ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳಕನ್ನಡ ನಾಡಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಹಿರಿಯರು. ಶ್ರೇಷ್ಠ ಅಧ್ಯಾಪಕರು. ಕನ್ನಡದ ನೆಲದಲ್ಲಿಯೇ ಕನ್ನಡಕ್ಕೆ ಮನ್ನಣೆ ದೊರೆಯದಿದ್ದಾಗ ಕನ್ನಡದ ಮಕ್ಕಳಿಗಾಗಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದರು. ಪತ್ರಿಕೋದ್ಯಮದಲ್ಲಿ ಉತ್ತಮ ಕೆಲಸ ಮಾಡಿದರು. ವಿದ್ವತ್ತು, ಸೌಜನ್ಯ, ಸೇವಾನಿಷ್ಠೆಗಳು ಬೆರೆತ ವ್ಯಕ್ತಿತ್ವ ಅವರದು.

 ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ

 

ಅರವತ್ತಮೂರು ವರುಷಗಳ ಹಿಂದಿನ ಮಾತು. ಉತ್ತರ ಕರ್ನಾಟಕದಲ್ಲಿ ಆಗ ಒಂದೂ ಕಾಲೇಜಿರಲಿಲ್ಲ. ಇಲ್ಲಿಯ ವಿದ್ಯಾರ್ಥಿಗಳು ಬಿ.ಎ., ಎಂ.ಎ, ಕಲಿಯುವುದು ತೀರ ಕಠಿಣವಾಗಿತ್ತು. ಎಲ್ಲಿಯೋ ಒಬ್ಬಿಬ್ಬರು ಪುಣೆಗೋ ಮುಂಬಯಿಗೋ ಹೋಗಿ ಓದುತ್ತಿದ್ದರು. ಬಡವರಿಗೆ ಅದು ನಿಲುಕದ ಹಣ್ಣಾಗಿತ್ತು. ವೀರಶೈವ ಸಮಾಜದಲ್ಲಿ ಅವರಿಗೆ ಯಾರೂ ಎಂ.ಎ. ಪದವಿಯನ್ನು ಪಡೆದಿರಲಿಲ್ಲ. ತಮ್ಮ ಹುಡಗರನ್ನು ಹುರಿದುಂಬಿಸಲು ಆ ಸಮಾಜದವರು ಮೊಟ್ಟ ಮೊದಲು ಎಂ.ಎ. ಪಾಸು ಮಾಡುವವರ ಸಲುವಾಗಿ ಎಂದು ಬಹುಮಾನ ಇಟ್ಟಿದ್ದರು. ಆ ಬಹುಮಾನದ ಮೊತ್ತ ೧೨೦೦ ರೂಪಾಯಿ. ಆ ಬಹುಮಾನಕ್ಕೆ ವಿಕ್ಟೋರಿಯಾ ಜ್ಯೂಬಲಿ ಪಾರಿತೋಷಕ ಎಂಬ ಹೆಸರಿತ್ತು. ಬಹುಮಾನದ ಟ್ರಸ್ಟಿಗಳು ಬೆಳಗಾವಿಯ ಕಲೆಕ್ಟರರು.

೧೯೧೯ ರಲ್ಲಿ ಬಸವನಾಳರು ಮತ್ತು ಸಾಖರೆಯವರು ಒಟ್ಟಿಗೆ ಎಂ.ಎ. ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದರು. ಒಮ್ಮೆಲೆ ಇಬ್ಬರು ಆ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ಯಾರಿಗೆ ಪಾರಿತೋಷಕ ಕೊಡಬೇಕೆಂಬ ಪ್ರಶ್ನೆ ಹುಟ್ಟಿತು. ಕಲೆಕ್ಟರರು ಯೋಚಿಸಿಯೇ ಯೋಚಿಸಿದರು. ಬಹಳ ವಿಚಾರ ಮಾಡಿದ ಮೇಲೆ ಹೆಚ್ಚು ಅಂಕಗಳನ್ನು ಪಡೆದವರಿಗೆ ಬಹುಮಾನ ಕೊಡುವುದೆಂದು ನಿರ್ಣಯಿಸಿದರು. ಬಸವನಾಳರು ಸಾಖರೆಯವರಿಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದರು.

ಕಲೆಕ್ಟರರು ತೆಗೆದುಕೊಂಡ ಈ ನಿರ್ಣಯದ ಸುದ್ದಿ ಬಸವನಾಳರಿಗೆ ತಿಳಿಯಿತು. ಅದನ್ನು ಕೇಳಿ ಅವರಿಗೆ ಸಂತೋಷವಾಗಬಹುದಿತ್ತು. ಆದರೆ ಹಾಗಾಗಲಿಲ್ಲ. ದೊಡ್ಡ ಮನಸ್ಸಿನ ಬಸವನಾಳರಿಗೆ ಅದು ಅಸಮಾಧಾನ ವನ್ನುಂಟುಮಾಡಿತು. ಕೂಡಲೇ ಕಲೆಕ್ಟರರಿಗೆ ಕಾಗದ ಬರೆದು ‘ನಾವಿಬ್ಬರೂ ಎಂ.ಎ. ಪರೀಕ್ಷೆಯಲ್ಲಿ ಒಟ್ಟಿಗೆ ಪಾಸಾಗಿದ್ದೇವೆ, ಪರೀಕ್ಷೆಯಲ್ಲಿ ಪಡೆದ ಅಂಕಗಳು ಮುಖ್ಯವಲ್ಲ. ಅರ್ಹತೆ ಮುಖ್ಯ. ಆದ್ದರಿಂದ ಆ ಬಹುಮಾನವನ್ನು ಸಮಾನ ಅರ್ಹತೆಯುಳ್ಳ ನಮ್ಮಿಬ್ಬರಲ್ಲಿ ಸಮನಾಗಿ ಹಂಚಬೇಕು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಸವನಾಳರು ತಮಗೆ ಬಹುಮಾನವನ್ನು ಹಣದ ರೂಪದಲ್ಲಿ ಕೊಡದೆ ಪುಸ್ತಕ ರೂಪದಲ್ಲಿ ಕೊಡಬೇಕೆಂದೂ ತಿಳಿಸಿದ್ದರು. ಈ ಎರಡು ಅಂಶಗಳಿಂದ ಬಸವನಾಳರ ಹಿರಿಯಗುಣ ಹಾಗೂ ವಿದ್ಯಾಪ್ರೇಮ ಎರಡೂ ವ್ಯಕ್ತವಾಗುತ್ತವೆ.

ಬಸವನಾಳರ ಔದರ್ಯ, ತ್ಯಾಗ, ಶಿಕ್ಷಣಪ್ರೇಮ, ಸಾಹಿತ್ಯಾರಾಧನೆ, ಸಂಘಟನಾ ಶಕ್ತಿ, ಮೊದಲಾದ ಗುಣಗಳು ಅವರ ವಿದ್ಯಾರ್ಥಿ ಜೀವನದಲ್ಲಿಯೇ ಪ್ರಕಟವಾಗಿದ್ದವು. ಅವು ಅವರು ಬೆಳೆಬೆಳೆದಂತೆ ವೃದ್ಧಿಯನ್ನು ಹೊಂದಿದವು. ಅವರನ್ನು ಆಧುನಿಕ ಕರ್ನಾಟಕದ ಮಹಾಪುರುಷರಲ್ಲಿ ಒಬ್ಬರನ್ನಾಗಿ ಮಾಡಿದವು.

ಬಾಲ್ಯ, ವಿದ್ಯಾಭ್ಯಾಸ

ಶಿ. ಶಿ. ಬಸವನಾಳ ಎಂದು ಪ್ರಸಿದ್ಧರಾಗಿರುವ ಬಸವನಾಳರ ಪೂರ್ಣ ಹೆಸರು ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ ಎಂದು. ಬಸವನಾಳ ಎಂಬುದು ಅವರ ಮನೆತನದ ಹೆಸರು. ಬಸವನಾಳರ ತಂದೆ ಶಿವಯೋಗಪ್ಪನವರು ಸ್ಟೇಷನ್ ಮಾಸ್ತರರಾಗಿದ್ದರು. ಬಸವ ಭಕ್ತಿ ಅವರ ಮನೆತನಕ್ಕೆ ಪರಂಪರಾಗತವಾಗಿ ಬಂದಿತ್ತು.

ಶಿವಯೋಗಪ್ಪನವರು ವೃತ್ತಿಯಲ್ಲಿ ಸ್ಟೇಷನ್ ಮಾಸ್ತರರಾಗಿದ್ದರೂ ಆಚರಣೆಯಲ್ಲಿ ಶಿವಶರಣರಾಗಿದ್ದರು. ಅವರ ಧರ್ಮಪತ್ನಿ ಸಿದ್ದಮ್ಮನವರೂ ಭಕ್ತಿಭಾವ ಸಂಪನ್ನರು. ಈ ದಂಪತಿಗಳಿಗೆ ಹಿರಿಯ ಮಗನಾಗಿ ೧೮೯೩ರ ನವೆಂಬರ್ ೭ ರಂದು ಶಿವಲಿಂಗಪ್ಪ ಜನಿಸಿದರು. ಅನಂತರ ಅವರ ತಮ್ಮ ವಿರೂಪಾಕ್ಷಪ್ಪ ಜನ್ಮ ತಳೆದರು. ಇವರಿಬ್ಬರೇ ಶಿವಯೋಗಪ್ಪ ನವರಿಗೆ ಗಂಡು ಮಕ್ಕಳು, ಉಳಿದ ನಾಲ್ವರು ಹೆಣ್ಣು ಮಕ್ಕಳು.

ಶಿವಯೋಗಪ್ಪನವರು ಸ್ಟೇಶನ್ ಮಾಸ್ತರರಾಗಿ ಬಳ್ಳಾರಿ ಜಿಲ್ಲೆಯ ದರೋಜಿ, ಕೊಟ್ಟೂರು, ತೋರಣಗಲ್ ಮುಂತಾದ ಕಡೆಗಳಲ್ಲಿ ಕೆಲಸ ಮಾಡಿದರು. ಬಳ್ಳಾರಿ ಜಿಲ್ಲೆ ಆಗ ಮದರಾಸು ಪ್ರಾಂತಕ್ಕೆ ಸೇರಿತ್ತು. ಅಲ್ಲಿಯ ಶಿಕ್ಷಣ ಭಾಷೆ ತೆಲುಗು ಆಗಿತ್ತು. ಶಿವಲಿಂಗಪ್ಪನವರ ಪ್ರಾಥಮಿಕ ಶಿಕ್ಷಣ ತೆಲುಗಿನಲ್ಲಾಯಿತು. ಮನೆಯ ಮಾತು ಕನ್ನಡವಾಗಿದ್ದರಿಂದ ಕನ್ನಡವನ್ನೂ ಓದಲು, ಬರೆಯಲು ತಂದೆಯವರಿಂದ ಕಲಿತುಕೊಂಡರು. ಶಿವಯೋಗಪ್ಪನವರು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಲಕ್ಷ್ಯ ಕೊಟ್ಟಿದ್ದರು. ಸ್ವಲ್ಪಮಟ್ಟಿಗೆ ಸಂಸ್ಕೃತವನ್ನೂ ಅವರು ತಮ್ಮ ಮಗನಿಗೆ ಹೇಳಿಕೊಟ್ಟರು.

ಚಿಕ್ಕಂದಿನಲ್ಲಿ ಬಸವನಾಳರಿಗೆ ಓದುವುದರ ಕಡೆಗೇ ಹೆಚ್ಚು ಒಲವು. ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಓದುತ್ತಿದ್ದರು. ಸ್ವಲ್ಪ ತಿಳಿವಳಿಕೆ ಬಂದಂತೆ ಇತರ ಪುಸ್ತಕಗಳನ್ನೂ ಓದತೊಡಗಿದರು. ತಂದೆಯವರ ಜೊತೆಗೆ ಸ್ಟೇಷನ್ನಿಗೆ ಹೋದಾಗ ಅಲ್ಲಿಯ ಬರಹಗಳನ್ನು ಕುತೂಹಲದಿಂದ ನೋಡುತ್ತಿದ್ದರು, ತಿಳಿದು ಕೊಳ್ಳಲು ಪ್ರಯತ್ನಿಸುತ್ತಿದ್ದರು. ಉಗಿಬಂಡಿ ಬರುವ – ಹೋಗುವ ಚಲನವಲನಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದರು. ಹೊಸ ಜನ, ಹೊಸ ಭಾಷೆಗಳನ್ನು ತಿಳಿದುಕೊಳ್ಳುವುದರಲ್ಲಿ ಅವರು ತುಂಬ ಉತ್ಸುಕರು. ಅವರಿಗೆ ಆಟ-ನೋಟಗಳ ಕಡೆಗೆ ಅಷ್ಟು ಆಸಕ್ತಿ ಇರಲಿಲ್ಲ.

