿ ನೋಡುವನು.
ಹರಿಹರ ಹೆದರುವನು. ದಾಮೋದರನಿಗೆ)
ಏನಯ್ಯಾ, ಇವರು ಯಾರೆಂದು ನಿನಗೆ ಗೊತ್ತೊ?

ದಾಮೋದರ : ಗೊತ್ತು ಪ್ರಭು. ಇವರು ನನ್ನ ತಂದೆ!
(ಎಲ್ಲರಿಗೂ ಆಘಾತವಾಗುವುದು. ಬಿಜ್ಜಳಹೌದೆ?” ಎಂಬಂತೆ ಹರಿಹರನನ್ನು ನೋಡುವನು. ತಕ್ಷಣ ಹರಿಹರ ಎಚ್ಚತ್ತು.)

ಹರಿಹರ : ಮಹಾಪ್ರಭುಗಳಿಗೆ ಸತ್ಯ ಹೇಳುವ ನಮ್ಮ ನಾಲಗೆ
ಕ್ರೂರವಾಗಿ ಕಂಡಿದ್ದರೆ ಅದು ಈ ರಾಜ್ಯದ ದುರ್ದೈವ.
ನಮ್ಮ ಸತ್ಯವನ್ನು ನೀವು ಇಲ್ಲಿಯೇ ಈಗಲೇ ಬೇಕಾದರೆ
ಪರೀಕ್ಷಿಸಿಕೊಳ್ಳಿ. ಈ ಹುಡುಗ ನಕಲಿ ಜಂಗಮ.
ನಕಲಿ ಸತ್ಯಕ್ಕೆ ನಕಲಿ ಸಾಕ್ಷಿ!
ಬೇಕಾದರೆ ಅವನ ಮೈಮೇಲೆ ಲಿಂಗವಿದೆಯೇ ಅಂತ
ನೀವೇ ಪರೀಕ್ಷೆ ಮಾಡಿಕೊಳ್ಳಿರಿ. ಈತ ಯಾರೋ ನಮಗೆ ಗೊತ್ತಿಲ್ಲ.
ಹೇಳುವುದನ್ನ ಹೇಳಿಯಾಯ್ತು. ಅಪ್ಪಣೆಯಾಗಲಿ.
(ಸರನೇ ಹೋಗುವನು. ಬಿಜ್ಜಳನಿಗೂ ಹರಿಹರನ ಉದ್ಧಟತನದಿಂದ ಆಶ್ಚರ್ಯವಾಗುವದು.)

ದಾಮೋದರ : ಮಹಾಪ್ರಭು, ಈಗ ನಾನು ಒಂದೆರಡು ಮಾತಾಡಲು
ಅಪ್ಪಣೆ ಕೊಡಬೇಕೆಂದು ಪ್ರಾರ್ಥನೆ.

ಬಿಜ್ಜಳ : ಹೇಳು ನೀನು ನಿಜವಾಗಿ ಅವರ ಮಗನೊ?

ದಾಮೋದರ : ಬೇಕಾದರೆ ಸಾಕ್ಷಿಯಾಗಿ ತಾವು ಮಂತ್ರಿ ಕ್ರಮಿತರನ್ನೇ
ಕರೆಸಬಹುದು.

ಬಿಜ್ಜಳ : ಕ್ರಮಿತರೆ? ಅವರೂ ನಿನಗೆ ಗೊತ್ತ?

ದಾಮೋದರ : ಎರಡು ನಿಮಿಷ, ಎರಡೇ ನಿಮಿಷ ನಾನು ಮಾತಾಡಲೇ
ಪ್ರಭು?

ಬಿಜ್ಜಳ : ಮಾತಾಡು.

