(ಸಾವಂತ್ರಿಯ ಮನೆ, ದೊಡ್ಡ ಪಡಸಾಲೆ, ಅದಕ್ಕಂಟಿಕೊಂಡು ಒಂದು ಕೋಣೆ ಮಾತ್ರ ಕಾಣುತ್ತದೆ. ಬಾಗಿಲಲ್ಲಿ ಕೋಲು ಹಿಡಿದು ನಿಂತ ದ್ವಾರಪಾಲಕ. ಪಡಸಾಲೆಯಲ್ಲಿ ಸಾವಂತ್ರಿ ಕೂತಿದ್ದಾಗ ಬಾಗಿಲಲ್ಲಿ ಮುಗ್ಧ ಸಂಗಯ್ಯ ಕಾಣಿಸಿಕೊಳ್ಳುವನು. ದ್ವಾರಪಾಲಕ ಕೋಲೊಡ್ಡಿ ತಡೆಯುವನು.)

ಸಂಗಯ್ಯ : ಸೂಳೆ ಸಾವಂತ್ರಿಯ ಮನೆ ಇದೆಯೊ?

ದ್ವಾರಪಾಲಕ : ಹೌದು.
(ಕೂತಿದ್ದ ಸಾವಂತ್ರಿ ಸಂಗಯ್ಯನನ್ನು ನೋಡಿ ಆಶ್ಚರ್ಯ ಮತ್ತು ಆತಂಕವಾಗಿ ತಕ್ಷಣ ನಿಂತುಕೊಂಡು)

ಸಾವಂತ್ರಿ : ಅಯ್ಯೊ ಶಿವನೆ! ಮುಗ್ಧ ಬಾಲಕ!
ಮಿಕ್ಕ ಮಿಂಡಯ್ಯಗಳಂತೆ ಸಾಮಾನ್ಯ ಜಂಗಮವಿದಲ್ಲ!
ನೆತ್ತಿಯ ಮಾಂಸವಾರದ ಈ ಕೂಸನ್ನು
ಇಲ್ಲಿಗ್ಯಾರು ಕಳಿಸಿದರು ಪಾಪಿಗಳು?
ಯಾರು ನೀವು?
(ಅಷ್ಟರಲ್ಲಿ ದ್ವಾರಪಾಲಕ ಸಂಗಯ್ಯನನ್ನು ಒಳಗೆ ಬಿಡುವನು)

ಸಂಗಯ್ಯ : ನಾನು ಮುಗ್ಧಸಂಗಯ್ಯ
ನೀನು ಸೂಳೆ ಸಾವಂತ್ರಿ ಅಲ್ಲವೊ?

ಸಾವಂತ್ರಿ : ಹೌದು ಸ್ವಾಮಿ. ಬನ್ನಿ ಕೂತ್ಕೊಳ್ಳಿ.
ಬಾಯಾರಿಕೆಗೇನಾದರೂ ಕೊಡಲೆ?

ಸಂಗಯ್ಯ : ಬಾಯಾರಿಕೆ? ಬೇಡ ಬೇಡ.
ನೀನು ವೃದ್ಧೆಯಾಗಿರುವೆಯಲ್ಲ? ನನ್ನನ್ನ ಇಲ್ಲಿಗೆ ಕಳಿಸಿದವರು
ನೀನು ವೃದ್ಧೆ ಅಂತ ಹೇಳಲಿಲ್ಲ!
ಹಾ ಈಗ ನೆನಪಾಯಿತು – ನನಗೆ
ಬೇಕಾದ್ದು ಕಾಮಾಕ್ಷಿ ಎಂಬ ಹುಡುಗಿ,
ಇವಳಲ್ಲ! ಕಾಮಾಕ್ಷಿ ಇಲ್ಲೇ ಇರುವಳೊ?

ಸಾವಂತ್ರಿ : ಹೌದು, ಕಾಮಾಕ್ಷಿ ಇರೋದು ನಮ್ಮಲ್ಲೆ ಸ್ವಾಮಿ.

ಸಂಗಯ್ಯ : ನಿನ್ನ ಹೆಸರು ಸಾವಂತ್ರಿ ಎಂದೆಯಲ್ಲ?

ಸಾವಂತ್ರಿ : ಇದರೊಳಗೆ ಗೊಂದಲ ಮಾಡಿಕೊಳ್ಳುವುದೇನಿದೆ ಸ್ವಾಮಿ?
ನೀವು ಮುಗ್ಧಸಂಗಯ್ಯನವರು, ನಾನು ಸೂಳೆ ಸಾವಂತ್ರಿ
ನನ್ನ ಮನೆಯಲ್ಲಿ ನಾಲ್ಕು ಜನ ಚೆಲುವೆಯರಿದ್ದಾರೆ.

