(ಜಂಗಮ ವೇಷದಲ್ಲಿರುವ ಇಬ್ಬರು ಹರಿಹರ, ದಾಮೋದರತಂದೆ, ಮಗ ಹೆದರಿ ಹಿಂದೆ ಮುಂದೆ ನೋಡಿಕೊಂಡು ಓಡಿ ಬರುವರು. ಕಟ್ಟೆಯ ಮೇಲೆ ಕೂತು ಟಕಮಕ ನೋಡುತ್ತಾರೆ. ಆದರೆ ಅಲ್ಲೇ ಕೊಂಚ ದೂರದಲ್ಲಿ ಮರದ ಕಟ್ಟೆಯ ಮೇಲೆ ಕೂತ ಕಳ್ಳ ಚಿಕ್ಕಣ್ಣ ಇವರನ್ನು ನಿರ್ಲಕ್ಷಿಸಿ ತನ್ನ ಪಾಡಿಗೆ ತಾನು ಸಾವಂತ್ರಿಯ ಮನೆಯ ಕಡೆಗೇ ನೋಡುತ್ತ ಕೂತಿದ್ದಾನೆ. ಇಬ್ಬರೂ ಚಿಕ್ಕಣ್ಣನಿಗೆ ಕೇಳಿಸದಂತೆ ಮಾತಾಡಿಕೊಳ್ಳುತ್ತಾರೆ.)

ಹರಿಹರ : ನಾವೇನಾರ ತಪ್ಪಿ ದಲಿತರ ಕೇರಿಗೆ ಬಂದೀವೇನು?

ದಾಮೋದರ : ಹೌದೊ ಏನೊ!

ಹರಿಹರ : ಮುಠ್ಠಾಳ ನಿನಗೊಂದು ಮಡಿ ಇಲ್ಲ, ಮೈಲಿಗೆ ಇಲ್ಲ.

ದಾಮೋದರ : ಮೊದಲು ರಾಜಭಟರಿಂದ ಪಾರಾಗೋದನ್ನ
ನೋಡಿಕೊಳ್ಳಪ್ಪ. ಆಮ್ಯಾಲ ಬೇಕಾದರ
ಸ್ನಾನ ಮಾಡಿದರಾಯ್ತು.

ಹರಿಹರ : ಏನ ಚಂಡಾಲ ಮಗ ಹುಟ್ಟಿದ್ದೀಯೋ ನನ್ನ ಮನೆತನದಾಗ!
ನಿನ್ನನ್ನು ಎಷ್ಟ ಬೈದರೂ ನನ್ನ ಕೋಪ ಹೋಗೋದಿಲ್ಲ.

ದಾಮೋದರ : ಹಾಂಗಿದ್ದರ ಬೈಬ್ಯಾಡ ಸುಮ್ಮನಿರು.

ಹರಿಹರ : ನೀ ಮಾಡಿದ ಕೆಲಸಕ್ಕ ಬೈಲಾರದs
ಹೆಂಗಿರಲೋ ಮುಠ್ಠಾಳ?

ದಾಮೋದರ :ಹಂಗಾದರ ಸುರು ಮಾಡು.

ಹರಿಹರ : ಅಯೋಗ್ಯ.

ದಾಮೋದರ : ನಿಜ.

ಹರಿಹರ :ನೀಚ.

ದಾಮೋದರ : ನಿಜ.

ಹರಿಹರ : ಧಗಾಕೋರ.

ದಾಮೋದರ : ಏನಾದರೂ ಹೊಸ ಬೈಗಳ ಬಯ್ಯಪ್ಪಾ.
ಹಳೇವು ಕೇಳಿ ಕೇಳಿ ಸಾಕಾಗಿ ಹೋಗಿದೆ.

ಹರಿಹರ : ಲೇ ನೀನು ಚಂಡಾಲ.

ದಾಮೋದರ : ಇದೂ ಹಳೇದೇ. ನಾನು ಚಂಡಾಲ, ನೀಚ,
ಧಗಾಕೋರ ಇಷ್ಟಕ್ಕೂ ನಿನ್ನ ಬೈಗಳೆಲ್ಲಾ ಮುಗಿದುವ?

ಹರಿಹರ : ನಿನಗ ನಾಚಿಕೆ ಬರೋ ಬೈಗಳು ಯಾವುದು? ಅದನ್ನ ಹೇಳು.

ದಾಮೋದರ : ನಿನ್ನ ಮಗನಾಗಿರೋದು.

ಹರಿಹರ : ನಾಚಿಕೆ ಬರೋವಂಥಾದ್ದು ನಾನೇನ ಮಾಡಿದ್ನೋ ಮಗನ?

ದಾಮೋದರ : ಅರಮನೆಯೊಳಗಿನ ಚಂದ್ರಸರ ಕದಿಯೋದಕ್ಕೆ
ಹೇಳಿದವನೂ ನೀನೇ. ಈಗ ಧಗಾಕೋರ ಅಂತ
ಬಯ್ಯೋನೂ ನೀನೇ!

ಹರಿಹರ : ಯಾರಾದರೂ ಕೇಳಿಸಿಕೊಂಡಾರು
ಮೆಲ್ಲಗ ಮಾತಾಡೋ ಮಗನೇ.

ದಾಮೋದರ : ಕೇಳಿಸಿಕೊಳ್ಳಬೇಕು. ಅರಮನೇಲಿ ಯಾರೋ
ನನ್ನ ಗುರುತ ಹಿಡಿದರು.
“ನೀನು ಹರಿಹರನ ಮಗ
ದಾಮ್ಯಾ ಅಲ್ಲ?
ನೀ ಯಾವಾಗ ಶಿವಶರಣನಾದೆಯಪ್ಪ?” ಅಂದರು!

ಹರಿಹರ : ಯಾರೋ ಹಾಗಂದವರು?

ದಾಮೋದರ : ನನಗೇನು ಗೊತ್ತು? ಹೆದರಿ ಅವರ ಕಡೆ ನೋಡದs
ಓಡಿ ಬಂದೆ. ಅರಮನೆಯ ತೊಲೆಬಾಗಲ
ಇನ್ನೂ ದಾಟಿರಲಿಲ್ಲ,
ಅಷ್ಟರಾಗ ಯಾರೋ ಕಳ್ಳ ಕಳ್ಳ
ಹಿಡೀರಿ ಅಂತ ಒದರಿದರು.
ಕೆಟ್ಟೆನೋ ಎಪ್ಪಾs
ಅಂತ ಓಡಿ ಓಡಿ ಬಂದೆ.

ಹರಿಹರ : ಸಧ್ಯ ಅಪ್ಪಾ ಅಂದೀದಿ, ನನ್ನ ಹೆಸರ ಹೇಳಿಲ್ಲವಲ್ಲ!
ದಾಮೋದರ : ‘ಹರಿಹರನ ಮಗ ಅಲ್ಲ?’ ಅಂತ ಕೇಳಿದರಲ್ಲ, ಅದಕ್ಕೇನರ್ಥ?

ಹರಿಹರ : ಅಯ್ಯೊ ಅಯ್ಯೊ ಅಯ್ಯೊ! ಚಂಡಾಲ ಮಗನೇ,
ನಿನ್ನ ಹಡೆಯೋದಕ್ಕೆ ಬದಲು ನಿನ್ನ ತಾಯಿ ಒಂದು
ಕಲ್ಲನ್ನಾದರು ಹೆತ್ತಿದ್ದರೆ ಚಲೊ ಇತ್ತಲ್ಲೊ!

ದಾಮೋದರ : ನಿನ್ನ ನೋಡಿದರೆ ನಾನು ಕಪಿಯಾಗೇ
ಹುಟ್ಟಬೇಕಾಗಿತ್ತು. ಅದರೇನು….

ಹರಿಹರ : ಅಲ್ಲಿ ಕೂತವ ಯಾರವನು?
ನಮ್ಮನ್ನs ನೋಡಾಕ ಹತ್ಯಾನ. ನಮ್ಮ ಗುರುತ ಸಿಕ್ಕಿರಬೇಕೇನು?

ದಾಮೋದರ : ನಮ್ಮ ವೇಷ ನೋಡಿಕೊಳ್ಳಪ್ಪ.
ಈ ವೇಷದೊಳಗ ಅದೂ ದಲಿತರ ಕೇರೀ ಒಳಗ
ನಮ್ಮ ಗುರುತ ಯಾರು ಹಿಡೀತಾರ?
ಅಪಾ, ರಾಜಭಟರು ಬಂದರು.

ಹರಿಹರ : ಓಡಿಹೋಗಬೇಡ. ಸುಮ್ಮನೆ ಇರು.
ಮೆಲ್ಲಗ ನಾವೂ ಅವನ ಹತ್ತಿರ ಹೋಗಿ ಕುಂತ್ಕೊಳ್ಳೋಣ, ಬಾ.
(ಇಬ್ಬರೂ ಚಿಕ್ಕಯ್ಯನ ಬಳಿಗೆ ಹೊಗಿ ಕೂರುವರು.)

ಚಿಕ್ಕಯ್ಯ : ಶರಣರೀ ಅಯ್ಯನವರs.

ಹರಿಹರ : ಶರಣಪಾ ಶರಣು. ಬಸವಾ ಬಸವಾ…
ಏನು ಶಕೆ, ಏನು ಶಕೆ!

ಚಿಕ್ಕಯ್ಯ : ನೀವು ಶರಣರಾಗಿ ಮೂರು ತಾಸು ಆಗಿರಬೇಕು, ಅಲ್ರಿ?

ಹರಿಹರ : (ಬೆಚ್ಚಿ) ನಾವು ಶರಣರಾದವರಲ್ಲಪಾ, ಹುಟ್ಟಾ ಶರಣರು…..
ಅಂಧಾಂಗ (ಚಿಕ್ಕಯ್ಯನ ಹತ್ತಿರಕ್ಕೆ ಹೋಗಿ) ನಾವು ಮೂರು ತಾಸಿನ
ಶರಣರಂತ ನಿನಗ್ಯಾಕ ಅನ್ನಿಸ್ತು?

ಚಿಕ್ಕಯ್ಯ : ಕಳ್ಳರಿಗೆ ಕಳ್ಳರ ಗುರುತು ಸಿಗಾಣಿಲ್ಲೇನ್ರಿ?

