ನಾಟಕಕಾರ – ಕವಿ – ಕಾದಂಬರಿಕಾರ – ಡಾ. ಚಂದ್ರಶೇಖರ ಕಂಬಾರರ ಇಡೀ ವಾಙ್ಮಯವನ್ನು ಲಕ್ಷಿಸಿದಾಗ ನಮಗೆ ಮೊದಲಿಗೆ ಎದ್ದು ಕಾಣುವ ಒಂದು ಸಂಗತಿಯೆಂದರೆ ಕಂಬಾರರ ನಿರಂತರ ಪ್ರಯೋಗಶೀಲತೆ. ಯಾವ ಸಾಹಿತ್ಯ ಪ್ರಭೇದವೇ ಆಗಲಿ, ನೂತನ ವಸ್ತು – ಸಂವಹನ ಮಾರ್ಗಗಳನ್ನು ಸದಾ ಶೋಧಿಸುತ್ತಾ, ಸೃಜನಾತ್ಮಕ ಅತೃಪ್ತಿಯಿಂದ ನಿರಂತರ ಕುದಿಯುತ್ತಾ ಇರುವ ಪ್ರತಿಭೆ ಕಂಬಾರರದು. ನಮ್ಮ ಚರ್ಚೆಯನ್ನು ಕಂಬಾರರ ನಾಟಕಗಳಿಗೆ ಸೀಮಿತಗೊಳಿಸಿದರೂ, ೧೯೬೧ – ೯೯ ಈ ನಾಲ್ಕು ದಶಕಗಳ ಅವಧಿಯಲ್ಲಿ ಇದುವರೆಗೆ ಅವರು ಬರೆದಿರುವ ೨೧ ನಾಟಕಗಳಲ್ಲಿ ಫ್ಯೂಡಲ್ ಪ್ರಭುತ್ವದ ಪೊಳ್ಳಿನ ವಿಶ್ಲೇಷಣೆ, ಬದುಕಿನ ಅವಿಭಾಜ್ಯ ಅಂಗವಾಗಿರುವ ಲೈಂಗಿಕತೆಯ ಮೂಲ ಸ್ವರೂಪದ ಶೋಧ, ಮಾನವ ಅಸ್ತಿತ್ವದ ಅನಿವಾರ್ಯ ಸ್ವವೈರುದ್ಧ್ಯಗಳು ಮತ್ತು ದ್ವಂದ್ವಗಳು, ಕೌಂಟುಂಬಿಕ – ರಾಜಕೀಯ ವಲಯಗಳ ಸಂಘರ್ಷ, ಪ್ರಭುತ್ವ – ವ್ಯವಸ್ಥೆಗಳ ವಿಡಂಬನೆಗಳು, ಇತ್ಯಾದಿ ಆಶಯಗಳು ರಕ್ತ – ಮಾಂಸಗಳೊಡನೆ ಮೂಡಿಬಂದಿವೆ. ೧೯೯೯ರಲ್ಲಿ ಹೊರಬಂದ ಇವರ ನಾಟಕ ಮಹಾಮಾಯಿ ವಾಸ್ತವ ನೆಲೆಯನ್ನೇ ತಿರಸ್ಕರಿಸಿ (ಇವರ ಬೃಹತ್ ಕಾದಂಬರಿ ಶಿಖರ ಸೂರ್ಯದಂತೆ), ಸಂಪೂರ್ಣವಾಗಿ ಒಂದು ದಂತಕಥೆಯ ರೂಪದಲ್ಲಿ ಮಾನವಜಾತಿಗಿರುವ ಸ್ವಾತಂತ್ಯ್ರದ ಸೀಮಾರೇಖೆಗಳನ್ನು ಗುರುತಿಸಲು ಪ್ರಯತ್ನಿಸುತ್ತದೆ. ಹನ್ನೆರಡು ವರ್ಷಗಳ ನಂತರ ಹೊರಬರುತ್ತಿರುವ ‘ಶಿವರಾತ್ರಿ’ ಇವರ ೨೨ನೆಯ ನಾಟಕ – ಕರ್ನಾಟಕದಲ್ಲಿ ೧೨ನೆಯ ಆತಮಾನದಲ್ಲಿ ನಡೆದ ಅಭೂತಪೂರ್ವ ಶರಣ ಚಳುವಳಿಯ ಹಿನ್ನೆಲೆಯಲ್ಲಿ ರಚಿಸಲ್ಪಟ್ಟ ಕಂಬಾರರ ಮೊದಲ ಚಾರಿತ್ರಿಕ ನಾಟಕ.

