. ಪ್ರವೇಶ :

ಮಾನವ ತನ್ನ ಜೀವನದ ಅನುಭವಗಳನ್ನು ಒಂದಲ್ಲ ಒಂದು ರೀತಿಯಿಂದ ಅಭಿವ್ಯಕ್ತಿಗೊಳಿಸುತ್ತಾನೆ. ಈ ಅನುಭವಾಭಿವ್ಯಕ್ತಿಗೆ ಪಾರಿಭಾಷಿಕವಾಗಿ ಕಲೆ (Art < Ars (Lat.)) ಎನ್ನುತ್ತಾರೆ. ಅಭಿವ್ಯಕ್ತಿಯ ಉದ್ದೇಶಕ್ಕನುಗುಣವಾಗಿ ಕಲೆಯಲ್ಲಿ ಪ್ರಮುಖವಾಗಿ ಎರಡು ವಿಧ. ಮೂಲತಃ ಅದು ಜೀವನದ ನೀಡಿಕೆಗಳ ಪೂರೈಕೆಗಾಗಿ-ಹೊಟ್ಟೆಗಾಗಿ, ಹಿಟ್ಟಿಗಾಗಿ-ಮೂಡಿ ಬಂದರೆ ಅದನ್ನು ಪ್ರಾಯೋಜ್ಯ ಕಲೆ (Useful Art) ಎಂದೂ, ಆನಂದಕ್ಕಾಗಿ, ಹಿಗ್ಗಿಗಾಗಿ ಮೂಡಿಬಂದರೆ ಲಲಿತಕಲೆ (Fine Art) ಎಂದೂ ಕರೆಯುತ್ತಾರೆ.

. ಲಲಿತ ಕಲೆ :

ಲಲಿತ ಕಲೆಗೆ ಸಹಜವಾಗಿ ಪ್ರಜ್ಞೆ (Consciousness), ಶೈಲಿ (Style), ಮಾಧ್ಯಮ (Medium), ಕಾಲ (Period/Time) ಮತ್ತು ಪ್ರದೇಶ (Region) ಎಂಬ ಐದು ಪ್ರಮುಖ ಆಯಾಮ (Dimension)ಗಳಿವೆ. ಪ್ರತಿಯೊಂದು ಆಯಾಮವೂ ಎರಡು ನೆಲೆಗಳಲ್ಲಿ ಕ್ರಿಯಾತ್ಮಕವಾಗಿರುತ್ತದೆ.

ಹೆಚ್ಚಿನ ಸ್ಪಷ್ಟತೆಗಾಗಿ ಈ ವಿವರಗಳನ್ನು ಈ ಕೆಳಗಿನಂತೆ ವೃಕ್ಷ ಚಿತ್ರದಲ್ಲಿ ಸೂಚಿಸಲಾಗಿದೆ.

ಲಲಿತ ಕಲೆ

ಪ್ರಜ್ಞೆ

ಶೈಲಿ

ಮಾಧ್ಯಮ

ಕಾಲ

ಪ್ರದೇಶ

ಸಮಷ್ಟಿ

ವೃಷ್ಟಿ

ದೇಶಿ

ಮಾರ್ಗ

ಶಾಬ್ದಿಕ

ಅಶಾಬ್ದಿಕ

ಪ್ರಾಚೀನ

ಆಧುನಿಕ

ಗ್ರಾಮೀಣ

ನಗರ

 

. ವರ್ಗೀಕರಣ :

ಪ್ರಸ್ತುತ ತಾತ್ವಿಕ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ಗಮನಿಸಿದಾಗ ಅಲ್ಲಿ ನಾವು ಎರಡು ಬಗೆಗಳನ್ನು ಗಮನಿಸುತ್ತೇವೆ. ಒಂದು, ಮೂಲತಃ ಸಮಷ್ಟಿ ಪ್ರಜ್ಞೆ (Common Consciousness) ದೇಶಿ ಶೈಲಿ (Popular Style) ಯ, ಶಾಬ್ದಿಕ ಮಾಧ್ಯಮ (Verbal medium)ದ, ಪ್ರಧಾನವಾಗಿ, ಪ್ರಾಚೀನ ಕಾಲ (Antic) ದ, ಮತ್ತು ಗ್ರಾಮೀಣ (Rural) ಪ್ರದೇಶದ ಸಾಹಿತ್ಯ. ಇದನ್ನು ನಾವು ಜನತಾ ಸಾಹಿತ್ಯ (Popular / People’s literature) ಎಂದು ಕರೆಯುತ್ತೇವೆ. ಎರಡನೆಯದು, ಮೂಲತಃ ವ್ಯಷ್ಟಿ ಸ್ವರೂಪ (Individual consciousness)ದ, ಮಾರ್ಗಶೈಲಿ (Elitist)ಯ, ಅಶಾಬ್ದಿಕ/ಲಿಪ್ಯಾತ್ಮಕ (Non-verbal) ಮಾಧ್ಯಮದ, ಆಧುನಿಕಕ್ಕೆ ಹೆಚ್ಚು ಪ್ರಸ್ತುತಗೊಂಡು ನಗರವಾಸಿಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುವ ಸಾಹಿತ್ಯ. ಇದನ್ನು ನಾವು ಲಲಿತ ಸಾಹಿತ್ಯ (Fine literature) ಎಂದು ಕರೆಯುತ್ತೇವೆ. ಯಾವುದಾದರೊಂದು ಸಮಾನಧರ್ಮವುಳ್ಳ ಜನಸ್ತೋಮದ ಸಾಮುದಾಯಿಕ ಸ್ವರೂಪದ ಶಾಬ್ದಿಕ ಅಭಿವ್ಯಕ್ತಿಯೇ ಜನಪದ ಸಾಹಿತ್ಯ (Folk literature). ಅದು ಹೆಚ್ಚು ಜನಸಮುದಾಯಕ್ಕೆ ಸೀಮಿತವಾದದ್ದು (Esoteric). ಅದು ಕಾಲಾಂತರದಲ್ಲಿ ಲಿಪ್ಯಾತ್ಮಕಗೊಂಡು, ಸೀಮೋಲ್ಲಂಘನೆ ಮಾಡಿ, ವ್ಯಾಪಕ (Exoteric) ಸ್ವರೂಪವನ್ನು ಪಡೆದುಕೊಂಡು ಜನಪ್ರಿಯ/ಜನಾದರಣೀಯ ಸಾಹಿತ್ಯ (Popular/Favourite literature) ಆಗಬಹುದು.

