ಒಳ್ಳೇ ನಾರಿ ಕಂಡೆ – ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ

ಕೈಯು ಕಾಲು – ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ

ಮುಟ್ಟಲು ಕೊಲ್ಲುವಳೋ – ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.

ಮೀಸಲು ನಗೆಯುವಳು – ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ – ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.