ಬಿಜ್ಜಳ : ಅರಮನೆಯಲ್ಲಿ ಕಳ್ಳತನ ಮಾಡಿದವನು ನಾನೇ ಅಂತ
ನೀನು ಒಪ್ಪಿಕೊಂಡಾಗ ನನಗೆ ಸಂತೋಷವಾಗಿತ್ತಯ್ಯ.
ಆದರೆ ಬರ್ತಾ ಬರ್ತಾ ನೀನು ಶರಣನಾಗಿ ಪರಿವರ್ತನೆ
ಹೊಂದುತ್ತ ಇದ್ದೀ ನೋಡು, ನನ್ನ ಸಂತೋಷ
ಮಾಯವಾಯ್ತು. ನೀನು ಶರಣನಾಗಿ ಎಷ್ಟು ದಿನ ಆಯ್ತು?

ದಾಮೋದರ : ನಾನಿನ್ನೂ ದೀಕ್ಷೆ ತಗೊಂಡಿಲ್ಲ ಪ್ರಭು.

ಬಿಜ್ಜಳ : ಈಗ ಹೇಳು: ಅರಮನೆಯಲ್ಲಿ ಕಳ್ಳತನ ಮಾಡೋದಕ್ಕೆ
ನಿನಗೆ ಪ್ರಚೋದನೆ ಕೊಟ್ಟವರು, ಅರಮನೆಯ ಬಳಕೆ
ಇರುವ ಹರಿಹರೇಶ್ವರರೇ ಎನ್ನುವುದರಲ್ಲಿ ಸಂದೇಹವಿಲ್ಲ,
ಅವರು ಮಾಡಿದ್ದು ವಿಶ್ವಾಸದ್ರೋಹ ಅಲ್ಲವೇನಯ್ಯಾ?

ದಾಮೋದರ : ತಾವು ಹೇಳುವ ಪ್ರತಿಯೊಂದು ಚಾಡಿಗೆ ಮಹಾರಾಜರ ಕಿವಿ
ಹೂವಿನಂತೆ ಅರಳುವುದಾದರೆ, ಚಾಡಿಯ ನಂಬಿ
ಮಹಾರಾಜರು ಇಷ್ಟೊಂದು ಕೊಲೆ ಮಾಡಬಹುದಾದರೆ
ನಿಮ್ಮ ನೆರಳುಗಳಾದ ಅವರ್ಯಾಕೆ ನಂಬಿಕೆಯ
ಪ್ರಯೋಜನ ಪಡೆಯಬಾರದು ಪ್ರಭು?

ಬಿಜ್ಜಳ : ಬಸವಣ್ಣ ಮಾಡಿದ್ದೂ ಅದನ್ನೇ. ಶರಣರ ಕಣ್ಣಲ್ಲಿ
ನನ್ನನ್ನ ರಾಕ್ಷಸನನ್ನಾಗಿ ಮಾಡಿ ನನ್ನಿಂದ ಎಲ್ಲ ಎಲ್ಲವನ್ನು
ಕಸಿದುಕೊಂಡ, ನನ್ನ ಪ್ರೀತಿ ಮತ್ತು ಜನಪ್ರಿಯತೆಯನ್ನ ಕೂಡ.