ಬಸವೇಶ್ವರರ ನಾಯಕತ್ವದಲ್ಲಿ ನಡೆದ ೧೨ನೆಯ ಶತಮಾನದ ಶರಣ ಚಳುವಳಿ ಎಷ್ಟು ವ್ಯಾಪಕವಾಗಿತ್ತು ಹಾಗೂ ಕ್ರಾಂತಿಕಾರಕವಾಗಿತ್ತು ಎಂದರೆ, ಆ ಚಳುವಳಿಯನ್ನು ವಸ್ತುವಾಗುಳ್ಳ ಅನೇಕ ಕಾವ್ಯ – ಕಥೆ – ಕಾದಂಬರಿ – ನಾಟಕಗಳು ಕನ್ನಡದಲ್ಲಿ ೧೩ನೆಯ ಶತಮಾನದ ಹರಿಹರನಿಂದ ಪ್ರಾರಂಭವಾಗಿ ಇಂದಿನವರೆಗೂ ಸಾಕಷ್ಟು ಬಂದಿವೆ. (ಒಂದು ಅಧ್ಯಯನದ ಪ್ರಕಾರ, ಇಂತಹ ಕೃತಿಗಳ ಸಂಖ್ಯೆ ಇನ್ನೂರನ್ನೂ ದಾಟುತ್ತದೆ.) ಕೇವಲ ನಾಟಕ – ಪ್ರಭೇದವನ್ನು ಲಕ್ಷಿಸಿದರೆ, ಆಧುನಿಕ ಕಾಲದಲ್ಲಿ, ಈ ಚಳುವಳಿಯ ಹಿನ್ನೆಲೆಯಲ್ಲಿ ಬಂದಿರುವ ಮೊದಲ ಕೃತಿ, ಪ್ರಾಯಃ, ಬಳೂರ್ ಬಿ.ಸಿ. ಅವರಿಂದ ೧೯೧೮ ರಲ್ಲಿ ರಚಿಸಲ್ಪಟ್ಟ ನಾಟಕ ಬಸವೇಶ್ವರ ನಾಟಕ. ಅನಂತರ ಬಂದಿರುವ ಗಮನೀಯ ನಾಟಕಗಳೆಂದರೆ: ಅನಕೃ: ಜಗಜ್ಯೋತಿ ಬಸವೇಶ್ವರ, ಲಂಕೇಶ್: ಸಂಕ್ರಾಂತಿ, ಎಂ.ಎಂ. ಕಲಬುರ್ಗಿ: ಕೆಟ್ಟಿತು ಕಲ್ಯಾಣ, ಎಚ್.ಎಸ್. ಶಿವಪ್ರಕಾಶ್: ಮಹಾಚೈತ್ರ, ಗಿರೀಶ್ ಕಾರ್ನಾಡ್: ತಲೆದಂಡ, ಇತ್ಯಾದಿ.

ಆದರೆ, ಆಶಯ – ಆಕೃತಿಗಳೆರಡರಲ್ಲೂ ಶಿವರಾತ್ರಿ ಇತರ ಎಲ್ಲಾ ನಾಟಕಗಳಿಗಿಂತಲೂ ಭಿನ್ನವಾಗಿದೆ. ಈ ನಾಟಕದ ಕಾಲಾವಧಿ ಕೇವಲ ಒಂದು ರಾತ್ರಿ – ಹರಳಯ್ಯ – ಮಧುವರಸರನ್ನು ಎಳೆಹೊಟೆಗೆ ಕಟ್ಟಿ ನಂತರ ಅವರನ್ನು ಶೂಲಕ್ಕೇರಿಸಿದ ಮಾರನೆಯ ದಿನದ ರಾತ್ರಿ; ರಾಜಭಟರು ಶರಣರನ್ನು ಬೀದಿ ಬೀದಿಗಳಲ್ಲಿ ಬೇಟೆಯಾಡುತ್ತಿರುವ ರಾತ್ರಿ: ಎಲ್ಲೆಡೆ ಭೀತಿಯ ಕತ್ತಲೆ ಅಮಾವಾಸ್ಯೆಯ ಕತ್ತಲೆಯನ್ನು ಇನ್ನಷ್ಟು ದಟ್ಟಗೊಳಿಸುವ ರಾತ್ರಿ. ಸ್ಥಳ – ಕಲ್ಯಾಣ ನಗರದ ದಲಿತರು, ವೇಶ್ಯೆಯರು, ಹಿಂದುಳಿದವರು, ಬಡವರು ಇರುವ ಕೇರಿ: ಮತ್ತು ಬಸವಣ್ಣ – ಬಿಜ್ಜಳರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪಾತ್ರಗಳು ಸಮಾಜದ ಕೇಳವರ್ಗಕ್ಕೆ ಸೇರಿದುವು. ನಾಟಕದಲ್ಲಿ ಪ್ರಾರಂಭ – ಶಿಖರ – ಅಂತ್ಯಗಳಿರುವ ಸಮವಿಧಾನವೂ ಇಲ್ಲ. ಪ್ರಾರಂಭದಲ್ಲಿ ಸೂತ್ರಧಾರನು ಸಂಕ್ಷಿಪ್ತವಾಗಿ ಹಿಂದಿನ ಕಥೆಯೆಲ್ಲವನ್ನೂ ನಿರೂಪಿಸಿ, ಕೊನೆಗೆ ಹರಳಯ್ಯ – ಮಧುವರಸರ ಪ್ರಸಂಗಕ್ಕೆ ಬರುತ್ತಾನೆ: ನಾಟಕ ಅಲ್ಲಿಂದ ಮುಂದುವರೆಯುತ್ತದೆ. ಕೆಲವು ಪಾತ್ರಗಳು ವಾಸ್ತವ ನೆಲೆಯಲ್ಲಿದ್ದರೆ ಮುಗ್ಧ ಸಂಗಯ್ಯ, ಹುಚ್ಚಿಯಾದ ಕಲ್ಯಾಣ ನಗರಲಕ್ಷ್ಮಿ, ಮುಂತಾದವರ ಪಾತ್ರಗಳು ವಾಸ್ತವ – ಸಾಂಕೇತಿಕ ನೆಲೆಗಳ ನಡುವೆ ವರ್ತಿಸುತ್ತವೆ. ಅರ್ಥಾತ್, ಶಿವರಾತ್ರಿ ಶರಣ ಚಳುವಳಿಯನ್ನು ದಲಿತರ ಹಾಗೂ ಇತರ ಕೆಳವರ್ಗದವರ ದೃಷ್ಟಿಕೋನದಿಂದ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ನಾಟಕವೂ ಕಾಲವನ್ನು ಸ್ಥಿರವಾಗಿಟ್ಟುಕೊಂಡು, ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಾ ಹೋಗುತ್ತದೆ. ಎಂದರೆ, ಆ ಒಂದು ರಾತ್ರಿಯಲ್ಲಿ ಭಿನ್ನ ಸ್ಥಳಗಳಲ್ಲಿ ನಡೆಯುತ್ತಿದ್ದ ಕಾರ್ಯಗಳ ಮೇಲೆ ಅನುಕ್ರಮವಾಗಿ ತನ್ನ ಕ್ಯಾಮೆರಾ – ಕಣ್ಣನ್ನು ಹರಿಸುತ್ತದೆ – ಚಲನಚಿತ್ರಗಳ ನಿಪುಣ ಛಾಯಾಗ್ರಾಹಕನಂತೆ. ಈ ಬಗೆಯ ತಂತ್ರಗಳ ಮೂಲಕ ನಾಟಕವು ಎತ್ತುವ ಹಾಗೂ ಉತ್ತರಿಸ ಲಪೇಕ್ಷಿಸುವ ಪ್ರಶ್ನೆಗಳೆಂದರೆ: ಅಂದಿನ ಕೆಳವರ್ಗದ ಜನರು ಶರಣ ಚಳುವಳಿಯನ್ನು ಹೇಗೆ ಗ್ರಹಿಸಿದರು? ಆ ಚಳುವಳಿಯ ಯಾವ ಯಾವ  ಮೌಲ್ಯಗಳು ಅವರ ಬದುಕನ್ನು ಪ್ರವೇಶಿದವು? ಬಸವಣ್ಣ ಮತ್ತು ಬಿಜ್ಜಳ ಇವರಿಬ್ಬರ ನಡುವೆ ನಿರ್ಮಾಣವಾದ ಬಿರುಕಿನ ಸ್ವರೂಪವೇನು? ಇತ್ಯಾದಿ.

