ಹುಚ್ಚಿ : ಕೇಳಿರಯ್ಯಾ ಕೇಳಿರಿ:
ಪದ್ಧತಿಯ ಪಾದಕ್ಕೆ ಕತ್ತು ಕೊಟ್ಟವರೇ ನೀವು ಕೇಳಿರಿ:
ನೋವುಗಳ ದವಡೆಯಲ್ಲಿ ಆಗಿವ ಪಾಮರರೇ
ನೀವು ಕೇಳಿರಿ:

ಮನೆಯೊಳಗೆ ಹೆಗ್ಗಣ ಗುದ್ದು ತೋಡ್ಯಾವು
ಮಣ್ಣಗಿದ ತಗ್ಗಿನಲಿ ಪುರವೆಲ್ಲ ಹುದುಗೀತು,
ಕೇಳಿರಯ್ಯಾ ಕೇಳಿರಿ.

ಒಡಲಾಸೆಗೆ ನುಡಿದ ವಿಷವಾಕ್ಯ ಪಸರಿಸಿ
ಅತ್ಯರ ತಲೆ ಕತ್ತರಿಸಿ ಬಿದ್ದಾವು.
ವ್ಯರ್ಥರಿಗೀ ಮಾತು ಅರ್ಥವಾಗುವುದಿಲ್ಲ
ಭಕ್ತಿವಂತರು ಚಿತ್ತಗೊಟ್ಟು ಕೇಳಿರಯ್ಯಾ.

ಅಷ್ಟಗ್ರಹಗಳು ನಷ್ಟವಾಗಿ
ಅರಮನೆಯ ನೆತ್ತಿಯಲಿ ಧೂಮಕೇತುಗಳೆದ್ದು
ಪಟ್ಟಕ್ಕೆ ಬಮದವರು ಸುಟ್ಟು ಹೋದಾರಯ್ಯ

ಎತ್ತಿರೋ ನಂದೀಧ್ವಜವ,
ಹೆತ್ತಯ್ಯನಾಟ ಹುಸಿಯಲ್ಲ.
ಸಂಗನ ಬಸವನ ಸಿಂಗಾರದ ಕೊಂಬಿಗೆ
ಸರಿಗಂಟೆ ಹುರಿಗೆಜ್ಜೆ,
ಉರಿಚಮ್ಮಾಳಿಗೆಯ ಮೆಟ್ಟಿ,
ಸಾಲುಜಂಗಿನ ಕಾಲು ಕುಟ್ಟಿ,
ನಂದೀಧ್ವಜವ ಬಾನೊಳಾಡಿಸುತಿರಲು
ಇತಿಹಾಸಕ್ಕೆ ಬರೀಬೂದಿ ಉಳಿದಾವು
ಕೇಳಿರಯ್ಯಾ ಕೇಳಿರಿ.

(ಹೊರಕೇರಿಯ ಒಂದು ಇಕ್ಕಟ್ಟಾದ ಬೀದಿ. ಕಲ್ಯಾಣದ ದಲಿತರು, ವೇಶ್ಯೆಯರು ಹಿಂದುಳಿದವರು, ಬಡವರು ಇರುವ ಕೇರಿ. ನಿನ್ನೆಯಷ್ಟೇ ಶೂಲಕ್ಕೇರಿದ ಹರಳಯ್ಯನ ಮನೆ ಇಲ್ಲಿಯೇ ಇದೆ. ಒಂದು ಚಿಕ್ಕ ಮನೆಯ ಮುಂದಿನ ಕಟ್ಟೆಯ ಮೇಲೆ ಕಾಶವ್ವ, ಮುದುಕಪ್ಪ ಗಂಡಹೆಂಡತಿ ಮತ್ತು ನೆರೆಮನೆಯ ತುಂಗವ್ವ ಅವಳ ಗಂಡ ಕಲ್ಲಪ್ಪ ಕೂತಿದ್ದಾರೆ.)

ತುಂಗವ್ವ : ಈ ಹುಚ್ಚೀ ಕಾಲಜ್ಞಾನದಿಂದ ನಮಗ ಮುಕ್ತಿ ಇಲ್ಲ ಬಿಡು.
ಏನ ಮಾಡೋದು, ಆಕಿ ಇರೋ ಸ್ಥಿತಿ ನೋಡಿದರ
ಕರುಳು ಹರಿದು ಕೈಯಾಗ ಬಿದ್ಧಾಂಗ ಆಗತೈತಿ.
ಆದರ ನಾವೇನೂ ಮಾಡಾಕಾಗಾಣಿಲ್ಲ.

ಮುದುಕಪ್ಪ : ಆಕಿ ಮಾತಾಡೋದು ಎಲ್ಲಾ ಖರೆ ಅನಸತೈತಲ್ಲ?

ಕಾಶವ್ವ : ಅಯ್ಯ ಬಿಡs ಹಿರಿಯಾ, –
ಒಮ್ಮೊಮ್ಮಿ ನಾ ಬಿಜ್ಜಳನ ವೈರಿ ಆಗೇನಿ ಅಂತಾಳ!
ಇದೂ ಖರೇನs ಏನ?

ಮುದುಕಪ್ಪ : ಅದೇನಿದೆಯೋ ಶಿವನs ಬಲ್ಲ. ಮಹಾಮನೀಗೂ ಬರತಾಳ!

ಕಾಶವ್ವ : ಬರತಾಳ, ಆದರ ಅಲ್ಲಿ ಕಾಲಜ್ಞಾನ ಹೇಳೂದಿಲ್ಲ.

ತುಂಗವ್ವ : ಊರಾಗ ಒಂದು ದೀಪಿಲ್ಲ, ಸಣ್ಣ ಬೆಳಕಿಲ್ಲ.
ಶಿವರಾತ್ರಿ ಕತ್ತಲಿ ಗಂವಂತೈತಿ,
ಹಿಂತಾ ಕತ್ತಲ್ಯಾಗ ಯಾಕ ಅಡ್ಡಾಡತೈತಿ ಮುದಿಕಿ,
ಸುಮ್ಮನ ಎಲ್ಲಾದರೂ ಬಿದ್ದಕೋಬಾರದ?
ಆ ನನ್ನ ಹಾಟ್ಯಾ ರಾಜಾ ಇಂದ ಯಾರ್ಯಾರನ್ನ ಕೊಂದನೋ
ಏನ ಕತಿಯೋ!

ಮುದುಕಪ್ಪ : (ಮೆಲ್ಲಗೆ) ಮಾತಾಡಬ್ಯಾಡಬೇ ರಾಜನ ಮಂದಿ ಅಡ್ಡಾಡತಾರ,
ಕೇಳಿಸಿಕೊಂಡಾರು!

ಕಾಶವ್ವ : (ವಿಷಯ ಬದಲಿಸಿ) ಈ ಕಡೆ ನೋಡs
ಎವ್ವಾ ಆಕಾಶ್ ಎಷ್ಟ ಹಸನೈತಿ!
ಮುತ್ತ ಸುರಧಾಂಗ ಚಿಕ್ಕಿ ಮೂಡ್ಯಾವ,
ನೋಡಬಾರದ?

ಮುದುಕಪ್ಪ : ಎಂದೂ ಆಕಾಶ ಕಂಡೇ ಇಲ್ಲ ಅಂಬವರ ಹಾಂಗ
ಹಲಬತೀಯಲ್ಲೆ!

ಕಾಶವ್ವ : ನೋಡದೇನ ಮುದುಕಾ, ಆ ಕಡಿಂದ ಒಂದು ಚಿಕ್ಕಿ ಅರಮನಿ
ಮ್ಯಾಲ ಉರದ ಬಿತ್ತು; ನೀ ನೋಡಲಿಲ್ಲ ಬಿಡು.

ಮುದುಕಪ್ಪ : ರಾಜಾ ಗೊಟಕ್ಕಂತಾನೇನ ಮತ್ತ?
ಚಿಕ್ಕಿ ಉರದ ಬೀಲತೈತಂದರ ಅದs ಅರ್ತ ಅಲ್ಲಾ?

ತುಂಗವ್ವ : ಅಲ್ಲs ಕಾಕಾ,
(ಕಳ್ಳದನಿಯಲ್ಲಿ) ಹರಳಯ್ಯನ ಹೆಣಾ ಕೊಟ್ಟರೇನ ತಿರಿಗಿ?

ಮುದುಕಪ್ಪ : ಇಲ್ಲs. ಎರಡೂ ಹೆಣ ನಾಯಿ ನರಿ ಹದ್ದ ಕಾಗಿ ತಿನ್ನಲೆಂತ
ತುಂಡು ಮಾಡಿ ಚೆಲ್ಯಾರಂತ!

ಕಾಶವ್ವ : (ಖೇದದಿಂದ) ಅಯ್ ಶಿವನs! ಶರಣರಿಗಿ
ಏನ ಕಾಲ ಬಂತೋ ಶಿವನs!
ಆ ನನ ಹಾಟ್ಯಾ ಬಿಜ್ಜಳ ರಾಜಾ
ಹೂಳವರ ದಿಕ್ಕಿಲ್ಲಧಾಂಗ ಸಾಯಲಿ ನೋಡ!
(ನೆಲ ಬಾರಿಸಿ ಶಾಪ ಹಾಕುವಳು)

ಮುದುಕಪ್ಪ : ಬಾಯಿ ಮುಚ್ಚಬೇ ರಾಜನ ಮಂದಿ ಕೇಳಿಸಿಕೊಂಡಾರು.
ಎಲ್ಲೆಂದರಲ್ಲೀ ಗೋಡೆಗಳಿಗೆ ಕಿವಿ ಹಚ್ಚಿ ಕುಂತಾರಂತ!

ತುಂಗವ್ವ : ಅಲ್ಲಿ ನೋಡs ಎಕ್ಕಾ, ಹರಳಯ್ಯನ ಮನೀ ಮ್ಯಾಲ
ಎರಡ ಚಿಕ್ಕಿ ಕಾಣಸ್ತಾವಲ್ಲ,
ಅವೆರಡೂ ಸಣ್ಣ ದೀಪಧಾಂಗ ಕಾಣಸೂದಿಲ್ಲಾ?

ಕಾಶವ್ವ : ಅಯ್ಯಯ್ಯ ಸಣ್ಣ ಮನಿಶೇರಾಂಗ
ಕೈಕೈ ಹಿಡಕೊಂಡ ನಡಧಾಂಗ ಕಾಣತಾವ!

ಮುದುಕಪ್ಪ : (ನೋಡುತ್ತ) ಹೌಂದಲ್ಲ,
ಆಕಾಶದಾಗೇನೋ ಹರದಾಡಿಧಾಂಗ ಕಾಣತೈತಿ!
ಥೇಟ್ ಮನಿಶೇರ್ಹಾಂಗs ಕಾಣತಾವ,
ಹರಳಯ್ಯ ಮದುವರಸರ ಆತ್ಮ ಇರಬೇಕೇನ ಮತ್ತ?

ತುಂಗವ್ವ : ಹಿಂಗಂತೀಯೇನ? ಇವತ್ತ ಶಿವರಾತ್ರಿ ಅಮವಾಸಿ,
ಸತ್ತವರ ಆತ್ಮ ಮ್ಯಾಲ ಹೋಗೋವಾಗ
ಹೀಂಗ ಕುಣೀತಾವಂತ!

ಕಾಶವ್ವ : ಯಾಕ?

ಕಲ್ಲಪ್ಪ : ಸಂಸಾರದ ತಾಪತ್ರಯದಿಂದ ಪಾರಾಗಿ
ಜೀವ ಹಗರಾಗತೈತಲ್ಲ;
ಮನೀ, ಮಾರು, ಜಿಂದಗಾನಿ, ದುಃಖ, ಬ್ಯಾಸರ, –
ಎಲ್ಲಾದರಿಂದ ಅವಕ್ಕ ಮುಕ್ತಿ ಸಿಗತೈತಂತ!
ಅದಕ್ಕs ಇರಬೇಕು ಕುಣೀತಾವ!

