ಸೂತ್ರಧಾರ : ಕಲ್ಯಾಣದಲ್ಲಿ ಇರಬೇಕಾದ ಸ್ಥಳ ಮತ್ತು ಕ್ರಮದಲ್ಲಿ ಯಾವುದೂ
ಇರಲಿಲ್ಲ, ಯಾರೊಬ್ಬರ ಮ್ಯಾಲೂ ಯಾರೊಬ್ಬರಿಗೂ
ನಂಬಿಕೆ ಇರಲಿಲ್ಲ, ಪ್ರತಿಯೊಬ್ಬರೂ ಪ್ರತಿಯೊಬ್ಬರ
ಮಾತುಗಳನ್ನು ಅನುಮಾನದಿಂದಲೇ ಕೇಳುತ್ತಿದ್ದರು.
ಪ್ರತಿಯೊಬ್ಬರ ಮಾತಿಗೂ ಮುಖಬೆಲೆ ಒಂದಾದರೆ – ಹುದುಗಿದ
ಇನ್ನೊಂದರ್ಥವೂ ಇರುತ್ತಿತ್ತು.
ಆ ರಾತ್ರಿ ಶಿವರಾತ್ರಿ, ಕಲ್ಯಾಣ ಮಲಗಿರಲಿಲ್ಲ!
ಹಾಗಂತ ಜಾಗರಣೆಯನ್ನೂ ಮಾಡುತ್ತಿರಲಿಲ್ಲ.
ಎಲ್ಲರೂ ಸಾವಂತ್ರಿಯ ಮನೆಯ ಕಡೆಗೇ ಕಣ್ಣು ಕಿವಿಗಳ ನೆಟ್ಟು
ಅಂಗೈಯಲ್ಲಿ ಜೀವ ಹಿಡಿದುಕೊಂಡು
ಕಾಯುತ್ತಿದ್ದರು. ಕೊಂಚ ಧೈರ್ಯವಿದ್ದವರು ಹೊರಕೇರಿಯ
ಮನೆ ಗುಡಿಸಲುಗಳ ಮುಂದೆ
ರಾಜಭಟರಿಗೆ ಕಾಣದಂತೆ ಕೂತುಕೊಂಡು ಕಾಯುತ್ತಿದ್ದರು.
ಹುದುಗಿದರ್ಥಗಳ ಅಡಗಿಸಿಕೊಂಡು
ಮುಖಬೆಲೆಯ ಮಾತುಗಳ ಚೆಲ್ಲಾಡುತ್ತಿದ್ದರು, ಕೇಳಿರಿ:

ಒಂದನೆಗುಂಪು

ಶರಣ ೧ : ಶರಣರ ಬೇಟೆ ಸುರುವಾಗೇತ್ರಪ! ಮಡಿವಾಳ ಮಾಚಯ್ಯನನ್ನ
ಹಿಡಿದು ಥಳಿಸಿ ಶರಣರ ಬಟ್ಟೆ ತುಳಿದು ಕಳಿಸ್ಯಾರ!
ಇಂತಾದರೊಳಗ ಅಣ್ಣಾವರು ಸೂಳೆ ಸಾವಂತ್ರಿಯ ಮನೆಗೆ
ಬಂದಾರಂದರ ಏನ ಹೇಳೋಣು?

ಶರಣ ೨ : ಶರಣರನ್ನ ಶೂಲಕ್ಕೇರಿಸ್ಯಾರಂದ ಮ್ಯಾಲ ಅವರ ಕೈ
ಮೇಲಾಧಾಂಗ ಆಯ್ತು! ಇನ್ನವರ ಎದುರಿಗೆ
ನಿಲ್ಲೋವಂಥವರು ಯಾರಿಲ್ಲ.

ಮತ್ತೊಬ್ಬ : ಹರಳಯ್ಯ ಮಧುವರಸರನ್ನು ಶೂಲಕ್ಕೇರಿಸಿದರೂ ನಾವು
ನೊಡಿಕೊಮಡು ಕೂತಿವಲ್ಲ!

ಒಬ್ಬ : ಅವರನ್ನು ಶೂಲಕ್ಕೇರಿಸಿ ಜೀರ್ಣಿಸಿಕೊಂಡರು ಅಂದರ
ಇದು ಸಣ್ಣ ಮಾತಲ್ಲ ತಗಿ. ಇನ್ನ ಮುಂದ ಸೋತವರನ್ನು
ಹಾಂಗs ಬಿಟ್ಟಾರಂತ ನನಗನ್ನಸೋದಿಲ್ಲ!

