ದಕ್ಷಿಣ ಧ್ರುವ ಖಂಡ ಬಿಸಿಯೇರುತ್ತಿದೆ. ನಿರ್ಜನ, ಸಂಪೂರ್ಣ ಹಿಮ ಕವಿದ ಈ ಖಂಡದ ಉಷ್ಣತೆ ಈ ಹಿಂದೆ ನಾವು ಎಣಿಸಿದ್ದಕ್ಕಿಂತಲೂ ತೀವ್ರ ಗತಿಯಲ್ಲಿ ಏರುತ್ತಿದೆ ಎಂದು ಅಮೆರಿಕೆಯ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಭೂಮ್ಯಾಂತರಿಕ್ಷ ವಿಜ್ಞಾನಿಗಳು, ನಾಸಾದ ವಿಜ್ಞಾನಿಗಳ ಜೊತೆಗೂಡಿ ಸುಪ್ರಸಿದ್ಧ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಶೋಧನೆಗಳ ವಿವರಗಳು ಹೀಗೆನ್ನುತ್ತಿವೆ. ಕಳೆದ ಐದು ದಶಕಗಳಿಂದ ಸರಾಸರಿ ಒಂದು ಡಿಗ್ರಿ ಸೆಲ್ಶಿಯಸ್ನಷ್ಟು ಈ ಹಿಮಖಂಡದ ಮೇಲ್ಮೈ ಉಷ್ಣತೆ ಹೆಚ್ಚಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಮೊನ್ನೆ ಅಧ್ಯಕ್ಷ ಪದವಿ ಸ್ವೀಕರಿಸಿದ ಅಮೆರಿಕೆಯ ನೂತನಾಧ್ಯಕ್ಷ ಬರಾಕ್ ಒಬಾಮ ತಮ್ಮ ಚೊಚ್ಚಲ ಅಧ್ಯಕ್ಷ ಭಾಷಣದಲ್ಲಿ ಅಮೆರಿಕೆಯನ್ನು ಕಾಡುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಆಕತೆಗಳ ಜೊತೆ, ಜೊತೆಗೇ ಜಾಗತಿಕ ವಾಯುಗುಣ ಬದಲಾವಣೆಗೂ ಪ್ರಾಶಸ್ತ್ಯ ನೀಡಿದ್ದು ನೆನಪಿದೆಯಷ್ಟೆ! ಅಮೆರಿಕೆಗಷ್ಟೆ ಸೀಮಿತವಾದ ವಿಷಯಗಳ ಜೊತೆಗೇ ಅಧ್ಯಕ್ಷರು ಪ್ರಾಶಸ್ತ್ಯ ನೀಡಬೇಕಾದಷ್ಟು ಬಿಸಿ, ಬಿಸಿ ಸಮಸ್ಯೆಯೇ ಭೂಮಿಯ ವಾಯುಗುಣ ಬದಲಾವಣೆ ಎಂದಿರಾ? ನಮಗೆ ಇಲ್ಲದಿರಬಹುದು. ಆದರೆ ಈ ಸಮಸ್ಯೆಯನ್ನು ಅಭಿವೃದ್ಧ ರಾಷ್ಟ್ರಗಳು  ಗಂಭೀರವಾಗಿ ಪರಿಗಣಿಸಿವೆ. ಅಮೆರಿಕೆಯ ಪೂರ್ವ ಉಪಾಧ್ಯಕ್ಷರು ವಾಯುಗುಣ ಬದಲಾವಣೆಯ ಬಗ್ಗೆ ಅವಿರತ ಜನಾಂದೋಲನ ನಡೆಸಿ ಕಳೆದ ವರ್ಷ ನೋಬೆಲ್ ಪಾರಿತೋಷಕವನ್ನೂ ಗಿಟ್ಟಿಸಿಕೊಂಡಿದ್ದು ಇದಕ್ಕೆ ಇನ್ನೊಂದು ಸಾಕ್ಷಿ.  ನೇಚರ್ನಲ್ಲಿ ಪ್ರಕಟವಾಗಿರುವ ಸಂಶೋಧನೆಯ ವಿವರಗಳು ಈ ಬಿಸಿ, ಬಿಸಿ ಸಮಸ್ಯೆಗೆ ಇನ್ನಷ್ಟು ತುಪ್ಪ ಸುರಿದಿವೆ.