ದಾಮೋದರ : ಹಾಗೆಂದು ನಂಬುವುದು ನಿಮಗೆ ಇಷ್ಟವಾದುದರಿಂದ
ಹಾಗೆ ಹೇಳುತ್ತಿದ್ದೀರಿ – ನನ್ನಿಂದ ಸಮರ್ಥನೆ ಬಯಸಿ.
ದಲಿತರು ಮತ್ತು ಬಡವರಿಗೆ ಸೌಲಭ್ಯಗಳನ್ನ ಕಲ್ಪಸಿದಾಗ –
ಮುಖ್ಯವಾಗಿ ಅವರ ಆತ್ಮಗೌರವವನ್ನು ಮನ್ನಿಸಿದಾಗ
ಅದೇ ಜನಗಳಲ್ಲಿ ತಾವೂ ಜನಪ್ರಿಯರಾಗಿದ್ದಿರಿ ಪ್ರಭು.
ಹಾಗೇ ಮುಂದುವರಿದಿದ್ದರೆ ಕಲ್ಯಾಣವನ್ನ ಅಮರಾವತಿಯನ್ನಾಗಿ
ಮಾಡುವುದೂ ಸಾಧ್ಯವಿತ್ತು. ಆದರೆ ಚಾಡಿಗಳನ್ನ
ನಂಬಿ ಕಲ್ಯಾಣವನ್ನ ನರಕ ಮಾಡಿದಿರಿ.
ಹಿಂದೆ ಪ್ರಜೆಗಳ ಮಧ್ಯೆ, ಬಸವಣ್ಣನ ಪಕ್ಕದಲ್ಲಿ ನಿಂತಾಗಿನ
ಬಿಜ್ಜಳ ಉಜ್ವಲ ಕನಸುಗಳಿಂದ ಫಳಫಳ ಹೊಳೆವ
ತರುಣನಾಗಿದ್ದ. ಈಗ ಇಂದ್ರನ ಮಾದರಿಯ ಕಿರೀಟ,
ಜಗಮಗ ಆಭರಣ ಧರಿಸಿ ಚಾಡಿಕೋರರ ಕಣ್ಣಲ್ಲಿ
ನೋಡಿಕೊಳ್ಳುತ್ತಿದ್ದೀರಿ. ಈಗ ಹ್ಯಾಗೆ ಕಾಣುವಿರಿ ಗೊತ್ತ ಪ್ರಭು?

ಬಿಜ್ಜಳ : (ಅಸಮಾಧಾನದಿಂದ) ಹ್ಯಾಗೆ?

ದಾಮೋದರ : ತರುಣ ಬಿಜ್ಜಳನ ಭೂತದಂತೆ!

ಬಿಜ್ಜಳ : (ರೇಗಿ) ಎಲಾ ಅಯೋಗ್ಯ: ಕಲ್ಯಾಣ ನರಕವಾಗಿದ್ದರೆ
ನನ್ನೆದುರಿಗೆ ನನ್ನನ್ನೇ ಏಕವಚನದಲ್ಲಿ ಹೆಸರಿಸಲು ನಿನಗೆ ಧೈರ್ಯ

ಬರುತ್ತಿತ್ತೆ? ಮಹಾರಾಜರೆದುರಿಗೆ ನಿಂತು ಕುಲಜರ
ಕುನ್ನಿಯೊಂದು ಹೀಗೆ ಮಾತಾಡಲಾಗುತ್ತಿತ್ತೆ?
(ಬಿಜ್ಜಳ ಕೋಪದ ಆವೇಶದಲ್ಲಿ ತಾನೇನು ಮಾಡುತ್ತಿರುವೆನೆಂಬ ಅರಿವಿಲ್ಲದೆ ಸೊಂಟದ ಚೂರಿ ಹಿರಿದು ದಾಮೋದರನನ್ನು ಇರಿಯುವನು. ದಾಮೋದರ ಚೀರಿ ಒದ್ದಾಡಿ ಸಾಯುವನು. ದಾಮೋದರನ ಭಯಂಕರ ಸಾವಿನಿಂದ ಕಂಗಾಲಾದ ಬಿಜ್ಜಳ ಹೆಣವನ್ನು ಪೀಠದ ಮರೆಯಲ್ಲಿಡಲು ಯತ್ನಿಸುತ್ತಾನೆ. ಅಷ್ಟರಲ್ಲಿ ಹೊರಗಡೆ ಹುಚ್ಚಿ ಮತ್ತು ದ್ವಾರಪಾಲಕರ ಮಾತು ಕೇಳಿ ಇನ್ನಷ್ಟು ಹತಾಶನಾಗುವನು.)

ದ್ವಾರಪಾಲಕ ೨ : ಅಲ್ಲಿ ಯಾರಿದ್ದೀರಿ? ಯಾರು ಈ ಹುಚ್ಚಿಯನ್ನ ಒಳಗೆ ಬಿಟ್ಟವರು?

