ಅದು ವಿದ್ಯಾವಂತರೂ ನಾಗರಿಕರೂ ಆಡುವ ಭಾಷೆ ಎಂದು ಯಾರೂ ತಿಳಿಯಬೇಕಾದ್ದಿಲ್ಲ. ನಮ್ಮ ಮಕ್ಕಳು ಪಡೆಯಬೇಕಾದ ಶಿಕ್ಷಣವನ್ನು ಕಲಿಸುವ ಮಾಧ್ಯಮವೇ ಈ ಶಿಷ್ಟಭಾಷೆ. ಅಷ್ಟೇ ಅಲ್ಲ, ಈ ಶಿಷ್ಟಭಾಷೆಯು ನಾವು ಆಡಳಿತ ವ್ಯವಹಾರದಲ್ಲಿ ಬಳಸಬೇಕಾದ ಭಾಷೆಯೂ ಹೌದು, ನಮ್ಮ ಸುದ್ದಿಮಾಧ್ಯಮಗಳೂ ಇತರ ಸಮೂಹಮಾಧ್ಯಮಗಳೂ ಸಂವಹನಕ್ಕೆ ಬಳಸಬೇಕಾದ ಭಾಷೆಯೂ ಇದೇ. ಈ ಶಿಷ್ಟಭಾಷೆಯನ್ನು ಹೊರತುಪಡಿಸಿ ನಮ್ಮ ದಿನನಿತ್ಯದ ಮಾತುಕತೆಯಲ್ಲಿ ಬಳಸುವ ಭಾಷೆ ಆಡುಮಾತು. ಇದನ್ನು ಗ್ರಾಮ್ಯಭಾಷೆ ಎನ್ನುವುದೇ ತಪ್ಪು. ಇದು ಅನಗತ್ಯವಾಗಿ ಹಳ್ಳಿಗರನ್ನು ಹೀಗಳೆಯುವ ಪರಿಭಾಷೆಯಂತೆ ತೋರುತ್ತದೆ. ಹಳ್ಳಿಯವರಿರಲಿ, ಪಟ್ಟಣದವರಿರಲಿ ತಮ್ಮ ದಿನನಿತ್ಯದ ಸಂವಹನಕ್ಕೆ ಬಳಸುವ ಸಂಪರ್ಕಭಾಷೆಯಾಗಿ ಕನ್ನಡದ ಹಲವು ರೂಪಗಳು ನಾಡಿನಾದ್ಯಂತ ಬಳಕೆಯಲ್ಲಿವೆ. ಪಟ್ಟಣದಲ್ಲಿರುವ ವಿದ್ಯಾವಂತರು ಆಡುವ ಕನ್ನಡದಲ್ಲಿ ಬೇಕಾದಷ್ಟು ಇಂಗ್ಲೀಷ್ ಪದಗಳು ಸೇರಿಕೊಂಡಿರುತ್ತವೆ. ಇದಕ್ಕೆ ಹೋಲಿಸಿದರೆ ಹಳ್ಳಿಗರು ಆಡುವ ಮಾತಿನಲ್ಲೇ ಹೆಚ್ಚು ದೇಶ್ಯಪದಗಳಿರುತ್ತವೆ. ಆದ್ದರಿಂದ, ಗ್ರಾಮ್ಯಭಾಷೆಯೇ ಅಚ್ಚಕನ್ನಡ ಎಂದರೂ ತಪ್ಪಾಗುವುದಿಲ್ಲ. ಇನ್ನು ಗಡಿಭಾಗದ ಕನ್ನಡಿಗರು ಆಡುವ ಕನ್ನಡದಲ್ಲಿ ಅಲ್ಲಿಗೆ ಸಮೀಪದ ರಾಜ್ಯದವರು ಆಡುವ ಭಾಷೆಯ ಪದಗಳು ಬೆರೆತುಕೊಂಡಿರುತ್ತವೆ. ಉದಾಹರಣೆಗೆ, ಕೋಲಾರದ ಗಡಿಭಾಗದವರ ಕನ್ನಡದಲ್ಲಿ ತೆಲುಗು, ಚಾಮರಾಜನಗರದ ಗಡಿಯವರ ಮಾತಿನಲ್ಲಿ ತಮಿಳು, ಬೆಳಗಾವಿಯವರ ಕನ್ನಡದಲ್ಲಿ ಮರಾಠಿ.. ಹೀಗೆ. ಆಡುಮಾತಿನ ರೂಪಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಉಚ್ಚಾರಣೆ, ಧ್ವನಿಯ ಏರಿಳಿತಗಳೂ ನಮ್ಮ ಆಡುಮಾತಿನ ಸ್ವರೂಪವೈವಿಧ್ಯಕ್ಕೆ ಕಾರಣವಾಗಬಹುದು.