. ಭಾರತೀಯ ಪ್ರಾಚೀನ ಸಾಹಿತ್ಯ (Antic – Literature) :

ವೇದೋಪನಿಷತ್ತುಗಳು ಭಾರತೀಯ ಪ್ರಾಚೀನ ಸಾಹಿತ್ಯವೆಂದು ಹೆಸರು ವಾಸಿಯಾಗಿವೆ. ಇವು ಜನತಾ ಸಾಹಿತ್ಯದ ಲಕ್ಷಣಗಳನ್ನು ಬಹುಮಟ್ಟಿಗೆ ಹೊಂದಿರುವುದರಿಂದ ಅವುಗಳನ್ನು ಜನತಾ ಸಾಹಿತ್ಯ ಎಂದು ಪರಿಗಣಿಸುವುದು ಹೆಚ್ಚು ಸೂಕ್ತವೆಂದು ನನ್ನ ವೈಯಕ್ತಿಕ ಖಚಿತ ಅಭಿಪ್ರಾಯ.

ಒಟ್ಟಿನಲ್ಲಿ ವೇದೋಪನಿಷತ್ತುಗಳನ್ನು ಶಿಷ್ಟಪದ ಸಂಪ್ರದಾಯ (Elitist – lore) ಎಂದು ಕರೆಯುವುದಕ್ಕಿಂತ ಭಾರತೀಯ ಪ್ರಾಚೀನ ಸಂಪ್ರದಾಯ (Indian antic – lore) ಅಥವಾ ಜನತಾ ಸಾಹಿತ್ಯ ಎಂದು ಕರೆಯುವುದೇ ಹೆಚ್ಚು ಸಮಂಜಸ. ಭಾರತೀಯ ಪರಂಪರೆಯಲ್ಲಿ ಭಾರತೀಯ ಅವಲೋಕನದ ಸಾಮೂಹಿಕ ಅಭಿವ್ಯಕ್ತಿಯಾಗಿ, ಬಹು ಪ್ರಾಚೀನ ಕಾಲದಿಂದ ಹರಿದುಬಂದಂತಹ ಅಪೌರುಷೇಯ (Non – authored) ವಾಚಿಕ ಸಂಪ್ರದಾಯವನ್ನು ಕೇವಲ ಪಂಡಿತ ವಿದ್ವಜ್ಜನರಿಗೆ ಸೀಮಿತಗೊಳಿಸಿ ಶಿಷ್ಟ ಸಂಪ್ರದಾಯವೆಂದು ಹೆಸರಿಸುವುದು ಭಾರತೀಯ ಸನಾತನ ಸಂಪ್ರದಾಯಕ್ಕೆ ಅಪಪ್ರಚಾರ ಮಾಡಿದಂತೆ. ಯಾಕೆಂದರೆ, ಈ ತೋಂಡೀ ಸಂಪ್ರದಾಯ ಪಂಡಿತರಂತೆ ಪಾಮರರನ್ನೂ, ಶಿಷ್ಟರಂತೆ ಜನಸಾಮಾನ್ಯರನ್ನೂ ಸಂವಹಿಸುತ್ತದೆ.

ಮೇಲಿನ ಕಾರಣಗಳಿಂದಾಗಿ ಪಂಚಭೂತಗಳನ್ನು (Elements) ಅಭಿವ್ಯಕ್ತಪಡಿಸುವ ವೇದೋಪನಿಷತ್ತು ಮೊದಲಾದ ಸನಾತನ ಸಾಹಿತ್ಯವನ್ನು ಶಿಷ್ಟ ಸಂಪ್ರದಾಯ (Elitistic – lore) ಎಂದು ಕರೆಯುವುದಕ್ಕಿಂತ ಭಾರತೀಯ ಪ್ರಾಚೀನ ಸಂಪ್ರದಾಯ (Indian Antic-lore) ಎಂದು ಕರೆಯುವುದೇ ಹೆಚ್ಚು ಸೂಕ್ತವೆಂಬುದು ನನ್ನ ವೈಯಕ್ತಿಕ ನಿಲುವು

[1].

. ಪ್ರಾಚೀನ ಸಂಪ್ರದಾಯದ ಪ್ರಭಾವ :

ಸು. ೪,೦೦೦ ವರ್ಷಕ್ಕಿಂತಲೂ ಪ್ರಾಚೀನವಾಗಿರುವ ಭಾರತೀಯ ಸಾಂಪ್ರದಾಯಿಕ ಸಾಹಿತ್ಯ ಸಂಸ್ಕೃತದಲ್ಲಿದ್ದು ಅದು ಆರ್ಯ ಹಾಗೂ ದ್ರಾವಿಡ ಜನಾಂಗಗಳ ಪ್ರತ್ಯೇಕ ಜೀವನದೃಷ್ಟಿ (World-view) ಆಗಿರದೆ, ಸಮನ್ವಯಗೊಂಡ ಸಮಗ್ರ ಭಾರತೀಯ ಅವಲೋಕನದ ಅಭಿವ್ಯಕ್ತಿಯೆಂದೇ ಇಂದು ಗ್ರಾಹ್ಯವಾಗಿದೆ. ಶತಮಾನಗಳು ಉರುಳಿದಂತೆ ಭಾರತದಲ್ಲಿಯ ಹಲವಾರು ಜನಾಂಗಗಳು ಮತ್ತು ಅವುಗಳ ಸಂಸ್ಕೃತಿಗಳು ಸಮೀಕರಣಗೊಂಡು ಒಂದು ರಾಷ್ಟ್ರೀಯ ಸಂಪ್ರದಾಯ ಪ್ರಾಚೀನ ಕಾಲದಲ್ಲಿಯೇ ರೂಪುಗೊಂಡಿದೆ. ಅದರ ಶಾಬ್ದಿಕ ಅಭಿವ್ಯಕ್ತಿಯೇ ವೇದೋಪನಿಷತ್ತುಗಳು. ಈ ಸಾಂಪ್ರದಾಯಿಕ ಸಾಹಿತ್ಯದಲ್ಲಿ ಉಕ್ತವಾಗಿರುವ ಪಂಚಮಹಾಭೂತಗಳ ವಿವರ ನಮಗೆ ಪ್ರಸ್ತುತ. ಜನಪದ ನಂಬಿಕೆಗಳ ವರ್ಗೀಕರಣಕ್ಕೆ ಹಾಗೂ ಅಧ್ಯಯನಕ್ಕೆ ಈ ವಿವರಗಳು ಉಪಯುಕ್ತವೆಂದು ನಮ್ಮ ಗ್ರಹಿಕೆ.

. ಪಂಚಮಹಾಭೂತಗಳು (Primordial Elements) :

ಭಾರತೀಯ ಪ್ರಾಚೀನ ಸಂಪ್ರದಾಯದಲ್ಲಿ, ಭೌತಿಕ ಸೃಷ್ಟಿ ಪಂಚಮಹಾಭೂತಗಳಿಂದ ನಿರ್ಮಾಣಗೊಂಡಿದೆ ಎಂಬ ಅವಲೋಕನ ಪ್ರಧಾನವಾಗಿ ಅಭಿವ್ಯಕ್ತಗೊಂಡಿದೆ. ಈ ಭಾರತೀಯ ಅವಲೋಕನದ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳನ್ನು ವರ್ಗೀಕರಿಸುವ ಪ್ರಯತ್ನ ಜಾನಪದ ಅಧ್ಯಯನದಲ್ಲಿ ನಡೆಯುವುದು ಸ್ತುತ್ಯ.