ಹುಚ್ಚಿ : ಯಾರ್ಯಾಕಯ್ಯಾ ಬಿಡಬೇಕು? ನಾನೇ ಒಳಗೆ ಬಂದೆ.
ನಾನು ರಾಜನನ್ನ ನೋಡಬೇಕು.

ದ್ವಾರಪಾಲಕ ೨ : ಈಗವರು ಯಾರನ್ನೂ ನೋಡುವದಿಲ್ಲಮ್ಮ.

ಹುಚ್ಚಿ : ನೀನು ಹೋಗಿ ಹೇಳಪ್ಪ ಅವನಿಗೆ.
ಒಳಗಡೆ ಯಾರೋ ಕಿರಿಚಿದ್ದು ಕೇಳಿಸಿತು.
ನಿನಗೆ ಕೇಳಿಸಲಿಲ್ಲವೆ?

ದ್ವಾರಪಾಲಕ ೨ : ನೋಡಮ್ಮಾ ನೀನು ಇಷ್ಟರ ಮಟ್ಟಿಗೆ ಒಳಗೆ ಬಂದದ್ದೇ
ಹೆಚ್ಚು. ನಿನ್ನ ನೋಡಿದರೆ ಅಯ್ಯೋ ಅನ್ನಿಸ್ತದೆ. ನಾನೇ
ನಿನ್ನನ್ನ ಹೊರಗೆ ಬಿಟ್ಟು ಬರ್ತೀನಿ ಬಾ.

ಹುಚ್ಚಿ : ಹೊರಗೆ ಹೋಗಲಿಕ್ಕೆ ಬಂದವಳಲ್ಲ ನಾನು.
ನೀನೂ ತೊಂದರೆ ತಗೋಬೇಡ. ಹೋಗಿ ರಾಜನಿಗೆ
ಹೇಳು: ನಾನವನನ್ನ ಭೇಟಿಯಾಗಬೇಕು.

ದ್ವಾರಪಾಲಕ ೨ : ಮಹಾರಾಜರನ್ನ ನೋಡೋದು ಸಾಧ್ಯವಿಲ್ಲವಮ್ಮ,
ಅವರು ಯಾರನ್ನೂ ನೋಡೋದಿಲ್ಲ.

ಹುಚ್ಚಿ : ಆತ ನೋಡೋದು ಬ್ಯಾಡಪ್ಪ. ನಾನೇ ಅವನನ್ನ ನೋಡಿ
ನೀನು ಯಾರು ಅಂತ ಹೇಳ್ತೀನಿ.
(ತಳ್ಳಿ ಮುಂದೆ ನುಗ್ಗುವಳು. ಗೊಂದಲಗಳಿಂದ ಹತಾಶನಾಗಿ ಬಿಜ್ಜಳ ಬಾಗಿಲಿಕ್ಕಿಕೊಳ್ಳಲು ಹೋದಾಗ ಇಬ್ಬರೂ ದ್ವಾರಪಾಲಕರು ಆಯುಧ ಹಿರಿದು ನಿಂತಿದ್ದಾರೆ. ಅವರ ಮಧ್ಯೆ ಹುಚ್ಚಿ ನಿಂತಿದ್ದಾಳೆ. ಬಿಜ್ಜಳ ಗಾಬರಿಯಲ್ಲಿ ಹಿಂದೆ ಸರಿದು ಹುಚ್ಚಿಯ ಮುಂದೆ ಮಂಡಿಯೂರಿ ಕೂರುವನು.)

ಬಿಜ್ಜಳ : ನಾನು ಒಂದಕ್ಕೊಂದು ಹೊಂದಾಣಿಕೆ ಇಲ್ಲದ ಎರಡು
ಅರ್ಧಗಳಿಂದ ಕೂಡಿದ್ದೇನೆ ತಾಯೀ!
ಮೊದಲನೇ ಅರ್ಧದಲ್ಲಿ ಬಸವಣ್ಣ ಮುಗ್ಧ
ಸಂಗಯ್ಯನನ್ನು ಸೃಷ್ಟಿಸಿದ. ನಾನು ಅವನ ಮುಗ್ಧಮುಖ
ಮತ್ತು ವಚನಗಳಿಂದ ತುಂಬಾ ಪ್ರಭಾವಿತನಾದೆ.
ಅವನೆದುರಿಗೆ ನಾನೊಬ್ಬ ಅಲ್ಪನೆನ್ನಿಸಿ ಪಶ್ಚಾತ್ತಾಪ
ಪಡುವಂತೆ ಮಾಡಿದ ಸಂಗಯ್ಯ. ಆದರೆ
ಯಾವ ರಾಜ ತಾನೇ ಸದಾಕಾಲ ಪಶ್ಚಾತ್ತಾಪ ಪಡಲು
ಇಷ್ಟಪಡುತ್ತಾನೆ?