ದಾಮೋದರ : ಛೇ ಛೇ! ನಾವು ಕಳ್ಳರಲ್ಲರೀ.
ಇತ್ತೀಚೆಗೆ ದೀಕ್ಷಾ ತಗೊಂಡೀವಿ.

ಹರಿಹರ : ನೀವೂ ಕಳ್ಳರs ಅಂಧಾಂಗಾಯ್ತು.

ಚಿಕ್ಕಯ್ಯ : ನನ್ನ ಹೆಸರs ಕಳ್ಳ ಚಿಕ್ಕಯ್ಯ ಅಂತೀನಿ!

ದಾಮೋದರ : ನಾವು ಖರೇನs ಶರಣರು, ಅಂತೀನಿ.

ಚಿಕ್ಕಯ್ಯ : ನೋಡ್ರಿ ಅಯ್ಯನವರs, ಒಂದು ಸುಳ್ಳು
ಮುಚ್ಚೋದಕ್ಕ ಒಂದs ಸುಳ್ಳ ಹೇಳಬೇಕ್ರಿ.

ಅಂದರ ಬಚಾವಾಗ್ತೀರಿ.
ಒಂದು ಮುಚ್ಚೋದಕ್ಕ ಹತ್ತ ಸುಳ್ಳ ಹೇಳಿದರ
ಮುಚ್ಚೋದರ ಬದಲು ಅವು ತೆರಕೊಳ್ಳತಾವ್ರಿ.
ಅಷ್ಟs ಅಲ್ಲ ನೀವು ಭಾಳ ಬೇಗನೆ ದಿವಾಳಿ
ತೆಗೀತೀರಿ.

ಹರಿಹರ : ನನಗs ಸುಳ್ಳ ಅನ್ನೋನು ಯಾವನಯ್ಯ ನೀನು?

ಚಿಕ್ಕಯ್ಯ : ಹೇಳಿದೆನಲ್ಲ ಕಳ್ಳ ಚಿಕ್ಕಯ್ಯ ಅಂತ.
ಅಗಾ ಬೇಹುಗಾರರು ಬರೋ ಹೊತ್ತು! ನೋಡಿಕೊಂಡು ಮಾತಾಡ್ರಿ.
ಏನಾದರೂ ಎಡವಟ್ಟಾದರ ನೀವs ಸೈ, ನಿಮಗ ಅವರs ಸೈ.

ಹರಿಹರ : (ಭಯದಿಂದ) ಕ್ಷಮಿಸಬೇಕು, ವಯಸ್ಸಾಯ್ತು ನೋಡ್ರಿ,
ನಾಲಗೆ ಆಗಾಗ ನಿಯಂತ್ರಣ ತಪ್ಪತೈತಿ.
ದಯಮಾಡಿ ತಮ್ಮ ಪರಿಚಯ ಮಾಡಿಕೊಟ್ಟರ…

ಚಿಕ್ಕಯ್ಯ : ನಾನು ಶಿವಶರಣ ಕಳ್ಳ ಚಿಕ್ಕಯ್ಯ. ಕಳ್ಳನಿದ್ದವನು ಹೆಂಗ
ಶಿವಶರಣಾದೆಪ? ಅಂತ ಕೇಳ್ರೆಲ್ಲ.

ದಾಮೋದರ : ಕಳ್ಳನಾಗಿದ್ದವನು ನೀ ಹೆಂಗ ಶಿವಶರಣಾದಿ
ಶಿವಶರಣ ಕಳ್ಳ ಚಿಕ್ಕಯ್ಯ?

