[ತಿಂಗಳ್ವೆಳಗು ಹಾಲುಚೆಲ್ಲಿದ ಆಯೋಧ್ಯೆ. ಶ್ರೀರಾಮಚಂದ್ರನ ಅರಮನೆಯ ಬಳಿಯ ಉದ್ಯಾನದಲ್ಲಿ ಉತ್ತರ ವಯಸ್ಸಿನ ಬ್ರಾಹ್ಮಣನೊಬ್ಬನು ಹುಯ್ಯಲಿಟ್ಟು ರೋದಿಸುತ್ತಿದ್ದಾನೆ. ಸುತ್ತಲೂ ಬಹುದೂರದವರೆಗೆ ಹಬ್ಬಿ, ಬಣ್ಣಬಣ್ಣದ ಹೂವಿನ ಪೊದೆಗಳೂ ಬಳ್ಳಿಗಳೂ ಮರಗಳೂ ರಂಜಿಸಿರುತ್ತವೆ. ನೀರ್ಬುಗ್ಗೆಗಳು ನರ್ತಕಿಯರಂತೆ ನಾಟ್ಯವಾಡುತ್ತಿವೆ. ದೂರದಲ್ಲಿ ಹಾಲುಗಲ್ಲಿನ ಅರಮನೆ ಶೋಭಿಸಿದೆ. ಆದರ ಸೋಪಾನಪಂಕ್ತಿ ತರಂಗವಿನ್ಯಾಸದಿಂದ ಉದ್ಯಾನದ ಕಡೆಗೆ ಇಳಿದಿರುವುದು ಕಾಣಿಸುತ್ತದೆ.]

