ಬಸವಣ್ಣ : ನಿಮ್ಮಿಂದ ಅಗಲುವುದಕ್ಕೆ ಕರುಳು ಕತ್ತರಿಸಿದಂತಾಗುತ್ತದೆ ತಾಯಿ!

ಹುಚ್ಚಿ : ಬಸವಾ ಬಸವಣ್ಣಾ, ನಿನ್ನ ಕನಸು ಇರುತ್ತದೆ
ನನ್ನಪ್ಪಾ – ನನಸಾಗುವವರೆಗೆ.
ಕೊಂಚ ಅವಸರವಾಯ್ತು. ಅತಿ ಉತ್ಸಾಹದಲ್ಲಿ
ಮಧ್ಯರಾತ್ರಿಯಲ್ಲೇ ಎದ್ದು ಕೂತೆ ನೀನು!
ಎದ್ದವನೇ ಮುಖಕ್ಕೆ ತಣ್ಣೀರೆರಚಿಕೊಂಡು
ಬನ್ನಿರೋ ಬನ್ನಿರಿ ಹೊಸ ಬೆಳಕಿನ ಉದಯಕ್ಕೆ!
ಅಂತ ಜನಗಳ ಕರೆದೆ.
ನಿಜ ಹೇಳಬೇಕೆಂದರೆ ಆಗಿನ್ನೂ ಬೆಳಗಿನ ತಾರೆ
ಮೂಡಿರಲೇ ಇಲ್ಲ!
ರಾತ್ರಿಯಿನ್ನೂ ಒರಗಿತ್ತು ಗುಡ್ಡದಗುಂಟ, ಕನಸು ಕಾಣುತ್ತ.
ಅವಳ ಕಾಲುದೆಸೆ ಕಾಲ ಮಲಗಿದ್ದ ತನ್ನ ಮಾಪನ
ಸಾಮಗ್ರಿಗಳ ಚೆಲ್ಲಿ.
ನಿನ್ನ ಮಾತು ಕೇಳಿಸಿಕೊಂಡ ಜನರೇನೋ
ಗುಡ್ಡವನೇರಿ ಬಂದರು. ಆದರೆ ಮುಂಬೆಳಗಿನ
ಗುರುತು ಕಾಣದೆ ಹಾಗೆ ಹಾಗೇ ನಿದ್ದೆ ಹೋದರು!
ಅವರ ರೆಪ್ಪೆಗೆ ನಿದ್ದೆಯಿನ್ನೂ ಜೋತು ಬಿದ್ದಿದೆ!

ಆಯ್ತು, ಬೆಳಗಾದ ಮ್ಯಾಲಾದರೂ ಆ ಜನ ಎದ್ದು
ನೀನು ತೋರಿಸಿದ ಭವಿಷ್ಯಂತಿಯ ಬದುಕಲೆಂದು
ಹಾರೈಸೋಣ! ನಿನಗೆ ಶುಭವಾಗಲಿ ಬಸವಣ್ಣಾ.
ಸಂಗಯ್ಯಾ….

ಸಾವಂತ್ರಿ : ನನ್ನದೊಂದು ಪ್ರಾರ್ಥನೆ ಇದೆ ಅಣ್ಣನವರೇ.

ಬಸವಣ್ಣ : ಅದೇನು ಹೇಳು ತಾಯೀ.

ಸಾವಂತ್ರಿ : ಮಹಾಮನೆಯಲ್ಲಿ ನನಗೂ ಪ್ರವೇಶಿವಿದೆಯೇ ತಂದೆ?

ಬಸವಣ್ಣ : ಮಹಾಮನೆ ಎನ್ನುವುದು ಸ್ಥಾವರವಲ್ಲ ತಾಯೀ.
ಸಂಗಯ್ಯ ಸನ್ನಿಧಿ ಕೊಟ್ಟುದೇ ಮಹಾಮನೆ.
ಸಂಗಯ್ಯನ ಸನ್ನಿಧಿಯಿಂದ

ನಿನ್ನ ಮನೆಯನ್ನೇ ಮಹಾಮನೆ ಮಾಡಿಕೊಂಡ
ಧೀರ ಶಿವಶರಣೆ ನೀನು!

ಸಾವಂತ್ರಿ : ಹಾಗಿದ್ದರೆ ಕೂಡಲ ಸಂಗಮನ ಯಾತ್ರೆಯಲ್ಲಿ
ಪಾಲ್ಗೊಳ್ಳಲು ನನಗೂ ಅವಕಾಶವಿದೆಯೆ ನನ್ನಪ್ಪ?

ಬಸವಣ್ಣ : ಖಂಡಿತವಾಗಿ ತಾಯಿ.

ಹುಚ್ಚಿ : ಮತ್ತೆ ಈ ದೊಡ್ಡಮನೆ, ಈ ಶ್ರೀಮಂತಿಕೆ?

ಸಾವಂತ್ರಿ : ಅದೆಲ್ಲ ಪೂರ್ವಾಶ್ರಮ, ಪೂರ್ವಾಶ್ರಮದ ಕಿಂಚಿತ್
ಗುರುತೂ ನನಗೆ ಬೇಡ ತಾಯಿ.

ಕಾಮಾಕ್ಷಿ : ಅಣ್ಣನವರೇ, ನನಗೂ ಅನುಮತಿ ಕೊಡ್ರಿ ತಂದೇ.

ಬಸವಣ್ಣ : ನೀನೂ ಬಾ ಮಗಳೇ!

ಹುಚ್ಚಿ : (ಸುಮ್ಮನೆ ಕುಳಿತ ಬಿಜ್ಜಳನನ್ನು ಕುರಿತು.)
ಪೀಠದ ಮ್ಯಾಲೆ ಕೂತ ದೇವರ ಹೀಗೆ ಎಬ್ಬಿಸಿ
ಕಳಿಸುವುದುಂಟೆ?
ವಿಸರ್ಜನೆಗೊಂದು ಕ್ರಮ ಅಂತ ಬೇಡವೆ?
ಹೊರಟು ನಿಂತಿದ್ದಾನೆ ಸಂಗಯ್ಯ. ಭಕ್ತಿಯಿಂದ
ಬೀಳ್ಕೊಡಿರಯ್ಯಾ, ಬಿಲ್ವಪತ್ರೆಯ ಎಲೆಯನ್ನಾದರೂ
ಅವರ ಪಾದದ ಮ್ಯಾಲಿಡಿರಿ.
(ಬಿಜ್ಜಳನೂ ಎದ್ದು ನಿಲ್ಲುವನು. ಸಂಗಯ್ಯ ಭರತವಾಕ್ಯ ನುಡಿಯುತ್ತ ಬಸವಣ್ಣಾ||’ ಎಂದು ಹೇಳಿದಲ್ಲಿ ಎಲ್ಲರೂ ಪಲ್ಲವಿಯಂತೆಕಡೇರುದ್ರಎಂದು ಕೂಗುವರು. ಹೊರಗಡೆ ಇದಕ್ಕೆ ಅನುಗುಣವಾಗಿ ಕರಡಿ ಮೇಳ ಕೇಳಿಸುವುದು.)

ಮುಗ್ಧ ಸಂಗಯ್ಯ : ಮುಗಿಯಿತೋ ಮುಗಿಯಿತು!
ಕಲ್ಯಾಣದ ನಾಟಕ ಮುಗಿಯಿತು.
ಅವಧಿಯಳಿಯಿತ್ತು ವ್ಯವಧಾನ ಉಳಿಯಿತ್ತೋ ಬಸವಣ್ಣಾ||

ನನಗೂ ನಿನಗೂ ಕೂಡಲ ಸಂಗಮದಲ್ಲಿ
ಪರಿಣಾಮ!
ಮನಮುಟ್ಟಿ ಮಾಡಿದ್ದೇವೆ
ಕೊನೆ ಮುಟ್ಟದಿದ್ದರೆ ಹೆಂಗೆಂದು
ಉಳಿದವರು ಉಳಿವಿಯಲ್ಲಿ ಹಲುಬುವರೋ ಬಸವಣ್ಣಾ||