ಈ ಶಿಷ್ಟಭಾಷೆ ಎನ್ನುವುದರ ಬಗೆಗೆ ಜನಮನದಲ್ಲಿ ಇತ್ತೀಚೆಗೆ ಸ್ವಲ್ಪ ಹೆದರಿಕೆ ಹೇವರಿಕೆಗಳು ಹುಟ್ಟತೊಡಗಿರುವಂತೆ ಕಾಣುತ್ತದೆ. ಕನ್ನಡಕ್ಕೆ ಇಷ್ಟೊಂದು ಅಕ್ಷರಗಳ ಅಗತ್ಯವಿದೆಯೆ, ಮಹಾಪ್ರಾಣ ಅಲ್ಪಪ್ರಾಣವಾದರೆ ಏನಂತೆ, ಉಚ್ಚಾರಣೆ ಹೀಗೆಯೇ ಇರಬೇಕು ಎಂದರೆ ಹೇಗೆ, ನಾವು ಮಾತನಾಡುವ ಭಾಷೆಯೇ ಬರವಣಿಗೆಯ ಭಾಷೆಯೂ ಆಗಬಾರದೇಕೆ- ಇವೇ ಮೊದಲಾದ ಪ್ರಶ್ನೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಕಾಡತೊಡಗಿವೆ. ಈ ವರ್ಣಮಾಲೆ, ಕಾಗುಣಿತ, ಉಚ್ಚಾರಣೆಗಳೆಲ್ಲ ವಿಧಿಲಿಖಿತದಂತೆ ನಿಯಾಮಕ ಎಂದು ನಿಸ್ಸಹಾಯಕರಾಗಿ ನಿಟ್ಟುಸಿರು ಬಿಡುತ್ತಿದ್ದ ಕಾಲಕ್ಕೆ ೠ ಎಂಬ ಅಕ್ಷರವನ್ನು ಕೈಬಿಟ್ಟ ಅಚ್ಚರಿ ಜರುಗಿದೆ. ಅದರ ಹಾಗೆಯೇ ಉಪಯೋಗಕ್ಕೆ ಬಾರದ ಇನ್ನೂ ಎಷ್ಟೋ ಅಕ್ಷರಗಳಿವೆಯಲ್ಲ, ಅವನ್ನೂ ಬಿಡಬಾರದೇಕೆ ಎಂದು ಕೇಳುವ ಧೈರ್ಯಕ್ಕೆ ಎಡೆಗೊಟ್ಟಿದೆ. ಖ, ಘ, ಛ, ಝ ಮೊದಲಾದ ಮಹಾಪ್ರಾಣಗಳೂ, ಅಃ, ಙ, ಞ, ಶ, ಷ ಮೊದಲಾದವೂ ತಮ್ಮನ್ನು ಯಾವತ್ತು ಗಡೀಪಾರು ಮಾಡುತ್ತಾರೋ ಎಂಬ ಭಯದಿಂದಲೇ ಕಪ್ಪುಹಲಗೆಯ ಮೇಲೆ ನಡುಗತೊಡಗಿವೆ. ಸುಲಭ ಉಚ್ಚಾರಣೆಗೆ ದಕ್ಕದ ಅಕ್ಷರಗಳನ್ನು ವರ್ಣಮಾಲೆಯಿಂದಲೇ ಕಿತ್ತೊಗೆಯಬೇಕೆನ್ನುವುದು ಕೆಲವರ ವಾದ. ೠ ಎಂಬ ಅಕ್ಷರವನ್ನು ಕನ್ನಡವರ್ಣಮಾಲೆಯಿಂದ ಹೊರಹಾಕಿದ ಮೇಲೆ ಇನ್ನಷ್ಟು ಅಕ್ಷರಗಳನ್ನು ಗಡೀಪಾರು ಮಾಡಬೇಕೆಂಬ ಹುಮ್ಮಸ್ಸು ಹಲವರಲ್ಲಿ ಹುಟ್ಟಿಕೊಂಡಿದೆ. ಹಾಗೆ ನೋಡಿದರೆ ಕನ್ನಡದಲ್ಲಿ ಎಷ್ಟು ಅಕ್ಷರಗಳಿವೆ? ಎಷ್ಟು ಬೇಕು? ಯಾವುವನ್ನು ಬಿಡಬೇಕು ಎನ್ನುವ ಜಿಜ್ಞಾಸೆ ಹದಿಮೂರನೆಯ ಶತಮಾನದ ಕೇಶಿರಾಜನ ಶಬ್ದಮಣಿದರ್ಪಣದಲ್ಲೇ ಕಂಡುಬರುತ್ತದೆ. ಸಂಸ್ಕೃತ ವರ್ಣಮಾಲೆಯನ್ನು ಚಾಚೂ ತಪ್ಪದೆ ಕನ್ನಡಕ್ಕಿಳಿಸುವ ಪಂಡಿತರ ಉತ್ಸಾಹದ ದೆಸೆಯಿಂದ ನಮಗೆ ಬೇಕಾದುದಕ್ಕಿಂತ ಹೆಚ್ಚು ಅಕ್ಷರಗಳು ಕನ್ನಡದಲ್ಲಿ ನುಸುಳಿಕೊಂಡಿವೆ, ನಿಜ. ಋ, ಅಃ, ಷಕಾರದಂತಹ ಅಕ್ಷರಗಳುಳ್ಳ ಪದಗಳು ಅಚ್ಚಗನ್ನಡದಲ್ಲಿ ಇಲ್ಲವೆಂದ ಮೇಲೆ ಆ ಅಕ್ಷರಗಳನ್ನು ಕೈಬಿಟ್ಟರೆ ನಷ್ಟವೇನಿಲ್ಲ. ನಷ್ಟ ಎನ್ನುವುದನ್ನು ನಶ್ಟ ಎಂದು ಬರೆದರೆ ಆಯಿತು. ಋಣ, ಋಷಿಗಳು ರುಣ, ರುಷಿಗಳಾಗಿ ಮಾರ್ಪಟ್ಟರೆ ಏನಂತೆ? ಮಹಾಪ್ರಾಣಗಳು ಶುದ್ಧಗನ್ನಡದಲ್ಲಿ ಇರಲೇ ಇಲ್ಲ, ಙ, ಞ ಗಳ ಅಗತ್ಯವೇನು? -ಎಂಬೆಲ್ಲ ವಾದಗಳನ್ನು ಸಾವಧಾನವಾಗಿ ಅವಲೋಕಿಸಬೇಕು.