ಪ್ರಾಥಮಿಕ ಶಿಕ್ಷಣ ಮುಗಿದ ಮೇಲೆ ಬಸವನಾಳರು ಬಳ್ಳಾರಿಯ ವಾರ್‌ಡ್ಲಾ ಮಿಷನ್ ಹೈಸ್ಕೂಲನ್ನು ಸೇರಿದರು. ಅನಂತರ ಗದಗಿನ ಹೈಸ್ಕೂಲಿನಲ್ಲಿ ಮತ್ತು ಧಾರವಾಡದ ಸರಕಾರಿ ಹೈಸ್ಕೂಲಿನಲ್ಲಿ ಅವರ ಶಿಕ್ಷಣ ಮುಂದುವರಿಯಿತು. ಈ ಹೊತ್ತಿಗೆ ಅವರ ಬೌದ್ಧಿಕ ಬೆಳವಣಿಗೆ ತೀವ್ರಗತಿಯಲ್ಲಿ ಸಾಗಿತ್ತು. ಅವರು ತಮ್ಮ ಬಹುಪಾಲು ವೇಳೆಯನ್ನು ಅಭ್ಯಾಸದಲ್ಲಿಯೇ ಕಳೆಯುತ್ತಿದ್ದರು. ಬುದ್ಧಿವಂತ ವಿದ್ಯಾರ್ಥಿ. ಹೀಗಾಗಿ ಎರಡು ವರುಷಗಳಲ್ಲಿ ಕಲಿಯುವುದನ್ನು ಒಂದೇ ವರ್ಷದಲ್ಲಿ ಮುಗಿಸಿದರು. ಮೆಟ್ರಿಕ್ ಕ್ಲಾಸಿಗೆ ಬೇಗನೆ ಬಂದುಬಿಟ್ಟರು. ೧೯೧೦ರಲ್ಲಿ ಅ ಪರೀಕ್ಷೆಯಲ್ಲಿ ಮೇಲ್ತರಗತಿಯಲ್ಲಿ ಉತ್ತೀರ್ಣರಾದರು.

ಡೆಕ್ಕನ್ ಕಾಲೇಜಿನಲ್ಲಿ

ಬಸವನಾಳರು ಆ ಕಾಲದಲ್ಲಿ ಬಹು ಪ್ರಸಿದ್ಧವಾಗಿದ್ದ ಪುಣೆಯ ಡೆಕ್ಕನ್ ಕಾಲೇಜನ್ನು ಸೇರಿದರು. ತೆಲುಗಿನ ಮೂಲಕ ಶಿಕ್ಷಣ ಪ್ರಾರಂಭಿಸಿ, ಕನ್ನಡದ ಕೇಂದ್ರವಾದ ಧಾರವಾಡದಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಮರಾಠಿಯ ತವರುಮನೆಯಾದ ಪುಣೆಯಲ್ಲಿ ಅವರು ಉಚ್ಛ ಶಿಕ್ಷಣವನ್ನು ಪಡೆಯಬೇಕಾಯಿತು. ಇದರಿಂದಾದ ಪ್ರಯೋಜನವೆಂದರೆ ಅವರಿಗೆ ಕನ್ನಡದ ಜೊತೆಗೆ ತೆಲುಗು, ಮರಾಠಿ ಭಾಷೆಗಳ ಪರಿಚಯವಾದುದು. ಅವು ಅವರಿಗೆ ಮುಂದೆ ಭಾಷೆ, ವ್ಯಾಕರಣಗಳನ್ನು ಅಧ್ಯಯನ ಮಾಡುವಾಗ ಸಹಾಯಕ ವಾದವು.

ಬಸವನಾಳರು ತಮ್ಮ ಎಂದಿನ ಶಿಸ್ತು, ಅಚ್ಚುಕಟ್ಟು ತನಗಳನ್ನು ತಮ್ಮ ಕಾಲೇಜು ಜೀವನದಲ್ಲಿಯೂ ಕಾಯ್ದು ಕೊಂಡು ಬಂದರು. ಅವರಿಗೀಗ ಓದುವುದೇ ಒಂದು ಹವ್ಯಾಸ. ಪುಣೆಯ ಡೆಕ್ಕನ್ ಕಾಲೇಜಿನ ಗ್ರಂಥ ಭಂಡಾರವು ಅವರಿಗೆ ಒಂದು ನಿಧಿಯಂತೆ ಕಂಡಿತು. ಅವರು ತಮ್ಮ ಅಭ್ಯಾಸಕ್ಕೆ ಸಂಬಂಧಿಸಿದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರಗಳ ಹಲವಾರು ಗ್ರಂಥಗಳನ್ನು ತಿರುವಿ ಹಾಕಿದರು. ಜೊತೆಗೆ ಗಿಬ್ಬನ್, ಬರ್ಕ್, ಕಾಲೈಲ್. ವೆಲ್ಸ್ ಮೊದಲಾದ ಖ್ಯಾತ ಇಂಗ್ಲಿಷ್ ಲೇಖಕರ ಗ್ರಂಥಗಳನ್ನು ಓದಿದರು.

ಬಿ.ಎ. ತರಗತಿಗೆ ಬಂದಾಗ ಅವರು ಕನ್ನಡಸಾಹಿತ್ಯವನ್ನು ಓದುವುದರ ಕಡೆಗೆ ಲಕ್ಷ್ಯ ಹೊರಳಿಸಿದರು. ಆಗ ಅವರಿಗೆ ಅವರ ಸ್ನೇಹಿತರಾದ ಎಚ್.ಎಫ್. ಕಟ್ಟೀಮನಿಯವರು ಕನ್ನಡ ಅಭ್ಯಾಸದಲ್ಲಿ ಜೊತೆಗೂಡಿದರು. ಕನ್ನಡ ಅಧ್ಯಯನಕ್ಕೆ ಕಾಲೇಜಿನ ಅಭ್ಯಾಸಕ್ರಮದಲ್ಲಿ ಸ್ಥಾನವಿಲ್ಲದದು ಆಗಲೇ ಅವರಿಗೆ ಖೇದವನ್ನುಂಟುಮಾಡಿತು. ಹಳಗನ್ನಡ ಕಾವ್ಯಗಳನ್ನು ಆಗ ಅವರು ತಕ್ಕ ಮಟ್ಟಿಗೆ ಓದಿದರು.

ಬಸವನಾಳರು ಅಧ್ಯಯನ ಪ್ರಿಯರಾದರೂ ಒಂಟಿಯಾಗಿ ಇದ್ದವರಲ್ಲ. ಅವರಿಗೆ ಸ್ನೇಹಿತರೊಂದಿಗೆ ಬೆರೆಯುವುದು ಅತ್ಯಂತ ಸಂತೋಷದ ಸಂಗತಿಯಾಗಿತ್ತು. ಅವರು ಕಾಲೇಜಿನ ಕ್ಲಬ್ಬಿನ ಒಬ್ಬ ಪ್ರಮುಖ ಸದಸ್ಯರಾಗಿದ್ದರು. ಟೆನಿಸ್ ಆಟದಲ್ಲಿ ಅವರಿಗೆ ಆಸಕ್ತಿಯಿತ್ತು. ಬೋಟಿಂಗ್ (ನೌಕಾ ವಿಹಾರ) ಅವರಿಗೆ ಪ್ರಿಯವಾಗಿತ್ತು. ಚೆಸ್ ಆಟದಲ್ಲಿ ಅವರು ತಮ್ಮನ್ನು ತಾವೇ ಮರೆಯುತ್ತಿದ್ದರು. ಏನಿದ್ದರೂ ಇವೆಲ್ಲ ವಿರಾಮ ವೇಳೆಯಲ್ಲಿ ಮಾತ್ರ ನಡೆಯುತ್ತಿದ್ದವು.

ಬಸವನಾಳರಲ್ಲಿದ್ದ ಇನ್ನೊಂದು ಗುಣವೆಂದರೆ ಗೆಳೆಯರ ಕಷ್ಟಕಾಲದಲ್ಲಿ ಸಹಾಯಕರಾಗಿ ನಿಲ್ಲುವುದು. ಯಾರಾದರೂ ಗೆಳೆಯರು ಕಾಯಿಲೆ ಬಿದ್ದರೆ ಬಸವನಾಳರು ತಮ್ಮ ಎಲ್ಲ ಕೆಲಸವನ್ನೂ ಬದಿಗಿಟ್ಟು ಉಪಚಾರಕ್ಕೆ ನಿಲ್ಲುತ್ತಿದ್ದರು. ಅದರಿಂದಾಗಿ ಅವರು ಎಲ್ಲ ವಿದ್ಯಾರ್ಥಿಗಳಿಗೆ ಬೇಕಾದವರಾಗಿದ್ದರು.

ಬಸವನಾಳರ ಸ್ಮರಣಶಕ್ತಿ ಅಗಾಧವಾಗಿತ್ತು. ಒಮ್ಮೆ ಓದಿದರೆ ಸಾಕು. ಅದು ಅವರ ಸ್ಮರಣೆಯಲ್ಲಿ ಉಳಿದು ಬಿಡುತ್ತಿತ್ತು. ಅವರ ಗೆಳೆಯರು ಅವರನ್ನು ಏಕಪಾಠಿ ಎಂದು ವಿನೋದ ಮಾಡುತ್ತಿದ್ದರು. ಸಮಯ ದೊರಕಿದಾಗ ಇತಿಹಾಸ, ಸಾಹಿತ್ಯ ಮುಂತಾದ ವಿಷಯಗಳನ್ನು ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದರು. ತಮ್ಮ ಸ್ವಂತ ವಿಚಾರಗಳನ್ನು ಪ್ರಕಟಪಡಿಸುತ್ತಿದ್ದರು.

ಬಸವನಾಳರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎಫ್.ಡಬ್ಲೂ. ಬೇನ್ ಪ್ರಿನ್ಸಿಪಾಲರಾಗಿದ್ದರು. ಅವರ ವಿಷಯಗಳು ಇತಿಹಾಸ ಮತ್ತು ಅರ್ಥಶಾಸ್ತ್ರ, ಬೇನ್ ಅವರ ಪಠ್ಯಕ್ರಮ ತುಂಬ ಪ್ರಭಾವಿಯಾಗಿತ್ತು. ೧೯೧೪ರಲ್ಲಿ ಬಸವನಾಳರು ಬಿ.ಎ. ಆನರ್ಸ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದರು.

ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬಸವನಾಳರು ಬರವಣಿಗೆಯನ್ನು ಪ್ರಾರಂಭಿಸಿದರು. ಅವರು ಕಾಲೇಜಿನ ತ್ರೈಮಾಸಿಕಕ್ಕೆ ಲೇಖನಗಳನ್ನು ಬರೆದರು. ಡೆಕ್ಕನ್ ಕಾಲೇಜಿನ ತ್ರೈಮಾಸಿಕವು ಒಂದು ಉನ್ನತ ಮಟ್ಟದ ಪತ್ರಿಕೆಯಾಗಿತ್ತು. ಅಭ್ಯಾಸಪೂರ್ಣವಾದ ಲೇಖನಗಳೇ ಅದರಲ್ಲಿ ಪ್ರಕಟ ವಾಗುತ್ತಿದ್ದವು. ಬಸವನಾಳರು ಅಂಥ ಲೇಖನಗಳನ್ನೇ ಬರೆದರು. ಕೆಲಕಾಲ ಆ ತ್ರೈಮಾಸಿಕ ಪತ್ರಿಕೆಯ ಕನ್ನಡ ವಿಭಾಗದ ಸಂಪಾದಕರಾಗಿಯೂ ಅವರು ಕಾರ್ಯ ಮಾಡಿದರು.

ಬಸವನಾಳರು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಯೆಂದು ಹೆಸರು ಪಡೆದು ಬಿ. ಎ. ಆನರ್ಸ್ ಪರೀಕ್ಷೆಯಲ್ಲಿ ಉತ್ತಮ ಯಶಸ್ಸನ್ನು ಸಂಪಾದಿಸಿದರು. ಆದರೆ ಈ ಸಂತೋಷದಲ್ಲಿ ಪಾಲುಗೊಳ್ಳಲು ಅವರ ತಾಯಿತಂದೆಗಳು ಬದುಕಿರಲಿಲ್ಲ.

ಇನ್ನೂ ಓದಬೇಕೆಂಬ ಹಂಬಲವಿದ್ದ ಬಸವನಾಳರಿಗೆ ಪ್ರತಿಕೂಲ ಪರಿಸ್ಥಿತಿ ಎದುರಾಯಿತು. ಆದರೂ ದೈರ್ಯದಿಂದ ಎಂ.ಏ. ಓದಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಬಡತನದಲ್ಲಿದ್ದರೂ ಅವರ ಕಕ್ಕನವರು ಇವರ ನೆರವಿಗೆ ಬಂದರು.

ಮುಂಬಯಿ ವೀರಶೈವಾಶ್ರಮದಲ್ಲಿ

ಆಗ ಮಂಬಯಿಯಲ್ಲಿ ಒಂದು ವೀರಶೈವ ಆಶ್ರಮ ಇತ್ತು. ಅದು ಬಡ ಹಾಗೂ ಬುದ್ಧಿವಂತ ವಿದ್ಯಾರ್ಥಿಗಳಿಗೆ ಆಶ್ರಯಸ್ಥಾನವಾಗಿತ್ತು. ಬಸವನಾಳರಿಗೆ ಅಲ್ಲಿ ನೆರವು ಸಿಕ್ಕಿತು. ಅಲ್ಲಿದ್ದುಕೊಂಡು ಎಂ. ಎ. ಅಭ್ಯಾಸವನ್ನು ಮುಂದುವರಿಸಿ ದರು. ಅವರ ಜೊತೆಯಲ್ಲಿ ಎಂ.ಆರ್. ಸಾಖರೆ ಮತ್ತು ಎಚ್.ಎಫ್ ಕಟ್ಟೀಮನಿಯವರೂ ಇದ್ದರು. ಅವರೆಲ್ಲರಿಗೆ ತಮ್ಮ ವೈಯುಕ್ತಿಕ ಜೀವನಕ್ಕಿಂತ ಸಮಾಜ ಜೀವನದ ಚಿಂತೆಯೇ ಹೆಚ್ಚಾಗಿತ್ತು.

ಬಸವನಾಳರು ಎಂ.ಎ. ದ ಜೊತೆಗೆ ಎಲ್.ಎಲ್.ಬಿ. ಗೂ ಸೇರಿದರು. ಆದೆರ ಅದರೆ ಕಡೆಗೆ ವಿಶೇಷ ಗಮನ ಕೊಡಲಿಲ್ಲ. ಎಂಎ. ಪರೀಕ್ಷೆಯನ್ನು ಮಾತ್ರ ೧೯೧೬ರಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿಸಿದರು. ಆ ಪರೀಕ್ಷೆಗೆ ಅವರು ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜಶಾಸ್ತ್ರಗಳನ್ನು ತೆಗೆದುಕೊಂಡಿದ್ದರು. ಅದೇ ವರ್ಷ ಎಂ.ಆರ್. ಸಾಖರೆಯವರೂ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಸಹಪಾಠಿಗಳಾದ ಈ ಸ್ನೇಹಿತರು ಕೊನೆಯವರೆಗೂ ಆತ್ಮೀಯರಾಗಿದ್ದರು.

ದೃಢಸಂಕಲ್ಪ- ನಿಸ್ವಾರ್ಥ ಸೇವೆ

ಬಸವನಾಳರು ಎಂ.ಎ. ಮುಗಿಸಿದಾಗ ಉನ್ನತವಾದ ಸರಕಾರಿ ಹುದ್ದೆಗಳು ಸುಲಭವಾಗಿ ದೊರೆಯುತ್ತಿದ್ದವು. ಆದರೂ ಬಸವನಾಳರು ವಿದ್ಯಾರ್ಥಿಯಾಗಿದ್ದಾಗಲೇ ಆಲೋಚಿಸುತ್ತಿದ್ದಂತೆ ಸಮಾಜ ಸೇವೆ ಮಾಡಲು ದೃಢಸಂಕಲ್ಪ ಮಾಡಿದರು. ಈ ಸಣಕಲ್ಪಕ್ಕೆ ಇನ್ನೂ ಒಂದು ಕಾರಣವಿತ್ತು. ಬಸವನಾಳರ ತಂದೆಯವರು ಅವರಿನ್ನೂ ಹೈಸ್ಕೂಲ್ ವಿದ್ಯಾರ್ಥಿಯಾಗಿ ದ್ದಾಗಲೇ ಈ ರೀತಿ ಉಪದೇಶ ಮಾಡಿದ್ದರು: “ನೀನು ನಿನ್ನ ಜೀವನದಲ್ಲಿ ಮೂರು ಮಾತುಗಳನ್ನು ಪಾಲಿಸಬೇಕು.

೧.ಚುಟ್ಟಾ, ಸಿಗರೇಟ್ ಮೊದಲಾದವನ್ನು ಸೇದಬಾರದು.

೨. ಪರಸ್ತ್ರೀಯರನ್ನು ಅಕ್ಕತಂಗಿಯರಂತೆ ಕಾಣಬೇಕು.

೩. ಸರಕಾರಿ ನೌಕರಿಗೆ ನಿನ್ನ ದೇಹವನ್ನು ಮಾರಿಕೊಳ್ಳ ಬಾರದು.

ಬಸವನಾಳರು ತಂದೆಯ ಉಪದೇಶವನ್ನು ಅಕ್ಷರಶಃ ಪಾಲಿಸಿ ಆದರ್ಶ ವ್ಯಕ್ತಿಯಾದರು.

ಬಸವನಾಳರಂತೆಯೇ ಅವರ ಹಲವರು ಸ್ನೇಹಿತರೂ ಯೋಚಿಸುತ್ತಿದ್ದರು. ಅರಟಾಳ ರುದ್ರಗೌಡರು ಇವರೆಲ್ಲರಿಗೆ ಮಾರ್ಗದರ್ಶಕರಾಗಿ ನಿಂತರು. ಏಳು ಜನ ಸ್ನೇಹಿತರು ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಮಾದರಿಯ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಲು ಯತ್ನಿಸತೊಡಗಿದರು. ೧೯೧೬ ಅಕ್ಟೋಬರ್ ೧೧ ರಂದು ‘ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿ’ಯನ್ನು ಸ್ಥಾಪಿಸಿದರು. ಅದು ಮುಂದೆ ೧೯೪೮ರಲ್ಲಿ ‘ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸೈಟಿ’ ಎಂದು ಮಾರ್ಪಾಟಾಯಿತು.

೧೯೧೬ರಲ್ಲಿ ಬೆಳಗಾವಿಯಲ್ಲಿ ಒಂದು ಹೈಸ್ಕೂಲನ್ನು ತೆರೆಯಲಾಯಿತು. ಬೆಳಗಾವಿಯಲ್ಲಿಯೇ ಮೊಟ್ಟಮೊದಲು ಹೈಸ್ಕೂಲ್ ತೆರೆಯಲಿಕ್ಕೆ ಮುಖ್ಯವಾದ ಕಾರಣವೆಂದರೆ ಕನ್ನಡ ಮಕ್ಕಳಿಗೆ ಕನ್ನಡ ಕಲಿಯಲು ಅವಕಾಶ ಮಾಡಿಕೊಡುವುದು. ಆಗ ಬೆಳಗಾವಿಯಲ್ಲಿ ಮರಾಠಿಯದೇ ಪ್ರಾಬಲ್ಯ. ಸುತ್ತ ಮುತ್ತ ಕನ್ನಡಿಗರಿರುವ ಬೆಳಗಾವಿಯಲ್ಲಿ, ಕನ್ನಡಿಗರೇ ಹೆಚ್ಚಾಗಿರುವ ಆ ಸ್ಥಳದಲ್ಲಿ ಕನ್ನಡಕ್ಕೆ ಕುತ್ತು ಬಂದಿತ್ತು. ಅದನ್ನು ಬದುಕಿಸುವುದು ಮತ್ತು ಬೆಳೆಸುವುದು ಕನ್ನಡಿಗರಾದ ಬಸವನಾಳ ಮೊದಲಾದ ವರಿಗೆ ಆದ್ಯ ಕರ್ತವ್ಯವಾಗಿ ಕಂಡಿತು.

ಹೈಸ್ಕೂಲಿಗೆ ‘ಗಿಲಗಂಜಿ ಅರಟಾಳ ಹೈಸ್ಕೂಲು’ ಎಂದು ಸಾರ್ಥಕವಾದ ಹೆಸರನ್ನಿಟ್ಟರು. ಗಿಲಗಂಚಿಯವರು ಮತ್ತು ಅರಟಾಳರು ಆಗ ಈ ಸ್ನೇಹಿತರಿಗೆ ನೀಡಿದ ಸ್ಫೂರ್ತಿ, ಪ್ರೇರಣೆ ಸಹಾಯ ಅಪಾರ. ಅವರಿಬ್ಬರು ನಿಜವಾದ ಸಮಾಜ ಹಿತಚಿಂತಕರು. ಕನ್ನಡಿಗರ ಕೈವಾರಿಗಳು.

ಈ ಹೈಸ್ಕೂಲಿಗೆ ಸಾಖರೆಯವರು ಮುಖ್ಯಾಧ್ಯಾಪಕ ರಾದರು. ಬಸವನಾಳರು ಇಂಗ್ಲೀಷ್, ಇತಿಹಾಸ ಮತ್ತು ಕನ್ನಡ ಕಲಿಸುವ ಅಧ್ಯಾಪಕರಾದರು. ಕಟ್ಟೀಮನೀ, ಮಮದಾಪುರ, ಹಂಚಿನಾಳ, ಪಾಟೀಲ, ಚಿಕ್ಕೋಡಿಯವರು ಸಹ ಅಧ್ಯಾಪಕ ರಾದರು. ಅವರೆಲ್ಲ ಅಧ್ಯಾಪಕರು ಅಣ್ಣತಮ್ಮಂದಿರಂತೆ ಕೆಲಸ ಮಾಡಿದರು.

ಹೈಸ್ಕೂಲು ಪ್ರಾರಂಭಿಸಿದಾಗ ಅವರೆಲ್ಲರೂ ಕೂಡಿ, ಒಟ್ಟು ಅರವತ್ತು ರೂಪಾಯಿ ಸಂಬಳ ಪಡೆಯುತ್ತಿದ್ದರು. ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಒಟ್ಟಿಗೇ ಊಟ ಮಾಡುತ್ತಿದ್ದರು. ಅಷ್ಟು ಸ್ವಲ್ಪ ಸಂಬಳದಲ್ಲಿ ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದುಕೊಂಡು ಯಾವ ಆಸೆ ಅಮಿಷಕ್ಕೂ ಬಲಿಯಾಗದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸತೊಡಗಿದರು. ಅವರ ಹೈಸ್ಕೂಲು ವರುಷದಿಂದ ವರುಷಕ್ಕೆ ಬೆಳೆಯತೊಡಗಿತು. ದೂರದೂರದ ಕನ್ನಡ ಮಕ್ಕಳನ್ನು ಆಕರ್ಷಿಸಿತು. ಬೆಳಗಾವಿಯಲ್ಲಷ್ಟೇ ಅಲ್ಲ, ಸುತ್ತೂ ಕಡೆಗೆ ಅದೊಂದು ಆದರ್ಶ ಹೈಸ್ಕೂಲೆಂದು ಕೀರ್ತಿ ಪಡೆಯಿತು.

ಧಾರವಾಡದಲ್ಲಿ ಹನ್ನೊಂದು ವರುಷ

ಗಿಲಗಂಚಿ ಅರಟಾಳ ಹೈಸ್ಕೂಲ್ ಒಂದು ರೂಪಕ್ಕೆ ಬಂದಾಗ ಅಂಥ ಶಿಕ್ಷಣಾಲಯಗಳನ್ನು ಬೇರ ಬೇರೆ ಸ್ಥಳಗಳಲ್ಲಿ ತೆರೆಯಲು ಯೋಚಿಸತೊಡಗಿದರು. ಬಸವನಾಳರು ಕನ್ನಡವು ಅಪಾಯಕ್ಕೆ ಸಿಕ್ಕಿರುವ ಸೊಲ್ಲಾಪುರ, ಕಲಬುರ್ಗಿ ಮತ್ತು ಬಳ್ಳಾರಿ ಭಾಗಗಳಲ್ಲಿ ತಮ್ಮ ಶಿಕ್ಷಣಾಲಯಗಳನ್ನು ಪ್ರಾರಂಭಿಸಲು ಹಂಚಿಕೆ ಹಾಕುತ್ತಿದ್ದರು. ಅವರ ಈ ಹಂಚಿಕೆ ಫಲಿಸಲು ಸ್ವಲ್ಪ ದಿನಗಳೇ ಹಿಡಿದವು.