ಬಸವನಿಲ್ಲದ ಕಲ್ಯಾಣಿಗೆ
ಕನ್ನಡಿಯಲ್ಲಿ ಕಲ್ಯಾಣವ ಕಂಡು
ಇತಿಹಾಸದಲ್ಲಿ ಗೋಗರೆಯುವುದೇ ಪರಿಣಾಮ.
ನಡೆಯೋ ನಡೆಯಿನ್ನು ಕೂಡಲ ಸಂಗಮಕ್ಕೆ ಬಸವಣ್ಣಾ||
(ಎಂದು ಘರ್ಜಿಸಿ ಮುಂದೆ ಮುಂದೆ ನಡೆಯುವನು. ಅವನ ಮಾತಿಗೆ ತಕ್ಕಂತೆ ಹೊರಗೆ ಕರಡಿಯ ಮಜಲು ಜೋರಾಗಿ ಕೇಳಿಸುವುದು. ಸದ್ದಿನಲ್ಲಿ ಮುಗ್ಧ ಸಂಗಯ್ಯನ ಹಿಂದೆ ಹಿಂದೆ ಬಸವಣ್ಣ, ಮಂತ್ರಮುಗ್ಧಳಾಗಿ ಕೈಮುಗಿದ ಹುಚ್ಚಿಯೂ ಹೋಗುವರು. ಬಿಜ್ಜಳನಿಗೆ ನಮಸ್ಕರಿಸಿ ಸಾವಂತ್ರಿ, ಕಾಮಾಕ್ಷಿಯರೂ ಹಾಗೂ ಚಿಕ್ಕಣ್ಣನೂ ಹೋಗುವರು. ಬಸವಣ್ಣ ಹೊರಟಾಗ ಬಿಜ್ಜಳ, ದಾಮೋದರರು ಗರಬಡಿದಂತೆ ನಿಲ್ಲುವರು. ಹಾಗೆ ನಿಂತೇ ಇದ್ದ ಬಿಜ್ಜಳನನ್ನು ನೋಡಿ ದಾಮೋದರ ತಾನೂ ಹೋಗಬೇಕೆ? ಇರಬೇಕೆ? ತಿಳಿಯದೆ ಹೊರಡಲು ಅನುವಾದಾಗ ಬಿಜ್ಜಳ ಸನ್ನೆ ಮಾಡಿ ಅವನನ್ನು ನಿಲ್ಲಿಸುವನು. ಭಯಂಕರ ಸದ್ದಿನಿಂದ ಕೂಡಿದ ಇಡೀ ವಾತಾವರಣ ತಣ್ಣಗಾಗುವ ತನಕ ಸುಮ್ಮನಿದ್ದು ಆಮೇಲೆ)

ದ್ವಾರಪಾಲಕ : (ಪ್ರವೇಶಿಸಿ) ಮಹಾಪ್ರಭು ಕೊತವಾಲರು ಬಂದಿದ್ದಾರೆ.

(ದ್ವಾರಪಾಲಕ ಹೋಗಿ, ಕೊತವಾಲ ಬಂದು ನಮಸ್ಕರಿಸಿ ನಿಲ್ಲುವನು.)

ಬಿಜ್ಜಳ : (ದಾಮೋದರನನ್ನು ತೋರಿಸಿ) ಈತ ಗೊತ್ತೊ ನಿನಗೆ?

ಕೊತವಾಲ : ಗೊತ್ತು ಪ್ರಭು, ಅರಮನೆಯಲ್ಲಿ ಸರ ಕದ್ದಾಗಿನಿಂದ ಹಿಡಿದು ಈವರೆಗಿನ…

ಬಿಜ್ಜಳ : ಇರು. ಈತ ಅರಮನೆಯಲ್ಲಿ ಸರ ಕದ್ದು, ಕಾಶವ್ವನ ಮನೆಯಲ್ಲಿ ಅಡಗಿ,
ಮುಗ್ಧಸಂಗಯ್ಯನಿಗೆ ಸರಕೊಟ್ಟು, ಸೂಳೆ ಸಾವಂತ್ರಿಯ ಮನೆಗೆ ಕಳಿಸಿದ,
ಸರಿಯ?

ಕೊತವಾಲ : ಸರಿಯಾಗಿದೆ ಮಹಾಪ್ರಭು.

ಬಿಜ್ಜಳ : ಈ ವಿಷಯವನ್ನೂ ಇವನೇ ಹೇಳಿಕೊಂಡ. ಈತ
ಹರಿಹರೇಶ್ವರನ ಮಗನಂತೆ. ಹೌದೊ?

ಕೊತವಾಲ : ಹೌದು ಪ್ರಭು.

ಬಿಜ್ಜಳ : (ಅನುಮಾನದಿಂದ) ಹರಿಹರೇಶ್ವರನಿಗೆ ಎಷ್ಟು ಜನ ಹೆಂಡಂದಿರು?