ಆಧುನಿಕ ವಿಜ್ಞಾನದ ಪ್ರಕಾರ, ಪದಾರ್ಥ, (Matter) ಮತ್ತು ಶಕ್ತಿ (Energy)ಗಳೇ ವಿಶ್ವದ ಮೂಲವಸ್ತುಗಳು (Fundamental Elements). ಆದರೆ ಭಾರತೀಯ ಅವಲೋಕನ (Weltanchauung)ದ ಪ್ರಕಾರ, ಭೌತಿಕ ಸೃಷ್ಟಿ ಪಂಚಮಹಾಭೂತಗಳಿಂದ ನಿರ್ಮಾಣಗೊಂಡಿದೆ. ಈ ಪಂಚಭೂತಗಳನ್ನು ಪರಮಾಣು (Atom) ಗಳೆಂದು ತಿಳಿದುಕೊಳ್ಳಬಾರದು.

ಇವು ಅಂತರ್-ಸಂಬಂಧ (Inter-relatedness) ಉಳ್ಳವುಗಳಾಗಿದ್ದು, ಒಂದರಿಂದ ಇನ್ನೊಂದು ಹುಟ್ಟಿಕೊಂಡು ಬಂದಂಥವುಗಳು. ಈ ಮೂಲವಸ್ತುಗಳನ್ನು ದ್ರವ್ಯ ಎಂದು ತಿಳಿದುಕೊಳ್ಳುವುದಕ್ಕಿಂತ ಶಕ್ತಿಗಳು (Force/Vectors) ಎಂದು ಪರಿಗಣಿಸುವುದು ಸೂಕ್ತ. ಈ ಶಕ್ತಿಗಳು ಸೃಷ್ಟಿಯಲ್ಲಿ ಅಂತರ್ಗತವಾಗಿದ್ದುಕೊಂಡು ಅದರ ಬಾಹ್ಯ ಸ್ವರೂಪಕ್ಕೆ ಕಾರಣವಾಗಿವೆ.[2]

ಆಕಾಶ, ವಾಯು, ಅಗ್ನಿ, ಆಪ್, ಪೃಥ್ವಿ- ಇವೇ ಮಹಾಭೂತ ಪಂಚಕಗಳು. ತೇಜೋರೂಪಿಯಾದ ನಿರಾಕಾರ ಆತ್ಮಶಕ್ತಿ ಪ್ರಪ್ರಥಮವಾಗಿ ಆಕಾಶತತ್ತ್ವವನ್ನೂ, ಆಕಾಶತತ್ತ್ವದಿಂದ ವಾಯುತತ್ತ್ವವನ್ನೂ, ಆದರಿಂದ ಅಗ್ನಿತತ್ತ್ವವನ್ನೂ, ಮತ್ತದರಿಂದ ಆಪ್‌ತತ್ತ್ವವನ್ನೂ, ಅದರಿಂದ ಪೃಥ್ವಿತತ್ತ್ವವನ್ನೂ ಸೃಷ್ಟಿಸಿರುವುದಾಗಿ ಭಾರತೀಯ ಪ್ರಾಚೀನ ಸಂಪ್ರದಾಯದಿಂದ ತಿಳಿದುಕೊಳ್ಳಬಹುದು. ಇದು ಭೌತಿಕ ಪ್ರಪಂಚದ ಸೃಷ್ಟಿ ವೃತ್ತಾಂತ.

ಪಂಚಭೂತಗಳು ಪರಸ್ಪರ ಪೂರಕವಾಗಿವೆಯಲ್ಲದೆ ಜ್ಞಾನೇಂದ್ರಿಯಗಳಿಗೆ ಸಹಾಯಕವಾಗಿವೆ :

ಆಕಾಶದ ಅವಕಾಶವಿಲ್ಲದೆ ಶಬ್ದ ಕೇಳಿಸುವುದಿಲ್ಲ ;
ವಾಯುವಿಲ್ಲದಿದ್ದರೆ ಸ್ಪರ್ಶ ತಿಳಿಯುವುದಿಲ್ಲ ;
ಬೆಳಕಿಲ್ಲದಿದ್ದರೆ ಕಣ್ಣು ಕಾಣಿಸುವುದಿಲ್ಲ ; ನೀರಿಲ್ಲದಿದ್ದರೆ ರಸ ತಿಳಿಯುವುದಿಲ್ಲ;
ಭೂಮಿ ಇಲ್ಲದಿದ್ದರೆ…… ವಾಸನೆಯಿಲ್ಲ.

(ರುದ್ರಪ್ಪ, ೫೮)

. ಆಕಾಶ (Ether)

ಪಂಚಮಹಾಭೂತಗಳಲ್ಲಿ ಆಕಾಶ ಮೊದಲನೆಯದು, ಆದಿಪುರುಷನ ತಲೆಯಿಂದ ಆಕಾಶ ಹುಟ್ಟಿತು. (ಋ x 90, 14). ಇದು ಬೆಳಕಿನ ಪ್ರಪಂಚ (ಐ. ಉ. I, 1, 2) ರೂಪ, ಗಡಿಗೆಯನ್ನು ಅವಲಂಬಿಸಿಕೊಂಡಿರುವಂತೆ ಆಕಾಶ ಸತ್ತನ್ನು (Being) ಅವಲಂಬಿಸಿಕೊಂಡಿರುತ್ತದೆ. ಆಕಾಶವನ್ನು ಸತ್ತಿನಿಂದ ಪ್ರತ್ಯೇಕಿಸಿದರೆ ಆಕಾಶ ಇಲ್ಲದಂತಾಗುವುದು.

ದೇವತೆಗಳು ಆಕಾಶದಲ್ಲಿ ಓಡಾಡುತ್ತಾರೆ. ದೇವತೆಗಳ ವಾಸಸ್ಥಳವಾದ ಸ್ವರ್ಗವನ್ನು ಆಕಾಶದಲ್ಲಿಯೇ ಪ್ರಾಚೀನರು ಕಲ್ಪಿಸಿದ್ದಾರೆ. ಒಟ್ಟಿನಲ್ಲಿ ಆಕಾಶ ಎಲ್ಲದಕ್ಕೂ ಅವಕಾಶವಾಗಿದೆ. ಕಾರಣ ಅದು ಎಲ್ಲದರ ಆಶ್ರಯವಾಗಿರುವ ಬ್ರಹ್ಮಕ್ಕೆ ಸಂಕೇತವಾಗಿದೆ. ಗುಣದಿಂದ ಆಕಾಶ. ಶಬ್ದಗ್ರಾಹಿ ಇದೊಂದೇ ಅದರ ಗುಣ.