ದಾಮೋದರ : ಮಹಾಪ್ರಭು, ದಯಮಾಡಿ ನನ್ನ ತಪ್ಪನ್ನು ಕ್ಷಮಿಸಿರಿ.
ನಕಲಿ ಜಂಗಮನ ವೇಷದಲ್ಲಿ ಅರಮನೆಯ ರತ್ನದ ಸರವನ್ನು
ಕದ್ದವನು ನಾನೇ. ಕಾಶವ್ವನ ಮನೆಯಲ್ಲಿ ಅಡಗಿದವನೂ
ನಾನೇ. ಆ ಸರವನ್ನು ಮುಗ್ಧ ಸಂಗಯ್ಯನಿಗೆ ಕೊಟ್ಟು ಅವನನ್ನು
ಸೂಳೆ ಸಾವಂತ್ರಿಯ ಮನೆಗೆ ಕಳಿಸಿದವನೂ ನಾನೇ.
ಇದು ಸತ್ಯ. ಬಸವಣ್ಣ ಪಾದದಾಣೆಗೂ ಸತ್ಯ. ನನ್ನ ಸಾಕ್ಷಿ
ಕಾಶವ್ವ ಮತ್ತು ಕಳ್ಳ ಚಿಕ್ಕಣ್ಣ ಹೊರಗಿದ್ದಾರೆ, ಕರೆತರಲೆ?

ಬಿಜ್ಜಳ : ಬೇಡ. ಬಸವಣ್ಣ ಈ ಹುಡುಗ ತಾನು ಪಂಡಿತ ಹರಿಹರೇಶ್ವರರ
ಮಗ ಎಂದು ಸಾಬೀತಾಗುವತನಕ ನಾನು
ಯಾವುದೇ ತೀರ್ಮಾನ ತಕ್ಕೊಳ್ಳಲಾರೆ. ನಾಳೆ ಖುದ್ದಾಗಿ
ನಾನೇ ವಿಚಾರಿಸಿ ಒಂದು ತೀರ್ಮಾನಕ್ಕೆ ಬರುತ್ತೇನೆ.
ಆಗಬಹುದೆ?

ಬಸವಣ್ಣ : ಅಲ್ಲಿಯವರೆಗೆ ಮುಗ್ಧಸಂಗಯ್ಯ ಮತ್ತು ಈ ಹುಡುಗ….

ದಾಮೋದರ : ನನ್ನ ಹೆಸರು ದಾಮೋದರ…

ಬಸವಣ್ಣ : ನಾಳೆಯವರೆಗೆ ಮುಗ್ಧಸಂಗಯ್ಯ ಮತ್ತು ದಾಮೋದರ
ತಮ್ಮ ಬಂಧಿಗಳೆ?

ಬಿಜ್ಜಳ : ಒಂದೇ ದಿನ. ಇದು ಕಾನೂನಿನ ಮಾತು ಬಸವಣ್ಣ.

ಸಾವಂತ್ರಿ : ನಾನು ಅಡವು ನಿಲ್ಲುತ್ತೇನೆ, ಮುಗ್ಧ ಸಂಗಯ್ಯನಿಗೆ
ಕೈ ಹಚ್ಚಬ್ಯಾಡಿ ಪ್ರಭು.

ಬಸವಣ್ಣ : ನಾನು ದಾಮೋದರನಿಗೆ ಅಡವು ನಿಲ್ಲುತ್ತೇನೆ.

ಬಿಜ್ಜಳ : ಇದು ರಾಜ್ಯದ ಕಾನೂನಿನ ಗೌರವದ ಪ್ರಶ್ನೆ. ಶರಣರಿಗೆ
ಒಂದು ಸೌಲಭ್ಯ ಕೊಟ್ಟರೆ ಎಲ್ಲರಿಗೂ ಕೊಡಬೇಕಾಗುತ್ತದೆ.
ಅಲ್ಲವೆ ಬಸವಣ್ಣ?

ದಾಮೋದರ : ಹೇಳಿದ ಮಾತನ್ನು ಸಾಬೀತುಪಡಿಸಬೇಕಾದವನು ನಾನು.
ಕಳ್ಳತನದಿಂದ ಹಿಡಿದು ಮುಗ್ಧಸಂಗಯ್ಯನನ್ನು ಇಲ್ಲಿಗೆ
ಕಳಿಸುವುದರವರೆಗೆ ಕೈವಾಡವಿರೋದು ನನ್ನದು.
ಹೀಗಿರುವಾಗ ನಾನೊಬ್ಬ ತಮ್ಮ ಬಂಧಿಯಾದರೆ
ಸಾಲದೆ ಪ್ರಭು?

ಬಿಜ್ಜಳ : ಆಯಿತಯ್ಯಾ. ಹರಿಹರೇಶ್ವರ ನಿನ್ನ ತಂದೆ
ಅಂತ ಹೇಳಿದೆಯಲ್ಲಯ್ಯ? ನಿನ್ನ ಮಾತು ನಂಬಬಹುದ?

