Categories
ಪರಿಸರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶಿವಾಜಿ ಛತ್ರಪ್ಪ ಕಾಗಣಿಕ‌ರ್

ಸಮಾಜಸೇವೆಯೇ ಭಗವಂತನ ಸೇವೆಯೆಂಬ ದಿವ್ಯನಂಬಿಕೆಯಲ್ಲಿ ಸೇವಾನಿರತರಾಗಿರುವವರು ಶಿವಾಜಿ ಛತ್ರಪ್ಪ ಕಾಗಣಿಕ‌. ಬೆಳಗಾವಿ ಜಿಲ್ಲೆಯ ಅಣ್ಣಾಹಜಾರೆಯೆಂದೇ ಜನಜನಿತರು.
ಬೆಳಗಾವಿ ತಾಲ್ಲೂಕಿನ ಕಟ್ಟನಭಾವಿ ಶಿವಾಜಿ ಕಾಗಣಿಕರ್‌ರ ಹುಟ್ಟೂರು. ಬಿಎಸ್ಸಿ ಪದವೀಧರರಾದ ಕಾಗಣಿಕ‌ ಬಾಲ್ಯದಿಂದಲೂ ಸಮಾಜಸೇವಾಸಕ್ತರು. ಪರಿಸರ ಅಧ್ಯಯನ, ಸಮಾಜಸೇವೆಯಲ್ಲಿ ಕ್ರಿಯಾಶೀಲರು. ಗಾಂಧಿವಾದದ ಅನುಯಾಯಿಯಾದ ಕಾಗಣಿಕ‌ ೧೯ನೇ ವಯಸ್ಸಿನಲ್ಲಿ ೧೯೬೮ರಲ್ಲಿ ಜನ ಜಾಗ್ರಣ ಸಂಸ್ಥೆಯನ್ನು ಸ್ಥಾಪಿಸಿ ಹಳ್ಳಿಗರಲ್ಲಿ ಶಿಕ್ಷಣ, ನೀರಿನ ಸಂರಕ್ಷಣೆ ಜೊತೆಗೆ ಗ್ರಾಮೀಣ ಜನಪದದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದ್ದು ಮೊದಲ ಸಾಮಾಜಿಕ ಹೆಜ್ಜೆ. ಆನಂತರ ಗ್ರಾಮದಲ್ಲಿ ರಾತ್ರಿ ಶಾಲೆಯ ಸ್ಥಾಪನೆ. ಹಳ್ಳಿಯ ಅಡುಗೆ ಮನೆಗಳನ್ನು ಹೊಗೆರಹಿತ ಮಾಡಲು ೬೦ಕ್ಕೂ ಅಧಿಕ ಜೈವಿಕ ಇಂಧನ ಘಟಕಗಳ ಸ್ಥಾಪನೆ. ಮಹಿಳಾ ಸಬಲೀಕರಣ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಬದಲಾವಣೆಗೆ ಐದು ದಶಕಗಳಿಂದ ಕಾರ್ಯೋನ್ಮುಖರಾಗಿ ಅವಿರತ ಶ್ರಮಿಸುತ್ತಿರುವ ಕಾಗಣಿಕ‌ ಅವರ ನಡೆ-ನುಡಿ- ವೇಷಭೂಷಣವೆಲ್ಲವೂ ಗಾಂಧಿಮಯ. ಗಾಮೀಣಾಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿರುವ ಶಿವಾಜಿ ಛತ್ರಪ್ಪ ಕಾಗಣಿಕ‌ ಪ್ರತಿಷ್ಠಿತ ದೇವರಾಜು ಅರಸು ಪ್ರಶಸ್ತಿಯಿಂದ ಭೂಷಿತರು. ೬೯ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ಅನುದಿನ ಅನುಕ್ಷಣ ನಿರತರಾಗಿರುವ ನಿಸ್ವಾರ್ಥ ಜೀವಿ.