ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಲ್ಲೂಕಿನ ಕೋಟ ಎಂಬ ಸಣ್ಣ ಹಳ್ಳಿಯಲ್ಲಿ ೧೯೦೨ ರ ಅಕ್ಟೋಬರ್ ೧೦ ರಂದು ಕಾರಂತರು ಜನಿಸಿದರು. ಶೇಷ ಕಾರಂತ ಹಾಗೂ ಲಕ್ಷ್ಮೀ ಕಾರಂತರದು ತುಂಬು ಸಂಸಾರ. ಒಂಬತ್ತು ಮಕ್ಕಳ ಈ ಕುಟುಂಬದಲ್ಲಿ ಶಿವರಾಮ ಕಾರಂತರು ನಾಲ್ಕನೆಯ ಮಗ. ಕಾರಂತರ ಬರವಣಿಗೆ ೧೯೨೪ ರಲ್ಲಿ ಆರಂಭಗೊಂಡು ಮುಂದೆ ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿ ಬೆಳೆಯಿತು. ಕವನ ಸಂಕಲನ, ಸಣ್ಣಕಥೆ, ಕಾದಂಬರಿ, ನಾಟಕ, ಹರಟೆ, ವ್ಯಂಗ್ಯಪ್ರಬಂಧ,

ಮಕ್ಕಳವಿಶ್ವಕೋಶ, ವಿಜ್ಞಾನವಿಶ್ವಕೋಶ, ವಿಚಾರಸಾಹಿತ್ಯ, ಶಿಶುಸಾಹಿತ್ಯ, ಪ್ರವಾಸಸಾಹಿತ್ಯ, ಜೀವನವೃತ್ತ, ಆತ್ಮಕಥನ, ಚಿತ್ರಕಲೆ, ವಾಸ್ತುಶಿಲ್ಪ, ನೃತ್ಯ, ಯಕ್ಷಗಾನ, ಜಾನಪದ, ಚಲನಚಿತ್ರ-ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಇವರದು ಹಿರಿಯ ಸಾಧನೆ.

