“ಸಾಧುಗಳ ಸಹಜ ಪಥವಿದು: ಆನಂದದಿಂದಿರುವುದು”.

-ಹೀಗೆ ಹಾಡಿದವರು ಶಿಶುನಾಳ ಶರೀಫರು. ಅವರು ಬಾಳಿದ್ದೂ ಹಾಗೆಯೇ. ಸಂಸಾರದಲ್ಲಿ ಇದ್ದೂ ಅವರು “ಸಾಧು” ಆಗಿದ್ದರು. ಬಾಳಿನಲ್ಲಿ ಬಗೆಬಗೆಯ ಕಷ್ಟ ಎದುರಿಸಿಯೂ ಅವರು ಆನಂದದಿಂದ ಇದ್ದರು. ಅವರು ಆನಂದವು ಹೊರಗಿನ ವಸ್ತುಗಳನ್ನು ಅವಲಂಬಿಸಿರಲಿಲ್ಲ. ಶರೀಫರು ಸಂಸಾರದ ಬೇಕು-ಬೇಡಗಳನ್ನು ಸಾಕುಮಾಡಿ ಲೋಕದೊಳಗೆ ಏಕವಾಗಿ ಬಾಳಿದ ಸಾಧು. ಶಿಶುನಾಳದೀಶನ ಬೆಳಕಿನೊಳಗೆ ಬೆಳಗಿದ ವರಕವಿ. ಹಳ್ಳಿಯ ಜನರ ಬಾಳಿನೊಂದಿಗೆ ಒಂದಾಗಿ ಅಲ್ಲಿ ಕಂಡ ಸನ್ನಿವೇಶಗಳನ್ನು, ಉಂಡ ಅನುಭವವನ್ನು ಆಡುನುಡಿಯಲ್ಲಿ ಪರಮಾತ್ಮನ ಲೀಲೆಯನ್ನು ಕಂಡು ಅವುಗಳಿಗೆ ಹಳ್ಳಿಯ ಜನರ ಹಬ್ಬ ಹುಣ್ಣಿಮೆಗಳಲ್ಲಿ ಆಟ-ನೋಟಗಳಲ್ಲಿ ಒಂದಾಗಿ ಬೆರೆತು ಹಳ್ಳಿಗರ ನಲಿವನ್ನು ಹೆಚ್ಚಿಸಿದ ರಸಿಕ. ತನ್ನ ಬದುಕು ಮತ್ತು ಹಾಡುಗಳ ಮೂಲಕ ಹಿರಿಯ ಜ್ಞಾನಿಗಳ, ಅನುಭಾವಿಗಳ ಮೆಚ್ಚುಗೆಗೆ ಪಾತ್ರವಾದ ಘನತೆಯುಳ್ಳ ವ್ಯಕ್ತಿ.

ಕಬೀರರಂತೆ

ಇಂತಹ ಶರೀಫರು ಕರ್ನಾಟಕದ ಪುಣ್ಯ ಪುರಷರಲ್ಲಿ ಒಬ್ಬರು. ಇಡೀಯ ಭಾರತದ ಪುಣ್ಯ ಪುರುಷರ ಸಾಲಿಗೆ ಸೇರುವ ಹಿರಿಮೆಯುಳ್ಳವರು. ಜಾತಿ-ಮತ-ಪಂಥಗಳ ಮೇರೆಯನ್ನು ಮೀರಿನಿಂತ ಎತ್ತರ ಮಟ್ಟದ ಮಾನವರು, ದೈವ ಭಕ್ತರು.

“ಎಲ್ಲ ಧರ್ಮಗಳ ದೇವರು ಒಬ್ಬನೇ” ಎಂಬ ಸಂದೇಶ ಉತ್ತರ ಹಿಂದುಸ್ತಾನದ ಕಬೀರ, ಕರ್ನಾಟಕದ ಶರೀಫ ಇವರುಗಳ ಬಾಳಿನಲ್ಲಿ ಬೆಳಗಿತು.

ಶರೀಫರು ಹುಟ್ಟಿದ್ದು ಒಂದು ಜಾತಿಯಲ್ಲಿ. ರೂಢಿಸಿಕೊಂಡಿದ್ದು ಬೇರೊಂದು ಧಾರ್ಮಿಕ ತತ್ವವನ್ನು. ಗುರುವನ್ನು ಪಡೆದುಕೊಂಡಿದ್ದು ಇನ್ನೊಂದು ಧರ್ಮದಿಂದ. ಹೀಗಾಗಿ ಆತನು ಜೀವಿಸಿರುವಾಗ ಯಾವ ಒಂದು ಜಾತಿಯವರೂ ಅವರನ್ನು ತಮ್ಮವನೆಂದು ಭಾವಿಸಲಿಲ್ಲ. ಆದರೆ ಆತನು ಮರಣಹೊಂದಿದಾಗ ಆತನ ಹಿರಿಮೆಯನ್ನು ಎಲ್ಲರೂ ಅರಿತುಕೊಂಡರು. ಸಕಲರೂ ಸೇರಿ ಆತನ ಸಮಾಧಿ ಮಾಡಿದರು.

ಸಮಾಧಿಯ ಸಂದೇಶ

ಶರೀಫರ ಸಮಾಧಿಯು ಒಂದು ದೊಡ್ಡದಾದ ಚೌಕ ಆಕಾರದ ಕಟ್ಟೆಯಾಗಿದೆ. ಅಲ್ಲಿ ಎರಡು ಬೇವಿನ ಮರಗಳು ಒಂದಾಗಿ ಕಾಣುವಂತೆ ಬೆಳೆದಿವೆ. ಜೊತೆಗೆ ಮಲ್ಲಿಗೆ ಬಳ್ಳಿಯು ಹಬ್ಬಿವೆ. ಬೇವು ಮಲ್ಲಿಗೆಗಳು ಒಂದನ್ನೊಂದು ಅಪ್ಪಿಕೊಂಡಿವೆ. ಬೇವಿನ ಮರಗಳು ವಿಶಾಲವಾಗಿ ಬೆಳೆದಿವೆ. ಕಟ್ಟೆಯ ತುಂಬ ನೆರಳು ಬೀಳುತ್ತಿದೆ. ಮಲ್ಲಿಗೆಯ ಬಳ್ಳಿಗಳಿಂದ ಗದ್ದಿಗೆ(ಕಟ್ಟೆ)ಯ ಮೇಲೆ ಹೂವು ಸುರಿಯುತ್ತಿವೆ. ಕಟ್ಟೆಯ ಮೇಲೆ ಮುಂಜಾನೆ, ಸಂಜೆ ಪೂಜೆ ಸಲ್ಲುತ್ತಿದೆ. ಪ್ರಾರ್ಥನೆ ನಡೆಯುತ್ತಿದೆ. ಒಂದು ಕಡೆಗೆ ಮುಸಲ್ಮಾನ ಸಂಪ್ರದಾಯದ ಪೂಜೆ ನಡೆಯುತ್ತಿದೆ, ಮತ್ತೊಂದು ಕಡೆ ಹಿಂದೂ ಸಂಪ್ರದಾಯದ ಪೂಜೆ ನಡೆಯುತ್ತಿದೆ. ನಡುವೆ ಒಂದು ದೀಪ ಉರಿಯುತ್ತಿದೆ. “ಇಲ್ಲಿ ಎರಡೆಂಬುದೇ ಇಲ್ಲ. ಎರಡೂ ಒಂದೇ.”ಇದು ಜೀವಾತ್ಮ, ಪರಮಾತ್ಮ ಒಂದು; ಹಿಂದೂ, ಮುಸಲ್ಮಾನ ಒಂದು ಎಂಬುದಕ್ಕೆ ಗುರುತು. ಬೇವು ಕಹಿ, ಮಲ್ಲಿಗೆ ಮಧುರ. ಅವೆರಡೂ ಮಾನವ ಜೀವನದಲ್ಲಿ ಸೇರಿಕೊಂಡಿವೆ ಎಂಬುದೂ ಇಲ್ಲಿಯ ಅರ್ಥ. ಈ ಗದ್ದಿಗೆಯಿರುವ ಪ್ರದೇಶವು ಚೆಲುವಿನ, ನಲಿವಿನ, ಶಾಂತಿಯ ತಾಣವಾಗಿದೆ. ಅದೊಂದು ಯಾತ್ರಾಸ್ಥಳ. ಅಮಾವಾಸ್ಯೆಯ ದಿನ ಸಾವಿರಾರು ಜನರು ಸೇರುತ್ತಾರೆ. ಅವರು ವಿವಿಧ ಜಾತಿ-ಪಂಥಗಳಿಗೆ ಸೇರಿದವರು. ಅವರೆಲ್ಲ ಸೇರಿ ಇಡೀಯ ರಾತ್ರಿ ಭಜನೆ ಮಾಡುತ್ತಾರೆ. ಶರೀಫರ ಹಾಡು ಹೇಳುತ್ತಾರೆ, ಕೇಳುತ್ತಾರೆ. ಅವರ ತತ್ತ್ವಬೋಧೆಯನ್ನು ಅರಿಯುತ್ತಾರೆ. ಸ್ಫೂರ್ತಿಯನ್ನು ಬೆಳಕನ್ನು ಪಡೆಯುತ್ತಾರೆ.

ಈ ಸಮಾಧಿಯಿರುವುದು ಶಿಶುನಾಳ ಗ್ರಾಮದ ಹತ್ತಿರದಲ್ಲಿ. ಶಿಶುನಾಳವು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಅದು ಶರೀಫರು ಹುಟ್ಟಿ ಬೆಳೆದ ಸ್ಥಳ. ಶಿಶುನಾಳವು ಶರೀಫರ ಜನ್ಮ ಭೂಮಿ, ಕರ್ಮಭೂಮಿ, ಪುಣ್ಯಭೂಮಿ.

ವೀರಶೈವ ಧರ್ಮದ ಪರಿಚಯ

ಶಿಶುನಾಳದಲ್ಲಿ ಇಮಾಮಭಾಯಿ ಮತ್ತು ಹಜ್ಜುಮಾ ಎಂಬ ಸಜ್ಜನ ದಂಪತಿಗಳಿದ್ದರು. ಬಹು ಕಾಲದವರೆಗೆ ಅವರಿಗೆ ಮಕ್ಕಳಾಗಿರಲಿಲ್ಲ. ಅವರು ನೆರೆಯ ಹಳ್ಳಿಯಾದ ಹುಲಗೂರಿನ ಹಜರೇಶ ಖಾದರಿ ಅವರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಖಾದರಿ ಅವರು ಕೃಪೆಯಿಂದ ಈ ದಂಪತಿಗಳಿಗೆ ಸಂತಾನ ಪ್ರಾಪ್ತಿಯಾಯಿತು. ಇವರಿಗೆ ೧೮೧೮ ಮಾರ್ಚ್ ೭ ರಂದು ಜನಿಸಿದ ಮಗುವೇ ಶರೀಫ. ಹಜರೇಶ ಖಾದರಿ ಅವರನ್ನು ಶರೀಫರು ತಮ್ಮ ಹಾಡುಗಳಲ್ಲಿ “ಖಾದರಲಿಂಗ” ಎಂದು ಸಂಬೋಧಿಸಿದ್ದಾರೆ.