ಬ್ರಾಹ್ಮಣ

ಕಂದಾ, ಕಂದಯ್ಯಾ, ಕಂದಮ್ಮಾ,
ಓ ಎನ್ನ ಕಂದಾ,
ಸಹಿಪೆನೆಂತೀ ಬಗೆಯ ಬೆಂಕೆಯಂ,
ನಿನ್ನಗಲ್ಕೆಯಂ.
ಕಣ್ಗೆ ಬೆಳಕಾಗಿರ್ದೆ ನೀನ್;
ಬಾಳ್ಗೆ ಉಸಿರಾಗಿರ್ದೆ ನೀನ್;
ಮುದಿತನಕ್ಕೊಂದೂರೆಗೋಲಗಿರ್ದೆ ನೀನ್, ಪುತ್ರಕ.
ನೀನಳಿಯಲೊರ್ಮೊದಲೆ ಸರ್ವಮುಂ ಕಳಲ್ದಾನ್
ಜಗತೀ ಶ್ಮಶಾನದೊಳ್ ಜಂಗಮ ಶವಂ!
ನೀನೊರ್ವನೆಯೆ ಕಂದನುಂ ಕಣ್ಣುಮಾಗಿರ್ದ
ಕುರುಡಿ ನಿನ್ನಬ್ಬೆಯಂ ಮರಳಿ ನಾನೆಂತು ಕಾಣ್ಬೆನ್ ?
ನಾನ್ ಬಳಿಸಾರಲ್
ಪಜ್ಜೆಸದ್ದಂ ಕೇಳ್ದು ‘ಬಾ ಚಿಣ್ಣ ಬಾ’ ಎನುತೆ
ಮೊಗದ ಸುರ್ಕಳಿಯೆ ಸುಖವುಕ್ಕಿ ಚಾಚಿದ ತೋಳ್ಗೆ,
ಕರು ಕಳಿದ ಹಸುವ ಹಾಲ್ ಕರೆವ ಗೌಳಿಗನಂತೆ
ನಾನಾವ ಚಕ್ಕಳದ ಕವಡು ಸಂತೈಕೆಯಂ ತುಂಬಿ,
ಬಾಳ್ಗಡಲ ಪೀರ್ವ ಬಡಬಾಗ್ನಿಯಂ ನಂದಿಸಲಿ?
ಪೇಳ್, ಪುತ್ರಕ! ಪೇಳ್! ಪೇಳ್! ಪೇಳ್!
[ತುಸುವೊತ್ತು ಮೌನವಾಗಿ ಬಿಕ್ಕಿ ಬಿಕ್ಕಿ ಅಳುತ್ತಾ]
ಪೋದ ಜನ್ಮಗಳಾವ ದುಷ್ಕೃತವೊ? ಅಲ್ಲದಿರೆ,
ಬಾಳ್ದುದಿಗೆ ನಾಂ ಪಡೆದೊರ್ವನೆಯೆ ಮಗನ್,
ಕಣ್ಣೆದುರೆ ಮಡಿವುದನ್ ಕಾಣ್ಬರೊಳರೇ
ಈ ಪುಣ್ಯಯುಗದೊಳ್?
ಅಪ್ರಾಪ್ತ ಯೌವನನ್,
ಆಕೃತ ಪಿತೃಕಾರ್ಯನ್,
ಅಪಾಪಜೀವಿತನ್,
ಪಂಚವತ್ಸರದೆನ್ನ ವತ್ಸನ್
ಆವ ಕತದಿಂದಿಂತು ರಾಮರಾಜ್ಯವನುಳಿದು
ಯಮರಾಜ್ಯಕೆಯ್ದಿದನ್?
ನಾನಾವ ಪಾಪಮನ್ ಎಸಗಿದುದೆನಗೆ ನೆನಪಿಲ್ಲ.
ಎಂದುಮ್ ಅನೃತವನೊರೆದೆನಿಲ್ಲ.
ಮೇಣ್ ಹಿಂಸೆಯಂ ಗೆಯ್ದೆನಿಲ್ಲಾವ ಜೀವಿಗುಂ.
ಮತ್ತಾರ ದುಷಕ್ಕೃತಕಿಂದು ಕೊಲೆವೋದುದೆನ್ನ್ ಶಿಶು?
(ದುಃಖಾತಿಶಯದಿಂದಲೂ ಕೋಪದಿಂದಲೂ)
ಪೇಳ್ ನೀನ್, ಓ ಬೆಳ್ದಿಂಗಳಿರುಳೇ!
ಪೇಳ್ ನೀನ್, ಓ ಇಕ್ಷ್ವಾಕು ರಘುದಿಲೀಪಾದಿ
ರವಿಕುಲ ನರೇಂದ್ರ ರಾಜ್ಯಧರ್ಮಸ್ವರೂಪಿಣೀ
ಹೇ ಅಯೋಧ್ಯಾ ನಗರಲಕ್ಷ್ಮೀ!
ಪಿಂತೆಂದುಂ ಕಂಡುದಿಲ್ಲಿಂತಪ್ಪ ಘೋರಮಂ;
ಮೇಣ್ ಕೇಳ್ದುಮಿಲ್ಲಮ್.
ಶ್ರೀರಾಮನಾಳ್ವಿಂದೆ ರಾಮಪ್ರಜೆಗೆ ಕುಂದೆ?
ದೊರೆಯ ದೋಷಮೆ ಕಾರಣಂ ಪ್ರಜಾಸಂಕಟಕೆ!
ಪೆರತಲ್ತು ! ಪೆರತಲ್ತು!
ಏನೊ ಒಂದಿರಲ್ವೇಳ್ಕುಮಾ ರಾಮಪಾಪಂ!
(
ಆಲೋಚಿಸಿ ತರಿಸಂದು)
ಪೆರತೇನ್?
ಸಾಲದೇನಾ ಶೂದ್ರನ ತಪಕೆ ಮುನಿದ ಧರ್ಮಶಾಪಂ!
(ದಿಟ್ಟದನಿಯಿ೦ದ)
ಮಡಿದ ಮಗನನ್ ಮರಳ್ಚದಿರ್ದೊಡೆ
ಕೇಳ್, ಓ ರಾಮಚಂದ್ರ,
ಸಾವನಿಲ್ಲಿಯೆ ನಿನ್ನರಮನೆಯ ಬಾಗಿಲೊಳ್.
ಬ್ರಹ್ಮಹತ್ಯಂಗೆಯ್ದು ಸುಖದಿನಿರು; ಇರು; ಇರು!
(ಗಟ್ಟಿಯಾಗಿ)
ಆಗಸವೇ, ನೀನ್ ಸಾಕ್ಷಿ!
ತಣ್ಗದಿರನೇ, ನೀನ್ ಸಾಕ್ಷಿ!
ಓ ಅಯೋಧ್ಯೆ, ನೀನುಂ ಸಾಕ್ಷಿ!
ಕೇಳಿಮ್, ಓ ಸಗ್ಗದೊಳಿರ್ಪ ನೇಸರ್ ಬಳಿಯ ಅರಸರಿರ,
ನೀಮೆಲ್ಲರುಮೆನ್ನ ಪೂಣ್ಕೆಗೆ ಸಾಕ್ಷಿಗಳ್!
(ಕುಸಿಯುತ್ತಾನೆ)