ಕಾರಂತರು ಏಕಕಾಲಕ್ಕೆ ಸಾಹಿತಿಮಾತ್ರವಾಗಿರದೆ, ಚಿತ್ರಕಾರ, ನಟ, ನರ್ತಕ, ಸಂಗೀತಗಾರರೂ ಆಗಿದ್ದರು. ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ನಂತರದಲ್ಲಿ, ಅಂದರೆ ೧೯೨೫ ರಲ್ಲಿ ವಸಂತ ಎಂಬ ಮಾಸಪತ್ರಿಕೆಯನ್ನು ಹೊರಡಿಸಿ ಅದರ ಸಂಪಾದಕರಾಗಿ ಐದು ವರ್ಷಗಳಕಾಲ ಕಾರಂತರು ದುಡಿದರು. ಕಾರಂತರ ಮೊತ್ತಮೊದಲ ಕಾದಂಬರಿ ವಿಚಿತ್ರಕೂಟ, ವು ಧಾರಾವಾಹಿಯಾಗಿ ಇದೇ ಪತ್ರಿಕೆಯಲ್ಲಿ ಬೆಳಕುಕಂಡಿತು. ವಿಚಾರ ವಾಣಿ, ಎಂಬ ವಾರಪತ್ರಿಕೆಯನ್ನು ೧೯೩೦ ರಲ್ಲಿ ಆರಂಬಿಸಿದರು. ಆದರೆ ಇದು ಹೆಚ್ಚು ದಿನ ನಡೆಯಲಿಲ್ಲ. ಕಾರಂತರು ಕಾದಂಬರಿಕಾರರೆಂದೇ ಹೆಚ್ಚು ಖ್ಯಾತರಾಗಿದ್ದಾರೆ. ಅವರು ಐವತ್ತಕ್ಕೊ ಹೆಚ್ಚು ಕಾದಂಬರಿಗಳನ್ನು ಬರೆದಿದ್ದು, ಚೋಮನ ದುಡಿ, ಬೆಟ್ಟದಜೀವ, ಮರಳಿಮಣ್ಣಿಗೆ, ಸರಸಮ್ಮನ ಸಮಾದಿ, ಅಳಿದಮೇಲೆ, ಮೂಕಜ್ಜಿಯ ಕನಸುಗಳು, ಮೈಮನಗಳಸುಳಿಯಲ್ಲಿ, ಮೊದಲಾದ ಕಾದಂಬರಿಗಳುಮಹತ್ವದ ಕೃತಿಗಳು. ಚೋಮನದುಡಿಯಲ್ಲಿ ಲೇಖಕರು ಚೋಮನನ್ನು ಅಸ್ಪೃಶ್ಯವರ್ಗದ ಪ್ರತಿನಿದಿಯಾಗಿ, ಹೊಲೆಯನಾದ ಆತನ ಕಥೆಯನ್ನು ದುರಂತ ಕಥೆಯನ್ನಾಗಿ ಚಿತ್ರಿಸಿದ್ದಾರೆ. ಬೆಟ್ಟದ ಜೀವ, ದಲ್ಲಿ ಮನುಷ್ಯ ತನ್ನ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ ಮತ್ತು ಜನಜೀವನದ ಜೀವಂತ ಚಿತ್ರಣವಿದೆ. ಸರಸಮ್ಮನ ಸಮಾದಿ, ದಾಂಪತ್ಯ ಜೀವನದ ಹಲವಾರು ಮುಖಗಳನ್ನು ವಿಶ್ಲೇಷಿಸುತ್ತದೆ. ಅತ್ಯಂತ ಹೆಸರು ಮಾಡಿರುವ ಮರಳಿಮಣ್ಣಿಗೆ, ಕಾದಂಬರಿಯಲ್ಲಿ ಮೂರು ತಲೆಮಾರುಗಳ ಕಥೆ ಅಡಕವಾಗಿದೆ. ಇಲ್ಲಿ ಗಂಡು ಪಾತ್ರ ಪಡೆದ ನಟನಂತಿದ್ದರೆ ಹೆಣ್ಣು ದುಡಿಯುವ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಮೂಕಜ್ಜಿಯ ಕನಸುಗಳಲ್ಲಿ ಮೂಕಜ್ಜಿ ಮಾನವೀಯತೆಯ ಸ್ವರೂಪವನ್ನು ಅಡಗಿಸಿಕೊಂಡಿರುವಳಾಗಿ ತೋರುತ್ತಾಳೆ. ಹೀಗೆ ಅವರ ಕಾದಂಬರಿಗಳಲ್ಲಿ ಬದುಕಿನ ಅನುಭವ ಸಮೃದ್ದವಾಗಿದೆ. ಬದುಕಿನಲ್ಲಿ ಪ್ರೀತಿ, ಜನರಲ್ಲಿ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ, ಪ್ರಾಮಾಣಿಕ ಶ್ರಮ, ಆತ್ಮಗೌರವ- ಇವು ಮೌಲ್ಯಗಳು ಎಂದು ಸ್ಪಷ್ಟವಾಗುತ್ತದೆ.