.. ವಾಯು

ವಿಶ್ವಾತ್ಮನ ಉಸಿರೇ ವಾಯುವಿಗೆ ಮೂಲ (ಋ x, 90, 13) ಅದು ಆತನ ನಾಭಿಮೂಲದಿಂದ ಪ್ರವಹಿಸಿತು (ಅದೇ, 14). ಅದು ಹೆಚ್ಚು ಅಮೂರ್ತವಾದುದರಿಂದ ಹೆಚ್ಚು ಚಲನಶೀಲವಾದದ್ದು, ಗಾಳಿ ಸ್ವೇಚ್ಛೆಯಿಂದ ಬೀಸುತ್ತದೆ, ಸುಳಿದಾಡುತ್ತದೆ. (ಋ x, 1, 68) ಅದು ಕರ್ಣಗಮ್ಯವಾದರೂ ಚಕ್ಷುಗಮ್ಯವಲ್ಲ. ಅದರ ಸ್ಪರ್ಶ ಅನುಭವಕ್ಕೆ ಬಂದರೂ ಅದನ್ನು ಅರ್ಥೈಸುವುದು ಕಷ್ಟಸಾಧ್ಯ.

ಪ್ರಾಣಿಗಳ ಉಸಿರಾಟಕ್ಕೆ ಹಾಗೂ ಇರುವಿಕೆಗೆ ಗಾಳಿ ಅತ್ಯಗತ್ಯ (ಋx 186). ಕಾರಣ ಅದು ಜೀವದಾತ; ಅಂತೆಯೇ ಅನಂತತೆಯ ಪ್ರತೀಕ (ಋx 1, 144).

ಈ ಲೌಕಿಕ ವಾಯು, ಪಾರಮಾರ್ಥಿಕ ಪ್ರಜಾಪತಿಯನ್ನು ಸಂಕೇತಿಸುತ್ತದೆ. (ಯಜು. xxxii, 1; ಬೃ. ಉ. III, 9,9) ಹೇಗೆ ಗಾಳಿ, ತನ್ನ ತೆಕ್ಕೆಗೆ ಬಂದ ವಸ್ತುಗಳನ್ನೆಲ್ಲ ಕೊಂಡೊಯ್ಯುತ್ತದೆ, ಹಾಗೆ ಪರಮಾತ್ಮ, ತನ್ನ ಅಧೀನಕ್ಕೆ ಬಂದ ಜೀವಾತ್ಮರನ್ನು ಇಹದಿಂದ ಪರದತ್ತ ಕೊಂಡೊಯುತ್ತಾನೆ. ವಾಯುವಿಗೆ (1) ‘ಬಿಸ್’ ಎಂಬ ಶಬ್ದ ಹಾಗೂ (2) ಬೆಚ್ಚಗೂ ತಣ್ಣಗೂ ಇಲ್ಲದ ಸ್ಪರ್ಶ-ಹೀಗೆ ಎರಡು ಗುಣಗಳು. ಇವುಗಳಲ್ಲಿ ಸ್ಪರ್ಶ, ವಾಯುವಿನ ಸ್ವಂತ ಗುಣ; ಶಬ್ದ, ಪಿತ್ರಾರ್ಜಿತ (Hereditary), ಎಂದರೆ ಆಕಾಸದಿಂದ ಬಂದದ್ದು.

. ಅಗ್ನಿ

ತೇಜಸ್, ಅಗ್ನಿಯ ಪರ್ಯಾಯ ಪದ. ಆದಿಪುರುಷನ ಬಾಯಿಯಿಂದ ಹೊರಟ ಶಬ್ದ (Word) ದಿಂದ ಅಗ್ನಿ ಹುಟ್ಟಿತು. (ಋx, 90, 13; ಐ. ಉ.I, 4) ಪರಮಾತ್ಮನೇ ಅದರ ಆಧಾರ (ಬೃ. ಉ II, 5, 3) ಆಪ್, ಅದರ ವಾಸಸ್ಥಾನ (ಋ. VIII. 43, 9; X, 45, 1, 3; 121, 7; ಶ. ಬ್ರಾ. VI, 8, 2, 4) ಬೆಂಕಿ ಮತ್ತು ನೀರು ಪರಸ್ಪರ ಸಂಬಂಧಿಗಳಾಗಿವೆ (ಋ x II, 1, 1).

ನೀರಿನಲ್ಲಿರುವ-ಬೆಂಕಿ ಬಡಬಾಗ್ನಿ-ಯನ್ನು ಕವಿಗಳು ಕವಿಸಮಯವನ್ನಾಗಿ ಬಳಸಿದ್ದಾರೆ. ಆದರೆ ವಾಸ್ತವಿಕವಾಗಿ ಅದು ಸರ್ವಾಂತರ್ಯಾಮಿ (ಅ. ವೇ XII, 1, 19-21) ಹಾಗೂ ಸ್ವಸ್ತಿದಾತ (ಋ I, 35, 1).

ಅಗ್ನಿ, ಸದಾ ಯಜ್ಞಕುಂಡದಲ್ಲಿರುವಂತೆ, ಸೂರ್ಯನಲ್ಲಿ ಆಕಾಶದಲ್ಲಿ (ಋ I, 143, 2), ಸುಡುವ ವಸ್ತುಗಳಲ್ಲಿ, ಕಾಡಿನಲ್ಲಿ (ಋ. VI, 3, 3; X, 79, 7), ಮಾನವ ಹೃದಯದಲ್ಲಿ (ಶ. ಬ್ರಾ. II, 2, 2, 14) ಹೀಗೆ ಹಲವೆಡೆ ಹಲವು ರೀತಿಗಳಲ್ಲಿದ್ದು ಹಲವು ಪರಿಣಾಮಗಳನ್ನುಂಟುಮಾಡುತ್ತದೆ. ಅಗ್ನಿ, ಮೇಣವನ್ನು ಹಾಗೂ ಜೇನನ್ನು ಮೃದುಗೊಳಿಸಿದರೆ, ಮಣ್ಣನ್ನು ಗಟ್ಟಿಗೊಳಿಸುತ್ತದೆ, ಸಸ್ಯಗಳನ್ನು ಒಣಗಿಸುತ್ತದೆ. ಅದು ಜೀವವನ್ನು ತೆತ್ತಬಲ್ಲದು, ತೆಗೆಯಬಲ್ಲುದು. ಬೆಂಕಿ, ಕೆಟ್ಟದ್ದನ್ನು ನಾಶಪಡಿಸುತ್ತದೆ. (ಋ. I, 145; III, 4; III, 18, 1-2 VI, 9) ಇತ್ಯಾದಿ. ಅದು ಆರೋಗ್ಯವನ್ನು (ಅ. ವೇ V, 22, 1-2) ಮುಕ್ತಿಯನ್ನೂ (ಋ. V, 82, 5-6; ಅ. ವೇ VI, 10-0, 1) ದಯಪಾಲಿಸುತ್ತದೆ. ಅಗ್ನಿ ವ್ಯಕ್ತಿಯನ್ನು ಶುದ್ಧೀಕರಿಸುತ್ತದೆ. (ಋ. X, 164, 3; ಮ. ಉ. 1, 97, 1-8; 325 -6; ಛಾ. ಉ. IV. 14,3) ಈ ಕಾರಣಗಳಿಂದಾಗಿ ಅಗ್ನಿ. ದಿವ್ಯಕ್ಕೆ ಒಂದು ಪ್ರಬಲ ಸಂಕೇತವಾಗಿದೆ (ಋ. X, 114, 5; ಬೃ. ಉ. III. 9, 24).