[ಬೆಳ್ದಿಂಗಳಲ್ಲಿ ಬೆಳ್ಳಗಾಗಿರುವ ಹಾಲ್ಗಲ್ಲಿನ ಅರಮನೆಯ ನೀಲಶರೀರಿ ಶ್ರೀರಾಮಚಂದ್ರನು ಕರುಣಮುಖಮುದ್ರೆಯಿಂದಲೂ ಹುಡುಕುವವನಂತೆ ಸುತ್ತಲೂ ನೋಡುತ್ತಲೂ ಗಂಭೀರವಾಗಿ, ಆಶೆಯಂತೆ, ಆಶೀರ್ವಾದದಂತೆ, ಪ್ರವೇಶಿಸಿತ್ತಾನೆ. ದೂರದಿಂದಲೆ ಆತನನ್ನು ಗುರುತಿಸಿ, ಬ್ರಾಹ್ಮಣನು ಭಯಭಕ್ತಿಯಿಂದೆದ್ದು ಕೈಮುಗಿದು ನಿಲ್ಲುತ್ತಾನೆ. ಶ್ರೀರಾಮನು ಬಳಿಬಳಿಗೆ ಬಂದಂತೆಲ್ಲ ಬ್ರಾಹ್ಮಣನ ದುಃಖ ಭಾವವೂ ಧನ್ಯಭಾವಕ್ಕೆ ತಿರುಗುತ್ತದೆ. ಶ್ರೀರಾಮನು ಹೆಜ್ಜೆಯಿಟ್ಟು ಮುಂದುವರಿದಂತೆಲ್ಲ, ಒಂದೊಂದು ಹೆಜ್ಜೆಗೆಂಬಂತೆ ಒಂದೊಂದು ಮಾತನ್ನು ಧ್ವನಿಪೂರ್ವಕವಾಗಿ ತನಗೆತಾನೆಹೇಳಿಕೊಳ್ಳುತ್ತಾನೆ.]

ತ್ರಿಭುವನ ಪುಲಕಕಾರಿ ಧನ್ಯಮಿ ದರ್ಶನಂ!
ಕ್ರಮನ್ಯಾಸಂ ಸಪ್ತಸಾಗರ ಜೀವನಕ್ರಮಂ!
ವ್ಯೋಮಮ್ ವಪುಃಕಾಂತಿ!
ವನಾದ್ರಿ ಸಂಗದಿಂದಂಗಮೆ ವನಾದ್ರಿಯಾಗಿರ್ಪನ್!
ದಶರಥ ಪುತ್ರನೀತನ್ ರಘುಶ್ರೇಷ್ಠನೆ ದಿಟಂ. ―
ಕರುಣಮೂರ್ತಿಯೀತನ್ ಕೌಸಲೆಯ ಕಂದನೆ ವಲಂ.
ಋಷಿಶಿಷ್ಯನೀತನ್ ಮಹಾ ಸಂಯಮಿಯೈಸೆ.
ಹರಧನುವ ಮುರಿದವನ್ ಸುರಧನುಸ್ಸುಂದರನ್,
ಮೈಥಿಲೀ ಮನೋಹರನ್ ಕುಸುಮಕೋಮಲನ್.
ನೀಲಮೇಘಶ್ಯಾಮನ್, ಗಿರಿವನಪ್ರಿಯನ್. ―
ದಶಗ್ರೀವಾರಿ, ಉಪಗ್ರನೀತನ್, ವಜ್ರಪ್ರಜ್ಞಾ ಕಠೋರನ್!
ಅಂಜನಾಸುತ ಹೃದಯಮಿತ್ರನ್, ಪವಿತ್ರನ್,
ಪಂಚವಟಿಯೊಳ್ ನಿಂದವನ್; ―
ಗೋದಾವರಿಯ ಮಿಂದವನ್;
ದೈತ್ಯಕೋಟಿಯ ಕೊಂದವನ್. ―
ಶಬರಿಯ ಕಯ್ಯ ಪಣ್ಪಲಂಗಳನ್ ತಿಂದವನ್.
ಮೇರುಭವ್ಯನ್!
ಪ್ರೇಮಮೂರ್ತಿ, ಧರ್ಮಮೂರ್ತಿ, ಕ್ಷಮಾಮೂರ್ತಿ;
ಶಿಷ್ಟರಕ್ಷಾಮೂರ್ತಿ, ದುಷ್ಟಶಿಕ್ಷಾಮೂರ್ತಿ,
ನರದೇವನೀತನ್ ಪರದೈವಮೆ ವಲಂ! ―
ಆಶಾಸ್ವರೂಪಿಯೀತನ್
ಬಂದಪ್ಪನಾಶೀರ್ವಾದಮೈತಪ್ಪವೋಲ್.
ಧನ್ಯನಾನಿನ್ ಬರ್ದುಕಿದೆನ್!
ಬರ್ದುಕಿದೆನ್! ಬರ್ದುಕಿದೆನ್!
ಬರ್ದುಕದಿರ್ಪನೆ ನನ್ನ ಕಂದನ್?
ಬರ್ದುಕಿದನ್, ಅವನುಂ ಬರ್ದುಕಿದನ್!
[ಎವೆಯಿಕ್ಕದೆ ನೋಡುತ್ತಾ ನಿಲ್ಲುತ್ತಾನೆ]

ಶೀರಾಮ
[ರಾಜರಜಗಾಂಭೀರ್ಯದಿಂದ ಬರುತ್ತಾನೆ]
ಈ ವಸಂತಪೂರ್ಣಿಮಾ ರಜನಿಯಂ
ಈ ಅಯೋಧ್ಯಾಶಾಂತಿಯಂ
ತನ್ನ ಕರಣಕಥೆಯಿಂ ಕದಡಿದಾ ದುಃಖಿ,
[ಸುಯ್ಯುತ್ತಾನೆ]
ಅಗಲ್ದರೆಮೆಯ್ಯಳನೆ ನೆನೆಯುತಿರ್ದೆನ್ನ
ಸೀತಾಶೋಕಮನಿತುಮನ್ ಮರುಕೊಳಿಸಿದಾ ದುಃಖಿ
ಎಲ್ಲಿರ್ಪನ್? ಎತ್ತವೋದನ್?
[ಸ್ವಲ್ಪ ನೋಡಿ]
ಇತ್ತಣಿಂದೀ ತೋಂಟದಿಂದೈತಂದುದಾ ರುದಿತಂ.
[ವ್ಯಂಗ್ಯಸ್ಮಿತನಾಗಿ]
ನನ್ನ ಬಾಳ್‌ಗಿವಿಗೇಗಳುಮ್
ರೋದನಮೆ ಸಂಗೀತಮಾಯ್ತಲಾ!
ಅವತಾರಿಯುಣ್ಬ ಕೂಳಲ್ತೆ ಗೋಳ್;
ಕುಡಿವಮರ್ದಲ್ತೆ ಕಣ್ಣೀರ್!
[ತನ್ನಡೆಗೆ ಬರುತ್ತಿರುವ ಬ್ರಾಹ್ಮಣನನ್ನು ಗಮನಿಸಿ]
ಆರೊ ಬರುತಿಪ್ಪರೀ ಎಡೆಗೆ.
[ನಿಟ್ಟಿಸಿ ನೋಡಿ]
ಮುದಿಯನ್; ಪಾರ್ವನ್; ದುಃಖ ಜರ್ಜ್ಜರಿತನ್.
ಈತನಾ ಪುಯ್ಯಲ್ಚಿದನೆ  ಇರಲ್ ವೇಳ್ಕುಮ್.
[ಎರಡು ಹೆಜ್ಜೆ ಮುಂಬರಿಯುತ್ತಾನೆ]