ಮತ್ತೊಬ್ಬ : ರಾಜ್ಯದ ಮೂಲೆ ಮೂಲೆಯಿಂದ ಪುಂಡರನ್ನ ಕರಿಸ್ಯಾರಂತ!

ಮಗದೊಬ್ಬ : ಪುಂಡರ್ಯಾಕ ಬೇಕು? ಅವರ ಕಡೆ ಸೈನ್ಯ ಐತೆಲ್ಲಪ್ಪ!
ನಿಜ. ಕೊಂಬು ಕಹಳೆ ಮೊಳಗಿ
ಬೇಟೆ ನಾಯಿ ಬೊಗಳಿ
ಕಲ್ಯಾಣ ನಗರಕ್ಕೆ ಬಲೆ ಹಾಕಿ
ಶರಣರ ಬೇಟೆ ಅಡತಾರಂಧಂಗಾಯ್ತು.
ಬೆಲೆ ತೆರಬೇಕಪ್ಪ ಎದಕ್ಕೂ!
ಇವು ಶರಣರ ದುಷ್ಕಾಲದ ದಿನಗಳು!

ಒಬ್ಬ : ಶಿವನೇ ಕಾಪಾಡಬೇಕು.

ಮತ್ತೊಬ್ಬ : ಶಿವ ಕೈಲಾಸದೊಳಗಿದ್ದಾನ, ಇಲ್ಲಿ ನಮ್ಮ ರಕ್ಷಣೇಗ್ಯಾರು?

ಮಗದೊಬ್ಬ : ನಾವು ಶರಣರಾಗಿದ್ದೀವಿ. ಯಾವುದರ ಮ್ಯಾಲೂ
ನಿಯಂತ್ರಣ ಇರಬೇಕಂತ ಅಣ್ಣಾವರs ಹೇಳ್ಯಾರ.

ಒಬ್ಬ : ದೇವರು ಅವರ ಕೈಯಾಗ ತ್ರಿಶೂಲ ಕೊಟ್ಟು ಕಳಿಸ್ಯಾನ
ನಮಗಾದರ ಅಂಗೈಗೆ ಲಿಂಗಾ ಕೊಟ್ಟು ಸಹಿಸ್ಕೋ
ಅಂತಾನ! ಏನ ಮಾಡೋಣು?

ಮತ್ತೊಬ್ಬ : ದೇವರು ಒಬ್ಬನೇ. ಆ ದೇವರು ಅವರಿಗೆ ರಕ್ಷಣೆ
ಕೊಟ್ಟು ನಮಗ ಕೊಟ್ಟಿಲ್ಲ! ಅಂದಮ್ಯಾಲ ನಮ್ಮ
ರಕ್ಷಣೆ ನಾವು ಮಾಡಿಕೋಬೇಕಪ.

ಒಬ್ಬ : ಅಣ್ಣಾವರಂತೂ ಸಾವಂತ್ರೀ ಮನಿ ಹೊಕ್ಕಾರ, ಬಳಗ
ರಾಜಾ ಇದ್ದಾನಂತ! ಇಂಥಾ ರಾತ್ಯ್ರಾಗ ರಾಜಾ – ಮಂತ್ರಿ
ಭೇಟಿ ನಡದೈತಿ ಅಂದರ ಏನೋ ಒಂದು
ಆಗಬಾರದ್ದು ಆದರ ನಮ್ಮ ಗತಿಯೇನು?

ಮತ್ತೊಬ್ಬ : ಛೇ ಛೇ ಅಂಥಾದ್ದೇನೂ ಆಗಾಕಿಲ್ಲ ತಗಿ, ಒಂದು ವೇಳೆ
ಆದರ ಅಣ್ಣಾವರು ಸುಮ್ಮನೇ ಇರತಾರ ಅಂದೇನು?
ಏನಾರ ಒಂದು ಪವಾಡ ಮಾಡಿ ದಾಟಿ ಬರ್ತಾರ!
ಬೇಕಾದರ ನೋಡ್ತೀರು.

ಒಬ್ಬ : ನನಗ ಅನಸೋಪ್ರಕಾರ ನಾವು ಯಾವುದಕ್ಕೂ
ಸಿದ್ಧರಾಗಿರಬೇಕು.

