(ಸಾವಂತ್ರಿಯ ಮನೆ. ಒಂದು ವಿಲಾಸದ ಆಸನದಲ್ಲಿ ಸಾವಂತ್ರಿ ಕೂತಿದ್ದಾಗಒಳಗ ಸಂಗಯ್ಯ ಪ್ರೇಕ್ಷಕರ ಕಡೆಗೆ ಬೆನ್ನು ಮಾಡಿ ಮೌನ ಧ್ಯಾನ ಮಾಡುತ್ತಿದ್ದಾನೆ. ಬೇರೆ ಪೂಜಾ ಸಾಮಗ್ರಿಗಾಗಿ ಕಾಮಾಕ್ಷಿ ಹೊರಗಡೆ ಹೋಗಿದ್ದಾಳೆ. ಆಕೆ ಆಮೇಲೆ ಬಂದು ಪೂಜೆಗೆ ಸೇರಿಕೊಳ್ಳುತ್ತಾಳೆ. ಅಷ್ಟರಲ್ಲಿ ಮಾರು ವೇಷದಲ್ಲಿ ಬಿಜ್ಜಳ ಬರುತ್ತಾನೆ. ಆದರೆ ದ್ವಾರಪಾಲಕನಿಗೆ ಗುರುತಾದರೂ ಗುರುತೇ ಸಿಗಲಿಲ್ಲವೆಂಬಂತೆ ಕೋಲು ಚಾಚಿ ತಡೆಯುತ್ತಾನೆ. ಗುರುತು ಸಿಗಲಿಲ್ಲವೆಂದು ಬಿಜ್ಜಳನಿಗೆ ಸಂತೋಷವಾಗುತ್ತದೆ. ಆದರೆ ಸಾವಂತ್ರಿಗೆ ಗುರುತಾಗಿಮಹಾರಾಜರು ದಾರಿ ಬಿಡಯ್ಯಾಎನ್ನುತ್ತಾಳೆ. ಸ್ವಾಗತಿಸಲು ಹೋದ ಸಾವಂತ್ರಿ ಬಾಗಿಲ ಬಳಿಯ ಮಾಡದಲ್ಲಿ ಸರವನ್ನು ಚೆಲ್ಲಿ, ಸೆರಗು ಸರಿಪಡಿಸಿಕೊಂಡು ಸ್ವಾಗತಿಸಲು ಹೋಗುತ್ತಾಳೆ. ಬಿಜ್ಜಳನ ಪ್ರವೇಶ.)

ಸಾವಂತ್ರಿ : ಬರ್ರಿ ಪ್ರಭು, ತಮ್ಮ ದಾರಿಯನ್ನೇ ಕಾಯುತ್ತಿದ್ದೆ.

ಬಿಜ್ಜಳ : ಈ ದಿನದ ಬೇರೆ ವೇಷದಲ್ಲೂ ಇಷ್ಟು ಬೇಗ
ನನ್ನ ಗುರುತು ಹಿಡಿದೆಯಾ?

ಸಾವಂತ್ರಿ : ವೇಷಾಂತರದಲ್ಲಿ ಸಿಂಹ ಬಂದರೂ
ಅದು ಸಿಂಹವಲ್ಲದೆ ಬೇರೇನು ಆಗೋದು ಸಾಧ್ಯ?

ಬಿಜ್ಜಳ : ಹಾಗಾದರೆ ನಾನು ಬರುವಾಗ ಅನೇಕರು ನೋಡಿದರು.
ಅವರಿಗೆಲ್ಲ ಗುರುತು ಸಿಕ್ಕಿತೆಂದೇ ಅಲ್ಲವೇ ನೀನು ಹೇಳೋದು?
ಹಾಗಿದ್ದರೀ ವೇಷಾಂತರದ ಗುಟ್ಟು ಬಯಲಾದಂತೇ ಅಲ್ಲವೆ?

ಸಾವಂತ್ರಿ : ಆದರೆ ಅವರ್ಯಾರೂ ತಮಗೆ ನಮಸ್ಕರಿಸಲಿಲ್ಲ, ಅಲ್ಲವೆ?

ಬಿಜ್ಜಳ : ಅದೊಂದು ಬಾಕಿ, ಆದರೆ ಅವರ್ಯಾರೂ ಅಪರಿಚಿತನ ಬಗೆಗಿನ
ನಿರ್ಲಕ್ಷವನ್ನೂ ತೋರಲಿಲ್ಲ.
ನನ್ನ ವೇಷಾಂತರದ ಭ್ರಮೆಯನ್ನು ನೀನೇ ಸಲೀಸಾಗಿ
ಸುಲಿದು ಬಿಟ್ಟೆಯಲ್ಲ!
ಇರಲಿ, ನಾನು ವೇಷಾಂತರದಲ್ಲಿ ಬರುವುದನ್ನು ನೀನು
ವಾರಗಿತ್ತಿಯರೆದುರು ಕೊಚ್ಚಿಕೊಳ್ಳುತ್ತೀಯೊ?

