ಹುಟ್ಟಿದ್ದು ೧೮೯೩ ರಲ್ಲಿ ಧಾರವಾಡದಲ್ಲಿ. ಪೂರ್ಣಹೆಸರು ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ. ವಿದ್ವಾಂಸರು ಸಮಾಜ ಸೇವಕರು. ಶೈವ ಸಮಾಜದ ಪ್ರಥಮ ಸ್ನಾತಕೋತ್ತರ ಪದವೀಧರರೆಂಬ ಮನ್ನಣೆಗೆ ಪಾತ್ರರಾದವರು. ಇವರು ಕರ್ನಾಟಕ ಲಿಂಗಾಯತ ಎಜುಕೇಷನಲ್ ಸೊಸೈಟಿಯನ್ನು ಸ್ಥಾಪಿಸಿದರು. ತಾವೇ ಸ್ಥಾಪಿಸಿದ್ದ ವೀರಶೈವ ತರುಣ ಸಂಘದ ಪ್ರಭೋದ ಮಾಸಪತ್ರಿಕೆ ಮತ್ತು ವಾರಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಕನ್ನಡ, ಇಂಗ್ಲಿಷ್, ಮರಾಠಿ, ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದ ಬಸವನಾಳರು ಅನೇಕ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ನಾಗವರ್ಮನ ಕಾವ್ಯಾವಲೋಕನಂ, ನಿಜಗುಣ ಶಿವಯೋಗಿಯ ಕೈವಲ್ಯ ಪದ್ದತಿ, ವಿರೂಪಾಕ್ಷ ಪಂಡಿತನ ಚೆನ್ನಪುರಾಣ, ಚಾಮರಸನ ಪ್ರಭುಲಿಂಗಲೀಲೆ, ಷಡಕ್ಷರಿಯ ಶಬರ ಶಂಕರ ವಿಲಾಸ, ಬಸವಣ್ಣನವರ ವಚನಗಳು, ಇವು ಮುಖ್ಯವಾದವು “music’s of Basava” ಇವರ ಇಂಗ್ಲಿಷ್ ಕೃತಿ.

ಬಸವನಾಳರು ಮುಂಬಯಿ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಪರೀಕ್ಷಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ೧೯೪೮ ರಲ್ಲಿ ಮುಂಬಯಿ ಸರ್ಕಾರದಿಂದ ನಿಯಾಮಕವಾದ ಕರ್ನಾಟಕ ವಿಶ್ವವಿದ್ಯಾಲಯ ಸಮಿತಿಯ ಸಭಾಸದರಾಗಿದ್ದ ಇವರು ಅನಂತರ ಆ ವಿಶ್ವ ವಿದ್ಯಾಲಯದ ಸೆನೆಟ್, ಸಿಂಡಿಕೇಟ್, ಮತ್ತು ಅಕಾಡಮಿಕ್ ಕೌನ್ಸಿಲ್ಗಳ ಸದಸ್ಯರೂ ಆಗಿದ್ದರು. ಅನೇಕ ವರ್ಷಗಳವರೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿದ್ದರು. ಸಿದ್ದಗಂಗಾದಲ್ಲಿ ೧೯೨೬ ರಲ್ಲಿ ನಡೆದ ವೀರಶೈವ ತರುಣ ಸಂಘಗಳ ಸಮ್ಮೇಳನ ಹಾಗೂ ಹುಬ್ಬಳ್ಳಿಯಲ್ಲಿ ೧೯೩೮ ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೩ ನೆಯ ಅಧ್ಯಕ್ಷರೂ ಆಗಿದ್ದರು. ರಬಕವಿಯಲ್ಲಿ ೧೯೪೪ ರಲ್ಲಿ ೨೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ವೀರಶೈವ ಧರ್ಮ ಸಾಹಿತ್ಯಗಳಿಗಾಗಿ ದುಡಿಯುವವರಲ್ಲಿ ಮುಖ್ಯರೂ ಆದ ಬಸವನಾಳರು ೧೯೫೧ ರಲ್ಲಿ ತೀರಿಕೊಂಡರು.