ಕಲ್ಲಪ್ಪ : ನಮಗೂ ಒಂದೊಂದು ಆತ್ಮ ಇದ್ದಿದ್ದರ
ಎಷ್ಟ ಚಲೋ ಆಗತಿತ್ತು!
ಸತ್ತಮ್ಯಾಲ ನಮ್ಮ ಆತ್ಮ
ಹಿಂಗs ಕುಣಕೋತ ಹೋಗತಿದ್ದುವು!

ತುಂಗವ್ವ : ಆತ್ಮ ಪರಮಾತ್ಮ ಎಲ್ಲಾ ಊಚ ಜಾತಿಯವರಿಗೇ
ಇರತಾವ, ನಮ್ಮಂತವರಿಗಲ್ಲ.

ಕಲ್ಲಪ್ಪ : ಮಹಾಮನ್ಯಾಗ ಶರಣರು
ತಮ್ಮ ತಮ್ಮ ಆತ್ಮ ಅಂಗೈಯಾಗ ಇಟಗೊಂಡು
ಕುಣಿಸ್ಯಾಡತಾರಂತ!
ನಿನಗ್ಗೊತ್ತಿರಬೇಕಲ್ಲ ಮುದುಕಪ್ಪ?
ಅಣ್ಣಾವರು ಎಲ್ಲಾರಿಗು ಒಂದೊಂದು ಆತ್ಮ ಕೊಡತಾರಂತ?

ತುಂಗವ್ವ : ಹೆಂಗೊಂದು?

ಕಾಶವ್ವ : ಪುಕ್ಕಟ ಕೊಡ್ತಾರವಾ. ಅದಕ್ಕ ಲಿಂಗಪ್ಪ ಅಂತಾರ.

ಕಲ್ಲಪ್ಪ : ಪುಕ್ಕಟ ಅಂದರ ಒಂದೆರಡು ತರಬಾರದೇನವಾ ಅಕ್ಕಾ?
ನಾವೂ ಹಾಂಗs ಕುಣಿಸಿಕೋತ ಕುಂದರತಿದ್ದಿವಿ.

ಕಾಶವ್ವ : ನೀವೂ ಮಹಾಮನೀಗಿ ಬರ್ರಿ‍ಅಂದರ ಬರವೊಲ್ರಿ.
ನೀವೂ ಬಂದರ ಅಣ್ಣಾವರು ಹಿಗ್ಗತಾರ.

(ಇವರು ಮೈಮರೆತು ಮಾತಾಡುತ್ತಿರುವಂತೆ ಇನ್ನೊಂದೆಡೆಯಿಂದ ಒಬ್ಬ ಜಂಗಮರ ಹುಡುಗ ಬಂದು ಇವರ ಮನೆಯಲ್ಲಿ ಅಡಗುವನು. ಇದನ್ನು ಇವರ್ಯಾರೂ ಗಮನಿಸಿಲ್ಲ)

ಮುದುಕಪ್ಪ : ಅಣ್ಣಾವರೇನೋ ಹಿಗ್ಗತಾರಂತ ನಾವು ಕುಡಿದೂ ತಿಂದೂ
ಮಹಾಮನೀಗಿ ನುಗ್ಗಬಾರದು. ಮಹಾಮನೀಗಿ
ಹೋಗೋದಂದರ ಒಂದು ವ್ರತ ಇದ್ಧಾಂಗ.

(ಅಷ್ಟರಲ್ಲಿ ಇಬ್ಬರು ರಾಜಭಟರು ಬಂದೊಡನೆ ಎಲ್ಲರೂ ಗಾಬರಿಯಾಗಿ ಎದ್ದು ನಿಲ್ಲುವರು.)

ರಾಜಭಟ : ಒಬ್ಬಾವ ಜಂಗಮರ ಹುಡುಗ ಈ ಕಡೆ ಬಂದರೇನು?

ಮುದುಕಪ್ಪ : ಯಾರೂ ಬರಲಿಲ್ಲರಿ.

ರಾಜಭಟ : ಖರೇ ಹೇಳು. ಮನೀ ಒಳಗ ಅಡಿಗ್ಯಾನೇನು?

ಕಾಶವ್ವ : ಖರೆ ಖರೇನs ಯಾರೂ ಬರಲಿಲ್ಲರಿ.

(ಅಷ್ಟರಲ್ಲಿ ಇನ್ನೊಬ್ಬ ರಾಜಭಟ ಮನೆಯ ಬಾಗಿಲಲ್ಲಿ ನಿಂತು ಒಳಕ್ಕೆ ಕಣ್ಣಾಡಿಸಿ ಬರುವನು.)

ರಾಜಭಟ ೨ : ಇಲ್ಲಿ ಬಂದಿಲ್ಲ ಬಾ. (ಇಬ್ಬರೂ ಹೋಗುವರು.)

ಕಲ್ಲಪ್ಪ : ಇವರವ್ವನ ಈ ರಾಜಾನ ಮಂದೀನ ಕಂಡರ ನನಗ ಆಗಿ
ಬರಾಣಿಲ್ಲ ನೋಡು.

ತುಂಗವ್ವ : ಮೆಲ್ಲಗ ಮಾತಾಡು, ಕೇಳಿಸಿಕೊಂಡಾರು…..
ಅಯ್ಯಯ್ಯ! ಮತ್ತೊಬ್ಬಾವ ಬಂದ!

(ಎಳೇ ವಯಸ್ಸಿನ ಕಾವೀಬಟ್ಟೆ ಧರಿಸಿದ ಹುಡುಗ ಇವರ ಮನೆಯ ಕಡೆಗೇ ಬರುವನು. ನಾಲ್ವರಿಗೂ ಆಶ್ಚರ್ಯ, ಆನಂದ, ಅನುಮಾನಗಳಾಗುತ್ತವೆ. ಹುಡುಗ ಬಂದು ಎಳೆತನದ ಸಹಜತೆಯಿಂದ ಅವರಿಗೆ ನಮಿಸುವನು. ಕಾಶವ್ವ ಅಕ್ಕರತೆಯಿಂದ ಅವನ ಬಳಿಗೆ ಹೋಗುವಳು.)