ಸಾವಂತ್ರಿ : ಮನೆಗೆ ಬರುವ ಗಿರಾಕಿಯ ವಿವರಗಳನ್ನ ಬೇರೆಯವರಿಗೆ
ಕೊಡಲುಂಟೆ ಪ್ರಭು? ಅದು ಸೂಳೆಯರ ಧರ್ಮವಲ್ಲ.
ಬೊಗಳುತ್ತವಾದ್ದರಿಂದ ಗಿರಾಕಿಗೆ ಅನಾನುಕೂಲವಾದೀತೆಂದು ನಾವು
ನಾಯಿಯನ್ನೂ ಸಾಕಿಲ್ಲ.

ಬಿಜ್ಜಳ : ಇರಬಹುದೋ ಏನೋ! ಕಾಮಾಕ್ಷಿಗಿನ್ನೂ ಗುಟ್ಟು
ಗೊತ್ತಾಗಿಲ್ಲ ನೋಡು. ಯಾಕಂದರೆ ನನ್ನನ್ನ ಸ್ವಾಗತಿಸಲಿಕ್ಕೆ
ಅವಳಿನ್ನೂ ಬರಲೇ ಇಲ್ಲ!

ಸಾವಂತ್ರಿ : ಅವಳಿಂದು ಬರಲಾರಳು ಪ್ರಭು.

ಬಿಜ್ಜಳ : ಯಾಕೆ?

ಸಾವಂತ್ರಿ : ಅವಳು ಬೇರೊಬ್ಬರ ಸೇವೆಯಲ್ಲಿದ್ದಾಳೆ.
ಬಿಜ್ಜಳ : (ಕೋಪದಿಂದ) ಏನಂದೆಯೇ ದುಷ್ಟರಂಡೇ, ಬಿಜ್ಜಳನ ವಾರಾಂಗನೆ
ಇನ್ನೊಬ್ಬ ವಿಟನ ಸೇವೆಯಲ್ಲಿರುವಳೋ?

ಸಾವಂತ್ರಿ : ಕೋಪ ಮಾಡಕೋಬ್ಯಾಡ್ರಿ ಪ್ರಭು. ವಿಚಾರನಾರಿಯರಾದ ನಾವು
ಸೇವೆ ಬಯಸಿ ಬಂದ ಎಲ್ಲರನ್ನೂ ಸಮಾನವಾಗಿ ಕಾಣುವುದು
ನಮ್ಮ ವೃತ್ತಿಧರ್ಮ. ತಾವು ಕೊಡುವ ಬೆಲೆಯನ್ನೇ
ಕೊಟ್ಟುದರಿಂದ ಇಲ್ಲವೆನ್ನುವ ಮನಸ್ಸು ನಮಗಾಗಲಿಲ್ಲ.

ಬಿಜ್ಜಳ : (ವ್ಯಂಗ್ಯವಾಗಿ) ಓಹೋ ಧರ್ಮಜಿಜ್ಞಾಸೆ ವೇಶ್ಯಾವಾಟಿಕೆಯವರೆಗೂ
ಬಂದಿತೋ? ಧನ್ಯ ಬಸವಾ ಧನ್ಯ!
(ಸಾವಂತ್ರಿ ಮುಗುಳು ನಗುವಳು.)
ವಾರಾಂಗನೆಯರಿಗೆ ಮಹಾರಾಜರನ್ನು ಕಂಡು
ನಗುವಷ್ಟು ಕೊಬ್ಬು ಬಂತೊ?

ಸಾವಂತ್ರಿ : ತಮ್ಮ ಕೋಪ ಕಂಡು ನಗೆ ಬಂತು ನಿಜ ಪ್ರಭು.
ನಾನು ಮಂಗಳವೇಡೆಯಲ್ಲಿ, ತಾರುಣ್ಯದ ದಿನಗಳಲ್ಲಿ
ನಿಮ್ಮ ಸಖಿಯಾಗಿದ್ದವಳು. ಅಂದಿನ ನಿಮ್ಮ ರಸಿಕತನದ
ಕಥೆಗಳಿಗೆ ನಾಯಕಿಯಾದವರಲ್ಲಿ ನಾನೂ ಒಬ್ಬಳು.
ಕೋಪಗೊಂಡಾಗ ನಿಮ್ಮ ಮಾಂಸದಲ್ಲಿ ಮೂಡುವ ಬಲಾಢ್ಯ
ಚಿರತೆಯ ಪರಿಚಯ ನನಗುಂಟು. ಚಿರತೆಯ
ದಾಳಿಗೊಳಗಾಗಿ ಮೈಮುರಿಸಿಕೊಂಡ ಸುಖದ ನೋವಿನ
ನೆನಪಾಗಿ ನಗು ಬಂತು. ಜೊತೆಯ ಹುಡುಗಿಯರೆಲ್ಲ
ನಾವು ಮುದುಕಿಯರಾದೆವು. ತಮಗೆ ಮಾತ್ರ
ಇನ್ನೂ ಈಗಲೂ ಅದೇ ಪ್ರಾಯ, ಅದೇ ಚಿರತೆಯ ಒರಟು,
ಅದೇ ಕೋಪ. ಅದನ್ನು ನೆನೆದು ನಗು ಬಂತು, ಕ್ಷಮಿಸಿರಿ ಪ್ರಭು.