ಮೊದಲಿಗೆ ಹೇಳಿದಂತೆ, ಆಡುಮಾತಿನ ಉಚ್ಚಾರಣೆಯಲ್ಲಿ ಯಾವ ಅಕ್ಷರವನ್ನು ಎಷ್ಟು ಶುದ್ಧವಾಗಿ ಬಳಸುತ್ತೀರಿ ಎಂಬುದು ಮುಖ್ಯವೇನಲ್ಲ. ನಿಮ್ಮ ಮಾತಿನ ಅರ್ಥವು ಸೂಕ್ತ ರೀತಿಯಲ್ಲಿ ಸಂವಹನವಾದರೆ ಆಯಿತು. ಜ್ಞಾನ ಎಂಬ ಪದವನ್ನು ಗ್ನಾನ ಎಂದು ಉಚ್ಚರಿಸಿದರೂ ನಡೆದೀತು. ನಮಗೆ ಬೇಕೋ ಬೇಡವೋ, ಅಂಗ ಎನ್ನುವಲ್ಲಿ ಙ ಉಚ್ಚಾರಣೆ ಇದ್ದೇ ಇದೆ. ಈ ಪದವನ್ನು ಅಮ್ ಗ ಎಂದು ಬಹುತೇಕ ಯಾರೂ ಹೇಳುವುದೂ ಇಲ್ಲ, ಓದುವುದೂ ಇಲ್ಲ. ಅರ್ಥ ಬದಲಾಗುವ ಅಪಾಯವಿದ್ದರೂ ಆಡುಮಾತಿನಲ್ಲಿ ಅಗ್ಗ-ಹಗ್ಗ, ಆಳು-ಹಾಳು, ದನ-ಧನ, ಬಲೆ-ಭಲೆ ಇವೆಲ್ಲ ವ್ಯತ್ಯಾಸಗಳೂ ನಡೆಯುತ್ತಲೇ ಇರುತ್ತವೆ. ಸಾಂದರ್ಭಿಕವಾಗಿ ಅವನ್ನು ಹೇಗೆ ಬೇಕೋ ಹಾಗೆ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯೂ ಸಹಜವಾಗಿ ಜರುಗುತ್ತದೆ.

ಆದರೆ ಓದುಬರೆಹಗಳತ್ತ ತಿರುಗುವಾಗ ಭಾಷೆಗೆ ಈ ರಿಯಾಯಿತಿಗಳನ್ನು ಕೊಡಲಾಗುವುದಿಲ್ಲ. ಅಗ್ಗ ಹಗ್ಗವಾಗಲು, ಅಕ್ಕಿ ಹಕ್ಕಿಯಾಗಲು ಇಲ್ಲಿ ಅವಕಾಶವಿಲ್ಲ. ಪ್ರತಿಯೊಂದು ಅಕ್ಷರವನ್ನು ನಿರ್ದಿಷ್ಟ ರೀತಿಯಲ್ಲೇ ಉಚ್ಚರಿಸಬೇಕು. ಒಂದು ಅಕ್ಷರದ ಬದಲು ಮತ್ತೊಂದನ್ನು ಬಳಸಿದರೆ ಅರ್ಥವೇ ಬೇರೆಯಾಗಿ ಗೊಂದಲವುಂಟುಮಾಡುವುದರ ಅರಿವಿರಬೇಕು. ಈ ಕಾರಣಕ್ಕಾಗಿ ನಮ್ಮ ದಿನನಿತ್ಯದ ವ್ಯವಹಾರಕ್ಕೆ ಬೇಡವಾಗಿದ್ದರೂ ಹಲವು ಅಕ್ಷರಗಳನ್ನು ಉಳಿಸಿಕೊಳ್ಳಲೇಬೇಕಾಗುತ್ತದೆ.