ಕಾಶವ್ವ : ಯಾರೋ ಮಗ ನೀನು?

ಹುಡುಗ : ನಾನು ಮುಗ್ಧಸಂಗಯ್ಯ.

ಕಾಶವ್ವ : ಸಂಗಯ್ಯ? (ಹುಡುಗನ ಗದ್ದ ಹಿಡಿದು) ಕೂಡಲ ಸಂಗಯ್ಯನ್ಹಾಂಗs
ಇದ್ದೀಯಲ್ಲೊ ಮಗಾ! ಯಾರು ಬೇಕಿತ್ತು?

ಹುಡುಗ : ಸಾವಂತ್ರಿಯ ಮನೆ ಎಲ್ಲಿದೆ ತಾಯಿ?

ಕಾಶವ್ವ : ಸಾವಂತ್ರಿ? ಯಾವ ಸಾವಂತ್ರಿ?

ಹುಡುಗ : ಸೂಳೆ ಸಾಂವತ್ರಿ.

ಕಾಶವ್ವ : ಅಯ್ ಶಿವನ! ಇಂಥಾ ಸಣ್ಣ ವಯಸ್ಸಿನಾಗ
ಅಲ್ಲಿಗ್ಯಾಕ ಹೊಂಟೀಯೊ ನನ್ನಪ್ಪ?

ಸಂಗಯ್ಯ : ಅವಳ ಮನೇಲಿ ನಾನು ಲಿಂಗಪೂಜೆ ಮಾಡಿಕೋಬೇಕು.

ತುಂಗವ್ವ : ಅಹಾಹಾ! ಲಿಂಗಪೂಜೆ ನೀನ್ಯಾಕ ಮಾಡಿಕೋಬೇಕು?
ಅವಳs ನಿನ್ನ ಲಿಂಗಪೂಜೆ ಚೆಲೋ ಹಾಂಗ ಮಾಡ್ತಾಳೇಳು.
ಶಿವರಾತ್ರೀ ಜಾಗರಣೆ ಚೆಲೋ ಮಾಡ್ತಿ ಬಿಡು.

ಕಾಶವ್ವ : ಅಲ್ಲೊ ಮಗಾ, ಮಹಾಮನ್ಯಾಗ ಲಿಂಗಪೂಜಿ
ಮಾಡಿಕೊಳ್ಳೋದ ಬಿಟ್ಟು ಸೂಳೀಮನಿಗೇ ಯಾಕ ಹೋಗ್ತಿ ನೀನು?
ಹೋಗ್ಹೋಗು ಮಹಾಮನೆಯಲ್ಲೇ ಮಾಡಿಕೋಹೋಗು.

ಸಂಗಯ್ಯ : ಸಾವಂತ್ರೀ ಮನೇಲಿ ಮಾಡಿಕೊಂಡರೇ ಒಳ್ಳೇ
ಲಿಂಗಪೂಜೆ ಅಂತ ಬಹಳಷ್ಟು ಶರಣರೇ ಹೇಳಿದರಬೆ.
ಅದಕ್ಕೇ ನಾನು ಅಲ್ಲಿಗೇ ಹೋಗೋದು.
ಸಾವಂತ್ರೀ ಮನೆ ಎಲ್ಲಿ ಅಂತ
ನೀ ಹೇಳ್ತಿಯೋ ಇಲ್ಲೊ?

ಕಾಶವ್ವ : ಕಡ್ಡೀಮುರದ ಹೇಳತೀನಿ, ನಿನಗ ಈ ಮನಿ ನಾ ತೋರಿಸಾಣಿಲ್ಲ.
ನಿನ್ನಂಥ ಅರೀದ ಕೂಸನ್ನ ಕೈಯಾರೆ ಅಡ್ಡದಾರಿ ಹಿಡಿಸಿ
ಯಾವ ನರಕಕ್ಕ ಹೋಗಲೊ ನನ್ನಪ್ಪಾ! ತಿರಿಗಿ ಹೋಗು.

ಸಂಗಯ್ಯ : ನೀ ತೋರಿಸೋದಿಲ್ಲ?

ಕಾಶವ್ವ : ತೋರಿಸೋದಿಲ್ಲ, ನಡಿಯಾಚೆ.
ಅಯ್ಯ ಈ ಕೂಸಿಗಿ ಯಾರೋ ಅಡ್ಡದಾರೀ ತೋರಿಸ್ಯಾರ.
ನೀ ಆದರೂ ಬುದ್ಧೀ ಹೇಳಬಾರದೇನೋ ಹಿರಿಯಾ?

(ಅಷ್ಡರಲ್ಲಿ ಹುಚ್ಚಿ ಬಂದು ಗುರುತು ಹಿಡಿಯಲು ಹುಡುಗನನ್ನ ಅಡಿಯಿಂದ ಮುಡಿ ತನಕ ಪರೀಕ್ಷಿಸುತ್ತ ಅವನ ಸುತ್ತ ಒಮ್ಮೆ ತಿರುಗುವಳು.)

ಸಂಗಯ್ಯ : ಈ ಮುದುಕಿ ಮಾತ್ರ ಮುಖ ಗಂಟ ಹಾಕ್ಕೊಂಡು
ನನ್ನನ್ನೇ ನೋಡ್ತಾ ಬರ್ತಿದಾಳೆ.
ಅಯ್ಯಾ ಶರಣಾ, ಈ ಹೆಣ್ಣ ಮಗಳು ಯಾರು? ಎತ್ತ?

