೧೨ನೆಯ ಶತಮಾನದಲ್ಲಿ ಕಲ್ಯಾಣದಲ್ಲಿ ಏನು ನಡೆಯಿತು, ಏನು ನಡೆಯಲಿಲ್ಲ ಎಂಬುದರ ಬಗೆಗೆ ಇಂದಿಗೂ ವಿವಾದ ಮುಂದುವರಿದಿದೆ. ಕಲ್ಯಾಣದ ಕ್ರಾಂತಿ ಐತಿಹಾಸಿಕ ಘಟನೆಯೇ ಅಲ್ಲವೆಂದು ವಾದಿಸುವ ಇತಿಹಾಸಕಾರರೂ ಇದ್ದಾರೆ. ಆದರೆ ಕವಿಕಲ್ಪನೆ ಮತ್ತು ಜನಮಾನಸಗಳು ನಡೆದದ್ದಕ್ಕಿಂತ ನಡೆಯಬೇಕಾದ್ದನ್ನೇ ಹೆಚ್ಚಿಗೆ ಕಾಣುವಂತೆ ಹೇಳಿವೆ. ಹೀಗಾಗಿ ಪಾಲ್ಕುದಾರಿಕೆ ಸೋಮನಾಥನಿಂದ ಆರಂಭವಾದ ಕಲ್ಯಾಣದ ಕಥನವನ್ನು ಕನ್ನಡದ ಮುಂದಿನ ಶತಮಾನಗಳ  ಕವಿಗಳು ಮುಂದು ಮಾಡಿ ಅಷ್ಟಿಷ್ಟು ಬದಲಿಸಿ ಕಟ್ಟುತ್ತಲೇ ಬಂದಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಂತೂ ಕಲ್ಯಾಣದ ಕಥನದ ಮಾದರಿಗಳಿದ್ದು ಕೆಲವರು ಈ ಕಥನವನ್ನು ಅನಂತರ ಸಂಸ್ಥೀಕರಣಗೊಂಡ ಧರ್ಮದ ದೃಷ್ಟಿಯಿಂದಲೂ ನೋಡಿದ್ದಾರೆ. ನಮ್ಮ ಉತ್ತಮ ನಾಟಕಕಾರರಲ್ಲಿ ಒಬ್ಬರಾದ ಎಚ್.ಎಸ್. ಶಿವಪ್ರಕಾಶ ಅವರು ಮಲೆಮಾದೀಶ್ವರ, ಮಂಟೇಸ್ವಾಮಿ ಕಾವ್ಯಗಳಲ್ಲಿ ಇದೇ ಕಥನವನ್ನು ಬಹುಜನ ಸಮಾಜದ ದೃಷ್ಟಿಯಿಂದ ರೂಪಿಸಿದ್ದಾರೆ. ಇಂತಹ ಕಥನಗಳು, ಪ್ರತಿಕಥನಗಳು ಇಂದಿಗೂ ಕನ್ನಡ ಭಾಷೆಯಲ್ಲಿ ರಚಿತಗೊಳ್ಳುತ್ತಲೇ ಇವೆ.

ಬಿಜ್ಜಳನ ಬಗ್ಗೆ ಒಂದು ನಾಟಕ ಬರೆಯಬೇಕೆಂದು ಅನೇಕ ವರ್ಷಗಳ ಹಿಂದೆಯೇ ಕನಸು ಕಂಡಿದ್ದೆ. ಬಸವಣ್ಣವರು ಕಾಯಕ, ದಾಸೋಹವೇ ಮುಂತಾದ ಮೌಲ್ಯಗಳೊಂದಿಗೆ ಕಲ್ಯಾಣದಲ್ಲಿ ಮಾಡುತ್ತಿದ್ದ ಪರಿವರ್ತನೆಯ ಬಗ್ಗೆ ಅವನಿಗೆ ಅನುಮಾನ ಯಾಕೆ? – ಎನ್ನುವುದು ನನ್ನ ಚಿಂತನೆಯ ವಿಷಯವಾಗಿತ್ತು. ಈ ಬಗ್ಗೆ ನನ್ನ ಗುರುಗಳಾದ ಪ್ರೊ.ಎಸ್.ಎಸ್. ಭೂಸನೂರಮಠ ಅವರೊಂದಿಗೆ ಚರ್ಚಿಸಿದ್ದೆ. ಆದಮೇಲೆ ಮಿತ್ರ ಎಚ್.ಎಸ್. ಶಿವಪ್ರಕಾಶ್ ಹಾಗೂ ಪ್ರಸಿದ್ಧ ವಿಮರ್ಶಕರಾದ ಸಿ.ಎನ್. ರಾಮವಂದ್ರನ್ – ಅವರೊಂದಿಗೆ ದೀರ್ಘವಾಗಿ ವ್ಯಾಪಕವಾಗಿ ಚರ್ಚಿಸಿದ್ದರ ಫಲ ಈ ನಾಟಕ. ಬರೆದಾದ ಮೇಲೆ ಪ್ರಸಿದ್ಧ ಕತೆಗಾರ ಮತ್ತು ವಿಮರ್ಶಕರಾದ ಮಾಧವ ಕುಲಕರ್ಣಿ ಮತ್ತು  ಪಸಿದ್ದ ವಿಮರ್ಶಕರಾದ ಬಸವರಾಜ ಕಲ್ಗುಡಿ ಅವರು ಓದಿ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಸಿ.ಎನ್. ರಾಮಚಂದ್ರನ್ ಮತ್ತು ಮಾಧವ ಕುಲಕರ್ಣಿ ಅವರು ಉಪಯುಕ್ತವಾದ ಮುನ್ನುಡಿ ಹಿನ್ನುಡಿಗಳನ್ನು ಬರೆದಿದ್ದಾರೆ.  ಈ ಎಲ್ಲ ಮಿತ್ರರಿಗೆ ನನ್ನ ಹೃತ್ಪೂರ್ವಕ ವಂದನೆಗಳು ಸಲ್ಲುತ್ತವೆ. ಕಾಯಕ ತತ್ವದ ಬಗ್ಗೆ ನನ್ನ ತಿಳುವಳಿಕೆಯನ್ನ ತಿದ್ದಿದವರು ಸಾಣೇಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಸ್ವಾಮಿಗಳು. ಆ ಮೂಲಕ ನಾಟಕ ರಚನೆಯಲ್ಲೇ ಬದಲಾವಣೆ ಮಾಡಬೇಕಾಯಿತು. ಪೂಜ್ಯ ಸ್ವಾಮೀಜಿಯವರಿಗೂ ಹಾಗೆಯೇ ಮುಖಪುಟಕ್ಕೆ ಚಿತ್ರ ಒದಗಿಸಿದ ಮಿತ್ರರಾದ ಕಲಾವಿದ ಎಸ್.ಜಿ. ವಾಸುದೇವ ಅವರಿಗೂ ನನ್ನ ವಂದನೆಗಳು. ಹಾಗೆಯೇ ಮಲ್ಲಿಬೊಮ್ಮಣ್ಣನ ಬಗ್ಗೆ ಮಾಹಿತಿ ಕೊಟ್ಟ ಡಾ. ಎಂ.ಎಂ. ಕಲಬುರ್ಗಿ ಅವರಿಗೂ ವಂದನೆಗಳು ಸಲ್ಲುತ್ತವೆ.

ಈ ನಾಟಕವನ್ನು ಪ್ರೀತಿಯಿಂದ ಪ್ರಕಾಶಪಡಿಸಿದ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೂ ಪ್ರಕಟಣೆಯ ಪೂರ್ವದಲ್ಲೇ ಈ ನಾಟಕದ ಒಂದು ಓದನ್ನು ವ್ಯವಸ್ಥೆ ಮಾಡಿದ್ದ ಮಿತ್ರ ಕಪ್ಪಣ್ಣ ಅವರಿಗೂ, ವಂದನೆಗಳು ಸಲ್ಲಬೇಕು. ಈ ನಾಟಕವನ್ನು ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರಥಮ ಬಾರಿ ಅಭಿನಯಿಸಿದ ಸಾಣೇಹಳ್ಳಿಯ ತಂಡಕ್ಕೂ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.

ಬೆಂಗಳೂರು                                   ಚಂದ್ರಶೇಖರ ಕಂಬಾರ

[ಈ ನಾಟಕವನ್ನು ಅನುವಾದಿಸುವ, ಅಭಿನಯಿಸುವ, ಸಿನಿಮಾ, ಟಿವಿಗೆ ಉಪಯೋಗಿಸಿಕೊಳ್ಳುವ ಮೊದಲಾದ ಎಲ್ಲ ಹಕ್ಕುಗಳೂ ಲೇಖಕರಿಂದ ಕಾದಿರಿಸಲ್ಪಟ್ಟಿವೆ. ರಂಗದ ಮೇಲೆ ಅಭಿನಯಿಸುವವರು ಪ್ರಯೋಗಕ್ಕೆ ಮುನ್ನ ಪ್ರತಿ ಪ್ರಯೋಗಕ್ಕೆ ೩೦೦ ರೂ. ಗೌರವಧನವನ್ನು ಕೆಳಗಿನ ವಿಳಾಸಕ್ಕೆ ಕಳಿಸಿ ಲಿಖಿತ ಅನುಮತಿ ಪಡೆದಿರತಕ್ಕದ್ದು.

ಚಂದ್ರಶೇಖರ ಕಂಬಾರ
“ಸಿರಿಸಂಪಿಗೆ” ನಂ. ೪೪, ೧ನೇ ಮುಖ್ಯರಸ್ತೆ, ಬನಶಂಕರಿ ೩ನೇ ಹಂತ, ೪ನೇ ಬ್ಲಾಕ್, ಬೆಂಗಳೂರು – ೫೬೦೦೮೫.]