ಅಗ್ನಿಯ ಸಂಬಂಧ ಮಾನವನ ಹುಟ್ಟು, ವಿವಾಹ ಮತ್ತು ಸಾವುಗಳಿಗಷ್ಟೇ ಸೀಮಿತವಾಗಿರದೆ ಸಾವಿನಾಚೆಯ ಆತನೊಂದಿಗೂ ಇರುತ್ತದೆ (ಋ. X, 17, 1-10).

ವಾಯುವಿನಿಂದ ಹುಟ್ಟಿದ ಆಗ್ನಿಗೆ :

೧. ‘ಭುಗುಭುಗು’ ಎಂಬ ಶಬ್ದ
೨. ಬೆಚ್ಚಗಿರುವ ಸ್ಪರ್ಶ
೩. ಬೆಳಗುವ ರೂಪ ಹೀಗೆ ಮೂರು ಗುಣಗಳು.

ಇವುಗಳಲ್ಲಿ ರೂಪ, ತನ್ನ ಸ್ವಂತ ಗುಣ; ಉಳಿದುವು ಪಿತ್ರಾರ್ಜಿತ.

.. ಆಪ್.

ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿಯೂ ನೀರಿಗೆ ಅಗ್ರಸ್ಥಾನವಿದೆ. ಭಾರತೀಯ ಸಂಪ್ರದಾಯದಲ್ಲಿ ನೀರು, ವಾಕ್ /ಶಬ್ದದಿಂದ ಹುಟ್ಟಿತು. ಇದು ಎಲ್ಲವನ್ನೂ ವ್ಯಾಪಿಸುವುದರಿಂದ (Öಆಪ್-), ಅದನ್ನು ಆಪ್ /’ನೀರು’ ಎಂದೂ ಅದು ಎಲ್ಲವನ್ನೂ ಆವರಿಸಿದುದರಿಂದ (Öವು), ಅದನ್ನು ‘ವಾರಿ’ / ‘ನೀರು’ ಎಂದೂ ಕರೆದರು (ಶ. ಬ್ರಾ. VI, 1, 1, 9) ವಿಶ್ವವೆಲ್ಲ ನೀರನ್ನೇ ಆಧರಿಸಿಕೊಂಡಿದೆ. ಆದುದರಿಂದಲೇ ಯಜ್ಞದಲ್ಲಿ ಬಳಸಿದ ಪಾತ್ರೆಗಳನ್ನು ನೀರಿನಲ್ಲಿ ಹಾಕಬೇಕೆಂದು ಶತಪಥ ಬ್ರಾಹ್ಮಣದಲ್ಲಿ ಪದೇ ಪದೇ ಹೇಳಲಾಗಿದೆ. ಈಗಲೂ ದೇವರ ಮೂರ್ತಿಗಳನ್ನು ಪೂಜಾ ಪಾತ್ರೆಗಳನ್ನು, ಅಲ್ಲಿ ಬಳಸಿದ ವಸ್ತುಗಳನ್ನು ಪವಿತ್ರ ನದಿಗಳಲ್ಲಿ ಎಸೆಯುತ್ತಾರೆ. ಸತ್ತ ಮಕ್ಕಳ ಹಾಗೂ ಋಷಿ ಮುನಿಗಳ ಶವಗಳನ್ನೂ ಸುಡುವ ಬದಲಾಗಿ ಪವಿತ್ರ ನದಿಗಳಲ್ಲಿ ಎಸೆಯುತ್ತಾರೆ. (ಅಥವಾ ಭೂಮಿಯಲ್ಲಿ  ಹೂಳುತ್ತಾರೆ. (Panikkar, f. n. 59). ಸೃಷ್ಟಿ ತನ್ನ ಮೂಲಕ್ಕೆ ಹಿಂತಿರುಗುವುದನ್ನು ಈ ಆಚರಣೆಗಳೆಲ್ಲವೂ ಸಂಕೇತಿಸುತ್ತವೆ.

ನೀರಿಗೆ ಆರೋಗ್ಯ ಕೊಡುವ ಸಾಮರ್ಥ್ಯವಿದೆ. (ಋ x, 137, 6;ಅ. ವೇ. 3.6; II, 91, 3; ಶ. ಬ್ರಾ. VI, 6, 1, 7) ಶುದ್ಧೀಕರಣವೇ ನೀರಿನ ಪ್ರಮುಖ ಗುಣಧರ್ಮ. ನೀರು ಇತ್ತ ಘನವೂ ಅಲ್ಲ, ಅತ್ತ ಆವಿಯೂ ಅಲ್ಲ. ಅದು ಇರುವುದು ಭೂಮಿಯಲ್ಲಿ, ಆದರೆ ಬರುವುದು ಆಕಾಶದಿಂದ. ಅದು ಜೀವವನ್ನು ಕೊಡಬಲ್ಲದು, ಅಂತೆಯೇ ಕೊನೆಗೊಳಿಸಬಲ್ಲದು. ನೀರು ಶುಭ್ರವಾಗಿರಬಹುದು ಅಥವಾ ಕಳಂಕವಾಗಿರಬಹುದು. ಅದು ಭೂಮಿಯೊಳಗೆ ಒಸರಾಗಿ ಪಸರಿಸಬಹುದು ಅಥವಾ ಭೂಮಿಯ ಮೇಲೆ ಹೊಳೆನದಿಯಾಗಿ ಹರಿಯಬಲ್ಲುದು.

ನೀರು ಭೂಮಿಗೆ ಮಾತ್ರ ಸೀಮಿತವಾಗಿರದೆ ಸಸ್ಯ ಪ್ರಾಣಿಗಳಲ್ಲಿಯೂ ಹರಿಯುತ್ತದೆ. ಅದು ಹಲವಾರು ರೂಪಗಳನ್ನು ತಾಳಬಲ್ಲುದು, ಸ್ವಚ್ಛಂದವಾಗಿ ಹರಿದುಹೋಗುವ ಸ್ವಾತಂತ್ರ್ಯ ಅದಕ್ಕಿದೆ. ನೀರು, ಭೂಮಿ, ಸಸ್ಯ ಪ್ರಾಣಿಗಳಿಗೆಲ್ಲ ಅತ್ಯಾವಶ್ಯಕವಾದ ಆಧಾರಸ್ತಂಭವಾಗಿರುವ, ಜೀವವನ್ನು ಕೊಡುವ ಹಾಗೂ ಕೆಡಿಸುವ ವಸ್ತುವಾಗಿರುವುದರಿಂದ ಸರ್ವಾಂತರ್ಯಾಮಿ ಬ್ರಹ್ಮಕ್ಕೆ ಅದು ಸೂಕ್ತ ಸಂಕೇತವಾಗಿದೆ.