ದಾಮೋದರ : ನಂಬಲೇಬೇಕು. ಯಾಕೆಂದರೆ ಅದು ಸತ್ಯ!

ಬಿಜ್ಜಳ : ಹಾಗಿದ್ದರೆ ನಿನಗೆ ತಂದೆಯಾದವನೇ ತಂದೆ
ಎಂದು ಹೇಳಲು ಯಾಕೆ ನಿರಾಕರಿಸಿದ?
ಕೇಳಿದೆಯಾ ಬಸವಣ್ಣ ಇವನ ವಾದವನ್ನ? ಯಾವನಾದರೂ
ತಂದೆ ಕೂಡಿದ ಜನರೆದುರಿನಲ್ಲಿ ‘ನೀನು ನನ್ನ
ಮಗ ಅಲ್ಲ’ ಅಂತ ಸುಳ್ಳು ಹೇಳುವುದು ಸಾಧ್ಯವೆ?

ಸಾವಂತ್ರಿ : ಪ್ರಭು, ನ್ಯಾಯನಿರ್ಣಯ ನಿಮಗೇ ಬಿಟ್ಟದ್ದು.
ಹೇಳಬೇಕಾದ್ದನ್ನು ಎಲ್ಲರೂ ಹೇಳಿಯಾಗಿದೆ.
ನ್ಯಾಯ ಯಾರ ಪರವಾದರೂ ಸರಿ, ದಯಮಾಡಿ
ಈಗ ಅಣ್ಣನವರನ್ನು ನೋಯಿಸಬ್ಯಾಡ್ರಿ. ಅವರೀಗ
ಮೊದಲಿನ ಬಸವಣ್ಣನವರಾಗಿ ಉಳಿದಿಲ್ಲ. ಹರಳಯ್ಯ
ಮಧುವರಸರನ್ನು ಎಳೆಹೂಟೆ ಎಳಸಿದಾಗಿನಿಂದಲೂ
ಅವರು ಅನ್ನ ನೀರು ಮುಟ್ಟಿಲ್ಲ. ಹೆಚ್ಚು ಮಾತಿಲ್ಲ,
ಕತೆಯಿಲ್ಲ. ನಿಮ್ಮೊಂದಿಗೆ ಅವರು ಈ ದಿನ ಒಂದೆರಡು
ಮಾತಾಡಿದ್ದೇ ಶಿವಾಯಿ ಸತಿಯರೊಂದಿಗೆ ಕೂಡ
ಬಾಯಿ ಬಿಚ್ಚಿಲ್ಲ. ಮನೆಯಲ್ಲಿ ತಾಯಂದಿರೂ ಉಪವಾಸ.
ಸುದ್ದಿ ಗೊತ್ತಾದ ಶರಣರೂ ಬಾಯಲ್ಲಿ ನೀರು ಹಾಕಿಲ್ಲ.
ಕೈಮುಗಿಯುತ್ತೇನೆ ಮುಗ್ಧ ಸಂಗಯ್ಯನನ್ನು
ಬಿಟ್ಟುಬಿಡ್ರಿ ಪ್ರಭು. (ಅಳುತ್ತಾಳೆ)

ಬಿಜ್ಜಳ : (ಅಸೂಯೆಯಿಂದ) ಬಸವಣ್ಣ ನಿನ್ನನ್ನ ಪ್ರೀತಿ ಮಾಡ್ತಾನೇನೇ?

ಸಾವಂತ್ರಿ : ಹೌದು, ಅವರು ಎಲ್ಲರನ್ನೂ ಪ್ರೀತಿಸುತ್ತಾರೆ.
ನಿಮ್ಮನ್ನೂ ಕ್ರಮಿತರನ್ನು ಕೂಡ.
(ಹೊರಗಡೆ ಜನರ ಕೂಗಾಟ ಕಿರುಚಾಟ ಕೇಳಿಸುತ್ತದೆ ಒಳಗಿನವರಿಗೆ ಆತಂಕ)

ಬಿಜ್ಜಳ : ಏನದು ಗಲಾಟೆ?… ಯಾರಲ್ಲಿ?