ಬಾಲಕ ಶರೀಫನಿಗೆ ತಂದೆ ಇಮಾಮಭಾಯಿ ಉರ್ದು ಕಲಿಸಿದರೆ, ನೆರೆಮನೆಯ ವಿಭೂತಿ ಫಕೀರಯ್ಯನವರು ಕನ್ನಡ ಅಕ್ಷರಭ್ಯಾಸ ಮಾಡಿಸಿದರು. ತಂದೆ ತಾಯಿಗಳ ಮೂಲಕ ಹುಲಗೂರಿನ ಹಜರೇಶ ಖಾದರಿ ಅವರ ಬಗೆಗೆ ಬಾಲಕನಲ್ಲಿ ಭಕ್ತಿ ಬೆಳೆಯಿತು. ಫಕೀರಯ್ಯನವರ ಮೂಲಕ ವೀರಶೈವ ಪುರಾಣ ವಚನಗಳ ಪರಿಚಯ ಶರೀಫರಿಗೆ ಒದಗಿ ಬಂದಿತು. ಶಿವಶರಣರಲ್ಲಿ ಪ್ರಭುದೇವನ ಬಗೆಗೆ ಶರೀಫರಿಗೆ ಬಹಳ ಆಕರ್ಷಣೆ ಅನಿಸಿತು. ಶಿಶುನಾಳ ಗ್ರಾಮದೇವತೆ ಬಯಲು ಬಸವಣ್ಣ ಶರೀಫರ ಹಾಡುಗಳಲ್ಲಿ ಬರುವ “ಶಿಶುನಾಳಧೀಶ” ಎಂಬ ಅಂಕಿತವು ಈ ಬಸವಣ್ಣನನ್ನು ಕುರಿತಾದುದು.

ಜನಜೀವನದಲ್ಲಿ ಬೆರೆತರು

ಆ ಕಾಲದಲ್ಲಿ ಈಗಿನಂತೆ ಸಿನಿಮಾ, ರೇಡಿಯೋ, ಪತ್ರಿಕೆಗಳು ಇರಲಿಲ್ಲ. ಶಿಶುನಾಳ ಹಳ್ಳಿಯ ಜನರ ಮನರಂಜನೆಗಾಗಿ, ವಿಕಾಸಕ್ಕಾಗಿ ಕೆಲವು ಸಾಧನಗಳು ಇದ್ದವು. ಭಜನೆಯ ಮೇಳ, ಪುರಾಣ ಹೇಳುವುದು, ಪ್ರವಚನ ಮಾಡುವುದು, ಬಯಲಾಟ ಆಡುವುದು, ಹೋಳೀ ಹಬ್ಬದ, ಮೊಹರಮ್ಮಿನ ಹಾಡು ಹೇಳುವುದು, ಕುಣಿಯುವುದು ಇತ್ಯಾದಿ ಅಂತಹ ಸಾಧನಗಳಾಗಿದ್ದವು. ಶರೀಫರು ಇವುಗಳಲ್ಲಿ ತಮ್ಮ ಆನಂದ ಹೆಚ್ಚಿಸಿಕೊಂಡರು. ಇತರರಿಗೆ ಹರುಷವನ್ನು ಒದಗಿಸಿದರು. ಹಳ್ಳಿಯ ಹಿಂದೂ, ಮುಸಲ್ಮಾನ ಜನರಿಗೆ ಹಾಡು ಬರೆದುಕೊಟ್ಟರು. ಅವರೆಲ್ಲ ಒಟ್ಟಾಗಿ ಸೇರಿ ಹಾಡುವಂತೆ ಮಾಡಿದರು. ದೊಡ್ಡಾಟ ಮಾಡಿಸಿದರು, ಭಜನೆ ಮಾಡಿಸಿದರು. ಹಳ್ಳಿಯ ಜನರಿಗೆ ಅಚ್ಚುಮೆಚ್ಚಿನವರಾದರು.

ಶರೀಫರು ಶಿಕ್ಷಣ ಕನ್ನಡ ಏಳನೇಯ ತರಗತಿಯ ಪರೀಕ್ಷೆಯವರೆಗೆ ಮಾತ್ರ ನಡೆಯಿತು. ಮುಂದೆ ಅವರು ಖಾಸಗಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡಿದರು. ಶಾಲೆಯಲ್ಲಿ ಚಿಕ್ಕವರಿಗೆ, ಶಾಲೆಯ ಹೊರಗೆ ದೊಡ್ಡವರಿಗೆ ವಿದ್ಯಾದಾನ ಮಾಡಿದರು. ಹೀಗೆ ಗ್ರಾಮಜೀವನದಲ್ಲಿ ಒಂದಾಗಿ ಬೆರೆತು ಪ್ರೇಮಕ್ಕೆ, ಗೌರವಕ್ಕೆ ಪಾತ್ರರಾದರು.

ಗುರುವಿಗಾಗಿ

ಈ ಬಗೆಯ ಲೋಕದ ಬಾಳಿನ ಹರುಷವನ್ನು ಪಡೆದ ಶರೀಫರಿಗೆ ಇಷ್ಟರಿಂದಲೇ ತೃಪ್ತಿಯಾಗಲಿಲ್ಲ. ಪರಮಾತ್ಮನ ಸಾಧನೆಯ ದಾರಿಯಲ್ಲಿ ಸಾಗಿ ಆನಂದ ಪಡೆಯುವ ಆಸೆ ಅವರದಾಗಿತ್ತು. ಈ ಬಗೆಯ ಸಾಧನೆಯಲ್ಲಿ ಮುಂದುವರಿಯಬೇಕಾದರೆ ಗುರುವಿನ ಅವಶ್ಯಕತೆ ಅವರಿಗೆ ಕಂಡುಬಂದಿತು. ಗುರುವಿಗಾಗಿ ಹುಡುಕತೊಡಗಿದರು.

ಶಿಶುನಾಳದ ನೆರೆ ಹಳ್ಳಿ ಕಳಸ. ಅಲ್ಲಿ ಗೋವಿಂದ ಭಟ್ಟರು ವಾಸಿಸುತ್ತಿದ್ದರು. ಅವರು ಧಾರ್ಮಿಕರು. ಶಕ್ತಿಯ ಉಪಾಸಕರು. ಸ್ವೇಚ್ಛೆಯಿಂದ ವರ್ತಿಸುವ ಲೀಲಾಮೂರ್ತಿಗಳು. ಶರೀಫರ ಬಾಲ್ಯದಲ್ಲಿ ಅವರಿಗೆ ಹೆಚ್ಚಿನ ಅಕ್ಷರಭ್ಯಾಸ ಮಾಡಿಸಿದವರು ಈ ಗೋವಿಂದ ಭಟ್ಟರೇ. ಶರೀಫರ ತಂದೆ ಇಮಾಮಭಾಯಿ ಮತ್ತು ಗೋವಿಂದಭಟ್ಟರು ಆತ್ಮೀಯ ಗೆಳೆಯರಾಗಿದ್ದರು. ಗುರುವಿನ ಶೋಧನೆಗೆ ತೊಡಗಿದ ಶರೀಫರು ಗೊವಿಂದ ಭಟ್ಟರನ್ನು ಗುರುವೆಂದು ಸ್ವೀಕರಿಸಿದರು. ಕಠಿಣ ಪರೀಕ್ಷೆಯ ನಂತರ ಗೊವಿಂದ ಭಟ್ಟರು ಶರೀಫರನ್ನು ಶಿಷ್ಯರೆಂದು ಸ್ವೀಕರಿಸಿದರು. ಅವರು ಶರೀಫರ ಎದೆಯ ಹೊಲಸನ್ನು ಹಸನುಗೊಳಿಸಿದರು. ಅಲ್ಲಿ ಪರಮಾತ್ಮತತ್ತ್ವ ಎಂಬ ಬೀಜವನ್ನು ಬತ್ತಿದರು. ಅದು ಸಸಿಯಾಗಿ ಮೊಳೆಯಿತು. ನಳನಳಿಸಿ ಬೆಳೆಯತೊಡಗಿತು. ಮುಂದೆ ಅದು ಹೆಮ್ಮರವಾಗಿ ಬೆಳೆಯಿತು. ಆ ಹೆಮ್ಮರದ ನೆರಳಿನಲ್ಲಿ ಅನೇಕ ಜನರು ಆಶ್ರಯ ಪಡೆಯುವಂತಾಯಿತು.

 

ಗೋವಿಂದಭಟ್ಟರು ಶರೀಫರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.

ಸಾಂಸಾರಿಕ ಜೀವನವು ಲೌಕಿಕದ ಬಾಳು. ಪರಮಾತ್ಮ ಸಾಧನೆಯ ಬಾಳನ್ನು ಪಾರಮಾರ್ಥಿಕ ಇಲ್ಲವೆ ಆಧ್ಯಾತ್ಮಿಕ ಜೀವನದ ಮಾರ್ಗದರ್ಶಿ. ಗುರುವನ್ನು ಶರೀಫರು ಆಧ್ಯಾತ್ಮಿಕ ಸಂಸಾರದ ಗಂಡನೆಂದು ಭಾವಿಸಿ ಹಾಡು ರಚಿಸಿದ್ದಾರೆ. ಆ ಗುರುವನ್ನು ಪಡೆದುಕೊಂಡದ್ದು ಗಂಡನ್ನು ಮಾರಿಕೊಂಡಂತೆ ಎಂದು ವರ್ಣಿಸಿದ್ದಾರೆ.

“ನನ್ನೊಳಗೆ ನಾ ತಿಳಕೊಂಡೆ
ನನಗೆ ಬೇಕಾದ ಗಂಡನ್ನ ಮಾಡಿಕೊಂಡೆ
ಆರು ಮಕ್ಕಳನ್ನು ಅಡವಿಗಟ್ಟಿ
ಮೂರು ಮಕ್ಕಳನ್ನು ಬಿಟ್ಟುಗೊಟ್ಟೆ

ಇವನ ಮೇಲೆ ನಾ ಮನಸಿಟ್ಟೆ ಎನ್ನ
ಬದುಕು ಬಾಳನ್ನೆಲ್ಲ ಬಿಟಗೊಟ್ಟೆ

ಶಿವ ಶಿವಯೆಂಬ ಹಾದಿ ಬೇಡಿಕೊಂಡೆ ಈ
ಭವಕ್ಕ ಬಾರದಂಗ ಮಾಡಿಕೊಂಡೆ

ಗುರು ಉಪದೇಶವ ಪಡಕೊಂಡೆನಾ
ಗುರು ಗೊವಿಂದನಾ ಪಾದ ಹಿಡಕೊಂಡೆ.

ಈ ಹಾಡಿನಲ್ಲಿಯ ಪದಗಳು ಸಾಂಕೇತಿಕ ಅರ್ಥದಿಂದ ಕೂಡಿವೆ. “ಗುರುವಿನ ಉಪದೇಶ ಪಡಕೊಂಡೆ; ಗುರು ಗೋವಿಂದನ ಪಾದವ ಹಿಡಕೊಂಡೆ” ಎಂಬ ನುಡಿಯಲ್ಲಿ ಸಹಜವಾದ ಅರ್ಥವಿದೆ. ತನಗೆ ಬೇಕಾದ ಗುರುವನ್ನು ಪಡೆದ ಶರೀಫ “ನನಗೆ ಬೇಕಾದ ಗಂಡನ್ನ ಮಾಡಿಕೊಂಡೆ” ಎಂದಿದ್ದಾರೆ. “ಆರು ಮಕ್ಕಳು”, “ಮೂರು ಮಕ್ಕಳು” ಈ ಪದಗಳಿಗೆ ಸಾಂಕೇತಿಕ ಅರ್ಥವಿದೆ. ಕಾಮ, ಕ್ರೋಧ, ಇತ್ಯಾದಿ ಆರು ವೈರಿಗಳು. ತಾಮಸ, ರಾಜಸ, ಸಾತ್ತ್ವಿಕ ಎಂಬ ಮೂರು ಗುಣಗಳು ಮನುಷ್ಯನನ್ನು ಕಾಡುತ್ತಿವೆ. ಇವುಗಳನ್ನು ತೊರೆದೆ ಎಂದು ಶರೀಫರು ತಮ್ಮ ಹಾಡಿನಲ್ಲಿ ಹೇಳಿದ್ದಾರೆ. ಅವುಗಳನ್ನು ತೊರೆದರೆ ಪರಮಾತ್ಮ ಸಾಧನೆಯಲ್ಲಿ ಮುಂದುವರಿಯುವುದು ಸಾಧ್ಯವಾಗುತ್ತದೆ.

ಗುರುವು ಶಿಷ್ಯನ ಲೋಪದೋಷಗಳನ್ನು ತಿದ್ದುತ್ತಾನೆ, ಅವಗುಣಗಳನ್ನು ತೊಡೆದುಹಾಕುತ್ತಾನೆ. ಹೀಗೆ ಮಾಡುವಾಗ ಆತನು ಶಿಷ್ಯನೊಂದಿಗೆ ನಿಷ್ಠುರವಾಗಿ ನಡೆದುಕೋಳ್ಳಬಹುದು. ಇದನ್ನು ಕುರಿತು ಶರೀಫರು,

……………………………………ನನಗಂಡ
ನಡ-ಮುರಿದೊದೆದೆನ್ನ
ಹುಡುಗಾಟ ಬಿಡಿಸಿ ಹೌದೆನಿಸಿದನೇ”

ಎಂಬುದಾಗಿ ಹಾಡಿದ್ದಾರೆ.

ಗುರುಶಿಷ್ಯ

ಶಿಷ್ಯ ಶರೀಫ ಗುರು ಗೋವಿಂದಭಟ್ಟ ಇವರ ಜೋಡಿಯು ಜೀವನದ ಉದ್ದಕ್ಕೂ ಸಾಗಿತು. ಅವರಿಬ್ಬರಲ್ಲಿ ಪರಸ್ಪರ ವಿಶ್ವಾಸ ಕೊನೆಯವರೆಗೂ ಉಳಿದು ಬಂದಿತು. ಶರೀಫರ ಸಮಾಧಿಯ ಮೇಲೆ ಇವರಿಬ್ಬರ ಮೂರ್ತಿಗಳನ್ನಿಟ್ಟು ಪೂಜಿಸುವ ಸಂಪ್ರದಾಯ ಈಗಲೂ ಉಂಟು.

ಮುಸಲ್ಮಾನ ಮನೆತನದಲ್ಲಿ ಹುಟ್ಟಿದ ಶರೀಫರು,

“ಹಾಕಿದ ಜನಿವಾರವ ಸದ್ಗುರುರಾಯ
ಹಾಕಿದ ಜನಿವಾರವ ಹಾಕಿದ ಜನಿವಾರ
ನೂಕಿದ ಭವಭಾರ
ಬೇಕೆನುತ ಬ್ರಹ್ಮಜ್ಞಾನ ಉಚ್ಚರಿಸೆಂದು”

ಎಂದು ಹಾಡಿದ್ದಾರೆ. ಅವರು ನಿಜವಾಗಿ ಜನಿವಾರ ಧರಿಸಿದ್ದರೋ ಇಲ್ಲವೋ ಎಂಬ ಸಂಗತಿಯು ಮಹತ್ವದ್ದಲ್ಲ. ಮಹಾಪುರುಷರು ಹೊರಗಿನ ಧಾರ್ಮಿಕ ಸಂಕೇತಗಳಿಗೆ ಮಹತ್ವ ಕೊಡುವುದಿಲ್ಲ. “ಜನಿವಾರ” ಎಂಬ ಪದಕ್ಕೆ ಶರೀಫ ಸಂಪ್ರದಾಯದವರು ಹೇಳುವ ಅರ್ಥವು ಬೇರೆ ತರಹದ್ದಾಗಿದೆ. “ಜ”= ಹುಟ್ಟು-ಸಾವು “ನಿವಾರ”= ಅಳಿಯುವುದು. ಹುಟ್ಟು ಸಾವುಗಳ ಬಂಧನವನ್ನು ಮೀರಿ ನಿಲ್ಲುವ ಸ್ಥಿತಿಯನ್ನು ಶರೀಫರು ಪಡೆಯುವಂತೆ ಗುರುಗಳು ಮಾಡಿದರು. ಹೀಗೆಂದು ಈ ನುಡಿಯ ಅರ್ಥ. ಶರೀಫರ ಹಾಡಿನಲ್ಲಿದೆ.

ಇಂದು ಏಕಾದಶಿಯ ವ್ರತವ ತೀರಿಸಿದೆ
ತಂದೆ
ಗುರುಗೋವಿಂದಾಜ್ಞೆಯಲಿ”      

ಎಂಬ ನುಡಿಯಿದೆ. ಗೋವಿಂದಭಟ್ಟರನ್ನು ಗುರುವನ್ನಾಗಿ ಮಾಡಿಕೊಂಡ ಶರೀಫರು “ಜನಿವಾರ”, “ಏಕಾದಶಿ ವ್ರತ” ಎಂಬ ವೈದಿಕ ಸಂಸ್ಕೃತಿಯ ಪದಗಳನ್ನು ಬಳಸಿದ್ದಾರೆ. ಮುಸಲ್ಮಾನ ಧಾರ್ಮಿಕ ಸಂಸ್ಕೃತಿಯನ್ನು ಹೊರಹೊಮ್ಮಿಸಿ ತೋರಿಸುವ ಹಾಡುಗಳನ್ನೂ ಶರೀಫರು ರಚಿಸಿದ್ದಾರೆ. ಅವರು ಹೆಚ್ಚಾಗಿ ವೀರಶೈವ ಧಾರ್ಮಿಕ ಸಂಪ್ರದಾಯವನ್ನೊಳಗೊಂಡ ಹಾಡುಗಳನ್ನು ಬರೆದಿದ್ದಾರೆ. ಆದರೆ ಆಯಾ ಮತದವರು ಬರಿಯ ಹೊರಗಿನ ಆಚರಣೆಯಲ್ಲಿ ತೊಡಗುವುದನ್ನು ಕುರಿತು ವಿಡಂಬನೆ ಮಾಡಿದ್ದೂ ಉಂಟು. ಯಾವುದೇ ಒಂದು ಸಂಕುಚಿತ ಮತಕ್ಕೆ, ಪಂಥಕ್ಕೆ ಸೇರದ ವಿಶಾಲ ಮನೋಭಾವ ಅವರದ್ದಾಗಿತ್ತು.

ಅಪ್ರತ್ಯಕ್ಷ ಗುರು

ಗೋವಿಂದಭಟ್ಟರು ಶರೀಫರಿಗೆ ಕಣ್ಣಿಗೆ ಕಾಣುವ ಗುರುಗಳಾದರೆ ಪ್ರಭುದೇವರು ಕಣ್ಣಿಗೆ ಕಾಣದ ಗುರುವಾಗಿದ್ದರು. ಮಾಯಿಯನ್ನು ಗೆದ್ದು ಎತ್ತರದ ನಿಲುವನ್ನು ಪಡೆದ ಅತಿ ವಿಶಾಲವಾದ ದೃಷ್ಟಿಯಿಂದ, ವೀರ ವಿರಕ್ತಿಯಿಂದ ಕೂಡಿದ ಪ್ರಭುದೇವರಿಂದ ಶರೀಫರು ಬಹಳವಾಗಿ ಪ್ರಭಾವಿತರಾಗಿದ್ದರು. “ಪ್ರಭುಲಿಂಗ ಲೀಲೆ” ಕಾವ್ಯವು ಅವರಿಗೆ

ಅಚ್ಚುಮೆಚ್ಚಿನದಾಗಿತ್ತು. ಆ ಕಾವ್ಯದ ಒಂದು ಪ್ರತಿಯನ್ನು ಅವರು ಸ್ವತಃ ಬರೆದಿಟ್ಟುಕೊಂಡು ಅಧ್ಯಯನ ಮಾಡುತ್ತಿದ್ದರು. ಆ ಪ್ರತಿಯು ಈಗಲೂ ಶಿಶುನಾಳದಲ್ಲಿದೆ. ಶರೀಫರು ಪದೇ ಪದೇ “ಆರು ಶಾಸ್ತ್ರ ಹದಿನೆಂಟು ಪುರಾಣ ನನ್ನ ಬಗಲಾಗ, ಪ್ರಭುಲಿಂಗಲೀಲಾ ನನ್ನ ತಲೆಯ ಮೇಲೆ” ಎಂದು ಹೇಳುತ್ತಿದ್ದರಂತೆ.

ಒಮ್ಮೆ ವೀರಶೈವ ಸ್ವಾಮಿಗಳೊಬ್ಬರು ಪ್ರಭುಲಿಂಗಲೀಲೆಯ ಪ್ರವಚನ ಮಾಡುತಿದ್ದರು. ಅವರು ಆ ಕಾವ್ಯವನ್ನು ಸರಿಯಾಗಿ ಅರಿತುಕೊಂಡಿರಲಿಲ್ಲ. ಪ್ರವಚನದಲ್ಲಿ ಅವರು ಪ್ರಭುದೇವರ ವ್ಯಕ್ತಿತ್ವದ ಇಲ್ಲವೆ ಅವರ ತತ್ತ್ವಬೋಧೆಯ ಹಿರಿಮೆಯನ್ನು ಹೇಳದೆ ಅಗ್ಗದ ಮನರಂಜನೆಯ ಕಥೆ ಹೇಳುತ್ತಿದ್ದರು. ಆ ಹಾದಿಯಲ್ಲಿ ಹೊರಟಿದ್ದ ಶರೀಫರು ಅಲ್ಲಿ ಕೆಲಹೊತ್ತು ನಿಂತು ಅದನ್ನು ಕೇಳತೊಡಗಿದರು. ಅವರಿಗೆ ಸಹನೆ ಮೀರಿತು. ಸಿಡಿದೆದ್ದರು. “ಅಯ್ಯನಾರ, ಪ್ರಭುದೇವನ ಚರಿತ್ರದಾಗ ಹೊಲಸು ಬೆರೆಸಬಾರದೋ” ಎಂದು ಕೂಗಿದರು ಅಲ್ಲಿಯೇ ಒಂದು ಹಾಡನ್ನು ರಚಿಸಿ ಹಾಡಿದರು.

ಓದುವವಗೆಚ್ಚರಿಬೇಕೋ | ಪ್ರಭುಲಿಂಗಲೀಲಾ |
ಓದುವವಗೆಚ್ಚರಿರಬೇಕೋ ||
ಅಭವ ಮೆಚ್ಚುವ ತೆರದೊಳರ್ಥವ
ಶುಭದೆ ಕೆಡಿಸದೆ ಓದಲವನಿಗೆ
ಉಭಯ ಭೇದವ ಕಳೆದು ಸ್ವರ್ಗದ
ಸಭೆಯವರು ಅಹುದೆನ್ನುವಂತೆ…………

ಪ್ರಭುಲಿಂಗ ಲೀಲೆಯನ್ನು ತುಂಬ ಎಚ್ಚರದಿಂದ ಓದಬೇಕು. ಅದರ ಶುಭದ ಅರ್ಥವನ್ನು ಕೆಡಿಸಬಾರದು. ಸರಿಯಾಗಿ ಓದಿ ಸಮರ್ಪಕವಾಗಿ ಅರ್ಥ ಹೇಳುವಾಗ ಶಿವನಿಗೆ ಮೆಚ್ಚುಗೆಯಾಗಬೇಕು. ಸ್ವರ್ಗದ ಸಭೆಯವರೂ “ಅಹುದು, ಅಹುದು” ಎನ್ನಬೇಕು. ಹೀಗೆಂದು ಶರೀಫರ ಅಭಿಪ್ರಾಯ. ಪ್ರಭುದೇವರ ಬಗೆಗೆ ಶರೀಫರಿಗಿದ್ದ ಭಕ್ತಿ-ಗೌರವಗಳು ಈ ಮಾತಿನಲ್ಲಿ ಸ್ಷಷ್ಟವಾಗಿ ಕಂಡು ಬರುತ್ತಿದೆ.

ಬಸವಣ್ಣ ಚನ್ನಬಸವಣ್ಣನವರ ಬಗೆಗೂ ಶರೀಫರಿಗೆ ತುಂಬ ಭಕ್ತಿಯಿತ್ತು. ಅವರು ಆಗಾಗ ಉಳವಿಯ ಪುಣ್ಯಕ್ಷೇತ್ರದಲ್ಲಿ ನಡೆಯುವ ಚೆನ್ನಬಸವೇಶ್ವರ ಜಾತ್ರೆಗೆ ಹೋಗುತ್ತಿದ್ದರು. “ಉಳವಿಗೆ ಹೊಗುವವರು ಉಳಿಸಿಕೊಂಡು ಬರಬಾರದೋ, ಎಲ್ಲಾ ಅಳಿಸಿಕೊಂಡು ಬರಬೇಕೋ” ಎಂದು ಹೇಳುತ್ತಿದ್ದರು. ಜಾತ್ರೆಗೆ ಹೋಗುವವರು ಮೋಜಿಗಾಗಿ, ವಿಲಾಸಕ್ಕಾಗಿ ಹೋಗುವುದು ವಾಡಿಕೆಯಾಗಿದೆ. ಆದರೆ ಶರೀಫರ ದೃಷ್ಟಿಯೇ ಬೇರೆ. ಜಾತ್ರೆಗೆ ಹೋಗುವವರು ಮೋಹ ಮಾಯೆಗಳನ್ನು ಹಮ್ಮು ಬಿಮ್ಮುಗಳನ್ನು ಉಳಿಸಿಕೊಳ್ಳಬಾರದು. ಪವಿತ್ರ ಹೃದಯ, ಶುದ್ಧ ಅಂತಃಕರಣಗಳಿಂದ ಕೂಡಿರಬೇಕೆಂಬುದೇ ಅವರ ಉದ್ದೇಶವಾಗಿತ್ತು.

ವೀರಶೈವ ಧರ್ಮದ ಪ್ರಭಾವವು ಶರೀಫರ ಮೇಲೆ ಆದುದಕ್ಕೆ ಅವರ ಕಾಲದ ಶರಣರ ಸಂಪರ್ಕವೂ ಕಾರಣವಾಗಿದೆ. ಮುಳಗುಂದದ ಬಾಲಲೀಲಾ ಮಹಂತ ಶಿವಯೋಗಿ, ಗರಗದ ಮಡಿವಾಳಸ್ವಾಮಿ, ಹುಬ್ಬಳ್ಳಿಯ ಸಿದ್ಧಾರೂಢರು, ನವಿಲುಗುಂದ ನಾಗಲಿಂಗಸ್ವಾಮಿ ಇವರ ಸಂಪರ್ಕವನ್ನು ಶರೀಫರು ಪಡೆದಿದ್ದರು. ಮುರಗೋಡದ ಚಿದಂಬರ ದೀಕ್ಷಿತರೂ ಶರೀಫರ ಕಾಲದವರಾಗಿದ್ದರು. ಶರೀಫರು ಅವರ ಸಂಪರ್ಕವನ್ನು ಪಡೆದಿದ್ದರು. ಈ ಎಲ್ಲ ಪುಣ್ಯಪುರುಷರು ಆಗ ಆ ಪ್ರದೇಶದಲ್ಲಿ ನಡೆದ ಧಾರ್ಮಿಕ ಜಾಗೃತಿಗೆ ಕಾರಣರಾದರು. ಆ ಭಕ್ತಿ ಸಂಪ್ರದಾಯವು ಈಗಲೂ ಜನತೆಯನ್ನು ಆಕರ್ಷಿಸುತ್ತಿದೆ.

ಶರೀಫರು ದೊಡ್ಡ ಸಂಖ್ಯೆಯ ತತ್ತ್ವಪದಗಳನ್ನು ರಚಿಸಿದರು. ಆ ಪದಗಳು ಅಕ್ಷರಜ್ಞಾನವಿಲ್ಲದ ಅಸಂಖ್ಯ ಹಳ್ಳಿಗರ ನಾಲಿಗೆಯ ಮೇಲೆ ಈಗಲೂ ನಲಿಯುತ್ತಿವೆ. ಜನರು ಅಲ್ಲಿ ಸೇರಿ ಧಾರ್ಮಿಕ ಭಾವದಲ್ಲಿ ತನ್ಮಯರಾಗುತ್ತಾರೆ. ಸಂಸಾರದ ದುಃಖಗಳನ್ನು ಮರೆತು ಆನಂದದ ಬುತ್ತಿಯನ್ನು ಕಟ್ಟಿಕೊಂಡು ತಮ್ಮ ಊರುಗಳಿಗೆ ಮರಳುತ್ತಾರೆ.

ಜನರಿಗೆ ಮಾರ್ಗದರ್ಶನ

ಶರೀಫರದು ಬಡತನದ ಬಾಳು. ಮನೆಗಾಗಿ, ಮಡದಿಗಾಗಿ ತನಗಾಗಿ ಗಳಿಸಬೇಕೆಂಬ ದೃಷ್ಟಿಯೂ ಅವರದಾಗಿರಲಿಲ್ಲ. ಜನರನ್ನು ಮೆಚ್ಚಿಸುವ ಸ್ವಭಾವವೂ ಅವರದಲ್ಲ. ಜನರ ಲೋಪದೋಷಗಳನ್ನು ಕಂಡಾಗ ಯಾವ ಹಂಗು-ಹೆದರಿಕೆ ಇಲ್ಲದೆ ಅವುಗಳನ್ನು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರು. ಆದುದರಿಂದ ಜನರ ನೆರವು ಅವರಿಗೆ ಕೊರೆಯುತ್ತಿರಲಿಲ್ಲ. ಹೀಗಾಗಿ ಅವರು ಬಾಳಿನಲ್ಲಿ ಎಷ್ಟೋ ಕಷ್ಟಗಳನ್ನು, ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ ಅವರ ಮನಸ್ಸು ಯಾವಾಗಲೂ ಪರಮಾತ್ಮನ ಕಡೆಗೇ ಹರಿಯುತ್ತಿತ್ತು. ಆ ಮೂಲಕವೇ ಅವರು ಸದಾ ಆನಂದದಿಂದ ಬಾಳುತ್ತಿದ್ದರು.

 

ಶಿಶುನಾಳ ಶರೀಫರು ಜನಜೀವನದಲ್ಲಿ ಬೆರೆತರು.

ತಮ್ಮ ಸುತ್ತಣ ಜನರ ಬಾಳನ್ನು ಶರೀಫರು ತೆರೆದ ಕಣ್ಣುಗಳಿಂದ ಕಂಡರು. ಮುಕ್ತಮನಸ್ಸಿನಿಂದ ಅನುಭವಿಸಿದರು. ಸಂಸಾರದ ಕೋಟಲೆಯಲ್ಲಿ ಆಸೆ – ಅಂಜಿಕೆಗಳಿಗೆ ಒಳಗಾಗಿ ಗೋಳಾಡುವವರನ್ನು, ಮೂಢನಂಬಿಕೆಗಳಿಗೆ ಬಲಿಯಾದವರನ್ನು ಕಂಡು ಅವರ ಹೃದಯ ಕರಗಿತು. ಧಾರ್ಮಿಕ ವ್ರತನೇಮಗಳ ಢಾಂಬಿಕ ಆಚಾರಗಳಲ್ಲಿ ತೊಡಗಿದವರನ್ನು ಕಂಡು ಅವರು ಮರುಗಿದರು. ತನ್ನೊಳಗೆ ಪರಮಾತ್ಮನ್ನು ಕಂಡುಕೊಳ್ಳುವ ಹಾದಿಯನ್ನು ಜನತೆಗೆ ಬೋಧಿಸುವ ಕಾರ್ಯವನ್ನು ಶರೀಫರು ಕೈಗೊಂಡರು. ಹಳ್ಳಿಗಳ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಪದಗಳನ್ನು ಅವರ ಹಾಡುಗಳಲ್ಲಿ ಬಳಸಿದರು. ಸಾಮಾನ್ಯ ಘಟನೆಗಳ ಮೂಲಕವೇ ಪಾರಮಾರ್ಥಿಕ ತತ್ವವನ್ನು ಅವರು ಬೋಧಿಸಿದರು. ದೇಹವೇ ದೇವಾಲಯ; ಪ್ರಾಣವೇ ಲಿಂಗ ಎಂಬ ತತ್ತ್ವವನ್ನು ಅವರು ಜನರಿಗೆ ಹೇಳಿದರು.

ಗುಡಿಯ ನೋಡಿರಣ್ಣ | ದೇಹದ |
ಗುಡಿಯ ನೋಡಿರಣ್ಣ

ಎಂದು ಹಾಡಿದರು. ಪೊಡವಿಗಧಿಕ ಎನ್ನೊಡೆಯನು ಅಡಗಿಕೊಂಡು ಕಡು ಬೆಡಗಿನೊಳು ದೇಹದ ಗುಡಿಯಲ್ಲಿ ವಾಸಿಸುತ್ತಾನೆ ಎಂದು ಸಾರಿದರು. ದೇವರು ನಮ್ಮೊಳಗೇ ಇರುವಾಗ ಹೊರಗಿನ ವ್ರತನೇಮಗಳಿಗೆ ಮಹತ್ವವಿಲ್ಲ. ದೇವರಿಗೆ ನೈವೇದ್ಯ ಮಾಡುವ ಹೊರಗಿನ ಆಚಾರವನ್ನು ಕಂಡಾಗ,

“ಎಡೆಯ ಒಯ್ಯುಣ ಬಾರೇ | ದೇವರಿಗೆ
ಎಡೆಯ ಒಯ್ಯೂಣ ಬಾರೇ, ಮಡಿಗುಡಿಯಿಂದಲಿ
ಪೊಡವಿಗಧಿಕ ಎನ್ನೋಡೆಯ ಅಲ್ಲಮನಿಗೇ”

ಎಂದು ಹಾಡಿದರು. ಶುದ್ಧವಾದ ಮನಸ್ಸನ್ನೇ ಅವರು “ಮಡಿ” ಎಂದು ಭಾವಿಸಿದರು. ತನ್ನ ನಿಜವಾದ ತಿಳುವಳಿಕೆಯನ್ನೆ “ಎಡೆ” ಎಂದು ಅವರು ತಿಳಿಸಿದರು. ತನ್ನತನದ ಅರಿವೇ ಇಲ್ಲದ ಆಚರಣೆಯನ್ನು ಅವರು ಖಂಡಿಸಿದರು.

ಕಾಲಿಗೆ ಜಂಗು ಕಟ್ಟಿಕೊಂಡು ಕೈಯಲ್ಲಿ ಜೋಳಿಗೆ ಹಿಡಿದು ಹಿಟ್ಟಿನ ಭಿಕ್ಷೆಗಾಗಿ ಮನೆ ಮನೆ ತಿರುಗಿದ ಶರಣ ಧರ್ಮವನ್ನು ರೂಢಿಸಿಕೊಳ್ಳದ ಜಂಗಮರನ್ನು ಕಂಡಾಗ ಅವರನ್ನು ವಿಡಂಬಿಸಿ ನುಡಿದರು. ಮತ್ತೊಮ್ಮೆ,

“ಬಲ್ಲವರಾದರೆ ತಿಳಿದು ಹೇಳಿರಿ
ಮುಲ್ಲಾನ ಮಸೂತಿ ಎಲ್ಲಿತ್ತೊ
ಗುಲ್ಲ ಮಾಡಿ ಗುದ್ಯಾಟಲಾವಿಗೆ
ಬೆಲ್ಲವೋದಿಸುವದೆಲ್ಲಿತ್ತೋ”

ಎಂದು ಸವಾಲು ಹಾಕಿದರು. “ಅಲಾವಿ ಬೆಲ್ಲ ಓದಿಸುವುದು” ಇದು ಮುಸಲ್ಮಾನ ಧಾರ್ಮಿಕ ಸಂಪ್ರದಾಯದ ನುಡಿಗಳು. ವೀರಶೈವ ಜಂಗವರೇ ಆಗಲಿ ಮುಸಲ್ಮಾನ ಮುಲ್ಲಾಗಳೇ ಆಗಲಿ ನಿಜವಾದ ಅರಿವಿಲ್ಲದ ಅವರನ್ನು ಶರೀಫರು ಖಂಡಿಸಿ ನುಡಿದರು.

ಸಾಮಾನ್ಯ ಸನ್ನಿವೇಶಗಳಲ್ಲಿ ಮಿಂಚಿಸಿದ ಅರ್ಥ

ಹೊಟ್ಟೆ ಹೊರೆದುಕೊಳ್ಳುವುದಕ್ಕಾಗಿ ಇಲ್ಲವೆ ಬೂಟಾಟಿಕೆಗಾಗಿ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳನ್ನು ಶರೀಫರು ಖಂಡಿಸಿ ನುಡಿದ ಹಾಡುಗಳು ಒಂದು ಬಗೆಯವು; ಬಾಳಿನಲ್ಲಿ ನಡೆದ ಸನ್ನಿವೇಶಗಳನ್ನು ತಾತ್ತ್ವಿಕ ಅರ್ಥವನ್ನು ಹೊರಹೊಮ್ಮಿಸುವ ಹಾಡುಗಳು ಇನ್ನೊಂದು ಬಗೆಯವು, ಈ ಬಗೆಯ ಹಾಡುಗಳನ್ನು ಶರೀಫರು ಹೆಚ್ಚಾಗಿ ರಚಿಸಿದ್ದಾರೆ.

ಶರೀಫ ಸದಾ ಸಂಚಾರದಲ್ಲಿರುತ್ತಿದ್ದರು. ಮುಖ್ಯವಾಗಿ ಅವರು ಶಿಶುನಾಳದ ನೆರೆಯ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದರು. ಖಾಸಗಿ ಶಾಲೆಯ ಶಿಕ್ಷಕರಾಗಿ ಕೆಲವು ಹಳ್ಳಿಗಳಲ್ಲಿ ದುಡಿದರು. ದೊಡ್ಡಾಟ ಮಾಡಿಸಲು, ಆಲಾವಿ ಪದಗಳನ್ನು ಹಾಡಿಸಲು ಅಲ್ಲಲ್ಲಿಗೆ ಹೋಗುತ್ತಿದ್ದರು. ಸಂತೆ, ಜಾತ್ರೆ, ಭಜನೆ, ಪುರಾಣ ಪ್ರವಚನ ನಡೆಯುವಲ್ಲಿ ಅವರು ಇರುತ್ತಿದ್ದರು. ಹೀಗಾಗಿ ಅವರು ಹಲವು ಬಗೆಯ ಜನರ ಸಂಪರ್ಕ ಪಡೆದರು. ಬಾಳಿನ ಬಗೆಬಗೆಯ ಸನ್ನಿವೇಶಗಳನ್ನು ಹತ್ತಿರದಿಂದ ಅಭ್ಯಾಸ ಮಾಡಿದರು. ಜನರ ಸ್ವಭಾವವನ್ನು ಬಿಡಿಸಿಬಿಡಿಸಿ ತಿಳಿದುಕೊಂಡರು. ಹೀಗೆ ಅವರ ಅನುಭವದ ಭಂಡಾರವು ತುಂಬಿಬಂದಿತು. ಹಾಡುಗಳನ್ನು ರಚಿಸುವ ಶಕ್ತಿಯನ್ನು ಅವರು ಹುಟ್ಟಿನಿಂದಲೇ ಪಡೆದು ಬಂದಿದ್ದರು. ಶರೀಫರು ಹುಟ್ಟು ಕವಿ, ವರಕವಿ, ಜನತೆಯ ಕವಿ. ಅವರು ವಿರಾಮವಾಗಿ ಒಂದು ಕಡೆ ಕುಳಿತುಕೊಂಡು ಕವಿತೆ ಬರೆಯಲ್ಲಿಲ್ಲ. ಎಲ್ಲಿ ಅಂದರೆ ಅಲ್ಲಿ, ಯಾವುದೇ ಸಂದರ್ಭದಲ್ಲಿ ಏನಾದರೂ ಮನಸ್ಸಿಗೆ ಹೊಳೆದಾಗ, ಏನನ್ನಾದರೂ ಕಂಡಾಗ ತತ್‌ಕ್ಷಣ ಹಾಡುಗಳು ಅವರಿಂದ ರಚಿತವಾಗುತ್ತಿದ್ದವು. ಹಾಲು ಉಕ್ಕೇರಿದಂತೆ ಅವರ ಹೃದಯದಿಂದ ಹಾಡುಗಳು ದಿಢೀರನೆ ಮೂಡಿಬರುತ್ತಿದ್ದವು. ಅವುಗಳನ್ನು ಬರೆಯಲು ಅವರಿಗೆ ಪುರಸೊತ್ತು ಇರುತ್ತಿರಲ್ಲಿಲ್ಲ. “ಬರಕೋ ಪದ” ಎಂದು ಅವರು ಹಾಡತೊಡಗುತ್ತಿದ್ದರು. ಅವರ ಬಳಿ ಇದ್ದ ಶಿಷ್ಯರು ಅವುಗಳನ್ನು ಬರೆದುಕೊಳ್ಳುತ್ತಿದ್ದರು. ಯಾವಾಗ ಅಂದರೆ ಆವಾಗ ಹಾಡುಗಳು ವಿಪುಲವಾಗಿ ಹೊರಹೊಮ್ಮಿ ಬರುತ್ತಿರುವಾಗ ಅವುಗಳನ್ನೆಲ್ಲ ಬರೆದಿಡುವುದು ಸುಲಭವೊ ಆಗಿರಲಿಲ್ಲ.

ಶರೀಫರ ಪದಗಳು ವಿರಾಮವಾಗಿ ಯೋಚಿಸಿ ರೂಪುಗೊಂಡವುಗಳಲ್ಲ. ಬಾಳಿನ ಯಾವುದೊಂದು ಸಂಗತಿಯಿಂದ ಸಂತಸವಾದಾಗ ಇಲ್ಲವೆ ಯಾವುದೇ ವ್ಯಕ್ತಿ ಇಲ್ಲವೇ ಪ್ರಸಂಗ ಅವರನ್ನು ಕೆಣಕಿದಾಗ ದಿಢೀರನೆ ಹೊರಹೊಮ್ಮಿದ ಹಾಡುಗಳವು. ಹೊರಗಿನ ಪ್ರಸಂಗಕ್ಕೆ ಹೊಂದಿಕೆಯಾಗುವ ಮಾತುಗಳಿರುವ ಆ ಹಾಡುಗಳಲ್ಲಿ ತಾತ್ತ್ವಿಕವಾದ ಬೇರೊಂದು ಅರ್ಥ ತುಂಬಿರುವುದು ಶರೀಫರ ಹಾಡುಗಳ ವೈಶಿಷ್ಟ್ಯವಾಗಿದೆ.

‘ಸಾಲಿಯ ನೊಡಿದಿರಾ?

ಅವಿಭಜಿತ ಧಾರವಾಡ ಜಲ್ಲೆಯು (ಇಂದಿನ ಹಾವೇರಿ, ಗದಗ ಹಾಗೂ ಧಾರವಾಡ ಜಲ್ಲೆಗಳು) ಹಿಂದಿನ ಮುಂಬಯಿ ಪ್ರಾಂತ್ಯಕ್ಕೆ ಸೇರಿತ್ತು. ಶರೀಫರ ತಾರುಣ್ಯದ ಅವಧಿಯಲ್ಲಿ ಅವಿಭಜಿತ ಧಾರವಾಡ ಜಿಲ್ಲೆಯ ಹಳ್ಳಿಗಳಲ್ಲಿ ಕನ್ನಡ ಕಲಿಸುವ ಸರಕಾರಿ ಶಾಲೆಗಳು ಇನ್ನೂ ಆರಂಭವಾಗಿರಲಿಲ್ಲ. ಅಂತೆಯೇ ಅವರು ಖಾಸಗಿ ಶಾಲೆ ತೆರೆದು ಅಕ್ಷರಭ್ಯಾಸ ಮಾಡಿಸುವ ಕಾರ್ಯ ಕೈಗೊಂಡದ್ದರು. ಇಂತಹ ಶಾಲೆಗಳಿಗೆ ಒಳ್ಳೆಯ ಕಟ್ಟಡಗಳಾಗಲಿ, ಉಪಕರಣಗಳಾಗಲಿ ಇರುತ್ತಿರಲಿಲ್ಲ. ಕೆಲಕಾಲದ ನಂತರ ಗುಡಿಗೇರಿಯಲ್ಲಿ ಒಂದು ಸರ್ಕಾರಿ ಶಾಲೆ ಆರಂಭವಾಯಿತು. ಅಚ್ಚುಕಟ್ಟಾದ ಕಟ್ಟಡ ಆ ಶಾಲೆಗೆ ಇತ್ತು. ಇದನ್ನು ನೋಡಿದ ಕೂಡಲೇ ಶರೀಫರ ಬಾಯಿಂದ ಹಾಡೊಂದು ಹೊರಹೊಮ್ಮಿ ಬಂದಿತು:

“ಸಾಲಿಯ ನೋಡಿದಿರಾ ಸರಕಾರದ
ಸಾಲಿಯ ನೊಡಿದಿರಾ?
ಸಾಲಿ ಸದ್ಗುರುವಿನ
ಮಾಲು ಮಂಟಪವಿದು
ಮೇಲು ಕುಣಿಸುವುದು ಭೊಲೋಕದೋಳು”

ಸರ್ಕಾರಿ ಶಾಲೆಯ ಹೊಸ ಕಟ್ಟಡ ನೋಡಲು ಅಂದವಾಗಿತ್ತು. ಅದರ ವರ್ಣನೆಯಿಂದ ಹಾಡು ಆರಂಭವಾಯಿತು. ಹಾಡು ಮುಂದುವರಿದಂತೆ ಒಳಗೆ ತಾತ್ತ್ವಿಕ ಅರ್ಥವನ್ನು ತುಂಬಲಾಗಿದೆ. ಶಾಲೆಯಲ್ಲಿ ತುಂಟ ಬಾಲಕರು ಸದ್ಗುರುವಿನ ಮೂಲಕ ಅಕ್ಷರಾಭ್ಯಾಸ ಮಾಡುತ್ತಾರೆ. ನಮ್ಮ ದೇಹವೂ ಒಂದು ಶಾಲೆ. ಅಲ್ಲಿ ತುಂಟತನದ ಇಂದ್ರಿಯ ವಿಕಾರಗಳಿವೆ. “ಅರಿವು” ಎಂಬ ಸದ್ಗುರುವಿನ ಮಾರ್ಗದರ್ಶದಲ್ಲಿ ಇಂದ್ರಿಯ ವಿಕಾರವಳಿದು ಶಾಂತಿ ಸುಖ ಪಡೆಯುವ ಹಾದಿಯಲ್ಲಿ ನಾವು ಸಾಗಬೇಕು. ಊರಿಗೆ ಸರ್ಕಾರಿ ಶಾಲೆಯಾಯಿತು. ಊರಿನ ಜನ ಕಲ್ಲು ಮಣ್ಣಿನ ಕಟ್ಟಡ ನೋಡುವ ಸಂಭ್ರಮದಲ್ಲಿದ್ದರು. ಶರೀಫರು ದೇಹದೋಳಗಿನ ಅರಿವೆಂಬ ಆನಂದದಿಂದ ಬಾಳುವುದನ್ನು ಬೋಧಿಸಿದರು. ದೇಹವು ಶಾಲೆ, ಅದು ದೇವಾಲಯವೂ ಅಹುದು. ಭೂಲೋಕದಲ್ಲಿ ಮೇಲೆ ಕಾಣಿಸುವ ದೇಹವೊಂದನ್ನೇ ಗಮನಿಸಬಾರದು. ಒಳಗಿರುವ ಸದ್ಗುರುವನ್ನು ನಾವು ಕಂಡುಕೊಳ್ಳಬೇಕು.

‘ಇದೇ ಮನಿ’

ಹೊರಗೆ ಕಾಣುವ ದೇಹದ ಒಳಗೆ ಮಾನವನ ಹೃದಯವಿದೆ. ಆ ಹೃದಯದ ಮಧ್ಯದಲ್ಲಿ ಆತ್ಮನಿದ್ದಾನೆ. ಆ ಆತ್ಮನ ಮನೆಯಾಗಿದೆ, ನಮ್ಮ ದೇಹ.

ಇದೇ ಮನಿ, ಇದೇ ಮನಿ ಹೃದಯದೊಳಗೆ ನಲಿ
ದಾಡುವ ಆತ್ಮನಿಗೆ ಇದೇ ಮನಿ, ಇದೇ ಮನಿ ||ಪ||

ಆ ಆತ್ಮನನ್ನು ಶರೀಫರು ಸದ್ಗುರುವೆಂದು ಕರೆದಿದ್ದಾರೆ. ನಮ್ಮೊಳಗೆ ಇರುವ ಆತ್ಮನು ಪರಮಾತ್ಮನ ಪ್ರತಿನಿಧಿ. ಆತ್ಮನ ಮೂಲಕ ನಾವು ಪರಮಾತ್ಮನ ಪ್ರತಿನಿಧಿ. ಆತ್ಮನ ಮೂಲಕ ನಾವು ಪರಮಾತ್ಮನನ್ನು ಸಾಧಿಸಿಕೊಳ್ಳಬೇಕು.

ಒಬ್ಬ ಶ್ರೀಮಂತ ಮಣಹೊದಿದ. ಅವನ ಹೆಣವನ್ನು ಸುಡುಗಾಡಿಗೆ ಒಯ್ಯುತ್ತಿರುವ ಶರೀಫರು ಕಂಡರು. ಕೂಡಲೇ ಹಾಡೊಂದು ಹೊರ ಹೊಮ್ಮಿ ಬಂದಿತು.

ವಸ್ತಿ ಇರುವ ಮನಿಯೊ
ಗಸ್ತಿ ತಿರುಗುವ ಮನಿಯೋ
ಶಿಸ್ತಿಲೇ ಕಾಣುವದು ಶಿವನ ರುನಿಯೋ
ವಸುಧಿಯೊಳು ನಮ್ಮ ಶಿಶುನಾಳಧೀಶನ
ಹಸನಾದ ಪದಗಳ ಹಾಡುವ ಮನಿಯೋ

ಅಲ್ಪಕಾಲದವರೆಗೆ ವಸತಿ ಮಾಡುವ ನಮ್ಮ ದೇಹ. ಅಲ್ಪಕಾಲ ನಾವು ಅಲ್ಲಿ ಮಾಸಿಸುವಾಗ ಎಚ್ಚರವಾಗಿದ್ದು ಗಸ್ತಿ ತಿರುಗಬೇಕು. ಹಾಗೆ ಎಚ್ಚರವಾಗಿದ್ದು ಶಿಸ್ತಿನಿಂದ ನಾವು ಬಾಳಿದರೆ ನಮ್ಮ ದೇಹವು ಶಿವನ ಮನೆಯಾಗುವುದು. ಇಂತಹ ದೇಹವನ್ನು ಶರೀಫರು ಶಿಶುನಾಳಧೀಶನ ಹಸನಾದ ಪದಗಳನ್ನು ಹಾಡುವದಕ್ಕಾಗಿ ಬಳಸಿಕೊಂಡರು. ಇದೇ ಮಾನವ ದೇಹವನ್ನು ಸಾರ್ಥಕಗೊಳಿಸುವ ಹಾದಿಯೆಂದು ಅವರು ತೋರಿಸಿಕೊಟ್ಟರು.

ಗಿರಣಿ ನೋಡಮ್ಮಾ

ಹುಬ್ಬಳ್ಳಿ ನಗರದಲ್ಲಿ ಹೊಸದಾಗಿ ನೂಲಿನ ಗಿರಣಿಯು ಆರಂಭವಾದುದನ್ನು ಶರೀಫರು ಕಂಡರು. ಆ ಗಿರಣಿ ಜನರಿಗೆ ಸೋಜಿಗವನ್ನು ಉಂಟುಮಾಡಿತು. ಎಲ್ಲರೂ ಅದನ್ನು ನೋಡುತ್ತ ನಿಂತರು. ಬಳಿಯಲ್ಲಿ ಇದ್ದ ಶರೀಫರು ಹಾಡತೊಡಗಿದರು:

ಗಿರಣಿ ವಿಸ್ತಾರನೋಡಮ್ಮ | ಶರಣಿ ಕೂಡಮ್ಮಾ|
ಕರ್ನಾಟಕ ರಾಜ್ಯದಿ ಮೆರಸಿದ ಮಹಾಚೋದ್ಯ
ಚೀನಾ ದೇಶದ ವಿದ್ಯಾ ||೧||
ಜಲ ಅಗ್ನಿ ವಾಯು ಒಂದಾಗಿ ಕಲೆತು ಚಂದಾಗಿ
ನೆಲದಿಂದ ಗಗನಕ್ಕೆ
ಮುಟ್ಟದಂತೆಸೆವುದು ಚೆಲುವಾದ ಒಂದ ಕಂಬವೊ
ಹೊಗಿಯ ಬಿಂಬವೊ ||೨||
ಒಳಗೊಂದು ಬ್ಯಾರೆ ಆಕಾರಾ ತಿಳಕೋ ಚಮತ್ಕಾರಾ
ದಳಗಳ ಒಂಬತ್ತು

ಚಕ್ರಾ ಸುಳಿವ ಸುಸ್ತರದ ಧಾರಾ ನಳಿಮೂರು ಕೊಳವಿಯೊಳು ಎಳೆ ತುಂಬಿತು ಅದರೊಳು ||೩||

ಹೀಗೆಯೇ ಹಾಡು ಮುಂದುವರೆಯುತ್ತದೆ.

ದೊಡ್ಡ ಆಕಾರದ ಗಿರಣಿ, ಉಗಿಯಂತ್ರ, ಹೊಗೆ ಕಂಬ, ನೀರು, ಬೆಂಕಿ, ಗಾಳಿ ಒಂದಾಗಿ ಕಲೆತು ಯಂತ್ರ ನಡೆಯುವಂತಿದೆ. ಹೊಗೆಯು ಗಗನಕ್ಕೆ ಏರುತ್ತಿದೆ. ಇದರ ಹೊರಗಿನ ಆಕಾರ ವರ್ಣನೆ. ಆದರೆ ಒಳಗೊಂದು ಬೇರೆ ಆಕಾರ. ಅದು ಚಮತ್ಕಾರದಿಂದ ಕೂಡಿದೆ. ಶರೀಫರ ಹಾಡುಗಳ ರೀತಿಯೇ ಹೀಗೆ. ಹೊರಗಿನ ಆಕಾರದ ವರ್ಣನೆಯಿಂದ ಆರಂಭವಾಗಿ ಒಳಗಿನ ಬೇರೊಂದು ಚಮತ್ಕಾರವನ್ನು, ಅರ್ಥವನ್ನು ಆ ಹಾಡುಗಳು ಹೊರಹಮ್ಮಿಸುತ್ತವೆ. ಒಂಬತ್ತು ಚಕ್ರಗಳೂ ಮೂರು ನಾಡಿಗಳೂ ಇರುತ್ತದೆ. ಗಿರಣಿಯಲ್ಲಿ ಅರಳೆ ಹಿಂಜಿ ಹಂಜಿಯಾಗಿ ಕುಕ್ಕಡಿಯಾಗುತ್ತವೆ. ನೂಲು ಉತ್ಪಾದನೆಯಾಗುವ ವರ್ಣನೆಯಿದು. ಆದರೆ ಮೂಲ ಬ್ರಹ್ಮನ ಕೀಲನಾಡಿಯ ಪಾರಮಾರ್ಥಿಕ ಅರ್ಥವೂ ಇಲ್ಲಿದೆ. ನೂಲಿನಿಂದ ಹಚ್ಚಡವು ದೇಹದ ರಕ್ಷಣೆಗಾಗಿ. ನೇಕಾರರ ಋಷಿ ದೇವಾಂಗ, ಹಚ್ಚಡಕ್ಕೆ ಸಾಂಕೇತಿಕ ಅರ್ಥವೂ ಇದೆ. ಲೋಕಕ್ಕೆ ರಕ್ಷಣೆಯನ್ನು ಆನಂದವನ್ನು ಒದಗಿಸುವ ವಸ್ತುವದು. ನಮ್ಮ ಅಂತರಂಗದಲ್ಲಿರುವ ಪರಮಾತ್ಮನನ್ನು ಸಾಧಿಸಿಕೊಳ್ಳುವ ಆನಂದವನ್ನು ಇಲ್ಲಿ ಸೂಚಿಸಲಾಗಿದೆ.

ಅಲ್ಲೀಕೇರಿ

ವನಭೋಜನಕ್ಕೆ ಹೋಗುವುದನ್ನು “ಅಲ್ಲೀಕೇರಿಗೆ ಹೋಗುವುದು” ಎನ್ನುತ್ತಾರೆ. ಬೆಳವಲದ ಸೀಮೆಯಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ಸಿದ್ಧಗೊಳಿಸಿಕೊಂಡು ಅಲ್ಲೀಕೇರೆಗೆ ಹೋಗುವ ಸಂಭ್ರಮವನ್ನು ಕಂಡಾಗ ಶರೀಫರು ಆ ಬಗೆಗೆ ಒಂದು ಹಾಡನ್ನು ರಚಿಸಿದರು.

ಅಲ್ಲೀಕೇರಿಗೆ ಹೋಗೂಣು ಬರ್ತಿರೇನ್ರೇ
ಒಲ್ಲದಿದ್ದರೆ ಇಲ್ಲೇ ಇರ್ತಿರೇನ್ರೇ
ಕಲ್ಲಾ ಬಿಲ್ಲಿ ಗೆಳತೀರೆಲ್ಲ ಜೀವನ ಹಬ್ಬದುಲ್ಲಾಸದಲ್ಲಿ
ಅಲ್ಲಮ ಪ್ರಭುವಿನ ಮರೆತೀರೇನ್ರೆ…..

ಮಡಿಯನುಟ್ಟು ಮೀಸಲದಡಿಗಿ ಮಾಡಬೇಕ್ರೇ |ಅದಕ|
ತಡವು ಆದ್ರೆ ನಿಮ್ಮ ಗೊಡವಿ ನಮಗೆ ಬ್ಯಾಡ್ರೇ
ವಡಿ, ಗಾರಗಿ, ಹೊರಣಗಡಬು, ಕಡಲಿ ಪಚ್ಚಡಿ, ಕಟ್ಟಿನಾಮ್ರ,
ಚಟಕಿ ಮುಚ್ಚಳ ಬಾನದ ಗಡಿಗಿ ಹೆಡಿಗೀ ಜ್ವಾಕ್ರೇ |ನೀವು|

ದೃಢದಿ ಹೋಗಿ ದೇವರ ಗುಡಿಗೆ ದೀಪಾ ಹಾಕ್ರೇ

ಈ ಹಾಡಿನ ಶಬ್ದಾರ್ಥವು ಸ್ಪಷ್ಟವಿದೆ. ತಿನ್ನುಣ್ಣುವ ಸಂಭ್ರಮದಲ್ಲಿ ಅಲ್ಲಮಪ್ರಭುವನ್ನು ಮರೆಯಬಾರದು ಎಂಬ ಎಚ್ಚರಿಕೆಯ ಮಾತೂ ಇಲ್ಲಿದೆ. ತಿಂಡಿ ತುಂಬಿದ ಹೆಡಿಗೆ (ದೊಡ್ಡ ಬುಟ್ಟಿ)ಯನ್ನು ತಲೆಯ ಮೇಲಿಟ್ಟುಕೊಂಡು ಹೆಣ್ಣು ಮಕ್ಕಳು ಅವಸರದಿಂದ ನಡೆಯುತ್ತಿರುವಾಗ ಹೆಡಿಗೆಯನ್ನು ಜೋಕೆಯಾಗಿಟ್ಟುಕೊಂಡಿರಬೇಕೆಂಬ ಸಲಹೆಯೂ ಇದೆ. ಅದರಂತೆ ತಿಂಡಿಮಾಡುವಾಗ ಮಡಿಯಾಗಿರಬೇಕು. ಅಲ್ಲೀಕೇರಿಗೆ ಹೋಗುವಾಗ ದೇವರ ಗುಡಿಗೆ ದೀಪ ಹಾಕಬೇಕು. ಹೀಗೆಂದು ಹೇಳಲಾಗಿದೆ. ಈ ಹಾಡಿಗೆ ಸಾಂಕೇತಿಕ ಅರ್ಥವೂ ಇದೆ. “ಅಲ್ಲೀಕೇರಿ” ಎಂಬುದಕ್ಕೆ “ಆ ಕಡೆಯ ಓಣಿ” ಎಂಬ ಅರ್ಥದ ಮೂಲಕ ಪರಮಾರ್ಥವನ್ನು ಸೂಚಿಸಲಾಗಿದೆ. “ಅಲ್ಲೀಕೇರಿ”ಯು ಸಂಸಾರದ ಬಂಧನ. ಈ ಬಂಧನದಿಂದ ಪಾರಾಗಿ ಆನಂದ ಪಡೆಯಲು ನಾವು “ಅಲ್ಲೀಕೇರಿ”ಗೆ ಪರಮಾತ್ಮನ ಸಾಧನೆಯತ್ತ ಸಾಗಬೇಕು. ವಡಿ, ಗಾರಗಿ, ಹೋರಣದ ಕಡಬು, ಕಡಲೆ ಸೊಪ್ಪಿನ ಪಚ್ಚಡಿ, ಕಟ್ಟಿನ ಆಮ್ರ (ಹೋಳಗಿ ಸಾರು), ಮೊಸರು ಕಲಸಿದ ಬಾನ – ಈ ರುಚಿಕರ ತಿಂಡಿಗಳ ಉಲ್ಲೇಖವೂ ಈ ಹಾಡಿನಲ್ಲಿ ಬಂದಿದೆ. ಗಡಿಗಿ, ಚಟಿಕಿ, ಮುಚ್ಚಳ – ಇವು ಮಣ್ಣಿನ ಪಾತ್ರೆಗಳು. ಅವು ಕ್ಷಣಿಕವಾದವುಗಳು. ಒಳಗೆ ರುಚಿಯಾದ ಭಕ್ಷ್ಯಗಳಿವೆ. ಕ್ಷಣಿಕ ದೇಹದೊಳಗೆ ಆತ್ಮನಿದ್ದಾನೆ.

ಎದ್ದ ಹೋಗತೀನಿ

ಲೌಕಿಕ ವ್ಯವಹಾರದಲ್ಲಿ ಜನರು ತೋರುವ ಅಲ್ಪಮನಸ್ಸಿನಿಂದ, ಕೆಟ್ಟತನದೆಂದ ಶರೀಫರು ಸಿಡಿಮಿಡಿಗೊಳ್ಳುವ ಸಂದರ್ಭಗಳೂ ಇದ್ದವು. ಅಂತಹ ಸಂದರ್ಭಗಳಲ್ಲಿಯೂ ಅರ್ಥಪೂರ್ಣವಾದ ಹಾಡುಗಳು ರೂಪುಗೊಂಡಿವೆ.

ಬರಗಾಲದಲ್ಲಿ ಒಮ್ಮೆ ಶರೀಫರಿಗೆ ಜೋಳ ದೊರೆತಿರಲಿಲ್ಲ. ಮನೆಯವರೆಲ್ಲ ಉಪವಾಸದಿಂದ ಬಳಲುತ್ತಿದ್ದರು. ಸಿರಿವಂತ ಕರಣಿಕನಲ್ಲಿ ಜೋಳದ ಸಂಗ್ರಹವಿತ್ತು. ಅವನ ಬಳಿ ಹೋಗಿ ಶರೀಫರು ಕಾಳು ಕೊಡಬೇಕೆಂದು ಕೇಳಿಕೊಂಡರು. ಆ ಕರಣಿಕ ಜಿಪುಣನಾಗಿದ್ದ. ತೀರ ಸಣ್ಣ ಪ್ರಮಾಣದಲ್ಲಿ ಮಾತ್ರ ಕಾಳು ಕೊಟ್ಟ. ಅವು ಮನೆಯವರ ಹಸಿವನ್ನು ಹಿಂಗಿಸಲು ಸಾಲುವಷ್ಟಿರಲಿಲ್ಲ. ಮಾನವನ ಈ ಬಗೆಯ ಅಲ್ಪತನದಿಂದ ಕೆರಳಿದ ಶರೀಫರು ಹಾಡಿದರು:

ಕರಣಿಕ ಕೊಟ್ಟ ಅರಪಾವು ಜೋಳದಿಂದ ಹೊಟ್ಟೆ
ಬರ ಹಿಂಗುವದ್ಯಾಂಗಲೋ ಮನಸೇ ||ಪ||
…….ಬರಿದೆ ಆಶೇಕ ಬಿದ್ದೆಲೋ ಮನಸೇ
ಸತಿಸುತರ ಹಸಿವಿಗೊದಗದ ಕಾಳು | ಮನಿಗೊಯ್ಯೊ
ಮತಿಗೇಡಿಯೆನ್ನುತಿಹರೋ ಮನಸೆ.
ಅರ ಬೇಡಿದರಿಲ್ಲಾ| ಅರ ಕಾಡಿದರಿಲ್ಲಾ | ಪ್ರಾರಬ್ಧ
ಕೃತಭೋಗವು ಮನಸೇ.
ಚಾರುತರವಾದ ವೃಷಭನ ಮಂತ್ರಬಲವಿರಲು ನರರ
ಹಂಗೇನೆಲೊ ಮನಸೇ ||

ಹೀಗೆ ಹಾಡುತ್ತ ಕರಣಿಕರು ಕೊಟ್ಟ ಅರಪಾವು ಜೋಳವನ್ನು ಮರಳಿ ಕೊಟ್ಟು ಶರೀಫರು ಸಾಗಿದರು.

ಅತ್ತಿಗೇರಿಯ ಹಿರೇಮಠಕ್ಕೆ ಶರೀಫರು ಆಗಾಗ ಹೊಗುತ್ತಿದ್ದರು. ಆ ಮಠದ ಸ್ವಾಮಿಗಳಿಗೆ ಶರೀಫರ ಬಗೆಗೆ ವಿಶ್ವಾಸವೂ ಇತ್ತು. ಶ್ರಾವಣ ಮಾಸದಲ್ಲಿ ಆ ಮಠದಲ್ಲಿ ಪುರಾಣ ಪ್ರವಚನ ನಡೆಯುತ್ತಿತ್ತು. ಒಮ್ಮೆ ಪ್ರವಚನ ಮಾಡಲು ಬಂದ ವ್ಯಕ್ತಿ ಅಷ್ಟೊಂದು ಪಂಡಿತನಾಗಿರಲಿಲ್ಲ, ದುರಭಿಮಾನಿಯೂ ಆಗಿದ್ದ. ಶರೀಫರು ಪ್ರವಚನ ಕೇಳಲೆಂದು ಹೋಗಿ ಆತನ ಮುಂದೆ ಕುಳಿತರು. ಪ್ರವಚನಕಾರನಿಗೆ ಇದು ಇಷ್ಟವಾಗಲಿಲ್ಲ. ಶರೀಫ ಅಲ್ಲಿಂದ ಎದ್ದು ಹೋಗದಿದ್ದರೆ ತಾನು ಪ್ರವಚನ ಆರಂಭಿಸುವುದೆಲ್ಲವೆಂದು ಹಟ ಹಿಡಿದ. ಶರೀಫರ ಬಗೆಗೆ ಹೀನವಾದ ಮಾತುಗಳನ್ನೂ ಆಡಿದ. ಪ್ರವಚನಕಾರರು ತೋರಿದ ಸಣ್ಣ ಬುದ್ಧಿಯು ಶರೀಫರನ್ನು ಕೆಣಕಿತು:

ಎದ್ದು ಹೋಗತೀನಿ ತಾಳೆಲೋ ಛೀ ಬುದ್ಧಿಗೇಡಿ
ಎದ್ದು ಹೋಗತೀನಿ ತಾಳೆಲೋ||
ಇದ್ದು ಇಲ್ಲೇ ಭವಕೆ ಭೀಳೋ
ಸದ್ಯ ಸದ್ಗುರು ಶಾಪ ನಿನಗೆ
ಸಿದ್ಧಲಿಂಗನ ಪಾದ ಸಾಕ್ಷಿ

-ಹೀಗೆ ಹಾಡು ಹೇಳುತ್ತ ಅಲ್ಲಿಂದ ಹೊರಟು ಹೋದರು. “ನಾನು ಈ ಜಗತ್ತಿನ ಬಂಧನದಿಂದ ಎದ್ದು ಹೋಗುತ್ತೇನೆ. ನೀನು ಈ ಜಗದ ಬಂಧನದಲ್ಲಿಯೇ ಬಿದ್ದುಕೋ” ಹೀಗೆಂಬುದು ಅವರ ಹಾಡಿನ ಅರ್ಥ. ಶರೀಫರಿಗೆ ಮಾತಿನ ಸಿದ್ಧಿ ಸಿಕ್ಕಿತ್ತು. ಅವರು ನುಡಿದಂತೆ ನಡೆಯುತ್ತಿತ್ತು. ಸದ್ಗುರುವಿನ ಶಾಪ ಪ್ರವಚನಕಾರರಿಗೆ ತಟ್ಟದೆ ಹೋಗಲಿಲ್ಲ.

ಗಂಡನ ಮನೆಗೆ ಹೊರಟ ಹೆಣ್ಣು

ನಿತ್ಯದ ಬಾಳಿನಲ್ಲಿಯ ಘಟನೆಗಳ ಮೂಲಕ ರೂಪುಗೊಂಡ ಶರೀಫರ ಹಾಡುಗಳು ರಮ್ಯವಾಗಿವೆ, ಅರ್ಥಪೂರ್ಣವಾಗಿವೆ.

ಅತ್ತಿಗೇರಿ ಗ್ರಾಮದ ಹೆಣ್ಣುಮಗಳೊಬ್ಬಳು ಮೊದಲ ಸಲ ಗಂಡನ ಮನೆಗೆ ಹೊರಟು ನಿಂತಿದ್ದಳು. ತವರು ಮನೆಯನ್ನು ತೊರೆದು ಮೊದಲ ಸಲ ಹೊರಟಾಗ ಆಕೆ ಅಳುತ್ತಿದ್ದಳು. ಸುತ್ತ ನೆರೆದವರು ಆಕೆಯನ್ನು ಸಮಾಧಾನ ಮಾಡುತ್ತಿದ್ದರು. ಶರೀಫರು ಈ ಸನ್ನಿವೇಶವನ್ನು ಕಂಡರು. ಆಗ ಹಾಡೊಂದು ರೂಪುಗೊಂಡಿತು.

ಅಳಬೇಡಾ ತಂಗಿ ಅಳಬೇಡ |ನಿನ್ನ|
ಕಳುಹ ಬಂದವರಿಲ್ಲಿ
ಉಳುಹಿಕೊಂಬುವರಿಲ್ಲ
ಖಡಕಿಲೆ ಉಡಿಯಕ್ಕಿ ಹಾಕಿದರವ್ವ | ಒಳ್ಳೆ
ದುಡುಕಿಲೆ ಮುಂದಕ್ಕ ದೂಕಿದರವ್ವ
ಹುಡುಕ್ಯಾಡಿ ಮದುವ್ಯಾದಿ ಮೊಜು ಕಾಣವ್ವ
ಮಿಡಿಕ್ಯಾಡಿ ಮಾಯಾದ ಮದವೇರಿದವ್ವ
…………
…………
ಕಂಡವರ ಕಾಲು ಬಿದ್ದು ಕಥಮುಗಿದು ನಿಂತರೇ
ಗಂಡನ ಮನಿ ನಿನಗ ಬಿಡದಾಯಿತವ್ವ ತಂಗೀ

“ಮದುವೆಯಾದ ಹೆಣ್ಣು ಮಗಳು ಗಂಡನ ಮನೆಗೆ ಹೋಗಲೇಬೇಕು. ಅಳುತ್ತ ನಿಂತರೂ ಅದು

ತಪ್ಪುವಂತಿಲ್ಲ . ಕಳುಹಿಸಲು ಬಂದವರು ಯಾರೂ ಉಳಿದುಕೊಳ್ಳಲಾರರು” ಹೀಗೆ ಈ ಹಾಡಿನ ಶಬ್ದಾರ್ಥ. ಆದರೆ ಸಾಂಕೇತಿಕವಾಗಿ ಇದು ಸಂಸಾರಕ್ಕೆ ಬಂದ ಜೀವಿಯನ್ನು ಕುರಿತು ಹೇಳುವ ಮಾತಾಗಿದೆ. ಈ ಲೋಕದಲ್ಲಿ ಹುಟ್ಟಿಬಂದ ಮೇಲೆ ಸಂಸಾರ, ಸಾವು ಅನಿವಾರ್ಯ. ಅಳುವುದರಿಂದ ಪ್ರಯೋಜನವೇನೂ ಇಲ್ಲ. ಯಾರೂ ನಮ್ಮನ್ನು ಉಳಿಸಿಕೊಳ್ಳಲಾರರು. ಸಂಸಾರದಲ್ಲಿಯ ದುಃಖವನ್ನು, ಮರಣವನ್ನು ನಾವು ಎದುರಿಸಲೇಬೇಕು. ಪರಮಾತ್ಮನನ್ನು ಸಾಧಿಸಿಕೊಳ್ಳುವ ದೃಷ್ಟಿಯಿಂದ ನಾವು ಬಾಳಲೇಬೇಕು.

ಹುಲುಗೂರಿನಲ್ಲಿ ದೊಡ್ಡ ಸಂತೆ ನಡೆಯುತ್ತಿತ್ತು. ಮಳೆಗಾಲದಲ್ಲಿ ಒಬ್ವ ಮುದುಕಿ ಆ ಸಂತೆಗೆಂದು ಬಂದಿದ್ದಾಳೆ. ಅಲ್ಲಿ ದೊಡ್ಡ ಜನಸಂದಣಿ ಸೇರಿದೆ. ಗದ್ದಲೋ ಗದ್ದಲ. ಅಲ್ಲಿ ಕಳ್ಳರೂ ಇದ್ದಾರೆ. ಮಳೆಯಿಂದಾಗಿ ನೆಲವೆಲ್ಲ ಕೆಸರಾಗಿದೆ. ವಯಸ್ಸು ಹೆಚ್ಚಾಗಿ, ಶಕ್ತಿಗುಂದಿದ ಈ ಮುದುಕಿ ಅಸಹಾಯಕ ಸ್ಥಿತಿಯಲ್ಲಿದ್ದಾಳೆ. ಆಕೆಯನ್ನು ಕಂಡ ಶರೀಫರು ಹಾಡತೊಡಗಿದರು.

ಬಿದ್ದೀಯಬೇ ಮುದುಕಿ
ನೀ ದಿನಾ ಹೋದಾಕಿ ಇರು ಬಹಳ ಜ್ವಾಕಿ||
ಸದ್ಯಕ್ಕಿದು ಹುಲಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ
ಬಿದ್ದಗಿದ್ದರ ನಿನ್ನ ಎಬ್ಬಿಸುವರುಯಾರಿಲ್ಲ
ಬುದ್ಧಿಗೇಡಿ ಮುದುಕಿ ಜ್ವಾಕಿ ||೧||
ಬುಟ್ಟಿಯೊಳಗೆ ಪಟ್ಟೇವ ನಿಟ್ಟಿ
ಉಟ್ಟರದೊಳಗಿನ ರೊಕ್ಕ ಜ್ವಾಕಿ
ಕೆಟ್ಟ ಗಂಟೀ ಚೌಡ್ಯಾರು ನಿನ್ನ
ಗಂಟ ಬಿದ್ದಗಿದ್ದಾರು ಮುದುಕಿ ||೨||
ಶಿಶುನಾಳದೊಡೆಯನನ್ನು
ಹಸನಾಗಿ ಸ್ಮರಿಸು ನೀನು
ಕೆಸರೊಳು ಜಾರಿಗೀರೀ
ವಸುಧಿಗೆ ಹೌಹಾರಿ ಹಾರಿ ||೩||

ಸಂತೆಯಲ್ಲಿ ಕಂಡ ಮುದುಕಿ ಶರೀಫರಿಗೆ ಒಂದು ಸಂಕೇತ. ಅನೇಕ ಜನ್ಮಗಳಲ್ಲಿ ಹುಟ್ಟಿಬಂದ ಜೀವಿಗೆ ಸಂಸಾರದ ಮೋಹವಿನ್ನೂ ಅಳಿದಿಲ್ಲ. ಬೀಳುವ ಹೆದರಿಕೆಯಿರುವುದರಿಂದ ಜೋಕೆಯಾಗಿರಬೇಕು. ಬಿದ್ದರೆ ಬೇರೆ ಯಾರೂ ಎಬ್ಬಿಸಲಾರರು. ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕು. ಕಾಮ, ಕ್ರೋಧ ಇತ್ಯಾದಿ  

ಕಳ್ಳರಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಪರಮಾತ್ಮನನ್ನು ಸ್ಮರಿಸುವುದರಿಂದ ಮಾತ್ರ ನಾವು ಪಾರಾಗಬಲ್ಲೆವು. ಈ ಬಗೆಯ ಬೋಧೆಯು ಸಂತೆಯಲ್ಲಿಯ ಮುದುಕಿಯ ದೃಶ್ಯದಿಂದಾಗಿ ಶರೀಫರು ಹಾಡಿನಲ್ಲಿ ಹೊರಹೊಮ್ಮಿ ಬಂದಿತು.

ಸಹಜ ಆನಂದದಲ್ಲೇ ಬಾಳಿದರು

ಹುಟ್ಟಿದ ಜೀವಿಗೆ ಸಾವು ತಪ್ಪಿದ್ದಲ್ಲ. ಆದರೆ ಸಾವು ಯಾವಾಗ ಬರುವುದೆಂಬುದು ಸಾಮಾನ್ಯರಿಗೆ ತಿಳಿಯುವುದಲ್ಲ. ಜ್ಞಾನಿಗಳು ಅದನ್ನು ತಿಳಿಯಬಲ್ಲರು. ಶರೀಫರಿಗೆ ಅದು ತಿಳಿದಿತ್ತು. ಎಪ್ಪತ್ತು ವರ್ಷತುಂಬು ಬಾಳನ್ನು ನಡೆಸಿದ ಶರೀಫರು ೧೮೮೯ ರ ಜುಲೈ ೩ ರಂದು ಮರಣ ಹೊಂದಿದರು. ಮರಣ ಹೊಂದುವ ದಿನ ತಮ್ಮ ಮೆಚ್ಚಿನವರನ್ನು, ಶಿಷ್ಯರನ್ನು ಕರೆಯಿಸಿಕೊಂಡರು. ಅವರೆಲ್ಲರ ಎದುರು ಹಾಡತೊಡಗಿದರು.

ಬಿಡತೀನಿ ದೇಹಾ ಬಿಡತೀನಿ | ಬಿಡತೀನಿ ದೇಹವ
ಕೊಡತೇನಿ |
ಭೂಮಿಗೆ ಇಡತೇನಿ ಮಹಿಮರ ನಡತಿಯ ಹಿಡಿದು
ದೇಹ || ೧ ||
……………….
ಪಾವಕಗಾಹುತಿ ಮಾಡಿ ಜೀವನದನುವು ಬ್ಯಾರೆ | ನಾ
ಬಯಲು ಬ್ರಹ್ಮದೊಳಾಡುತಲಿ
ಅವನಿಯೊಳು ಶಿಶುನಾಳಧೀಶನೆಗತಿಯಿಂದು | ಜವನ
ಬಾಧೆಯ ಗೆದ್ದು ಶಿವಲೋಕದೊಳು ದೇಹಾ
ಬಿಡತೀನಿ ||೩||

"ಬಿಡತೇನಿ ದೇಹಾ ಬಿಡತೇನಿ"

ನಾನು ದೇಹವನ್ನು ಬಿಡುತ್ತೇನೆ; ಬಯಲು ಬ್ರಹ್ಮದೋಳು ಆಡುತ್ತೇನೆ. ಯಮನ ಬಾಧೆಯನ್ನು ಗೆಲ್ಲುತ್ತೇನೆ. ಶಿವಲೋಕವ ಪಡೆಯುತ್ತೇನೆ. ಹೀಗೆಂದು ಶರೀಫರು ಹಾಡಿದರು. ಮರಣದ ಕಾಲಕ್ಕೆ ಹೀಗೆ ಹೇಳಬಲ್ಲವರು, ಹಾಡಬಲ್ಲವರು ಮಹಾ ಪುರುಷರೇ ಸರಿ.

ಶರೀಫರು ದೇಹ ಬಿಟ್ಟಾಗ ಶಿಶುನಾಳದ ನೆರೆಯ ಹಳ್ಳಿಗಳ ಸಾವಿರಾರು ಜನ ಸೇರಿದರು. ಬೇರೆಬೇರೆ ಜಾತಿಗಳ ಜನರೆಲ್ಲ ಒಂದಾಗಿ ಶರೀಫರ ಸಮಾಧಿ ಮಾಡಿದರು. ಶರೀಫರು ಜೀವಿಸಿದಾಗ ಅವರನ್ನು ಅಲಕ್ಷಿಸಿದವರು, ನಿಂದಿಸಿದವರು, ಅವರಿಗೆ ಕೀಟಲೇ ಮಾಡಿದವರು ಎಲ್ಲರೂ ಅವರ ಮಹಿಮೆಗೆ ತಲೆಬಾಗಿದರು. ಶರೀಫರ ಸಮಾಧಿಯ ತಾಣವೀಗ ಸ್ಫೂರ್ತಿಕೇಂದ್ರವಾಗಿದೆ.

ಸಾಧುಗಳ ಸಹಜ ಪಥವಿದು | ಆನಂದದಿಂದಿರುವುದು
ಬೇಕು-ಬ್ಯಾಡ ಎಂಬುದೆಲ್ಲ ಸಾಕು ಮಾಡಿ |
ವಿಷಯ ನೂಕಿ
ಲೋಕದೊಳು ಏಕವಾಗಿ ಮೂಕರಂತೆ
ಚರಿಸುತಿಹರು ||೧||
ಎಲ್ಲಿ ಕುಳಿತರಲ್ಲೇ ದೃಷ್ಟಿ | ಎಲ್ಲಿ ನಿಂತರಲ್ಲೆ ಲಕ್ಷ್ಯ
ಅಲ್ಲಿ, ಇಲ್ಲಿ, ಎಂಬುದಳಿದು | ಎಲ್ಲ ತಾವೆ
ಚರಿಸುತಿಹರು ||೨||
ದೇಹ ಧರಿಸಿ ದೇಹಭೋಗ ನೀಗಿ ನಿತ್ಯ ನಿರ್ಮಳಾತ್ಮ
ಶಿಶುನಾಳೇಶನ ಬೆಳಕಿನೊಳು ಬೆಳಗುತಿಹರು

ದೇಹ ಧರಿಸಿದ ಶರೀಫರು ದೇಹದ ಸುಖದತ್ತ ಮನಸ್ಸನ್ನು ಹರಿಯಬಿಡಲಿಲ್ಲ. ಬಾಳಿನಲ್ಲಿ ಪರಮಾತ್ಮನ ಚಿಂತನೆ ಹೊರತು ಬೇರೆ ಏನನ್ನೂ ಗಮನಿಸಲಿಲ್ಲ. ಅವರು ಸಂಸಾರದ “ಬೇಕು-ಬೇಡ” ಗಳನ್ನು ಮೀರಿ ನಿಂತು ಸಹಜ ಆನಂದದ ನಿಲುವಿನಲ್ಲಿ ಬಾಳಿದರು.

ಶರೀಫರು ಶಿಶುನಾಳೇಶನ ಬೆಳಕಿನೊಳು ಬೆಳಗಿದ ಪುಣ್ಯ ಪುರುಷರು.