ಡಾ|| ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ-ಕಾದಂಬರಿಕಾರ, ಯಕ್ಷಗಾನ ಪ್ರಯೋಗಶೀಲ,ಪರಿಸರ ತಜ್ಞ.

ಜನನ: ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು.ಕಾರಂತರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಯವರೆಗೆ ನಡೆದು ೧೯೨೦ರಲ್ಲಿ ಕೊನೆ ಆಯಿತು.ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಏಳು ದಶಕಗಳಲ್ಲಿ ಅಭಿವ್ಯಕ್ತಗೊಂಡ ಅವರ ಬದುಕು ಸಾಹಿತ್ಯ, ಸಾಮಾಜಿಕ ಜಾಗೃತಿ, ರಾಜಕೀಯ ಹೋರಾಟ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಲವು ದಿಕ್ಕುಗಳಲ್ಲಿ ಪಸರಿಸಿದೆ.

ಮೊದಲ ಹಂತ: ೧೯೨೫ ರಲ್ಲಿ ‘ವಸಂತ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಕಾರಂತರು ಅದರ ಸಂಪಾದಕರಾಗಿ ಸುಮಾರು ಐದು ವರ್ಷಗಳ ಕಾಲ ದುಡಿದರು. ಕಾರಂತರ ಮೊದಲ ಕಾದಂಬರಿ “ವಿಚಿತ್ರ ಕೂಟ” ವು ಇದೇ ಪತ್ರಿಕೆಯ ಮೂಲಕ ಬೆಳಕು ಕಂಡಿತು. ನಂತರ ಕಾರಣಾಂತರಗಳಿಂದ ೧೯೩೦ ರಲ್ಲಿ ಈ ಪತ್ರಿಕೆಯು ನಿಂತು ಹೋಯಿತು. ೧೯೫೦ ರಲ್ಲಿ ಅವರು “ವಿಚಾರಮಣಿ” ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಅದು ಬಹು ಕಾಲ ಉಳಿಯಲಿಲ್ಲ. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ “ಕಾರಂತಜ್ಜ” ಎಂದೇ ಖ್ಯಾತರಾದರು. ವಿಜ್ನಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ “ಅದ್ಭುತ ಜಗತ್ತು”, “ಬಾಲ ಪ್ರಪಂಚ” ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನಕೋಶ.

ಯಕ್ಷಗಾನ ಕಲೆ ಕಾರಂತರ ಮತ್ತೊಂದು ಆಸಕ್ತಿಯ ಕ್ಷೇತ್ರ. ಅವರ “ಯಕ್ಷಗಾನ ಬಯಲಾಟ” ಕೃತಿಗೆ ೧೯೫೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಕಾರಂತರ ಆಸಕ್ತಿ ಚಲನಚಿತ್ರ ಕ್ಷೇತ್ರದ ಕಡೆಯೂ ತಿರುಗಿತು. “ಭೂತರಾಜ್ಯ”,” ಡೊಮಿಂಗೋ” ಎಂಬ ಮೂಕಿ ಚಿತ್ರಗಳನ್ನು ಅವರು ನಿರ್ದೇಶಿಸಿದರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅಪಾರ ಆನುಭವವನ್ನೂ ಅವರು ಪಡೆದಿದ್ದಾರೆ.

ಬೆಳವಣಿಗೆ:ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ ಸಾಹಿತ್ಯ, ಹರಟೆ, ಮಕ್ಕಳ ವಿಶ್ವಕೋಶ, ವಿಜ್ನಾನ ವಿಶ್ವಕೋಶ, ಜೀವನ ಚರಿತ್ರೆ, ಯಕ್ಷಗಾನ, ಜಾನಪದ, ಚಲನಚಿತ್ರ, ಅನುವಾದ, ಅರ್ಥಕೋಶ, ಪ್ರಾಣಿ ಪಕ್ಷಿ ಪರಿಸರ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳಲ್ಲಿ ಕೃತಿರಚನೆ ಮಾಡಿದ್ದಾರೆ.”ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ” ಕಾರಂತರ ಪ್ರಮುಖ ಕಾದಂಬರಿಗಳು. ಅವರು ಬರೆದ “ಮೂಕಜ್ಜಿಯ ಕನಸುಗಳು” ಕಾದಂಬರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕಾರಂತರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

“ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಡಾ|| ಶಿವರಾಮ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ,ಕಾದಂಬರಿಕಾರ.ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಮನುಷ್ಯ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೋ ಸರಿ ಸುಮಾರು ಆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಹಜವಾಗಿಯೇ ತಮ್ಮ ಸಾಹಿತ್ಯ ಸಾಧನೆಗಾಗಿ – ವಿಶೇಷವಾಗಿ ಕಾದಂಬರಿಕಾರರಾಗಿ- ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಬಹುಕಾಲ ನೆನಪಿನಲ್ಲಿ ಉಳಿಯುವರು.
ಹೀಗೆ ನಡೆದಾಡುವ ವಿಶ್ವಕೋಶವೇ ಆಗಿದ್ದ , ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಕಾರಂತರ ಪ್ರಮುಖ ಸಾಹಿತ್ಯಕೃತಿಗಳು :

ಸಣ್ಣಕಥೆಗಳು: ತೆರೆಯ ಮರೆಯಲ್ಲಿ, ಹಸಿವು ಮತ್ತು ಹಾವು.
ಕಥನಕವನಗಳು: ಅದ್ಭುತ ಜಗತ್ತು, ಸಿರಿಗನ್ನಡ ಶಬ್ದಕೋಶ, ಕಿರಿಯರ ವಿಶ್ವಕೋಶ, ವಿಜ್ಞಾನ ಪ್ರಪಂಚ ೪ ಸಂಪುಟಗಳು, ಬಾಲಪ್ರಪಂಚ, ಯಕ್ಷಗಾನ ಬಯಲಾಟ.
ಕಾದಂಬರಿಗಳು: “ವಿಚಿತ್ರ ಕೂಟ” “ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ”
ಕವನ ಸಂಕಲನಗಳು: ರಾಷ್ಟ್ರಗೀತ ಸುಧಾಕರ ಇವರ ಮೊದಲ ಸಂಕಲನ.ಸೀಳ್ಗವನಗಳು
ನಾಟಕಗಳು: ಕಿಸಾಗೋತಾಮೀ, ಸೋಮಿಯ ಸೌಭಾಗ್ಯ, ಸಾವಿತ್ರಿ-ಸತ್ಯವಾನ-ಗೀತ ನಾಟಕ.ಗರ್ಭಗುಡಿ, ನಿಮ್ಮಓಟು ಯಾರಿಗೆ, ಕಟ್ಟೆಪುರಾಣ, ಗೆದ್ದವರ ಸಂಖ್ಯೆ.
ಪ್ರವಾಸ ಕಥನ: ಅಬೂವಿನಿಂದ ಬರ್ಮಾಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪಯಣ, ದಕ್ಷಿಣ ಹಿಂದೂಸ್ಥಾನ
ಆತ್ಮಚರಿತ್ರೆ: ಹುಚ್ಚುಮನಸ್ಸಿನ ಹತ್ತು ಮುಖಗಳು.
ಪ್ರಬಂಧ: ಮೈಗಳ್ಳತನ ದಿನಚರಿಯಿಂದ, ಮೈಲಿಗಲ್ಲಿನೊಡನೆ ಮಾತುಕತೆ.

ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ಸ್ವೀಡನ್ ನ “ಲಾ ಅರ್ಕೈವ್ ಇಂಟರ್ ನ್ಯಾಷನಲ್” ಸಂಸ್ಠೆಯು ಕಾರಂತರು ಯಕ್ಷಗಾನಕ್ಕಾಗಿ ಮಾಡಿದ ಸೇವೆಗಾಗಿ ಕಂಚಿನ ಪದಕ ನೀಡಿ ಗೌರವ
೧೯೫೯ರಲ್ಲಿ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೫ ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ
೧೯೭೮ರಲ್ಲಿ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ
೧೯೮೯ರಲ್ಲಿ ಮೈ ಮನಗಳ ಸುಳಿಯಲ್ಲಿ ಕಾದಂಬರಿಗೆ ಪಂಪ ಪ್ರಶಸ್ತಿ
ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ.

೧೯೭೫ ರಲ್ಲಿ ಭಾರತ ಸರ್ಕಾರವು ಕಾರಂತರಿಗೆ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ಕಾರಂತರು ವಿರೋಧಿಸಿ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರತಿಭಟಿಸಿದರು.