[ಶಂಬೂಕಾಶ್ರಮವಿರುವ ಅರಣ್ಯದ ಬಹಿರ್ವಲಯದಲ್ಲಿ ಆಶ್ರಮದ ಮಹಾದ್ವಾರದಲ್ಲಿ ಕಾವಲು ನಿಂತಿರುವಂತಿದೆ ಒಂದು ಬೃಹದಾಕಾರದ ವಟತರು. ಶಾಂತಿಗೆ ತವರುವೀಡಾಗಿದ್ದ ವನವು, ನೋಡೆ ನೋಡೆ, ಕ್ಷುಬ್ಧಶೀಲವಾಗುತ್ತದೆ. ಬಲ್ಗಾಳಿ ಬೀಸಿ, ಹಕ್ಕಿ ಚೀರಿಡುತ್ತವೆ. ಕೊಂಬೆಗೆ  ಕೊಂಬೆ ಉಜ್ಜಿ ಆರ್ತಧ್ವನಿಯನ್ನು ಹೋಲುವ ಚೀತ್ಕೃತಿಗಳುಣ್ಮುತ್ತವೆ. ಮೃಗತತಿ ಗಾರಾಗಿ ದೆಸೆದೆಸೆಗೆ ಓಡುತ್ತವೆ. ದೃಷ್ಟಿಗೆ ಕೇಂದ್ರವಾಗಿ, ದೃಶ್ಯದ ಮುಂಭಾಗದಲ್ಲಿರುವ ಮಹಾ ವಟತರುವೂ ಕ್ಷೋಭೆಗೆ ಸಿಕ್ಕಿ ಅಸ್ಥಿರವಾಗುತ್ತದೆ. ಎಲೆ ಬಳಬಳನೆ ಉದುರುತ್ತವೆ. ಬಲ್ಗಾಳಿಗೆ ಧೂಳೆದ್ದು ಇದ್ದಕ್ಕಿದ್ದಂತೆ ವನವೆಲ್ಲವೂ ಮಸುಕಾಗುತ್ತದೆ. ವಟತರುವೂ ಮಂಜು ಮಂಜಾಗಿ, ಮಾಯವಾದಂತಾಗಿ, ಅದರ ಸ್ಥಾನದಲ್ಲಿ, ಒಯ್ಯೊಯ್ಯನೆ ಮರದನಿತೆ ಭೀಮಾಕಾರದ ಒಬ್ಬ ವೃಕ್ಷಭೈರವನು ದೃಗ್ಗೋಚರವಾಗುತ್ತಾನೆ. ತರುಶಾಖಗಳಂತಿರುವ ಬಹುಸಂಖ್ಯೆಯ ತೋಳುಗಳಲ್ಲಿ ತ್ರಿಶೂಲಾಯುಧ ಪಂಕ್ತಿ ಸಾಲ್ಗೊಂಡು ಸೇನಾವ್ಯೂಹದಂತೆ ಭಯಂಕರವಾಗುತ್ತದೆ. ಕ್ರುದ್ಧನೆಂಬಂತೆ ಬದ್ಧಭ್ರುಕುಟಿಯಾಗಿ ಉರಿಗಣ್ಣನ್ನು ಸುತ್ತಲೂ ಹೊರಳಿಸಿ ನೋಡುತ್ತಾನೆ. ತನಗೆ ತಾನೆಂಬಂತೆ ಮೊಳಗುತ್ತಾನೆ.]

ಭೈರವ
ಏನವಿನಯಂ ಇಂದೀ ಪ್ರಕೃತಿ ಸಾಧ್ವಿಗೆ!
ಉಗ್ರಧೀ ಶಂಬೂಕಯೋಗಿಯಂ ಲೆಕ್ಕಿಸದೆ,
ವೃಕ್ಷಭೈರವನೆನ್ನ ರಕ್ಷೆಯಂ ಕಡೆಗಣ್ಚಿ,
ಅಂಡಲೆಯುತಿಹಳೀ ತಪೋವಿಪಿನಮಂ
ಮಥನಕರ್ಮಕೆ ಸಿಲ್ಕಿದಂಬುಧಿಯ ತೆರೆಯವೋಲ್
ತರತರನೆ ನಡುಗುತಿದೆ ಕಾಡುಮಲೆ. ಒರಲುತಿವೆ
ಪಕ್ಷಿಗಳ್. ಕೀಚಕಧ್ವಾನಗಳ್ ಕರ್ಕಶಂ
ಕೂಗುತಿವೆ. ಕಾಲ್ಗೆಟ್ಟುಮೋಡುತಿವೆ ಮೃಗಸಮೂಹಂ.
ಏಂ ನಿಮಿತ್ತಮೊ ಪರಿಕಿಸಲ್ ವೇಳ್ಕುಂ.
ಧೂರ್ತಳೀ ದುಷ್ಕೃತಿಗೆ ಶೃಂಖಲೆಯನಿಕ್ಕದಿರೆ
ತಪಸ್ವಿಯಾಗ್ರಹಕೆ ಪಕ್ಕಾದಪೆನ್.

[ಮತ್ತೆ ಸುತ್ತಲೂ ನೋಡಿ ಧ್ಯಾನಿಸುತ್ತಾನೆ. ತೆಕ್ಕನೆಚ್ಚತ್ತವನಂತೆ ಇದಿರು ನೋಡಿ ಅಧಿಕಾರವಾಣಿಯಿಂದ ಆಜ್ಞಾಪಿಸುತ್ತಾನೆ.]

ನಿಲ್ ನಿಲ್! ಅಲ್ಲಿಯೆ ನಿಲ್ !
ಹತ್ತೆ ಸಾರದಿರ್! ಅತ್ತಲ್ ತೊಲಗತ್ತಲ್! ಅತ್ತಲ್!

[ನೋಡುತ್ತಿರುವಂತೆಯೆ ಏನೂ ಇಲ್ಲದೆ ಶೂನ್ಯವಾಗಿದ್ದ ಬಯಲು ನಸುಗಪ್ಪಾಗುತ್ತದೆ. ಕರಿಮಂಜು ದಟ್ಟಯಿಸುತ್ತದೆ. ಬರಬರುತ್ತಾ ಗಟ್ಟಿಯಾಗುತ್ತದೆ. ಕಡೆಗೆ ಮೃತ್ಯುವಿನ ಕರಾಳಾಕೃತಿ ರೂಪುಗೊಂಡು ಸ್ಪಷ್ಟಾಸ್ಪಷ್ಟವೆಂಬಂತೆ ನಿಲ್ಲುತ್ತದೆ.]
ಅರ್ ನೀನ್! ನಿನಗೇನಿಲ್ಲಿ ಕಜ್ಜಂ, ಘೋರಮುಖಿ?

ಮೃತ್ಯು
[ಭಯಂಕರ ಧ್ವನಿಯಿಂದ]
ಪೆಸರ್ಗೇಳ್ವ್ ಕೆಚ್ಚಿರ್ಪುದೇನ್ ನಿನಗೆ?

ಭೈರವ
[ಉಗ್ರನಾಗಿ]
ಇರ್ಪುದರಿಂದಲೆ ಕೇಳ್ದೆನ್, ವಿಕೃತವದನೆ,
ಅಧಿಕಪ್ರಸಂಗಿಯಾಗದಿರ್!

ಮೃತ್ಯು
ನನ್ನ ನಾಮಶ್ರವಣಮಾತ್ರದಿಂ
ತನ್ನ ಗವಿಗೊರಲ್ಗಳಿಂದೊರಲ್ವುದಯ್ ನರಕಂ;
ಗಿರಿಗಹ್ವರಗಳಿಂ ರೋದಿಸುವಿದೀ ಪೃಥ್ವಿ;
ಬೆಬ್ಬಳಿಸಿ ಬೆಳ್ವೇರ್ವುದಯ್ ಸಗ್ಗದ ಮೊಗಂ.
ಪೆಸರ ಭೀತಿಗೆ ಬೆರ್ಚ್ಚಿ ಕಂಪಿಪುದೊ ಮೂಜಗಮ್!

ಭೈರವ
ನಿನಗಂಜದಾನ್ ನಿನ್ನಾ  ಪೆಸರ್ಗಳ್ಕುವೆನೆ?
ಪೇಳ್ ಬೇಗದಿಂದಲ್ಲದಿರೆ ನೀನಿನ್ನೆಗಂ
ಕಾಣದನುಭವವನುಣ್ಣಿಪೆನ್!