ಱ, ೞಕಾರಗಳಿಗೆ ಸಂಬಂಧಪಟ್ಟಂತೆ ಇವೇ ಗೊಂದಲಗಳಿದ್ದುವು. ಅಱಿ ಎಂದರೆ ಕತ್ತರಿಸು, ಅರಿ ಎಂದರೆ ತಿಳಿದುಕೊಳ್ಳು; ಅೞಿ= ದುಂಬಿ, ಅಳಿ=ನಾಶವಾಗು ಎಂಬಂತೆ ಭಿನ್ನಾರ್ಥಗಳೂ ಇದ್ದುವು. ಕನ್ನಡಿಗರು ಈ ಅರ್ಥವ್ಯತ್ಯಾಸವನ್ನು ಗುರುತಿಸಬಲ್ಲವರಾಗಿದ್ದರೂ ಆಡುಮಾತಿನಲ್ಲಿ ಱ-ರ, ೞ-ಳ ಕಾರಗಳ ಧ್ವನಿವ್ಯತ್ಯಾಸವನ್ನು ಉಳಿಸಿಕೊಳ್ಳಲು ಕಷ್ಟವಾಗತೊಡಗಿತು. ಬರಬರುತ್ತ ಬರೆವಣಿಗೆಯಲ್ಲಿ ಮಾತ್ರ ಉಳಿದುಕೊಂಡ ಈ ವ್ಯತ್ಯಾಸ ಮಾತಿನಿಂದ ಪೂರ್ಣವಾಗಿ ಅಳಿದುಹೋಯಿತು. ಱ, ೞಗಳನ್ನು ಉಚ್ಚರಿಸುವುದು ಹೇಗೆ ಎಂಬುದೂ ಮರೆಯುವ ಹೊತ್ತಿಗೆ ಅಕ್ಷರಗಳು ಬರೆವಣಿಗೆಯಿಂದಲೂ ಮರೆಯಾದವು. ಈ ಸ್ಥಿತಿಯನ್ನು ಕನ್ನಡದ ಅಲ್ಪಪ್ರಾಣ-ಮಹಾಪ್ರಾಣಗಳಿಗೂ ಹೋಲಿಸಬಹುದು. ಕನ್ನಡವೂ ಸೇರಿದಂತೆ ದ್ರಾವಿಡಭಾಷೆಗಳಲ್ಲಿ ಸಹಜವಾಗಿ ಮಹಾಪ್ರಾಣಗಳಿಲ್ಲ. ಕನ್ನಡದಲ್ಲಿ ಬಳಕೆಯಲ್ಲಿರುವ ಸಂಸ್ಕೃತಪದಗಳಲ್ಲಿರುವ ಮಹಾಪ್ರಾಣದ ಬದಲಿಗೆ ಅಲ್ಪಪ್ರಾಣವನ್ನು ಉಪಯೋಗಿಸಿದರೆ ಕೆಲವೆಡೆ (ಕಥೆ-ಕತೆ , ಗಂಟೆ-ಘಂಟೆ, ಗಳಿಗೆ-ಘಳಿಗೆ)ಯಾವ ವ್ಯತ್ಯಾಸವೂ ಆಗದು; ಆದರೆ ಇನ್ನು ಕೆಲವೆಡೆ ಅರ್ಥವ್ಯತ್ಯಾಸವಾಗಿ( ಧನ-ದನ, ಬರ-ಭರ, ಪಲ-ಫಲ, ಕಳ-ಖಳ) ಗೊಂದಲವಾಗಬಹುದು. ಉಚ್ಚಾರಣೆಯಲ್ಲಿ ಎದುರಾಗುವ ಸಮಸ್ಯೆ, ಅನಗತ್ಯವಾಗಿ ಹೆಚ್ಚಿನ ಹತ್ತು ಅಕ್ಷರಗಳನ್ನು ಕಲಿಯಬೇಕಾದ ಒತ್ತಡ, ಆ ಮಹಾಪ್ರಾಣಗಳ ಕಾಗುಣಿತವನ್ನು ಅಭ್ಯಾಸಮಾಡುವ ನಿರುಪಯುಕ್ತ ಕಲಿಕೆಗಳನ್ನು ತಪ್ಪಿಸಲು ಮಹಾಪ್ರಾಣಗಳನ್ನು ಕನ್ನಡದಿಂದ ಹೊರಗಿಡುವ ಸಾಧ್ಯತೆ ಪರಿಶೀಲನಾರ್ಹವೇ.