ಇನ್ನರ್ಧದಲ್ಲಿ ಕೊಂಡೆಯರು ನನ್ನಲ್ಲಿ ಇಂದ್ರನನ್ನ
ಸೃಷ್ಟಿಸಿ “ಇಕೋ ರಾಕ್ಷಸ – ಸಂಹಾರ ಮಾಡಿ ಪ್ರಭು”
ಎಂದು ಒಬ್ಬ ಮುಗ್ಧನನ್ನು ಎದುರು ಹಿಡಿದರು. ಸಂಹರಿಸಿ
ನೋಡಿದರೆ ಮುಗ್ಧ ಸಂಗಯ್ಯನನ್ನು ಕೊಂದು ಹಾಕಿದ್ದೆ!
ಹೀಗೆ ನನ್ನರ್ಧ ಕಳಚಿ ಬಿದ್ದು ದೊಡ್ಡ ಗಾಯವಾಗಿ
ಉಳಿದರ್ಧದಿಂದ ರಕ್ತ ಸೋರುತ್ತಿದೆ ತಾಯೀ!
ಒಮ್ಮೆ ಸಂಗಯ್ಯನನ್ನು ಕೊಂದಾದ ಮೇಲೆ
ನನಗೆ ಎದುರಾಗುವವರು ಯಾರೂ ಉಳಿಯಲಿಲ್ಲ.
ಈಗ ನೋಡಿದರೆ ನನ್ನಲ್ಲಿ ಇಂದ್ರನನ್ನು ಸೃಷ್ಟಿಸಿದವರು
ಹಗಲು ಹೊತ್ತಿನಲ್ಲೇ ನನ್ನ ಮುಖ ನೋಡಲು
ಹೆದರುತ್ತಾರೆ. ನನ್ನನ್ನು ಶಿಕ್ಷಿಸಲು ದೇವರೂ ಹೆದರುತ್ತಾನೆ!
ಯಾರೆದುರು ಹೇಳಲಿ?
ಚಾಲುಕ್ಯರಿಗೆ ದ್ರೋಹ ಮಾಡಿ ಮಹಾರಾಜನಾದೆ.
ಬಸವಣ್ಣನಿಗೆ ದ್ರೋಹ ಮಾಡಿ
ಸಂಗಯ್ಯನ ಬಲಿಕೊಟ್ಟೆ.
ಒಮ್ಮೆ ಸತ್ತವನು ಮತ್ತೆ ಮತ್ತೆ ಎದ್ದು ಬಂದು
ಹೋದಲ್ಲಿ ಬಂದಲ್ಲಿ ತನ್ನ ಮುಗ್ಧ ನೇತ್ರಗಳಿಂದ
ನನ್ನನ್ನ ಇಟ್ಟಾಡಿಸಿ ಇರಿಯುತ್ತಿದ್ದಾನೆ.
ನಾನು ಕೊಲೆಗಡುಕ ತಾಯೀ;
ನನಗೆ ಶಿಕ್ಷೆ ಕೊಡು.
(ಹುಚ್ಚಿ ತನ್ನ ಅಕ್ಕಪಕ್ಕದ ಇಬ್ಬರೂ ದ್ವಾರಪಾಲಕರನ್ನು ಮುಂದೆ ತಳ್ಳಿನೋಡಿಕೊಳ್ಳಿಎಂದು ಹೇಳಿ ಹೋಗುವಳು. ದ್ವಾರಪಾಲಕರು ಹೋಗಿ ಮಂಡಿಯೂರಿ ಕೂತಿದ್ದವನನ್ನು ತೋಳು ಹಿಡಿದು ಎಬ್ಬಿಸಿ, ಪೀಠದಲ್ಲಿ ಕೂರಿಸುವರು. ಇಬ್ಬರೂ ಅಲ್ಲಿಯ ಬಾಗಿಲು ಕಿಡಕಿಗಳನ್ನು ಮುಚ್ಚುವರು. ಬಿಜ್ಜಳ ಗಾಬರಿಯಾಗುವನು.)