ಬಿಜ್ಜಳ : ಆಯ್ತು ಮಾರಾಯಳೆ, ನಿನ್ನ ಮುಖಸ್ತುತಿಯ
ಮೆಚ್ಚಿ ಸಿಟ್ಟು ಬಿಟ್ಟೆ.
ಈಗ ಹೇಳು, ಕಾಮಾಕ್ಷಿಯ ಜೊತೆಗಿದ್ದವನು,
ಶ್ರೀಮಂತಿಕೆಯಲ್ಲಿ
ನನ್ನ ಜೊತೆ ಸ್ಪರ್ಧಿಸಿದವನು – ಯಾರವನು?

ಸಾವಂತ್ರಿ : ಇಗೊ ಬಾಗಿಲು ತೆರೆದೇ ಇದೆ. ಇಲ್ಲೇ ಕೂತಿದ್ದಾರೆ.
ತಾವೇ ಖುದ್ದಾಗಿ ನೋಡಬಹುದಲ್ಲ?
(ಬಿಜ್ಜಳ ಅಸಮಾಧಾನದಿಂದಲೇ ಮ್ಯಾಲೆದ್ದು ಒಳಗೆ ನೋಡುವನು. ಅಸಮಾಧಾನ ಹೋಗಿ ಈಗ ಮುಗುಳುನಗೆ ಮೂಡುವದು)

ಬಿಜ್ಜಳ : ಪಾಪದ ಹಾಸಿಗೆಯ ಮೇಲೆ ಲಿಂಗಪೂಜೆ!

ಸಾವಂತ್ರಿ : (ತುಂಟತನದಿಂದ) ದಿನಾಲು ತಾವು ಅದೇ ಪಾಪದ ಹಾಸಿಗೆಯ ಮೇಲೆ….

ಬಿಜ್ಜಳ : ಯಾರು ಈ ಜಂಗಮ?

ಸಾವಂತ್ರಿ : ಮುಗ್ಧಸಂಗಯ್ಯನವರು.

ಬಿಜ್ಜಳ : ಮುಗ್ಧಸಂಗಯ್ಯ! ಇವನನ್ನ ನಾನೆಲ್ಲೋ ನೋಡಿದಂತಿದೆಯಲ್ಲ!…..
ಎಲ್ಲಿ? ಬಸವಣ್ಣ ಇವನ ಪರಿಚಯ ಮಾಡಿಕೊಟ್ಟಿದ್ದ!
ಬಸವಣ್ಣನ ಮನೆಯಲ್ಲಿ ಇವನ ವಾಸ.
ಇವನಿಗಾಗಿ ನಿನ್ನಲ್ಲಿ ಬೇರೆ ಹುಡುಗಿಯರಿರಲಿಲ್ಲವೆ?

ಸಾವಂತ್ರಿ : ಇದ್ದಾರೆ. ಆದರೆ ತನಗೆ ಕಾಮಾಕ್ಷಿಯೇ ಬೇಕೆಂದು
ಈ ಹುಡುಗ ಹಟ ಹಿಡಿದ ಪ್ರಭು.

ಬಿಜ್ಜಳ : (ತಂತಾನೇ ಯೋಚಿಸುತ್ತ) ಓಹೊ ಈ ಮುಗ್ಧಸಂಗಯ್ಯನಿಗೆ
ಬಿಜ್ಜಳನ ಪರೀಕ್ಷೆ ಮಾಡುವ ಛಲವೋ?

ಸಾವಂತ್ರಿ : ತಾವೇ ಯೋಚನೆ ಮಾಡಿ ಪ್ರಭು:
ಇಲ್ಲಿಗೆ ಬರುವ ವಿಟರು ಉಪ್ಪು ಹುಳಿ ಖಾರ ತಿಂದವರು.
ಮೈತುಂಬ ಮಾಂಸವುಳ್ಳವರು, ಮಾಂಸದಲ್ಲೊಂದು
ಮೃಗವನ್ನಿಟ್ಟುಕೊಂಡವರು. ಮೃಗ ಹಸಿದೊಡನೆ ನಮ್ಮ
ಮಾಂಸಗುರಿಯಾಗಿ ಬಂದು ತೃಪ್ತರಾಗಿ
ಹೋಗುತ್ತಾರೆ. ಆದರೆ ಇವರನ್ನು ನೋಡಿರಿ: ಇವರ
ಮೈಯಲ್ಲಿ ಕೊಂಚವಾದರು ಮಾಂಸವಿದೆಯೆ ಪ್ರಭು?

ಬಿಜ್ಜಳ : ನಿಜ ಸಾವಂತ್ರಿ, ಇವನಲ್ಲಿ ಮಾಂಸವಿಲ್ಲ, ಇವನು
ಬೇರೆ ವಿಟರಂತಿಲ್ಲ. ಆದರೂ ನನ್ನ ಒಳಗನ್ನ ಕೆಣಕುತ್ತಿದ್ದಾನೆ.
ಇವನನ್ನು ಕಳಿಸಿದವನು ಯಾರೆಂದು ಬಲ್ಲೆ ನಾನು.

ಸಾವಂತ್ರಿ : ಯಾರು ಪ್ರಭು?

