ಜನನ : ೧೧-೧೧-೧೯೧೫ ರಂದು

ಮನೆತನ : ಒಳ್ಳೆಯ ಸುಸಂಸ್ಕೃತ ಮನೆತನ. ತಂದೆ ಶಿವಕಥಾ ಪಂಡಿತ. ಕೀರ್ತನಾಲಂಕಾರ ಆ|| ವಿ|| ಜಿ. ನಂಜುಂಡಾರಾಧ್ಯ ಶಾಸ್ತ್ರಿಗಳು, ತಾಯಿ ಸಾಹಿತ್ಯ ಭೂಷಿಣಿ ಕಾತ್ಯಾಯಿನಿದೇವಿ. ಜಂಗಮ ಮಠದ ಮನೆತನ.

ಗುರುಪರಂಪರೆ : ಕೀರ್ತನ ಶಿಕ್ಷಣ ತಂದೆಯವರಿದಂದಲೇ. ಸಂಗೀತ ತಾಯಿಯವರಿಂದ. ದೊಡ್ಡಗುಣಿ ಪಟ್ಟದ ದೇವರು ವಿರೂಪಾಕ್ಷ ಶಾಸ್ತ್ರಿಗಳು ಸಂಸ್ಕೃತ ವೇದಾಧ್ಯಯನ ಮಾಡಿಸಿದ ಗುರುಗಳು, ಆಸ್ಥಾನ ವಿದ್ವಾನ್ ಖಾಜಾ ಸಾಹೇಬರಲ್ಲಿ ಹಾಗೂ ಅಬ್ದುಲ್ ಕರೀಂಖಾನ್‌ರ ಶಿಷ್ಯರಾದ ಮಾನೆಯವರಲ್ಲಿ ಹಿಂದುಸ್ಥಾನಿ ಸಂಗೀತಾಭ್ಯಾಸ. ಅಣ್ಣ ಲೆಕ್ಕದಯ್ಯ ಸ್ವಾಮಿಗಳಿಂದ ಮಾರ್ಗದರ್ಶನ.

ಕ್ಷೇತ್ರ ಸಾಧನೆ : ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಪ್ರಪ್ರಥಮ ಶಿವಕಥಾ ಕಾರ್ಯಕ್ರಮ. ಅಲ್ಲಿಂದ ಇವರು ಹಿಂದಿರುಗಿ ನೋಡಲೇ ಇಲ್ಲ. ಯಶಸ್ಸಿನ ಸೋಪಾನವನ್ನು ಏರುತ್ತಲೆ ಹೋದರು. ಭಾರತ ವಾರ್ತಾ ಮತ್ತು ಪ್ರಚಾರ ಇಲಾಖೆಯ ನಿಯೋಜಿತ ಕಲಾವಿದರಾಗಿ ಭಾರತಾದ್ಯಂತ ಸಂಚರಿಸಿ ಕೀರ್ತನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಆಕಾಶವಾಣಿ – ದೂರದರ್ಶನ ಕೇಂದ್ರದ ಕಲಾವಿದರು. ಅಮೆರಿಕದ ’ವಿಶ್ವವಿದ್ಯಾಲಯ ಸಾಕ್ಷ್ಯ ಚಿತ್ರ ತಂಡ’ದವರು (ನ್ಯೂಯಾರ್ಕ್‌) ಇವರ ’ಕೋಳೂರು ಕೊಡಗೂಸು’ ಕಥೆಯನ್ನು ೪೫ ನಿಮಿಷಗಳ ದೃಶ್ಯ – ಶ್ರವ್ಯ ಮುದ್ರಿಕೆಯನ್ನಾಗಿ ಚಿತ್ರೀಕರಿಸಿರುತ್ತಾರೆ. ಮೈಸೂರು ಅರಮನೆಯಲ್ಲಿ ಮಹಾರಾಜರ ಸಮ್ಮುಖದಲ್ಲಿ ಹರಿಕಥೆ ಮಾಡಿ ಗೌರವ ಸನ್ಮಾನ ಹೊಂದಿ ’ಆಸ್ಥಾನ ವಿದ್ವಾನ್’ ಪದವಿ ಗಳಿಸಿದ್ದಾರೆ.