ಅವರ ಸಂಸ್ಥೆಯ ಕಾರ್ಯವನ್ನು ವಿಸ್ತರಿಸುವ ಮೊದಲನೆಯ ಪ್ರಯತ್ನವಾಗಿ ಧಾರವಾಡದಲ್ಲಿ ೧೯೨೨ರಲ್ಲಿ ಒಂದು ಹೈಸ್ಕೂಲ್ ಪ್ರಾರಂಭವಾಯಿತು. ಅದಕ್ಕೆ ಶಿ.ಶಿ. ಬಸವನಾಳರೇ ಪ್ರಿನ್ಸಿಪಾಲರಾಗಿ ನೇಮಕವಾದರು. ಹೈಸ್ಕೂಲಿಗೆ ಸಮಾಜದ ಹಿರಿಯ ಮುಂದಾಳುಗಳೂ, ಉದಾರಿಗಳೂ, ಶಿಕ್ಷಣಪ್ರೇಮಿಗಳೂ ಆದ ರಾಜಾಲಖಮನಗೌಡ ಸರದೇಸಾಯಿಯವರ ಹೆಸರನ್ನಿಡಲಾಯಿತು. ಅದು ಇಂದು ಧಾರವಾಡದಲ್ಲಿ ಆರ್.ಎಲ್.ಎಸ್. ಹೈಸ್ಕೂಲ್ ಎಂದು ಪ್ರಸಿದ್ಧವಾಗಿದೆ.

ಧಾರವಾಡಕ್ಕೆ ಬಂದ ಮೇಲೆ ಬಸವನಾಳರ ಕಾರ್ಯಕ್ಷೇತ್ರ ವಿಸ್ತಾರವಾಯಿತು. ಹನ್ನೊಂದು ವರ್ಷಗಳ ಕಾಲ ಇಲ್ಲಿದ್ದು ರಾಜಾಲಖಮನಗೌಡ ಸರದೇಸಾಯಿ ಹೈಸ್ಕೂಲನ್ನು ಸರ್ವಾಂಗ ಸುಂದರವಾಗಿ ಬೆಳೆಸಿದರು. ಧಾರವಾಡದ ಸಂಘ – ಸಂಸ್ಥೆಗಳೊಂದಿಗೆ ನಿಕಟ ಸಂಬಂಧವಿರಿಸಿಕೊಂಡರು. ಕೆಲವು ಸಂಸ್ಥೆಗಳನ್ನು ಹೊಸದಾಗಿ ಪ್ರಾರಂಭಿಸಿದರು. ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಅತ್ಯಂತ ಮಹತ್ವದ ಸಂಸ್ಥೆ. ಅದು ಕನ್ನಡಿಗರಲ್ಲಿ ಉಂಟು ಮಾಡಿದ ಜಾಗೃತಿ, ಸಾಹಿತ್ಯದ ಎಚ್ಚರ ಮರೆಯದಂತಹದು. ಈ ಸಂಸ್ಥೆ ಪ್ರಾರಂಭವಾಗಿ ಆಗಲೇ ಮೂರು ದಶಕಗಳು ಸಂದಿದ್ದವು. ಬಸವನಾಳರು ಅದರ ಆಜೀವ ಸದಸ್ಯರಾಗಿ, ಅದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮುಂದೇ ಅವರೇ ಅದರ ಕಾರ್ಯಕಾರಿ ಮಂಡಲದ ಅಧ್ಯಕ್ಷರಾದರು. ಬಸವನಾಳರು ತಮ್ಮ ಅಧಿಕಾರಾವಧಿಯಲ್ಲಿ ಸಂಘದ ಕಟ್ಟಡದ ಮೇಲಂತಸ್ತನ್ನೂ, ಸುತ್ತಲಿನ ಕಾಂಪೌಂಡ್ ಗೋಡೆಯನ್ನು ಕಟ್ಟಿಸಿದರು. ಈ ಸಂದರ್ಭದಲ್ಲಿ ಸಂಘಕ್ಕೆ ಸಾಲದ ಹೊರೆಯಾಯಿತು. ಮುಂದೆ ಸುವರ್ಣಮಹೋತ್ಸವ ಆಚರಿಸಿ ಆ ಸಾಲವನ್ನು ತೀರಿಸಲಾಯಿತು. ಬಸವನಾಳರು ಆಗ ಅವಿಶ್ರಾಂತವಾಗಿ ದುಡಿದರೆಂದು ಅದನ್ನು ಬಲ್ಲವರು ಹೇಳುತ್ತಾರೆ.

ಧಾರವಾಡದಲ್ಲಿ ೧೮೮೩ರಲ್ಲಿಯೇ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಸ್ಥಾಪಿತವಾಗಿತ್ತು. ಈ ಸಂಸ್ಥೆಯ ಆಜೀವ ಸದಸ್ಯರಾಗಿ, ಅದರ ಕಾರ್ಯಕಾರಿ ಮಂಡಲದ ಅಧ್ಯಕ್ಷರಾಗಿ ಬಸವನಾಳರು ಸಲ್ಲಿಸಿದ ಸೇವೆಯೂ ಮಹತ್ವದ್ದಾಗಿದೆ. ಈ ಸಂಸ್ಥೆಯಲ್ಲಿ ಬಸವನಾಳರ ಪ್ರಯತ್ನದಿಂದಾಗಿಯೇ ೧೯೩೦ರಲ್ಲಿ ಸಾಹಿತ್ಯ ಸಮಿತಿ ಉದಯವಾಯಿತು. ಪ್ರಾರಂಭದಲ್ಲಿ ಬಸವನಾಳರೇ ಇದರ ಕಾರ್ಯಾಧ್ಯಕ್ಷ ರಾಗಿದ್ದರು. ಈ ಸಾಹಿತ್ಯ ಸಮಿತಿಯ ಮುಖ್ಯ ಉದ್ದೇಶ ವೀರಶೈವ ಸಾಹಿತ್ಯ ಕೃತಿಗಳಲ್ಲಿ ಪ್ರಕಟಿಸುವುದಾಗಿತ್ತು. ಅದು ಯಶಸ್ವಿಯಾಗಿ ಈಡೇರಿತು. ಚೆನ್ನಬಸವ ಪುರಾಣ, ಪ್ರಭುಲಿಂಗ ಲೀಲೆ, ಶಬರ ಶಂಕರ ವಿಳಾಸ, ಗಿರಿಜಾ ಕಲ್ಯಾಣ ಮುಂತಾದ ಉದ್ಗ್ರಂಥಗಳನ್ನು ಆಗ ಪ್ರಕಟವಾಗಿದ್ದವು. ಬಸವನಾಳರೇ ಸಂಪಾದಿಸಿದ ಕೆಲವು ಕಾವ್ಯಗಳು ಕನ್ನಡ ಪ್ರಾಚೀನ ಕಾವ್ಯಗಳ ಸಂಪಾದನಾ ಕಾರ್ಯಕ್ಕೆ ಮಾದರಿಯಾಗಿವೆ.

ಬಸವನಾಳರು ಪ್ರಯತ್ನಪಟ್ಟು ಸ್ಥಾಪಿಸಿದ ಇನ್ನೊಂದು ಸಂಸ್ಥೆ ಧಾರವಾಡ ಜಿಲ್ಲಾ ಮುಖ್ಯಾಧ್ಯಾಪಕರ ಸಂಘ. ಅವರು ಅದರ ಆರಂಭದಲ್ಲಿ ಕಾರ್ಯದರ್ಶಿಯಾಗಿ ಅದಕ್ಕೊಂದು ವ್ಯವಸ್ಥಿತ ಸ್ವರೂಪ ತಂದುಕೊಟ್ಟರು. ಮಾಧ್ಯಮಿಕ ಶಾಲಾಶಿಕ್ಷಕರಲ್ಲಿ ಸಂಘಟನೆಯನ್ನುಂಟುಮಾಡಿದರು. ಪ್ರತಿವರ್ಷ ‘ಕರ್ನಾಟಕ ಶಿಕ್ಷಣ ಸಪ್ತಾಹ’ (ಕರ್ನಾಟಕ ಎಜ್ಯುಕೇಷನ್ ವೀಕ್) ಎಂಬ ಕಾರ್ಯಕ್ರಮ ನಡೆಸಲು ಏರ್ಪಾಟು ಮಾಡಿದರು. ಈ ಸಪ್ತಾಹದಲ್ಲಿ ಶೈಕ್ಷಣಿಕ ಹಾಗೂ ಶಿಕ್ಷಕರ ಸಮಸ್ಯೆಗಳ ಚರ್ಚೆಯೂ ನಡೆಯುತ್ತಿತ್ತು. ಅದರಿಂದಾಗಿ ಶಿಕ್ಷಕರ ಸಂಘಟನೆ ಬೆಳೆಯಿತು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ವಾತಾವರಣ ನಿರ್ಮಾಣವಾಯಿತು. ಸೆಕಂಡರಿ ಸ್ಕೂಲ್ ಅಥಲೆಟಿಕ್ ಅಸೋಸಿಯೇಷನ್ ಕೂಡ ಆಗ ಪ್ರಾರಂಭವಾಯಿತು. ಒಟ್ಟಿನಲ್ಲಿ ಶಿಕ್ಷಣದ ವಿವಿಧ ಮುಖ ಚಟುವಟಿಕೆಗಳು ಉತ್ಸಾಹಪೂರ್ಣವಾಗಿ ನಡೆದವು. ಬಸವನಾಳರು ಅಧ್ಯಕ್ಷರು ಇಲ್ಲವೆ ಕಾರ್ಯದರ್ಶಿಯಾಗಿ ಪ್ರತಿಯೊಂದು ಸಮಿತಿಯಲ್ಲಿ ಇದ್ದೇ ಇರುತ್ತಿದ್ದರು. ಅವರ ಕರ್ತೃತ್ವ ಶಕ್ತಿ ಆ ಸಮಿತಿಗಳಿಗೆ ಹೊಸ ಚೈತನ್ಯವನ್ನು ತಂದುಕೊಡುತ್ತಿತ್ತು.

ಸಂಘಟನೆ, ಬೋಧನೆ, ಸಾಹಿತ್ಯಾರಾಧಬನೆ ಇವು ಬಸವನಾಳರ ಮುಖ್ಯ ಕಾರ‍್ಯಗಳು. ಅವರ ಸಂಘಟನಾ ಕಾರ್ಯ ಸಹಕಾರ ತತ್ತ್ವವನ್ನು ಅವಲಂಬಿಸಿತ್ತು. ಸ್ನೇಹಪರತೆಯು ಅವರ ಹುಟ್ಟುಗುಣವಾಗಿತ್ತು. ಅಂತೆಯೇ ಹಲವಾರು ಜನರೊಂದಿಗೆ ಬೆರತು ಕಾರ್ಯ ಮಾಡಿದರು. ಅವರು ಸಹಕಾರ ಕ್ಷೇತ್ರದಲ್ಲಿ ದುಡಿದದ್ದನ್ನೂ ಇಲ್ಲಿ ನೆನೆಯಬಹುದು. ೧೯೨೨ ರಿಂದ ೧೯೨೫ರ ವರೆಗೆ ಕರ್ನಾಟಕ ಸೆಂಟ್ರಲ್ ಕೋ ಆಪರೇಟೀವ್ ಬ್ಯಾಂಕಿನ ಪ್ರಥಮ ಮ್ಯಾನೇಜಿಂಗ್ ಡೈರೆಕ್ಟರಾಗಿಯೂ ಅವರು ಸೇವೆ ಸಲ್ಲಿಸಿದರು. ಆ ಬ್ಯಾಂಕು ಬಹು ಬೇಗನೆ ಅಭಿವೃದ್ಧಿಯನ್ನು ಹೊಂದುವಂತಾಗಲು ಅವರ ಮಾರ್ಗದರ್ಶನವೇ ಕಾರಣ ವಾಯಿತೆಂದು ಹೇಳಬಹುದು.