ದ್ವಾರಪಾಲಕ : ತಮ್ಮವರ್ಯಾರೂ ಇಲ್ಲಿಲ್ಲ ಸ್ವಾಮೀ.
ಅಗೊ ಯಾರೋ ಬಂದರೆಂದು ಕಾಣುತ್ತದೆ.
(ಚಿಕ್ಕಣ್ಣ ಅಣ್ಣಾ ಎಂದು ಕೂಗುತ್ತ ಬಂದು ಬಸವಣ್ಣನ ಪಾದಗಳ ಮೇಲೆ ಬಿದ್ದು)

ಚಿಕ್ಕಣ್ಣ : ಅಣ್ಣಾ, ಘಾತವಾಯಿತಣ್ಣಾ!
ಹರಳಯ್ಯನ ಕೇರಿಗೆ ಬೆಂಕಿ ಬಿದ್ದಿದೆ!

ಕಾಶವ್ವ : ಅಯ್ಯೋ! ಶೀಲವಂತ – ನನ್ನ ಮನೆಯಲ್ಲಿ ಅಡಗಿದ್ದನಣ್ಣಾs….
ತಂದೇ ಅವನನ್ನು ಉಳಿಸಿರಣ್ಣಾ.

ಚಿಕ್ಕಣ್ಣ : ಮೊದಲು ಬೆಂಕಿ ಬಿದ್ದದ್ದೇ ನಿನ್ನ ಮನೆಗಮ್ಮಾ!
(ವಿಷಯ ತಿಳಿದೊಡನೆ ಬಸವಣ್ಣ ಚಕಿತನಾಗಿ ನಿಂತುಬಿಡುವನು. ಕಾಶವ್ವಅಯ್ಯೋ ನನ್ನ ಕೂಸೇ ಶೀಲವಂತಾಎಂದು ಗೋಳಿಡುತ್ತ ಎದೆ ಎದೆ ಬಡಿದುಕೊಳ್ಳುತ್ತ ಹೊರಗೆ ಓಡವಳು. ಒಂದೆರಡು ಕ್ಷಣ ಎಲ್ಲರೂ ಭ್ರಾಂತರಾಗಿ ನಿಲ್ಲುವರು. ಆಮೇಲೆ ಮುಗ್ಧ ಸಂಗಯ್ಯ ಮೈಯಲ್ಲಿ ಆವೇಶ ತುಂಬಿ ಎದ್ದು ಬಸವನ ಬಳಿ ಬಂದು ಮುಗಿಯಿತೋ ಮುಗಿಯಿತುಎಂದು ಕಾರಣಿಕ ಕೂಗಿದಂತೆ ಕೂಗುವನು.)

ಸಂಗಯ್ಯ : ಶೀಲವಂತನಿಗೆ ರಕ್ಷಣೆ ಸಿಕ್ಕಲಿಲ್ಲವೆಂಬಲ್ಲಿಗೆ
ನಮ್ಮ ಕತೆ ಮುಗಿಯಿತು ಬಸವಣ್ಣಾ.
ಭರತವಾಕ್ಯ ನುಡಿಯುವುದಕ್ಕೆ ನಗರದೇವತೆಯ ಸನ್ನಿಧಿ
ಬೇಕು. ಎಲ್ಲಿ ಆ ತಾಯಿ?

ಹುಚ್ಚಿ : (ಹೊರಬಾಗಿಲ ಕಡೆಯಿಂದ ಬರುವಳು.)
ಇಲ್ಲಯೇ ಇದ್ದೇನೆ ನನ್ನಪ್ಪಾ, ಅನಿರೀಕ್ಷಿತಗಳ
ಎದುರಿಸಲಾರದೆ ಹೆದರಿಕೊಂಡು ಜನರಲ್ಲಿ
ಕರಗಿದ್ದೇನೆ. ಎಳೆಯ ಹುಡುಗರನ್ನ ಎಳೆದೆಳೆದು
ಕೊಂದರೂ ಹೇಳಕೇಳುವವರಿಲ್ಲ ಕಲ್ಯಾಣದಲ್ಲಿ.
ನಿನ್ನ ಶರಣರಿಗೂ ರಕ್ಷಣೆ ಕೊಡಲಾರದ
ಸ್ಥಿತಿ ಬಂದಿದೆ ನನಗೆ. ನಾನೂ ಈಗ
ಮುದಿನಾಯಿಯಂತೆ ಬೊಗಳುತ್ತಿದ್ದೇನೆ, ಕ್ಷಮಿಸು ನನ್ನಪ್ಪಾ.

