ಚಂದ್ರಶೇಖರ ಕಂಬಾರರು “ಚಕೋರಿ” ಎಂಬ ಕಥಾನಕ ಕವನ, “ಶಿಖರಸೂರ್ಯ”ವೆಂಬ ಅಲೆಗರಿ ಮಾದರಿಯ ಕಾದಂಬರಿ, “ಎಲ್ಲಿದೆ ಶಿವಾಪುರ?” ಎಂಬ ಮಹತ್ವದ ಕವನ ಸಂಕಲನದ ನಂತರ ಬಿಜ್ಜಳ ಮತ್ತು ಬಸವಣ್ಣನ ಜೀವನದ ಕೊನೆಯ ದಿನಗಳನ್ನು ನಿಮಿತ್ತವಾಗಿಟ್ಟುಕೊಂಡು ರಚಸಿದ ಈ ನಾಟಕವು ಹಲವಾರು ದೃಷ್ಟಿಗಳಿಂದ ಗಮನ ಸೆಳೆಯುತ್ತದೆ. ನಾನು ಇಲ್ಲಿ ಹೇಳಿದ ಕೃತಿಗಳ ವಿಚಾರ ಸರಣಿಯನ್ನನುಸರಿಸಿ ಈ ನಾಟಕವನ್ನು ಪ್ರವೇಶಿಸಿದರೆ ಇಲ್ಲಿ ಹಲವಾರು ಕುತೂಹಲಕರವಾದ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. “ಚಕೋರಿ”ಯಲ್ಲಿ ಜಾನಪದ ಪರಿಕಲ್ಪನೆಯಲ್ಲಿಯ ಜಗತ್ತಿನ ಹುಟ್ಟು ತಾಮಸ ಮತ್ತು ಶುದ್ಧ ಪರಿಶುದ್ಧವಾದುದರ ಮಧ್ಯೆ ನಡೆಯುವ ಸಂಘರ್ಷ, ಈ ಸಂಘರ್ಷದ ದಾರಿಯಲ್ಲಿ ಎದುರಾಗುವ ವಿಚಾರಗಳು – ಇವುಗಳನ್ನು ಕುರಿತಂತೆ ನಡೆಯುವ ಚಿಂತನೆಯೊಂದು ಕೆಲಸ ಮಾಡಿದೆ. “ಶಿಖರ ಸೂರ್ಯ”ದಲ್ಲಿ ಇದೇ ಚಿಂತನೆಯ ಮುಂದುವರಿದ ಭಾಗವೆಂಬಂತೆ ಸ್ವಾರ್ಥಪೂರ್ಣ ಭೌತಿಕ ಜಗತ್ತು ಪರಿಶುದ್ದವಾದ ಆಧ್ಯಾತ್ಮವನ್ನು ಎದುರಿಸಿ ಸೋಲುತ್ತದೆ. ಈ ಭೌತಿಕ ಜಗತ್ತಿನಲ್ಲಿ ಸ್ವಾರ್ಥ, ಕಪಟ, ಮೋಸ, ಲಂಪಟತನ ಇವುಗಳೆಲ್ಲ ಉದ್ದೇಶಿತ ಗುರಿಯನ್ನು ಸಾಧಿಸಲು  ಒದಗಿಬರುವ ವಾಮ ಮಾರ್ಗಗಳಾಗಿ ಮೂಡಿವೆ. “ಎಲ್ಲಿದೆ ಶಿವಾಪುರ” ಕವನ ಸಂಕಲನದಲ್ಲಿ ಕೆಲವೊಂದು ಪದ್ಯಗಳು, ದೈವಿಕ ಸಾನಿಧ್ಯಗಳನ್ನು ದೈಹಿಕ ಮಟ್ಟದಲ್ಲೇ ಸಾಕ್ಷಾತ್ಕಾರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಮುಖ್ಯವಾಗಿ ದೈಹಿಕ ನೆಲೆಯನ್ನು ಬಿಟ್ಟು ಇರುವ ಆತ್ಮದ ಕಲ್ಪನೆಯನ್ನು ಇಲ್ಲಿಯ ಕೆಲವು ಪದ್ಯಗಳು ಪರೋಕ್ಷವಾಗಿ ಪ್ರಶ್ನಿಸುತ್ತವೆ. ಇನ್ನು ‘ವ್ಯವಸ್ಥೆ’, ‘ರಾಜಕೀಯ’ ಮತ್ತು ಇವುಗಳ ವಿರುದ್ಧ ಏಳುವ ಬಂಡು’; ಹಾಗೆಯೇ ‘ದೇಹ’ ಮತ್ತು ‘ಮನಸ್ಸಿ’ನ ಮಧ್ಯೆ ಉಂಟಾದ ವೈರುಧ್ಯ ಇವುಗಳು ನವ್ಯ ಸಾಹಿತ್ಯದ ಧೋರಣೆಗಳಲ್ಲಿಯ ಕೆಲವು ಮೂಲ ಅಂಶಗಳಾಗಿದ್ದವು. ಕಂಬಾರರಿಗೆ ಈ ಧೋರಣೆಗಳ ಹಿನ್ನೆಲೆಯೂ ಇರುವುದರಿಂದ ಅವುಗಳು ಹೇಗೆ ಅವರಲ್ಲಿ ವಿಕಸನಗೊಂಡವು ಎಂಬುದು ಕೂಡ ಈ ನಾಟಕವನ್ನು ಓದುವಾಗ ನಮ್ಮನ್ನು ಕೆಣಕುತ್ತವೆ. ವ್ಯವಸ್ಥೆ ಮತ್ತು ರಾಜಕೀಯ ಅವರ ಈ ಹಿಂದಿನ ಕೆಲವು ನಾಟಕಗಳಲ್ಲಿ ಅತಿಯಾದ ವ್ಯಂಗ್ಯಕ್ಕೆ ಒಳಗಾಗಿ ನಾಟಕದ ರಚನೆಯಲ್ಲಿಯ ಬಿಗಿ ಕಡಿಮೆಯಾಗಿದೆ. ಅಲ್ಲದೆ ಅಲ್ಲಿ ನಡೆಯುವ ಘಟನೆಗಳಿಗೆ ಕೌತುಕದ ಅಥವಾ ಮಂತ್ರ’ದ ಅಂಶ ಸೇರಿಕೊಂಡು ಅವು ಅವಾಸ್ತವದ ನೆಲೆಗಳಲ್ಲೂ ವಿಹರಿಸಿವೆ. ‘ಡಿಂಗಡಾಂಗ’ ಕತ್ತೆಯ ಅಧಿಕಾರಕ್ಕೆ ಬರುವುದು. ಗಣಪನು ಕೊಟ್ಟ ಮುತ್ತು ಒಂದು ಮಂತ್ರ ಶಕ್ತಿಯನ್ನು ಕೊಡುವುದು ಇತ್ಯಾದಿ ಅವರ ನಾಟಕದಲ್ಲಿ ಮೂಡಿಬಂದದ್ದು ಇಲ್ಲಿ ನೆನಪಾಗುತ್ತದೆ.

ಜಗತ್ತಿನ ಉಗಮ, ವ್ಯವಸ್ಥೆಯ ಹುಟ್ಟು, ಆ ಹುಟ್ಟಿನಲ್ಲೇ ಇರಬಹುದಾದ ದೋಷಗಳು ಮತ್ತು ಪದ್ಯದ ಮಾಂತ್ರಿಕತೆಯಿಂದಾಗಿ ಒದಗಿ ಬಂದ ಒಂದು ಅಪೂರ್ವ ‘ಭೂಮಿ ಬಿಟ್ಟ ದೃಷ್ಟಕೋನ’ ಇವುಗಳ ಒಟ್ಟು ಸಂಯೋಜನೆಗೆ ಕಂಬಾರರು ಒಂದು ರೂಪಕವನ್ನು ಹುಡುಕುತ್ತಲೇ ಇದ್ದಾರೆಂದು ಅವರ ಕೃತಿಗಳನ್ನು ಅಭ್ಯಸಿಸಿದವರಿಗೆ ವಿದಿತವೇ ಇದೆ. ಇದು ಅವಾಸ್ತವದಿಂದ ವಾಸ್ತವಕ್ಕಿಳಿದು ಹೆಚ್ಚು ಹುರಿಗೊಂಡು ಒಡಮೂಡುವ ಎಲ್ಲ ಲಕ್ಷಣಗಳೂ ಅವರ ಈ ನಿಕಟ ಪೂರ್ವ ಕೃತಿಗಳಲ್ಲಿ ಕಂಡುಬಂದಿದೆ.

