ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಜನಿಸಿ (೨೬-೪-೧೯೨೭), ಧಾರವಾಡ ಆಕಾಶವಾಣಿ ನಿಲಯದ ಕಲಾವಿದರಾಗಿದ್ದ ಖ್ಯಾತ ಸಿತಾರ ವಾದಕ ಪಂ. ಆರ್. ವಿ. ಗುಡಿಹಾಳ ಹಾಗೂ ಮುಂಬೈಯ ವಿಖ್ಯಾತ ಸಂಗೀತಗಾರ ಉಸ್ತಾದ್‌ ಝಿಯಾ ಮೋಹಿಯುದ್ದೀನ್‌ ಡಾಗರ್ ಅವರುಗಳ ಸಿತಾರ ವಾದನದಲ್ಲಿ ಉನ್ನತ ಶಿಕ್ಷಣ ಪಡೆದು ವಿಖ್ಯಾತ ಹಿಂದೂಸ್ಥಾನಿ ಗಾಯಕ ಪಂ. ಮಲ್ಲಿಕಾರ್ಜುನ ಮನಸೂರ ಅವರಲ್ಲಿ ಅನೇಕ ವರ್ಷ ರಾಗ-ರಾಗಿಣಿ ವಿಷಯದಲ್ಲಿ ಮಾರ್ಗದಶ್ನ ಪಡೆದ ಧಾರವಾಡದ ಪ್ರೊ. ಶಿವಾನಂದ ತರಲಗಟ್ಟೆಯವರು ಕರ್ನಾಟಕದ ಹೆಸರಾಂತ ಸಿತಾರ ವಾದಕರಲ್ಲೊಬ್ಬರಾಗಿದ್ದಾರೆ.

ಸಿತಾರ ವಾದನದಲ್ಲಿ ಕಠಿಣ ತಮ್ಮ ರಿಯಾಜ್‌ ಮಾಡಿ ಮುಂಬೈಯ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದಿಂದ ಸಿತಾರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅನೇಕ ವರ್ಷಗಳ ಕಾಲ ಧಾರವಾಡದ ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಸಿತಾರ ಅಧ್ಯಾಪಕರಾಗಿ, ವಿಶ್ವವಿದ್ಯಾಲಯದ ಸಂಗೀತ ಮಹಾ ವಿದ್ಯಾಲಯದ ಸಿತಾರ ಪ್ರಾಧ್ಯಾಪಕರಾಗಿ ಸೇವೆ ಮಾಡಿರುವ ಅವರು ಅನೇಕ ದೇಶಗಳಲ್ಲಿ ಸಿತಾರ ಕಛೇರಿ ನೀಡಿ ಭಾರತದ ಸಾಂಸ್ಕೃತಿಕ ರಾಯಭಾರಿ ಎನಿಸಿದ್ದಾರೆ.

ಜೈಪುರ-ಅತ್ರೌಲಿಯ ಗಾಯಕಿ ಅಂಗದಿಂದ ಸಿತಾರ ನುಡಿಸುವ ಅವರು ಅನೇಕ ವರ್ಷಗಳಿಂದ ಪ್ರತಿವರ್ಷ ಫ್ರಾನ್ಸ್ ದೇಶದಲ್ಲಿ, ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಸಿತಾರ ಕಛೇರಿ ಹಾಗೂ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇಂಗ್ಲೆಂಡ್‌, ಸ್ವಿಡ್ಜರ್ ಲ್ಯಾಂಡ್‌, ದಕ್ಷಿಣ ಅಮೇರಿಕೆಯ ಅನೇಕ ಕಡೆಗಳಲ್ಲಿ ಸಿತಾರ ಕಛೇರಿ ನೀಡಿ ಭಾರತೀರ ಸಿತಾರ ವಾದನಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ. ಆಕಾಶವಾಣಿ ಕಲಾವಿದರೂ ಆಗಿರುವ ಅವರಲ್ಲಿ ಸಿತಾರ ಶಿಕ್ಷಣ ಪಡೆದ ಫ್ರಾನ್ಸಿನ ಶ್ರೀಮತಿ ಲೂಯಿಸ್‌ ಗನೇಲ್‌ ಹಾಗೂ ಮಗ ಡಾ. ಮಲ್ಲಿಕಾರ್ಜುನ ತರಲಗಟ್ಟಿ ಸಿತಾರ ವಾದನದಲ್ಲಿ ಅಪಾರ ಹೆಸರು ಪಡೆದಿದ್ದಾರೆ. ಡಾ. ಮಲ್ಲಿಕಾರ್ಜುನ ತರಲಗಟ್ಟಿಯವರು ಸಿತಾರ ವಾದನದಲ್ಲಿ ಸ್ನಾತಕೋತ್ತರ ಪದವಿ, ಪಿ.ಎಚ್‌.ಡಿ., ಪದವಿ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಂಗೀತ ಮಹಾ ವಿದ್ಯಾಲಯದಲ್ಲಿ ಸಿತಾರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಸಂಗೀತಶಾಸ್ತ್ರ ಪರಿಚಯ ಭಾಗ-೧ ಹಾಗೂ ಸಂಗೀತಶಾಸ್ತ್ರ ಎಂಬ ಎರಡು ಪುಸ್ತಕ ಬರೆದಿರುವ ಪ್ರೊ. ಶಿವಾನಂದ ತರಲಗಟ್ಟಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.