ಲಿಂಗರಜ ಕಾಲೇಜ್ ಸ್ಥಾಪನೆ

ಬಸವನಾಳರು ಲಿಂಗರಾಜ ಕಾಲೇಜ್ ಸ್ಥಾಪನೆ ಯಲ್ಲಿಯೂ ಮಹತ್ವದ ಪಾತ್ರ ವಹಿಸಿದರು. ಸಾಖರೆಯವರು ಬೆಳಗಾವಿಯಲ್ಲಿ ಕಾಲೇಜನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದರು. ಬಸವನಾಳ ಮತ್ತು ಕಟ್ಟೀಮನೀಯವರು ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದರು. ಐದು ವರ್ಷಗಳ ಕಾಲ ಪ್ರಯತ್ನ ಮುಂದುವರೆಯಿತು. ಅವರು ಕನ್ನಡಿಗರ ಈ ಬೇಡಿಕೆಯನ್ನು ಸರಕಾರದೆದುರು ಸಮರ್ಥವಾಗಿ ಮಂಡಿಸಿದರು. ೧೯೩೩ ರಲ್ಲಿ ಲಿಂಗರಾಜ ಕಾಲೇಜ್ ಸ್ಥಾಪಿತವಾಯಿತು.

ಈ ಕಾಲೇಜಿನ ಪ್ರಿನ್ಸಿಪಾಲರ ನೇಮಕದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ವಾಸ್ತವವಾಗಿ ಬಸವನಾಳರೇ ಆ ಕಾಲೇಜಿನ ಪ್ರಿನ್ಸಿಪಾಲರಾಗಬೇಕಿತ್ತು. ಆದರೆ ಬಸವನಾಳರು ಆ ಸ್ಥಾನವನ್ನು ತಮ್ಮ ಶಿಷ್ಯರಾದ ಡಾಕ್ಟರ್ ಎಸ್. ಸಿ. ನಂದಿಮಠರಿಗೆ ಬಿಟ್ಟುಕೊಟ್ಟರು. ಅದೇತಾನೆ ನಂದೀಮಠರು ಇಂಗ್ಲೆಂಡಿನಿಂದ ಪಿ,ಎಚ್.ಡಿ ಪದವಿ ಪಡೆದು ಬಂದಿದ್ದರು. ಬಸವನಾಳರು ಶಿಷ್ಯ ವಾತ್ಸಲ್ಯದಿಂದ, ಯೋಗ್ಯತೆಗೆ ಬೆಲೆಕೊಡುವ ದೃಷ್ಟಿಯಿಂದ ನಂದೀಮಠರನ್ನು ಪ್ರಿನ್ಸಿಪಾಲರನ್ನಾಗಿ ಮಾಡಿದರು. ತಾವು ಅವರ ಕೈ ಕೆಳಗೆ ಇತಿಹಾಸ ಪ್ರಾಧ್ಯಾಪಕರಾಗಿ ಉಳಿದರು. ಇದು ಬಸವನಾಳರ ಹಿರಿಮೆಗೆ ಒಂದು ನಿದರ್ಶನ.

ಈವರೆಗೆ ‘ಬಸವನಾಳರ ಮಾಸ್ತರ’ ಆಗಿದ್ದವರು ಈಗ ‘ಪ್ರೊಫೆಸರ್ ಬಸವನಾಳ’ ಆದರು. ಲಿಂಗರಾಜ ಕಾಲೇಜಿನ ಸರ್ವತೋಮುಖವಾದ ಏಳ್ಗೆಗಾಗಿ ದುಡಿದರು. ಸುಮಾರು ಹತ್ತು ವರ್ಷಗಳ ಕಾಲ ಲಿಂಗರಾಜ ಕಾಲೇಜಿನ ಬೆಳವಣಿಗೆಗಾಗಿ ಅವರು ಪಟ್ಟಶ್ರಮ ಅಪರಿಮಿತ ಹಾಗೂ ಅನನ್ಯ.

ಆದರ್ಶ ಅಧ್ಯಾಪಕ

ಬಸವನಾಳರು ಹೊಸ ಹೊಸ ಸಂಸ್ಥೆಗಳನ್ನು ಕಟ್ಟುವ ಯೋಜನಾಶಿಲ್ಪಿಗಳಾಗಿರುವಂತೆ ಹೊಸ ಜನಾಂಗವನ್ನು ನಿರ್ಮಿಸುವ ಸಮಾಜ ಶಿಲ್ಪಿಗಳೂ ಆಗಿದ್ದರು. ನಿಜವಾದ ಅರ್ಥದಲ್ಲಿ ಅವರೊಬ್ಬ ಅದರ್ಶ ಶಿಕ್ಷಕರು. ಆಜೀವ ವಿದ್ಯಾರ್ಜನೆ ನಡೆಸಿದ ಅವರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವುದರಲ್ಲಿ ಸಮರ್ಪಣಾಭಾವವನ್ನು ತಳೆದವರು. ಬೆಳಗಾವಿಯ ಗಿಲಗಂಚಿ ಅರಟಾಳ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದಾಗ, ಇಂಗ್ಲೀಷ್ ಕನ್ನಡ ಮತ್ತು ಇತಿಹಾಸ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಇವರ ಪಾಠಕ್ರಮವು ಅತ್ಯಂತ ಪ್ರಭಾವಿಯಾಗಿರುತ್ತಿತ್ತು. ಅವರ ಪಾಠ ಪ್ರವಚನಗಳನ್ನು ಕೇಳಲಿ ಬೇರೆ ಶಾಲೆಯ ವಿದ್ಯಾರ್ಥಿಗಳೂ ಬರುತ್ತಿದ್ದರು. ಅವರ ನಿರೂಪಣೆ ಸ್ಪಷ್ಟ, ಬಾಷೆ ಸುಲಲಿತ, ವ್ಯಾಕರಣ ಕಲಿಸುವುದರಲ್ಲಂತೂ ಅವರದು ಎತ್ತಿದ ಕೈ. ‘ಬಸವನಾಳ ಮಾಸ್ಟರ್’ ಎಂದರೆ ವಿದ್ಯಾರ್ಥಿಗಳಿಗೆ ತುಂಬ ಪ್ರೀತಿ. ಅವರು ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿ ವಾತ್ಸಲ್ಯಗಳಿಗೆ ಕಾಣುತ್ತಿದ್ದರು. ವಿದ್ಯಾರ್ಥಿಯಲ್ಲಿ ಸ್ವಲ್ಪ ಒಳ್ಳೆಯ ಗುಣ ಕಂಡರೂ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅವರು ಎಂದೂ ಯಾವ ವಿದ್ಯಾರ್ಥಿಯ ಮನಸ್ಸನ್ನು ನೋಯಿಸಿದವರಲ್ಲ. ಅವರು ಯಾವಾಗಲೂ ದಯಾಪರರು, ಕೋಮಲ ಹೃದಯದವರು. ಹಾಗಿದ್ದರೂ ಶಿಸ್ತು ಪಾಲಿಸುವಲ್ಲಿ ಕಟ್ಟು ನಿಟ್ಟಿನವರು.

ಲಿಂಗರಾಜ ಕಾಲೇಜಿನ ಪ್ರೊಫೆಸರ್ ಆಗಿದ್ದಾಗಲೂ ತಮ್ಮ ಮಾಸ್ತರಿಕೆಯ ಪ್ರೀತಿ, ವಾತ್ಸಲ್ಯಗಳನ್ನು ಅಚ್ಚಳಿಯದಂತೆ ಉಳಿಸಿಕೊಂಡಿದ್ದರು. ಅವರ ಇತಿಹಾಸ ಪಾಠಗಳು ಸ್ಫೂರ್ತಿದಾಯಕವಾಗಿದ್ದವು. ಕನ್ನಡಪಾಠಗಳು ಹೃದಯಂಗ ಮಯವಾಗಿದ್ದವು.

ಕನ್ನಡ ಸಾಹಿತ್ಯ ಉಪಾಸಕ

ಬಸವನಾಳರು ತಮ್ಮ ತಲೆಮಾರಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಮೈಸೂರಿನ ಕಡೆಗೆ ಬಿ.ಎಂ. ಶ್ರೀಕಂಠಯ್ಯನವರು ಇದ್ದಂತೆ ಧಾರವಾಡದ ಕಡೆಗೆ ಶಿ.ಶಿ. ಬಸವನಾಳರು ಇದ್ದರು. ಬಸವನಾಳರು ಬರವಣಿಗೆ ಪ್ರಾರಂಬಿಸಿದ್ದು ಕಾಲೇಜಿನಲ್ಲಿ ರುವಾಗಲೇ. ಡೆಕ್ಕನ್ ತ್ರೈಮಾಸಿಕಕ್ಕೆ ಅವರು ಲೇಖನಗಳನ್ನು ಬರೆದರು. ಅದರ ಕನ್ನಡ ವಿಭಾಗದ ಸಂಪಾದಕರಾಗಿಯೂ ಕೆಲಸ ಮಾಡಿದರು. ಅವರು ಬೆಳಗಾವಿಯಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡ ಕಾಲಕ್ಕೆ ಕನ್ನಡದ ಸ್ಥಿತಿ ಕಂಗೆಡುವಂತಿತ್ತು. ಎಲ್ಲಿ ನೋಡಿದರೂ ಮರಾಠಿಯದೇ ಪ್ರಾಬಲ್ಯ. ಧಾರವಾಡ ಪ್ರದೇಶದಲ್ಲಿಯೂ ಮರಾಠಿ ತನ್ನ ಆಳ್ವಿಕೆಯನ್ನು ಇನ್ನೂ ನಡೆಸಿತ್ತು. ಮರಾಠಿಯ ಪ್ರಭಾವದಿಂದ ಮುಕ್ತವಾಗಲು, ಕನ್ನಡವನ್ನು ಅದರ ಸ್ಥಾನದಲ್ಲಿ ತಂದು ಕೂಡಿಸಲು ಆಗಲೇ ಪ್ರಯತ್ನಗಳು ನಡೆದಿದ್ಚವು. ಕನ್ನಡಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದ ಡೆಪ್ಯುಟಿ ಚೆನ್ನಬಸಪ್ಪ, ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪ್ರಯತ್ನಗಳು ಬಸವನಾಳರ ಕಣ್ಣುಮಂದೆ ಇದ್ದವು. ಕನ್ನಡ ನುಡಿ ಹಾಗೂ ಸಾಹಿತ್ಯದ ಏಳ್ಗೆಗಾಗಿ ದುಡಿಯಲು ಅವರೂ ಕಂಕಣ ಬದ್ಧರಾದರು.

ಬಸವನಾಳರು ಬೆಳಗಾವಿಯ ಕರ್ನಾಟಕ ಸಂಘದ ಬೆನ್ನೆಲುಬಾಗಿ ನಿಂತರು. ಅದರ ಮೂಲಕ ಅಲ್ಲಿ ಕನ್ನಡದ ಚಟುವಟಿಕೆಗಳು ನಡೆಯುವಂತಾಯಿತು. ಕನ್ನಡದಕ್ಕಾಗಿ ಅವರು ದುಡಿಯುತ್ತಿರುವಾಗ ವಿಪತ್ತುಗಳನ್ನು ಎದುರಿಸ ಬೇಕಾಯಿತು. ೧೯೩೪ರ ಒಂದು ಘಟನೆಯನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು. ಆ ವರ್ಷ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯೋತ್ಸವ ನಡೆಯುತ್ತಿತ್ತು. ಉತ್ಸವದ ಮೆರವಣಿಗೆ ನಗರದಲ್ಲಿ ಹೊರಟಿತ್ತು. ಒಂದು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೋಗುತ್ತಿದ್ದಂತೆ ಒಬ್ಬ ಮರಾಠಿ ತರುಣ ಟಣ್ಣೆ ಜಿಗಿದು ಬಸವನಾಳರೆಡೆಗೆ ಚೂರಿಯನ್ನು ಎಸೆದನು. ಆದರೆ ಸುದೈವ, ಆ ಚೂರಿ ಬಸವನಾಳರ ಕೋಟಿಗೆ ಸಿಕ್ಕಿಕೊಂಡು ಅವರಿಗೆ ಸ್ವಲ್ಪ ಗಾಯಗೊಳಿಸಿತು ಅಷ್ಟೆ. ಸುತ್ತಲಿದ್ದ ಜನರು ತರುಣನನ್ನು ಹಿಡಿದುಕೊಂಡರು. ನೆರೆದವರೆಲ್ಲ ಗಾಬರಿಯಾ ಗಿದ್ದರೂ ಬಸವನಾಳರು ಮಾತ್ರ ಶಾಂತಚಿತ್ತರಾಗಿಯೇ ಇದ್ದರು. ಮರಾಠಿ ತರುಣನ ಕೋಪಕ್ಕೆ ಬಸವನಾಳರು ಬರೆದ ಒಂದು ಚರಿತ್ರೆಯ ಪುಸ್ತಕ ಕಾರಣವಂತೆ. ಇತಿಹಾಸದ ಸತ್ಯಕಥೇ ಎಷ್ಟೋ ಸಲ ಭಾವನಾಪರವಶರನ್ನು ತೂಕ ತಪ್ಪುವಂತೆ ಮಾಡುತ್ತದೆ. ಅದರಲ್ಲೂ ಬೇರೆ ಭಾಷೆಯವರ ಬಗ್ಗೆ ಸತ್ಯ ವಾದರೂ ಅಪ್ರಿಯವಾದುದನ್ನು ಬರೆದಾಗ ಹೀಗಾಗುವುದು ಸಹಜ. ಈ ಘಟನೆಯಿಂದ ಬಸವನಾಳರು ನೊಂದುಕೊಳ್ಳಲೂ ಇಲ್ಲ ನಿರಾಶರಾಗಲೂ ಇಲ್ಲ. ತಮ್ಮ ಸತ್ಯದೃಷ್ಟಿಗೆ ಅಂಟಿಕೊಂಡು ಕನ್ನಡದ ಕೆಲಸವನ್ನು ಮುಂದುವರಿಸಿದರು.