ಅಗ್ನಿಯಿಂದ ಹುಟ್ಟಿದ ನೀರಿಗೆ :

೧. ‘ಬುಲುಬುಲು’ ಎಂಬ ಶಬ್ದ
೨. ತಣ್ಣಗಿರುವ ಸ್ಪರ್ಶ
೩. ಬಿಳಿಯ ರೂಪ
೪. ಸಿಹಿಯಾದ ರಸ ಹೀಗೆ ನಾಲ್ಕು ಗುಣಗಳು. ಇವುಗಳಲ್ಲಿ ರಸ, ಸ್ವಂತ ಗುಣ, ಉಳಿದವು ಪಿತ್ರಾರ್ಜಿತ.

. ಪೃಥ್ವಿ :

ಪ್ರತಿಯೊಂದು ವಸ್ತುವಿಗೂ ಜೀವಿಗೂ ಇರುವಿಕೆಗೆ ಭೂಮಿಯೇ ಆಧಾರ ಹಾಗೂ ಮೂಲ. ಈ ಪೃಥ್ವಿಯಿಂದಲೇ ಸಕಲ ಜೀವೋತ್ಪತ್ತಿ ಹಾಗೂ ಸಂವರ್ಧನೆ. ಮಾನವನಿಗೆ ಅದು ಕೇವಲ ಬಾಹ್ಯಾಧಾರವಾಗಿರದೆ, ತನ್ನ ದೇಹದಂತೆ ಅನಿವಾರ್ಯ ಅಂಶವಾಗಿದೆ. ಆದರೂ ಅದನ್ನು ಮೆಟ್ಟಿ, ಮಿಕ್ಕಿ, ನಿಲ್ಲುವ ಸಾಮರ್ಥ್ಯ ಆತನಿಗಿದೆ. ಭೂಮಿ ಆತನಿಗೆ ತಾಯಿಯಂತೆ ಇದ್ದರೂ ಅದನ್ನು ಆತ ತನಗೆ ಬೇಕಂತೆ ಬಳಸಬಲ್ಲ, ರೂಪಾಂತರಿಸಬಲ್ಲ. ಹೀಗೆ ಪೃಥ್ವಿ ಆತನಿಗೆ ಭೂದೇವಿಯಾಗಿದ್ದರೂ, ಆತ ಆಕೆಗೆ ಭೂಪತಿಯೂ ಹೌದು, ಜ್ಯೇಷ್ಠಪುತ್ರನೂ ಹೌದು. ಈ ಸಂದರ್ಭದಲ್ಲಿ ಈಜಿಪ್ತಿನ ಈಸಿಸ್ (Isis) ದೇವತೆಯ ನೆನಪಾಗುವುದು ಸಹಜ.

ಭಾರತೀಯ ಅವಲೋಕನದಲ್ಲಿ ಭೂಮಿಯನ್ನು ಕುರಿತು ಸೂಕ್ಷ್ಮ ಸಂವೇದನೆಗಳು (Fine Sensibilities) ಇರುವುದರಿಂದ ಪ್ರಜ್ಞಾವಂತ ಭಾರತೀಯನಿಗೆ ಭೂದೇವಿಯ ಮೇಲೆ ಅತ್ಯಾಚಾರ ಎಸಗಲು ಮನ ಒಪ್ಪದು. ಆಕೆ ಆತನ ಹುಟ್ಟು ಸಾವುಗಳೆರಡರಲ್ಲಿಯೂ ಪ್ರಮುಖ ಪಾತ್ರವಹಿಸುತ್ತಾಳೆ. ಆತನ ಭೂಮಿಪೂಜೆ, ಮೂರ್ತಿಪೂಜೆ (Idolatory) ಅಲ್ಲ; ಲೌಕಿಕದಲ್ಲಿ ಪಾರಮಾರ್ಥಿಕವನ್ನು ಕಾಣುವುದರ ಸಂಕೇತವದು.

ದ್ರವರೂಪದಿಂದ ಬೇರ್ಪಟ್ಟು ಪ್ರಪ್ರಥಮವಾಗಿ ಕಾಣಿಸಿಕೊಂಡ ಘನರೂಪದ ಸೃಷ್ಟಿಯಾದ ಭೂಮಿ (ಶ. ಬ್ರಾ. XIV, 1, 2, 10) ಫಲವತ್ತಾದದ್ದು ಹಾಗೂ ಸಂಪದ್ಭರಿತವಾದದ್ದು (ಋ. III, 51, 5;ಶ. ಬ್ರಾ. X 15, 6). ಭೂಮಿ ಹೊತ್ತುಕೊಂಡಿರುವ ಗಗನಚುಂಬಿ ಪರ್ವತ ಶಿಖರ ಶ್ರೇಣಿಗಳು, ಗಿಡಮರಬಳ್ಳಿಗಳಿಂದ ಕೂಡಿದ ದಟ್ಟ ಹಸಿರು ಕಾಡುಗಳು. ಅಲ್ಲಿ ವಾಸಿಸುವ ವಿಪುಲ ವನ್ಯ ಪ್ರಾಣಿಗಳು ಭೂದೇವಿಯ ಅನನ್ಯ ಫಲಶಕ್ತಿಯ ಸಂಕೇತಗಳಾಗಿವೆ.

ಸಂಪದ್ಭರಿತವಾದ ದಿನಗಳನ್ನು ಕೃತಜ್ಞತಾ ಭಾವದಿಂದ ಪರಸ್ಪರ ಹಂಚಿಕೊಂಡು ಭೋಗಿಸುವುದು ಮಾನವಧರ್ಮವೇ ಹೊರತು ಭೂಮಿಯ ಮೇಲೆ ಅತ್ಯಾಚಾರಗಳನ್ನು ನಡೆಯಿಸುವುದು ಸರ್ವಥಾ ಅಲ್ಲ. ಋಗ್ವೇದದಲ್ಲಿ ಭೂಮಿಯ ಸ್ತುತಿಗೀತೆಯೊಂದಿದೆ (I, 185). ಅದರಲ್ಲಿ ಭೂಮಿಯನ್ನು ಸಕಲ ದೇವತೆಗಲ ಹಾಗೂ ಮಾನವರ ಜನನಿಯೆಂದೂ ಆಕಾಶವನ್ನು ಜನಕನೆಂದೂ ಸಂಬೋಧಿಸಲಾಗಿದೆ. ಇನ್ನೊಂದೆಡೆ ಚರಮಗೀತೆಯೊಂದರಲ್ಲಿ ಸತ್ತ ಮಗನನ್ನು ವಿನಾಶಕ್ಕೊಳಪಡಿಸದೆ ರಕ್ಷಿಸುವ ಕರುಣಾಳು ತಾಯಿಯೆಂದು ಭೂಮಾತೆ ವರ್ಣಿತಳಾಗಿದ್ದಾಳೆ (X, 18, 10-13). ಸಕಲರಿಗೂ ಒಳ್ಳೆಯದನ್ನು ದಯಪಾಲಿಸುವ, ಊರ್ಜಿತಾವಸ್ಥೆಗೆ ಕೊಂಡೊಯ್ಯುವ ವಿಶ್ವಮಾತೆಯೆಂದು ಸಚಿತ್ರ ವಿವರ ಅಲ್ಲಿ ಮೂಡಿದೆ.