ಬ್ರಾಹ್ಮಣ
[ಬೇಗ ಬೇಗ ಬರುತ್ತಾ]
ಅನಾಥ ರಕ್ಷಕಾ, ದುಃಖವಿಮೋಚಕಾ,
ಸರ್ವಲೋಕಪ್ರಭೂ, ಸಲಹು, ಸಲಹು!
[ಕಾಲಿಗೆರಗುತ್ತಾನೆ]

ಶೀರಾಮ
ಏಳಿಮೇಳಿಮ್, ಮುದುಕರ್, ಪಿರಿಯರ್, ಪಾರ್ವರ್,
ನೀಂ ಗುರುಜನಸಮರೆನಗೆ.

ಬ್ರಾಹ್ಮಣ
ಅರ್ಥಿಸಹಜಮನೆಸಗಿದೆನ್, ದಾಶರಥಿ.
ಕಟ್ಟಳಲ್ಗುಂಟೆ ಮತಿ? ತಿರುಪೆಗೆತ್ತಣ ಪೆರ್ಮೆ?

ಶ್ರೀರಾಮ
ಅರ್ ನೀಮ್? ದುಃಖಮೇನ್

ಬ್ರಾಹ್ಮಣ
ನೀನ್ ವಿಚಾರಿಸಲ್ ದುಃಖಮೆಂಬುದುಮುಂಟೆ? ―
ನೀನ್ ಪಾರ್ವರನ್ ಮೊಗದಿಂದುಗುಳ್ದಾತನಂ
ಪೊರ್ಕ್ಕುಳಿಂ ಪೆತ್ತತನಲ್ತೆ?
ಕಾಲಮನೆ ಕೂಸೆಂಬ ನಿನಗಿಂ ವೃದ್ಧರಿರ್ಪರೆ?
ವಿಶ್ವಮಂ ಸೃಜಿಸಿದಾ ಪಿರಿಯಂಗೆ ಪಿರಿಯನ್
ನಿನಗೆ ನಾನೆರಗಿದೋಡೆ ವಿಪರೀತಮಲ್ತು.
ಮನುಷ್ಯರೀತಿಯಿಂದಪ್ಪೊಡಂ ನಿನಗೆ
ಪೊಡವಿಯೊಡೆಯಂಗೆ ಪೊಡೆವಡುವುದೆ ಪಾಳಿ.
ಪ್ರೇಮ ಸಾಧನದಿಂ ನೀಂ ಮಹಾತಪಸ್ವಿಯಲ್ತೆ?
ಪಿರಿದೇಗಳುಂ ತಪಂ. ಗುಣಕ್ಕೆ ಮಚ್ಚರಮೆ?