ಸಾಹಿತ್ಯಕವಾಗಿ ಬಸವನಾಳರು ಮಾಡಿದ ಕಾರ್ಯ ಸಂಖ್ಯೆಯಲ್ಲಿ ಬಹಳಷ್ಟಿಲ್ಲ. ಆದರೆ ಸತ್ವದಲ್ಲಿ ಮಿಗಿಲಾದದ್ದಾಗಿದೆ. ಅವರ ಪ್ರಥಮ ಒಲವು ವಚನಸಾಹಿತ್ಯ. ಅನಂತರ ಪ್ರಾಚೀನ ಕಾವ್ಯ, ವ್ಯಾಕರಣ, ಅಲಂಕಾರ ಶಾಸ್ತ್ರಗಳು ಅವರಿಗೆ ಪ್ರಿಯವಾದ ವಿಷಯಗಳು. ಇಂಗ್ಲೀಷ್ ಹಾಗೂ ಕನ್ನಡದ ಆಧುನಿಕ ಸಾಹಿತ್ಯವನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು.

ಬಸವನಾಳರ ಸಾಹಿತ್ಯಭ್ಯಾಸವು ಬಹಳ ವ್ಯಾಪಕವಾಗಿತ್ತು. ಸಂಸ್ಕೃತ, ಸಾಹಿತ್ಯ, ಪ್ರಾಚೀನ ಗ್ರೀಕ್ ಸಾಹಿತ್ಯ, ಆಧುನಿಕ ಇಂಗ್ಲೀಷ್ ಸಾಹಿತ್ಯ, ರಷ್ಯನ್ ಸಾಹಿತ್ಯ ಎಲ್ಲವನ್ನು ಅವರು ಅಭ್ಯಾಸ ಮಾಡಿದ್ದರು. ಅವರು ಇತಿಹಾಸ, ತತ್ತ್ವಜ್ಞಾನ ರಾಜ್ಯಶಾಸ್ತ್ರಗಳನ್ನು ಬಹಳವಾಗಿ ಓದಿಕೊಂಡಿದ್ದರು. ಹೊಸ ಹೊಸ ಪುಸ್ತಕಗಳನ್ನು ಆಗಿಂದಾಗ್ಗೆ ಕೊಂಡುಕೊಳ್ಳುವುದು, ಸಾದ್ಯಂತವಾಗಿ ಓದುವುದು, ಮಹತ್ವದ ಗ್ರಂಥಗಳನ್ನು ಮತ್ತೆ ಮತ್ತೆ ಅಧ್ಯಯನಮಾಡುವುದು ಅವರಿಗೆ ಒಂದು ರೂಢಿಯಾಗಿತ್ತು. ಅಂತೆಯೇ ಅವರು ಕನ್ನಡದ ಉತ್ತಮ ವಿದ್ವಾಂಸರಾಗಿದ್ದರು. ಶ್ರೇಷ್ಠ ಲೇಖಕರಾದರು.

ಅವರು ಆರಂಭದಲ್ಲಿ ಇತಿಹಾಸ ಪುಸ್ತಕಗಳನ್ನು ಬರೆದರು. ಇತಿಹಾಸದ ಬರವಣಿಗೆಯಲ್ಲಿ ಅವರು ತಮ್ಮ ಸ್ನೇಹಿತರಾದ ಹಲಗಲಿ ಹಂಪಯ್ಯನವರ ಸಹಾಯ ಪಡೆದರು. ಇಬ್ಬರು ಜೊತೆಯಾಗಿಯೇ ‘ಇಂಗ್ಲೆಂಡಿನ ಪ್ರಾಚೀನ ಇತಿಹಾಸ’ ಪ್ರಕಟಿಸಿದರು. ಅನಂತರ ‘ಹಿಂದುಸ್ಥಾನದ ಇತಿಹಾಸವನ್ನೂ ಬೆಳಕಿಗೆ ತಂದರು. ಈ ಎರಡೂ ಪುಸ್ತಕಗಳೂ ಆಗ ಹೈಸ್ಕೂಲ್ ಮಟ್ಟದಲ್ಲಿ ಪಠ್ಯ ಪುಸ್ತಕಗಳಾಗಿ ಸ್ವೀಕೃತವಾದವು.

ಬಸವನಾಳರ ಸಾಹಿತ್ಯ ಕಾರ್ಯ ಭರದಿಂದ ನಡೆದದ್ದು ಅವರು ೧೯೨೨ ರಲ್ಲಿ ಧಾರವಾಡಕ್ಕೆ ಬಂದ ಮೇಲೆಯೇ ಎಂದು ಹೇಳಬಹುದು. ಹಾಗಿದ್ದರೂ ಅವರಿಂದ ಗ್ರಂಥ ಪ್ರಕಟನಾ ಕಾರ್ಯ ನಡೆದದ್ದು ಒಂದಿಷ್ಟು ವಿಲಂಬವಾಗಿಯೇ. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಪ್ರಾಚೀನ ಕಾವ್ಯಗಳ ಸಂಪಾದನಾ ಕಾರ್ಯಕ್ಕೆ ತೊಡಗಿದ್ದು. ಈ ಕಾರ್ಯ ಅಷ್ಟು ಸುಲಭವಾದದ್ದಲ್ಲ. ಇದು ಸಮಯ, ಪರಿಶ್ರಮ, ತಾಳ್ಮೆ ಇವುಗಳನ್ನು ಬಯಸುವಂತಹುದು. ಬಸವನಾಳರು ಈ ಕಾರ್ಯದಲ್ಲಿ ತಮ್ಮ ಜೀವನವನ್ನು ಗಂಧದಂತೆ ತೇಯ್ದು ಸುಂಗಧದಂಥ ಕೃತಿಗಳನ್ನು ಕನ್ನಡಕ್ಕೆ ನೀಡಿದರು. ‘ಚೆನ್ನಬಸವ ಪುರಾಣ, ‘ಪ್ರಭುಲಿಂಗ ಲೀಲೆ’ ‘ಶಬರಶಂಕರ ವಿಳಾಸ’ ಈ ಮೊದಲಾದ ಕಾವ್ಯಗಳು ಸುವ್ಯವಸ್ಥಿತವಾಗಿ ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟು ಬೆಳಕು ಕಂಡವು. ಹರಿಹರನ ‘ಪಂಪಾಶತಕ ಮತ್ತು ರಕ್ಷಾಶತಕ’ವನ್ನೂ ಬಸವನಾಳರು ಒಪ್ಪವಾಗಿ ಸಂಪಾದಿಸಿದರು. ಬಾಲಲೀಲಾ ಮಹಾಂತ ಶಿವಯೋಗಿಗಳ ‘ಕೈವಲ್ಯದರ್ಪಣ’ ಮತ್ತು ಸರ್ಪಭೂಷಣ ಶಿವಯೋಗಿಗಳ ‘ಕೈವಲ್ಯಕಲ್ಪವಲ್ಲರಿ’ ಬಸವನಾಳರ ಸಂಪಾದನೆಯಿಂದ ಹೊಸ ಜೀವನವನ್ನು ಪಡೆದವು.

ಅವರ ‘ಕಾವ್ಯಾವಲೋಕನ’ದ ಸಂಪಾದನೆ ಒಂದು ಸ್ಮರಣೀಯವಾದ ಕಾರ್ಯ. ಹಾಗೆಯೇ ‘ಶಬ್ದಾನುಶಾಸನ ಪ್ರಕಾಶಿಕೆ; ಸಂಪಾದನಾ ಕಾರ್ಯವೂ ಮರೆಯುದಂತಹುದು. ಈ ಗ್ರಂಥಗಳಿಗೆ ಅವರು ಬರೆದ ಟಿಪ್ಪಣಿಗಳು, ಪ್ರಸ್ತಾವನೆಗಳು ವ್ಯಾಕರಣ, ಅಲಂಕಾರ, ಕಾವ್ಯಮೀಮಾಂಸೆಗಳನ್ನು ಅಧ್ಯಯನ ಮಾಡುವವರಿಗೆ ಮಾರ್ಗದರ್ಶನವನ್ನು ನೀಡುತ್ತವೆ.

೧೯೪೧ರಲ್ಲಿ ಅವರು ಸಂಪಾದಿಸಿದ ‘ವೀರಶೈವ ತತ್ತ್ವ ಪ್ರಕಾಶ’ದ ಪ್ರಸ್ತಾವನೆಯಲ್ಲಿ ಬಸವನಾಳರು ವೀರಶೈವ ಧರ್ಮದ ವಿಶಾಲವಾದ ತತ್ವಗಳನ್ನು ಪ್ರತಿಪಾದಿಸಿದರು. ಬಸವಣ್ಣನವರ ಭಕ್ತರಾದ ಅವರು ತಮ್ಮ ಜೀವನದ ಉದ್ದಕ್ಕೂ ಮಾಡಿದ ವಚನಸಾಹಿತ್ಯದ ಅಭ್ಯಾಸದ ಫಲವನ್ನು ‘ಬಸವಣ್ಣನವರ ಷಟ್‌ಸ್ಥಳದ ವಚನಗಳ’ ಮೂಲಕ ಕನ್ನಡಿಗರಿಗೆ ನೀಡಿದ್ದಾರೆ. ವಚನಸಾಹಿತ್ಯದ ಸಂಪಾದನೆಯಲ್ಲಿ ಇದೊಂದು ಅಮೂಲ್ಯ ಕೊಡುಗೆ. ಈ ಗ್ರಂಥಕ್ಕೆ ಬರೆದ ಪ್ರಸ್ತಾವನೆ ವಚನಸಾಹಿತ್ಯದ ವ್ಯಾಖ್ಯೆ, ವ್ಯಾಖ್ಯಾನಗಳಿಗೆ ಒಂದು ನಿಶ್ಚಿತ ರೂಪವನ್ನು ತಂದು ಕೊಟ್ಟಿದೆ. ಸಾಮಾನ್ಯವಾಗಿ ಬಸವನಾಳರ ಎಲ್ಲ ಗ್ರಂಥಗಳ ಪ್ರಸ್ತಾವನೆಗಳು ಅಭ್ಯಾಸಪೂರ್ಣವೂ, ಖಚಿತವೂ ಆಗಿರುವುದನ್ನು ಕಾಣಬಹುದು. ಉದಾಹರಣೆಗೆ ವಚನ ಸಾಹಿತ್ಯವನ್ನು ಕುರಿತು ಬರೆದ ಅವರ ಈ ಮಾತುಗಳನ್ನು ನೋಡಬಹುದು.

‘ಕನ್ನಡ ಸಾಹಿತ್ಯದ ಒಂದು ವಿಶಿಷ್ಟವಾದ ಬಹು ಅಮೂಲ್ಯವಾದ ಭಾಗವೆಂದರೆ ವಚನಸಾಹಿತ್ಯ. ಈ ಬಗೆಯ ಸಾಹಿತ್ಯದಂತಹ ಉದಾಹರಣೆಗಳು ವಿರಳವಾಗಿ, ಕ್ವಚಿತ್ತಾಗಿ ಬಿಡಿಬಿಡಿಯಾಗಿ ಒಂದೆರಡು ಭಾಷೆಗಳಲ್ಲಿ ಸಿಕ್ಕಬಹುದಾದರೂ ವಚನಗಳು ಸಾಹಿತ್ಯದ ಒಂದು ಪ್ರಕಾರವಾಗಿ ನೇರ್ಪಟ್ಟುದು ಕನ್ನಡದಲ್ಲಿಯೇ ಎಂದು ನಿಸ್ಸಂದೇಹವಾಗಿ ಹೇಳಬಹುದು. ಅಂತೆಯೇ, ವಚನ ಸಾಹಿತ್ಯವೂ ಕನ್ನಡ ನುಡಿ ವಿಶ್ವಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕಾಣಿಕೆಯೆಂದು ಕನ್ನಡಿಗರು ಹೆಮ್ಮೆಪಡಬಹುದಾಗಿದೆ.’