ಬಿಜ್ಜಳ : ಬಸವಣ್ಣ! ಓಹೊ ಬಸವನ ಅವತಾರ ಮಹಾರಾಜರ
ವೈಯಕ್ತಿಕ ಬದುಕನ್ನು ಕೆಣಕುವಷ್ಟು ಮುಂದುವರಿಯಿತೊ!

ಸಾವಂತ್ರಿ : ಇದರಲ್ಲಿ ಬಸವಣ್ಣನವರ ಅವತಾರವೇನಿದೆ ಪ್ರಭು?

ಬಿಜ್ಜಳ : ಕಲ್ಯಾಣದಲ್ಲಿ ಇಬ್ಬರು ರಾಜರಿದ್ದಾರೆ ಸಾವಂತ್ರಿ.
ಒಬ್ಬ  ಮಹಾರಾಜ, ಇನ್ನೊಬ್ಬ ಬಿಜ್ಜಳ ರಾಜ.
ಬಿಜ್ಜಳ ರಾಜ ಅರಮನೆಯಲ್ಲಿ ಬಿದ್ದುಕೊಂಡಿರುವಾಗ, ನನ್ನ
ಅರಮನೆಯ ಗೊತ್ತು ಗುರಿಗಳು ಮೋಸವೆಂದು
ಸಾರಿ ಮಹಾಮನೆ ಕಟ್ಟಿಕೊಂಡ ಬಸವಣ್ಣ. ಅದೇನು ಇನ್ನೊಂದು
ಅರಮನೆಯೆ? ಅದರ ಮೇಲೊಂದು ಧ್ವಜ ಬೇರೆ!
ದರಿದ್ರರು, ಭಿಕ್ಷುಕರು, ಸುಡುಗಾಡ ಸಿದ್ಧರು, ಅಯಗಾರರು
ದಲಿತರು ಹೊಲೆ ಮಾದಿಗರು – ಇವರನ್ನ ಕಟ್ಟಿಕೊಂಡು
ಇವರದೇ ಒಂದು ಸಾಮ್ರಾಜ್ಯ ಕಟ್ಟಿ ಭಿಕಾರಿಗಳ
ಸಾಮ್ರಾಟನಾಗಿದ್ದಾನೆ ಈ ಬಸವ!
ಈ ಹಿಂದೆ ಎಷ್ಟೋ ಜನ ಮಹಾತ್ಮರಿದ್ದರು. ತಂತಮ್ಮ
ಸಿದ್ಧಾಂತಗಳನ್ನು ಬೋಧಿಸಿ ಇಷ್ಟ ಇದ್ದವರು ಅನುಸರಿಸಲಿ,
ಇಲ್ಲದಿದ್ದವನು ಬಿಡಲಿ ಎಂದು ಸತ್ತುಹೋದರು. ಆದರೆ
ಈ ಬಸವರಾಜ ಹಾಗಲ್ಲ. ಸಿದ್ಧಾಂತಗಳನ್ನು ನುಡಿದು
ನುಡಿದದ್ದನ್ನು ನಡೆದು ತೋರಿಸಿ, ಆಮೇಲೆ ತನ್ನದು ಸರಿ ಕಂಡರೆ
ಬನ್ನಿರೆಂದು ಸಾರಿದ ಹುಚ್ಚ! ಭಿಕ್ಷುಕರು ದಲಿತರು
ದರಿದ್ರರು ಇಂಥವರಿಂದ ಅರಮನೆ ಕಟ್ಟಲಾದೀತೆ?
ಕಟ್ಟಿದರೆ ಅದು ಅರಮನೆ ಆದೀತೆ? ಸಾಮ್ರಾಜ್ಯವೆಂದರೆ
ಹೊಲಗೇರಿ, ಹೊರಕೇರಿ, ಭಿಕಾರಿಗಳ ಕೇರಿ – ಇವಿಷ್ಟೇ
ಕೇರಿಗಳ? ಇವಿಲ್ಲದೆಯೇ ಬದುಕುವ ಕೇರಿಗಳು,
ಅಗ್ರಹಾರಗಳು ಊರುಗಳು, ರಾಜಧಾನಿಗಳು ಇದ್ದಾವೆಂದು
ಗೊತ್ತಿಲ್ಲವೇ ಈ ಮುಗ್ಧ ಬಸವನಿಗೆ?

ಸಾವಂತ್ರಿ : ಮಹಾಮನೆಯ ಬಗ್ಗೆ ತಮಗೆ ಯಾರೋ
ತಪ್ಪು ಅಭಿಪ್ರಾಯ ಕೊಟ್ಟಿದ್ದಾರೆ
ಪ್ರಭು. ನಾನು ತಿಳಿದುಕೊಂಡಂತೆ
ಅಣ್ಣನವರ ಪ್ರತಿಯೊಂದು ನಡೆ ನುಡಿಯಲ್ಲಿ
ಒಂದು ನಿಷ್ಠೆ, ಒಂದು ಪ್ರಾಮಾಣಿಕತೆ,
ಒಂದು ಅಂತಃಕರಣ ಇದೆ.
ಭಿಕ್ಷುಕರು, ಭಿಕಾರಿಗಳು ಅಂತ ನೀವು ತಿಳಿದವರು
ಈಗ ಕೆಲಸ ಮಾಡಿ ದುಡಿದು ಊಟ ಮಾಡುತ್ತಿದ್ದಾರೆ!

