ಆಕಾಶದಲ್ಲಿ ಸೂರ್ಯ ಮತ್ತು ಚಂದ್ರನನ್ನು ಹೊರತುಪಡಿಸಿ, ನಮಗೆ ಅತ್ಯಂತ ಉಜ್ವಲವಾಗಿ ಕಾಣುವ ಹಾಗೂ ಪ್ರಾಚೀನ ಕಾಲದಿಂದಲೂ ಬಹಳ ಚಿರಪರಿಚಿತವಾಗಿರುವ ಗ್ರಹ ಶುಕ್ರ.

ಖಗೋಳವಿಜ್ಞಾನಕ್ಕೆ ಸಂಬಂಧಪಟ್ಟ ಬಹಳ ಪುರಾತನ ಗ್ರಂಥ ಒಂದು ಬ್ಯಾಬಿಲೋನಿಯನ್ ಗ್ರಂಥಾಲಯದಲ್ಲಿ ದೊರೆತಿದ್ದು, ಬ್ಯಾಬಿಲೋನಿಯನ್ನರು ಶುಕ್ರನನ್ನು ನಿಂದರನ್ನ(Nindaranna)ಎಂದು ಕರೆಯುತಿದ್ದರು ಎಂಬುದು ಅದರಿಂದ ಗೊತ್ತಾಗಿದೆ. ಭಾರತದಲ್ಲಿ ಒಬ್ಬ ಮಹಾನ್ ಸಂತ ಶುಕ್ರಮುನಿಯ ಹೆಸರಿನಿಂದ ಶುಕ್ರಗ್ರಹ ಎಂದು ಪ್ರಸಿದ್ಧವಾಗಿದೆ.

ಶುಕ್ರಗ್ರಹವು  (ಬುಧಗ್ರಹವನ್ನುಹೊರತು ಪಡಿಸಿ) ಮಿಕ್ಕೆಲ್ಲಾಗ್ರಹಗಳಿಗಿಂತ ಸೂರ್ಯನಿಗೆ ಹತ್ತಿರದಲ್ಲಿದೆ. ಶುಕ್ರದ ವ್ಯಾಸ ಭೂಮಿಯಷ್ಚೇ ಇರುವುದರಿಂದ ಭೂಮಿಯ ಅವಳಿ ಎಂದೂ ಕರೆಯುತ್ತಾರೆ. ಶುಕ್ರವು ಮಿಕ್ಕೆಲ್ಲಾ ಗ್ರಹಗಳಿಗಿಂತ ಭೂಮಿಗೆ ಹತ್ತಿರದಲ್ಲಿದೆ ಹಾಗೂ ಅತ್ಯಂತ ಪ್ರಕಾಶಮಾನವಾಗಿದೆ.

ವರ್ಷದ ಕೆಲವು ಕಾಲ, ಶುಕ್ರವು ಪಶ್ಚಿಮದಲ್ಲಿ ಸಾಯಂಕಾಲ ಸೂರ್ಯಾಸ್ತಕ್ಕೆ ಮೊದಲು ಕಾಣಿಸಿಕೊಳ್ಳುವುದು. ಮಿಕ್ಕ ಕಾಲದಲ್ಲಿ ಪೂರ್ವದಲ್ಲಿ ಬೆಳಗಿನ ಜಾವದವರೆಗೂ ಕಾಣಿಸಿಕೊಳ್ಳುವ ಕೊನೆಯ ನಕ್ಷತ್ರ ಇದಾಗಿದೆ. ಕೆಲವೊಮ್ಮೆ ಹಗಲಿನಲ್ಲೂ ನೋಡಬಹುದು.

ಆದರೂ, ಇದರ ಮೇಲ್ಮೈಯನ್ನು ದೂರದರ್ಶಕದ ಸಹಾಯದಿಂದಲೂ ನೋಡಲಾಗುವುದಿಲ್ಲ. ಈ ಕೆಳಕಂಡ ಛಾಯಾಚಿತ್ರ ರೇಡಾರ್ ತರಂಗ (radar waves) ಬಳಸಿ ಶುಕ್ರ ಗ್ರಹದ ಮೇಲಿಳಿದ ಕ್ಯಾಮರಾದಿಂದ ತೆಗೆದಿರುವುದು.