ಅಂಟಾಕ್ರ್ಟಿಕಾ ಹಾಗೂ ಆಕ್ರ್ಟಿಕ್ ಪ್ರದೇಶಗಳಲ್ಲಿ ವಾಯುಗುಣ ಬದಲಾವಣೆಯಾದಲ್ಲಿ ಅಲ್ಲಿನ ಹಿಮ ಕರಗುವುದಷ್ಟೆ ಅಲ್ಲ ಭೂಮಿಯ ಇತರೆಡೆಯಲ್ಲಿಯೂ ವಾಯುಗುಣ ಏರುಪೇರಾಗುತ್ತದೆನ್ನುವ ಆತಂಕ ವಿಜ್ಞಾನಿಗಳನ್ನು ಕಾಡುತ್ತಿದೆ. ಆಕ್ರ್ಟಿಕ್ (ಉತ್ತರ ಧ್ರುವ) ಪ್ರದೇಶದಲ್ಲಿನ ನೀರ್ಗಲ್ಲುಗಳು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಕರಗುತ್ತಿರುವುದು ಇದಕ್ಕೆ ಪುರಾವೆ ಎಂದು ಭಾವಿಸಲಾಗಿದೆ. ಆದರೂ ಥರಗುಟ್ಟುವ ಛಳಿಯ ಈ ಹಿಮಖಂಡಗಳಲ್ಲಿ ಉಷ್ಣತೆ ಎಷ್ಟು ಹೆಚ್ಚಾಗಿದೆ ಎನ್ನುವುದರಲ್ಲಿ ಒಮ್ಮತವಿಲ್ಲ.  ಅತಿ ಶೀತಲವಾದ ಹಿಮಖಂಡದ ಒಳಭಾಗಗಳಲ್ಲಿ ಉಷ್ಣತೆ ಅಷ್ಟೇನೂ ಹೆಚ್ಚಾಗಿರಲಿಕ್ಕಿಲ್ಲ. ಏನಿದ್ದರೂ, ಕರಾವಳಿಯ ಪ್ರದೇಶಗಳಲ್ಲಿರುವ ನೀರ್ಗಲ್ಲುಗಳು ಹಾಗೂ ಸಮುದ್ರದ ನೀರು ಬಿಸಿಯೇರುತ್ತಿರಬೇಕು ಎನ್ನುವುದು ಊಹೆ.

ಇದು ನಿಜವಲ್ಲ ಎನ್ನುತ್ತದೆ ವಾಷಿಂಗ್ಟನ್ ವಿಶ್ವವಿದ್ಯಾನಿಲದ ವಿಜ್ಞಾನಿಗಳ ಸಂಶೋಧನೆ. 1957ರಿಂದ ಇಂದಿನವರೆವಿಗೂ ಅಂಟಾಕ್ರ್ಟಿಕಾದಲ್ಲಿ ಪ್ರತಿ ತಿಂಗಳು ಆಗಿರಬಹುದಾದ ಉಷ್ಣತೆಯ ಬದಲಾವಣೆಗಳನ್ನು ಲೆಕ್ಕ ಹಾಕಿದ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಎರಿಕ್ ಸ್ಟೀಗ್ ಮತ್ತು ಸಹೋದ್ಯೋಗಿಗಳು ಈ ಹಿಮಖಂಡದ ಎಲ್ಲೆಡೆಯೂ ಉಷ್ಣತೆ ಹೆಚ್ಚೂ ಕಡಿಮೆ ಒಂದೇ ಸಮನಾಗಿ ಏರಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಂಟಾಕ್ರ್ಟಿಕಾ ಬಿಸಿಯೇರುತ್ತಿದೆ ಎಂದು ನಂಬಿದವರೂ ಕೂಡ, ಕರಾವಳಿ ತೀರದಲ್ಲಿರುವ ಭೂಪ್ರದೇಶಗಳು ಹೆಚ್ಚು ಬಿಸಿಯೇರಿ, ಹಿಮಖಂಡದ ಒಳನಾಡು ತಣ್ಣಗೇ ಉಳಿದಿದೆ ಎಂದು ಭಾವಿಸಿದ್ದರು. ಇದಕ್ಕೆ ಕಾರಣ ಅಂಟಾಕ್ರ್ಟಿಕಾದ ಒಳನಾಡಿನಲ್ಲಿ ಬೀಸುವ ಶೀತಲ ಗಾಳಿ. ನಿರ್ಜನವಾದ ಇಲ್ಲಿ ಉಷ್ಣತೆಯನ್ನು ಅವಿರತವಾಗಿ ಅಳೆದವರಿಲ್ಲ.  ಭಾರತದ ಅರ್ಧದಷ್ಟು ವಿಸ್ತಾರವಾಗಿರುವ ಈ ಖಂಡದಲ್ಲಿ ವಾಯುಗುಣವನ್ನು ದಾಖಲಿಸಲು ಕೇವಲ 42 ಕೇಂದ್ರಗಳಿವೆ ಅಷ್ಟೆ. ಈ ಕೇಂದ್ರಗಳು ದಾಖಲಿಸಿದ ಉಷ್ಣತೆಯನ್ನು, ಹಾಗೂ ಅಮೆರಿಕೆಯ ಉಪಗ್ರಹವೊಂದರಿಂದ ಪಡೆದ ಅಂಟಾಕ್ರ್ಟಿಕಾದ ಇನ್ಫ್ರಾರೆಡ್ ಚಿತ್ರಗಳು (ಇನ್ಫ್ರಾರೆಡ್ ಚಿತ್ರಗಳು ಅಲ್ಲಿನ ವಾಯುಮಂಡಲದ ಉಷ್ಣತೆಯನ್ನು ಸೂಚಿಸುತ್ತವೆ) ಸೂಚಿಸಿದ ಉಷ್ಣತೆ, ಇವುಗಳನ್ನು ಲೆಕ್ಕ ಹಾಕಿ ಈ ಹಿಮಖಂಡದ ಮೇಲಿನ ಉಷ್ಣತೆ ಕಾಲಾನುಕ್ರಮದಲ್ಲಿ ಹೇಗೆ ಬದಲಾಗಿರಬಹುದು ಎಂದು ಇವರು ಊಹಿಸಿದ್ದಾರೆ. ವಾಯುಗುಣ ತಜ್ಞರು ಬಳಸುವ ಕಂಪ್ಯೂಟರ್ ಮಾದರಿಗಳನ್ನು ಬಳಸಿ ತಮ್ಮ ಊಹೆ ಸರಿಯೋ, ತಪ್ಪೋ ಎಂದು ಪರಿಶೀಲಿಸಿದ್ದಾರೆ. ಇವರ ಲೆಕ್ಕಾಚಾರದ ಪ್ರಕಾರ ಅಂಟಾಕ್ರ್ಟಿಕಾದ ಎಲ್ಲೆಡೆಯೂ, ಒಳನಾಡಿನಲ್ಲಿಯೂ, ಪ್ರತಿ ಹತ್ತು ವರ್ಷಗಳಲ್ಲಿ 0.1 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆ ಹೆಚ್ಚಿದೆ. ಅಂದರೆ ಕಳೆದ ಐವತ್ತು ವರ್ಷಗಳಲ್ಲಿ ಸುಮಾರು ಅರ್ಧ ಡಿಗ್ರಿ ಸೆಲ್ಶಿಯಸ್ನಷ್ಟು ಅಂಟಾಕ್ರ್ಟಿಕಾ ಬಿಸಿಯೇರಿದೆ. ಎಲ್ಲೆಡೆಯೂ ಸಮಪ್ರಮಾಣದಲ್ಲಿ ಬಿಸಿಯೇರಿರುವುದಕ್ಕೆ ಕಾರ್ಬನ್ಡಯಾಕ್ಸೈಡ್, ಮೀಥೇನ್ ಮುಂತಾದ ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾಗಿರುವುದೇ ಕಾರಣವಿರಬೇಕು ಎಂದು ಈ ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಹಾಗಿದ್ದರೆ ಈ ಹಿಮಖಂಡವನ್ನು ಉಳಿಸುವುದಾಗುವುದಿಲ್ಲವೇ? ಹಿಮಖಂಡದ ಉಷ್ಣತೆ ಹೆಚ್ಚಾಗದಂತೆ ತಡೆಯುವ ಉಪಾಯಗಳೂ ಇವೆ ಎನ್ನುವ ವಿಷಯ ಈ ಸುದ್ದಿ ಬಂದ ಮುಂದಿನ ಸಂಚಿಕೆಯಲ್ಲಿ ಅದೇ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ವಾಯುಮಂಡಲದಲ್ಲಿ ಕಾರ್ಬನ್ ಡಯಾಕ್ಸೈಡ್ ಪ್ರಮಾಣ ಹೆಚ್ಚದಂತೆ ತಡೆಯಬೇಕಾದರೆ, ಅಧಿಕವಾಗುತ್ತಿರುವ ಅನಿಲವನ್ನು ಹೇಗಾದರೂ ಹಿಡಿದಿಡಬೇಕಷ್ಟೆ. ಸಮುದ್ರದಲ್ಲಿರುವ ಸೂಕ್ಷ್ಮಜೀವಿಗಳು ಈ ಕೆಲಸ ಮಾಡಬಲ್ಲುವು. ಆದರೆ ಅವು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಬೇಕಷ್ಟೆ. ಇದಕ್ಕಾಗಿ ಸೂಕ್ಷ್ಮಜೀವಿಗಳು ಬೆಳೆಯಲು ಅನುಕೂಲವಾದ ವಾತಾವರಣವನ್ನು ಸೃಷ್ಟಿಸಬೇಕು. ಸಮುದ್ರದಲ್ಲಿ ಕಬ್ಬಿಣದ ಪುಡಿಯನ್ನು ಗೊಬ್ಬರವಾಗಿ ಎರಚಿದಲ್ಲಿ ಇದು ಸಾಧ್ಯವಾಗಬಹುದು ಎನ್ನುವ ನಂಬಿಕೆ ಇದೆ. ಆದರೆ ಅದು ಆಗುತ್ತದೋ, ಇಲ್ಲವೋ ಎನ್ನುವುದನ್ನು ಪರೀಕ್ಷಿಸಲಾಗಿಲ್ಲ.  ಭಾರತ ಮತ್ತು ಜರ್ಮನಿಯ ವಿಜ್ಞಾನಿಗಳು ಒಟ್ಟಾಗಿ ನಡೆಸಬೇಕೆಂದಿದ್ದ ಇಂತಹುದೊಂದು ಪರೀಕ್ಷೆಯನ್ನು ಜರ್ಮನಿಯ ಸರ್ಕಾರದ ಅನುಮತಿ ದೊರೆಯದ್ದರಿಂದ ಮುಂದೂಡಲಾಗಿತ್ತು. ಜರ್ಮನಿ ಸರಕಾರ ಅನುಮತಿ ನೀಡುವ ಮುನ್ನವೇ ಬ್ರಿಟನ್ನಿನ ವಿಜ್ಞಾನಿಗಳ ತಂಡವೊಂದು ಅಂಟಾಕ್ರ್ಟಿಕಾದ ಉತ್ತರ ತುದಿಯಲ್ಲಿ ಇರುವ ದ್ವೀಪವೊಂದರ ಸುತ್ತಮುತ್ತಲಿನ ಸಮುದ್ರದಲ್ಲಿ ನಡೆಸಿದ ಅನ್ವೇಷಣೆ, ಕಬ್ಬಿಣದ ಗೊಬ್ಬರದಿಂದ ಸಮುದ್ರದ ಫಲವತ್ತತೆ ಹಾಗೂ ಸೂಕ್ಷ್ಮಜೀವಾಣುಗಳ ಕೃಷಿ ಹೆಚ್ಚುತ್ತದೆ ಎಂದು ತೋರಿಸಿದೆ.

ಇಂಗ್ಲೆಂಡಿನ ನ್ಯಾಚುರಲ್ ಎನ್ವಿರಾನ್ಮೆಂಟ್ ರಿಸರ್ಚ್ ಕೌನ್ಸಿಲ್ (ನೈಸರ್ಗಿಕ ಪರಿಸರ ಸಂಶೋಧನಾ ಮಂಡಳಿ)ಯ ವಿಜ್ಞಾನಿಗಳ ಅಂಟಾಕ್ರ್ಟಿಕಾದ ಬಳಿ ಇರುವ ಕ್ರೋಜೆಟ್ ದ್ವೀಪದ ಬಳಿ ಸಹಜವಾಗಿಯೇ ಕಬ್ಬಿಣದ ಅಂಶ ಸಮುದ್ರ ಸೇರುವುದನ್ನು ಗುರುತಿಸಿವೆ. ಅಷ್ಟೇ ಅಲ್ಲ. ಅಲ್ಲಿನ ನೀರಿನ ಹರಿವಿನಿಂದಾಗಿ, ದ್ವೀಪದ ಉತ್ತರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದನ್ನೂ, ದಕ್ಷಿಣದಲ್ಲಿ ಇಲ್ಲವೇ ಇಲ್ಲವೆನ್ನುವಂತೆ ಇರುವುದನ್ನೂ ದಾಖಲಿಸಿವೆ. ಈ ಎರಡೂ ಪ್ರದೇಶಗಳಲ್ಲಿ ವಿವಿಧ ಋತುಗಳಲ್ಲಿ ಬೆಳೆಯುವ ಸೂಕ್ಷ್ಮಜೀವಿಗಳ ಪ್ರಮಾಣ, ಅವು ಸಾಗರದಾಳಕ್ಕೆ ಎಳೆದೊಯ್ಯುವ ಕಾರ್ಬನ್ ಡಯಾಕ್ಸೈಡ್ ಪ್ರಮಾಣ ಎಲ್ಲವನ್ನೂ ಲೆಕ್ಕ ಹಾಕಿವೆ. ಒಟ್ಟಾರೆ ಕಬ್ಬಿಣ ಇಲ್ಲದ ಕಡೆಗಿಂತಲೂ ಕಬ್ಬಿಣ ಇರುವ ನೀರಿನಲ್ಲಿ ಐವತ್ತು ಪಟ್ಟು ಹೆಚ್ಚು ಕಾರ್ಬನ್ಡಯಾಕ್ಸೈಡ್ ಸೇರ್ಪಡೆಯಾಗುತ್ತದೆ ಎಂದು ಇವರ ಶೋಧ ತಿಳಿಸಿದೆ. ಅರ್ಥಾತ್, ಕಬ್ಬಿಣದ ಪುಡಿಯನ್ನು ಗೊಬ್ಬರವಾಗಿ ಬಳಸಿದಲ್ಲಿ ಇಂತಹುದೊಂದು ಪರಿಣಾಮವನ್ನು ಸಾಧಿಸಬಹುದು. ಈಗ ನಡೆಸುತ್ತಿರುವ ಪ್ರಯೋಗ ನೈಸರ್ಗಿಕವಾಗಿ ಜರುಗುವ ಕ್ರಿಯೆಯಷ್ಟೆ ಸಮರ್ಥವಾಗಿರುತ್ತದೆಯೇ ಎನ್ನುವುದೇ ಪ್ರಶ್ನೆ.

1. Warming of the Antarctic ice-sheet surface since 1957 International Geophysical Year, Eric J. Steig et al.  Nature, Vol. 457, Pp 459-463, 2009 (22 January 2009)

2. Southern Ocean deep-water carbon export enhanced by natural iron fertilization; Raymond T. Pollard et al., Nature; Vol. 457, Pp 577-580, 2009 (29 January 2009)