ಮುದುಕಪ್ಪ : ಇವಳೊಬ್ಬ ಹುಚ್ಚು ಮುದುಕಿಯಪ್ಪ.
ಯಾರಂತ ನನಗೂ ಗೊತ್ತಿಲ್ಲ. ಚಾಲುಕ್ಯರ
ಕಾಲದಿಂದಲೂ ಹಿಂಗs
ಯಾರ್ಯಾರ್ನೊ ಅಂದಾಡಿಕೊಂಡು
ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗತಾಳ.
ನೀನೂ ಅವಳ ಗೊಡವೆಗೆ
ಹೋಗದೇ ಇರೋದುತ್ತಮ.

ಸಂಗಯ್ಯ : ಆದರ ಆಕಿ ನನ್ನ ನೋಡಿ ನಗತಿದಾಳಲ್ಲ?

ಹುಚ್ಚಿ : ಯಾರ್ಲಾ ನೀನು? ಯಾರು ಬೇಕಿತ್ತು?

ಸಂಗಯ್ಯ : ಸೂಳೆ ಸಾವಂತ್ರಿ.

ಹುಚ್ಚಿ : ಸೂಳೆ ಸಾವಂತ್ರಿ ಬೇಕ? ಸಾವಂತ್ರೀನs ಬೇಕ?
(ತುಂಗವ್ವ ಮತ್ತು ಕಲ್ಲಪ್ಪ ನಗುತ್ತ ಹೋಗುವರು)

ಸಂಗಯ್ಯ : ನನಗೆ ಸೂಳೆ ಸಾವಂತ್ರೀನೇ ಬೇಕು.

ಹುಚ್ಚಿ : ಬಿಜ್ಜಳನೂ ಅವಳಲ್ಲೇ ಹೋಗ್ತಾನಂತ ಇಟ್ಟಕ.
ಆದರೂ ಹೇಳ್ತೀನೋ ಹುಡುಗ ಅವಳು
ಮುದಿಗೊಡ್ಡು ಕಾಣ್ಲಾ.
ಮುಖದಲ್ಲಿ ಬುರುಡೆ ಬಿಟ್ಟು
ಇನ್ನೇನೂ ಇಲ್ಲ.

ಸಂಗಯ್ಯ : ನನಗೆ ಬೇಕಾದವಳು ಅವಳಲ್ಲಬೇ.
ಅವಳ ಮನೇಲಿ ಕಾಮಾಕ್ಷಿ ಇದ್ದಾಳೆ, ಗೊತ್ತಾ?
ಅವಳು ಬೇಕು.

ಹುಚ್ಚಿ : ಭಲೇ ನನ್ನ ಸರದಾರ!
ಅವಳು ಕೇಳೋವಷ್ಟು ಹಣ ನಿನ್ನತ್ರ ಐತೇನ್ಲಾ?
ಕಣ್ಣ ತಗೆದ ನನ್ನ ಒಂದ ಸಲ ಸಮ ನೋಡಬಾರದ?

ಸಂಗಯ್ಯ : ಹಾ ನೀನು ಯಾರಂತ ಈಗ ನೆನಪಾಯಿತು ನೋಡು:
ನೀನು ಈ ನಗರದ ದೇವತೆ ಕಲ್ಯಾಣಿ ಅಲ್ಲವೆ ತಾಯಿ?

ಹುಚ್ಚಿ : ಹೌದು. ನೀನು ಬಸವಣ್ಣ ಕಲ್ಯಾಣಕ್ಕೆ ಬಂದ ಮೊದಲನೇ ದಿನ
ಅವನೊಂದಿಗೆ ಇದ್ದೆ. ಅಲ್ಲವೆ?
ಬಸವಣ್ಣ ಮುಂದೆ ಮುಂದೆ,
ನೀನವನ ಹಿಂದೆ ಹಿಂದೆ
ಯಾರಿಗೂ ಕಾಣದಂತೆ ನಿಂತಿದ್ದೆ, ಅಲ್ಲವೆ?

ಸಂಗಯ್ಯ : ಹೌದು ತಾಯಿ. ಆ ದಿನ ಆಕಾಶ ಸ್ವಚ್ಛವಾಗಿತ್ತು.
ನಿಚ್ಚಳವಾದ ಬಿಸಿಲಿತ್ತು. ನದಿ ಕಡೆಯ ತಂಗಾಳಿ ಬೀಸಿ
ವಾತಾವರಣ ಆಹ್ಲಾದಕರವಾಗಿತ್ತು.
ಆ ದಿನ ನಾನು ನಿನ್ನನ್ನು ನೋಡಿದ್ದೆ.

ಹುಚ್ಚಿ : ನೀನು ಆ ದಿನ ಯಾರೊಂದಿಗೂ ಮಾತಾಡಲೇ ಇಲ್ಲ.
ಕಣ್ಣಲ್ಲಿ ಕನಸುಗಳ ಕಾಂತಿಯಿತ್ತು.
ಇಂದಿನ ಹಾಗೇ ಅಂದು ನಿನ್ನ ಮುಖ
ಚಂದ್ರನ ಹಾಗೆ ಆನಂದದಾಯಕವಾಗಿತ್ತು ಕಂದಾ.
ಇಂದ್ಯಾಕೋ ಮೋಡ ಮುಸುಕಿದ ಹಾಗಿದೆ. ನಿನ್ನ ಹೆಸರು..

ಸಂಗಯ್ಯ : ಸಂಗಯ್ಯ

ಹುಚ್ಚಿ : ಬಸವಣ್ಣ ಒಂದು ವಚನದಲ್ಲಿ “ಗೆಳೆಯ ನೀನು ಹಳಬ ನಾನು”
ಅಂತ ನಿನ್ನ ನೆನೆದಿದ್ದಾನಲ್ಲವೆ?

ಸಂಗಯ್ಯ : ಹವದು ತಾಯಿ. ಆಗ ಕಲ್ಯಾನ ಹೀಗೆ ಬೆಳೆದಿರಲಿಲ್ಲ.

ಕಾಶವ್ವ : ಅಯ್ಯs ನಿಂತಕೊಂಡs ಮಾತಾಡ್ತೀರಲ್ಲ ಎವ್ವ,
ಕುಂತಕ ಮಗಾ, ನೀನೂ ಕುಂತಕ ಎವ್ವಾ.