ಬಿಜ್ಜಳ : ಯಾರು ನೀವು?

ದ್ವಾರಪಾಲಕ ೨ : ಇವನು ಜಗದೇವ ನಾನು ಮಲ್ಲಿಬೊಮ್ಮಣ್ಣ.
ಚಾಲುಕ್ಯರ ಕಾಲದಿಂದ ನಿನ್ನ ಹಳೇ ವೈರಿಗಳು.
(ಬಿಜ್ಜಳ ಗಾಬರಿಯಾಗಿ ಎದ್ದು ನಿಂತುಯಾರಲ್ಲಿ?” ಎಂದು ಕೂಗುವನು. ಜಗದೇವ ಬೊಮ್ಮಣ್ಣ ಇಬ್ಬರೂ ಶಾಂತವಾಗಿದ್ದಾರೆ.)

ಮಲ್ಲಿಬೊಮಣ್ಣ : ಈಗ ಯಾರೂ ಬರಲಾರರು, ಯಾಕಂದರೆ ಯಾರೂ ಇಲ್ಲ.
ಕೊತವಾಲನೂ ಹಿಂದಿರುಗಿ ಬಾರದಂತೆ ವ್ಯವಸ್ಥೆ ಮಾಡಿದ್ದೇವೆ.

ಬಿಜ್ಜಳ : ಯಾರು ನಿಮ್ಮನ್ನ ನಿಯಮಿಸಿಕೊಂಡವರು?

ಜಗದೇವ : ಯಾರೂ ಇಲ್ಲ ಮಾರಾಯಾ, ನನ್ನನ್ನು ಬೊಮ್ಮಣ್ಣ
ನಿಯಮಿಸಿಕೊಂಡ. ನಾನು ಬೊಮ್ಮಣ್ಣನನ್ನು
ನಿಯಮಿಸಿಕೊಂಡೆ. ನಾವಿಬ್ಬರೂ ಯಾರೆಂದು
ಕಲ್ಯಾಣದಲ್ಲಿ ಯಾರಿಗೂ ಗೊತ್ತಿಲ್ಲ.. ನಿನಗೇ ಗೊತ್ತಾಗಲಿಲ್ಲ!
ನಗರ ದೇವತೆಗಷ್ಟೇ – ಅದೂ ಇವತ್ತೇ ಗೊತ್ತಾಯಿತಷ್ಟೆ.

ಬಿಜ್ಜಳ : ಏನು ಬೇಕು ನಿಮಗೆ?

ಜಗದೇವ : ನಿನ್ನ ಪ್ರಾಣ! ಒಂದು ತಿಂಗಳು ಕಾದೆವು ಮಾರಾಯಾ,
ಈ ಸಂದರ್ಭಕ್ಕಾಗಿ.

ಬಿಜ್ಜಳ : ಒಂದು ತಿಂಗಳು?

ಮಲ್ಲಿಬೊಮ್ಮಣ್ಣ : ಇದ್ದನಲ್ಲ ಮಾರಾಯಾ ಆ ಬಸವಣ್ಣ! ಅವನ ಸ್ನೇಹದ
ಶ್ರೀರಕ್ಷೆ ನಿನ್ನನ್ನ ಇಲ್ಲೀತನಕ ಕಾಪಾಡಿತು. ಬಸವಣ್ಣ
ಹೋದ ನೋಡು: ಶ್ರೀರಕ್ಷೆ ಕಳಚಿ ನಮ್ಮ ಆಯುಧಗಳಿಗೆ
ಕಳೆ ಬಂತು! ನಮಗೇನೂ ಅವಸರವಿಲ್ಲ.
ನಿನ್ನವೇನಾದರೂ ಬಾಕಿ ಇದ್ದರೆ ತೀರಿಸಿಕೊ.

ಬಿಜ್ಜಳ : ಬಾಗಿಲುಗಳನ್ನೆಲ್ಲ ಯಾಕೆ ಮುಚ್ಚಿದಿರಿ?

ಜಗದೇವ : ಯಾಕೆಂದರೆ ಹೊರಗಿನವರಿಗೆ – ಇಲ್ಲಿಯ ಗಲಾಟೆ
ಕೇಳಿಸದಿರಲಿ ಅಂತ. ನೋಡು ತಮ್ಮಾ ಬಿಜ್ಜಳ,
ಸಾಯುವುದಕ್ಕೆ ನಿನಗೆ ಎರಡು ಆಯ್ಕೆಗಳಿವೆ: ಒಂದು
ವೈಭವದ ಹಾದಿ. ನೀನು ನೇರ ಸ್ವರ್ಗಕ್ಕೇ ಹೋಗಬೇಕು.
ಭೂಲೋಕದ ಇತಿಹಾಸದಲ್ಲೂ ನಿನು ಧೀರೋದಾತ್ತನಾಯಕ
ನಾಗಿರಬೇಕು. ಕವಿಗಳು ನಿನ್ನ ಬಗ್ಗೆ “ತಿರುಗಿ ಬರಲಾರೆಯಾ|
ಬಿಜ್ಜಳರಾಯಾ|| ಅಂತ ಹಾಡು ಬರೆದಿರಬೇಕು. ಆ ಕಾಮಾಕ್ಷಿ
ಯಾರೊಂದಿಗೆ ಇದ್ದರೂ “ಬಿಜ್ಜಳ ರಾಯನ ಎದುರಿಗೆ
ಇವರೆಲ್ಲ ಕಸ!” ಅಂತ ಮೂಗು ಮುರಿದಿರಬೇಕು.
ಈ ದಾರಿ ಸಾಯಲಿಕ್ಕೂ ಸುಲಭ. ಎಲ್ಲಕ್ಕಿಂತ ಹೆಚ್ಚಾಗಿ ನೋವಿಲ್ಲ!
ಅವಧಿ – ಒಂದೇ ನಿಮಿಷ! ಕವಿಯಾಗಿದ್ದನೋ ಎಂಬಂತೆ ನಿನಗೋಸ್ಕರ
ಈ ದಾರಿಯನ್ನು ಹುಡುಕಿದ್ದಾನೆ – ಮಲ್ಲಿಬೊಮ್ಮಣ್ಣ.

ಮಲ್ಲಿಬೊಮ್ಮಣ್ಣ : ಇನ್ನೊಂದು: ಈ ಕೋಣೆಯ ತುಂಬ ರಕ್ತ ಚೆಲ್ಲಾಡಿ

ಬೆಳಿಗ್ಗೆ ನೋಡ ಬಂದ ಮಕ್ಕಳು, ಹೆಂಗಸರು
ನಾಲಗೆ ಹಿರಿದು ಬಿದ್ದ ನಿನ್ನ ಶವ ನೊಡಿ, ಹೆದರಿ ಕಿಟಾರನೆ
ಕಿರಿಚಿರಬೇಕು. ಗರ್ಭಿಣಿಯರು ವಾಂತಿ ಮಾಡಿಕೊಂಡು
ಹಲಿವುಳ್ದಿರಬೇಕು. ಕಾಮಾಕ್ಷಿಯಂತೂ “ಅಯ್ಯೋ! ನಾನು ಇಂಥ ಅಗ್ಗದ
ನಾಯೀ ಜೊತೆಗಿದೇನೆ?” ಅಂತ ಅಂದುಕೊಳ್ಳೋದಕ್ಕೂ
ನಾಚಿಕೆ ಪಟ್ಟಿರಬೇಕು!
ಇದು ಜಗದೇವ ನಿನಗಾಗಿ ಕಂಡುಹಿಡಿದ ದಾರಿ.
ಆಯ್ಕೆ ನಿನ್ನದು.

ಜಗದೇವ : ನಮಗೀಗ ನಿನ್ನ ಬಗ್ಗೆ ಸೇಡು ಉಳಿದಿಲ್ಲ.
ಯಾಕಂತೀಯೊ? ಬಸವಣ್ಣನಿಗೂ ದ್ರೋಹ ಮಾಡಿದವನು
ನೀನು ಮನುಷ್ಯನಲ್ಲ. ನಿನ್ನನ್ನ ಕೊಂದರೆ ಯಾವದೇ
ಪುರುಷಾರ್ಥ ಈಡೇರುವುದಿಲ್ಲ. ಬೇಗ ನಿನ್ನ
ಆಯ್ಕೆ ಮಾಡಿಕೊ. ಇದೊಂದು ಸಣ್ಣ ವಿಧಿ. ಮುಗಿಸಿಬಿಡುತ್ತೇವೆ.

ಬಿಜ್ಜಳ : ಕೆಲವು ಪ್ರಶ್ನೆಗಳಿವೆ.

ಜಗದೇವ : ಅವನ್ನು ನರಕದ ದೇವತೆಗಳಿಗೇ ಕೇಳಿಕೊ.
ಅವರ ಬಳಿ ಇರುವಂಥ ಅಲೌಕಿಕ ಉತ್ತರಗಳು ಮಾನವರ
ಬಳಿ ಸಿಕ್ಕುವುದಿಲ್ಲ!

ಬಿಜ್ಜಳ : (ಹತಾಶನಾಗಿ) ಅಯ್ಯೊ ಬಸವಾ! ಎಲ್ಲಾ ಪ್ರಶ್ನೆಗಳ ಉತ್ತರಗಳನ್ನು
ಬಲ್ಲ ಮಿತ್ರನೊಬ್ಬನಿದ್ದ.
ಅವನ ಒಂದು ಕೊನೆಯ ಆಸೆಯನ್ನೇ

ಈಡೇರಿಸಲಾಗದವನಿಗೆ ಇನ್ನೇನು ಬಾಕಿ ಇದ್ದೀತ್ರಪ್ಪ?
ನೀವೇ ನೋಡಿದಿರಲ್ಲ ಹೋಗುವಾಗ ನನಗೊಂದು
ಮಾತು ಹೇಳಲಿಲ್ಲ ಬಸವಣ್ಣ! ಕಣ್ಣೆತ್ತಿ ನೋಡಲಿಲ್ಲ!
ಕಲ್ಯಾಣದಲ್ಲಿ ಕತ್ತಲೆಯನ್ನ ಬಿಟ್ಟು ಹೋದ!
ಶಿವರಾತ್ರಿಯ ಕತ್ತಲೆ, ಎಲ್ಲಾ ಮೌನಗಳ, ಎಲ್ಲಾ
ಆಜ್ಞಾತಗಳ, ಎಲ್ಲ ಎಲ್ಲದರ  ಇಲ್ಲದಿರುವಿಕೆಯ ಮೊತ್ತವಾದ
ಕತ್ತಲೆಯನ್ನು ಬಿಟ್ಟು ಹೋದ!

(ಸಾವು ಅನಿವಾರ್ಯವೆನ್ನಿಸಿ ಎದುರಿಸಲು ಸಿದ್ಧನಾಗುವನು.)

ಬಸವಾ ಬಸವಣ್ಣಾ – ಇಂಥ ಕತ್ತಲೆಯಲ್ಲಿ
ನನ್ನೊಬ್ಬನನ್ನೇ ಬಿಟ್ಟು ಹೋದೆಯಲ್ಲೊ ಬಸವಾ!

ಮುಟ್ಟಲಾಗದ ನನ್ನ ಎದೆಯ ಮೂಲೆಗಳನ್ನ
ಮುಟ್ಟಿದವ, ತಟ್ಟಿದವ ನೀನೊಬ್ಬನೇ ಬಸವಣ್ಣಾ!
ನಿನ್ನ ವಚನಗಳಿಗೆ ಆ ಶಕ್ತಿಯಿತ್ತು, ನಿಜ.
ಆದರೆ ಚಾಡಿಗೆ ನಿನ್ನ ಮಾತಿಗಿಂತ ಹೆಚ್ಚಿನ ಶಕ್ತಿ
ವ್ಯಾಪ್ತಿ, ವೇಗವಿತ್ತು ಬಸವಣ್ಣಾ!
ಚಾಡಿಗಳ ಸಡಗರದಲ್ಲಿ ತಲೆ ಎತ್ತಿ ನಿನ್ನನ್ನ ಕಾಣದೆ,
ಕಾಲ ನೆಲ ಕಾಣದೆಯೆ ಎಡವಿದೆನು ಬಸವಣ್ಣಾ!