ಶಿವರಾಮಕಾರಂತರು ಹೇಗಾದರೇನು , ನಾಟಕವೆಂಬ ನಾಟಕ, ನಾರದ ಗರ್ವಭಂಗ, ಹಣೆಬರಹ, ಕಟ್ಟೆಪುರಾಣ, ಎಂಬ ನಾಟಕಗಳನ್ನೂ ಕಿಸಾಗೋತಮಿ, ಸೋಮೊಯ ಸೌಭಾಗ್ಯ, ಲವಕುಶ, ಬುದ್ದೋದಯ ಎಂಬ ಗೀತನಾಟಕಗಳನ್ನೂ ರಚಿಸಿದ್ದಾರೆ. ಕಾರಂತರಿಗೆ ಪ್ರಿಯವಾದ ಮತ್ತೊಂದು ಕ್ಷೇತ್ರ ಯಕ್ಷಗಾನ. ಸಂಗೀತ ಮತ್ತು ನೃತ್ಯ ಎರಡೂ ಕಲೆಗಳಲ್ಲಿ ಪಳಗಿದ ಇವರು ಯಕ್ಷಗಾನ, ಸಂಗೀತ, ನಾಟ್ಯ, ವೇಷ-ಭೂಷಣಗಳು, ನಟನೆ- ಇವುಗಳ ಬಗ್ಗೆ ಆಳವಾದ ಅಭ್ಯಾಸಮಾಡಿ ಯಕ್ಷಗಾನ ಬಯಲಾಟ, ಎಂಬ ಶ್ರೇಷ್ಟ ಸಂಶೋಧನಾತ್ಮಕ ಕೃತಿಯನ್ನು ೧೯೫೯ ರಲ್ಲಿ ಬರೆದು ಯಕ್ಷಗಾನವನ್ನು ನೃತ್ಯರೂಪದ ಮಟ್ಟಕ್ಕೆ ಏರಿಸಿದರು.

ಕಾರಂತರು ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಭೇಟಿಕೊಟ್ಟು ತಮ್ಮ ಪ್ರವಾಸದ ಅನುಭವಗಳನ್ನು ಅಭೂವಿಂದ ಬರ್ಮಾಕ್ಕೆ, ಆಪೂರ್ವ ಪಶ್ಚಿಮ, ಮುಂತಾದ ಕೃತಿಗಳಲ್ಲಿ ಹಂಚಿಕೊಂಡಿದ್ದಾರೆ. ಹುಚ್ಚುಮನಸ್ಸಿನ ಹತ್ತು ಮುಖಗಳು, ಸ್ಮೃತಿಪಟಲದಿಂದ, ಇವು ಅವರ ಚಿಂತನೆಯ ಕೋಶವನ್ನು ಒಳಗೊಂಡ ವಿಶಿಷ್ಟ ರೀತಿಯ ಆತ್ಮವೃತ್ತಗಳು ಕಲೆಗಳನ್ನು ಕುರಿತು ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಉತ್ಕೃಷ್ಟ ಕೃತಿಗಳನ್ನು ಬರೆದಿದ್ದಾರೆ.

ಕರ್ನಾಟಕದ ರಾಜ್ಯ ಸಾಹಿತ್ಯ ಅಕಾಡಮಿ, ಲಲಿತಕಲಾಅಕಾಡಮಿ. ಕೇಂದ್ರ ಸಾಹಿತ್ಯ ಅಕಾಡಮಿ, ಪಂಪಪ್ರಶಸ್ತಿ,ಗೌರವಡಾಕ್ಟರೇಟ್‌ಗಳು, ಭಾರತದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠಪ್ರಶಸ್ತಿ, ದಾದಾಭಾಯಿ ನವರೋಜಿ ಪ್ರಶಸ್ತಿ, ಮೊದಲಾದ ಗೌರವಗಳು ಕಾರಂತರಿಗೆ ಸಂದಿವೆ.

ಅನುಭವಗಳನ್ನೇ ಕೃತಿಗಳಲ್ಲಿ ಚಿತ್ರಿಸಲು ಹೊರಟ ಕಾರಂತರ ಪ್ರತಿಯೊಂದು ಸಾಹಿತ್ಯ ಕೃತಿಯೂ ಉನ್ನತ ಸ್ಥಾನವನ್ನು ಪಡೆಯುವುದರ ಜೊತೆಗೆ ಅನ್ಯ ಭಾಷೆಗಳಿಗೂ ಅನುವಾದಗೊಂಡಿವೆ. ಹೀಗೆ ಕಾರಂತರು ಕನ್ನಡ ಸಾಹಿತ್ಯಕ್ಕೆ ಮತ್ತು ನಾಡಿಗೆ ಪ್ರಮುಖರಾದವರು.