ಶ್ರೀರಾಮ
ಪಿರಿದನೊಲ್ವರುಂ ಪಿರಿಯರ್, ವಿಪ್ರೋತ್ತಮ!
ಪೇಳಿಮ್ ನಿಮ್ಮಳಲ್ಕೆಯಂ.

ಬ್ರಾಹ್ಮಣ
ಅಪಹರಿಸಿದನ್ ಪಂಚವತ್ಸರದೆನ್ನ ಕಂದನನ್. . . .

ಶ್ರೀರಾಮ
ಆವನ್ ಆ ನೀಚನ್?

ಬ್ರಾಹ್ನಣ
ಯಮನೆಂಬ ಕಿರ್ತಿಯಾ ವೈವಸ್ವತನ್!

ಶ್ರೀರಾಮ
ದಿಟಿಮೆ!

ಬ್ರಾಹ್ಮಣ
ನನ್ನೊಡನೆ ಬಪ್ಪೆಯಪ್ಪೂಡೆ ತೋರ್ಪೆನಾ ತಾಣಮಂ;
ಮೇಣ್, ನನ್ನೊರ್ವನೆಯೆ ಕುವರನಾ ಪೆಣಮುಮಂ,
[ಅಳುತ್ತಾ]
ಹೇ ದಯಾನಿಧಿ,
ಕ್ಲೇಶ ಕಾಲದೊಳೆಲ್ಲರುಂ ನಿನ್ನ ಪೆಸರನುಸಿರ್ದ
ರಕ್ಷೆಯಂ ಪಡೆವರಯ್. ನಿನ್ನನೆಯ ಬೇಡುತಿಹೆನಾಂ
ನನ್ನ ಕಂದನ ಹರಣಮಂ ಬಿಕ್ಕೆನೀಡೆನಗೆ.
ನೀನ್ ಕೃಪಾಬ್ಧಿಯಲ್ತೆ? ―
ಸುಲಭಸಾಧ್ಯಮ್ ನಿನಗೆ ಅದೆಂತಪ್ಪ ಕಠಿನಮುಂ.
ಲೋಕಾಪವಾದಕ್ಕೆ ನಿನ್ನರ್ಧಾಂಗಿಯಂ,
ಬೆಂಕೆವೊಕ್ಕೆಯ್ತಂದ ಪರಿಶುದ್ಧೆಯಂ,
ಸೌಂದರ್ಯ ಲಕ್ಷ್ಮಿ ಆ ಸೀತಾದೇವಿಯಂ
ತುಂಬು ಬಸಿರಿಯೆಂದೆರ್ದೆಸೋರದಡವಿಗಟ್ಟಿ
ನಿನ್ನಾ ಭೀಷ್ಮಪೌರುಷವ ಮೆರೆದೆಯಲ್ತೆ?

ಶ್ರೀರಾಮ
[ನಿಡುಸುಯ್ದು ಮೊಗಮಂ ಪಿಂಡಿ]
ಸಾಲ್ಗುಮಾ ಕಥನಂ, ದ್ವಿಜನ್ಮ.
ಕಾಳ್ಗಿಚ್ಚಿಗೂರ್ಗಚ್ಚನಿದಿರೊಡ್ಡಿ ನಂದಿಪ್ಪಪೋಲ್
ನಿನ್ನಳಲ್ಗೆನ್ನಲ್ ಪರಿಹಾರಮೇನ್?

ಬ್ರಾಹ್ಮಣ
ಮನ್ನಿಸು, ಮಹೀಶ್ವರ.
ನನ್ನ ಕಂದನ ಹರಣಮಂ ಬೇಡಿ ಬಂದೆನ್;
ಕೃಪೆಯಿಂದದನ್ ನೀಡು.