ಚಿಕ್ಕಯ್ಯ : ನಿಮ್ಮ ಮಗ ಬೆರಿಕಿ ಅದಾನ್ನೋಡ್ರಿ ಅಯ್ಯನವರ.
ತಮ್ಮಾ ನೀ ನನ್ನ ಕತಿ ಕೇಳಾಕsಬೇಕು.
ನಾನು ಕಳ್ಳ ಚಿಕ್ಕಯ್ಯ, ಕಾಶ್ಮೀರದವ.
ಬಸವಣ್ಣನವರನ್ನ ಕೊಲೆ ಮಾಡಬೇಕಂತ
ಅಷ್ಟ ದೂರದಿಂದ ಬಂದೆ.
ಅಣ್ಣನವರು ಎದುರು ಬಂದಾಗ, ಸಮಯ ಸಂದರ್ಭ ನೋಡಿ
ಕೊಲ್ಲಬೇಕಂತ ಕತ್ತಿಗೊಂದು ಕಲ್ಲ ಕಟಿಕೊಂಡು
ಮಹಾಮನೆಯಲ್ಲಿ ಊಟಕ್ಕ ಕುಂತೆ.
ಅವರ ಪದ್ಧತಿ ಪ್ರಕಾರ ಊಟಕ್ಕ ಮುಂಚೆ
ಎಲ್ಲಾರೂ ಲಿಂಗಪೂಜೆ ಮಾಡಿಕೊಬೇಕು.
ನಾನೂ ನನ್ನ ಕಲ್ಲ ತಗದು ಪೂಜೀ ಮಾಡಬೇಕು.
ಇಲ್ಲದಿದ್ದರ ಹೊರಗ ಹೋಗಬೇಕು.
ಪಂಕ್ತೀ ಬಿಟ್ಟು ಹೊರಗ ಹೋಗೋಹಂಗಿಲ್ಲ.
ನಾನೂ ಭಂಡತನದಿಂದ ಕತ್ತಿನಾಗಿನ ಕಲ್ಲ ತಗದು
ಅಂಗೈಯಾಗಿಟ್ಟಕೊಂಡೆ – ನೋಡು:
ಮಾಲು ಸಮೇತ ಕಳ್ಳ ಸಿಕ್ಕ ಬಿದ್ದೆ!
ಅಕ್ಕಪಕ್ಕ ಶರಣರು ಎದ್ದು ನಿಂತು ಗಲಾಟೆ ಎಬ್ಬಿಸಿದರು.
ಬಸವಣ್ಣನವರ ಕೊಲೆ ಮಾಡೋದಿರಲಿ ಪಾರಾಗಿ ಓಡಿ
ಹೋಗೋದಕ್ಕೂ ದಾರಿ ಸಿಗಧಂಗಾಯ್ತು.
ಅಷ್ಟರಾಗ ದೇವರು ಬಂಧಾಂಗ
ಅಣ್ಣಾವರು ಬಂದು
“ಸಾಕ್ಷಾತ್ ನಿಜವಾದ ಲಿಂಗ ಕಟ್ಟಿಕೊಂಡರೂ
ನಮಗದು ಕಲ್ಲು ಅನ್ನಸ್ತದೆ.
ನೀವು ಕಟ್ಟಿಕೊಂಡ ಕಲ್ಲಲ್ಲೇ ಲಿಂಗ ಕಾಣ್ತೀರಿ
ಅಂದರೆ – ಆಹಾ ಎಂಥಾ ಭಕ್ತರು!
ಏನು ಭಕ್ತಿ!”
ಅಂತ ಅಂದವರs ಉದ್ದಕ ನನ್ನ ಮುಂದ
ಉದ್ದಂಡ ಬೀಳೋದೆ?
ನಾ ಅವರನ್ನ ಕೊಲ್ಲೋದಿರಲಿ, ಅವರs
ನನ್ನೊಳಗಿನ ಕಳ್ಳನನ್ನ ಹಿಡಿದು ಕೊಂದ ಹಾಕಿದರು!
ಅಂದs ಶರಣಧರ್ಮ ದೀಕ್ಷಾ ತಗೊಂಡೆ.
ಪೂರ್ವಾಶ್ರಮದ ನೆನಪಿರಲಿ ಅಂತ
ಕಳ್ಳ ಚಿಕ್ಕಯ್ಯ ಅಂತ ಹೆಸರಿಟ್ಟುಕೊಂಡೇನಿ.
“ಇನ್ನು ಮ್ಯಾಲೆ ಕಳ್ಳತನ ಮಾಡೋದಿಲ್ಲ”
ಅಂತ ಆ ದಿನವೇ ಅಣ್ಣಾವರ ಪಾದದ
ಆಣೆ ಇಟ್ಟುಕೊಂಡೆ. ಈಗೇನೂ ಇಲ್ಲ!
ಕಾಯಕ ಮಾಡ್ತೀನಿ,
ಊಟ ಮಾಡ್ತೀನಿ, ಉಳಿದದ್ದನ್ನ ಮಹಾಮನೆಗೆ
ಕೊಡ್ತೀನಿ, ಹೆಚ್ಚ ಗಳಿಕಿ ಅದರ ತೆರಿಗೆ ಕಟ್ಟತೀನಿ.

ದಾಮೋದರ : ಕಾಯಕ ಅಂದರ ದುಡೀಬೇಕು, ತಿನ್ನಬೇಕು, ಹೌದಲ್ಲ?

ಚಿಕ್ಕಯ್ಯ : ಹೌದು ದುಡೀದೇ ತಿಂದರ ಪಾಪ.

ದಾಮೋದರ : ಹಂಗಾದರ ನಾನು ಭಾಳ ಪಾಪ ಮಾಡೀನಪ!

ಚಿಕ್ಕಯ್ಯ : ಯಾಕಂದಿ ತಮ್ಮಾ?

ದಾಮೋದರ : ನೀ ಕಾಯಕ ಮಾಡಿ ತಿಂತಿ.
ನಿನ್ನ ಪಾಪಗಳೆಲ್ಲಾ ಮಾಫ್.
ಈ ನಮ್ಮ ಗುರು (ತಂದೆಯನ್ನು ತೋರಿಸಿ) ಪಾಪ ಮಾಡತಾನ,
ಮಂತ್ರ ನುಡಿದು ಪಾಪ ಪರಿಹಾರ ಮಾಡಿಕೊಳ್ತಾನ.
ನಾನು? ದಿನಾಲು ಮೂರಂತೂ ಪಾಪ ಮಾಡ್ತೀನಿ.

ಚಿಕ್ಕಯ್ಯ : ದಿನಕ್ಕ ಮೂರು ಪಾಪ? ಅವ್ಯಾವ ಪಾಪಗಳೋ ತಮ್ಮಾ?

ದಾಮೋದರ : ಮೂರು ಹೊತ್ತು ಭರ್ತಿ ಊಟ ಮಾಡ್ತೀನಿ.
ಬಸವಣ್ಣನವರು ಅದನ್ನ ಪಾಪ ಅಂತ ಹೇಳತಾರ.