ಆದರೆ, ಱ, ೞಕಾರಗಳು ಕನ್ನಡದಿಂದ ಮರೆಯಾದುದಕ್ಕೂ ಮಹಾಪ್ರಾಣಗಳನ್ನು ಹೊರಹಾಕುವುದಕ್ಕೂ ಒಂದು ಮುಖ್ಯವಾದ ಅಂತರವಿದೆ. ಹಳೆಯ ಕಾಲಕ್ಕೆ ಬರೆಹದ ಭಾಷೆ ಸೀಮಿತವಾಗಿತ್ತು. ಬರೆವಣಿಗೆಗಿಳಿಸಿದ ಕೃತಿಗಳು ಹೆಚ್ಚಿರಲಿಲ್ಲ. ಇಂದು ಸಾಹಿತ್ಯ ವಿಪುಲವಾಗಿದೆ. ಲಕ್ಷಾಂತರಪುಟಗಳಲ್ಲಿ ಹರಡಿರುವ ಕನ್ನಡಸಾಹಿತ್ಯ ಬರೆವಣಿಗೆಯಲ್ಲಿ ಮಹಾಪ್ರಾಣಗಳು ತುಂಬಿಹೋಗಿವೆ. ಹೊಸದಾಗಿ ಕಲಿಯುವ ವಿದ್ಯಾರ್ಥಿಗೆ ಮಹಾಪ್ರಾಣಾಕ್ಷರಗಳನ್ನು ಕಲಿಸದೆ ಬಿಡಬಹುದೇ ವಿನಾ, ೨೦೧೭ರಿಂದ ಮಹಾಪ್ರಾಣಗಳಿಗೆ ಮಾನ್ಯತೆಯಿಲ್ಲ ಎಂದು ಆದೇಶಹೊರಡಿಸಲಾಗದು. ಪ್ರಾಥಮಿಕ ತರಗತಿಗಳಲ್ಲಿ ಅಲ್ಪಪ್ರಾಣಗಳನ್ನೂ ಅವುಗಳ ಕಾಗುಣಿತವನ್ನೂ ಮಕ್ಕಳಿಗೆ ಕಲಿಸಿ ಮುಂದಿನ ತರಗತಿಗಳಲ್ಲಿ ಮಹಾಪ್ರಾಣಾಕ್ಷರಗಳನ್ನು ಅಭ್ಯಾಸಮಾಡಲು ಅವಕಾಶ ಮಾಡಿಕೊಡುವ ಬಗೆಗೆ ಯೋಚಿಸಬಹುದು.

ಷಕಾರ, ವಿಸರ್ಗಗಳ ಬಗೆಗೆ ಇಷ್ಟು ತೊಂದರೆ ತೆಗೆದುಕೊಳ್ಳಬೇಕಿಲ್ಲ. ದುಃಖ=ದುಕ್ಕ, ಅಂತಃಪುರ=ಅಂತವುರ ಮೊದಲಾದ ಪರ್ಯಾಯ ರೂಪಗಳು ಅಧಿಕೃತವಾಗಿ ಲಭ್ಯವಿರುವುದರಿಂದಲೂ, ಶ-ಷಕಾರಗಳ ಬದಲಿಕೆಯಿಂದ ಯಾವುದೇ ತೊಂದರೆಯಿಲ್ಲದಿರುವುದರಿಂದಲೂ ಷ, ಅಃ ಗಳನ್ನು ಕನ್ನಡದಿಂದ ಹೊರಡಿಸಲು ಯಾವ ಅಭ್ಯಂತರವೂ ಇಲ್ಲ. ವಿಶೇಷ, ಶೋಷಣೆ, ಶುಭಾಶಯ ಮೊದಲಾದ ಪದಗಳ ಉಚ್ಚಾರಣೆ, ಬರೆಹಗಳಲ್ಲಿ ಇದಿರಾಗುವ ಗೊಂದಲಗಳೂ ನಿವಾರಣೆಯಾಗುತ್ತವೆ.

ಅನುನಾಸಿಕಗಳಲ್ಲಿ ಙ, ಞಗಳನ್ನು ಅಕ್ಷರರೂಪದಲ್ಲಿ ಕೈಬಿಟ್ಟರೂ ಅವುಗಳ ಉಚ್ಚಾರಣೆ ಬಿಡಲಾಗದು. ಕ ವರ್ಗದ ಅಕ್ಷರಗಳ ಮೊದಲಿಗೆ ಬರುವ ಬಿಂದು ಙಕಾರವನ್ನೂ ಚವರ್ಗದ ಅಕ್ಷರಗಳೊಡನೆ ಬರುವ ಬಿಂದು ಞಕಾರವನ್ನೂ ಸೂಚಿಸುತ್ತಲೇ ಇರುತ್ತವೆ. ಅಂಕಣ, ಶಂಖ, ತೆಂಗು, ಇಂಚರ, ಜಂಜಡ, ಅಂಜು ಮೊದಲಾದ ಪದಗಳನ್ನು ಉಚ್ಚರಿಸುವಾಗ ಈ ಅನುನಾಸಿಕಧ್ವನಿಗಳ ಇರುವಿಕೆ ಸ್ಪಷ್ಟವಾಗುವುದು. ವಾಙ್ಮಯ, ಜ್ಞಾನ, ವಿಜ್ಞಾನಗಳನ್ನು ಬರೆಯುವುದು ಹೇಗೆ ಎನ್ನುವುದಷ್ಟನ್ನು ನಿರ್ಧರಿಸಿಕೊಳ್ಳಬೇಕು.