ಎರಡನೆಯಗುಂಪು

ಒಬ್ಬ : ನೀವು ಏನೇ ಹೇಳ್ರಿ, ಹರಳಯ್ಯ ಮಧುವರಸರನ್ನ
ಶೂಲಕ್ಕೇರಿಸಿದ್ದು ಕೊಂಚ ಹೆಚ್ಚಾಯಿತು.

ಇನ್ನೊಬ್ಬ : ಇದು ಕೊಡುಕೊಳುವ ಸಂಸಾರದ ವಿಷಯ, ಯಜಮಾನರೇ,
ಕುಲ ಮೂಲಗಳನ್ನ ನೋಡಬ್ಯಾಡವೇ?
ದಲಿತರಿಗೂ ಇನ್ಯಾರಿಗೋ ಮದುವೆ ಮಾಡಿಸಿದ್ದರೆ
ಆಗ್ತಿತ್ತು. ದಲಿತರಿಗೂ ಬ್ರಾಹ್ಮಣರಿಗೂ ಸಂಬಂಧ
ಬೆಳೆಸೋದಂದರೆ – ಸಾವಿರಾರು ವರ್ಷಗಳಿಂದ
ಬಂದ ಧರ್ಮ ಕೆಟ್ಟೋಯ್ತೆ?

ಮತ್ತೊಬ್ಬ : ನೋಡ್ರೀ, ನಾವು ವಿದ್ವಾಂಸರು, ಲೌಕಿಕ ವಿಷಯ
ಮಾತಾಡಬಾರದು. ನಾವು ಮಾತಾಡೋ ವಿಷಯ
ಶ್ರೇಷ್ಠತೆಗಿಂತ ಕೊಂಚ ಕಡಿಮೆ ಆದರೂ ನಡೆಯೋದಿಲ್ಲ.
ದಯಮಾಡಿ ವಿಷಯ ಬದಲಿಸಿರಿ.

ಒಬ್ಬ : ಕತ್ತಲಾಗ ಬರೀ, ಯಾಕ ರಸ್ತಾದ ನಡುವೆ ನಿಂತೀರಿ?
ಮೊದಲೇ ಗಲಾಟೆ ದಿನ ಇವು. ಮಹಾರಾಜರಿಗೆ
ಗೊತ್ತಾದರ ಮುಗೀತು ನಮ್ಮ ಕತಿ!
ನಿಮಗೂ ಕಾಮಾಕ್ಷಿ ಬೇಕಾದಳ? ಅಂತ ಕೇಳತಾರ
ಮಹಾರಾಜರು.

ಇನ್ನೊಬ್ಬ : ನನಗ ಹಾಂಗೇನೂ ಅನ್ನಿಸೋದಿಲ್ರೆಪ. ಯಾಕಂದಿ,
ಆಕೆ ಕೇಳೋವಷ್ಟು ಹಣ ಕೊಡ್ಲಿಕ್ಕಾದೀತ ನಮ್ಮ ಕೈಯಿಂದ?
ಆಕಿ ಸೊಥಾ ಕೈ ಮಾಡಿ ಕರೆದರೂ ನಾ ಹೋಗೋಣಿಲ್ರೆಪ!

ಮತ್ತೊಬ್ಬ : ನಿನ್ನ ಕೈಮಾಡಿ ಕರೆಯೋವಷ್ಟು ಬಡತನ ಆಕೆಗ್ಯಾಕೋ
ಬರತೈತಿ? ನಾವು ಜೀವಮಾನ ದುಡಿದಷ್ಟನ್ನ
ಆಕೆ ಒಂದ ರಾತ್ರಿನೇ ದುಡೀತಾಳಂತ!

ಬಾಲಕ : (ಸಾವಂತ್ರಿಯ ಮನೆಯ ದ್ವಾರಪಾಲಕನನ್ನು ತೋರಿಸುತ್ತ) ಅಪಾ,
ಅವರಲ್ಲಿ ರಾಜಾ ಯಾರು? ಭಲ್ಲೆ ಹಿಡಕೊಂಡ
ನಿಂತಾನಲ್ಲ ಅವನೇ ಏನು?

ಒಬ್ಬ : ಮಹಾರಾಜರು ಒಳಗಿದ್ದಾರ. ಹೊರಗ ಬಂದಾಗ
ತೋರಿಸ್ತೀನಿ, ಸುಮ್ಮಕಿರು.