ಚಿಕ್ಕಯ್ಯ : ಉಟ ಮಾಡೋದು ಹೆಂಗ ಪಾಪ
ಆದೀತೋ ತಮ್ಮ?

ದಾಮೋದರ: ಹೆಂಗಂದರ ಕಾಯಕ ಮಾಡದs ಊಟ
ಮಾಡೋದು ಪಾಪ ಅಲ್ಲೇನು?

ಚಿಕ್ಕಯ್ಯ : ಭಲೆ? ಚೆಲೋ ತಿಳಕೊಂಡಿ ನೋಡ ತಮ್ಮಾ.
ನೀ ಯಾಕ ಮಹಾಮನೀಗಿ ಬರಬಾರದು?
ಅಲ್ಲಿ ನೋಡಪಾ ನಿನ್ನಂಥಾ ಹರಿತ ತಲೆ ಹುಡುಗರs
ತುಂಬ್ಯಾರ. ಏನ ವಾದ ಮಾಡತಾರ!
ಎಂತೆಂಥಾ ವಿಷಯ ಮಾತಾಡತಾರ!
ಛೆ ಛೇ ಅದನ್ನ ಕೇಳಿದರ ಇನ್ನೂ ಆನಂದ
ಆಗತೈತಿ ಮಾರಾಯಾ.

ದಾಮೋದರ : (ಮೆಲ್ಲಗೆ) ಅಪ್ಪ, ರಾಜಭಟರು, ಬಂದರು……

ಚಿಕ್ಕಯ್ಯ : (ಮೆಲ್ಲಗೆ) ಅವರು ಹೋಗೋತನಕ ನೀವಿಬ್ಬರೂ
ಆತ್ಮ ಪರಮಾತ್ಮ ಮಾತಾಡೋದು ಕ್ಷೇಮ.

ದಾಮೋದರ : (ತಕ್ಷಣ ಗ್ರಹಿಸಿ, ತಂದೆ ಮಗ ಗುರುಶಿಷ್ಯರಂತೆ ಅಭಿನಯಿಸುವರು.)
ಅಲ್ಲಪಾ ಗುರುವೇ, ನಿನ್ನ ಹತ್ತರ ಒಂದು ಆತ್ಮ ಇದೆ ಅಂತಲ್ಲ?
ಇಷ್ಟು ದಿನ ಆದರೂ ನೀ ನನಗ ಹೇಳಲೇ ಇಲ್ಲ!

ಹರಿಹರ : ಯಾರೋ ಒಬ್ಬ ಮಹಾತ್ಮ ಗುರುವಾಗಿ ಬಂದು
ನನ್ನಲ್ಲಿ ಆತ್ಮ ಇದ್ದದ್ದನ್ನು ಹೇಳಿದ, ಸಾಕ್ಷಾತ್ಕಾರ
ಮಾಡಿಸಿಯೂ ಬಿಟ್ಟ!

ದಾಮೋದರ : ನಿನಗ ಸಾಕ್ಷಾತ್ಕಾರ ಆಗೇತಿ ಅಂದಮ್ಯಾಲ
ನನಗೂ ಅsಟು ಸಾಕ್ಷಾತ್ಕಾರ ಮಾಡಿಸಬೌದಲ್ಲ?

ಹರಿಹರ : ಆತ್ಮಸಾಕ್ಷಾತ್ಕಾರ ಬಹಳ ಸುಲಭ ಶಿಷ್ಯನೇ.
ಒಳಗೆ ಆತ್ಮ ಇದೆ ಅಂತ ನಂಬಿ
ಕಣ್ಣು ಮುಚ್ಚಿ ಕೂತರಾಯ್ತು,
ಅದೇ ಹೊರಗಡೆ ಬಂದು ಮಾತಾಡತದೆ.

ಚಿಕ್ಕಯ್ಯ : ಹೌದ! ಅದು ಕನ್ನಡದಲ್ಲಿ ಮಾತಾಡತೈತೋ? ಸಂಸ್ಕೃತದಲ್ಲೊ?

ಹರಿಹರ : ಸಂಸ್ಕೃತದಲ್ಲಿ! ಆತ್ಮ ಎಂದಾದರೂ ಕನ್ನಡದಲ್ಲಿ
ಮಾತಾಡತಾವೇನ್ರಿ?

ಚಿಕ್ಕಯ್ಯ : ಮತ್ತ ನೀವೀಗ ಮಾತಾಡಿದ್ದು ಕನ್ನಡ ಅಲ್ಲರಿ?

ಹರಿಹರ : ನಮ್ಮ ಭೌತಿಕ ದೇಹ ಕನ್ನಡದಲ್ಲಿ ಮಾತಾಡಿದರೂ
ಆತ್ಮ ಮಾತಾಡೋದು ದೇವಭಾಷೆ ಸಂಸ್ಕೃತದಲ್ಲಿ!

ಚಿಕ್ಕಯ್ಯ : ಕನ್ನಡ ಮಾತಾಡೋ ದೇಹದೊಳಗಿರೋದರಿಂದ
ಆತ್ಮಕ್ಕೆ ಮೈಲಿಗೆ ಆಗೋದಿಲ್ಲೇನ್ರಿ?