ಬಸವನಾಳರ ಪತ್ರಿಕೋದ್ಯಮ ಸೇವೆಯೂ ವಿಶಿಷ್ಟವಾದುದು. ಅವರು ಗಿಲಗಂಜಿ ಅರಟಾಳ ಹೈಸ್ಕೂಲಿನ ಅಧ್ಯಾಪಕರಾದ ಹೊಸದರಲ್ಲಿ ಅಂದರೆ ೧೯೧೮ರಲ್ಲಿ ‘ಪ್ರಭೋಧ’ ಎಂಬ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ತರುಣರಲ್ಲಿ ರಾಷ್ಟ್ರಾಭಿಮಾನ ಮತ್ತು ಸಾಹಿತಿಕ ಜಾಗೃತಿಯನ್ನುಂಟುಮಾಡುವುದು ಆ ಪತ್ರಿಕೆಯ ಉದ್ದೇಶವಾಗಿತ್ತು. ಕನ್ನಡ ನುಡಿ, ಸಾಹಿತ್ಯಗಳ ಬಗ್ಗೆಯೂ ಅವರು ಆ ಮೂಲಕ ಪ್ರಚಾರ ಕಾರ್ಯ ಕ್ಯಗೊಂಡರು.

ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ’ ಪತ್ರಿಕೆಯ ಸಂಪಾದಕರಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು. ‘ವಾಗ್ಭೂಷಣ’ ಒಂದು ಮಹತ್ವದ ಹಾಗೂ ವಿದ್ವತ್ಪೂರ್ಣ ಲೇಖನಗಳುಳ್ಳ ಪತ್ರಿಕೆಯಾಗಲು ಅವರು ಪಟ್ಟ ಪರಿಶ್ರಮ ಸ್ಮರಣೀಯವಾದುದು.

ಬಸವನಾಳರ ಪತ್ರಿಕಾರಂಗ ಕಾರ್ಯದಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಅವರು ‘ಜಯಕರ್ನಾಟಕ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯಮಾಡಿದ್ದು. ಆಲೂರ ವೆಂಕಟರಾಯರಿಂದ ಪ್ರಾರಂಭವಾದ ಈ ಪತ್ರಿಕೆ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ. ಗೆಳೆಯರ ಗುಂಪಿನ ಹಿರಿಯರಾದ ದ.ರಾ. ಬೇಂದ್ರೆಯವರ ನೇತೃತ್ವದಲ್ಲಿ ಅದು ಕನ್ನಡದ ನವೋದಯ ಸಾಹಿತ್ಯಕ್ಕೆ ಮಹತ್ವದ ಸೇವೆ ಸಲ್ಲಿಸಿದೆ. ಅದು ಬಸವನಾಳರ ಕೈಗೆ ಬಂದಮೇಲೆ ತನ್ನ ಹಿಂದಿನ ಪ್ರಸಿದ್ಧಿಯನ್ನು ಇನ್ನಷ್ಟು ಉಜ್ವಲಗೊಳಿಸಿಕೊಂಡಿತು. ಹೆಚ್ಚು ವ್ಯಾಪಕವಾದ ಲೇಖಕರ ಬಳಗವನ್ನು ಪಡೆಯಿತು. ಅದೊಂದು ಕನ್ನಡ ಸಾಹಿತ್ಯದ ಪ್ರಮುಖ ಪತ್ರಿಕೆಯಾಯಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳಲ್ಲಿ ಒಂದು ಶುಚಿಯಿತ್ತು, ರುಚಿಯಿತ್ತು, ಅನೇಕ ತರುಣ ಲೇಖಕರಿಗೆ ಇಂಬುಗೊಟ್ಟ ‘ಜಯಕರ್ನಾಟಕ’ವು ಹೊಸ ಸಾಹಿತಿಗಳ ಉದಯಕ್ಕೆ ಕಾರಣವಾಯಿತು. ಬಸವನಾಳರು ಅಧ್ಯಾಪಕರಾಗಿ ಶಿಷ್ಯರನ್ನು ಬೆಳೆಸಿದಂತೆ, ಸಂಪಾದಕರಾಗಿ ಸಾಹಿತಿಗಳನ್ನು ಬೆಳೆಸಿದರು.

ಸಾಹಿತ್ಯದ ಜೊತೆಗೆ ಪ್ರಚಲಿತ ವಿಷಯಗಳನ್ನು ಚರ್ಚಿಸಲು, ಆಲೋಚಿಸಲು ’ಜಯಕರ್ನಾಟಕ’ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಅದು ಕೂಡ ಕನ್ನಡದ ಜಾಗೃತಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿತೆಂದು ಹೇಳಬಹುದು. ಧಾರವಾಡದಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅಂಗವಾಗಿ ಪ್ರಾಚೀನ ಗ್ರಂಥ ಸಂಶೋಧನೆಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಹೋಗಬೇಕೆಂದು ನಿರ್ಧರಿಸಿ ‘ಸಾಹಿತ್ಯ ಸಮಿತಿ ಪತ್ರಿಕೆ’ ಎಂಬ ತ್ರೈಮಾಸಿಕವನ್ನು ಪ್ರಾರಂಭಿಸಿದರು.

ಬಸವನಾಳರು ಸಾಹಿತ್ಯ ಕ್ಷೇತ್ರದಲ್ಲಿ ಬಹು ಮುಖ್ಯವಾದ ಕಾರ್ಯ. ವೀರಶೈವ ಧರ್ಮ, ಸಾಹಿತ್ಯಗಳ ಅವರ ಅಪಾರವಾದ ಜ್ಷಾನವನ್ನು ಗುರುತಿಸಿದ ಆ ಸಮಾಜದವರು ಅವರನ್ನು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅವರ ಉನ್ನತಮಟ್ಟದ ಸೇವೆಯನ್ನು ಗಮನಿಸಿದ ಕನ್ನಡಿಗರು ಅವರನ್ನು ೧೯೪೪ ರಲ್ಲಿ ರಬಕವಿಯಲ್ಲಿ ಕೂಡಿದ ೨೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ೧೯೪೫ರಲ್ಲಿ ನವಿಲುಗುಂದದಲ್ಲಿ ಜರುಗಿದ ಸರ್ವಧರ್ಮ ಪರಿಷತ್ತಿನ ಅಧ್ಯಕ್ಷರೂ ಆಗಿ ಅವರು ಕಾರ್ಯನಿರ್ವಹಿಸಿದರು. ಸರ್ವಧರ್ಮ ಸಮನ್ವಯ, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಗಳ ಸಮನ್ವಯ ಸಾಧಿಸುವುದು ಬಸವನಾಳರ ಜೀವನದ ಗುರಿಯಾಗಿತ್ತು. ಅವರು ಧರ್ಮಗಳ ಬಗ್ಗೆ, ಮಾತನಾಡುತ್ತ, ‘ಎಲ್ಲ ಧರ್ಮಗಳಲ್ಲಿ ಕಂಡುಬರುವ ನಿತ್ಯ ಸತ್ಯ ತತ್ವಗಳನ್ನು ನಾವು ಅಳವಡಿಸಿಕೊಂಡು, ಮಾನವನಿಗೆ ಸಹಜವಾದ ಪಾಶವೀ ವೃತ್ತಿಯನ್ನು ಅಳಿದು, ಅಂತರ್ಯದಲ್ಲಿ ಹುದುಗಿದ್ದ ದೈವತ್ವವನ್ನು ಬೆಳೆಸಿ, ಒಲಿಸಿಕೊಳ್ಳುವುದೇ ನಮ್ಮ ನಿಮ್ಮ ಹಾಗೂ ಪ್ರತಿಯೊಬ್ಬನ ಗುರಿಯಾಗಬೇಕು’ ಎಂದು ಹೇಳಿದರು. ಅವರ ಧರ್ಮದೃಷ್ಟಿ ಯಾವಾಗಲೂ ವಿಶ್ವವ್ಯಾಪಿಯಾಗಿತ್ತು.

ಪ್ರಾಚೀನ ಕಾವ್ಯಗಳ ಸಂಪಾದನೆ, ಸಂಶೋಧನೆ ಯಲ್ಲಿಯೇ ನಿರತರಾಗಿದ್ದರೂ ಅವರು ತಮ್ಮ ಕಾಲದ ಸಾಹಿತ್ಯವನ್ನು ತೆರೆದ ಮನಸ್ಸಿನಿಂದ ನೋಡುತ್ತಿದ್ದರು. ಅಖಂಡ ಕರ್ನಾಟಕದ ದೃಷ್ಟಿಯನ್ನು ಹೊಂದಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲ ಭಾಗದ ಜನರೊಂದಿಗೂ ಸ್ನೇಹ ಸಂಬಂಧವನ್ನು ಹೊಂದಿದ್ದರು. ತಮ್ಮ ಸಾಹಿತ್ಯದ ಕೊಡುಗೆಗಳ ಮೂಲಕ ಎಲ್ಲರ ಪ್ರೀತಿಗೆ, ಪ್ರಶಂಸೆಗೆ ಪಾತ್ರರಾಗಿದ್ದರು.

ಬಸವನಾಳರ ಸಾಹಿತ್ಯ ಸೇವೆಯಲ್ಲಿ ಅವರು ವಚನ ಸಾಹಿತ್ಯವನ್ನು ಕನ್ನಡೇತರರಿಗೆ ಪರಿಚಯ ಮಾಡಿಕೊಡಲು ಪ್ರಯತ್ನಿಸಿದುದನ್ನೂ ಇಲ್ಲಿ ನೆನೆಯಬೇಕು. ಪ್ರೊಫೆಸರ್ ಕೆ.ಆರ್. ಶ್ರೀನಿವಾಸ ಅಯ್ಯಂಗಾರರೊಂದಿಗೆ ಬಸವಣ್ಣನವರ ಕೆಲವು ವಚನಗಳನ್ನು ಇಂಗ್ಲಿಷಿಗೆ ಅನುವಾದಿಸಿ ‘ಮ್ಯೂಜಿಂಗ್ಸ್ ಆಫ್ ಬಸವ’ ಎಂಬ ಚಿಕ್ಕ ಗ್ರಂಥವನ್ನು ಪ್ರಕಟಿಸಿರುವರು. ಅಲ್ಲಿಯ ವಚನಗಳ ಭಾಷಾಂತರ, ಪ್ರಸ್ತಾವನೆ ಇವು ಇಂಗ್ಲಿಷ್ ಸಾಹಿತಿಗಳಿಗೆ ಕನ್ನಡದ ವೈಶಿಷ್ಟವನ್ನು ತೋರಿಸಿ ಕೊಡುವಂಥವು. ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಮುಖಪತ್ರಿಕೆಯಾಗಿದ್ದ ‘ಸಾಹಿತ್ಯ ಸಮಿತಿ ಪತ್ರಿಕೆ’ಯಲ್ಲಿಯೂ ಕನ್ನಡದ ಜೊತೆಗೆ ಕೆಲವು ಇಂಗ್ಲಿಷ್ ಲೇಖನಗಳನ್ನು ಬಸವನಾಳರು ಬರೆದರು. ಇವು ಕೂಡ ಕನ್ನಡೇತರರಿಗೆ ತುಂಬ ಉಪಯುಕ್ತವಾಗಿವೆ.

ವಿವಿಧ ಮುಖವಾದ ಕಾರ್ಯ

ಬಸವನಾಳರು ಹಾಗೂ ಅವರ ಸ್ನೇಹಿತರು ಮೊದಲೇ ಯೋಚಿಸಿಕೊಂಡಂತೆ ಹೊರನಾಡಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲಿ ಯಶಸ್ವಿಯಾದರು. ಸೊಲ್ಲಾಪುರದ ಕಾಡಾದಿ ಹೈಸ್ಕೂಲು, ಬಾರ್ಸಿಯ ಸಿಲ್ವರ್ ಜ್ಯೂಬಲಿ ಹೈಸ್ಕೂಲು, ಅಕ್ಕಲ ಕೋಟೆಯ ಮಂಗರೂಳೆ ಹೈಸ್ಕೂಲು ಒಂದೊಂದಾಗಿ ಅಸ್ತಿತ್ವಕ್ಕೆ ಬಂದವು. ಸೊಲ್ಲಾಪುರದಲ್ಲಿ ಕೆ.ಎಲ್.ಇ. ಸೊಸೈಟಿಯ ಮೂಲಕವೇ ಸಂಗಮೇಶ್ವರ ಕಾಲೇಜನ್ನು ತೆರೆಯಲಾಗಿತ್ತು. ಅದನ್ನೀಗ ಸ್ಥಳೀಯರು ನಡೆಸಿಕೊಂಡು ಹೋಗುತ್ತಿದ್ದಾರೆ.