ಮತ್ತೊಬ್ಬ : ಲೇ ನಿಮ್ಮಂಥಾ ಸಣ್ಣ ಹುಡುಗರು ಬರೋ ಜಾಗ
ಅಲ್ಲ ಇದು. ನಡಿ ಹೋಗು, ರಾಜಭಟ ನೋಡಿದರ
ಜುಟ್ಟ ಹಿಡಿದು ಕರಕೊಂಡ ಹೋಗ್ತಾನ ನೋಡು.

ಬಾಲಕ : ಅಪಾ ಏನಂತಾನ ನೋಡಪಾ!

ಇನ್ನೊಬ್ಬ : ಸುಮ್ಮಕಿರ್ರೆಪ ಇಷ್ಟು ಅಧ್ಭುತವಾದ ಮನರಂಜನೆ
ಕಲ್ಯಾಣದ ಪ್ರಜೆಗಳಿಗೆ ಎಂದಾದರೂ ಸಿಕ್ಕಿತ್ತ?
ದೇಶದ ರಾಜ ಮತ್ತು ಪ್ರಧಾನಿ ಒಬ್ಬಳ ಮನೆಗೇ ಹೋದದ್ದನ್ನು
ಎಂದಾದರು ಕೇಳಿದ್ದೀರಾ? ಕಂಡಿದ್ದೀರಾ?
ನೋಡ್ತಾ ಇರಿ ಹಾಗೇ,
ಕೊನೆಯ ಪಕ್ಷ ರಾಜ ಮತ್ತು ಪ್ರಧಾನಿ
ಪರಸ್ಪರ ಜುಟ್ಟು ಹಿಡಕೊಂಡಾದರೂ ಹೊರಗ ಬರ್ತಾರ!

ಮತ್ತೊಬ್ಬ : ಇಲ್ಲ ರಾಜ, ರಕ್ತಸೋರುವ ಬಸವಣ್ಣನವರ
ರುಂಡವನ್ನಾದರೂ ಹಿಡಕೊಂಡು ಬರ್ತಾನ!
ಇಂಥಾ ದೃಶ್ಯವನ್ನು ಕಲ್ಯಾಣದ ಪ್ರಜೆಗಳು ಕಲ್ಪಿಸೋದಾದರೂ
ಸಾಧ್ಯವೆ?

ಒಬ್ಬ : ಏನೋ ನಮ್ಮ ಪುಣ್ಯ! ರಾಜರಿಲ್ಲಂತ ಮಂತ್ರಿಬಂದು
ಒಳಗ ಹೊಕ್ಕಾನ! ಒಳಗ ರಾಜ ಕುಂತಾನ!
ಅಪರೂಪಕ್ಕೆ ಸೂರ್ಯಗ್ರಹಣ ಹಿಡಿಧಾಂಗಾಗಿ
ಅದರ ನೆರಳು ಇದರ ಮ್ಯಾಲ ಬಿದ್ದು ಹಾಡಾಹಗಲೀನ
ಕತ್ತಲಾಧಂಗ ಆಗೇತಿ, ಸುಮ್ಮನ ನಿಂತುಕೊಂಡ ನೋಡ್ರಿ.

ಇನ್ನೊಬ್ಬ : ಅಧಿಕಾರದ ತುದಿಯಲ್ಲಿರುವ ಇಬ್ಬರು ನಾಯಕರು
ಕಲ್ಯಾಣ ಹೊತ್ತಿ, ಉರೀತಿರುವಾಗ ವಾರಾಂಗನೆಯ
ಮನೆಯಲ್ಲಿ ಭೇಟಿಯಾಗುವುದು ಅಪರೂಪ. ಇಂಥ
ಸುವರ್ಣಾವಕಾಶ ಒದಗಿಸಿಕೊಟ್ಟ
ರಾಜ ಪ್ರಧಾನಿಗೆ ಧನ್ಯವಾದಗಳನ್ನು ಹೇಳಿ
ಈಗ ಬಾಯಿ ಮುಚ್ಚಿಕೊಂಡು ನೋಡುತ್ತಿರೋಣ;
ಆದೀತೆ? ಆಕಾ ರಾಜಭಟರು ಬರ್ತಿದಾರೆ ಬಾಯ್ಮುಚ್ಚಿರಿ.