ಬಿಜ್ಜಳ : ಅದನ್ನವರು ಕಾಯಕ ಅಂತಾರೆ.

ಸಾವಂತ್ರಿ : ಹೌದು ಪ್ರಭು.
ಈಗ ದಲಿತರು, ಆಯಗಾರರು ಸೋಮಾರಿಗಳಲ್ಲ!
ಕಾಯಕ ಜೀವಿಗಳಾದ್ದರಿಂದಲೇ ರಾಜ್ಯದ ವಾರ್ಷಿಕ
ಆದಾಯ ಹೆಚ್ಚಿದೆ ಎಂದು ಭಂಡಾರಿಗಳೇ ಹೇಳಿದ್ದಾರೆ.
ಈ ಜನ ಈಗ ತೃಪ್ತಿಯಿಂದ, ಕಳೆದುಕೊಂಡಿದ್ದ
ದೇವರನ್ನ ಪಡೆದವರ ಹಾಗೆ ಸುಖದಿಂದ,
ನೆಮ್ಮದಿಯಿಂದ ಇದ್ದಾರೆ. ಇದು ಮಹತ್ವದ್ದಲ್ಲವೇ ಪ್ರಭು?

ಬಿಜ್ಜಳ : ಮಂತ್ರಿಯಾದವನು ಇದನ್ನ ಅರಮನೆಯಿಂದಲೇ
ಮಾಡಬಹುದಿತ್ತಲ್ಲ?

ಸಾವಂತ್ರಿ : ಅರಮನೆಯೆಂದರೆ ಕಾನೂನುಗಳು. ಸಾವಿರಾರು ವರ್ಷಗಳಿಂದ
ಅರಮನೆಗಳಿದ್ದರೂ ಅವುಗಳ ಕಾನೂನುಗಳಿಂದ ಅವರಿಗೆ
ನೆಮ್ಮದಿಯಾಗಲಿ ದೇವರಾಗಲಿ ಸಿಕ್ಕಲಿಲ್ಲ.
ಮನುಷ್ಯತ್ವಕ್ಕೂ ಎರವಾದ ಜನ ಅವರು.
ಮನುಷ್ಯನಲ್ಲಿ ದಯೆ ಇರುವುದೇ ಸಾಧ್ಯವಿಲ್ಲವೆಂದು
ನಂಬಿದವರು, ನೀವೇ ಮುಂದಾಗಿ ದಯೆ ತೋರಿದರೂ
ಅದನ್ನು ಅನುಮಾನಿಸುವವರು! ಅಂಥವರನ್ನು
ಪರಿವರ್ತಿಸಿ ಅವರಲ್ಲಿರುವ ದೇವರನ್ನು ತೆರೆದು
ತೋರಿಸುವುದು ಅವರಿವರಿಂದ ಸಾಧ್ಯವೇ ಪ್ರಭು?

ಬಿಜ್ಜಳ : (ವ್ಯಂಗ್ಯವಾಗಿ) ಅಲ್ಲವೆ? ಅದು ಬಸವನಿಂದ ಮಾತ್ರ ಸಾಧ್ಯ!

ಸಾವಂತ್ರಿ : ಸರಿಯಾಗಿ ಹೇಳಿದಿರಿ ಪ್ರಭು.
ಉದಾಹರಣೆಗೆ ಹೇಳುತ್ತೇನೆ:
ಕಾಶ್ಮೀರದಿಂದ ಅಣ್ಣನವರನ್ನು ಕೊಲೆ ಮಾಡಲು ಬಂದ
ಚೋರನೊಬ್ಬ ಅಣ್ಣನವರಿಂದ ಪ್ರಭಾವಿತನಾಗಿ ಕಳ್ಳತನ
ಬಿಟ್ಟು ಶರಣನಾಗಿರುವುದನ್ನು ನಾನು ಪ್ರತ್ಯಕ್ಷ ಭೇಟಿ
ಮಾಡಿದೆ ಪ್ರಭು!

ಬಿಜ್ಜಳ : ಈ ಬೂದಿಪವಾಡದ ಅಗತ್ಯ ನನಗಿಲ್ಲವೆ.
ಧರ್ಮವನ್ನು ಹೇಳುವುದಕ್ಕಾಗಿ ಶಾಸ್ತ್ರಗಳಿವೆ, ವಿವರಿಸಲಿಕ್ಕೆ
ಶಾಸ್ತ್ರಿಗಳಿದ್ದಾರೆ.
ಈಗ ಹೇಳು:
ನಮ್ಮ ರಾಜ್ಯದ ಕಾನೂನು ಹೇಳುತ್ತದೆ:
ರಾಜ್ಯದಲ್ಲಿರುವ ಎಲ್ಲ ಎಲ್ಲದರ ಮೇಲೆ ರಾಜನಿಗೆ
ಹಕ್ಕಿದೆ. ಮಹಾರಾಜರಾದ ಬಿಜ್ಜಳ ದೊರೆಗಳು –
ನಾವು ಕೇಳುತ್ತಿದ್ದೇವೆ: ನಮಗೆ ಕಾಮಾಕ್ಷಿ ಬೇಕು.
ಅವಳು ಎಲ್ಲಿದ್ದರಲ್ಲಿಂದ, ಹ್ಯಾಗಿದ್ದರೆ ಹಾಗೇ ಬೇಕು.
ಕರೆದುಕೊಂಡು ಬಾ.