ಹರಿಹರ : ಅದು ಮಡಿ ಮೈಲಿಗೆ ಎಲ್ಲಾ ಮೀರಿದ್ದು! ಆ ಬಗ್ಗೆ
ಲಘುವಾಗಿ ಮಾತಾಡಬಾರದಪ್ಪ!

(ಯಾವಾಗಲೋ ಬಂದು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ರಾಜಭಟರು ಹತ್ತಿರ ಬರುತ್ತಾರೆ)

ಚಿಕ್ಕಯ್ಯ : ಅಣ್ಣನವರೂ ಆತ್ಮ ಇರಬೇಕು ತಮ್ಮಾ ಅಂದರು.
ಆತ್ಮ ಅಂದರ ಏನರಿ ಅಣ್ಣಾವರ? ಅಂದೆ.
ಆತ್ಮ ಅಂದರ ತಮ್ಮಾ:
ಅಂತಃಕರಣ, ಅನುಕಂಪ, ಹೃದಯವಂತಿಗೆ, ಇನ್ನೊಬ್ಬರ ಬಗ್ಗೆ
ಗೌರವ, ದಯೆ – ಅದು ಆತ್ಮ ಅಂತಂದವರು
ನೀವು ಹೇಳೊದು ಹಾಂಗಿಲ್ಲಲ್ರಿ?

ಹರಿಹರ : ಯಾಕಂದರ ನಿಮ್ಮಣ್ಣ ತಪ್ಪ ಹೇಳ್ಯಾನ, ಅದಕ್ಕ.
ತಿಳೀತೇನು?

ಚಿಕ್ಕಯ್ಯ : ತಿಳೀಲಿಲ್ಲರಿ.

ಹರಿಹರ : ಅದೇ ಆತ್ಮ.

ರಾಜಭಟ ೧ : ಏನ್ರೆಪಾ ಶರಣರ, ಈ ಕಡೆ ಒಬ್ಬಾಂವ ಜಂಗಮ
ಓಡಿ ಬಂದನೇನ್ರಿ?

ದಾಮೋದರ : ಜಂಗಮನ? ಇಲ್ಲ ತಗೀರಿ, ಈ ಕಡೆ ಯಾರೂ ಬರಲಿಲ್ಲ.

ರಾಜಭಟ ೨ : ಇವರ್ಯಾರು?

ಚಿಕ್ಕಯ್ಯ : ಎಪಾ ನಾನು ಕಳ್ಳ ಚಿಕ್ಕಣ್ಣ, ಗುರುತು ಸಿಗಲಿಲ್ಲರೆ?

ರಾಜಭಟ ೨ : ನಿನ್ನ ಗುರುತಾಯ್ತು. ಈ ಶರಣರ್ಯಾರು?

ಚಿಕ್ಕಯ್ಯ : ಇವನು ಅವರ ಶಿಷ್ಯ. ಅವರು ಇವನ ಗುರು.

ರಾಜಭಟ ೧ : ಕುಂತಗೊಂಡ ಏನ ಮಾತಾಡತಿದ್ದಿರಿ?

ದಾಮೋದರ : ಆತ್ಮ ಪರಮಾತ್ಮ ಮಾತಾಡತಿದ್ದಿವಿ.

ರಾಜಭಟ ೨ : ಮಹಾಮನೆ ಬಿಟ್ಟು ಇಲ್ಲಿ, ಹೊರಕೇರ್ಯಾಗ
ಆತ್ಮ ಪರಮಾತ್ಮ ನಡೆಸೀರಿ?

ಹರಿಹರ : ಶರಣರು ಎಲ್ಲಿದ್ದರ ಅಲ್ಲೇ, ಅದೇ ಮಹಾಮನೆ
ಅಂತ ಅಪ್ಪಣೆ ಕೊಟ್ಟಬಿಟ್ಟಾರಲ್ಲರಿ ಅಣ್ಣಾವರು!

ರಾಜಭಟ ೨ : ಅಲಲಲ! ಏನ ಅಣ್ಣಾವರ ಪವಾಡ ಮಾರಾಯಾ!
ಹೊರಕೇರ್ಯಾಗೂ ಆತ್ಮ ಪರಮಾತ್ಮದ ಚರ್ಚೆ ಅಂದರ

ಇದು ಭಾರೀ ದೊಡ್ಡ ಪವಾಡ!

ರಾಜಭಟ ೧ : ಅರಮನ್ಯಾಗ ರತ್ನದ ಸರ ಕಳುವಾಗಿತ್ತರೀ,
ಕಳ್ಳನನ್ನ ಹುಡಿಕ್ಕೊಂಡು ಬಂದಿದ್ದೀವಿ.

ನಮಗ ಈ ಸಣ್ಣ ಶರಣರ ಬಗ್ಗೆ ಅನುಮಾನ
ಬಂದೈತ್ರಿ. ಅದಕ್ಕ ನಮ್ಮ
ಕೊತವಾಲರ ತನಕ ಇವರನ್ನ ಕರಕೊಂಡ ಹೋಗಿರ್ತೀವಿ.
ಆಮ್ಯಾಲ ಕಳಿಸ್ತೀವಿ, ಆದೀತ ಚಿಕ್ಕಯ್ಯನವರ?