ಸಂತೆ ಸೇರಿವೆ ನೆನಪುಗಳು!
ಒಂದರ ಮುಖದಲ್ಲೂ ನಗೆಯಿಲ್ಲ. ಎಲ್ಲವೂ ನನ್ನ
ಹಂಕಾರವ ಹೂಂಕರಿಸಿ ಹಿಂಸಿಸುತ್ತಿವೆ ಮಾರಾಯಾ!

ಅಗೊ ಅಗೋ, ಸಾವಿನ ಮಂಜು ಮುಸುಕಿದ ಮಬ್ಬಿನಲ್ಲಿ
ನೆನಪಿನ ಒಂದು ಮುಖವೂ ಈಗ ಕಾಣುತ್ತಿಲ್ಲ!
ಎಲ್ಲವೂ ಅಸ್ಪಷ್ಟ ಆಕಾರವಾಗಿ ಸರಿಯುತ್ತ ಸರಿಯುತ್ತ
ಮಾಯವಾಗುತ್ತಿವೆ. ಯಾವ ಮನುಷ್ಯರ ನೆನಪೂ
ಕಾಣುತ್ತಿಲ್ಲ. ನಿನ್ನದೊಂದೇ ಮುಖ,
ಕಟ್ಟಬೇಕೆಂಬ ಕೈಲಾಸದಲ್ಲಿ ವಿಹರಿಸಿ ಬಂದ
ಉಲ್ಲಾಸಭರಿತ ಕನಸಿನ ಮುಖ – ನನಗೆ ಹಿತಕರ!!
ವಂದನೆಗಳೊಂದಿಗೆ ಕಂಬನಿಯಲದ್ದುವೆನು
ನಿನ್ನ ಮುಖದ ಪವಿತ್ರ ನೆನಪನ್ನು!
ಮತ್ತೆ ನೋಯಿಸಲಾರೆ ನಿನ್ನ.
ವ್ಯವಸ್ಥೆ ಹೃದಯವಿಲ್ಲ, ಸಂಗಯ್ಯನಿಗೆ ಕರುಣೆಯಿಲ್ಲ ಬಸವಣ್ಣಾ.
ಎರಡು ತಿರಸ್ಕಾರಗಳ ನಡುವೆ ನಿಂತಿದ್ದೇನೆ.
ನನಗೂ ಮೈತುಂಬ ಗಾಯಗಳಾಗಿವೆ ಮಾರಾಯಾ,
ಎಲ್ಲಾ ಗಾಯಗಳಿಂದ ಸೋರುತ್ತಿದೆ ಸೊಕ್ಕು!
ಹೇಳಿ ಕೇಳಿ ಭವಿ ನಾನು, ಬಸವಾ,
ಕ್ಷಮಿಸು ನನ್ನ!

ಜಗದೇವ ಮಲ್ಲಿಬೊಮ್ಮಣ್ಣಾ,
ಸಿದ್ಧನಿದ್ದೇನೆ ಬನ್ನಿರಯ್ಯಾ.
(ಎಂದು ಅವರನ್ನು ತಬ್ಬಿಕೊಳ್ಳುವಂತೆ ಕೈ ಚಾಚಿ ನಿಲ್ಲುವನು. ಅವರೂ ತಮ್ಮ ಒಂದೊಂದು ಕೈಯಿಂದ ತಬ್ಬಿ ಇನ್ನೊಂದು ಕೈಯಿಂದ ಇರಿಯುವರು. ಬಿಜ್ಜಳ ಕುಸಿಯುತ್ತಿದ್ದಂತೆ ಕತ್ತಲೆ ಆವರಿಸುವುದು.)