ಸೂತ್ರಧಾರ : ಮಾಂಡಳಿಕನಾಗಿದ್ದ ಬಿಜ್ಜಳ ಸದ್ದಿಲ್ಲದೆ ಚಾಲುಕ್ಯ
ಸಾಮ್ರಾಜ್ಯವನ್ನ ಆಕ್ರಮಿಸಿ,
ಮಂಗಳವೇಡೆಯಿಂದ ಕಲ್ಯಾಣಕ್ಕೆ ಬಂದ. 
ಅವನಿಗೂ ಕಲ್ಯಾಣ ಹೊಸದು; ಆಯವ್ಯಯದ ವಿಚಾರದಲ್ಲಿ
ಯಾರಮೇಲೂ ನಂಬಿಕೆ ಇರಲಿಲ್ಲ, ಬಿಜ್ಜಳನಿಗೆ.
ನಂಬಿಕಸ್ಥರಾದ ಬಸವಣ್ಣ ಕಲ್ಯಾಣಕ್ಕೆ ಬಂದ.
ಮರ್ತ್ಯದ ಹಲವಾರು ಸಂಬಂಧಗಳಲ್ಲಿ
ಕೂಡಲಸಂಗಯ್ಯನ ಮೂಲಸಂಬಂಧವನ್ನು
ಬಸವಣ್ಣ ಮರೆಯಲಿಲ್ಲ. ದೇವಲೋಕ –
ಮರ್ತ್ಯಲೋಕಗಳನ್ನು ಒಂದು ಮಾಡಲು
ಕರ್ತಾರನ ಕಮ್ಮಟ ನಡೆಸಿದ. ಚಿನ್ನದ
ಅರಮನೆಯೆದುರು ಮಣ್ಣಿನ ಮಹಾಮನೆ
ಕಟ್ಟಿದ. ಚಿನ್ನದ ಸುತ್ತ ಆಸೆ ಆಮಿಷಗಳಿರುತ್ತವೆ.
ಮಣ್ಣಿನ ಸುತ್ತ ಮನುಷ್ಯರಿರುತ್ತಾರೆ!
ಮಹಾಮನೆಯ  ತೇಜಸ್ಸು
ಅರಮನೆಯ ಕಣ್ಣು ಕುಕ್ಕಿತು.

ನಟಿ : ಹರಳಯ್ಯ ಮಧುವರಸರು ಮಹಾಮನೆಯ ಶರಣರು.
ಆದರೆ ಅರಮನೆಯ ಕಣ್ಣಲ್ಲಿ ಅವರು
ಹೊಲೆಯ ಮತ್ತು ಬ್ರಾಹ್ಮಣರು.
ಶರಣನಿಗೆ ಜಾತಿಯಿಲ್ಲವೆಂದು ಮಹಾಮನೆ ಹೇಳಿದರೆ
ಮನುಷ್ಯರೆಲ್ಲ ಯಾವುದೋ ಒಂದು ಜಾತಿಗೆ
ಸೇರಿದವರಿರಲೇಬೇಕೆಂದು ಅರಮನೆ ಹೇಳಿತು.
ಹರಳಯ್ಯ ಮಧುವರಸರ ಶರಣಸಂಬಂಧ
ಬಸವಣ್ಣನಿಗೆ ಒಪ್ಪಿಗೆಯಾದರೂ ಬಿಜ್ಜಳನಿಗೆ ಆಗಲಿಲ್ಲ.
ಬಸವಣ್ಣನ ಮಾತು ಮುತ್ತಿನಹಾರ.
ಅಲ್ಲಮನ ಮಾತು ಜ್ಯೋತಿರ್ಲಿಂಗ.
ಆದರೆ ಬಿಜ್ಜಳನ ಮಾತಿಗೆ ಹತ್ತು ಮನಸ್ಸು,
ಹದಿನೆಂಟು ಬುದ್ಧಿ!
ಬಿಜ್ಜಳ ಹರಳಯ್ಯ ಮಧುವರಸರ ಕಣ್ಣು ಕೀಳಿಸಿದ!
ಎಳೆಹೂಟ ಎಳೆಸಿ ಶೂಲಕ್ಕೇರಿಸಿದ.
ಇದು ಇತಿಹಾಸದ ಜಾಣ ಕುರುಡು.

ಸೂತ್ರಧಾರ : ಬಸವಣ್ಣ ಮನೆಯನ್ನು ಕಟ್ಟಿದವನು. ಅದು
ಸದಾಕಾಲ ಹಸನಾಗಿರುವಂತೆ, ಅದರಲ್ಲಿ ಮನೆಯೊಡೆಯ
ಸದಾಕಾಲ ಇರುವಂತೆ ನೋಡಿಕೊಂಡವನು.

ನಟಿ : ಕಲ್ಯಾಣದ ಈಗಿನ ಗೊಂದಲಗಳನ್ನ ದೇವರೇ
ವಿವರಿಸಬೇಕು. ಹರಳಯ್ಯ ಮಧುವರಸರನ್ನು ನಿನ್ನೆಯಷ್ಟೇ
ಶೂಲಕ್ಕೇರಿಸಿದ್ದಾಗಿದೆ. ನಗರದ ಎಲ್ಲ ಶೈವಮಠಗಳ ಮೇಲೆ,
ಮಹಾಮನೆಯ ಮೇಲೂ ಕಾವಲಿದೆ.
ನಗರದ ರಸ್ತೆ ಬೀದಿಗಳು ಭಿಕೋ ಎನ್ನುತ್ತಿವೆ.
ಯಾರು ಕೊಂಡೆಯರು, ಯಾರು ಕಳ್ಳರು,
ಯಾರು ಸಜ್ಜನರು, ಆಳುವವರ್ಯಾರು, –
ಎಲ್ಲಾ ಗೊಂದಲಮಯವಾಗಿದೆ.

ಸೂತ್ರಧಾರ : ಇದು ಹನ್ನೆರಡನೆಯ ಶತಮಾನದಲ್ಲಾದ ಸಂಗತಿ.
ಕಲ್ಯಾಣದ ರಾಜಕೀಯವನ್ನು ಧರ್ಮವಿವೇಕ ಸಂಧಿಸಿತು.
ಈ ಸಂವಾದ ಕಾಲದ ಕಿವಿಗೆ ಬಿದ್ದಿದೆಯೋ ಇಲ್ಲವೋ!
ಶಿವನ ಡಂಗುರ ಬಸವಣ್ಣನ ಕಿವಿಗೆ ಕೇಳಿಸಿತು.
ಅವರು ಕೇಳಿದ್ದನ್ನು ನೋಡುವುದಷ್ಟೇ ನಮ್ಮ ಕಾರ್ಯ.
ಅದನ್ನು ಪ್ರಾಚಾರ್ಯ ಭೂಸನೂರಮಠ ಮತ್ತು
ಸಾವಳಗಿ ಶಿವಲಿಂಗೇಶ್ವರ ಮಠದ ಶಿವಯೋಗಿ
ಸಿದ್ಧರಾಮೇಶ್ವರ ಸ್ವಾಮಿಗಳ ಪಾದಸಾಕ್ಷಿಯಾಗಿ ಹೇಳುತ್ತೇವೆ.
ನೋಡಿರಿ :

(ಓಡೋಡುತ್ತ ಒಬ್ಬ ಹುಚ್ಚಿ ಬಂದು ವಿಕಾರವಾಗಿ ಒದರುತ್ತಾಳೆ.)

ನಟಿ : ಇವಳು ಯಾರೆಂದು ಯಾರಿಗೂ ತಿಳಿಯದು.
ಯಾರನ್ನ ಕೇಳಿದರೂ ‘ಹಳೆಗಾಲದ ಮುದುಕಿ,
ಅರಮನೆಯವಳು’ ಎನ್ನುತ್ತಾರೆ. ಅರಮನೆಯಲ್ಲಿ
ಕೇಳಿದರೆ ಹೊರಗಿನವಳು, ಕಲ್ಯಾಣ ಹುಟ್ಟಿದಾಗಿನಿಂದಲೂ
ಇರುವಳೆನ್ನುತ್ತಾರೆ.
ಇಡೀ ಊರು ತುಟಿಕಚ್ಚಿಕೊಂಡು
ತನ್ನ ಉಸಿರು ತನಗೇ ಕೇಳಿಸದಂತೆ ನಿಶ್ಯಬ್ದವಾಗಿದ್ದರೆ
ಇವಳು ಕಾಲಜ್ಞಾನ ನುಡಿಯುತ್ತಿದ್ದಾಳೆ! ಕೇಳಿರಿ: