ಸ್ನೇಹ ಮಾಡಬೇಕಿಂಥವಳ! – ಒಳ್ಳೇ
ಮೋಹದಿಂದಲಿ ಬಂದು – ಕೂಡುವಂಥವಳ

ಚಂದ್ರಗಾವಿ ಶೀರೀನುಟ್ಟು – ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು – ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!

ಅರಗಿಳಿ ಸಮ ಇವಳ ನುಡಿಯು – ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು – ಒಳ್ಳೇ
ಬಳುಬಳುಕುವ ನಡುವು ತಳಿರಡಿಯು.

ಮುಕ್ತ ಕಾಮಿನಿ ಎನ್ನ ಕಾಡಿ – ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ – ದೇವ
ಶಿಶುನಾಳಾಧೀಶನ ಪಾದಕೆ ದೂಡಿ!