ಈಗ, ಮೊದಲನೆಯ ಪ್ರಶ್ನೆಗೆ ಬಂದಾಗ, ನಾವು ಗಮನಿಸಬೇಕಾದ ಸಂಗತಿ ಎಂದರೆ, ಪ್ರತಿಯೊಂದು ಸಾಮಾಜಿಕ – ಧಾರ್ಮಿಕ ಚಳುವಳಿಗೂ ಎರಡು ಸ್ತರಗಳಿರುತ್ತವೆ: ದೇವರು – ಈ ಸೃಷ್ಟಿ, ದೇವ – ಮಾನವ ಸಂಬಂಧ, ಇತ್ಯಾದಿಗಳನ್ನು ಕುರಿತ ಅಮೂರ್ತ ತತ್ವಗಳ ಸ್ತರ ಮತ್ತು ದೈನಿಕ ಬದುಕಿಗೆ ಸಂಬಂಧಿಸಿದ ಕೆಲವು ಸರಳ ಮೌಲ್ಯಾತ್ಮಕ ಸೂತ್ರಗಳು. ಈ ಹೇಳಿಕೆ ಶರಣ ಚಳುವಳಿಗೂ ಅನ್ವಯಿಸುತ್ತದೆ. ಆ ಚಳುವಳಿಯ ‘ಇಷ್ಟಲಿಂಗ – ಸ್ಥಾವರ – ಜಂಗಮ – ಮಹಾಮನೆ’ ಇತ್ಯಾದಿ ಪರಿಕಲ್ಪನೆಗಳ ಸಂಪೂರ್ಣ ಅರ್ಥವನ್ನು ಬಸವಣ್ಣನವರ ಬಗ್ಗೆ ಹಾಗೂ ಅವರು ಹುಟ್ಟುಹಾಕಿದ ಚಳುವಳಿಯ ಬಗ್ಗೆ ಗೌರವವಿದ್ದ ಅಂದಿನ ಜನಸಾಮಾನ್ಯರು ಗ್ರಹಿಸಿದ್ದರು ಎಂದೇನೂ ಹೇಳಲಾಗುವುದಿಲ್ಲ. ನಾಟಕದಲ್ಲಿ, ಒಂದು ಸಂದರ್ಭದಲ್ಲಿ ಕಲ್ಲಪ್ಪ ಎಂಬುವವನು ಮಹಾಮನೆಯನ್ನು ತಾನು ತಿಳಿದಂತೆ ವರ್ಣಿಸುತ್ತಾ, “ಅಣ್ಣಾವರು ಎಲ್ಲರಿಗೂ ಒಂದೊಂದು ಆತ್ಮ ಕೊಡತಾರಂತಲ್ಲ, ಹೌದೇನು?” ಎಂದು ಕೇಳುತ್ತಾನೆ. ಆಗ ಅಲ್ಲಿಯೇ ಇದ್ದ ಕಾಶವ್ವ “ಪುಕ್ಕಟ ಕೊಡ್ತಾರವ್ವಾ, ಅದಕ್ಕ ಲಿಂಗಪ್ಪ ಅಂತಾರ” ಎಂದುತ್ತರಿಸುತ್ತಾಳೆ. ಆಗ, ಕಲ್ಲಪ್ಪ ಉದ್ಗರಿಸುತ್ತಾನೆ: “ಪುಟ್ಟಕ್ಕ ಅಂದರ ಒಂದೆರಡು ತರಬಾರದೇನವ್ವಾ ಅಕ್ಕಾ? ನಾವೂ ಹಾಂಗ ಕುಣಿಸಿಕೋತ ಕುಂದರತಿದ್ದಿವಿ” ಎಂದರೆ, ‘ಇಷ್ಟಲಿಂಗ’ದ ಪರಿಕಲ್ಪನೆಯಾಗಲಿ ಅದರ ಸಾಂಕೇತಿಕತೆಯಾಗಲಿ ಕಲ್ಲಪ್ಪ, ಕಾಶವ್ವ, ತುಂಗವ್ವ, ಮುಂತಾದ ಜನಸಾಮಾನ್ಯರಿಗೇನೂ ಗೊತ್ತಿರಲಿಲ್ಲ. ಆದರೆ, ಬಸವಣ್ಣನವರ ಕೆಲವು ಮೂಲಭೂತ ಮೌಲ್ಯಗಳು – ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡಾ…’ ಇತ್ಯಾದಿ – ಜನ ಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದುವು ಎಂಬುದನ್ನು ಅರಮನೆಯ ರತ್ನದ ಸರದ ಕಥೆ ದರ್ಶಿಸುತ್ತದೆ. ಆ ಸರವನ್ನು ಹರಿಹರ ಪಂಡಿತನ ಮಗ ದಾಮೋದರ ತಂದೆಯ ಪ್ರಚೋದನೆಯಿಂದ ಕದ್ದು, ತಮ್ಮ ಮನೆಯಲ್ಲಿ ಬಚ್ಚಿಟ್ಟಾಗ, ಕಾಶವ್ವ – ಮುದುಕ, ಇವರಿಗೆ ಅದರಿಂದ ‘ಸತ್ತ ಹೆಗ್ಗಣದ ನಾತ’ ಹೊಡೆಯುತ್ತದೆ; ಅದನ್ನು ಮುಗ್ಧ ಸಂಗಯ್ಯ ಕಾಮಾಕ್ಷಿಗೆ ಕೊಟ್ಟಾಗ ಅದರ ಕಿಮ್ಮತ್ತು ಹೆಚ್ಚಾಯಿತೆಂದು ಅವಳು ಅದನ್ನು ಸೂಳೆ ಸಾವಂತ್ರಿಗೆ ಕೊಡುತ್ತಾಳೆ; ಅವಳು ತನಗದು ಕಾಯಕದಿಂದ ಲಭಿಸದ್ದಲ್ಲವೆಂದು ಅದನ್ನು ಒಂದು ಮೂಲೆಯಲ್ಲಿ ಬಿಸಾಡುತ್ತಾಳೆ; ಆದರೆ, ಅದೇ ಸರಕ್ಕೆ ಆಸೆಪಟ್ಟು ಅದನ್ನು ಕದಿಯಲು ತನ್ನ ಮಗನಿಗೇ ಹೇಳುವವನು ಮೇಲ್ವರ್ಗಕ್ಕೆ ಸೇರಿದ ಹರಿಹರ ಪಂಡಿತ. ಕಾಶವ್ವ, ಕಲ್ಲಪ್ಪ, ಮುದುಕ ಮುಂತಾದ ಸಾಮಾನ್ಯರು ಅರಸೊತ್ತಿಗೆ, ಹರಳಯ್ಯ – ಮಧುವರಸರ ಶಿಕ್ಷೆ, ಅಂತರ್ಜಾತಿಯ ವಿವಾಹ, ಇತ್ಯಾದಿಗಳನ್ನು ತಮ್ಮಲ್ಲಿ ಅಂತರ್ಗತವಾಗಿರುವ ‘ಸಹಜ ನ್ಯಾಯ’ದ (Natural Justice) ನೆಲೆಯಲ್ಲಿ ವಿಮರ್ಶಿಸುತ್ತಾರೆ: “ಆ ನನ್ನ ಹಾಟ್ಯಾ ರಾಜಾ ಇಂದು ಯಾರ್ಯಾರನ್ನ ಕೊಂದನೋ ಏನ್ ಕಥಿಯೋ!” ಎಂದು ತುಂಗವ್ವ ಉದ್ಗರಿಸಿದರೆ, “ಇವರವ್ವನ ಈ ರಾಜಾನ ಮಂದೀನ ಕಂಡರ ನನಗ ಆಗಿ ಬರಾಣಿಲ್ಲ ನೋಡು” ಎಂದು ಕಲ್ಲಪ್ಪ ತನ್ನ ತಿರಸ್ಕಾರವನ್ನು ಪ್ರಕಟಿಸುತ್ತಾನೆ. ಸೂಳೆ ಸಾವಂತ್ರಿ “ನಮಗೂ ನಿಯಮಗಳಿವೆ ಸ್ವಾಮಿ; ಸಂದರ್ಭಾನುಸಾರ ಮುಖ ನೋಡಿ ಮಣೆ ಹಾಕುವ ನಿಯಮಗಳಲ್ಲ ಇವು. ಎಲ್ಲರಿಗೂ ಸಮಾನವಾದ ನಿಯಮಗಳು” ಎಂದು ಬಿಜ್ಜಳನೊಡನೆ ತನ್ನ ಕಾಯಕವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕಾಶ್ಮೀರದಿಂದ ಅಣ್ಣನವರನ್ನು ಕೊಲ್ಲಲು ಬಂದ ಕಳ್ಳ ಚಿಕ್ಕಯ್ಯನ ಮನಃಪರಿವರ್ತನೆಯಾಗಿ ಅವನು ಶರಣ ಚಿಕ್ಕಯ್ಯನಾಗುತ್ತಾನೆ. ಹೀಗೆ, ಸಮಾಜದ ಅಂಚಿನಲ್ಲಿರುವವರೆಲ್ಲರನ್ನೂ ಬಸವಣ್ಣವರ ಚಳುವಳಿ ಒಂದು ನೆಲೆಯಲ್ಲಿ ಮುಟ್ಟಿ, ಅವರ ಬದುಕನ್ನು ಆಳವಾಗಿ ಪ್ರಭಾವಿಸಿದೆ. ಆದರೆ, ಆದರಿಂದ ದೂರವೇ ಉಳಿದಿರುವವರು ಹರಿಹರ ಪಂಡಿತನಂತಹ ಮೇಲ್ವರ್ಗದ ‘ಅರಮನೆ’ಯ ಜನರು.