ಕೆ.ಎಲ್.ಇ. ಸೊಸೈಟಿಗೆ ಒಂದು ಮುದ್ರಣಾಲಯದ ಅವಶ್ಯಕತೆಯಿತ್ತು. ಅದು ಬಸವನಾಳ ಮತ್ತು ಕಟ್ಟೀಮನಿಯವರ ಪ್ರಯತ್ನದಿಂದ ಪೂರೈಸಲ್ಪಟ್ಟಿತು. ಧಾರವಾಡದಲ್ಲಿ ಅವರ ಸಂಸ್ಥೆಯ ತೋಂಟದಾರ್ಯ ಮುದ್ರಣಾಲಯ ಸ್ಥಾಪಿಸಲ್ಪಟ್ಟಿತು. ಮೊದ ಮೊದಲಿಗೆ ಸಾಲ ಮಾಡಿ ಅದನ್ನು ನಡೆಸಿಕೊಂಡು ಬಂದರು. ಈಗ ಅದು ಒಂದು ಉತ್ತಮ ಮುದ್ರಣಾಲಯವಾಗಿದೆ.

ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾಗಿ ಆ ಮಟ್ಟದಲ್ಲಿಯೂ ಬಸವನಾಳರು ಕಾರ್ಯ ಮಾಡಿರುವರು. ಸುಮಾರು ೨೦ ವರ್ಷಗಳ ಕಾಲ ಪಠ್ಯಪುಸ್ತಕಗಳ ಸಮಿತಿಯ ಸದಸ್ಯರಾಗಿ ಪಠ್ಯಪುಸ್ತಕಗಳ ಸುಧಾರಣೆಗೆ ಬಹುವಾಗಿ ಶ್ರಮಿಸಿದರು. ಇಷ್ಟು ದೀರ್ಘಕಾಲ ಆ ಸಮಿತಿಯ ಸದಸ್ಯರಾಗಿ ಕಾರ್ಯ ಮಾಡಿದವರು ಬಹುಶಃ ಇನ್ನೊಬ್ಬನಿಲ್ಲ.

ಕರ್ನಾಟಕ ಕೋ-ಆಪರೇಟೀವ್ ಇನ್‌ಸ್ಟಿಟ್ಯೂಟಿನ ಸದಸ್ಯರಾಗಿ, ಕೆಲ ಕಾಲ ಅದರ ಗೌರವ ಕಾರ್ಯದರ್ಶಿಗಳೂ ಆಗಿ ಸೇವೆ ಸಲ್ಲಿಸಿದ್ದುಂಟು. ಅಷ್ಟಲ್ಲದೆ ಆ ಸಂಸ್ಥೆಯಿಂದ ಸ್ಥಾಪಿತವಾದ ಸಹಕಾರಿ ಶಾಲೆಯ ಪ್ರಾಚಾರ್ಯರಾಗಿಯೂ ದುಡಿದರು. ಧಾರವಾಡದ ಕರ್ನಾಟಕ ಸೆಂಟ್ರಲ್ ಬ್ಯಾಂಕಿನ ಪ್ರಥಮ ಮ್ಯಾನೇಜಿಂಗ್ ಡೈರೆಕ್ಟರರಾಗಿ ಕಾರ್ಯ ಮಾಡಿದ ವಿಷಯ ಈ ಮೊದಲೇ ಪ್ರಸ್ತಾಪಿತವಾಗಿದೆ. ಸಹಕಾರ ರಂಗದಲ್ಲಿಯೂ ಬಸವನಾಳರು ಕಾರ್ಯ ಮಾಡಿದ್ದುದು ಒಂದು ವಿಶೇಷ.

ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯ ಚಳವಳಿಗೆ ಬಸವನಾಳರು ಹೊಸ ಚೈತನ್ಯವನ್ನು ನೀಡಿದರು. ಆಗ ರಚಿತವಾದ ಕರ್ನಾಟಕ ವಿಶ್ವವಿದ್ಯಾಲಯ ಸಮಿತಿಯ ಸದಸ್ಯರಾಗಿ ಬಿಡುವಿಲ್ಲದೆ ದುಡಿದರು. ನ್ಯಾಯಮೂರ್ತಿ ಲೋಕೂರ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಕರ್ನಾಟಕ ವಿಶ್ವವಿದ್ಯಾಲಯ ಸಮಿತಿಯು ಒಪ್ಪಿಸಿದ ವರದಿಯನ್ನು ಸ್ವೀಕರಿಸಿ, ಮುಂಬಯಿ ಸರಕಾರವು ೧೯೪೯ರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಹಿಸಿದ ಬಸವನಾಳರು ೧೯೫೦ರಲ್ಲಿ ನಡೆದ ಸೆನೆಟ್, ಸಿಂಡಿಕೇಟ್ ಮತ್ತು ಅಕಾಡಮಿಕ್ ಕೌನ್ಸಿಲ್‌ಗಳ ಚುನಾವಣೆಗಳಲ್ಲಿ ಆಯ್ಕೆಯಾಗಿ ಅದರ ಬೆಳವಣಿಗೆಯ ಕಾರ್ಯದಲ್ಲಿ ಪಾಲ್ಗೊಂಡರು. ತಮ್ಮ ಜೀವನದ ಕೊನೆಯ ಗಳಿಗೆಯವರೆಗೂ ಅದರ ಶ್ರೇಯಸ್ಸಿಗಾಗಿ ಶ್ರಮಿಸಿದರು.

ಕುಟುಂಬ ವತ್ಸಲರು

ವಿದ್ಯಾರ್ಥಿಯಾಗಿದ್ದಾಗಲೇ ತಂದೆತಾಯಿಗಳನ್ನು ಕಳೆದುಕೊಂಡ ಬಸವನಾಳರು, ಶಿಕ್ಷಕ ವ್ರತ್ತಿ ಕೈಗೊಂಡ ಮೇಲೆ ತಮ್ಮ, ತಂಗಿಯರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಂಡರು. ಇದ್ದ ಒಬ್ಬ ತಮ್ಮನನ್ನು ಓದಿಸುವುದರಲ್ಲಿ ಆಸ್ಥೆ ವಹಿಸಿದರು. ಬಸವನಾಳರ ತಮ್ಮಂದಿರಾದ ವಿರೂಪಾಕ್ಷಪ್ಪ ನವರಿಗೆ ಚಿಕ್ಕಂದಿನಿಂದಲೂ ತಮ್ಮ ಅಣ್ಣನವರಲ್ಲಿ ಅಪಾರ ಗೌರವ, ಅವರು ಅಣ್ಣನವರ ನೆರಳಿನಲ್ಲಿದ್ದು ಬಿ.ಎ.,ಎಲ್.ಎಲ್.ಬಿ ವರೆಗೆ ಓದಿ ವಕೀಲರಾದರು. ಅಣ್ಣನವರ ಸಾಮಾಜಿಕ, ಸಾಹಿತ್ಯ ಕಾರ್ಯಕ್ಕೆ ಅಡೆತಡೆಯಾಗದಂತೆ ಕೌಟುಂಬಿಕ ಹೊಣೆಯನ್ನು ಹೊತ್ತುಕೊಂಡರು.

ಬಸವನಾಳರ ಮದುವೆ ೧೯೨೦ರ ಮೇ ೧೦ ರಂದು ನೆರವೇರಿತು. ಅವರ ಧರ್ಮಪತ್ನಿ ಶ್ರೀಮತಿ ಶಾಂತಕ್ಕನವರು ಬಸವನಾಳರಿಗೆ ಅನುರೂಪಳಾದ ಪತ್ನಿ. ಅವರಿಗೆ ನಾಲ್ಕು ಜನ ಗಂಡುಮಕ್ಕಳು ಮತ್ತು ಆರುಜನ ಹೆಣ್ಣುಮಕ್ಕಳು.

ಲಿಂಗರಾಜ ಕಾಲೇಜಿನ ಪ್ರೊಫೆಸರ್ ವೃತ್ತಿಯಿಂದ ನಿವೃತ್ತರಾದ ಮೇಲೆ ಬಸವನಾಳರು ಧಾರವಾಡಕ್ಕೆ ಬಂದು ನೆಲಸಿದರು. ಉಳವಿ ಬಸವನ ಗುಡ್ಡದಲ್ಲಿ ಮನೆ ಮಾಡಿಕೊಂಡು, ರವೀಂದ್ರ ಮುದ್ರಣಾಲಯ ಸ್ಥಾಪಿಸಿ ಕೊಂಡು, ‘ಜಯಕರ್ನಾಟಕ’ ಪತ್ರಿಕೆ ನಡೆಸುತ್ತ, ತಮ್ಮ ಸಾಹಿತ್ಯ ಸಂಶೋಧನೆ ಕಾರ್ಯ ಮುಂದುವರಿಸಿದರು.

೧೯೫೧ನೆಯ ಇಸವಿ ಡಿಸೆಂಬರ್, ಹುಬ್ಬಳ್ಳಿಯಲ್ಲಿ ಕಾಡಸಿದ್ಧೇಶ್ವರ ಕಾಲೇಜ್ ಪ್ರಾರಂಭಿಸುವುದರ ಸಿದ್ಧತೆ ನಡೆಯಿತು. ಬಸವನಾಳರು ಅದರ ನಿಯೋಜಿತ ಪ್ರಿನ್ಸಿಪಾಲರು. ಡಿಸೆಂಬರ್ ೨೨ನೆಯ ತಾರೀಖಿನಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಕೂಡಿತು. ಬಸವನಾಳರು ಭಾಗವಹಿಸಿದರು; ಚರ್ಚಿಸಿದರು. ಇದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಸಭೆಗೆ ಅತಂಕವಾಗದಂತೆ ಹೊರಬಂದರು. ಸ್ನೇಹಿತರ ಕಾರು ಹತ್ತಿ ಡಾಕ್ಟರರ ಕಡೆಗೆ ಹೋದರು. ಡಾಕ್ಟರರು ಚುಚ್ಚುಮದ್ದು ಕೊಟ್ಟು ವಿಶ್ರಾಂತಿ ಪಡೆಯಲು ಹೇಳಿದರು ಮನೆಗೆ ಬಂದರು. ಕಾಫಿ ಮಾಡಲು ಹೇಳಿ ಹಾಸಿಗೆಗೆ ನಡೆದರು. ಅವರ ಅಲ್ಲಿಯ ವಿಶ್ರಾಂತಿ ಚಿರವಿಶ್ರಾಂತಿಯೇ ಆಯಿತು.

ಕನ್ನಡದ ಮಹಾಪುರುಷ

ಬಸವನಾಳರು ಈ ಶತಮಾನದಲ್ಲಿ ಆಗಿಹೋದ ನ್ನಡದ ಮಹಾಪುರುಷರಲ್ಲೊಬ್ಬರು.

ಪ್ರಶಾಂತಚಿತ್ತದ, ಹಿತಮಿತವಚನದ, ಗಂಭೀರ ಚಿಂತನೆಯ, ಸೌಹಾರ್ದಭಾವದ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾದವರು ವಿರಳ. ಶುಭ್ರ ಧೋತರ, ಕೋಟು, ರುಮಾಲು ಧರಿಸಿದ ಅವರನ್ನು ಒಮ್ಮೆ ನೋಡಿದರೆ ಸಾಕು, ನಮ್ಮ ಮನೋಮಂದಿರದಲ್ಲಿ ಅವರ ಮೂರ್ತಿ ಸ್ಥಿರವಾಗಿ ನಿಲ್ಲುವಂತಹುದು. ತಮ್ಮ ಶೈಕ್ಷಣಿಕ ಹಾಗೂ ಸಾಹಿತ್ಯದ ಸೇವೆಯಿಂದ ಅವರು ಚಿರಂತನವಾಗಿ ಕನ್ನಡಿಗರೆದೆಯಲ್ಲಿ ನೆಲೆಸಿ ನಿಂತ ಮಹಾನುಭಾವರು, ನಿತ್ಯ ಸ್ಮರಣಿಯರು,