ಬಸವಣ್ಣ ಮತ್ತು ಬಿಜ್ಜಳರನ್ನೊಳಗೊಂಡಂತೆ ಕನ್ನಡದಲ್ಲಿ ಅನೇಕ ನಾಟಕಗಳು ಈಗಾಗಲೇ ಬಂದಿವೆ. ಸಮಾನತೆಯ ಹಸಿವು ಹೆಚ್ಚಾದಂತೆ ಹನ್ನೆರಡನೆಯ ಶತಮಾನದ ವಚನಕಾರರು ಕನ್ನಡದ ಲೇಖಕರನ್ನು ಹೆಚ್ಚಾಗಿ ಆಕರ್ಷಿಸಿದರು. ಬಸವಣ್ಣ ಒಬ್ಬ ಧೀಮಂತ ನಾಯಕನಾಗಿ ಮತ್ತು ನಮ್ಮ ಕಾಲದ ಸಮಸ್ಯೆಗಳಿಗೆ ಉತ್ತರವಾಗಿ ಕಾಣತೊಡಗಿದ್ದು ನ್ಯಾಯಸಮ್ಮತವೆ. ಆದರೆ ಇಂಥ ಬಸವಣ್ಣನನ್ನು ಬಿಜ್ಜಳನಂಥ ದೊರೆ ಸಂಶಯದಿಂದ ನೋಡಲು ಕಾರಣವೇನು ಎಂಬ ಪ್ರಶ್ನೆಯು, ನಮ್ಮ ಇಂದಿನ ರಾಜಕೀಯವು ಶುದ್ಧವಾದುದನ್ನೆಲ್ಲ ಗುಮಾನಿಯಿಂದಲೇ ಕಾಣಲು ಕಾರಣವೇನು ಎಂಬ ಪ್ರಶ್ನೆಯಿಂದಲೇ ಪ್ರೇರಿತವಾಗಿದೆ. ಅಥವಾ ಒಳ್ಳೆಯದಾದುದೆಲ್ಲ ವಿಫಲತೆಯ ದಾರಿಯಲ್ಲೇ ಏಕೆ ಸಾಗುತ್ತಿದೆ ಎಂಬ ಹತಾಶ ಭಾವವೂ ಇದರಲ್ಲಡಗಿದೆ. ಈ ಮೊದಲು ಬಂದ ಹೆಚ್ಚಿನ ನಾಟಕಗಳು ಬಸವಣ್ಣನವರ ಸಮಾನತೆಯ ತತ್ವಗಳನ್ನು ಬಿಂಬಿಸಿ, ನಂತರ ಅದಕ್ಕಾಗಿ ಆ ಮಹಾನುಭಾವನು ತೆರಬೇಕಾದ ದಂಡವನ್ನು ಕುರಿತೇ ಯೋಚಿಸಿವೆ. ಕಂಬಾರರನ್ನು ಕಾಡುತ್ತಿರುವ ಸಮಸ್ಯೆಯು ಬಸವಣ್ಣನ ಸಮಸ್ಯೆಯಲ್ಲ. ಅವರನ್ನು ಕಾಡುತ್ತಿರುವುದು ಬಿಜ್ಜಳನ ದೃಷ್ಟಿಕೋನ. ಅಂದರೆ ವ್ಯವಸ್ಥೆಯ ದೃಷ್ಟಿಕೋನದಲ್ಲಿ ಸಮಾನತೆ ಮತ್ತು ಆಧ್ಯಾತ್ಮಕ್ಕೆ ಸ್ಥಾನವೇಕೆ ಸಿಕ್ಕುವುದಿಲ್ಲ ಎಂಬುದೇ ಅವರ ಸಂಕಟವಾಗಿದೆ. ಇದಕ್ಕೆ ರೂಪಕವಾಗಿ ಕಂಬಾರರಿಗೆ ಬಿಜ್ಜಳ ಮತ್ತು ಬಸವಣ್ಣನವರ ಮಧ್ಯದ ವೈಚಾರಿಕ ಸಂಘರ್ಷವು ಕಂಡಿದೆ. ವಿಚಿತ್ರವೆಂದರೆ ಈ ರೂಪಕವನ್ನು ಹುಡುಕುವ ಪ್ರಕ್ರಿಯೆಯಲ್ಲಿ ಅವರು ಜಾನಪದ ಅಂಶಗಳನ್ನೂ ಕೆಲಮಟ್ಟಿಗೆ ಮೈಗೂಡಿಸಿಕೊಂಡು ಈ ನಾಟಕವನ್ನು ಬರೆದಿರುವುದು. ಇಲ್ಲಿ ಬರುವ ಮುಗ್ಧ ಹುಡುಗ ನಿಜವಾಗಿಯೂ ಕೂಡಲ ಸಂಗಯ್ಯನಾಗಿರುವುದು ಮತ್ತು ಹುಚ್ಚಿಯು ನಗರದೇವತೆಯಾಗಿರುವುದು ಇದಕ್ಕೆ ನಿದರ್ಶನಗಳಾಗಿವೆ. ಅವಾಸ್ತವವು ಅವಾಸ್ತವವೇ ಆಗಿ ಉಳಿದು ಕೃತಿಯ ಅರ್ಥವಂತಿಕೆಗೆ ಸಹಾಯ ಮಾಡದಿದ್ದರೆ ಸೃಜನಶೀಲ ಉದ್ದೇಶಕ್ಕೆ ಧಕ್ಕೆ ಬರುತ್ತದೆ. ಇಲ್ಲಿ ಮುಗ್ಧ ಸಂಗಯ್ಯ ಮತ್ತು ಹುಚ್ಚಿ ನಾಟಕದ ಅವಿಭಾಜ್ಯ ಅಂಗವಾಗಿ ಬೆಳೆದು ಬರುವ ರೀತಿಯು ಅರ್ತಗರ್ಭಿತವಾಗಿದೆ ಮತ್ತು ಅದು ನಾಟಕವನ್ನು ಮಾಂತ್ರಿಕ ಸ್ಪರ್ಶಕ್ಕೆ ಒಳಪಡಿಸುತ್ತದೆ. ಇಲ್ಲಿಯೇ ಕಂಬಾರರ ಈ ನಾಟಕ ಅವರ ಹಿಂದಿನ ನಾಟಕಗಳಿಗಿಂತ ಭಿನ್ನವಾಗಿ ಕಾಣುತ್ತದೆ.

ದೇವರೇ ಬಂದು ನಾಟಕದಲ್ಲಿ ಪಾತ್ರವಹಿಸುವುದು, ನಗರ ದೇವತೆಯು ಹುಚ್ಚಿಯಾಗಿರುವುದರ ಜೊತೆಗೆ ಕೊನೆಗೆ ಅವಳೇ ಬಿಜ್ಜಳನ ಕೊಲೆಗೆ ಅನುವು ಮಾಡಿಕೊಡುವುದು ಮತ್ತು ಸಂಗಯ್ಯ ‘ಭರತವಾಕ್ಯ’ ನುಡಿಯುವುದು ಇವೆಲ್ಲಾ ಸಾಂಪ್ರದಾಯಿಕ ನಾಟಕದ ಅಂಶಗಳನ್ನೇ ಸೂಚಿಸುತ್ತವೆ. ವ್ಯವಸ್ಥೆಯ ದೃಷ್ಟಿಕೋನ ಮತ್ತು ಸಮಾನತೆಯ ದೃಷ್ಟಿಕೋನಗಳು ಭಿನ್ನವಾಗಿ ನಿಂತಿರುವುದೇ ನಮ್ಮ ಕಾಲದ ದುರಂತ. ಇದನ್ನು ಸೆರೆಹಿಡಿಯಲು ಈ ನಾಟಕ ಶ್ರಮಿಸುವುದರಿಂದ ಸಹಜವಾಗಿಯೇ ನಾಟಕದ ಘಟನೆಗಳು ಹನ್ನೆರಡನೆಯ ಶತಮಾನದಲ್ಲಿ ನಡೆದರೂ ಅವು ನಮ್ಮ ಕಾಲದ ಸಮಸ್ಯೆಗಳನ್ನೇ ಧ್ವನಿಸುತ್ತವೆ. ಹೀಗಾಗಿಯೇ ಇಲ್ಲಿಯ ಘಟನೆಗಳಿಗೆ ಸೃಜನಶೀಲತೆಯ ಸ್ಪರ್ಶ ಮತ್ತು ಕಾವ್ಯದ ಮಾಂತ್ರಿಕತೆ ದಕ್ಕಿ ಅವು ನಮ್ಮನ್ನು ಮತ್ತು ನಮ್ಮ ಕಾಲವನ್ನು ಪರೀಕ್ಷೆಗೆ ಒಡ್ಡುತ್ತವೆ.

ನಾಟಕದ ಪ್ರಾರಂಭದಲ್ಲಿ ಬರುವ ಸೂತ್ರಧಾರನ ಈ ಮಾತುಗಳು ಬಸವಣ್ಣ ಕಲ್ಯಾಣಕ್ಕೆ ಬಂದಾಗ ಇದ್ದ ಪರಿಸ್ಥಿತಿಯನ್ನು ತಿಳಿಸುತ್ತವೆ:

ಅವನಿಗೂ ಕಲ್ಯಾಣ ಹೊಸದು; ಆಯವ್ಯಯದ ವಿಚಾರದಲ್ಲಿ
ಯಾರ ಮೇಲೂ ನಂಬಿಕೆ ಇರಲಿಲ್ಲ, ಬಿಜ್ಜಳನಿಗೆ.
ನಂಬಿಕಸ್ಥನಾದ ಬಸವಣ್ಣ ಕಲ್ಯಾಣಕ್ಕೆ ಬಂದ.
ಮರ್ತ್ಯದ ಹಲವಾರು ಸಂಬಂಧಗಳಲ್ಲಿ
ಕೂಡಲಸಂಗಯ್ಯನ ಮೂಲಸಂಬಂಧವನ್ನು
ಬಸವಣ್ಣ ಮರೆಯಲಿಲ್ಲ. ದೇವಲೋಕ –
ಮರ್ತ್ಯಲೋಕಗಳನ್ನು ಒಂದು ಮಾಡಲು
ಕರ್ತಾರನ ಕಮ್ಮಟ ನಡೆಸಿದ.

ಈ ಮಾತುಗಳು ನಾಟಕದ ಒಟ್ಟೂ ಉದ್ದೇಶವನ್ನು ಸ್ಥಾಪಿಸುತ್ತವೆ. ಬಿಜ್ಜಳನ ಮೂಲ ಗುಣವೇ ಎಲ್ಲ ವ್ಯವಸ್ಥೆಗಳ ಮೂಲ ಗುಣದಂತೆ ಅಪನಂಬಿಕೆ. ಬಸವಣ್ಣ ವ್ಯಾವಹಾರಿಕ ಜಗತ್ತಿನಲ್ಲಿದ್ದರೂ ದೇವರ ಸಂಬಂಧವನ್ನು ಮರೆತಿಲ್ಲ. ತನ್ನನ್ನೂ ಮೀರಿದ ಶಕ್ತಿಯೊಂದಿಗೆ ಎಂಬ ಅರಿವು ಆತನಿಗಿದೆ. ಆದರೆ ಈ ಅರಿವು ಅಲ್ಲಿಯವರೆಗಿನ ಅಂಥ ಅರಿವಿಗಿಂತ ಭಿನ್ನವಾದುದು ಎಂಬುದನ್ನೇ ನಾಟಕವು ಅರಳಿದಂತೆ ವಿಶದಪಡಿಸುತ್ತಾ ಹೋಗುತ್ತದೆ. ’ಚಿನ್ನದ ಸುತ್ತ ಆಸೆ ಆಮಿಷಗಳಿರುತ್ತವೆ/ ಮಣ್ಣಿನ ಸುತ್ತ ಮನುಷ್ಯರಿರುತ್ತಾರೆ” ಎಂಬ ಸೂತ್ರಧಾರನ ಮಾತು “ಶಿಖರಸೂರ್ಯ” ಕಾದಂಬರಿಯಲ್ಲಿ ಮಂತ್ರಿಕ ಶಕ್ತಿಯಿಂದ ಆಹಾರ ಧಾನ್ಯಗಳನ್ನು ಚಿನ್ನವಾಗಿ ಪರಿವರ್ತಿಸುವುದನ್ನು ನೆನಪಿಸುತ್ತದೆ. ಶಿಖರಸೂರ್ಯ ಭೌತಿಕವಾದುದನ್ನು ಬೆಂಬತ್ತಿ ತನ್ನ ನಾಶವನ್ನು ತಾನೇ ಮಾಡಿಕೊಂಡರೆ, ಇಲ್ಲಿ ಬಿಜ್ಜಳ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ಆಧ್ಯಾತ್ಮಕ್ಕೆ ಅನುವು ಮಾಡಿಕೊಡದೆ ಕೇವಲ ‘ಪದ್ಧತಿ’ಗೆ ಜೋತುಬಿದ್ದು ಸೋಲುತ್ತಾನೆ. ಶಿಖರಸೂರ್ಯ’ದಲ್ಲಿ ‘ಗುರು’ವಿನ ಬಲದಿಂದ ದುಷ್ಟಶಕ್ತಿಯ ನಾಶವಿದ್ದು, ಗುರುವು ಮಾನವನಾಗಿಯೇ ಕಾಣುತ್ತಾನೆ. ಇಲ್ಲಿ ಸಂಗಯ್ಯ ಸಾಕ್ಷಾತ್ ಕೂಡಲಸಂಗಮದೇವನೇ ಆಗಿದ್ದು ಅವನ ಅಸ್ತಿತ್ವ ಬಸವಣ್ಣನ ಒಳಗೆ ಮತ್ತು ಹೊರಗೂ ಇದೆ. ಈ ದೃಷ್ಟಿಯಿಂದ ನಾಟಕಕಾರರು ಆರಿಸಿ ಕೊಂಡಿರುವ ಈ ವಸ್ತು ಪ್ರೌಢಿಮೆಯನ್ನು ಸಾಧಿಸಿದ ಬರಹಗಾರನಿಗೆ ಆಹ್ವಾನದಂತೆಯೇ ಇದೆ. ನಟಿಯ ಈ ಮಾತುಗಳು ಪ್ರಾರಂಭದಲ್ಲಿಯೇ ಬಸವಣ್ಣ ಮತ್ತು ಬಿಜ್ಜಳರ ಮನಸ್ಥಿತಿಗಳನ್ನು ಬಿಚ್ಚಿಡುತ್ತವೆ:

ಬಸವಣ್ಣನ ಮಾತು ಮುತ್ತಿನಹಾರ
ಅಲ್ಲಮನ ಮಾತು ಜ್ಯೋತಿರ್ಲಿಂಗ
ಆದರೆ ಬಿಜ್ಜಳನ ಮಾತಿಗೆ ಹತ್ತು ಮನಸ್ಸು
ಹದಿನೆಂಟು ಬುದ್ಧಿ!