ಕೊತವಾಲ : ಒಬ್ಬಳೇ ಹೆಂಡತಿಯ ಒಬ್ಬನೇ ಮಗ ಇವನು.
ತಂದೆ ತಾಯಿ ಮತ್ತು ಮಗ ಜೊತೆಯಲ್ಲೇ ಇದ್ದಾರೆ.
ಮುಖ್ಯ ಇವನೊಬ್ಬ ಬಂಡುಕೋರ, ಪ್ರಗತಿವಾದಿ ಮಹಾಪ್ರಭು.
ಹಳೆಯ ಸಂಪ್ರದಾಯಗಳನ್ನು ವಿರೋಧಿಸಿ ಎಳೆಯ ವಯಸ್ಸಿನಲ್ಲೇ
ತನ್ನ ಕುಲಬಾಂಧವರಲ್ಲಿ ವಿರೋಧಿಗಳನ್ನು ಸಂಪಾದಿಸಿದ್ದಾನೆ.

ಬಿಜ್ಜಳ : ಇಂಥವನು ಕಳ್ಳತನ ಯಾಕೆ ಮಾಡಿದ?

ಕೊತವಾಲ : ನನಗೂ ಅದೇ ಆಶ್ಚರ್ಯ ಮಹಾಪ್ರಭು!
ಸಾಲದ್ದಕ್ಕೆ ಇವನು ನಿಷ್ಠುರವಾದಿ, ಸುಳ್ಳುಗಾರನಲ್ಲ.
ಯಾರ ಮಾತಿಗೂ ಮನ್ನಣೆ ಕೊಟ್ಟವನಲ್ಲ.
ಕಳ್ಳತನ ಮಾಡಲಿಕ್ಕೆ ಇವನಿಗೆ ಸ್ವಂತದ್ದೇನೋ ಉದ್ದೇಶ
ಇರಬೇಕೆಂದೇ ಇವನನ್ನು ಬಲ್ಲವರು ಹೇಳುತ್ತಾರೆ
ಮಹಾಪ್ರಭು.

ಬಿಜ್ಜಳ : ಇದಿನ್ನೂ ವಿಚಿತ್ರ! ಅಂದರೆ ಇವನು ಈವರೆಗೆ ಹೇಳಿದ್ದೆಲ್ಲಾ
ನಿಜ ಎಂದಂತಾಯ್ತು.
ಹೇಳು ಇನ್ನೇನು ಸುದ್ದಿ?

ಕೊತವಾಲ : ಹರಳಯ್ಯನ ಕೇರಿಗೆ ಬೆಂಕಿ ಹಚ್ಚಿದರು
ಮಹಾಪ್ರಭೂ. ಶೀಲವಂತ ಸುಟ್ಟುಕೊಂಡು ಸತ್ತ.

ಬಿಜ್ಜಳ : (ಆಘಾತಗೊಂಡು) ಬೆಂಕಿ ಹಚ್ಚಿದವರ್ಯಾರು?

ಕೊತವಾಲ ; ಕ್ರಮಿತರ ಕಡೆಯವರು ಪ್ರಭು.

ಬಿಜ್ಜಳ : ಮೂರ್ಖಾ, ಏನು ನಡೆದರೂ ಅವರನ್ನೇ ಗುರಿ
ಮಾಡುತ್ತೀಯಲ್ಲ? ಈ ಮಾತಿಗೆ ಸಾಕ್ಷಿ ಏನು?

ಕೊತವಾಲ : ಬೆಂಕಿ ಹಚ್ಚಿ ಓಡುವಾಗ ಜನರೇ ಬೆಂಕಿ ಹಚ್ಚಿದವರನ್ನು
ಹಿಡಿದು ಎದುರಿನಲ್ಲೇ ಇವರು ತಮ್ಮ ಪ್ರತಾಪಗಳನ್ನು
ಕೊಚ್ಚಿಕೊಂಡು ಕ್ರಮಿತರಿಗೆ ಜಯಕಾರ ಕೂಗಿದರು!

ಬಿಜ್ಜಳ : ನೀನೆಲ್ಲಿದ್ದೆ? ರಾಜಭಟರೇನು ಮಾಡುತ್ತಿದ್ದರು?