ಶುಕ್ರಗ್ರಹದ ವ್ಯಾಸವು ಸುಮಾರು 12,100 ಕಿ.ಮೀ.- ಭೂಮಿಗಿಂತ ಸುಮಾರು  644 ಕಿ.ಮೀ.ಗಳಷ್ಟು  ಚಿಕ್ಕದಾಗಿದೆ. ಶುಕ್ರಗ್ರಹದ ವಾತಾವರಣದಲ್ಲಿ ವಿಷಭರಿತ ಗಂಧಕಾಮ್ಲದ ದಟ್ಟವಾದ ಮೋಡಗಳಿವೆ. ಅದರ ಸಾಂದ್ರತೆ ಭೂಮಿಯದಕ್ಕಿಂತ ಹೆಚ್ಚು. ಶುಕ್ರದ ಮೇಲ್ಮೈ ಉಷ್ಣಾಂಶವೂ ಬಹಳ ಹೆಚ್ಚು(460 ಡಿಗ್ರಿ C).

ಸೂರ್ಯ ಭೂಮಿಗಿಂತ ಶುಕ್ರಕ್ಕೇ ಹತ್ತಿರವಾಗಿದ್ದರೂ, ಶುಕ್ರನ ನೆಲ ಸೂರ್ಯನಿಂದ ಹೆಚ್ಚು ಶಾಖ ಪಡೆಯುವುದಿಲ್ಲ. ಬೆಳಕು ತಲುಪುವುದಿಲ್ಲ. ಅತಿ ದಟ್ಟವಾದ ವಾತಾವರಣವೇ ಇದಕ್ಕೆ ಕಾರಣ. ಶುಕ್ರನ ವಾತಾವರಣ ಪದರದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನಿಲ ಮತ್ತು ಗಂಧಕಾಮ್ಲ ಬೆಳಕನ್ನು ಪ್ರತಿಫಲಿಸುತ್ತದೆ.

ಹಸಿರುಮನೆ ಪ್ರಭಾವದ(greenhouse effect) ಉತ್ತಮ ಉದಾಹರಣೆ ಶುಕ್ರ. ಈ ಪ್ರಭಾವವಿಲ್ಲದಿರುವಾಗ ಶುಕ್ರನ ಮೇಲ್ಮೈ ಉಷ್ಣಾಂಶ ಭೂಮಿಯದರಂತೆಯೇ ಇರುತ್ತಿತ್ತೋ ಏನೋ !

ಇದುವರೆಗೆ ಶುಕ್ರದಲ್ಲಿ ಯಾವ ಜೀವಿಗಳೂ ಕಂಡು ಬಂದಿಲ್ಲ. ಶುಕ್ರದ ಆಂತರಿಕ ರಚನೆ ಹಾಗೂ ಅನೇಕ ವಿಷಯಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಮೊದಲ ಬಾರಿಗೆ ಬಾಹ್ಯಾಕಾಶನೌಕೆ ಮಾರಿನರ್ 2ನ್ನು 1962ರಲ್ಲಿ ಕಳುಹಿಸಿದರು.

ಇತ್ತೀಚೆಗೆ ಬುಧ ಗ್ರಹಕ್ಕೆ ಹಾರಿದ ನಾಸಾದ ಮೆಸೆಂಜರ್ ಅಲ್ಲದೆ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವೀನಸ್ ಎಕ್ಸ್ ಪ್ರೆಸ್, ರಷ್ಯಾದ ಸೋಯುಜ್ ಫ್ರೆಗತ್ ಇವು ಶುಕ್ರದ ವಿವರಗಳನ್ನು ಕಳಿಸಿವೆ. ೨೦೧೦ರಲ್ಲಿ ಜಪಾನಿನ ಅಕತ್ಸುಕಿ ಎಂಬ ನೌಕೆಯೂ ವೀಕ್ಷಣೆ ನಡೆಸಿತು.