ಸಂಗಯ್ಯ : ನನಗೆ ಒಬ್ಬಳು ಮಾತ್ರ ಸಾಕು.

ಸಾವಂತ್ರಿ : ಆಯ್ತು. ಆ ನಾಲ್ಕೂ ಜನ ನಿಮ್ಮೆದುರು ಬರುತ್ತಾರೆ.
ಅವರಲ್ಲಿ ಯಾರು ಬೇಕೋ ಅವರನ್ನು ಆರಿಸಿಕೊಂಡು
ವಿಶ್ರಾಂತಿ ತಗೊಳ್ಳಿರಿ.

ಸಂಗಯ್ಯ : ನಾನು ವಿಶ್ರಾಂತಿಗಾಗಿ ಬರಲಿಲ್ಲ.

ಸಾವಂತ್ರಿ : (ಮುಗುಳು ನಗುತ್ತ) ಆಯ್ತು. ಮೊದಲು ಆಯ್ಕೆ ಆಗಲಿ.
ಏ ಲಲಿತಾ, ವನಜಾ, ಶಾರದಾ, ಕಾಮಾಕ್ಷಿ ಬನ್ನಿರೇ.
(ನಾಲ್ಕೂ ಜನ ಹುಡುಗಿಯರು ಬಂದು ಸಾಲಾಗಿ ನಿಲ್ಲುವರು.)
ಇವರೇ ನೋಡಿರಿ.
ಇವಳು ಲಲಿತ ಚೆನ್ನಾಗಿ ಉತ್ತರಾದಿ ಹಾಡುತ್ತಾಳೆ.
ಇವಳು ಶಾರದೆ ಕೇರಳದವಳು.
ಸೊಗಸಾಗಿ ವೀಣೆ ನುಡಿಸುತ್ತಾಳೆ.

ಸಂಗಯ್ಯ : ನನಗೆ ಸಂಗೀತ ಕಛೇರಿ ಬೇಡ.

ಸಾವಂತ್ರಿ :ಆಯ್ತು, ಇವಳು ವನಜ, ಭರತನಾಟ್ಯ ಪ್ರವೀಣೆ.

ಸಂಗಯ್ಯ : ನನಗೆ ಭರತನಾಟ್ಯ ಮಾತ್ರ ದಯಮಾಡಿ ಬೇಡ.

ಸಾವಂತ್ರಿ : ಆಗಲಿ, ಇವಳು ಕಾಮಾಕ್ಷಿ, ಬನವಾಸಿಯವಳು.
ನಿಮಗೆ ಯಾರು ಬೇಕೋ ಅವರನ್ನ ಆಯ್ದುಕೊಳ್ಳಿರಿ.

ಸಂಗಯ್ಯ : ಎಲ್ಲರೂ ಸುಂದರಿಯರೆ.
ಆದರೆ ಕಾಮಾಕ್ಷಿ ಅತಿ ಸುಂದರಿ!
ನನಗೆ ಕಾಮಾಕ್ಷಿಯೇ ಇರಲಿ.

ಸಾವಂತ್ರಿ : ಆಕೆ ಮಹಾರಾಜರಿಗಾಗಿ ಕಾಯುತ್ತಿದ್ದಾಳೆ.
ಅವಲ ಬೆಲೆಯೂ ದುಬಾರಿ.
ಇನ್ನುಳಿದ ಮೂವರಲ್ಲಿ ಯಾರಾದರೂ…

ಸಂಗಯ್ಯ : ಏನು ನೀನು ಹೇಳುವುದು?
ನಾನು ಬಂದಿದ್ದೇ ಕಾಮಾಕ್ಷಿಗಾಗಿ.
ಅವಲಿಗೆ ಮಹಾರಾಜ ಕೊಡೋ ಬೆಲೆಯನ್ನ
ನಾನೇ ಕೊಟ್ಟರೆ ಸಾಲದೊ?
ಇಕೊ ಈ ಸರ ತೆಗೆದುಕೊ –
ಮಹಾರಾಜ ಕೊಡುವ ಬೆಲೆಗಿಂತ ಇದು
ಹೆಚ್ಚಿಗಿದೆಯೋ ಇಲ್ಲವೋ ಹೇಳು.