ಕೊತವಾಲ ; ನಾವೆಲ್ಲ ಅಲ್ಲೇ ಇದ್ದಿವಿ ಮಹಾಪ್ರಭು. ಶೀಲವಂತ
ಈಗ ಪ್ರಭುಗಳ ರಕ್ಷಣೆಯಲ್ಲಿದ್ದಾನೆಂದೂ ಹೇಳಿದೆವು.
ನಮ್ಮೊಂದಿಗೆ ಸಂವಾದ ಮಾಡುತ್ತಲೇ ನಮ್ಮನ್ನು
ಇನ್ನೊಂದು ಬದಿಗೊಯ್ದು, ಉಳಿದಿಬ್ಬರು ಕಾಶವ್ವನ
ಮನೆ ಕಡೆ ಓಡಿ ಕೊಳ್ಳಿಯಿಟ್ಟರು ಮಹಾಪ್ರಭು.
ಎದುರಾದ ನಮ್ಮಿಬ್ಬರು ರಾಜಭಟರನ್ನೂ ಬಲಿ
ತಗೊಂಡರು. ಅಪರಾಧಿಗಳನ್ನು ಕಟ್ಟಿ ತಂದಿದ್ದೇನೆ,
ಕರೆತರಲೆ ಮಹಾಪ್ರಭು?

ಬಿಜ್ಜಳ : ಬೇಡ. ಬಂಧನದಲ್ಲಿರಲಿ. ನಾಳೆ ವಿಚಾರಿಸೋಣ.
ಅಂಗರಕ್ಷಕರೆಲ್ಲಿ?

ಕೊತವಾಲ : ಯಾರೊಬ್ಬರೂ ಇಲ್ಲ ಪ್ರಭು!

ಬಿಜ್ಜಳ : ಬಸವಣ್ಣನ ಜೊತೆಗೆ ಹೊದರೆ?

ಕೊತವಾಲ : ಕಳ್ಳನನ್ನು ಹುಡುಕಿಕೊಂಡು ಅಲ್ಲಿಗೂ ಹೋಗಿದ್ದೆ.
ಬಸವಣ್ಣನವರೊಂದಿಗೆ ಹೋದವರಲ್ಲಿ ನಮ್ಮವರ್ಯಾರೂ
ಇರಲಿಲ್ಲ ಮಹಾಪ್ರಭು.

ಬಿಜ್ಜಳ : ಬಸವಣ್ಣ ಹೋದನ?

ಕೊತವಾಲ ; ಮೊದಲು ಬೆಂಕಿ ಬಿದ್ದ ಗುಡಿಸಲು ಮನೆಗಳಿಗೆ
ಹೋಗಿ ಸಮಾಧಾನ ಹೇಳಿ, ಕೆಲವು ಕರ್ತವ್ಯಗಳನ್ನು
ತಮಗೆ ತಿಳಿಸಲು ನನಗೆ ಹೇಳಿ ಹೋದರು. ಅವರೊಂದಿಗೆ
ಲೆಕ್ಕವಿಲ್ಲದಷ್ಟು ಶರಣರು ಹೋದರು ಮಹಾಪ್ರಭು.

ಬಿಜ್ಜಳ : ಹೊರಗೆ ಭಾರೀ ಕತ್ತಲಿರಬೇಕಲ್ಲಾ?

ಕೊತವಾಲ : ಶಿವರಾತ್ರಿಯ ಕತ್ತಲು. ಶೈವ ದೇವಸ್ಥಾನಗಳಲ್ಲಿ ಕೂಡ
ದೀಪ ಹಚ್ಚಿಲ್ಲ.

ಬಿಜ್ಜಳ : ವೇಷಾಂತರದಲ್ಲಿ ತಲೆ ಬಗ್ಗಿಸಿ ಬಂದೆನಾದ್ದರಿಂದ
ನಮಗೆ ಸರಿಯಾಗಿ ಕಾಣಲಿಲ್ಲ. ಹೊರಗಡೆ ಜನ ಇದ್ದಾರೇನು?

ಕೊತವಾಲ : ಇಡೀ ಕಲ್ಯಾಣ ಶಿವರಾತ್ರಿಯ ಕತ್ತಲಲ್ಲಿ ಮುಳುಗಿ
ಹೋದರೂ ಯಾರೊಬ್ಬರಿಗೂ ನಿದ್ರೆ ಇಲ್ಲ. ಮಹಾಪ್ರಭೂ.