ಇಂತಹ ಸೌಭಾಗ್ಯವತಿಯ ತೊಡೆಯ ಮೇಲೆ ಮಾನವರು ಸಂತಸದಿಂದ ಬಾಳುತ್ತಾರೆ. ಅವರ ಮಾತು ಹಲವು ಭಾಷೆಗಳಾಗಿ ರೂಪಾಂತರ ಹೊಂದುತ್ತದೆ. ಅವರ ಕಾಲ್ನಡಿಗೆಯಿಂದ ಹಲವಾರು ಕಾಲ್ದಾರಿಗಳು ರೂಪಿತಗೊಳ್ಳುತ್ತವೆ. ಅಲ್ಲಿಯ ಹೆದ್ದಾರಿಗಳಲ್ಲಿ ಅವರ ರಥಗಳು ಓಡಾಡುತ್ತವೆ.

ದೇವತೆಗಳು ಸ್ವತಃ ಈ ಭೂಮಿಯನ್ನು ಕಾಪಾಡುತ್ತವೆ. ಅದಕ್ಕಾಗಿಯೇ ಅಲ್ಲಿ ಸದಾ ಯಜ್ಞ ನಡೆಯುತ್ತದೆ.; ಪುರೋಹಿತರು ವೇದಮಂತ್ರಗಳನ್ನು ಪಠಿಸುತ್ತಾರೆ, ವೇದಿಕೆಯ ಮೇಲೆ ಪೂಜೆ ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಪೃಥ್ವಿ, ಕೇವಲ ಒಂದು ಲೌಕಿಕ ವಸ್ತುವಾಗಿ ಉಳಿಯದೆ ಪಾರಮಾರ್ಥಿಕದ ಕಡೆಗೆ ಬೆರಳೆತ್ತಿ ತೋರಿಸುವ ಒಂದು ಸಂಕೇತವಾಗಿರುತ್ತದೆ. ಕಾರಣ, ಭೂಮಿಯನ್ನು ವಿಶ್ವಜನನಿ, ವಿಶ್ವಚೇತನಿ, ಸಕಲ ದಾನಗಳನ್ನು ನೀಡುವ, ಸಕಲರನ್ನು ಪೋಷಿಸುವ, ರಕ್ಷಿಸುವ ಮಹಾಮಾತೆಯೆಂದು ಭಾರತೀಯ ಸಂಪ್ರದಾಯ ಆಕೆಯನ್ನು ಪೂಜಿಸುತ್ತದೆ. ಈ ಅರ್ಥದಲ್ಲಿ ಪೃಥ್ವಿ ಸರ್ವಾಂತರ್ಯಾಮಿಯಾದ ಪ್ರಜಾಪತಿಗೆ ಸೂಕ್ತ ಪ್ರತೀಕವಾಗಿದೆ.

ನೀರಿನಿಂದ ಹುಟ್ಟಿದ ಭೂಮಿಗೆ :

೧. ‘ಕಡಕಡ’ ಎಂಬ ಶಬ್ದ
೨. ಗಟ್ಟಿಯಾಗಿರುವ ಸ್ಪರ್ಶ
೩. ಕಪ್ಪು ಮೊದಲಾದ ರೂಪಗಳು
೪. ಸಿಹಿ ಮತ್ತು ಹುಳಿ ಮೊದಲಾದ ರಸಗಳು
೫. ಒಳ್ಳೆಯ ಮತ್ತು ಕೆಟ್ಟ ಗಂಧಗಳು

ಹೀಗೆ ಐದು ಗುಣಗಳು. ಇವುಗಳಲ್ಲಿ ಗಂಧ, ತನ್ನ ಸ್ವಂತ ಗುಣ ಉಳಿದವು ಪಿತ್ರಾರ್ಜಿತ. ಹೀಗೆ ಈ ಗುಣವಿಶೇಷಗಳಿಂದ ಪಂಚಭೂತಗಳು ಒಂದಕ್ಕೊಂದು ಬೇರೆಯಾಗಿರುತ್ತವೆ.

. ಸಮಾರೋಪ

ಭಾರತೀಯ ಪ್ರಾಚೀನ ಸಂಪ್ರದಾಯದಲ್ಲಿ , ಅಪೌರುಷೇಯವಾದ ಕೃತಿಗಳಲ್ಲಿ ಪಂಚಮಹಾಭೂತಗಳ ಪ್ರಸ್ತಾಪ ಎರಡು ಬಗೆಯಲ್ಲಿ ಕಾಣುತ್ತೇವೆ. ಮೇಲ್ನೋಟಕ್ಕೆ ಭೌತಿಕ ಸೃಷ್ಟಿ ಈ ಪಂಚಕಗಳ ಪಂಚೀಕರಣ ಪ್ರಕ್ರಿಯೆಯಿಂದಾಗಿ (Chinmayananda, 108ff) ಸ್ಥೂಲ ಪ್ರಕೃತಿಯಾಗಿ ನಿರ್ಮಾಣಗೊಂಡಿವೆ. ಕಾರಣ ಪಂಚಭೂತಗಳು ಭೌತಿಕ ಸೃಷ್ಟಿಯ ಮೂಲ ವಸ್ತುಗಳು (Elements). ಬಹಿಃಸ್ತರದಲ್ಲಿ ಪ್ರತ್ಯಕ್ಷವಾಗಿ ತೋರುವ ಈ ದ್ವೈತ (Dualism)ವನ್ನು ಅಂತಃಸ್ತರದಲ್ಲಿ ಸಮರಸಗೊಳಿಸುವ, ಒಗ್ಗೂಡಿಸುವ ಏಕತೆ (Unity) ಯನ್ನು ಈ ಪಂಚಮಹಾಭೂತಗಳು ಸಂಕೇತಿಸುತ್ತವೆಯಾದುದರಿಂದ ಅವು ಇತ್ತ ಕೇವಲ ಭೌತಿಕ (Material) ವೂ ಆಗಿರದೆ, ಅತ್ತ ಅಭೌತಿಕ (Non-material) ವೂ ಆಗಿರದೆ ಅವೆರಡರ ಸಂಗಮ ಎಂಬ ಅದ್ವೈತ (Non-dual) ಭಾವವೇ ಭಾರತೀಯ ಅವಲೋಕನ -ಎಂಬ ಸತ್ಯ ಇಲ್ಲಿ ಅನಾವರಣಗೊಳ್ಳುತ್ತದೆ (Panikkar, 182). ಈ ಅರ್ಥದಲ್ಲಿ ಪಂಚಭೂತಗಳು ಅಭೌತಿಕವನ್ನು ನಿರ್ದೇಶಿಸುವ ಭೌತಿಕ ಸಂಕೆತಗಳಾಗಿವೆ. (Id. 143 f. n4) ಎಂಬ ಪಣಿಕ್ಕರನ ಮಾತು ಸತ್ಯವಾಗಿದೆ. ಆ ಅಭೌತಿಕ, ಅದ್ವೈತ, ಏಕತೆಯನ್ನೇ ವೇದಾಂತದಲ್ಲಿ ಬ್ರಹ್ಮ -ಸತ್ಯ ಅಥವಾ ಪ್ರಜ್ಞಾನ ಎಂದು ಹೆಸರಿಸಿದ್ದಾರೆ. (ಐ. ಉ. III.3) ಸರ್ವಕ್ಕೂ ಆತನೇ ಮೂಲವಸ್ತು ಹಾಗೂ ಕಾರಣ (ಮು. ಉ. III, 3).