ಬಸವಣ್ಣ : ನೀವು ಸಣ್ಣವರಾಗಿ ಮಾತಾಡಬಾರದು ತಾಯೀ.
ನಾನು ಕಲ್ಯಾಣಕ್ಕೆ ಬಂದಾಗ
ಇವ ಯಾರವ? ಇವ ಯಾರವ? – ಎಂದು ಭಿನ್ನ
ನುಡಿ ಬಂದಾಗ “ಇವ ನಮ್ಮವ ಇವ ನಮ್ಮವ”
ಎಂದು ಒಪ್ಪಕೊಂಡಿರಿ ತಾಯಿ.
ಕಾಪಾಡಿದಿರಿ ಕೃಪೆಯ ಚಾಚಿ.
ಅವಕಾಶ ಒದಗಿಸಿಕೊಟ್ಟಿರಿ ಬೇಕಾದಷ್ಟು.
ಕೈಲಾದಷ್ಟು ಮಾಡಿದೆ ನಿಮ್ಮ ಸೇವೆಯನ್ನ.
ನನ್ನ ಸೇವೆಯಲ್ಲೇನಾದರೂ ಕೊರತೆಯಾಗಿದ್ದಲ್ಲಿ
ಮಗನ ತಪ್ಪೆಂದು ಮನ್ನಿಸಿರಿ ತಾಯೀ!

ಹುಚ್ಚಿ : ಏನು ಮಾತು ನನ್ನಪ್ಪಾ?
ನೀನು ಮಗನಾಗಿ ಸಿಕ್ಕರೆ ಯಾವ ತಾಯಿ
ಹೆಮ್ಮೆ ಪಡದೆ ಇದ್ದಳು?
ನಿನ್ನನ್ನು ಹೆತ್ತ ತಾಯಿಯ ಹೊಟ್ಟೆ ತಣ್ಣಗಿರಲಿ.
ನೀನು ನನ್ನ ಹೆಮ್ಮೆಯಾಗಿದ್ದೆ
ಅಭಿಮಾನವಾಗಿದ್ದೆ ಬಸವಾ!

ಬಸವಣ್ಣ : ಇನ್ನು ಅಪ್ಪಣೆಯೆ ತಾಯಿ?

ಹುಚ್ಚಿ : ಹೊರಟೇಬಿಟ್ಟಿರಾ?

ಸಂಗಯ್ಯ : ಹೊರಡಲೇಬೇಕಲ್ಲ ತಾಯಿ.

ಹುಚ್ಚಿ : ನಮ್ಮ ಕತೆಯ ಕೊನೆ ಬಹಳ ಅವಸರವಾಯ್ತು.
ಅಷ್ಟೇ ಕಹಿಯಾಗಿತ್ತು. ಹೀಗಾದೀತೆಂದು ನನಗೆ
ಅಂದಾಜಾಗಲೇ ಇಲ್ಲ ಬಸವಣ್ಣಾ.
ಹೊಸ ಕ್ಷಿತಿಜವನ್ನ ಎತ್ತಿ ಹಿಡಿದ ಬೆಟ್ಟವಾಗಿ
ನೀ ಬಂದೆ ಬಸವಾ ಕಲ್ಯಾಣಕ್ಕೆ!
ಸಂಜೆಯಾದೊಡನೆ ಆಕಾಶವೂ ಬಾಗುತ್ತದಪ್ಪ
ಕ್ಷಿತಿಜ ಮ್ಯಾಲೆ. ಬೆಟ್ಟ ಕುಗ್ಗಿದರೆ
ಕ್ಷಿತಿಜವೂ ಕುಸಿಯುತ್ತದೆ – ಅಂತ ವ್ಯವಹಾರ
ಜ್ಞಾನವೂ ಬೇಡವೆ?
ಕಾಲನ ಬೆಂಕಿಯಲ್ಲಿ ನಾವು ಮಾಗಲೇ ಇಲ್ಲ!