ಎಲ್ಲರೂ ಕದ್ದು ತಮ್ಮ ಕಿವಿ ಕಣ್ಣುಗಳನ್ನು ಸಾವಂತ್ರಿಯ
ಮನೆಯ ಕಡೆಗೇ ನೆಟ್ಟಿದ್ದರು. ಮಾಹಾರಾಜ ಮತ್ತು
ಮಂತ್ರಿ ಒಬ್ಬಳೇ ಸೂಳೆಯ ಮನೆಯಲ್ಲಿದ್ದಾರೆಂಬುದೇ
ಭಯಂಕರ ಸುದ್ದಿಯಾಗಿತ್ತು
ಆದರೆ ಬಸವಣ್ಣನವರು ಹೊರಬಂದು ಕೂಡಲ
ಸಂಗಮಕ್ಕೆ ಹೊರಟೊಡನೆ  ಎಲ್ಲರೂ ಅವರ
ಬೆನ್ನ ಹಿಂದಿನಿಂದ ಹೋಗೇಬಿಟ್ಟರು ಮಹಾಪ್ರಭು!

ಬಿಜ್ಜಳ : (ಖೇದದಿಂದ) ಬಸವಣ್ಣನ ಕೊನೆಯ ಆಸೆಯನ್ನೂ
ಈಡೇರಿಸಲಾಗಲಿಲ್ಲ, ನನಗೆ!
ಆಯ್ತು ನೀನು ಹೋಗಿ ಅಂಗರಕ್ಷಕರನ್ನು
ಕರೆದುಕೊಂಡು ಬಾ.

ಕೊತವಾಲ : ಆಗಲಿ ಪ್ರಭು (ಹೋಗುವನು).

ಬಿಜ್ಜಳ : ಇವತ್ತು ಶಿವರಾತ್ರಿ ಅಲ್ಲವೆ?

ದಾಮೋದರ : ಹೌದು ಮಹಾಪ್ರಭು.

ಬಿಜ್ಜಳ : ಕಲ್ಯಾಣವೆಲ್ಲಿ ಖಾಲಿ ಖಾಲಿ ಆದಂತಿದೆಯಲ್ಲಾ?

ದಾಮೋದರ : ಹೌದು ಪ್ರಭು.

ಬಿಜ್ಜಳ : (ಬಂದು ಕೂತುಕೊಂಡು) ಈ ಸರ ಕದ್ದವನು ನೀನು, ಅಂತಾಯ್ತು.

ದಾಮೋದರ : ಹೌದು ಪ್ರಭು.

ಬಿಜ್ಜಳ : ನೀನು ಹರಿಹರೇಶ್ವರರ ಮಗ;
ನೀನ್ಯಾವಾಗ ಜಂಗಮನಾದೆ?

ದಾಮೋದರ : ಸರದ ಕಳ್ಳತನಕ್ಕಾಗಿ ಇವತ್ತೇ ಜಂಗಮನ ವೇಷ
ಧರಿಸಿದ್ದೆ ಪ್ರಭು.

ಬಿಜ್ಜಳ : ಅರಮನೆಯಲ್ಲಿ ಕಳ್ಳತನ ಮಾಡಿದ್ದಕ್ಕೆ
ಶಿಕ್ಷೆ ಏನೆಂದು ನಿನಗೆ ಗೊತ್ತೊ?

ದಾಮೋದರ : ಸಿದ್ಧನಾಗೇ ಬಂದಿದ್ದೇನೆ.

ಬಿಜ್ಜಳ : ಜಂಗಮನ ವೇಷದಲ್ಲಿ ಕಳ್ಳತನ ಮಾಡಿದೆ.
ಅದು ತಪ್ಪು ಅಂತ ಯಾಕೆ, ಯಾವಾಗ ಅನ್ನಿಸ್ತು?