ಪದಗಳಲ್ಲಿ ಕಾಣಿಸದೇ ಇದ್ದ ೠಕಾರವನ್ನು ಬಿಡಲು ಯಾವ ಆತಂಕವೂ ಇರಲಿಲ್ಲ. ಆದರೆ, ಋಕಾರ ಬಳಕೆಯಲ್ಲಿರುವ ಹಲವು ಪದಗಳಿವೆ. ಋಣ, ಋಷಿ, ಋತು ಮೊದಲಾದವು. ಇವನ್ನು ರುಣ, ರುಷಿ, ರುತು ಎಂಬಿತ್ಯಾದಿಯಾಗಿ ಬರೆಯಲು ಏನಡ್ಡಿ? ಅರ್ಥವ್ಯತ್ಯಾಸದ ಗೊಂದಲವೂ ಇಲ್ಲವಲ್ಲ ಎನ್ನಬಹುದು. ಉಚ್ಚಾರಣೆಯ ಗೊಂದಲ ನಿವಾರಿಸುವುದಕ್ಕಾಗಿಯೇ ಋಣ-ರಿಣ, ಋತು-ರಿತು, ಋಷಿ-ರಿಸಿ ಎಂಬಂತೆ ನೂರಾರು ವರ್ಷಗಳಿಗೆ ಮೊದಲೇ ತದ್ಭವಗಳಿಗೂ ಮಾನ್ಯತೆ ಸಿಕ್ಕಾಗಿದೆ. ಆದರೆ ಋಕಾರವು ಗುಣಿತಾಕ್ಷರವಾಗಿರುವ ಕೃಷ್ಣ, ಕೃಪೆ, ಗೃಹ ಮೊದಲಾದವುಗಳನ್ನು ಹೇಗೆ ಬರೆಯುವುದು? ಗೃಹ ಗ್ರಹವಾಗಬಾರದಲ್ಲವೇ? ಗೃಹವನ್ನು ಗ್ರುಹ ಎಂದು ಬರೆಯುವ ಮೂಲಕ ಗೊಂದಲ ತಪ್ಪಿಸಬಹುದೇನೋ. ಋಕಾರವನ್ನು ಮಕ್ಕಳಿರಲಿ, ಅಧ್ಯಾಪಕರಲ್ಲಿ ಅದೆಷ್ಟು ಜನ ಸ್ಪಷ್ಟವಾಗಿ ಉಚ್ಚರಿಸಬಲ್ಲರೋ ತಿಳಿಯದು. ಕೃಷ್ಣ, ಸಂಸ್ಕೃತದಂತಹ ಸಾಮಾನ್ಯ ಬಳಕೆಯ ಶಬ್ದಗಳು ಕ್ರುಷ್ಣ, ಸಂಸ್ಕ್ರುತ ಎಂದೆಲ್ಲ ‘ಅಪರೂಪ’ಗಳಲ್ಲಿ ಕಾಣಿಸಿಕೊಳ್ಳುವುದು ಭಾಷಾಶುದ್ಧಿಯ ದೃಷ್ಟಿಯಿಂದ ಹಿತವೆನಿಸುವುದಿಲ್ಲ.

