ಹಿತ್ತಲಿನಲ್ಲಿ ಬೆಳೆಯಬಹುದಾದ, ಅಡಿಗೆಯ ಮನೆಗೆ ಅವಶ್ಯವಾದ, ಅಜ್ಜಿ ಮದ್ದಿಗೆ ಬೇಕಾದ ಹಲವಾರು ಸಾಂಬಾರ ಸಸ್ಯಗಳಿವೆ. ಔಷಧೀಯ ಗುಣವುಳ್ಳ, ಅಡಿಗೆಗೆ ಆಗುವಂತಹ ಮಸಾಲೆಗಳಾದಲ್ಲಿ, ಅದು ಬೆಳೆದವರಿಗೆ ಬೋನಸ್ ಇದ್ದಂತೆ. ಅಂತಹುದರಲ್ಲಿ ಪ್ರಮುಖವಾದ, ಮುಂಗಾರಿನಲ್ಲಿ ಮೊಳಕೆ ತೋರಿಸಿ ತಾನು ನಾಟಿಗೆ ಸಿದ್ಧ ಎನ್ನುವ ಗೆಡ್ಡೆ ಶುಂಠಿ. ದಿನ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗ ವಾಗುವ ರೈಜೋಮ್, (ಬೇರಿಂದ ಬರುವ ಕಾಂಡ.) ಈ ಶುಂಠಿ. ಎಲ್ಲರಿಗೂ ಇಷ್ಟವಾಗುವ ಸುವಾಸನೆಯುಳ್ಳದ್ದು. ಹಾಗಾಗಿ ಅಡಿಗೆಗೆ ಬೇಕಾದ ಮಸಾಲೆಗಳಿಗೆ ಮುಖ್ಯವಾದ ಮಸಾಲೆ ರಾಜ ಈ ಶುಂಠಿ. ಇಂತಹ ಗಿಡ ಬೆಳೆಯುವ ಮೊದಲು ಇದರ ಇತಿಹಾಸ ಸ್ವಲ್ಪ ನೋಡೋಣ.

ಜಿಂಜಿಬರೇಸಿ ಕುಟುಂಬಕ್ಕೆ ಸೇರಿದ ಈ ಗೆಡ್ಡೆಗೆ ಹಲವು ಹೆಸರುಗಳು. ಹಿಂದಿಯಲ್ಲಿ “ಅದರಕ್,” ತಮಿಳಿನಲ್ಲಿ “ಇಂಜಿ,” ತೆಲುಗಿನಲ್ಲಿ “ಅಲ್ಲಂ.”  ಹಾಗೇ ಇದರಿಂದ ಮಾಡುವ ವಿಶೇಷಗಳಿಗೂ ಬೇರೆ ಬೇರ ಹೆಸರುಗಳು. “ಶುಂಠಿ ಮೊರಬ್ಬ” ಕರ್ನಾಟಕದಲ್ಲಿ ಹೆಸರುವಾಸಿಯಾದರೆ, “ಅಲ್ಲಂ-ಪಚ್ಚಡಿ” ಆಂಧ್ರ ಪ್ರದೇಶದಲ್ಲಿ. ಭಾವನಾ ಶುಂಠಿ ಮಲೆನಾಡಿನಲ್ಲಾದರೆ,  ಮುಂಬಯಿ ಮಂದಿಗೆ ಚಹಾ ಮಾಡಲು ಅದರಕ್ ಬೇಕೇ ಬೇಕು. ಇದರ ಸುವಾಸನೆ, ಇದರಲ್ಲಿರುವ ಮಧುರವಾದ ಘಾಟು ಇಷ್ಟೆಲ್ಲಾ ಪ್ರಸಿದ್ಧಿಗೆ ಕಾರಣ. ಮಗುವಿಗೆ ಜನ್ಮವಿತ್ತ ನಂತರ ನಿತ್ರಾಣಗೊಂಡಿರುವ ತಾಯಿಗೆ ಸೊಂಟ ಗಟ್ಟಿಯಾಗಿರಲು ಕೊಡುವುದು ಇದೇ ಶುಂಠಿ ಬೆಲ್ಲ.  ಇಂತಹ ಒಂದು ಗಿಡ ನಿಮ್ಮ ಹಿತ್ತಲಲ್ಲಿರಬೇಡವೇ? ಗಿಡಕ್ಕಾಗಿ ತಡಕಾಡಬೇಕಿಲ್ಲ. ಮುಂಗಾರು ಬಂತೆಂದರೆ ಮೊಳಕೆಯೊಡೆದು ನಾನಿಲ್ಲಿದ್ದೀನೆಂದು  ಸಾರುವ  ಶುಂಠಿ ನೆಟ್ಟರೆ ಸಾಕು. ಗಿಡ ಸಿದ್ಧ.

ಚೀಲದಲ್ಲಿ ಬೆಳೆಸಿರುವ ಶುಂಠಿ ಗಿಡ

ಮೇ-ಜೂನ್, ತಿಂಗಳು ಗಿಡ ನೆಡಲು ಸಕಾಲ. ಸ್ವಲ್ಪ ನೆರಳು ಬಯಸುವ ಗಿಡವಾದ್ದರಿಂದ ದೊಡ್ಡ ಗಿಡದ ನೆರಳಿನಲ್ಲಿ ಬೆಳೆಸಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು, ಹಗುರವಾಗಿರುವ ಕಪ್ಪು ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು, ಯಾವುದಾದರೂ ಸರಿ, ಸಾವಯವ ಗೊಬ್ಬರ ಹೆಚ್ಚಾಗಿ ಸೇರಿಸಿದರೆ, ಶುಂಠಿ ಬೆಳೆಯುವುದು ಸುಲಭ. ಉಪಯೋಗಿಸುವ  ಶುಂಠಿ ಗೆಡ್ಡೆ ಸಾಕಷ್ಟು ದೊಡ್ಡದಿರಬೇಕು.(ಕನಿಷ್ಟ ೨೫ ಗ್ರಾಂ ತೂಕ) ಹುಳುಕಿಲ್ಲದ, ಚೆನ್ನಾಗಿರುವ ಗೆಡ್ಡೆಗಳನ್ನು ನಾಟಿ ಮಾಡಿದಾಗ ಗಿಡ ಆರೊಗ್ಯವಾಗಿ, ಸೊಂಪಾಗಿ ಬೆಳೆಯುತ್ತದೆ. ಒಂದು ಗೆಡ್ಡೆಯಿಂದ ಇನ್ನೊಂದು ಗೆಡ್ಡೆಗೆ ಕನಿಷ್ಟ ೯ ಇಂಚು ದೂರ ಇಡುವುದು ಇಳುವರಿಯ ದೃಷ್ಟಿಯಿಂದ ಒಳ್ಳೆಯದು. ಗಿಡ ಬೆಳೆದಂತೆಲ್ಲಾ ೧೫ ದಿನಗಳಿಗೊಮ್ಮೆ ಗಿಡದ ಬುಡಕ್ಕೆ  ಮಣ್ಣು ಏರಿ ಹಾಕಬೇಕು. ಯಾವುದೇ ಕಾರಣಕ್ಕೂ ಗೆಡ್ಡೆ ಬಿಸಿಲಿಗೆ ಬೀಳಬಾರದು. ತಿಂಗಳಿಗೊಮ್ಮೆ ಸ್ವಲ್ಪ ಕಾಂಪೋಸ್ಟ ಸೇರಿಸಬೇಕು. ಗಿಡಕ್ಕೆ ೪ ತಿಂಗಳಾದಾಗ, ಒಂದು ಹಿಡಿ ಹೊಂಗೆ ಹಿಂಡಿಗೆ ಸ್ವಲ್ಪ ಬೂದಿ ಬೆರೆಸಿ ಹಾಕಿ. ಸಾಧ್ಯವಿದ್ದಲ್ಲಿ ದ್ರವ ಗೊಬ್ಬರ ಸಹ ಹಾಕಬಹುದು. ಗೆಡ್ಡೆ ದಪ್ಪವಾಗಲು ಹಿಂಡಿ ಸಹಕರಿಸುತ್ತದೆ. ೭ರಿಂದ ೮ ತಿಂಗಳಲ್ಲಿ ಬೆಳೆಯ ಅವಧಿ ಮುಗಿಯುವ ಹೊತ್ತಿಗೆ ಗಿಡ ಒಣಗಲಾರಂಭಿಸುತ್ತದೆ. ಗಿಡ ಪೂರ್ತಾ ಒಣಗಿದಮೇಲೆ, ಗೆಡ್ಡೆ ತೆಗೆಯಲು ಸಕಾಲ. ಆದರೆ ಗೆಡ್ಡೆ ತೆಗೆಯುವ ಮೊದಲು ಸುತ್ತಲಿನ ಮಣ್ಣು ಸಡಿಲಿಸಿದರೆ, ಗೆಡ್ಡೆ ತುಂಡಾಗುವುದಿಲ್ಲ.

ಶುಂಠಿಯನ್ನು  ಹಸಿಯಾಗಿಯೂ, ಒಣಗಿಸಿಯೂ ಉಪಯೋಗಿಸಬಹುದು. ಚಹ ಮಸಾಲೆಗೆ, ಅಡಿಗೆಗೆ ಹಸಿ ಶುಂಠಿ ಬೇಕು. ಶುಂಠಿಗೆ ಸುಣ್ಣದ ಲೇಪ ಮಾಡಿ ಒಣಗಿಸಿ ಒಣಶುಂಠಿ ಮಾಡುತ್ತಾರೆ. ಈ ರೀತಿ ಒಣಗಿಸಿದ ಶುಂಠಿ ತುಂಬಾ ಬಾಳಿಕೆ ಬರುತ್ತದೆ. ಔಷಧಕ್ಕಾಗಿ ಉಪಯೋಗಿಸುವ ಈ ಶುಂಠಿ ಗ್ರಂಧಿಗೆ ಅಂಗಡಿಗಳಲ್ಲಿ ಲಭ್ಯ. ಶುಂಠಿ ಬೆಲ್ಲ ಅಜೀರ್ಣಕ್ಕಾಧರೆ,  ಶುಂಠಿ ಕಶಾಯ ನೆಗಡಿ ಕೆಮ್ಮಿಗೆ. ಶುಂಠಿ ಮತ್ತು ಸಕ್ಕರೆ ಉಪಯೋಗಿಸಿ ಮಾಡುವ ಶುಂಠಿ ಮೊರಬ್ಬ  ಡಯೇರಿಯ, ಮತ್ತು ಹೊಟ್ಟೆ ತೊಳಸಿದಾಗೆ ತಿಂದರೆ ಒಳ್ಳೆಯದು. ಹಲವಾರು ವಿಟಮಿನ್ ಸತ್ವಗಳು, ಕ್ಯಾಲಿಸಿಯಂ, ಐರನ್, ಅಲ್ಲದೆ ಸಾಕಷ್ಟು  ಲವಣಗಳಿರುವ, ಶುಂಠಿಯನ್ನು ನಿಯಮಿತವಾಗಿ ಉಪಯೋಗಿಸಿದರೆ ಹಲವಾರು ಖಾಯಿಲೆಗಳನ್ನು ದೂರವಿಡಬಹುದು.

ನೆಲದಲ್ಲಿ ಬೆಳೆದಿರುವ ಶುಂಠಿ ಗಿಡ

ಮಾರುಕಟ್ಟೆಯಲ್ಲಿ ದೊರೆಯುವ ಶುಂಠಿ ಬೆಳೆಯಲು ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತಿದೆ.ಅಲ್ಲದೆ ಇದರಿಂದಾಗಿ ಬರುವ ರೋಗ ರುಜಿನಗಳಿಗೆ ರಾಸಾಯನಿಕ ಕೀಟನಾಶಕಗಳ ಉಪಯೋಗವಾಗುತ್ತಿದೆ. (ಸುಮಾರು ೨೭ ಬಾರಿ ಔಷಧ ಹೊಡೆಯುತ್ತಾರೆಂಬ ವಿಚಾರ ಜನಜನಿತ ವಾಗಿದೆ.) ಇವುಗಳ ಪ್ರಭಾವ ಎಷ್ಟಿದೆ ಎಂದರೆ  ಎರೆಡು ವರ್ಷ ಶುಂಠಿ ಬೆಳೆದ ನೆಲದಲ್ಲಿ ಬರೀ ಹುಲ್ಲು ಸಹ ಬೆಳೆಯಲಾಗುತ್ತಿಲ್ಲ. ಭೂಮಿ ಅಷ್ಟು ಬರಡಾಗಿ ಹೋಗಿರುತ್ತದೆ. ನಾವು ತಿನ್ನುವ, ಬಳಸುವ, ಶುಂಠಿ ವಿಷಮುಕ್ತ ವಾಗಿರಬೇಕಲ್ಲವೇ? ಅಂದರೆ, ನಾವು ಸಾವಯವ ಪದ್ಧತಿಯಲ್ಲಿ ಶುಂಠಿ ಬೆಳೆದಾಗ, ಅದರ ಔಷಧೀಯ ಗುಣಗಳು ಹೆಚ್ಚಾದದ್ದು ಕಂಡು ಬಂದಿದೆ.

ಶುಂಠಿಯನ್ನು ಜಜ್ಜಿ ರಸ ತೆಗೆದು,  ಒಂದು ಚಮಚ ತಾಜಾ ರಸಕ್ಕೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರುಸಲ ಸೇವಿಸಿದರೆ ಕೆಮ್ಮು ಪರಿಹಾರವಾಗುತ್ತದೆ.

ಒಂದು ಚಮಚ ಹಸಿ ಶುಂಠಿ ರಸಕ್ಕೆ ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಉಪ್ಪು ಬೆರೆಸಿ ಊಟದ ನಂತರ ಸೇವಿಸಿದರೆ ಅಜೀರ್ಣಕ್ಕೆ ಒಳ್ಳೆಯದು

ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ “ಭಾವನಾ ಶುಂಠಿ” ನಿಂಬೆರಸದಲ್ಲಿ ಸ್ನಾನಮಾಡಿ ಬಿಸಿಲಲ್ಲಿ ಒಣಗಿದ್ದು. ಇದು ಅಜೀರ್ಣಕ್ಕೆ, ಬಾಯಿರುಚಿಗೆ, ಒಳ್ಳೆಯದು.

ಬಾಯಿ ರುಚಿ ಕೆಟ್ಟಾಗ, ಹೊಟ್ಟೆ ಉಬ್ಬರಿಸಿದಾಗ, ಶುಂಠಿ ಪುಡಿಗೆ ನೆಲ್ಲಿಕಾಯಿ,ಅಳಲೆಕಾಯಿ ನಿಂಬೆರಸ ಬೆರೆಸಿ ಬಿಸಿನೀರಲ್ಲಿ ಸೇವನೆ ಮಾಡಿದರೆ ಒಳ್ಳೆಯದು.

ಶ್ವಾಸ ಸಂಬಂಧಿ ಖಾಯಿಲೆಗೆ, ಶುಂಠಿಗೆ ಕರಿಮೆಣಸು,ಜೇನುತುಪ್ಪ ಬೆರೆಸಿ ಬಿಸಿನೀರಿನೊಡನೆ ಕುಡಿಯುವುದು ಒಳ್ಳೆಯದು.

ವಾಂತಿ,ವಾಕರಿಕೆಗೆ, ಹಸಿಶುಂಠಿರಸ, ದಾಳಿಂಬೆರಸ, ಸ್ವಲ್ಪ ಜೀರಿಗೆಪುಡಿ ಸೇರಿಸಿ ಬರಿ ಹೊಟ್ಟೆಗೆ ಸೇವಿಸಿ.

ತಲೆನೋವಿಗೆ, ಶುಂಠಿಯನ್ನು ಹಾಲಿನಲ್ಲಿ ಅರೆದು ಪಟ್ಟು ಹಾಕಿದರೆ ಉಪಶಮನವಾಗುತ್ತದೆ. ಇಷ್ಟೆಲ್ಲಾ ಉಪಯೋಗ ಹೇಳಿದ ಡಾ; ಅನ್ನಪೂರ್ಣ ಮಳೆಗಾಲಕ್ಕೆಂದು ಒಂದು ಗುಟ್ಟು  ಹೇಳುವುದನ್ನು ಮರೆಯಲಿಲ್ಲ. ಏನದು ಆ ಗುಟ್ಟು ಅಂತೀರಾ? ಕಶಾಯ ಕುಡಿದು ಖಾಯಿಲೆಗಳನ್ನು ದೂರವಿಡಿ ಅಂತ.

ಕೊನೆಹನಿ: ಶುಂಠಿ ಹೆಚ್ಚು ಬೆಳೆದಾಗ, ತೆಳುವಾಗಿ ಬಿಲ್ಲೆ ತೆಗೆದು ನೆರಳಲ್ಲಿ ಒಣಗಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಗಾಳಿಯಾಡದ ಡಬ್ಬಿಯೊಳಗೆ ತುಂಬಿಸಿಡಿ. ಘಮ ಘಮಿಸುವ ಈ ಪುಡಿಯನ್ನು ಬೇಕೆಂದಾಗ ಉಪಯೋಗಿಸಬಹುದು.

(ಚಿತ್ರಗಳು: ಆರ್ ಎಸ್ ಶರ್ಮ)