‘ಮಹಾಮನೆ’ ಮತ್ತು ‘ಅರಮನೆ’ – ಈ ಎರಡು ಕೇಂದ್ರ ರೂಪಕಗಳ ಸುತ್ತ ನಾಟಕ ಕಟ್ಟಲ್ಪಟ್ಟಿದೆ; ಮತ್ತು ಪರಸ್ಪರ ವಿರುದ್ಧವಿರುವ ಈ ಎರಡು ರೂಪಕಗಳು ಸೂಳೆ ಸಾವಂತ್ರಿಯ – – ನೆಯಲ್ಲಿ ಪರಸ್ಪರ ಎದುರಾಗುತ್ತವೆ. ‘ಮಹಾಮನೆ’ಯನ್ನು ಪ್ರತಿನಿಧಿಸುವ ಬಸವಣ್ಣ ಅಲ್ಲಿಗೆ ಮುಗ್ಧ ಸಂಗಯ್ಯನನ್ನು ಹುಡುಕಿಕೊಂಡು ಬಂದರೆ, ‘ಅರಮನೆ’ಯನ್ನು ಪ್ರತಿನಿಧಿಸುವ ಬಿಜ್ಜಳ ಶ್ಯಾಸಂಕ್ಕಾಗಿ ಅಲ್ಲಿಗೆ ಬರುತ್ತಾನೆ. ಬೀದಿ ಬೀದಿಗಳಲ್ಲಿ ಶರಣರ ಬೇಟೆಯಾಗುತ್ತಿರುವಾಗ ಅಮಾವಾಸ್ಯೆಯ ಕತ್ತಲಲ್ಲಿ, ವೇಶ್ಯೆಯ ಮನೆಯಲ್ಲಿ ರಾಜ ಹಾಗೂ ಅವನ ಪ್ರಧಾನಿ ಸಂಧಿಸುವುದೇ ಅದು ಅತ್ಯಂತ ನಾಟಕೀಯ ಸನ್ನಿವೇಶ. ನಾಟಕಕಾರರು ಇವರಿಬ್ಬರ ಮುಖಾಮುಖಿಯಲ್ಲಿ ‘ಮಹಾಮನೆ’ಯ ಹಾಗೂ ‘ಅರಮನೆ’ಯ ಮೌಲ್ಯಗಳನ್ನು ಸ್ಪಷ್ಟಪಡಿಸುತ್ತಾರೆ. ಬಸವಣ್ಣನಿಗೆ ಸಾವಂತ್ರಿ ‘ತಾಯಿ’ಯಂತೆ ಕಂಡರೆ ಬಿಜ್ಜಳನಿಗೆ ಅವಳು ತನ್ನ ದೇಹವನ್ನು ಮಾರಿ ಜೀವಿಸುವ ವೇಶ್ಯೆ. ‘ಅರಮನೆ’ಯೆಂದರೆ ಕಾನೂನು – ಕಟ್ಟಳೆಗಳು, ಚಾಡಿಕೋರರು, ಗೂಢಚಾರರು; ‘ಮಹಾಮನೆ’ಯೆಂದರೆ ಅಂತ್ಯಜನಿಂದ ವಿಪ್ರನವರೆಗೆ ಜಾತಿಭೇದವಿಲ್ಲದೆ ಎಲ್ಲರೂ ಸಮಾನವಾಗಿ ವಿಹರಿಸುವ ತಾಣ. ‘ಅರಮನೆ’ಯಲ್ಲಿ ದೇವರೊಡನೆ ಎಲ್ಲರೂ ದೇವಭಾಷೆಯಲ್ಲಿಯೇ ಮಾತನಾಡಬೇಕು; ‘ಮಹಾಮನೆ’ಯಲ್ಲಿ ದೇವರು ಭಕ್ತರೊಡನೆ ಭಕ್ತರ ಭಾಷೆಯಲ್ಲಿಯೇ ಮಾತನಾಡುತ್ತಾನೆ. ಈ ಸಂದರ್ಭದಲ್ಲಿ ಬಸವಣ್ಣನು ಬಿಜ್ಜಳನಿಗೆ ಹೇಳುವ ಮಾತುಗಳು ಕೃತಿಯ – – ದ್ರಾಶಯವಾಗಿವೆ: “ರಾಜನ ಕಾನೂನಿಗೆ ದೈವಪ್ರಜ್ಞೆ ಆಧಾರವಾಗಿರಬೇಕು. ಮನುಷ್ಯನ ಗೌರವದ ಬಗ್ಗೆ ಸಮ್ಮತಿ ಇರಬೇಕು. ಎಲ್ಲಿಯ ತನಕ ಕಾನೂನು ಇವನ್ನು ಮೀರುವುದಿಲ್ಲವೋ ಅಲ್ಲಿಯ ತನಕ ತಾವು ರಾಜರು. ಮೀರಿದ್ದರಿಂದ ನಾವು ಬೇರೆ ದಾರಿ ಹುಡುಕಬೇಕಾಯಿತು – – .” ಈ ಮಾತುಗಳ ಅರ್ಥ ಜಗದೇವ – ಬೊಮ್ಮರಸರ ಕೈಯಲ್ಲಿ ಸಾಯುವಾಗ ಬಿಜ್ಜಳನಿಗೆ – – ತ್ತದೆ. “ಹೇಳಿ ಕೇಳಿ ಭವಿ ನಾನು, ಬಸವ, ಕ್ಷಮಿಸು ನನ್ನ” ಎಂದು ವಿಷಾದದಿಂದ – – ರಿಸಿ ಬಿಜ್ಜಳ ಸಾಯುವುದಕ್ಕೆ ಸಿದ್ಧನಾಗುತ್ತಾನೆ. ಹಾಗೆಯೇ, ಬಸವಣ್ಣನವರ ಮುಂದಾಳತ್ವ ನಡೆದ ಚಳವಳಿಯ ಸೋಲಿಗೆ ಕಾರಣವನ್ನೂ ಬಿಜ್ಜಳನ ಮಾತುಗಳು ಗುರುತಿಸುತ್ತವೆ: – –  ಸಿದ್ಧಾಂತವನ್ನು ಜೀರ್ಣಿಸಿಕೊಂಬ ಶಕ್ತಿ ಸಮಾಜಕ್ಕಿಲ್ಲ ಬಸವಣ್ಣ.”ದುರದೃಷ್ಟವಶಾತ್, – – ನ ಮಾತೇ ನಿಜವಾಗುತ್ತದೆ.