ಸಾವಂತ್ರಿ : ಸ್ವಚ್ಛಂದವಾಗಿ ದೇಹ ಮಾರುವುದಕ್ಕೆ ಬಂದವರಲ್ಲ ನಾವು.
ನಮಗೂ ನಿಯಮಗಳಿವೆ ಸ್ವಾಮಿ. ಸಂದರ್ಭಾನುಸಾರ
ಮುಖ ನೋಡಿ ಮಣೆ ಹಾಕುವ ನಿಯಮಗಳಲ್ಲ ಇವು.
ಎಲ್ಲರಿಗೂ ಸಮಾನವಾದ ನಿಯಮಗಳು.
ಸಂಗೀತದಲ್ಲಿ ಅಂತರ್ಗತ ನಿಯಮಗಳಿರುವಂತೆ
ಸ್ತ್ರೀಯ ದೇಹದೊಳಗೂ ಇವೆ.
ಇಲ್ಲದಿದ್ದರೆ ಸ್ತ್ರೀ ಜಗತ್ತನ್ನು ವಿವರಿಸಲಾದೀತೆ?
ಕೈಕೈ ಹಿಡಿದು ಏಳು ಹೆಜ್ಜೆ ಹಾಕಿದಾಗ ಉಂಟಾದ
ಸ್ಪರ್ಶದ ಅನುಭವವನ್ನು ಆಜನ್ಮ ಪರ್ಯಂತ
ನೆನಪಿಟ್ಟುಕೊಂಬುವಳು ಮಡದಿ. ಸ್ಪರ್ಶದ ಅನುಭವವನ್ನು
ಅದು ಮರೆಯಾದೊಡನೆ ಮರೆಯುವವಳು ಸೂಳೆ.
ತಮ್ಮ ಸ್ಪರ್ಶ ಆಗಲೇ ಕಾಮಾಕ್ಷಿಗೆ ಮರೆವಾಗಿದೆ ಪ್ರಭು.
ಗಿರಾಕಿಯ ಕಣ್ಣಿನಿಂದ ನೋಡಿ ತನ್ನ ಬೆಲೆ
ಕಟ್ಟಿಕೊಳ್ಳುವುದಿಲ್ಲ ಇಲ್ಲಿಯ ಹೆಣ್ಣು. ತನ್ನನ್ನು ತಾನೇ
ಕನ್ನಡಿಯಲ್ಲಿ ನೋಡಿಕೊಂಡು ಬೆಲೆಕಟ್ಟಿಕೊಳ್ಳುತ್ತಾಳೆ.
ಅವಳ ಬೆಲೆಯನ್ನು ಒಪ್ಪುವ ಗಿರಾಕಿಗೆ ತನ್ನನ್ನು
ಒಪ್ಪಿಕೊಳ್ಳುತ್ತಾಳೆ. ಪ್ರೀತಿಯಲ್ಲಾದರೆ ಹೆಣ್ಣುಗಂಡು
ಇಬ್ಬರೂ ಒಂದಾಗಿ ಒಬ್ಬರು ಇನ್ನೊಬ್ಬರ ಕಣ್ಣಲ್ಲಿ ನೋಡಿಕೊಳ್ಳುತ್ತ
ತಮಗೆ ಬೇಕಾದ ಜಗತ್ತನ್ನು ಕಟ್ಟಿಕೊಳ್ಳುತ್ತಾರೆ.
ಬಲಾತ್ಕಾರದಲ್ಲಾದರೆ ಹೆಂಗಸನ್ನ ಬಲಿಹಾಕಿ
ಉಸಿರುಗಟ್ಟುವಂತೆ ಮಾಡಿ, ಆ ಈ ಕಡೆ ನೋಡಲು
ಬೆಳಕಿಲ್ಲದಂತೆ ಮಾಡಲಾಗುತ್ತದೆ. ನಿಮ್ಮ ರಾಜ್ಯದಲ್ಲಿ ಮಾತ್ರ
ಎಲ್ಲದಕ್ಕೂ ರಾಜರೇ ಬೆಲೆಗಟ್ಟುತ್ತಾರೆ.
ಈ ರಾಜ್ಯದಲ್ಲಿ ನಾಗರಿಕ ಆಡಳಿತ ಇರುವುದೇ
ನಿಜವಾದರೆ ತಾವು ಬಲಾತ್ಕಾರದಿಂದ ಅಧಿಕಾರ
ಚಲಾಯಿಸಬಾರದು ಪ್ರಭು.