ದಾಮೋದರ : ಕಳ್ಳ ಚಿಕ್ಕಯ್ಯನನ್ನು ನೋಡಿದ ಮೇಲೆ ಅನ್ನಿಸ್ತು ಪ್ರಭು.
ದುರಾಸೆಯ ಪ್ರಚೋದನೆಗೆ ಒಳಗಾಗಿ ಜಂಗಮನ ವೇಷ
ಹಾಕಿದೆ. ಸರ ಕೊಟ್ಟು ತಂದೆ ತಾಯಿಗಳನ್ನು ಸಂತೋಷ
ಪಡಿಸುವೆನೆಂದೂ ನಂಬಿದ್ದೆ. ಇಷ್ಟೊಂದು ಬೆಲೆಬಾಳುವ
ಸರ, ನಾವು ಏಳೇಳು ಜನ್ಮ ದುಡಿದರೂ ಗಳಿಸಲಾರದ
ಒಂದು ಸರ ಇಷ್ಟು ಸುಲಭವಾಗಿ ಸಿಗುತ್ತಲ್ಲಾ ಎಂದು
ಆನಂದವಾಯ್ತು, ಕದ್ದೆ. ಆದರೆ ಇವೆಲ್ಲಕ್ಕಿಂತ ಪ್ರಬಲವಾದ ಕಾರಣ
ಬೇರೆ ಇನ್ನೊಂದು ಇದೆ ಎಂದು ನನ್ನ ಭಾವನೆ, ಪ್ರಭು
ತಾವು ಕ್ಷಮಿಸುವುದಾದರೆ ಹೇಳುತ್ತೇನೆ.

ಬಿಜ್ಜಳ : ಆಯ್ತು, ಕ್ಷಮಿಸಿದ್ದೇನೆ ಹೇಳು.

ದಾಮೋದರ : ಕಾಮಾಕ್ಷಿಯ ಮೇಲೆ ನನಗೂ ಆಸೆಯಾಗಿತ್ತು ಪ್ರಭು.

ಬಿಜ್ಜಳ : ಓಹೋ ನೀನೂ ನನ್ನ ಪ್ರತಿಸ್ಪರ್ಧಿಯೊ?

ದಾಮೋದರ : ಕ್ಷಮಿಸುತ್ತೇನೆಂದು ಹೇಳಿದಿರಿ.

ಬಿಜ್ಜಳ : ಮುಂದೆ ಹೇಳು.

ದಾಮೋದರ : ಕಳ್ಳತನವನ್ನೇನೋ ಮಾಡಿದೆ. ಆದರೆ ಕೊತವಾಲರ
ಕಣ್ಣಿಗೆ ಬಿದ್ದು ಓಡಿಹೋಗಿ ಕಾಶವ್ವನ ಮನೆಯಲ್ಲಿ ಅಡಗಿದೆ.

ಬಿಜ್ಜಳ : ನಿಮ್ಮ ಮನೆಗ್ಯಾಕೆ ಹೋಗಲಿಲ್ಲ?

ದಾಮೋದರ : ತಮ್ಮ ಕೊತವಾಲರು ನನ್ನ ಮುಖ ಗುರುತಿಸಬಹುದೆಂಬ
ಭಯದಿಂದಾಗಿ ಹರಳಯ್ಯನ ಕೇರಿಗೆ ಒಡಿದೆ.
ಅದು ವಕ್ರದಾರಿಗಳ, ಸಣ್ಣ ಬೀದಿಗಳ ಕೇರಿ ಪ್ರಭು.
ಬಚಾವಾಗುವುದು ಸುಲಭವೆಂದು ಅಲ್ಲಿ ಹೋಗಿ
ಕಾಶವ್ವನ ಮನೆಯಲ್ಲಿ ಅಡಗಿದೆ. ಸರವನ್ನು ಕಾಶವ್ವ,
ಮತ್ತವಳ ಗಂಡ ಕಸಿಯಬಹುದೆಂದುಕೊಂಡಿದ್ದೆ.
ಆದರೆ ಅಂತ್ಯಜಳಾದ ಕಾಶವ್ವ ಮತ್ತು ಅವಳ ಗಂಡನಿಗೆ
ಇದು ಸತ್ತ ಹೆಗ್ಗಣದಂತೆ ಕಂಡಿತು! ಅಷ್ಟೇ ಅಲ್ಲ,
ಅದನ್ನು ರಸ್ತೆಗೆ ಬಿಸಾಕಲಿದ್ದಾಗ ಆಘಾತವಾಯ್ತು ಪ್ರಭು!
“ಇದರ ಬೆಲೆ ಎಷ್ಟೆಂದು ಗೊತ್ತೆ?” ಅಂದೆ.
“ಎಷ್ಟಾದರೇನಪ್ಪ? ಕಾಯಕದಿಂದ ಬಾರದ್ದು ನಮಗೆ ಬೇಡ”
ಅಂದರಲ್ಲಿ ಪ್ರಭು! ಇಲ್ಲಿ ಬಂದರೆ ಇನ್ನೊಂದು ಆಘಾತ!
ಸಾಮಾನ್ಯವಾಗಿ ಚೆಲುವೆಯರು, ತರುಣಿಯರು ಉತ್ಕಟವಾಗಿ
ಬಯಸುವ ಸರ ಇದು. ಕಾಮಾಕ್ಷಿ ಕೂಡ ಇದು
ತನ್ನ ದೇಹದ ದಿನದ ಬೆಲೆಗಿಂತ ಹೆಚ್ಚನದೆಂದು
ನಿರಾಕರಿಸಿದಳಂತಲ್ಲ! ಇವರೆಲ್ಲಾ ನಮ್ಮೊಂದಿಗೇ
ಬದುಕುತ್ತಿರುವರಾ? ಆದರೆ ಎಷ್ಟೊಂದು ಭಿನ್ನವಾದ
ಲೋಕದಲ್ಲಿದ್ದಾರೆ! ಇಂಥದೊಂದು ದೇವಲೋಕವನ್ನು
ಬದುಕುತ್ತಿರುವವರು ನಮ್ಮಲ್ಲೇ ಇದ್ದಾರಲ್ಲ!
ನಾನೊಂದು ಪ್ರಶ್ನೆ ಕೇಳಲೆ ಪ್ರಭು?