ಮೃತ್ಯು
ಆ ಗರ್ವಮಿರ್ಕೆ. ಕೇಳ್:
ಮೃತ್ಯುವೆನ್! ದುರ್ ಮೃತ್ಯುವೆನ್ !
ಪುಗಲ್ ಬಯಸಿ ಬಂದಿರ್ಪೆನ್
ಈ ತಪೋವನಕ್ಕೆ!

ಭೈರವ
(ವಿಕಟಹಾಸ್ಯದಿಂದ ನಕ್ಕು)
ಕೆಟ್ಟುದಾವುದವ್ ನಿನಗೀಗಳ್?
ಬಟ್ಟೆಯೊ ಬಗೆಯೊ?

ಮೃತ್ಯು
ನೀನಾರ್ ಕೇಳಲ್ಕೆ?

ಭೈರವ
ತಪೋವನಮಂ ರಕ್ಷಿಪ್ಪ ವೃಕ್ಷಭೈರವನೆನ್! ―
ಅಮೃತಮೀ ಕ್ಷೇತ್ರಮ್:
ನಿನಗಿದು ದಿಟಂ ಪುಗಲ್ ತಾಣಂ!

ಮೃತ್ಯು
ಮೂಲೋಕದೊಳ್ ಮೀಸೆವೊತ್ತನನ್ ಕಾಣೆನ್
ನನ್ನನ್ ತಡೆವ ಗಂಡನನ್!
ನೀನ್ ತಡೆವಯ್, ವೃಕ್ಷವಾಸಿ?

ಭೈರವ
(ಕಟುಹಾಸ್ಯದಿಂದ)
ಆಃ! ಮಾಚೆಲ್ವುಪೆಣ್ಣಲ್ತೆ ನೀನ್?
ನಿನಗೆ ಸೋಲದರುಂಟೆ? ― ಆದೊಡಂ ಕೇಳ್.
ಮಹರ್ಷಿ ಶಂಬೂಕನುಜ್ವಲ ತಪಃಪ್ರಭಾವದಿನ್
ನನಗೆ ಲಭಿಸಿರ್ಪೊಂದು ಕರ್ತವ್ಯ ಧರ್ಮಬಲದಿಂ
ನಿನ್ನನ್, ಒರ್ ಪಜ್ಜೆ ಮುಂದಿಡದವೊಲ್,
ತಡೆಗಟ್ಟಲ್ ಆನ್ ಸಮರ್ಥನೆನ್.
ಮೀರಿ ಮುಂಬರಿಯಲೆಳಸಿದರೆ
ಈ ನನ್ನ ತೋಳ್ಗಳೀ ತ್ರಿಶೂಲ ಪಂಕ್ತಿಗಳ್,
ತೋಳಗಳ್ ಕುರಿಯನ್ ಅರೆಯಟ್ಟುವೋಲ್,
ಅಟ್ಟುವುವು ನಿನ್ನಾಲಯಕೆ ನಿನ್ನನ್!

ಮೃತ್ಯು
ಲಯಮೆ ನಾನ್ ನನಗೆಲ್ಲಿ ಲಯಮಮ್?

ಭೈರವ
ಬೆಳ್ಪರೋಲಾಡದಿರ್ ತಿಳಿಯದೆ ಪದಾರ್ಥಮಂ.

ಮೃತ್ಯು
ಕೆರಳ್ಚದಿರ್ ಅನರ್ಥಮಂ!
(ಮೃತ್ಯುಛಾಯೆ ಮುನ್ನುಗ್ಗಲೆಳಸುತ್ತದೆ)

ಭೈರವ
[ರೌದ್ರವಾಣಿಯಿಂದ]
ಮಹರ್ಷಿ ಶಂಬೂಕದೇವನಾಣೆ!
ಕಲ್ಲವೊಲ್ ನಿಲ್ ನೀನ್!
[ತನ್ನ ತೋಳುಗಳಲ್ಲಿ ಹೊಳೆಯುವ ತ್ರಿಶೂಲಗಳನ್ನು ಮೃತ್ಯುವಿನ ಮುಂದೆ ಬೇಲಿಗಟ್ಟುತ್ತಾನೆ]

ಮೃತ್ಯು
ಎಲೆ ಮರುಳೆ, ಕೇಳ್:
ಶಂಬೂಕ ಋಷಿಯ ಗೌರವಕಾಗಿ ಬಂದೆನಯ್,
ಧರ್ಮದೇವತೆಯಾಜ್ಞೆಯಿಂ.
ನೀನ್ ಆತನ ಮೆಯ್ ಗಾವಲ್;
ನಾನ್ ಉಸಿರ್ ಗೌರವಕೆ ಕಾವಲಯ್!
ತಿಳಿದು ತೆರೆ ಬಟ್ಟೆಯಂ, ಈಡಾಗದಿರ್ ನಗೆಗೆ!

ಭೈರವ
[ಅಚ್ಚರಿವಟ್ಟು]
ಧರ್ಮದೇವತೆಯಾಜ್ಞೆ? ಋಷಿಯ ಗೌರವಕಾಗಿ?
ಮೃತ್ಯುಗೆ ತಪೋವನ ಪ್ರವೇಶಮ್? ―
ಜಟಲಮೀ ವಾರ್ತಾ ಕಂಟಕ ನಿಕುಂಜದೊಳ್
ಸಿಲ್ಕಿತವ್ ನನ್ನ ಬಗೆ. ಬಡಿಸಿದನ್ ಮೊದಲ್!

ಮೃತ್ಯು
ಇಂದು ಪೊಳ್ತರೆಯಿನ್, ಆರಾರ್ಗೆ,
ಈ ಬನಕೆ ತೆರವಿತ್ತೆ, ಪೇಳ್.

ಭೈರವ
ಸೂರ್ಯದೇವನ ಕಿರಣದೂತರ್ಗೆ.

ಮೃತ್ಯು
ಮೇಣ್?

ಭೈರವ
ಪುಣ್ಯ ಲಕ್ಷ್ಮಿಯಂ ಕೂಡಿ
ವಸಂತಗಂಧಾನಿಲಂ ವೆರಸಿ ಬಂದಾ
ಶ್ರೀರಾಮಚಂದ್ರಮನ ಕೀರ್ತಿಕಾಂತೆಗೆ.

ಮೃತ್ಯು
ಮೇಣ್?

ಭೈರವ
ಪ್ರಕೃತಿ ದೇವಿಯ ದೈನಂದಿನ ಪರಿವಾರಕೆ.

ಮೃತ್ಯು
ಮೇಣ್?

ಭೈರವ
ಪಾರ್ವನೊರ್ವನ್ ತನ್ನಣುಗಮ್ ವೆರಸಿ
ಪೂಜಾವಿಧಿಗೆ ಪೂದಿರಿಯಲೆಂದು
ಒಳಪೊಕ್ಕನೈಸೆ.

ಮೃತ್ಯು
ಅದೆ ನಿಮಿತ್ತಮೀ ನನ್ನ ಯಾತ್ರೆ

ಭೈರವ
ಕಾರಣಂ?

ಮೃತ್ಯು
ಗೆಯ್ದನ್ ಅಧರ್ಮಮಂ!

ಭೈರವ
ಎಂತು?

ಮೃತ್ಯು
ಅವಜ್ಞೆಯಿಂ!

ಭೈರವ
ಆರ್ಗೆ?

ಮೃತ್ಯು
ಮತ್ತಾರ್ಗೆ! ಋಷಿಗೆ!
ನಿನ್ನ ಗುರುದೇವನಾ ಶಂಬೂಕ ಋಷಿಗೆ!

ಭೈರವ
[ಕೆರಳಿ]
ಏನ್ ಗರ್ವಮಾ ಪಾರ್ವಂಗೆ?

ಮೃತ್ಯು
ಪುಟ್ಟೊಳಾತಂ ಶೂದ್ರನಾಗಿರ್ದನೆಂದು!

ಭೈರವ
[ತಟ್ಟಕ್ಕನೆ ಬೇಲಿಗಟ್ಟದ್ದ ಶೂಲಪಂಕ್ತಿಯನ್ನೆತ್ತಿ]
ಶಿವಶಿವಾ! ಏನ್ ಭಯಂಕರಂ ಪಾಪಂ
ಶ್ರೀರಾಮನಾಳುತಿರ್ಪ್ಪೀ ಧರ್ಮರಾಜ್ಯದೊಳ್!

[ಮೃತ್ಯು ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆಗೆ ಚಲಿಸುತ್ತದೆ. ಭೈರವನು ಮಸುಕು ಮಸಕಾಗಿ ಮತ್ತೆ ವೃಕ್ಷರೂಪಿಯಾಗಿ ನಿಲ್ಲುತ್ತಾನೆ.]

ತೆರೆ ಬೀಳುತ್ತದೆ