ಬಿಜ್ಜಳ : ಎದುರಾಳಿಯ ಬಾಯಿ ಮುಚ್ಚುವಂತೆ ವಾದ ಮಾಡುವುದಕ್ಕೆ
ಎಷ್ಟು ಚೆನ್ನಾಗಿ ಕಲಿತಿದ್ದೀಯೆ?
ಮೇಲಿಂದ ಮೇಲೆ ತೆರಿಗೆ ಅಂತಿರುವೆಯಲ್ಲ, – ಈಗ
ಸಂಗಯ್ಯ ಕಾಮಾಕ್ಷಿಗೆ ಕೊಟ್ಟ ಬೆಲೆ ಎಷ್ಟೆಂದು ಹೇಳು.
ಅದಕ್ಕೆ ತೆರಿಗೆ ನಿರ್ಧರಿಸಬೇಕು.

ಸಾವಂತ್ರಿ : ಹೌದೆ? ಇಗೋ ಕೊಟ್ಟೆ. ಅಯ್ಯಾ,
(ದ್ವಾರಪಾಲಕನಿಗೆ) ಪಾದರಕ್ಷೆ ಇಡುವ ಕೆಳಗಿನ ಮಾಡದಲ್ಲಿ
ಇಟ್ಟೆನಲ್ಲ, ಆ ಸರ ತಗೊಂಬಾ.
(ದ್ವಾರಪಾಲಕ ಮಾಡದಲ್ಲಿನ ಸರ ತಗಂಬಂದು ಕೊಡುವನು. ಅವನು ಮಾಡದಲ್ಲಿ ಕೈ ಹಾಕಿದ್ದರಿಂದ ಹಿಡಿದು ಅದನ್ನಾತ ತಂದು ಬಿಜ್ಜಳನ ಕೈಗೆ ಕೊಡುವುದರವರೆಗೂ ರಾಜ ಆಶ್ವರ್ಯ, ಆಸಕ್ತಿಗಳಿಂದ ಗಮನಿಸುತ್ತಾನೆ. ಸರ ನೋಡಿದೊಡನೆ ಅವನ ಕಣ್ಣು ಅರಳುವದು.)

ಬಿಜ್ಜಳ : ಈ ಸರದ ಬೆಲೆ ಎಷ್ಟೆಂದು ಗೊತ್ತೊ?

ಸಾವಂತ್ರಿ : ಗೊತ್ತಿಲ್ಲ ಪ್ರಭು! ತನ್ನ ಬೆಲೆಗಿಂತ
ಇದು ಹೆಚ್ಚಿದೆಂದು, ಆದ್ದರಿಂದ ತನಗೆ ಬೇಡವೆಂದು
ಕಾಮಾಕ್ಷಿಯೇ ಹಿಂದಿರುಗಿ ಕೊಟ್ಟಳು. ನಾನು ಅದನ್ನ
ಕೊತವಾಲನಿಗೆ ಕೊಡೋಣವೆಂದು ಅಲ್ಲಿ ಇಟ್ಟಿದ್ದೆ.
ಈಗ ತಮ್ಮ ಕೈಗೇ ಸಿಕ್ಕಂತಾಯಿತು.

ಬಿಜ್ಜಳ : ಎಲಗೇ, ಹಲವಾರು ಲಕ್ಷ ಹಣ ಇದರ ಬೆಲೆ!
ಈಗಲಾದರೂ ವಾಪಸ್ ತಗೊಳ್ತೀಯಾ?

ಸಾವಂತ್ರಿ : ನಮಗೆ ಬೇಡವಾದದ್ದು ಎಷ್ಟು ಲಕ್ಷ ಹಣವಾದರೇನು ಪ್ರಭು?
ನಮ್ಮನ್ನು ಮೀರಿದ್ದು ನಮಗದು ಕಲ್ಲು!
ಆತ್ಮಸಂತೋಷಕ್ಕಾಗಿ ಸಂಗಯ್ಯನ ಸೇವೆ
ಮಾಡುವೆನೆಂದು ಕಾಮಾಕ್ಷಿಯೇ ಹೇಳಿದಳು,
ಹಾಗೇ ಮಾಡುತ್ತಿದ್ದಾಳೆ.

ಬಿಜ್ಜಳ : ನಿನಗೂ ಇದು ಬೇಡವೆ?

ಸಾವಂತ್ರಿ : ಮಾಡಿದ ಕೆಲಸ, ಕೊಂಬ ಪ್ರತಿಫಲ – ಎರಡಕ್ಕೂ
ತಾಳೆ ಇರಬೇಕು ಪ್ರಭು.
ಅದಿಲ್ಲವಾದರೆ ಅದು ಭ್ರಷ್ಟಾಚಾರ.

ಬಿಜ್ಜಳ : ಸೂಳೆತನವನ್ನು ಸಮಥಿಸಿಕೊಳ್ಳುತ್ತೀಯಲ್ಲೆ!
ನಾಚಿಕೆಯಾಗೋದಿಲ್ಲ ನಿನಗೆ?