ಸರ್ವಾಂತರ್ಯಾಮಿಯಾದ ಈ ಅಂತಃಸ್ತರವನ್ನು ಅನುಭಾವಿಸಿದರೆ ಎಲ್ಲವನ್ನು ಅನುಭವಿಸಿದಂತೆ (ಐ. ಉ. VI, 35). ಅನೇಕತೆಯಲ್ಲಿ ಏಕತೆಯನ್ನು ಅನುಭಾವಿಸಿ, ಏಕತೆಯಲ್ಲಿ ಅನೇಕತೆಯನ್ನು ಅನುಭವಿಸುವುದೇ ಭಾರತೀಯ ಸಂಪ್ರದಾಯ ಹಾಗೂ ಪರಂಪರೆ (ಈ. ಉ 6).

ವಾಸ್ತವದಲ್ಲಿ, ಈ ಪಂಚಮಹಾಭೂತಗಳ ವ್ಯಾವಹಾರಿಕ ಗುಣಧರ್ಮಗಳನ್ನು ಅವಲಂಬಿಸಿ ಭಾರತೀಯ ಜನಪದರಲ್ಲಿ ಅನೇಕ ನಂಬಿಕೆಗಳು ಹುಟ್ಟುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಅವುಗಳ ವರ್ಗೀಕರಣವನ್ನು ಹಾಗೂ ಅಧ್ಯಯನವನ್ನು ಈ ಪಂಚಭೂತಗಳ ಹಿನ್ನೆಲೆಯಲ್ಲಿ ಮಾಡುವುದು ಅಪೇಕ್ಷಣೀಯ. ಈ ದೃಷ್ಟಿಯಿಂದ ಪ್ರಸ್ತುತದಲ್ಲಿ ಸಮಗ್ರ ಅಧ್ಯಯನಕ್ಕೆ ಪೀಠಿಕೆಯಾಗಿ ಪಂಚಭೂತಗಳ ವಿವರ ನೀಡಲಾಗಿದೆ.

. ಸಂಕ್ಷೇಪ ಸೂಚಿ

೩.೧.    ಅ.ವೇ   ”         ಆಥರ್ವ ವೇದ

೩.೨.     ಐ. ಉ. ”         ಐತ್ತರೇಯ ಉಪನಿಷತ್ತು

೩.೩.     ಋ      ”         ಋಗ್ವೇದ

೩.೪.    ಛಾ.ಉ. ”         ಛಾಂದೋಗ್ಯ ಉಪನಿಷತ್ತು

೩.೫.    ಬೃ.ಉ.  ”         ಬೃಹದಾರಣ್ಯಕ ಉಪನಿಷತ್ತು

೩.೬.    ಮ.ಉ. ”         ಮಂಡೂಕ್ಯ ಉಪನಿಷತ್ತು

೩.೭.     ಯಜು   ”         ಯಜುರ್ವೇದ

೩.೮.    ಶ.ಬ್ರಾ   ”         ಶತಪಥ ಬ್ರಾಹಣ

.. ಸಾಹಿತ್ಯಸೂಚಿ :

೪.೧. ಆದಿದೇವಾನಂದ (ಸ್ವಾಮಿ)
? ಪಂಚದಶೀ. ಮೈಸೂರು : ರಾಮಕೃಷ್ಣಾಶ್ರಮ

೪.೨. ಚಿದಂಬರಯ್ಯ, ಹೊಸಕೆರೆ
? ಪಂಚದಶೀತತ್ತ್ವಾರ್ಥ, ಬೆಂಗಳೂರು : ಬಸವನಗುಡಿ, ಎಸ್.ಎಸ್.ಎನ್. ಬುಕ್ ಡಿಪೋ

೪.೩. ಭಟ್ಟ, ಕೃಷ್ಣಮಂಜ
೧೯೮೦ “ಪಂಚಭೂತಗಳು” ಕನ್ನಡ ವಿಶ್ವಕೋಶ, ಸಂಪುಟ ಹತ್ತು
ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ.

೪.೪. ಮಾಡ್ತ, ವಿಲ್ಯಂ
೧೯೮೭ ಜನಪದ ಭಾಷಾವಿಜ್ಞಾನ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ

೪.೫. ರುದ್ರಪ್ಪ, ಜೆ.
೧೯೭೩ ಶೈವದರ್ಶನ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ

೪.೬. Brown, Kerry (Ed.)
1990 The Essential Teachings of Hinduism. London: Arrow Books.

4.7. Chinmayananda (Swami)
1989 (Rev. ed.) Talks on Shankara’s Vivekachoodamani.
Bombay: Central Chinmaya Mission Trust.

4.8. Panikkar, Raimundo (Ed.)
1977 The Vedic Experience : Mantramanjari. Pondicherry: All India Books.


[1]     ಪ್ರಸ್ತುತ ಲೇಖದ ಶೀರ್ಷಿಕೆ ನನ್ನ ಆಯ್ಕೆಯಾಗಿರದೆ ವ್ಯವಸ್ಥಾಪಕರಿಂದ ಲಭಿಸಿದುದರಿಂದಾಗಿ ಪ್ರಸ್ತುತ ವಿವರ ಅನಿವಾರ್ಯವಾಯಿತು.

[2]      ಭೌತಿಕ ಪ್ರಪಂಚಕ್ಕೆ ಕಾರಣೀಭೂತವಾಗಿರುವ ಈ ಪಂಚಭೂತಗಳಲ್ಲದೆ, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳೆಂಬ ಅಭೌತಿಕ ಭೂತಗಳೂ ಇವೆ. (ನೋಡಿ : ಭಗವದ್ಗೀತೆ ೭.೪,)