ಕಾಲಕ್ರಮದಲ್ಲಿ ಱ, ೞಕಾರಗಳು ಮರೆಯಾದಂತೆ ಇನ್ನೂ ಹಲವು ಅಕ್ಷರಗಳು ಜನಬಳಕೆಯಿಂದ ದೂರವಾಗಬಹುದು. ಆದರೆ, ಈ ಪ್ರಕ್ರಿಯೆ ಸಮುದಾಯದ ದೀರ್ಘಕಾಲೀನ ಬಳಕೆಯಿಂದೊದಗಿದ ಸಹಜ ಪರಿಣಾಮವೇ ಹೊರತು ಸರ್ಕಾರಿ ಆದೇಶದಿಂದ ಒದಗಿದ ಕತ್ತರಿಪ್ರಯೋಗವಲ್ಲ. ಭಾಷೆಯನ್ನು ಬಳಸುವಲ್ಲಿನ ನಮ್ಮ ವೈಯಕ್ತಿಕ ತೊಂದರೆ, ಸೌಲಭ್ಯಾಕಾಂಕ್ಷೆಗಳಿಗಾಗಿ ಸಾವಿರಾರು ವರುಷಗಳಿಂದ ಜನಜೀವನದ ಭಾಗವಾಗಿರುವ ಭಾಷೆಯ ಸ್ವರೂಪವನ್ನೇ ಬದಲಿಸಹೋಗುವುದು ಸರಿಯಲ್ಲ. ಹೆಚ್ಚಿನ ಅಕ್ಷರಗಳ ಅಭ್ಯಾಸದಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುವುದಾದರೆ ಅಕ್ಷರಗಳನ್ನೂ ಅವುಗಳ ಗುಣಿತಗಳನ್ನೂ ಎರಡು ಹಂತಗಳಲ್ಲಿ ಕಲಿಸುವ ಸಾಧ್ಯತೆಯ ಬಗೆಗೆ ಯೋಚಿಸಬಹುದು. ಇಂಗ್ಲೀಶ್, ತಮಿಳು ಮತ್ತಿತರ ಹಲವು ಭಾಷೆಗಳಲ್ಲಿ ಅಕ್ಷರಗಳ ಸಂಖ್ಯೆ ಕಡಿಮೆ. ಹಾಗೆಂದು ಕಡಿಮೆ ಅಕ್ಷರಗಳ ಬಳಕೆಯೇ ಆದರ್ಶವೆಂದು ಹೇಳಲಾಗದು. ತಮಿಳಿನಲ್ಲಿ ಕಾಂತಿ ಎಂದು ಬರೆದದ್ದು ಗಾಂಧಿಯೂ ಆಗಬಹುದು. ಇಂಗ್ಲೀಶಿನ ಅನೇಕ ಪದಗಳ ಬರೆವಣಿಗೆಗೂ ಅವುಗಳ ಉಚ್ಚಾರಣೆಗೂ ಯಾವ ಸಂಬಂಧವೂ ಇಲ್ಲ. ಲೈಟ್, ಸೈಕಾಲಜಿ ಮೊದಲಾದ ಪದಗಳನ್ನು ಗಮನಿಸಿ. ಪದವನ್ನು ಓದುವಂತೆಯೇ ಬರೆಯುವ ಅಪೂರ್ವ ಸೌಲಭ್ಯ ಕನ್ನಡದಂತಹ ಸೊಗಸಾದ ಭಾಷೆಗೆ ಲಭ್ಯವಾಗಿದೆ. ಈ ಭಾಗ್ಯವನ್ನು ಕಳೆದುಕೊಳ್ಳುವುದೇ ಹಲವರಿಗೆ ಅತಿಮಹತ್ವದ ಸುಧಾರಣೆಯಂತೆ ಕಾಣುತ್ತಿರುವುದು ವಿಷಾದನೀಯ. ಇಂದು ನಮ್ಮ ಲೋಪದೋಷಗಳನ್ನು ಮರೆಮಾಚಲು ಕನ್ನಡ ವರ್ಣಮಾಲೆಗೆ ಶಸ್ತ್ರಚಿಕಿತ್ಸೆ ಮಾಡಹೊರಟ ನಾವು ಮಾಡುತ್ತಿರುವುದೇನು? ಮುಂದಿನ ಜನಾಂಗವು ಕನ್ನಡದ ಹಳೆಯ ಪಠ್ಯಗಳನ್ನು ಓದಲಾಗದಂತಹ ವ್ಯವಸ್ಥೆಯನ್ನು ಕಲ್ಪಿಸುವುದು, ಅಷ್ಟೇ ತಾನೇ! ಈ ಸೌಭಾಗ್ಯಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬೇರೆ ಏಕೆ ಬೇಕು?