(ಸರವನ್ನು ಸಾವಂತ್ರಿಯ ಕೈಗೆ ಕೊಡುವನು. ತುಸು ಹೊತ್ತು ನೋಡಿ ಸಾವಂತ್ರಿ ಕಾಮಾಕ್ಷಿಯ ಕೈಗೆ ಕೊಡುವಳು. ಕಾಮಾಕ್ಷಿ ಸರವನ್ನು ನೋಡಿ ಆಮೇಲೆತಿರುಗಿ ಸಾವಂತ್ರಿಗೇ ಕೊಡುವಳು.)

ಕಾಮಾಕ್ಷಿ : ಅಮ್ಮಾ ಈ ಸರದ ಬೆಲೆ ನನ್ನ ಬೆಲೆಗಿಂತ ಹೆಚ್ಚು.
ನನಗಿದು ಬೇಡ. ಆತ್ಮಸಂತೋಷಕ್ಕಾಗಿ ನಾನಿವರ ಸೇವೆ
ಮಾಡುತ್ತೇನೆ. ದಯವಿಟ್ಟು ಅಪ್ಪಣೆ ಕೊಡು.
ಮುಂದಿನದು ನಿನ್ನ ಜವಾಬ್ದಾರಿ.

ಸಾವಂತ್ರಿ : ಧನ್ಯಳಾದೆ ಮಗಳೆ!
ಜೊತೆಗೆ ನನ್ನನ್ನೂ ಧನ್ಯಳನ್ನಾಗಿಸಿದೆ.
ಹೋಗು. ಮುಗ್ಧಸಂಗಯ್ಯನಿಗೆ ಅವನು ಬಯಸುವ ಸುಖಗಳ
ನೀಡಿ ಸಂತೋಷಪಡಿಸು.

(ಕಾಮಾಕ್ಷಿ ಸಂಗಯ್ಯನ ಕೈಹಿಡಿದು ಒಳಗೆ ಕರೆದೊಯ್ಯುವಳು. ಉಳಿದ ಹುಡುಗಿಯರೂ ಒಬ್ಬೊಬ್ಬರೇ ಹೋಗುವರು. ಸಾವಂತ್ರಿ ಸರವನ್ನೇ ನೋಡುತ್ತ)
ಇದರಲ್ಲೇನೋ ಮೋಸ ಅಡಗಿರುವಂತಿದೆಯಲ್ಲ!
ಬೆಲೆಯುಳ್ಳ ಈ ಸರ ಮುಗ್ಧಸಂಗಯ್ಯನವರ
ಕೈಗೆ ಹ್ಯಾಗೆ ಬಂತು? ಅಣ್ಣಾವರಿಗೆ ಈ ಸಮಾಚಾರ
ಗೊತ್ತಿದೆಯೆ?
ಅಥವಾ ಅಣ್ಣಾವರೇ ಈ ಸರ ಕೊಟ್ಟು
ಕಳಿಸಿರಬಹುದ?
ಮೊದಲೇ ಊರು ಹೊತ್ತಿ
ಉರಿಯುತ್ತಿದೆ.
ಅಂಥದರಲ್ಲಿ ಇದೇನಾಗುತ್ತಿದೆ ಶಿವನೆ!
(ಕೋಣೆಯೊಳಗೆ ಹೊಕ್ಕ ಸಂಗಯ್ಯನಿಗೆ ದಿಗಿಲು, ಅಲ್ಲಿಯ ವಿಲಾಸ ಸಾಧನೆಗಳ ಬಗ್ಗೆ ಮಂತ್ರಮುಗ್ಧನಾಗಿದ್ದಾನೆ.)

ಸಂಗಯ್ಯ : ಅದ್ಭುತ! ಆನಂದ!
ಅದ್ಭುತಾದ್ಭುತ. ಮೃದುತಲ್ಪ!
ಹಾಸು ಮಂಚದ ಉಯ್ಯಾಲೆ!
ಕುಂಬಕಾಳಂಜಿಕ ಬೀಸಣಿಗೆ! ಅಡಕೆಲೆ ತಟ್ಟೆ!
ನಿಲುವುಗನ್ನಡಿ! ಗಂಧ ಬಟ್ಟಲು ವಸ್ತ್ರಾಭರಣ!
ಮೃಗಮದ ಚಂದನ ಕರ್ಪೂರ ಜವ್ವಾಜಿ!
ಕುಂಕುಮಾಗರು ಮಿಶ್ರಿತ ಸುಗಂಧವಾರಿಯ ಸಾರಣೆ ಕಾರಣೆ!
ದಿವ್ಯ ಗಂಧಾಕ್ಷತೆ! ಕಂಪಿನಿಂದೆಸೆವ ಶಯ್ಯಾಗ್ರಹ! ಆನಂದ!
ಆಹಾ ಇದು ಇಂದ್ರನ ಅರಮನೆಯೊ!
ಆಹಾ ಇವಳು ಅಪ್ಸರೆಯೇ ಸೈ.
ಲೋಕೋತ್ತರ ಸುಂದರಿ ಕಾಮಾಕ್ಷೀ, –