ಇನ್ನು ಬಸವಣ್ಣ ಮತ್ತು ಬಿಜ್ಜಳರ ಭಿನ್ನಾಭಿಪ್ರಾಯಕ್ಕೆ ಇನ್ನೊಂದು ಮಹತ್ವದ ಕಾರಣವೆಂದರೆ ‘ರಾಜಕೀಯವನ್ನು ಧರ್ಮವಿವೇಕ ಸಂಧಿಸಿ’ದ್ದು. ಈ ‘ಧರ್ಮವಿವೇಕ’ ಎಂಬ ಮಾತಿನಲ್ಲಿ ಹಲವಾರು ಅರ್ಥಗಳು ಅಡಗಿವೆ. ಇದು ಸನಾತನ ಧರ್ಮ ವಿವೇಕವಲ್ಲ. ಇದು ಬಸವಣ್ಣ ಹೊಸದಾಗಿ ರೂಪಿಸಿದ ‘ಧರ್ಮವಿವೇಕ’. ಇದರಲ್ಲಿ ಸಮಾನತೆ ಮತ್ತು ಸ್ತಾತಂತ್ಯ್ರಗಳು ಆಧಾರ ಸ್ತಂಭಗಳು. ಬಿಜ್ಜಳನ ಸಮಸ್ಯೆ ಎರಡು ಬಗೆಯದು: ‘ಅವನು ‘ಪದ್ಧತಿ’ಯನ್ನು ಅನುಸರಿಸ ಬಯಸುತ್ತಾನೆ ಮತ್ತು ಚಾಡಿಗೆ ಕಿವಿಗೊಡುತ್ತಾನೆ. ಇವೆಲ್ಲಕ್ಕೆ ಮಿಗಿಲಾಗಿ ಅವನು ತನ್ನ ವ್ಯವಸ್ಥೆಗೆ ಸಮಾನಾಂತರವಾದ ಇನ್ನೊಂದು ಅಧಿಕಾರ ಕೇಂದ್ರವನ್ನು ಸಹಿಸಲಾರ. ಅವನ ದುರಂತವೆಂದರೆ ‘ಇಲ್ಲದ ವೈರಿ’ಯನ್ನು ‘ಇದೆ’ ಎಂದು ಭ್ರಮಿಸಿದ್ದಾನೆ. ಬಸವಣ್ಣ ಇನ್ನೊಂದು ಸಮಾನಾಂತರ ಅಧಿಕಾರ ಕೇಂದ್ರವನ್ನು ಸ್ಥಾಪಿಸಲು ಹೊರಟೇ ಇಲ್ಲ. ಆಮೂಲಾಗ್ರ ಬದಲಾವಣೆಗೆ ಒಗ್ಗದ ಅಧಿಕಾರಶಾಹಿ ಮನಸ್ಸಿಗೆ, ಅಂಥ ಬದಲಾವಣೆಯಲ್ಲಿ ಸಮಾನಾಂತರ ಅಧಿಕಾರ ಕೇಂದ್ರ ಸ್ಥಾಪನೆಯ ಹುನ್ನಾರ ಕಂಡರೆ ಆಶ್ಚರ್ಯವಿಲ್ಲ. ಆಮೂಲಾಗ್ರ ಬದಲಾವಣೆಯನ್ನರಿಯಲು ಬಿಜ್ಜಳನಿಗೆ ‘ಪದ್ಧತಿ’ಯು ಅಡ್ಡವಾಗಿ ನಿಂತಿದೆ. ಸಾವಿರಾರು ವರ್ಷಗಳ ಪದ್ಧತಿಯನ್ನು ಅವನು ತ್ಯಜಿಸಲಾರ, ಆ ಪದ್ಧತಿಯನ್ನಿಟ್ಟುಕೊಂಡು ಬಸವಣ್ಣ ಆಮೂಲಾಗ್ರ ಬದಲಾವಣೆ ತರಲಾರ. ಬಿಜ್ಜಳನಿಗೆ ಯಾವುದು ‘ಧರ್ಮ ವಿವೇಕ’ವೊ ಅದು ಬಸವಣ್ಣನಿಗೆ ಅವನತಿಯ ವಿವೇಕವಾಗಿದೆ. ಈಗಿನ ನಮ್ಮ ರಾಜಕೀಯದಲ್ಲಿ ಕೂಡ ಆಗಾಗ ಕಾಣಿಸಿಕೊಳ್ಳುವ ಬಿಕ್ಕಟ್ಟು ಇದೇ ತರಹದ್ದು. ಇನ್ನೊಂದು ಅಧಿಕಾರ ಕೇಂದ್ರವನ್ನು ಸಹಿಸಿದ, ಹೊಸ ವಿಚಾರಗಳಿಗೆ ಮನಸ್ಸನ್ನು ತೆರೆದಿಡಲು ಸಿದ್ಧವಿಲ್ಲದ, ಸದಾ ಜನರ ಬೆಂಬಲ ಯಾವ ಕಡೆ ವಾಲುತ್ತದೊ ಎಂಬ ಭಯದಲ್ಲೇ ಬದುಕುತ್ತಿರುವ ಇಂದಿನ ರಾಜಕಾರಣಿ ಇಲ್ಲಿಯ ಬಿಜ್ಜಳನಿಗಿಂತ ಭಿನ್ನವಲ್ಲ. ಈ ನಾಟಕವು ಇಲ್ಲಿಯೇ ಕಂಬಾರರ ಇನ್ನಿತರ ನಾಟಕಗಳಿಗಿಂತ ಭಿನ್ನವಾಗಿದೆ. ಅವರ ಈ ಮೊದಲಿನ ನಾಟಕಗಳಲ್ಲಿ ವರ್ತಮಾನಕ್ಕೆ ನಿರ್ದೇಶನ ಇಷ್ಟೊಂದು ಪ್ರಖರವಾಗಿ ಮತ್ತು ನೇರವಾಗಿ ನಮಗೆ ದೊರೆಯುವುದಿಲ್ಲ. ಇತಿಹಾಸ ಮತ್ತು ಪುರಾಣದ ವಸ್ತುಗಳನ್ನು ಆಧರಿಸಿ ಬರೆದ ಕೃತಿಗಳು ಕೇವಲ ಮನುಷ್ಯನ ಮುಲಭೂತ ಪ್ರವೃತ್ತಿಗಳತ್ತ ನಮ್ಮ ಗಮನ ಸೆಳೆದರೆ ಸಾಲದು, ಅವು ವರ್ತಮಾನದ ಸಮಸ್ಯೆಗಳನ್ನೂ ಒಳಗೊಳ್ಳುವಂತಿರಬೇಕು. ಸೃಜನಶೀಲತೆಯ ಪರೀಕ್ಷೆ ಇರುವುದೇ ಅಲ್ಲಿ. ಶೇಕ್ಸ್‌ಪಿಯರನ ನಾಟಕಗಳು ಈ ಕಾರಣಕ್ಕಾಗಿಯೇ ಬಹುಮುಖಿ. ಕಂಬಾರರ ಈ ನಾಟಕದಲ್ಲೂ ಸೃಜನಶೀಲತೆಯು ಅಂಥ ಸವಾಲನ್ನು ಎದುರಿಸಿ ಗೆದ್ದಿದೆ.

ನಗರದೇವತೆಯಾದ ‘ಹುಚ್ಚಿ’ ಮತ್ತು ಭಗವಂತನ ಸ್ವರೂಪಿಯಾದ ಸಂಗಯ್ಯ ಇವರು ನಾಟಕದಲ್ಲಿ ಸಂಕೇತಗಳಂತೆ ಕೆಲಸ ಮಾಡಿದರೂ ಅವರೂ ವಾಸ್ತವದಲ್ಲಿ ನೆಲೆಯೂರುವ ಪಾತ್ರಗಳಂತೆಯೇ ಕಾಣುತ್ತಾರೆ. ಒಂದು ಹಂತದಲ್ಲಿ ಮಾತ್ರ “ಸಂಗಯ್ಯ ಹಾಗೇ ನಿಂತಿದ್ದಾನೆ. ಅವನು ರಾಜಭಟರಿಗೆ ಕಾಣುವುದಿಲ್ಲ” ಎಂದು ನಾಟಕಕಾರರು ಸೂಚಿಸಿದ್ದಾರೆ. ಇದೊಂದು ಸ್ಥಳ ಬಿಟ್ಟರೆ ಸಂಗಯ್ಯ ಎಲ್ಲರಿಗೂ ‘ಗೋಚರಿಸುತ್ತಾನೆ’. ‘ಆತ್ಮ’ ‘ಲಿಂಗ’ ಇತ್ಯಾದಿ ಪದಗಳನ್ನರಿಯದ ಕೆಳವರ್ಗದವರು ಅವುಗಳನ್ನು ಕುರಿತು ಹಾಸ್ಯವಾಗಿ ಮಾತನಾಡುತ್ತಾರೆ. ಬಸವಣ್ಣನನ್ನು ಕೊಲ್ಲಲೆಂದು ಕಾಶ್ಮೀರದಿಂದ ಬಂದ ಕಳ್ಳನೊಬ್ಬ ಬಸವಣ್ಣನ ಆಕರ್ಷಣೆಗೆ ಒಳಗಾಗಿ ಶರಣನಾಗಿದ್ದಾನೆ. ಹಾಗೆಯೇ ಸೂಳೆ ಸಾವಂತ್ರಿ ಶರಣ ಸಂಪ್ರದಾಯದ ಮತ್ತು ‘ಕಾಯಕ ಧರ್ಮದ’ದ ಅರ್ಥವನ್ನು ಚೆನ್ನಾಗಿ ಮನಗಂಡಿದ್ದಾಳೆ. ಸಾಮಾನ್ಯರಿಂದ ಹಿಡಿದು ರಾಜನವರೆಗೆ, ವಾಸ್ತವದಿಂದ ಹಿಡಿದು ಆಧ್ಯಾತ್ಮಿಕ ಮಾಂತ್ರಿಕತೆಯವರೆಗೆ ನಾಟಕದ ಬೀಸು ಇರುವುದರಿಂದ ಸಮಾಜದ ಪಲ್ಲಟದ ಕಾಲದಲ್ಲಿ ಜನರ ಮನಸ್ಸು ಪರಿವರ್ತೀತವಾಗುವ ಬಗೆಯನ್ನು ಬಹು ಮಾರ್ಮಿಕವಾಗಿ ಈ ನಾಟಕವು ಸೆರೆ ಹಿಡಿಯುತ್ತದೆ. ಹುಚ್ಚಿಯೊಡನೆ ನಡೆಯುವ ಸಂಭಾಷಣೆಯ ಒಂದು ಹಂತದಲ್ಲಿ ಸಂಗಯ್ಯ ಹೀಗೆ ಹೇಳುತ್ತಾನೆ: “…ಅಂತರಾತ್ಮನೇ ಪ್ರಾಚೀನತಮ. ಅದೇ ಕೂಡಲ ಸಂಗಯ್ಯನನ್ನು| ಬಸವನನ್ನು ಹುಟ್ಟಿಸಿದ್ದು”. ದೇವತಾ ಸ್ವರೂಪಿಯಾದ ಸಂಗಯ್ಯನನ್ನು ಹುಟ್ಟಿಸಿದ್ದು ಅಂತರಾತ್ಮ. ಈ ಅಂತರಾತ್ಮವೇ ಆದಿಮ. ಕಂಬಾರರನ್ನು ವೈದಿಕ ವಿಚಾರಧಾರೆಯಲ್ಲಿ ಬರುವ ‘ಆತ್ಮ’ದ ಕಲ್ಪನೆ ಬಹುವಾಗಿ ಕಾಡಿದೆ. ಬಸವಣ್ಣ ಪ್ರತಿನಿಧಿಸುವ ಮೌಲ್ಯಗಳು ಪೂರ್ತಿ ಆವೈದಿಕವಲ್ಲ. ಆದರೆ ಮೂಲ ವೈದಿಕ ವಿಚಾರಧಾರೆಗೆ ಬಳಿದ ‘ಪದ್ಧತಿ’ಗಳನ್ನು ಅವರು ವಿರೋಧಿಸುತ್ತಿದ್ದಾರೆ. ಅಲ್ಲದೆ ಧರ್ಮವೇ ಇಲ್ಲದವರಿಗೆ ಅವರದೇ ಆದ ಮತ್ತು ‘ಪಾಲಿಸಲು ಸಾಧ್ಯವಾದ’ ಧರ್ಮವನ್ನು ಒದಗಿಸಿದಾಗ ‘ಹುಸಿ ಧರ್ಮ’ದ ಆಧಾರದ ಮೇಲೆ ಕಟ್ಟಿದ ವ್ಯವಸ್ಥೆಯು ಹೇಗೆ ಕುಸಿಯುತ್ತದೆ ಮತ್ತು ಆ ‘ಹುಸಿಧರ್ಮ’ವನ್ನು ನಂಬಿದವರು ಆಗ ಹೇಗೆ ದುರಂತವನ್ನೆದುರಿಸಬೇಕಾಗುತ್ತದೆ ಎಂಬುದೇ ಈ ನಾಟಕದ ಮುಂದಿರುವ ಪ್ರಶ್ನೆ. ಮುಖ್ಯವಾದದ್ದೆಂದರೆ ನಾಟಕವು ಬಸವಣ್ಣನ ಪರವಾಗಿಯಾಗಲಿ, ಬಿಜ್ಜಳನ ವಿರುದ್ದವಾಗಿಯಾಗಲಿ ನಿಲುವು ತಾಳುವುದಿಲ್ಲ. ನಾಟಕವು ‘ಅನಿವಾರ್ಯತೆ’ಯ ಪರವಾದ ನಿಲುವು ತಾಳುತ್ತದೆ.