(ಮುದುಕಪ್ಪ ಮತ್ತು ಕಾಶವ್ವ ಸರಿದು ಅವರು ಕೂರಲು ಜಾಗ ಮಾಡುವರು.)

ಹುಚ್ಚಿ : ಬಸವಣ್ಣ ಅರಮನೆಗೆ ಬಂದಾಗ
ಹುಬ್ಬುಗಂಟಿಕ್ಕಿದವರೇ ಹೆಚ್ಚು. ಆವಾಗ ಸಂತೋಷದಿಂದ
ಮತ್ತು ಕನಸು ಕಾಣುತ್ತ ನಿಂತವರೆಂದರೆ ನೀವಿಬ್ಬರೇ:
ನೀನು ಮತ್ತು ಬಿಜ್ಜಳ.
ರಾಜ ಬಸವಣ್ಣನಿಗೆ ಅವನು ಕೂರಬೇಕಾದ ಕೊಠಡಿ
ಮತ್ತು ಕಡತಗಳನ್ನು ತೋರಿಸಿದ.

ಸಂಗಯ್ಯ : ಆಮೇಲೆ ನೀನು ಅವನನ್ನ ಅರಮನೆಗೆ ಕರೆದೊಯ್ದು ಬಟ್ಟಲ ತುಂಬ
ಕಾಯ್ದಾರಿದ ಹಾಲು ಕೊಟ್ಟದ್ದು ನನಗಿನ್ನೂ ನೆನಪಿದೆ.

ಹುಚ್ಚಿ : ಹೌದಣ್ಣಾ. ಆಗ ಅರಮನೆ ಪ್ರಶಾಂತವಾಗಿತ್ತು.
ಆಮೇಲೆ ನೀನು ಮತ್ತು ಬಸವ ಕಣ್ಣಲ್ಲಿ ಕಣ್ಣಿಟ್ಟು
ನೋಡಿಕೊಂಡಿರಿ.
ಅವನೇನು ಕೇಳಿಕೊಂಡ, ನೀನೇನು
ಭರವಸೆ ಕೊಟ್ಟೆ,
ನನಗೆ ತಿಳಿಯದು. ಆದರೆ ಬಸವಣ್ಣ
ನಿನ್ನೆರಡೂ ಕೈ ಹಿಡಿದು
ಕಣ್ಣೊತ್ತಿಕೊಂಡು –

ಕಾಳಿಯ ಕಣ್ ಕಾಣದ ಮುನ್ನ
ತ್ರಿಪುರ ಸಂಹಾರದಿಂದ ಮುನ್ನ
ಹರಿವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ ಮುನ್ನ ಮುನ್ನ
ಅಂದಿಂಗೆಳೆಯ ನೀನು ಹಳಬ ನಾನು
ಮಹಾದಾನಿ ಕೂಡಲ ಸಂಗಮದೇವಾ.

ಅಂತ ಹೇಳಿದ್ದು ನೆನಪಿದೆಯೆ? ಆ ದೃಶ್ಯ ಇಂದಿಗೂ ನನ್ನ ಕಣ್ಣು ಕಟ್ಟಿದೆ!

ಸಂಗಯ್ಯ : ನಿನ್ನ ನೆನಪಿನ ಶಕ್ತಿಯ ಬಗ್ಗೆ ಆಶ್ಚರ್ಯವಾಗುತ್ತದೆ ತಾಯಿ.
ಸಂಬಂಧಗಳ ತೊಡಕಿರುವುದು ಅಲ್ಲಿಯೇ.
ಅಂತರಾತ್ಮನೇ ಪ್ರಾಚೀನತಮ. ಅದೇ ಕೂಡಲ ಸಂಗಯ್ಯನನ್ನು,
ಬಸವನನ್ನು ಹುಟ್ಟಿಸಿದ್ದು, ಅದು ಹೇಗೆಂದು ತಿಳಿಯಲು
ಬಸವ ಪ್ರಯತ್ನಿಸಿದ. ಆದರೆ ಕೊನೆಗೂ (..ನಿಟ್ಟುಸಿರು ಬಿಡುವನು)

ಹುಚ್ಚಿ : ನಿನ್ನ ನಿಟ್ಟುಸಿರು ನಾನು ಅರ್ಥಮಾಡಿಕೊಳ್ಳಬಲ್ಲೆ ಸಂಗಯ್ಯ!
ಮರ್ತ್ಯದ ಹಲವಾರು ಸಂಬಂಧಗಳಲ್ಲಿ ನಿನ್ನೊಂದಿಗಿನ
ಮೂಲ ಸಂಬಂಧವನ್ನು ಬಸವಣ್ಣ ಮರೆಯಲೇ ಇಲ್ಲ.
ಅರಮನೆಯ ಪಕ್ಕದಲ್ಲಿ ಮಹಾಮನೆಯನ್ನೂ ಕಟ್ಟಿದ.
ಅರಮನೆ ಮಹಾಮನೆಗಳು ಅಕ್ಕಪಕ್ಕ ಅದ್ದರೂ ಅವರೆಡರ
ಮುಖಗಳು ಮಾತ್ರ ಬೇರೆ ಬೇರೆ ದಿಕ್ಕಿಗೆ ಚಾಚಿದ್ದವು.
ಅರಮನೆಯಲ್ಲಿದ್ದವರಿಗೆ ಮಹಾಮನೆ ಕಾಣಲಿಲ್ಲ.
ಮಹಾಮನೆಯಲ್ಲಿದ್ದವರಿಗೆ ಅರಮನೆ ಕಾಣಲಿಲ್ಲ.
ಮಹಾಮನೆಗೆ ಶರಣರು ಬೇಕು:
ಅವರಿಗೆ ಅರಮನೆಯ ಗುರುತಿಲ್ಲ.
ಅವರು ತಂತಮ್ಮ ಕಾಯಕಗಳಲ್ಲಿ ನಿರತರು.
ಅರಮನೆಗೆ ಕೊಂಡೆಯರು ಬೇಕು. ಕೊಂಡೆಯರು
ಚಾಡಿ ಹೇಳಿದರು.
ಚಾಡಿಯ ಸಮರ್ಥನೆಗೆ ಸುಳ್ಳು ಹೇಳಿದರು.
ಸುಳ್ಳನ್ನ ನಿಜ ಮಾಡಲು ಮೋಸ ಮಾಡಿದರು.
ಪರಿಣಾಮವೆಂದರೆ ಶರಣರು ಕಣ್ಣು
ಕಳೆದುಕೊಳ್ಳಬೇಕಾಯಿತು.
ಮೊನ್ನೆ ಅವರನ್ನು ಶೂಲಕ್ಕೇರಿಸುವಾಗ
ಅಡ್ಡನಿಂತ ನನ್ನನ್ನ
ಬಿಜ್ಜಳ ಅವಮಾನಿಸಿದ.
ಕಲ್ಯಾಣದ ಬದುಕು ಕಗ್ಗಂಟಾಗುತ್ತಿದ್ದಂತೆ
ಬಸವಣ್ಣ ನಿನ್ನನ್ನ ತುಂಬ ಜ್ಞಾಪಿಸಿಕೊಂಡ.
ನೀನು ಬರಲೇ ಇಲ್ಲ.
ನಾನು ಹುಚ್ಚಿಯಾಗಿ
ಬೀದಿ ಬೀದಿ ಅಲೆದರೂ ರಕ್ಷಣೆಗೆ ಯಾರೂ ಬರಲಿಲ್ಲ.
ಎಲ್ಲ ಮುಗಿದ ಮೇಲೆ ಈಗ ಬಂದಿದ್ದೀಯಲ್ಲಪ್ಪ,
ಪರದೆ ಎಳೆಯುವುದಕ್ಕೆ!

ಸಂಗಯ್ಯ : ನಾಟಕ ಮುಗಿಯಲೇಬೇಕಲ್ಲ, ತಾಯಿ.
ನಾಟಕದ ನಾಂದಿಗೆ ಆವಾಹಿತನಾಗಿ ನಾನು ಬಂದಿದ್ದೆ.
ಈಗ ವಿಸರ್ಜನೆ ಅಥವಾ ಭರತವಾಕ್ಯಕ್ಕೆ ಬಂದಿದ್ದೇನೆ.
ಆವಾಹಿತರಾದವರೇ ವಿಸರ್ಜನೆಗೊಳ್ಳಬೇಕಾದ್ದರಿಂದ
ನಾನೇ ಬರಬೇಕಾಯಿತು ತಾಯಿ.

ಹುಚ್ಚಿ : ಭರತವಾಕ್ಯ ಮುಗಿಸಿಕೊಂಡು ನೀನೇನೋ ಆಟ ಕಿತ್ತುಕೊಂಡು
ಹೋಗ್ತೀಯ. ಮುಂದೆ ನನ್ನ ಗತಿಯೇನು?

ಸಂಗಯ್ಯ : ಭರತವಾಕ್ಯವನ್ನ ನಿನ್ನ ಸನ್ನಿಧಿಯಲ್ಲೇ
ಸಾರುತ್ತೇನೆ.
ನೀನಾದರು ನನಗೆ ಸೂಳೆ ಸಾವಂತ್ರಿಯ
ಮನೆ ತೋರಿಸುವೆಯ?

ಹುಚ್ಚಿ : ನಿನಗೆಲ್ಲೋ ಹುಚ್ಚು! ಕಂಡೆಯಾ ಕಲ್ಯಾಣವ?
ಇಂದು ಶಿವರಾತ್ರಿ; ಬೆಳಕಿಲ್ಲ ದೇವಾಲಯಗಳಲ್ಲಿ.
ಕತ್ತಲೆಯಲ್ಲಿ ಅಡಗಿಕೊಂಡಿದ್ದಾವೆ ದೇವರುಗಳೆಲ್ಲ
ರಾಜನಿಗೆ ಹೆದರಿ! ನಗರದೇವತೆಯಾದ ನನಗೇ ಗೊತ್ತಾಗುತ್ತಿಲ್ಲ, –
ಯಾವುದು ನಗರ? ಯಾವುದು ಸ್ಮಶಾನ? ಅಂತ!
ಇನ್ನಿವನಿಗೆ ಸಾವಂತ್ರಿಯ ಮನೆ ತೋರಿಸಬೇಕಂತೆ!
ಆ ಕೆಲಸ ನನ್ನಿಂದಾಗದಪ್ಪ (ಹೋಗುವಳು)

ದಾಮೋದರ : (ಮನೆಯೊಳಗಿನಿಂದ ಹೊರಬಂದು)
ಯಾರ್ಯಾಕೆ ತೋರಿಸಬೇಕು? ನಾನಿದ್ದೇನೆ ಬಾ ಮಿತ್ರಾ.

ಕಾಶವ್ವ : (ಆಶ್ಚರ್ಯದಿಂದ) ಅಯ್ಯ! ಇವ ಎಲ್ಲಿಯವ, ಯಾವಾಗ ಬಂದು ಅಡಗಿದ್ದ?
ಯಾರಲಾ ನೀನು?

ದಾಮೋದರ : ಸುಮ್‌ಕಿರಮ್ಮ ನೀನು!
(ಸಂಗಯ್ಯನಿಗೆ) ನಿನಗೆ ಸೂಳೆ ಸಾವಂತ್ರಿಯ ಮನೆ ತೋರಿಸುತ್ತೇನೆ.
ಬಾ ಅಕೊ ಅಲ್ಲಿ ಬೆಳಕಿರೋ ಮಹಡಿಮನೆ ಇದೆಯಲ್ಲ?
ಅದೇ ಅವಳ ಮನೆ. ನೀನೊಬ್ಬನೇ ಹೋಗಬೇಕು.

(ಅಷ್ಟರಲ್ಲಿ ರಾಜಭಟರು ಒಬ್ಬ ಕಳ್ಳನನ್ನು ಅಟ್ಟಿಸಿಕೊಂಡು ಬರುತ್ತಾರೆ. ಮುದುಕಪ್ಪ ಮತ್ತು ಕಾಶವ್ವ ಗಾಬರಿಯಾಗಿ ಮನೆಯೊಳಕ್ಕೆ ನುಗ್ಗಿ ಬಾಗಿಲಿಕ್ಕಿಕೊಳ್ಳುತ್ತಾರೆ. ತಕ್ಷಣ ದಾಮೋದರ ಬೇರೆ ಕಡೆಗೆ ಓಡಿಹೋಗುತ್ತಾನೆ. ಬೆರಗಿನಿಂದ ಎಲ್ಲವನ್ನು ಗಮನಿಸುತ್ತ ಸಂಗಯ್ಯ ಹಾಗೇ ನಿಂತಿದ್ದಾನೆ. ಅವನು ರಾಜಭಟರಿಗೆ ಕಾಣುವುದಿಲ್ಲ. ಸ್ವಲ್ಪ ಹೊತ್ತು ಹೀಗೇ ಇದ್ದು ಇನ್ನೇನು ರಾಜಭಟರು ಬರುವುದಿಲ್ಲವೆನಿಸಿದಾಗ ಕಾಶವ್ವ ಹೊರಬರುವಳು.)

ಕಾಶವ್ವ : ಆ ಇನ್ನೊಬ್ಬಾವ ಎಲ್ಲಿ ಹೋದನಪಾ ಸಂಗಯ್ಯಾ?
ಮನೆಯಂತ ಮನೆಯೆಲ್ಲಾ ಹೊಲಸ ನಾರಾಕ ಹತ್ತೇತಿ!

ಮುದುಕ : (ಹೊರಬಂದು) ಆ ಇನ್ನೊಬ್ಬ ಹುಡುಗ ಎಲ್ಲಿ ಹೋದ?
ಸತ್ತ ಹೆಗ್ಗಣಧಾಂಗ ನಾರತೈತಲ್ಲ ಮನ್ಯಾಗ?

ಕಾಶವ್ವ : ಮನ್ಯಾಗ ಏನ ಮಾಡ್ಯಾನ ನೋಡು.

(ಮುದುಕ ಒಳಗೆ ಹೋಗುವನು. ದಾಮೋದರ ಮತ್ತೆ ಬರುವನು. ಅಷ್ಟರಲ್ಲಿ ಮುದುಕ ಸರ ತಗೊಂಡು ಹೊರಬರುವನು.)

ಮುದುಕ : ಇಕಾ ಇಲ್ಲಿದೆ ನೋಡೇ ಹೆಗ್ಗಣ!
ಇದ್ಯಾರದು ನಿಂದೇನೋ ತಮ್ಮ?

ದಾಮೋದರ : ಹೌದು.

ಮುದುಕ : (ಅವನ ಮೇಲೆ ಸರ ಚೆಲ್ಲಿ) ತಗೊ ಮಾರಾಯಾ! ಕೊತವಾಲನ ಮ್ಯಾಲ
ಬಿಸಾಕೋಣ ಅಂತಿದ್ದೆ. ಸಧ್ಯ ನೀನೇ ಬಂದೆ, ತಗೊಂಡ್ಹೋಗು.

ದಾಮೋದರ : ಇದರ ಕಿಮ್ಮತ್ತ ಎಷ್ಟ ಗೊತ್ತೈತೇನ?

ಕಾಶವ್ವ : ಎಷ್ಟಾದರು ಇರಲೊ ಎಪ್ಪಾ, ನಮಗ ಅದು ಬ್ಯಾಡ.
ನಾವದನ್ನೇನೂ ಕಾಯಕ ಮಾಡಿ ಗಳಿಸಿಲ್ಲ.
ನಮಗದರ ಗರ್ಜೂ ಇಲ್ಲ. ನೀನs ತಗೊಂಡ್ಹೋಗು. ಬಾ ಮುದುಕಾ.

ದಾಮೋದರ : ಸಂಗಯ್ಯಾ, ಸೂಳೆ ಸಾವಂತ್ರಿಯ ಮನೆ
ಯಾವುದಂತ ಗೊತ್ತಾಯ್ತಲ್ಲ?
ದ್ವಾರಪಾಲಕರಿಗೆ ಈ ಸರ ತೋರಿಸು.
ಅಂದರs ಒಳಗ ಬಿಡತಾರ.
ಸಾವಂತ್ರೀನೇ ಬಂದ ಕೇಳಿದಾಗ ಈ ಸರ ಕೊಡು.
ಅಂದರ ಒಳಗ ಕರೆದುಕೊಂಡು ಹೋಗತಾಳ.
ತಿಳಿಯಿತ? ಹೆದರಬ್ಯಾಡ, ತಗೊ, ಹೋಗು.

(ಸಂಗಯ್ಯ ಸರ ತಗೊಂಡು ಹೋಗುವನು)

ಕಾಶವ್ವ : ಶಿವ ಶಿವಾ ಏನೇನೆಲ್ಲಾ ನಡದೈತೆಲ್ಲೊ ಶಿವನೇ
ನಮ್ಮ ಕೇರೀ ಒಳಗ! ದೇವರು ದಿಂಡರು ಹುಚ್ಚರು
ರಾಜಬಟ್ರು ರಾಜರು ಮಂತ್ರಿಗಳು ಎಲ್ಲಾರೂ ಇಲ್ಲೇ
ಬರಾಕ ಹತ್ಯಾರಲ್ಲೋ ಶಿವನೇ!
ಇನ್ನೂ ಏನೇನು ಕಾದಿದೆಯೋ ಈ ರಾತ್ರಿ!

ದಾಮೋದರ : ನಿನ್ನ ಗುಡಿಸಲಲ್ಲಿ ಇನ್ನೂ ಒಬ್ಬಾವಿದ್ದಾನ! ಹುಷಾರಬೇ.
(ಓಡಿಹೋಗುವನು).