ಕಾಮಾಕ್ಷಿ : ಸ್ವಾಮೀ,

ಸಂಗಯ್ಯ : ನಾನು ಈ ಹಾಸಿಗೆಯ ಮೇಲೆ ಕುಳಿತುಕೊಂಡು
ಲಿಂಗಪೂಜೆ ಮಾಡಬೇಕು. ಹನ್ನೊಂದು ಸಲ
ಮಾಡಬೇಕಾದ ಪೂಜೆ
ಅದು. ಸಾಮಾನ್ಯವಲ್ಲ! ಅದರಿಂದ
ಸಿಗುವಂಥಾ ಆನಂದ
ಬೇರೆ ಇಲ್ಲವೆಂದು ನಿನಗೇ ತಿಳಿಯುತ್ತದೆ.
ಆ ಪೂಜೆ ಮಾಡುವುದಕ್ಕೆ ನೀನು ನನಗೆ ಸಹಾಯ
ಮಾಡಬೇಕು, ಆದೀತೊ?

ಕಾಮಾಕ್ಷಿ : ಆಗಲಿ ಸ್ವಾಮಿ. ತಾವು ಹೇಳಿದಂತೇ ಮಾಡುತ್ತೇನೆ.

ಸಂಗಯ್ಯ : ನೀನು ಬೇಗನೆ ಸ್ನಾನ ಮಾಡಿ
ಬೆಳಗಿದ ಪಾತ್ರೆಯಲ್ಲಿ ಮಡಿನೀರಿನೊಮದಿಗೆ
ಒದ್ದೆ ಬಟ್ಟೆಯಲ್ಲೇ ಬರಬೇಕು.
ಹಾಗೆಯೇ ಪತ್ರೆ ಹೂವು ವಿಭೂತಿ
ಮುಂತಾದ ಪೂಜಾ ಸಾಮಗ್ರಿಗಳನ್ನು
ತಗೊಂಬಾ.

ಕಾಮಾಕ್ಷಿ : ಆಯ್ತು ಸ್ವಾಮಿ.
(ಹೋಗುವಳು. ಇವನು ಆನಂದ! ಶ್ರೇಷ್ಠ! ಶ್ರೇಷ್ಠಾತಿಶ್ರೇಷ್ಠವೆನ್ನುತ್ತ ಕೋಣೆಯ ಒಂದೊಂದೇ ವಸ್ತುವನ್ನು ಮೆಚ್ಚುತ್ತ, ಕೈಯಿಂದ ಸವರುತ್ತ, ಮೂಸುತ್ತ, ಬಿದ್ದರೆ ಎಲ್ಲಿಡಬೇಕೆಂದು ಗೊಂದಲಿಸುತ್ತ ಕಾಮಾಕ್ಷಿ ಪೂಜಾ ಸಾಮಗ್ರಿಗಳ ತರುವತನಕ ಹೀಗೇ ಮಾಡುತ್ತ ಇರುತ್ತಾನೆ. ಆಕೆ ಬಂದ ನಂತರ ಲಿಂಗಪೂಜೆ ಸುರುಮಾಡುತ್ತಾನೆ. “ಓಂ ನಮಃ ಶಿವಾಯಎಂದು ಮಂತ್ರೋಚ್ಚಾರಣೆ ಮಾಡುತ್ತ ಪೂಜೆ ಮಾಡುತ್ತಿದ್ದಂತೆ ಅವಳು ಆಗಾಗ ಪತ್ರಿ, ಹೂವು ಕೊಡುತ್ತ ಸಹಕರಿಸುತ್ತಾಳೆ. ಇನ್ನು ಮೇಲೆ ಸಾವಂತ್ರಿಯ ಮನೆಯಲ್ಲಿ ದೃಶ್ಯಗಳು ನಡೆವಾಗೆಲ್ಲ ಬೇಕೆನಿಸಿದಾಗ ಮಂತ್ರೋಚ್ಚಾರಣೆ ಮೆಲ್ಲಗೆ ಕೇಳಿಸುತ್ತಿರಬಹುದು.)