ನಾಟಕದ – ಕೇಂದ್ರ ಘಟನೆಯು ಸೂಳೆ ಸಾವಂತ್ರಿಯ ಮನೆಯಲ್ಲಿ ನಡೆಯಲು ಕಾರಣವೇನು ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಮೊದಲನೆಯದಾಗಿ ಸಾವಂತ್ರಿಯಂಥ ಸೂಳೆಯಲ್ಲಿ ಕೂಡ ಕಾಯಕ ಧರ್ಮವು ನೆಲೆಗೊಂಡಿತ್ತು ಮತ್ತು ಅದು ಬಸವಣ್ಣನ ಪ್ರಭಾವದ ಆಳವನ್ನು ತೋರಿಸಲು ನಾಟಕವು ಆಯ್ದುಕೊಂಡ ಒಂದು ವಿಧಾನವಾಗಿದೆ. ಎರಡನೆಯದಾಗಿ ಸಂಗಯ್ಯನಿಗೆ ಕಾಶವ್ವ, ಕಳ್ಳ ಚಿಕ್ಕಯ್ಯ, ಬ್ರಾಹ್ಮಣ ದಾಮೋದರ, ಬಿಜ್ಜಳನ ಯುವ ಕಾಮಿನಿ ಕಾಮಾಕ್ಷಿ ಎಲ್ಲರೂ ಸರಿಸಮಾನರು ಮತ್ತು ಅವನಿಗೆ ಎಲ್ಲರಿಂದಲೂ ದೊರೆಯುವ ಗೌರವ ಸಮ್ಮತವಾಗಿದೆ ಎಂಬುದನ್ನು ತೋರಿಸಬೇಕಾಗಿದೆ. ಸಂಗಯ್ಯನು ದಾಮೋದರನು ಕದ್ದ ಸರವನ್ನು ಹಿಡಿದುಕೊಂಡು ಸಾವಂತ್ರಿಯ ಮನೆ ಪ್ರವೇಶಿಸುವುದು ಮತ್ತು ಬಿಜ್ಜಳ ಕಾಮಾಕ್ಷಿಗಾಗಿ ಆಸೆ ಪಟ್ಟು ಶಿವರಾತ್ರಿಯ ಕರಾಳ ರಾತ್ರಿಯಲ್ಲಿ ಸಾವಂತ್ರಿಯ ಮನೆ ಪ್ರವೇಶಿಸುವುದು – ಇವೆರಡೂ ಅವರ ‘ಉದ್ದೇಶ’ಗಳಲ್ಲಿಯ ಸಂಘರ್ಷವನ್ನೇ ತೋರಿಸುತ್ತವೆ. ಸಂಗಯ್ಯ ಶಿವರಾತ್ರಿಯ ಇರುಳಿನಲ್ಲಿ ಕಾಮಾಕ್ಷಿಯ ಮನೆಯಲ್ಲಿಯೇ ಲಿಂಗಪೂಜೆಗೆ ಕುಳಿತುಕೊಳ್ಳುವುದು ಪ್ರಾರಂಭದಲ್ಲಿ ಸೋಜಿಗವಾಗಿ ಕಂಡರೂ ಸಾವಂತ್ರಿಯ ಮತ್ತು ಕಾಮಾಕ್ಷಿಯ ಮಾತುಗಳ ಮೂಲಕ ವೇದ್ಯವಾಗುವ ಅವರ ‘ಶರಣತ್ವ’ದಿಂದಾಗಿಯೇ ಸಂಗಯ್ಯ ಆ ಸ್ಥಳವನ್ನು ಪೂಜೆಗಾಗಿ ಆಯ್ದುಕೊಂಡಿರುವುದು ಸ್ಪಷ್ಟವಾಗುತ್ತದೆ. ಸಾವಂತ್ರಿಯು ಕಾಯಕಧರ್ಮವನ್ನು ಅನುಸರಿಸಿದರೆ, ಕಾಮಾಕ್ಷಿಯು ತನ್ನ ಒಂದು ದಿನದ ದೇಹಸುಖಕ್ಕೆ ಸಂಗಯ್ಯನು ತಂದ ರತ್ನದ ಹಾರವನ್ನು ಸ್ವೀಕರಿಸಿದರೆ ಹೆಚ್ಚು ಬೆಲೆ ತೆಗೆದುಕೊಂಡಂತಾಗುತ್ತದೆಂದು ಅದನ್ನು ನಿರಾಕರಿಸುತ್ತಾಳೆ. ಸಾವಂತ್ರಿಯು ಬಹುಮೂಲ್ಯ ಉಳ್ಳ ಆ ಸರವನ್ನು ಒಂದು ಸಾಧಾರಣ ಮಾಡದಲ್ಲಿ ಎಸೆಯುತ್ತಾಳೆ. ಈ ಮೊದಲು ಕೂಡ ಕಾಶವ್ವನ ಮನೆಯಲ್ಲಿ ಆ ಸರವು ಹೆಗ್ಗಣಸತ್ತ ವಾಸನೆಯನ್ನು ಹರಡಿ ನಿರಾಕರಿಸಲ್ಪಟ್ಟಿದೆ. ಅಂದರೆ ಯಾವುದರ ಆಧಾರದ ಮೇಲೆ ಬಿಜ್ಜಳನ ಐಶ್ವರ್ಯದ ಬೆಲೆ ಕಟ್ಟಲಾಗುತ್ತದೊ ಅದು ಬಸವ ಧರ್ಮದಿಂದಾಗಿ ಸಾಮಾನ್ಯರಿಂದ ಹಿಡಿದು ಒಬ್ಬ ಬೆಲೆವೆಣ್ಣಿನವರೆಗೆ ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ. ಎಲ್ಲಿ ಐಶ್ವರ್ಯದ ವ್ಯಾಖ್ಯೆಯೇ ಬದಲಾಗಿದೆಯೋ ಅಲ್ಲಿ ಸಂಗಯ್ಯ ತನ್ನ ಆವಾಸ ಸ್ಥಾನವನ್ನು ತೆರೆಯುತ್ತಾನೆ. ಆಗ ಕಾಮಾಕ್ಷಿಯಂಥ ಸುಂದರಿ ಕೂಡ ಅವನ ಸೇವೆಗೆ ನಿಂತು ಸೌಂದರ್ಯದ ವ್ಯಾಖ್ಯೆಯನ್ನೂ ಬದಲಿಸುತ್ತಾಳೆ. ಈ ಮೊದಲು ಬಸವಣ್ಣನನ್ನು ಕುರಿತಾಗಿ ಬಂದ ನಾಟಕಗಳಲ್ಲಿ ಷಡ್ಯಂತ್ರ ಮತ್ತು ಫಿತೂರಿಗಳೇ ಕೇಂದ್ರ ಸ್ಥಾನಕ್ಕೆ ಬರುತ್ತವೆ. ಅಲ್ಲದೆ ಕೆಳವರ್ಗದವರನ್ನು ಏನು ಮಾಡಿದರೂ ಬದಲಿಸಲಾಗುವುದಿಲ್ಲ ಎಂಬ ಧ್ವನಿಯೂ ಅಂಥ ಕೆಲ ನಾಟಕಗಳಲ್ಲಿದೆ. ಇನ್ನು ಕೆಲವು ನಾಟಕಗಳು ಹರಳಯ್ಯ ಮತ್ತು ಮಧುವರಸರ ಬೀಗತನದ ಪರಿಣಾಮವಾಗಿ ಬಸವಣ್ಣನ ಜೀವನವನ್ನು ಅದು ಹೇಗೆ ಆಹುತಿ ತೆಗೆದುಕೊಂಡಿತು ಎಂಬುದನ್ನು ಬಿಂಬಿಸಲು ಶ್ರಮಿಸುತ್ತವೆ. ಆದರೆ ಕಂಬಾರರ ಈ ನಾಟಕದಲ್ಲಿ ಬೀಗತನ ಹಿನ್ನೆಲೆಯಲ್ಲಿದೆ ಮತ್ತು ಜನಸಾಮಾನ್ಯರಿಗೆ ಅವರದೇ ಆದ ಧರ್ಮವೊಂದು ಸಿಕ್ಕರೆ, ಅವರೂ ಕೂಡ ಆಮೂಲಾಗ್ರವಾಗಿ ಬದಲಾಗುತ್ತಾರೆಂಬ ಆಶಾವಾದವಿದೆ. ಸಾಮಾನ್ಯ ಜನರ ವರ್ತನೆಯು ನಾಟಕದುದ್ದಕ್ಕೂ ಬಸವಧರ್ಮದ ಪ್ರಭಾವದಲ್ಲಿ ಬದಲಾದದ್ದು ಸ್ಪಷ್ಟವಾಗಿ ಕಾಣುತ್ತ ಹೋಗುತ್ತದೆ. ಈ ದೃಷ್ಟಿಯಿಂದ ದಾಮೋದರನ ಪಾತ್ರವು ಈ ನಾಟಕದಲ್ಲಿ ಬಹಳ ಮಹತ್ವವಾದದ್ದು. ಅವನು ಬ್ರಾಹ್ಮಣ ಮತ್ತು ಆತನ ತಂದೆ ಹರಿಹರ ಅರಮನೆಯಲ್ಲಿದ್ದವನು. ತಂದೆಯ ಆಜ್ಞೆಯ ಮೇರೆಗೆ ಶರಣರ ವೇಷ ಧರಿಸಿ ಆತನು ರತ್ನಹಾರವನ್ನು ಕದ್ದಿದ್ದಾನೆ. ರಾಜಭಟರು ಅವನನ್ನು ಬೆನ್ನಟ್ಟಿದ್ದರಿಂದ ಅವನು ಕೆಳವರ್ಗದವರ ಮನೆಯನ್ನು ನುಗ್ಗಿ ಅಲ್ಲಿ ಬಚ್ಚಿಟ್ಟುಕೊಂಡು, ಕಾಮಾಕ್ಷಿಯನ್ನು ನೋಡಬಯಸುವ ಸಂಗಯ್ಯನಿಗೆ ಆ ಸರವನ್ನು ಕೊಟ್ಟು ಅವನು ಸೂಳೆ ಸಾವಂತ್ರಿಯ ಮನೆಯನ್ನು ಪ್ರವೇಶಿಸುವಂತೆ ಮಾಡುತ್ತಾನೆ. ಇಲ್ಲಿಯವರೆಗೆ ಅವನಲ್ಲಿ ಕೂಡ ಕುತಂತ್ರದ ಒಂದು ಅಂಶ ಇರಬಹುದಾದ ಸಾಧ್ಯತೆ ಇದೆ. ಆದರೆ ಮುಂದೆ ನಿಜ ಹೇಳಬೇಕಾದ ಸಮಯ ಬಂದಾಗ ಅವನು ಕೂಡ ಸಾವಂತ್ರಿಯ ಮನೆಯಲ್ಲಿ ತನ್ನ ತಂದೆಯ ವಿರುದ್ಧ ಸಾಕ್ಷಿ ನುಡಿಯುತ್ತಾನೆ. ಮೇಲ್ವರ್ಗಕ್ಕೆ ಸೇರಿದ ಇವನನ್ನು ಕೂಡ ಆ ಬಸವ ಧರ್ಮ ತಟ್ಟದೇ ಹೋಗಿಲ್ಲ. ಅವನಿನ್ನೂ ಶರಣನಾಗಿಲ್ಲ. ಆದರೆ ಅವನೂ ಶರಣನಾಗುವ ಪ್ರಕ್ರಿಯೆಯಲ್ಲಿದ್ದಾನೆ. ನಂತರ ಕೇರಿಯ ಜನರಿಗೆ ‘ಮಹಾಮನೆ’ಯ ಬಗ್ಗೆ ಕುತೂಹಲ ಮತ್ತು ಗೌರವವಿದೆ, ಮೇಲ್ವರ್ಗದ ಎರಡನೇಯ ತಲೆಮಾರಿನ ದಾಮೋದರ ತನ್ನ ತಂದೆಯ ವಿರುದ್ಧವೇ ಸಾಕ್ಷಿ ನುಡಿಯುವಂತೆ ಬವಸಧರ್ಮ ಪ್ರೇರೆಪಿಸಿದೆ ಮತ್ತು ಸೂಳೆ ಸಾವಂತ್ರಿಯ ನಿಜವನ್ನು ತೆರೆದು ಬಿಜ್ಜಳನ ಮುಖಕ್ಕೆ ಹಿಡಿಯುವಷ್ಟು ಪ್ರಬಲಳಾಗಿ ನಿಂತಿದ್ದಾಳೆ. ಇಂಥ ಸಂದರ್ಭದಲ್ಲಿ ಬಿಜ್ಜಳನು ತನ್ನ ಐಡೆಂಟಿಟಿಗಾಗಿ ಪರಿತಪಿಸಬೇಕಾದ ಸನ್ನಿವೇಶವೊಂದು ನಿರ್ಮಾಣವಾಗಿದೆ.

ಹುಚ್ಚಿ ಅಥವಾ ಕಲ್ಯಾಣದ ನಗರದೇವತೆಯು ಸಂಗಯ್ಯನಿಗೆ ಹೇಳುವ ಈ ಮಾತುಗಳು ಬಿಜ್ಜಳನು ಸಿಲುಕಿ ಹಾಕಿಕೊಂಡಿರುವ ಬಲೆಯನ್ನು ಚಿತ್ರಿಸುತ್ತವೆ:

ಅರಮನೆಗೆ ಕೊಂಡೆಯರು ಬೇಕು. ಕೊಂಡೆಯರು
ಚಾಡಿ ಹೇಳಿದರು.
ಚಾಡಿಯ ಸಮರ್ಥನೆಗೆ ಸುಳ್ಳು ಹೇಳಿದರು
ಸುಳ್ಳನ್ನು ನಿಜ ಮಾಡಲು ಮೋಸ ಮಾಡಿದರು.
ಪರಿಣಾಮವೆಂದರೆ ಶರಣರು ಕಣ್ಣು
ಕಳೆದುಕೊಳ್ಳಬೇಕಾಯಿತು.
ಮೊನ್ನೆ ಅವರನ್ನು ಶೂಲಕ್ಕೇರಿಸುವಾಗ
ಅಡ್ಡನಿಂತ ನನ್ನನ್ನ
ಬಿಜ್ಜಳ ಅವಮಾನಿಸಿದ.
ಕಲ್ಯಾಣದ ಬದುಕು ಕಗ್ಗಂಟಾಗುತ್ತಿದ್ದಂತೆ
ಬಸವಣ್ಣ ನಿನ್ನನ್ನ ತುಂಬ ಜ್ಞಾಪಿಸಿಕೊಂಡ
ನೀನು ಬರಲೇ ಇಲ್ಲ.

ಸಂಗಯ್ಯ ಕೂಡ ಸತತವಾಗಿ ಬಸವಣ್ಣನೊಡನಿಲ್ಲ. ಅವನು ಕಾಮಾಕ್ಷಿಯ ಬಳಿ ಲಿಂಗಪೂಜೆಗೆ ಬರುವುದು, ದಾಮೋದರ ಕದ್ದ ಸರವನ್ನು ಜೊತೆಯಲ್ಲಿ ತರುವುದು, ಅಲ್ಲಿಯೇ ಬಸವ ಮತ್ತು ಬಿಜ್ಜಳ ಸಂಧಿಸುವುದು, ಸಂಗಯ್ಯ ಕೆಲವರಿಗೆ ಕಾಣದೇ ಇರುವುದು, ಇವುಗಳೆಲ್ಲ ಗಮನಿಸಿದರೆ ಸಂಗಯ್ಯನಿಗೆ ಭವಿಷ್ಯದ ಅರಿವಿದೆ ಮತ್ತು ಅವನು ಕಾರಣಿಕ ನುಡಿಯುವ ಸಮಯವೊಂದನ್ನುಳಿದು ಬೇರೆ ಕಡೆ ಎಲ್ಲಿಯೂ ತನ್ನ ‘ಅಭಿಪ್ರಾಯ’ವನ್ನು ಮಂಡಿಸುವುದಿಲ್ಲವೆಂಬುದು ಮಹತ್ವದ್ದಾಗಿದೆ. ಬಸವಣ್ಣ ಕಲ್ಯಾಣವನ್ನು ಪ್ರವೇಶಿಸುವಾಗ ಅವನೊಡನಿದ್ದ ಸಂಗಯ್ಯನು ಬಸವಣ್ಣ ರಾಜ್ಯದ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಮೇಲೆ ಇಲ್ಲವಾಗಿ ಮತ್ತೆ ಆತನ ಆತಂಕದ ಘಳಿಗೆಯಲ್ಲಿ ಕಾಣಿಸಿಕೊಂಡಿರುವುದು ದೈವ ಮತ್ತು ಭಕ್ತನ ಮಧ್ಯದ ಸೂಕ್ಷ್ಮಕೊಂಡಿಯನ್ನು ನಾಟಕ ಸೂಕ್ಷ್ಮವಾಗಿ ತೋರಿಸುತ್ತದೆ.

ಸಾವಂತ್ರಿಯ ಮನೆಯಲ್ಲಿ ಸಂಧಿಸುವ ಬಸವಣ್ಣ ಮತ್ತು ಬಿಜ್ಜಳರು ಸಂಗಯ್ಯನ ಲಿಂಗ ಪೂಜೆಗೆ ಸಾಕ್ಷಿಯಾಗಿರುವುದರ ಜೊತೆಗೇ ಸಾವಂತ್ರಿಯನ್ನೂ ಒಳಗು ಮಾಡಿಕೊಂಡು ತಮ್ಮ ತಮ್ಮ ನಿಲುವುಗಳನ್ನು ತಮಗೇ ಸ್ಪಷ್ಟಪಡಿಸಿಕೊಳ್ಳಲು ತೊಡಗುತ್ತಾರೆ. ಬಿಜ್ಜಳನ ಈ ಮಾತುಗಳು ಅವನ ಆಗಿನ ಮನಃಸ್ಥಿತಿಯನ್ನು ಬಿಂಬಿಸುತ್ತವೆ:

ಈ ಜನಕ್ಕೆ ಅದೇನು ಮಾಟ ಮಾಡಿದ್ದೀ ಬಸವ?
ಕಲ್ಯಾಣದ ಒಬ್ಬರಲ್ಲೂ ಸ್ವಾಮಿ ಭಕ್ತಿ ಇಲ್ಲ
ಇದ್ದದ್ದೆಲ್ಲಾ ಬಸವ ಭಕ್ತೀನೇ! ಬಸವ ಭಕ್ತಿ,
ಸ್ವಾಮಿ ಭಕ್ತಿ, ಎರಡರಲ್ಲಿ ಯಾವುದು ಹೆಚ್ಚು ಅಂತ
ಒರೆಗೆ ಹಚ್ಚಲೇಬೇಕಲ್ಲ!
……………………………………………………….
ಒಂದು ಕಡೆ ಲಿಂಗಪೂಜೆಯಲ್ಲಿ
ನಿರತರಾದ ಮುಗ್ಧ ಸಂಗಯ್ಯ ದೇವರು!
ಇನ್ನೊಂದೆಡೆಗೆ ಮಹಾತ್ಮ ಬಸವಣ್ಣನವರು!
ಮಧ್ಯೆ ಬಡಪಾಯಿ ಮಹಾರಾಜ ಬಿಜ್ಜಳ!