ಚಿಕ್ಕಯ್ಯ : ಛೇ ಛೇ, ಈ ಸಣ್ಣ ಶರಣ ನಮ್ಮ ಪೈಕೀ ರೀ,
ಹೊಸದಾಗಿ ಶರಣರಾಗ್ಯಾರ.
ಹರೇದ ವಯಸ್ಸು, ಆಗಾಗ ಏನರೆ ಯಡವಟ್ಟ
ಮಾಡಿಕೊಳ್ತಾರ, ಆದರ ಕಳ್ಳತನದಂಥಾ ದಂಧೇದವರಲ್ಲ ತಗೀರಿ.

ರಾಜಭಟ ೨ : ಹಿಂಗಂತೀರಾ? ಆಯ್ತ ಬಿಡ್ರಿ. ಅರಮನ್ಯಾಗಿಂದ
ಓಡಿ ಬಂದಾವ ಹಿಂಗs ಇದ್ದ. ಇವನs
ಅವನೇನೋ ಅಂತ ಬೆನ್ನಹತ್ತಿದ್ದಿವಿ.
ನೀವು ಇವನಲ್ಲ ಅಂದಮ್ಯಾಲ ಮುಗೀತು. ಬರೂಣ್ರಿ? ಶರಣು.
(ರಾಜಭಟರು ಹೋಗುವರು. ತಂದೆ ಮಗ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಡುವರು.)

ದಾಮೋದರ : ಬಚಾವ್ ಮಾಡಿದಿರಿ ಚಿಕ್ಕಯ್ಯನವರs,
ನಿಮ್ಮ ಉಪಕಾರ ಭಾಳ ಆಯ್ತು. ಈಗ ನಾನು
ಒಬ್ಬ ಪುಣ್ಯವಂತನ ಮುಂದ ಸತ್ಯ ಹೇಳಲೇಬೇಕು.
ಚಿಕ್ಕಯ್ಯನವರ, ಕೇಳ್ರಿ:

ಹರಿಹರ : ಏ ಭಂಡ ನನಮಗನೇ ಮೈಮ್ಯಾಗ ಎಚ್ಚರ
ಐತೋ ಇಲ್ಲೊ? ಆಮ್ಯಾಲ ಕುಡುಗೋಲ ನುಂಗಿಧಾಂಗಾದೀತು
ನಿನ್ನ ಬಾಳ್ವೆ, ಹುಷಾರ್.

ದಾಮೋದರ : ನೀನು ಸುಮ್ಮನಿದ್ದರs ಬರೋಬ್ಬರಿ. ಇಲ್ಲದಿದ್ದರ….
(ಅಲ್ಲೇ ಬಿದ್ದ ಒಂದು ಕಲ್ಲು ತಗೊಂಡು ತಂದೆಯ ಮೇಲೆ ಹೇರಲು ಸಿದ್ಧನಾಗಿ ನಿಲ್ಲುವನು.) ಇಲ್ಲದಿದ್ದರ ಈ ಕಲ್ಲ ನಿನ್ನ ಮ್ಯಾಲ ಹೇರ್ತೀನಿ ನೋಡು.

ಚಿಕ್ಕಯ್ಯ : ಏ ತಮ್ಮಾ ಕೇಳಿಲ್ಲಿ…

ದಾಮೋದರ : ಮೊದಲು ನನ್ನ ಮಾತ ಕೇಳು:
ನೋಡು ಚಿಕ್ಕಣ್ಣಾ, ಅರಮನೆಯಿಂದ ರತ್ನದ ಸರ
ಕದ್ದಕೊಂಬಂದವನು ನಾನೇ.
ಕೊತವಾಲ ಬೆನ್ನ ಹತ್ತಿದ. ಅವನಿಗೆ ಹೆದರಿ
ಮುಗ್ಧ ಸಂಗಯ್ಯನಿಗೆ ಆ ಸರ ಕೊಟ್ಟು, ನಾನs ಅವನನ್ನ
ಸೂಳೆ ಸಾವಂತ್ರಿಯ ಮನೆಗೆ ಕಳಿಸಿಕೊಟ್ಟೇನಿ.
(ತಂದೆಗೆ) ಈಗೇನ ಮಾಡ್ತಿಯೋ ಮಾಡಿಕೋ ಹೋಗು.

ಹರಿಹರ : ಥೂ ಹೇಡಿ. ಕೈಯಾಗಿನ ಲಕ್ಷ್ಮೀನ ಕಳಕೊಂಡ ಚಂಡಾಲ…..

(ಎಂದು ಶಪಿಸುತ್ತ ಹೋಗುವನು)

ದಾಮೋದರ : ಚಿಕ್ಕಣ್ಣ ಖರೇ ಹೇಳ್ತೀನಿ ಈಗ ನನ್ನ ಮನಸ್ಸು
ಹಗುರಾಯ್ತು, ನೋಡಪಾ! ಈಗ ಅಂತರಂಗ
ಮಾತಾಡೋಣು, ನೀ ಏನ ಕಾಯಕ ಮಾಡ್ತಿ?

ಚಿಕ್ಕಯ್ಯ : ಕೂಲಿ.