೧೯೪೫ ರಲ್ಲಿ ’ಹೇಮರೆಡ್ಡಿ ಮಲ್ಲಮ್ಮನ’ ಕಥೆಯನ್ನೆ ಸತತವಾಗಿ ೧೧೩ ದಿನಗಳ ಕಾಲ ಮೈಸೂರಿನಲ್ಲಿ ನಡೆಸಿ ಶತದಿನೋತ್ಸವವನ್ನು ಆಚರಿಸಿ ಸುವರ್ಣ ಪದಕ, ಶಾಲು ಗೌರವದೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ನಟಕ, ಚಲನಚಿತ್ರ ರಂಗಗಳಲ್ಲೂ ಕೃಷಿ ಮಾಡಿ ಅನೇಕ ನಾಟಕ ಸಂಸ್ಥೆಗಳಲ್ಲಿ ಪಾತ್ರವಹಿಸಿದ್ದೇ ಅಲ್ಲದೆ ತಮ್ಮದೇ ಆದ “ಮಾರುತಿ ವಿಲಾಸ ನಾಟ್ಯ ಸಂಸ್ಥೆ”ಯನ್ನು ಸ್ಥಾಪಿಸಿ ಕೆಲಕಾಲ ನಡೆಸಿದರು. ’ಜಗಜ್ಯೋತಿ ಬಸವೇಶ್ವರ’. ’ಅಬಚೂರಿನ ಪೊಸ್ಟಾಫೀಸು’ ಮುಂತಾದ ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಸಂಚರಿಸಿ ಸಹಸ್ರಾರು ಕೀರ್ತನ ಕಾಯ್ಕ್ರಮಗಳನ್ನು ನಡೆಸಿರುತ್ತಾರೆ. ತಮ್ಮ ೨೦ನೇ ವಯಸ್ಸಿನಲ್ಲಿ ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸಿ ಕೀರ್ತನ ಮಾದ್ಯಮದ ಮೂಲಕವೇ ಜನಜಾಗೃತಿಯನ್ನುಂಟು ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಪಾತ್ರರಾದರು. ದೆಹಲಿಯಲ್ಲಿ ನಡೆದ ’ದಿ ವರ್ಲ್ಡ್‌ಯೂನಿವರ್ಸಿಟಿ ಫಿಲಾಸಫಿ’ ಸಂಸ್ಥೆಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಏಕೈಕ ಕಲಾವಿದರೆನಿಸಿದರು. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದರು.

ಪ್ರಶಸ್ತಿ – ಸನ್ಮಾನ : ದೆಹಲಿಯಲ್ಲಿ ಬಿ. ಡಿ. ಜತ್ತಿಯವರ ನೇತೃತ್ವದಲ್ಲಿ ಮುಖ್ಯ ನ್ಯಾಯಾಧೀಶ ತಾತಾಚಾರಿಯವರ ಅಧ್ಯಕ್ಷತೆಯಲ್ಲಿ ಇವರನ್ನು ಸನ್ಮಾನಿಸಲಾಯಿತು. ಶರಣ ಸಾಹಿತ್ಯ ಪರಿಷತ್ತು ಇತರ ಅನೇಕ ಸಂಸ್ಥೆಗಳು ವೀರಶೈವ ಮಠಗಳು ಕೂಡ ಇವರನ್ನು ಸನ್ಮಾನಿಸಿ ’ನವರಸ ಕೀರ್ತನಾಲಂಕಾರ’ ’ಕೀರ್ತನ ಕಲಾಪ್ರವೀಣ’ ’ಕೀರ್ತನ ಕಲಾ ಸಾರ್ವಭೌಮ’, ’ಕೀರ್ತನ ಕೇಸರಿ’ ಎಂಬ ಬಿರುದುಗಳೊಂದಿಗೆ ಗೌರವಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೮೭-೮೮ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.

೧೯೯೧ ರಲ್ಲಿ ಶಿವಲಿಂಗಸ್ವಾಮಿ ಹಿರೇಮಠ ಅವರು ಲಿಂಗೈಕ್ಯರಾದರು.