ಇಷ್ಟು ಸಶಕ್ತವಾಗಿ ಮೂಡಿ ಬಂದಿರುವ ನಾಟಕದ ಭಾಷೆಯಲ್ಲಿ ಅತ್ಯಂತ ಸಹಜವಾಗಿ – – ರ ವಚನಗಳ ಮಾರ್ದನಿಗಳು ಮತ್ತೆ ಮತ್ತೆ ಕೇಳಿಸಿ, ನಾಟಕಕ್ಕೆ ಮತ್ತೊಂದೇ ಆಯಾಮವನ್ನು ಕೊಡುತ್ತವೆ. ನಿದರ್ಶನಾರ್ಥವಾಗಿ ಈ ಕೆಲವು ವಾಕ್ಯಗಳನ್ನು ಗಮನಿಸಬಹುದು: “ದೇವಲೋಕ – ಮರ್ತ್ಯಲೋಕಗಳನ್ನು ಒಂದು ಮಾಡಲು ಕರ್ತಾರನ ಕಮ್ಮಟ ನಡೆಸಿದ”; “ಬಸವಣ್ಣನ – –  ಮುತ್ತಿನ ಹಾರ; ಅಲ್ಲಮನ ಮಾತು ಜ್ಯೋತಿರ್ಲಿಂಗ”; “ಬಸವಣ್ಣನ ಮನೆಯನ್ನು – – ವನು; ಅದು ಸದಾ ಕಾಲ ಹಸನಾಗಿರುವಂತೆ, ಅದರಲ್ಲಿ ಮನೆಯೊಡೆಯ ಸದಾಕಾಲ – –  ಂತೆ ನೋಡಿಕೊಂಡವನು”; ಇತ್ಯಾದಿ.

‘ಶಿವರಾತ್ರಿ’ ಎಂಬ ನಾಟಕದ ಹೆಸರು ಅನೇಕ ನೆಲೆಗಳಲ್ಲಿ ಅರ್ಥಪೂರ್ಣವಾಗಿದೆ. – – ಹಲದ ಸಂಗತಿಯೆಂದರೆ, ಕಂಬಾರರ ಮಹತ್ವಾಕಾಂಕ್ಷೆಯ, ಅನ್ಯೋಕ್ತಿ ಸ್ವರೂಪದ ಚಕೋರಿ ಕಾದಂಬರಿಯೂ ಕೂಡಾ ಶಿವರಾತ್ರಿಯಂದು ಕನಸುಗಳಿಂದ ನಿರೂಪಿಸಲ್ಪಡುತ್ತದೆ.) ಮೊದಲನೆಯದಾಗಿ, ಕಂಬಾರರ ಅನೇಕ ನಾಟಕ – ಕಾವ್ಯಗಳಲ್ಲಿ ‘ಆದರ್ಶ ಸಮಾಜ’ದ ರೂಪಕದಂತೆ ಬರುವ ‘ಶಿವಾಪುರ’ವನ್ನು ‘ಶಿವರಾತ್ರಿ’ಯೂ ಧ್ವನಿಸುತ್ತದೆ. ನಾಟಕದ ಒಂದು ಸಂದರ್ಭದಲ್ಲಿ ಶರಣರ ಕಲ್ಯಾಣ ಹಾಗೂ ಶಿವಾಪುರ ಸಮೀಕರಿಸಲ್ಪಡುತ್ತವೆ (‘…ನಿಂತ ನೀರಿಗೇ ಹರಿವು ನೀಡಿ, ಹೊಸದರೊಂದಿಗೆ ಸೇರಿಸಿ ಶಿವಪುರವೆಂಬ ಕೂಡಲಸಂಗಮವನ್ನ ರೂಪಿಸಬೇಕೆಂಬುದು ನಮ್ಮ ಕನಸಾಗಿತ್ತು’). ಮತ್ತೊಂದು ನೆಲೆಯಲ್ಲಿ, ‘ಶಿವರಾತ್ರಿ’ ಎಂಬುದು ಘೋರ ವ್ಯಂಗ್ಯವನ್ನು ಧ್ವನಿಸುತ್ತದೆ. ಪುರಾಣಗಳ ಪ್ರಕಾರ, ಮಾಘ ಕೃಷ್ಣಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಮಹಾಶಿವರಾತ್ರಿ ‘ಅಹಿಂಸೆ, ಸತ್ಯ, ದಯೆ, ಕ್ಷಮೆ’ ಇತ್ಯಾದಿ ಜೀವದಾಯಕ ಮೌಲ್ಯಗಳನ್ನು ಸಂಕೇತಿಸುತ್ತದೆ; ಆದರೆ ನಾಟಕ ದರ್ಶಿಸಿವುದು ಶಿವರಾತ್ರಿಯಂದು ಕ್ರೂರ ವ್ಯವಸ್ಥೆ ನಡೆಸುವ ಕ್ರೌರ್ಯ; “(ಅಂದು) ಕಲ್ಯಾಣದಲ್ಲಿ ಇರಬೇಕಾದ ಸ್ಥಳ ಮತ್ತು ಕ್ರಮದಲ್ಲಿ ಯಾವುದೂ ಇರಲಿಲ್ಲ. ಯಾರೊಬ್ಬರ ಮ್ಯಾಲೂ ಯಾರಿಗೂ ನಂಬಿಕೆ ಇರಲಿಲ್ಲ, …ಆ ರಾತ್ರಿ, ಶಿವರಾತ್ರಿ, ಕಲ್ಯಾಣ ಮಲಗಿರಲಿಲ್ಲ.” ಓಣಿ ಓಣಿಗಳಲ್ಲಿ ಶರಣರ ಬೇಟೆ – ಸತ್ತವರ ಶವಗಳನ್ನೂ ಅವರ ಮನೆಯವರಿಗೆ ಕೊಡದೆ ಹದ್ದು – ಕಾಗೆಗಳಿಗೆ ಆಹಾರವಾಗಿಸುವ ಪ್ರಭುತ್ವದ ಕ್ರೌರ್ಯ – ಮಗಳನ್ನೇ ಕಳ್ಳತನಕ್ಕೆ ಪ್ರಚೋದಿಸುವ ತಂದೆ – ಶರಣಾಗುವ ಕಳ್ಳ – ತನ್ನ ವೃತ್ತಿಯಲ್ಲಿಯೂ ಧರ್ಮವನ್ನು ಪಾಲಿಸುವ ವೇಶ್ಯೆ – ವೇಶ್ಯೆಯ ಮನೆಯಲ್ಲಿಯೇ ಲಿಂಗಪೂಜೆ ಮಾಡಬೇಕೆಂದು ಬರುವ ಮುಗ್ಧಸಂಗಯ್ಯ – ಮತ್ತು, ಶಿವರಾತ್ರಿಯಲ್ಲಿ ವೇಶ್ಯೆಯ ಮನೆಯಲ್ಲಿ ಸಂಧಿಸುವ ರಾಜ ಮತ್ತು ಅವನ ಪ್ರಧಾನಿ – ಇದೊಂದು ಬಗೆಯ ಅಸಂಗತ ಪ್ರಪಂಚ; ಮತ್ತು ಈ ಅಸಾಂಗತ್ಯವನ್ನು ನಾಟಕದ ಶೀರ್ಷಿಕೆ ಕಣ್ಣಿಗೆ ರಾಚುತ್ತದೆ.

ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ ಹಾಗೂ ಎಲಿಯಟ್ ಮರ್ಡರ್ ಇನ್ ದ ಕೆಥೀಡ್ರೆಲ್ ನಾಟಕಗಳನ್ನು ಮತ್ತು ಎರಡನೆಯ ಮಹಾಯುದ್ಧ ಕೊನೆಯ ದಿನದ ಕರಾಳ ಮೃತ್ಯು ನೃತ್ಯವನ್ನು ಅದ್ಭುತವಾಗಿ ದಾಖಲಿಸುವ ದ ಲಾಂಗೆಸ್ಟ್ ಡೇ ಚಲನಚಿತ್ರವನ್ನು ನೆನಪಿಗೆ ತರುವ ‘ಶಿವರಾತ್ರಿ’, ನಾಟಕಕಾರ ಕಂಬಾರರ ನೂತನ, ಅರ್ಥಪೂರ್ಣ ಪ್ರಯೋಗ; ಹಾಗೂ ಕನ್ನಡ ನಾಟಕ ಕ್ಷೇತ್ರಕ್ಕೆ ಆವರಿಸುತ್ತಿರುವ ಮೌಲಿಕ ಕೊಡುಗೆ. ಕಂಬಾರರಿಗೆ ನಮ್ಮೆಲ್ಲರ ಅಭಿನಂದನೆಗಳು.

ಸಿ.ಎನ್. ರಾಮಚಂದ್ರನ್