ದಾಮೋದರ : ಕಳ್ಳತನ ಮಾಡೋವಾಗ ಏನ ಮಾಡತಿದ್ದಿ?
ಅದನೆಲ್ಲಾ ಕತಿ ಹೇಳಲ್ಲ. ಕಳ್ಳತನ ಬಿಟ್ಟದ್ದಕ್ಕ ನಿನಗೇನೂ
ಕೆಡುಕನಿಸಲಿಲ್ಲೇನು?

ಚಿಕ್ಕಯ್ಯ : ಆ ಕತಿ ಬ್ಯಾರೆ. ಕಳ್ಳನಾಗಿದ್ದಾಗ ಮೂವತ್ತೈದು
ಜನ ಕಳ್ಳರು ನನ್ನ ಕೈಕೆಳಗಿದ್ದರಪ್ಪ; ನಾನs ಅವರ ಉಸ್ತಾದ!
ಕಾಡಿನಾಗ ನನ್ನದೊಂದು ಗವಿಯ ಅರಮನೆ ಅನ್ನು – ಇತ್ತು.
ಒಂದು ದಿನ ಅಧೆಂಗೋ ದೊಡ್ಡ ಸೈನ್ಯ ತಂದು
ಆ ಸೀಮೆಯ ರಾಜ ನನ್ನನ್ನ ಬಂಧಿಸಿದ.
ಹೇಳಿದ: “ಚಾಲುಕ್ಯರ ಕಲ್ಯಾಣದೊಳಗ ಬಸವಣ್ಣ ಅಂತ
ಒಬ್ಬ ಮಂತ್ರಿ ಅದಾನ. ನೀ ಅವನನ್ನ
ಕೊಂದ ಬಂದರ ನಿನಗ ಅರ್ಧ ರಾಜ್ಯ ಕೊಡತೀನಿ
ಅಂತ ಕೈ ಮ್ಯಾಲ ಕೈ ಇಟ್ಟ ಮಾತ ಕೊಟ್ಟ.
ಬಸವಣ್ಣನವರನ್ನ ಕೊಂದ ಹೋಗಿದ್ದರ
ನಾನೂ ಒಬ್ಬ ರಾಜಾ ಆಗಿರ್ತಿದ್ದೆ. ಆದರ, ಖರೇ ಹೇಳ್ತೀನಿ
ತಮ್ಮಾ ಈಗಿರುವಂಥಾ ತೃಪ್ತಿ ನನಗ ಸಿಗತಿರಲಿಲ್ಲ.
ಈಗ ಆನಂದವಾಗಿದ್ದೀನಿ ನೋಡಪಾ, ಆದರ ನೀ
ತಿಳಕೊಂಢಾಂಗ ನಾನೂ ಪುಣ್ಯವಂತನಲ್ಲ.

ದಾಮೋದರ : ರಾಜಭಟರ ಮುಂದ ನಾನು ಸಾಚಾ ಅಂತ ಹೇಳಿ
ಬಚಾವ ಮಾಡಿದೆಲ್ಲ, ಯಾಕ?

ಚಿಕ್ಕಯ್ಯ : ಯಾಕಂದರ ಗೊತ್ತಾಯ್ತು: ನೀ ಕಳ್ಳ ಅಲ್ಲ –
ಅಂತ. ನಿನ್ನ ಜೊತೆಗಿದ್ದನಲ್ಲಾ ಆ ಮುದುಕ,
ಅವ ಬರೋಬ್ಬರಿ ಕಳ್ಳ. ಅವನ ಒಳಗ
ಯಾವತ್ತೂ ಒಬ್ಬ ಕಳ್ಳ ಕೆಲಸ ಮಾಡತಾನ.
ಆದರ ನೀ ಕಳ್ಳ ಅಲ್ಲ ತಗಿ. ನಿನ್ನ ಒಳಗ
ಒಬ್ಬಾವ ಮುಗ್ಧ ಸಂಗಯ್ಯನಂಥಾವ ಇದ್ದಾನನ್ನಿಸಿ
ಹೇಳಿದೆ. ನಿನ್ನ ದೈವ, ಅವರೂ ನಂಬಿ ಬಿಟ್ಟು ಹೋದರು!
ಹಾಂಗs ಇನ್ನೊಂದ ಕೆಲಸ ಮಾಡು: ಅಣ್ಣಾವರ
ಮುಂದ ಹೋಗಿ ನಿನ್ನ ತಪ್ಪ ಒಪ್ಪಕೊ.
ಅದೂ ಬ್ಯಾಡಂದರ ಕೊತವಾಲನ ಮುಂದs
ಹೇಳಿಬಿಡು. ಆವಾಗ ನೀನೂ ಪಾರಾಗ್ತಿ,
ನ್ಯಾಯ ನಿರ್ಣಯಕ್ಕೂ ಅನುಕೂಲ. ಏನಂತಿ?

ದಾಮೋದರ : ಹಾಂಗ ಮಾಡ್ತೀನಿ. (ಎಂದು ಹೊರಡುವನು.)

ಚಿಕ್ಕಯ್ಯ : ಇರು ಇರು. ಸೂಳೆ ಸಾವಂತ್ರೀ ಮನೆಗೆ ಯಾರು
ಹೋಗತಿದ್ದಾರ ನೋಡಲ್ಲಿ!