ಬಿಜ್ಜಳ : ಕೇಳು.

ದಾಮೋದರ : ಇಂಥ ನಡೆಯನ್ನು ಉಚ್ಚ ಕುಲದವರಿಂದ
ತಾವು ನಿರೀಕ್ಷಿಸುತ್ತೀರಾ?

ಬಿಜ್ಜಳ : ಸರಿಯಾಗಿ ಹೇಳಿದೆ, ಸಾಧ್ಯವಿಲ್ಲ ಹುಡುಗಾ!

ದಾಮೋದರ : ಹಾಗಿದ್ದರೆ ಇವರಿಬ್ಬರಲ್ಲಿ ಯಾರು ಕುಲಜರು ಪ್ರಭು?

ಬಿಜ್ಜಳ : ಆದರೆ ಪದ್ಧತಿಯೊಂದಿದೆಯಲ್ಲ ಮಾರಾಯಾ.

ದಾಮೋದರ : ಮಹಾಮನೆಯ ನಡತೆ ನಮ್ಮ ನಿಮ್ಮಂಥವರಿಗೆ
ಜೀರ್ಣವಾಗದ್ದು ಪ್ರಭು. ಇಷ್ಟು ದಿವಸ ದೂರದಿಂದ
ಕೇಳಿ ತಿಳಿದಿದ್ದೆ, ಇವತ್ತು ಪ್ರತ್ಯಕ್ಷ ಕಂಡೆ!
ಮಾನವ ಜೀವನ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾವಣೆಗೆ
ಒಳಪಡಿಸುವ ಪ್ರಯೋಗವೊಂದು ಕಲ್ಯಾಣದಲ್ಲಿ ನಡೆಯುತ್ತಿದೆ
– ಅಂತ ಸರದ ನೆಪದಲ್ಲಾದರೂ
ನಮಗೆ ತಿಳಿಯಲಿಲ್ಲವಲ್ಲ ಪ್ರಭು!
ವ್ಯವಸ್ಥೆಗಾಗಿ ನೀವಿಷ್ಟು ಹೆಣಗಿದರೂ ನಿಮ್ಮ ವ್ಯವಸ್ಥೆಗೇ
ಒಂದು ಕಟ್ಟುನಿಟ್ಟಿಲ್ಲ. ಅದರ ಮೇಲೆ ತಮಗೇ ನಿಯಂತ್ರಣವಿಲ್ಲ!
ಮಹಾಮನೆಗೆ ಅದು ಇದೆ!
ಆದ್ದರಿಂದಲೇ ಸಾವಂತ್ರಿ, ಚಿಕ್ಕಯ್ಯನಂಥವರ ಕತೆಗಳಿಗೆ ಅರ್ಥ
ಬಂತು. ಅರಮನೆಗೆ ಸೂಳೆಯಾದವಳು ಮಹಾಮನೆಯಲ್ಲಿ ಶಿವಶರಣೆ,
ಬಸವಣ್ಣನವರ ತಾಯಿಯಾಗುತ್ತಾಳೆಂದರೆ ಇದು
ಪವಾಡವಲ್ಲವೆ ಪ್ರಭು?