ಇನ್ನು ಸಾವಂತ್ರಿಯು ಬಿಜ್ಜಳನು ಕ್ರಮಿತರ ಚಾಡಿ ಕೇಳುವುದನ್ನು ‘ಕತೆಮಾಡಿ’ ಹೇಳಿ ಕೊನೆಗೆ ‘ಕ್ರಮಿತ ಮಂತ್ರಿಯಾದ. ಮಂತ್ರಿ ಪೇದೆಯಾದನಂತೆ ಪ್ರಭು!’ ಎಂದು ಹೇಳಿದಾಗ ಬಿಜ್ಜಳನು ಅದನ್ನು ತುಂಟತನವೆಂದು ಕರೆಯುತ್ತಾನೆ. ಸಾವಂತ್ರಿ ಅದನ್ನು ‘ಜಾನಪದ ಪ್ರತಿಭೆ’ ಎಂದು ಸಮರ್ಥಿಸಿಕೊಳ್ಳುತ್ತಾಳೆ. ಬಸವಣ್ಣನ ಮಾತುಗಳಲ್ಲಿ ಪ್ರತಿರೋಧವೇ ಇಲ್ಲದಿದ್ದರೂ ಬಿಜ್ಜಳ ಅದರ ಭ್ರಮೆಗೊಳಗಾಗಿದ್ದಾನೆಂಬುದು ಸ್ಪಷ್ಟವಾಗಿದೆ:

ಬಸವಣ್ಣ ಹೇಳುತ್ತಾನೆ:

ಧರ್ಮಯುದ್ಧವಾದರೆ ತತ್ವಗಳ ಘರ್ಷಣೆ ಇರಬೇಕು
ಇಲ್ಲಿ ಹಾಗಿಲ್ಲ. ತಾವಾಡುವುದು ನಾಟಕ ಎಂದು
ಚಾಡಿಕೋರರಿಗೂ ಗೊತ್ತಿದೆ.

ಬಿಜ್ಜಳ ಮತ್ತು ಬಸವಣ್ಣನವರ ಮಧ್ಯೆ ವರ್ಣಸಂಕರದ ಪ್ರಶ್ನೆ ಬಂದಾಗ ನಡೆಯುವ ಈ ಸಂಭಾಷಣೆಯೂ ನಾಟಕದ ಒಟ್ಟು ಅರ್ಥದ ಮೇಲೆ ಬೆಳಕು ಚೆಲ್ಲುತ್ತದೆ:

ಬಿಜ್ಜಳ : ಹೊಸಗಾಳಿಯ ಹೆಸರಿನಲ್ಲಿ ನೀನು ವರ್ಣಸಂಕರ,
ವರ್ಣಾಶ್ರಮ ಧರ್ಮವನ್ನ ಪ್ರಶ್ನಿಸುವಂಥ ಮದುವೆ
ಮಾಡಬಹುದೆ?

ಬಸವ :  ಅದು ವರ್ಣಸಂಕರದ ಮದುವೆಯಲ್ಲ ಪ್ರಭು,
ಅನುಭವ ಮಂಟಪದ ಸಿದ್ಧಾಂತ. ಒಂದು ಕಾಲಕ್ಕೆ
ಮಧುವರಸರು ಬ್ರಾಹ್ಮಣರಾದುದು ನಿಜ. ಹರಳಯ್ಯನವರು
ಶೂದ್ರರಾಗಿದ್ದುದೂ ನಿಜ. ಆದರೆ ಅವರು ಲಿಂಗದೀಕ್ಷೆ
ತಗೊಂಡು ಶಿವಧರ್ಮದವರಾಗಿದ್ದಾರೆ. ಶರಣರಾದ
ಮೇಲೆ ಹರಳಯ್ಯ ಅಂತ್ಯಜನಲ್ಲ, ಮಧುವರಸ ವಿಪ್ರನಲ್ಲ.
ಶರಣರಿಗೆ ಜಾತಿ ಭೇದವಿಲ್ಲ. ಆದ್ದರಿಂದ ಅದು
ಸ್ವಜಾತಿಯ ಸ್ವಧರ್ಮದ ವಿವಾಹ. ಜಾತೀಯತೆಯನ್ನ
ನಿರ್ನಾಮ ಮಾಡುವ ವೀರಸಾಹಸ. ಈವರೆಗಿನ ನಮ್ಮ ಸಿದ್ದಾಂತ
ಬರೀ ವಚನವಾಗಿತ್ತು. ಈಗ ಕೃತಿಯಾಯಿತು.

ಇದು ಬಸವಣ್ಣ ನಿರ್ಮಿತ ಶಿವಧರ್ಮದ ಘೋಷಣಾ ಪತ್ರವಿದ್ದಂತಿದೆ. ಇದನ್ನು ಒಪ್ಪಿದರೆ ಬಿಜ್ಜಳನಿಗಾಗುವ ಹಾನಿ ಏನು ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಅವನು ಸಿಂಹಾಸನದ ಸಹಜ ಉತ್ತರಾಧಿಕಾರಿಯಾಗಿ ಪಟ್ಟಕ್ಕೆ ಬಂದಿದ್ದರೆ ಅವನು ಬಸವಣ್ಣನ ಮಾತನ್ನು ಒಪ್ಪಬಹುದಾಗಿತ್ತೇನೊ. ಆದರೆ ನಮ್ಮ ಇಂದಿನ ಎಷ್ಟೋ ರಾಜಕಾರಣಿಗಳಂತೆ ಅವನು ತುಳಿದು ಬಂದ ದಾರಿಯೇ ಅನ್ಯಾಯದಿಂದ ಕೂಡಿದೆ ಮತ್ತು ರಕ್ತಸಿಕ್ತವಾಗಿದೆ. ಇಂದಿನ ರಾಜಕಾರಣಿ ಗಾಂಧೀತತ್ವವನ್ನು ಸ್ವೀಕರಿಸಲಾರದ ಸ್ಥಿತಿಯನ್ನು ತಲುಪಿದಂತೆ ಬಿಜ್ಜಳನೂ ಬಸವತತ್ವವನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ. ಎಲ್ಲ ಸರ್ವಾಧಿಕಾರಿಗಳಂತೆ ಅವನಿಗೂ ಕೂಡ ‘ತತ್ವನಿಷ್ಠೆ’ ಎಂಬುದು ವೈರಿಯ ರೂಪದಲ್ಲೇ ಕಾಣಿಸುತ್ತದೆ. ಅದಕ್ಕಾಗಿ ಬಿಜ್ಜಳನು ಬಸವಣ್ಣನಿಗೆ “ನಿಮ್ಮ ಸಿದ್ಧಾಂತವನ್ನು ಜೀರ್ಣಿಸಿಕೊಂಬ ಶಕ್ತಿ ಸಮಾಜಕ್ಕಿಲ್ಲ” ಎಂದು ಹೇಳುತ್ತಾನೆ. ಇದೂ ಕೂಡ ರಾಜಕಾರಣದ ಒಂದು ಭಾಗ ಮತ್ತು ಸರ್ವಾಧಿಕಾರಿಯ ಮನೋಧರ್ಮ. ಸಮಾಜಕ್ಕೇನು ಬೇಕು ಎಂಬುದು ಸಮಾಜದಿಂದಲೇ ಎದ್ದು ಬರಬೇಕೆಂಬ ತತ್ವಕ್ಕಿಂತ ಹೆಚ್ಚಾಗಿ ತಾನು ಯಾವುದನ್ನು ‘ಸರಿ’ ಎಂದು ನಿರ್ಣಯಿಸಿತ್ತಾನೊ ಅದನ್ನು ಸಮಾಜ ಒಪ್ಪಬೇಕು ಎಂಬುದೇ ಅವನ ಧೋರಣೆಯಾಗಿದೆ. ಬಿಜ್ಜಳನ ಈ ಮಾತುಗಳು ಅವನ ಈ ಅಭಿಮತವನ್ನು ತೋರಿಸುತ್ತವೆ:

ಎಲ್ಲರಿಗೂ ಅವರವರಿಗೆ ಎಂಥ ಧರ್ಮದ ಅಗತ್ಯವಿದೆಯೋ
ಅದನ್ನು ಅಲ್ಲಲ್ಲಿ ಅವರವರಿಗೆ ಕಲ್ಪಿಸಿಕೊಡುವ ಶಕ್ತಿ
ವ್ಯವಸ್ಥೆಗಿದೆ. ವ್ಯವಸ್ಥೆಯಲ್ಲಿರುವ ದೇವರು ಎಲ್ಲರ
ಯೋಗಕ್ಷೇಮ ನೋಡಿಕೊಳ್ಳಬಲ್ಲವನಾಗಿದ್ದಾನೆ. ಇದು ಅನಿವಾರ್ಯ.

ಅಂದರೆ ಎಲ್ಲರಿಗೂ ಸಮಾನವಾಗಿರುವ ಧರ್ಮವೊಂದರ ಸಾಧ್ಯತೆಯನ್ನೇ ಅವನು ಅಲ್ಲಗಳೆಯುತ್ತಾನೆ. ಜಾತಿ ರಾಜಕೀಯದಿಂದ ತುಂಬಿರುವ ಸಮಾಜದಲ್ಲಿ ಎಲ್ಲ ಜಾತಿಗಳೂ ನಾಶವಾಗಿ ಒಂದೇ ಧರ್ಮಸ್ಥಾಪಿತವಾದರೆ ಜಾತಿಯನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಅಪಾಯವೆಂಬ ಬಿಜ್ಜಳನ ಮಾತಿನ ಇಂಗಿತ ಅಂದಿಗೆ ಹೇಗೆ ಸತ್ಯವಾಗಿತ್ತೋ ಇಂದಿಗೂ ಅಷ್ಟೇ ಸತ್ಯವಾಗಿದೆ. ಬಸವಣ್ಣ ಇದಕ್ಕೆ ಬದಲಾಗಿ ಬೇರೊಂದು ದಾರಿಯಲ್ಲಿ ಸಾಗಿ ಹೀಗೆ ಹೇಳುತ್ತಾನೆ:

….ದೇವರ ಜೊತೆಯಲ್ಲಿ ದೇವಭಾಷೆಯಲ್ಲೇ ಮಾತನಾಡಬೇಕು.
ಮಹಾಮನೆಯಲ್ಲಾದರೆ ದೇವರು ಭಕ್ತರ ಭಾಷೆಯಲ್ಲೇ
ಮಾತನಾಡುತ್ತಾನೆ. ಈಗ ದೇವರು ಮತ್ತು ಭಿಕಾರಿಗಳು
ಪರಸ್ಪರ ಅವರವರೇ ಮಾತನಾಡಿಕೊಳ್ಳುತ್ತಾರೆ. ಆ ಮೂಲಕ
ಅವರಿಗೂ ಧರ್ಮ ಅಂತ ಒಂದು ಸಿಕ್ಕಿದೆ. ಆತ್ಮವಿಶ್ವಾಸ
ಸಿಕ್ಕಿದೆ……………….

ಜನರಿಗೆ ಆತ್ಮವಿಶ್ವಾಸ ಸಿಗುವುದು ಸರ್ವಾಧಿಕಾರಿಗೆ ಯಾವಾಗಲೂ ಅಪಾಯ! ನಗರ ದೇವತೆ ಹುಚ್ಚಿಯ ಒಂದು ಮಾತು ಮಾತ್ರ ನಾಟಕಕಾರರೇ ಆಗಿನ ಇಡೀ ಇತಿಹಾಸದ ಮೇಲೆ ಬರೆದ ಒಂದು ಭರತವಾಕ್ಯದಂತಿದೆ. ಬಸವಣ್ಣ ಹೊಸ ಕ್ರಾಂತಿಯನ್ನು ಕುರಿತು ಅವಳು ಹೀಗೆ ಹೇಳುತ್ತಾಳೆ:

ಬಸವಾ ಬಸವಣ್ಣಾ, ನಿನ್ನ ಕನಸು ಇರುತ್ತದೆ
ನನ್ನಪ್ಪಾ – ನನಸಾಗುವವರೆಗೆ.
ಕೊಂಚ ಅವಸರವಾಯ್ತು. ಅತಿ ಉತ್ಸಾಹದಲ್ಲಿ
ಮಧ್ಯರಾತ್ರಿಯಲ್ಲೆ ಎದ್ದು ಕೂತೆ ನೀನು!
ಎದ್ದವನೇ ಮುಖಕ್ಕೆ ತಣ್ಣೀರೆರಚಿಕೊಂಡು
ಬನ್ನಿರೋ ಬನ್ನಿರಿ ಹೊಸಬೆಳಕಿನ ಉದಯಕ್ಕೆ!
ಅಂತ ಜನಗಳ ಕರೆದೆ.
ನಿಜ ಹೇಳಬೇಕೆಂದರೆ ಆಗಿನ್ನೂ ಬೆಳಗಿನ ತಾರೆ
ಮೂಡಿರಲೇ ಇಲ್ಲ!

ಕಾಲಮಾಗದೇ ಬಂದ ಕ್ರಾಂತಿಯ ಫಲಗಳೇನು ಎಂಬ ಚಿಂತನೆಯೂ ನಾಟಕಕಾರನನ್ನೂ ಕಾಡಿದೆ. ಅಲ್ಲದೆ ತನ್ನ ಕಾಲಕ್ಕಿಂತ ಮುಂದಿದ್ದವನೊಬ್ಬ ಅವತರಿಸಿದಾಗ ಉಂಟಾಗುವ ಅಲ್ಲೋಲ ಕಲ್ಲೋಲ ಬಗೆಗೆ ಕೂಡ ನಾಟಕಕಾರರು ತತ್ವಜ್ಞಾನಿಯ ಸ್ಥಳದಲ್ಲಿ ನಿಂತು ಚಿಂತಿಸಿದ್ದಾರೆ. ಸಂಗಯ್ಯ ಭರತವಾಕ್ಯ ನುಡಿಯುವಾಗ ಬಿಜ್ಜಳನೂ ಎದ್ದು ನಿಲ್ಲುತ್ತಾನೆಂಬುದನ್ನು ಗಮನಿಸಬೇಕು. ಸಂಗಯ್ಯ ನುಡಿಯುವಾಗ ಬಿಜ್ಜಳನೂ ನಾಟಕದ ಒಂದು ಪಾತ್ರವೆ ಸರಿ. “ಅವಧಿಯಳಿಯಿತ್ತು ವ್ಯವಧಾನ ಉಳಿಯಿತ್ತೋ ಬಸವಣ್ಣಾ” ಇದು ಭರತವಾಕ್ಯದ ಒಂದು ಮಾತು. ಹೌದು. ಕ್ರಾಂತಿಯ ಅವಧಿ ಮುಗಿದಿದೆ. ಬಸವಣ್ಣನಿಗೀಗ ವ್ಯವಧಾನವಿದೆ. ಆದರೆ ಉಳಿವಿಯಲ್ಲಿ ಶರಣರು ಎಲ್ಲವನ್ನೂ ‘ಮನಮುಟ್ಟಿ’ ಮಾಡಿದ್ದರೂ ಅದು ಕೊನೆ ಮುಟ್ಟಿದ್ದರೆ ಹೇಗೆ ಎಂದು ಹಲುಬುತ್ತಿದ್ದಾರೆ. ಸಂಗಯ್ಯ ಮತ್ತು ಬಸವಣ್ಣ ಕ್ರಾಂತಿಯ ಪರಿಣಾಮವನ್ನು ಕೂಡಲಸಂಗಮದಲ್ಲಿ ಎದುರಿಸಬೇಕಾಗಿದೆ. ನಗರದೇವತೆ ಕಲ್ಯಾಣಿಯು ಬಸವನಿಲ್ಲದ ಕಲ್ಯಾಣವನ್ನು ಕನ್ನಡಿಯಲ್ಲಿ ಮಾತ್ರ ಕಂಡು ಕೇವಲ ಇತಿಹಾಸದಲ್ಲಿ ಗೋಗರೆಯಬೇಕಾಗಿದೆ. ಸಂಗಯ್ಯನ ಭರತವಾಕ್ಯದ ಈ ಮಾತುಗಳು ಅತ್ಯಂತ ಮಾರ್ಮಿಕವಾಗಿವೆ. ಇವು ನಾಟಕವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಲು ಅನುವು ಮಾಡಿಕೊಡುತ್ತವೆ. ದಾಮೋದರ ಮತ್ತು ಬಿಜ್ಜಳನ ಮಧ್ಯೆ ನಡೆಯುವ ಮಾತುಗಳೂ ಬಹಳ ಮಹತ್ವದ್ದಾಗಿವೆ. ಶರಣರ ಕಣ್ಣಲ್ಲಿ ತನ್ನನ್ನು ರಾಕ್ಷಸನನ್ನಾಗಿ ಮಾಡಿ ತನ್ನಿಂದ ಎಲ್ಲವನ್ನೂ ಬಸವಣ್ಣ ಕಸಿದುಕೊಂಡ ಎಂದು ಬಿಜ್ಜಳ ಆರೋಪಿಸುತ್ತಾನೆ. ದಾಮೋದರ ಇದಕ್ಕೆ ಕೊಡುವ ಉತ್ತರ ಮಹತ್ವದ್ದಾಗಿದೆ. ‘ಹಾಗೆಂದು ನಂಬುವುದು ನಿಮಗೆ ಇಷ್ಟವಾದುದರಿಂದ ಹಾಗೆ ಹೇಳುತ್ತಿದ್ದೀರಿ’ ಎಂದು ದಾಮೋದರ ಹೇಳುತ್ತಾನೆ. ಬಿಜ್ಜಳನ ಇರಿತದಿಂದ ಸಾಯುವ ಮೊದಲು ದಾಮೋದರನು ಕೊನೆಯ ಸತ್ಯವನ್ನೇ ಹೇಳುತ್ತಾನೆ:

ಹಿಂದೆ ಪ್ರಜೆಗಳ ಮಧ್ಯೆ, ಬಸವಣ್ಣನ ಪಕ್ಕದಲ್ಲಿ ನಿಂತಾಗಿನ
ಬಿಜ್ಜಳ ಉಜ್ವಲ ಕನಸುಗಳಿಂದ ಫಳಫಳ ಹೊಳೆವ
ತರುಣನಾಗಿದ್ದ. ಈಗ ಇಂದ್ರನ ಮಾದರಿಯ ಕಿರೀಟ,
ಜಗಮಗ ಆಭರಣ ಧರಿಸಿ ಚಾಡಿಕೋರರ ಕಣ್ಣಲ್ಲಿ
ನೋಡಿಕೊಳ್ಳುತ್ತಿದ್ದೀರಿ
………………………………………
ತರುಣ ಬಿಜ್ಜಳನ ಭೂತದಂತೆ!

ದಾಮೋದರ ತಂದೆ ಹರಿಹರ ಕಳ್ಳತನದ ಆಪಾದನೆಯಿಂದ ತಪ್ಪಿಸಿಕೊಳ್ಳಲು ತನ್ನ ಮಗನನ್ನೇ ನಿರಾಕರಿಸುತ್ತಾನೆ. ಆದರೆ ನಿಜ ನುಡಿದ ದಾಮೋದರ ಬಿಜ್ಜಳನ ಕೈಯಿಂದ ಕೊಲೆಯಾಗುತ್ತಾನೆ. ಮುಂದೆ ಹುಚ್ಚಿಯ ಪ್ರವೇಶವಾಗಿ ಬಿಜ್ಜಳನು ಅವಳೆದುರು ಮಂಡಿಯೂರಿ ಕುಳಿತು ಹೇಳುತ್ತಾನೆ:

ನಾನು ಒಂದಕ್ಕೊಂದು ಹೊಂದಾಣಿಕೆ ಇಲ್ಲದ ಎರಡು
ಅರ್ಧಗಳಿಂದ ಕೂಡಿದ್ದೇನೆ ತಾಯೀ!
ಮೊದಲನೇ ಅರ್ಧದಲ್ಲಿ ಬಸವಣ್ಣ ಮುಗ್ಧ
ಸಂಗಯ್ಯನನ್ನು ಸೃಷ್ಟಿಸಿದ. ನಾನು ಅವನ ಮುಗ್ಧ ಮುಖ
ಮತ್ತು ವಚನಗಳಿಂದ ತುಂಬಾ ಪ್ರಭಾವಿತನಾದೆ.
ಅವನೆದುರು ನಾನೊಬ್ಬ ಅಲ್ಪನೆನ್ನಿಸಿ ಪಶ್ಚಾತ್ತಾಪ
ಪಡುವಂತೆ ಮಾಡಿದ ಸಂಗಯ್ಯ. ಆದರೆ
ಯಾವ ರಾಜ ತಾನೇ ಸದಾಕಾಲ ಪಶ್ಚಾತ್ತಾಪ ಪಡಲು
ಇಷ್ಟಪಡುತ್ತಾನೆ?

ಇನ್ನೊಂದರ್ಧದಲ್ಲಿ ಕೊಂಡೆಯರು ಅವನಲ್ಲಿ ರಾಕ್ಷಸನನ್ನು ಸೃಷ್ಟಿಸಿ ಸಂಗಯ್ಯನನ್ನು ಸಂಹರಿಸಲು ಹೇಳಿದ್ದಾರೆ! ಚಾಲುಕ್ಯರಿಗೆ ದ್ರೋಹ ಮಾಡಿ ಅವನು ಮಹಾರಾಜನಾಗಿದ್ದಾನೆ. ಈಗ ಬೊಮ್ಮರಸ ಮತ್ತು ಜಗದೇವನು ಆ ದ್ರೋಹಕ್ಕೆ ಪ್ರತೀಕಾರ ಕೈಗೊಳ್ಳಲು ದ್ವಾರಪಾಲಕರ ವೇಷದಲ್ಲಿ ಬಂದಿದ್ದಾರೆ. ನಗರ ದೇವತೆಯೇ ಅವರಿಗೆ ದಾರಿ ಮಾಡಿಕೊಟ್ಟಿದ್ದಾಳೆ. ಬಿಜ್ಜಳನನ್ನು ರಕ್ಷಿಸಲು ಯಾರೂ ಇಲ್ಲ. ಅವನು ಸಾಯಲು ಸಿದ್ಧನಾಗಿದ್ದಾನೆ. ಆತನ ಕೊನೆಯ ಸ್ವಗತದಂತಿರುವ ಮಾತುಗಳು ಶೇಕ್ಸ್‌ಪಿಯರನ ಸಮಕಾಲೀನನಾಗಿದ್ದ ಮಾರ್ಲೋನ ನಾಟಕ ‘ಡಾ. ಫಾಸ್ಟಸ್’ದಲ್ಲಿಯ ಫಾಸ್ಟಸ್‌ನ ಕೊನೆಯ ದೀರ್ಘ ಸ್ವಗತವನ್ನೇ ಜ್ಞಾಪಕಕ್ಕೆ ತರುತ್ತವೆ. ಅಲ್ಲಿ ಫಾಸ್ಟಸ್‌ನು ಲೋಕದ ಐಷಾರಾಮಕ್ಕಾಗಿ ತನ್ನ ಆತ್ಮವನ್ನೇ ಸೈತಾನನಿಗೆ ಮಾರಿದ್ದಾನೆ. ತನ್ನ ಕೊನೆ ಬಂದಾಗ ಸೈತಾನನು ಕರೆಯಲು ಬಂದೊಡನೆ ಕರುಣೆಗಾಗಿ ದೇವರನ್ನು ಯಾಚಿಸುತ್ತಾನೆ. ಬಿಜ್ಜಳನ ಸ್ಥಿತಿಯೂ ಇಲ್ಲಿ ಹೆಚ್ಚು ಭಿನ್ನವಾಗಿಲ್ಲ. ಆದರೆ ಬಿಜ್ಜಳ ಕರುಣೆಯಾಗಿ ಯಾರನ್ನೂ ಮೊರೆ ಹೋಗುವುದಿಲ್ಲ. ಬಿಜ್ಜಳನ ಕೊನೆಯ ಮಾತುಗಳು ಅದ್ಭುತವಾಗಿ ಮೂಡಿಬಂದಿವೆ. ಬಸವಣ್ಣ ಬಿಟ್ಟು ಹೋದದ್ದನ್ನೂ ಕುರಿತು ಬಿಜ್ಜಳ ಹೀಗೆ ಹೇಳುತ್ತಾನೆ:

ಶಿವರಾತ್ರಿಯ ಕತ್ತಲೆ, ಎಲ್ಲಾ ಮೌನಗಳ, ಎಲ್ಲಾ
ಅಜ್ಞಾತಗಳ, ಎಲ್ಲ ಎಲ್ಲದರ ಇಲ್ಲದಿರುವಿಕೆಯ ಮೊತ್ತವಾದ
ಕತ್ತಲೆಯನ್ನು ಬಿಟ್ಟು ಹೋದ!
………………………………

ಮುಟ್ಟಲಾಗದ ನನ್ನ ಎದೆಯ ಮೂಲೆಗಳನ್ನು
ಮುಟ್ಟಿದವ, ತಟ್ಟಿದವ ನೀನೊಬ್ಬನೇ ಬಸವಣ್ಣಾ!
ನಿನ್ನ ವಚನಗಳಿಗೆ ಆ ಶಕ್ತಿ ಇತ್ತು ನಿಜ.
ಆದರೆ ಚಾಡಿಗೆ ನಿನ್ನ ಮಾತಿಗಿಂತ ಹೆಚ್ಚಿನ ಶಕ್ತಿ,
ವ್ಯಾಪ್ತಿ, ವೇಗವಿತ್ತು ಬಸವಣ್ಣಾ!

ಬಿಜ್ಜಳನ ಕೊನೆಯ ಮಾತುಗಳಲ್ಲಿ ಅವನ ಅವಸಾನದ ಧ್ವನಿಯನ್ನು ಸೆರೆಹಿಡಿಯಲು ಉಪಯೋಗಿಸಿದ ಕಾವ್ಯಭಾಷೆಯು ಇತ್ತೀಚಿನ ಯಾವ ಕನ್ನಡ ನಾಟಕದಲ್ಲಿಯೂ ನನಗೆ ಕಂಡು ಬಂದಿಲ್ಲ. ಮರಣಕ್ಕೆ ಮೊದಲು ಬಿಜ್ಜಳನು ಆಡುವ ಈ ಮಾತುಗಳು ಅವನ ದುರಂತವನ್ನೇ ಸಾರುತ್ತವೆ:

ವ್ಯವಸ್ಥೆಗೆ ಹೃದಯವಿಲ್ಲ, ಸಂಗಯ್ಯನಿಗೆ ಕರುಣೆಯಿಲ್ಲ ಬಸವಣ್ಣಾ,
ಎರಡು ತಿರಸ್ಕಾರಗಳ ಮಧ್ಯೆ ನಿಂತಿದ್ದೇನೆ.

ಸಂಗಯ್ಯನಿಗೆ ಕರುಣೆಯಿಲ್ಲ ಎನ್ನುತ್ತಾನೆಯೆ ಹೊರತು ಅವನು ನನ್ನ ಮೇಲೆ ಕರುಣೆ ತೋರಿಸಲಿ ಎನ್ನುವುದಿಲ್ಲ! ದೇವರೆ, ಕರುಣೆ ತೋರಿಸು ಎನ್ನುವುದಕ್ಕೂ, ದೇವರಿಗೆ ಕರುಣೆ ಇಲ್ಲ ಎನ್ನುವುದಕ್ಕೂ, ಭಕ್ತ ಮತ್ತು ದುರಹಂಕಾರಿಯ ಮಧ್ಯದ ವ್ಯತ್ಯಾಸದಂತೆಯೇ ಕಾಣುತ್ತದೆ. ಅವನು ಭಗವಂತನವನಾಗಲಾರ, ಅವನ ಅಭಿಮಾನ ಅವನಿಗೆ ಅಡ್ಡವಾಗಿ ನಿಂತಿದೆ. “ಹೇಳಿ ಕೇಳಿ ಭವಿ ನಾನು ಬಸವಾ,| ಕ್ಷಮಿಸು ನನ್ನ”  ಎನ್ನುವ ಅವನ ಕೊನೆಯ ಮಾತುಗಳಲ್ಲಿ ಕೂಡ ತಾನು ಮೀರಲಾಗದ್ದರ ಬಗೆಗೆ ಅವನಿಗರಿವಿದೆ ಎಂಬ ಇಂಗಿತವೇ ಇದೆ.

ಈ ನಾಟಕವನ್ನು ಓದಿದ ತಕ್ಷಣ ಲಂಕೇಶರ “ಸಂಕ್ರಾಂತಿ” ಮತ್ತು ಕಾರ್ನಾಡರ “ತಲೆದಂಡ” ನಾಟಕಗಳು ನಮ್ಮ ನೆನಪಿಗೆ ಬಾರದೆ ಹೋಗುವುದಿಲ್ಲ. ಕಂಬಾರರ ಇಲ್ಲಿಯ ಸ್ವಚ್ಛಂದ ಲಯಗಾರಿಕೆಯ ಕಾವ್ಯ ಆ ಎರಡೂ ನಾಟಕಗಳಲ್ಲಿ ಕಂಡುಬರುವುದಿಲ್ಲ. ಕಂಬಾರರಲ್ಲಿಯ ಕವಿ ಮತ್ತು ನಾಟಕಕಾರ ಇವರಿಬ್ಬರೂ ಇಲ್ಲಿ ಏಕತ್ರಗೊಂಡಿರುವುದರಿಂದ ಈ ನಾಟಕವು ಇನ್ನುಳಿದ ಎರಡು ನಾಟಕಗಳಿಗಿಂತ ಒಂದು ಹೆಚ್ಚಿನ ಸ್ತರವನ್ನು ಸಾಧಿಸುತ್ತದೆ. ಬಿಜ್ಜಳ ಮತ್ತು ಬಸವಣ್ಣನನ್ನು ನೋಡುವ ದೃಷ್ಟಿಕೋನವೂ ಇಲ್ಲಿ ಭಿನ್ನವಾಗಿದೆ. ಸಂಗಯ್ಯನನ್ನು ಮತ್ತು ಹುಚ್ಚಿಯನ್ನು ನಾಟಕದಲ್ಲಿ ತರುವ ಮೂಲಕ ಕಂಬಾರರು ನಾಟಕಕ್ಕೆ ದೈವೀಸ್ಪರ್ಶವನ್ನು ತರುತ್ತಾರೆ. ಅದರಲ್ಲಿ ಜಾನಪದ ಅಂಶವೂ ಇದೆ. ಆಧ್ಯಾತ್ಮ ಮತ್ತು ದೈವೀಸ್ಪರ್ಶದ ಅಭಾವವಿದ್ದಲ್ಲಿ ಬಸವಣ್ಣನ ವ್ಯಕ್ತಿತ್ವ, ಕಾರ್ಯ ಮತ್ತು ಬಿಜ್ಜಳನ ದುರಂತಗಳು ಒಟ್ಟಾರೆಯಾಗಿ ಒಡಮೂಡುವುದು ಸಾಧ್ಯವಿಲ್ಲ. “ಸಂಕ್ರಾಂತಿ”ಯ ವೈಚಾರಿಕತೆ ಮತ್ತು “ತಲೆದಂಡ”ದ ‘ಸ್ಥಾಪಿತ ಚಿಂತನೆ’ ಇನ್ನಿಲ್ಲ. ಹೀಗಾಗಿಯೇ ನಾಟಕದಲ್ಲಿ ಚಲನಶೀಲತೆ ಇದೆ.

ನವ್ಯ ಸಾಹಿತ್ಯವು ಕಾವ್ಯದಲ್ಲಿ ಆಡುಮಾತನ್ನು ಅದರ ಲಯಗಾರಿಕೆ ಸಹಿತ ಸೆರೆಹಿಡಿಯಿತು. ಆ ಸ್ವಚ್ಛಂದ ಲಯಗಾರಿಕೆಯ ಒಂದು ತುರೀಯಾವಸ್ಥೆ ಈ ನಾಟಕದಲ್ಲಿ ಕಂಡುಬರುತ್ತದೆ. ದಿನ ಬಳಕೆಯ ಮಾತು ಆಡುಮಾತಲ್ಲ. ಸಾಹಿತ್ಯದಲ್ಲಿ ಸಂದರ್ಭಕ್ಕೆ ತಕ್ಕ ಲಯಗಾರಿಕೆಯನ್ನು ಸಾಧಿಸುವ ಭಾಷೆ ಆಡು ಮಾತಾಗುತ್ತದೆ. ಇದರ ಸ್ಪಷ್ಟ ಅರಿವು ಈ ನಾಟಕದಲ್ಲಿ ಕಂಬಾರರಿಗಿದೆ. ಇಂಥ ಮಾತನ್ನು ಮತ್ತೆ ನಾಟಕದಲ್ಲಿ ಮರಳಿ ತಂದಿರುವುದು ಈ ನಾಟಕದ ಬಹುದೊಡ್ಡ ಸಾಧನೆ. ಸಂಗೀತ ಮತ್ತು ಆಂಗಿಕ ಅಭಿನಯಗಳಿಂದಾಗಿ ‘ಮಾತು’ ನಾಟಕದಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ  ಈ ನಾಟಕ ಮೂಡಿ ಬಂದಿರುವುದು ಕನ್ನಡ ನಾಟಕದ ಸುದೈವ. ನಮ್ಮ ಸೃಜನಶೀಲ ನಿರ್ದೇಶಕರಲ್ಲಿ ಕೆಲವರಾದರೂ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆಂದು ನಾನು ಭಾವಿಸಿದ್ದೇನೆ. ನಾಟಕವು ವರ್ತಮಾನದ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಿರುವುದು ಈ ಸೃಜನಶೀಲ ಮಾತಿನಿಂದಾಗಿಯೆ. ಕಂಬಾರರು ಇಂಥ ಇನ್ನೂ ಅನೇಕ ನಾಟಕಗಳನ್ನು ರಚಿಸಲಿ ಎಂದು ನಾನು ಆಶಿಸುತ್ತೇನೆ.

ಮಾಧವ ಕುಲಕರ್ಣಿ
ಮೈಸೂರು