ಸಾವಂತ್ರಿ : ಶ್ರೀಮಂತನೊಬ್ಬ ಕದ್ದ ಹಣದಿಂದ ಶ್ರೀಮಂತನಾದ ಬಗ್ಗೆ
ಕೊಚ್ಚಿಕೊಂಬಾಗ,
ಜನರನ್ನ ಕೊಂದು ರಾಜನಾದವನು, ತನ್ನ
ವಿಜಯಗಳ ಬಗ್ಗೆ ಕೊಚ್ಚಿಕೊಂಬಾಗ,
ಭ್ರಷ್ಟಾಚಾರದಿಂದ ಮೇಲೇರಿದ ಅಧಿಕಾರಿ
ತನ್ನ ಅಧಿಕಾರದ ಬಗ್ಗೆ ಕೊಚ್ಚಿಕೊಂಬಾಗ –
– ನಾಚಿಕೊಳ್ಳುವರೇ ಸ್ವಾಮಿ?
ಇವರೇ ನಾಚಿಕೊಳ್ಳದೆ ಇರುವಾಗ, ಕಾಯಕ
ಅಂತ ಮೈಮಾರಿ ಪ್ರಾಮಾಣಿಕವಾಗಿ ಗಳಿಸಿದ ಹಣದಲ್ಲಿ
ತೆರಿಗೆ ಕಟ್ಟುವ ನಾವು ಯಾಕೆ ನಾಚಿಕೊಳ್ಳಬೇಕು?
ಅವರ ಜೀವನ ಶೈಲಿಯಲ್ಲಿ ಕಾಣದ ವಿಕೃತಿ
ನಮ್ಮ ಜೀವನ ಶೈಲಿಯಲ್ಲೇ ಕಾಣುವುದಲ್ಲ, ಯಾಕೆ?
ತಾವು ರಾಜರು ಎಲ್ಲರೂ ಗೌರವಾನ್ವಿತರಾಗಿ ಬದುಕುವ
ವ್ಯವಸ್ಥೆ ಮಾಡಬೇಕಿತ್ತು. ತಾವೇ ರಾತ್ರಿ ಇಲ್ಲಿಗೆ
ವೇಷಾಂತರದಲ್ಲಿ ಬರುವಾಗ ನಮಗೆ ಬೋಧನೆ
ಮಾಡುವುದು ಅಸಹಜವಲ್ಲವೆ ಪ್ರಭು?

ಬಿಜ್ಜಳ : (ಆಘಾತದಿಂದ ತತ್ತರಿಸುವನು)
ಸಾಕು ಈಗ ಹೇಳು ಇದು ಮುಗ್ಧಸಂಗಯ್ಯನ
ಕೈಗೆ ಹ್ಯಾಗೆ ಬಂತು?

ಸಾವಂತ್ರಿ : ಗೊತ್ತಿಲ್ಲ ಪ್ರಭು.

ಬಿಜ್ಜಳ : ಇದು ಅರಮನೆಯಲ್ಲಿ ಇವತ್ತೇ ಕಳುವಾದ ಸರ, ಗೊತ್ತ?
ಇದನ್ನು ಜಂಗಮನೊಬ್ಬ ಕದ್ದ ಅಂತ,
ಕೊತವಾಲ ಮತ್ತವನ ರಾಜಭಟರು ಜಂಗಮನ
ಬೆನ್ನು ಹತ್ತಿ ಊರ ತುಂಬ ಓಡಾಡುತ್ತಿದ್ದಾರೆ,
ಇದೂ ಗೊತ್ತ?

ಸಾವಂತ್ರಿ : ಇದ್ಯಾವುದೂ ನಮಗೆ ಗೊತ್ತಿಲ್ಲ ಪ್ರಭು. ಈ ಸರ
ಮುಗ್ಧಸಂಗಯ್ಯನವರ ಕೈಯಲ್ಲಿತ್ತು, ಅಂದ ಮೇಲೆ
ಅದು ಹ್ಯಾಗೆ ಬಂತೆಂದು ಅವರೇ ವಿವರಿಸುತ್ತಾರೆ.
ಎದ್ದು ಬಂದ ಮೇಲೆ ಅವರನ್ನು ಬೇಕಾದರೆ
ತಮ್ಮಲ್ಲಿಗೆ ಕಳಿಸುತ್ತೇನೆ. ಅಥವಾ ಕೊತವಾಲರು ಬಂದರೆ….
(ದ್ವಾರಪಾಲಕ ಅವಸರದಲ್ಲಿ ಬರುವನು.)

ದ್ವಾರಪಾಲಕ : ಅಮ್ಮಾ ಬಸವದಂಡನಾಯಕರು ಬಂದಿದ್ದಾರೆ!
ಒಳಗೆ ಬರಬಹುದೆ? ಅಂತ ಕೇಳುತ್ತಿದ್ದಾರೆ!

ಸಾವಂತ್ರಿ : ಬಸವಣ್ಣನವರು! ನನ್ನ ಮನೆಗೆ! ಬಂದೆ ಇರು –
(ಆಶ್ಚರ್ಯದಿಂದ ಎದ್ದು ಸೆರಗು ಸರಿಪಡಿಸಿಕೊಂಡು ಬಾಗಿಲಿನತ್ತ ಹೋಗುವಳು. ಬಿಜ್ಜಲ ಆಶ್ಚರ್ಯದಿಂದ ಕಡೆ ನೋಡುತ್ತಿರುವಾಗ ಬಸವ ಬಂದು ಬಾಗಿಲಲ್ಲಿ ನಿಂತುಕೊಳ್ಳುವನು.)