ಶ್ರೀರಾಮ
ದ್ವಿಜೋತ್ತಮ, ನೀಂ ಪೇಳ್ವುದಕ್ಕಜಮ್!
ಧರ್ಮಾಧಿಕಾರಿ ವೈವಸ್ವತನ್ ನಿರ್ನೆರಂ
ನನ್ನ ರಾಜ್ಯದೊಳಿಂತು ಗೆಯ್ವನಲ್ಲಂ.
ಇದರೊಳೊಂದೇನೊ ಧರ್ಮಚ್ಯುತಿಯಿರಲೆವೇಳ್ಕುಂ.
ಅಪ್ರಾಪ್ತಕಾಲನಂ, ಬಾಲನಂ,
ಕೊಂಡೊಯ್ದ ಕಾಲನಂ ಕಾಲ್ಗೆಡಿಸುವೆನ್
ತಪ್ಪು ಅವನದಾಗಿರಲ್. ― ಆದೊಡಾಂ
ಅಪರಾಧಮ್ ಅವನದೆಂದಾಳೋಚಿಸೆನ್.
ನೀಮ್ ಏನಾದೊಡಂ ಅಪೂಜ್ಯಮಂ ಗೆಯ್ದಿರೇನ್?

ಬ್ರಾಹ್ಮಣ
ಪೆರ್ನಡೆಯ ತಾಯ್ತಂದೆವಿರ್ ನನ್ನವರ್.
ಬಿಜ್ಜೆಗಲಿಸಿರ್ಪೋಜರುಂ ಸಜ್ಜನರ್.
ಪಾರ್ವರೊಳ್ ಪುಟ್ಟಿರ್ಪುದೆನ್ನಾತ್ಮಂ, ಪ್ರಭೂ.

ಶ್ರೀರಾಮ
ಮಾನ್ಯರ್ ನೀಮ್.
ಧನ್ಯಂ ನಿಮ್ಮನ್ನರಂ ಪಡೆದೆನ್ನ ರಾಜ್ಯಂ. ―
ಇನ್ನಾರಾದೊಡಂ ಗೆಯ್ದರೇನಧರ್ಮಮಂ
ನಿಮ್ಮ ಮಗನಳಿವಿಂಗೆ ಕಾರಣಮೆನಲ್?
ನೀಮ್ ಅರಿತಿರ್ಪೋಡೆ ಆದನ್ ಒರೆಯಿಮ್;
ಅಳಿಪೆನದನ್.
ಕಾರಣದ ನಾಶದಿಂ ನಾಶಮಪ್ಪುದು ಕಾರ್ಯಮುಮ್.
[ದೃಢವಾಣಿಯಿಂದ]
ನನ್ನ ರಾಜ್ಯದೊಳಿರಲ್ಕಾಗದು ಅಧರ್ಮಿ!
[ಶ್ರೀರಾಮನ ಧರ್ಮಕೋಪಕ್ಕೆ ಬ್ರಾಹ್ಮಣನು ಬೆದರುತ್ತಾನೆ. ಮಿಳ್ಮಿಳನೆ ನೋಡುತ್ತಿರುವಾತನಿಗೆ ರಾಮನು ಧೈರ್ಯಹೇಳುವಂತೆ]
ಬಿಡಿ ಬೆದರ್ಕೆಯಂ! ದಿಟಮನೊರೆಯಿಂ!

ಬ್ರಾಹ್ಮಣ
ಕ್ಷಮಿಸಯ್, ಮಹಾಪುರುಷ. ಜಿಹ್ವೆ ತೊದಳ್ದಪುದೆನಗೆ.

ಶ್ರೀರಾಮ
ನಿಜವನುಸುರಲ್ಕೆ?

ಬ್ರಾಹ್ಮಣ
ನಿನ್ನಿದಿರೆ ನಿನ್ನ ಪೆಸರಂ ಪೇಳ್ವುದರ್ಕ್ಕಳ್ಕಿ!

ಶ್ರೀರಾಮ
[ನಸು ಬೆಚ್ಚಿದಂತಾಗಿ ತನ್ನೊಳಗೆ ತಾನೆ]
ಅಪರಾಧಂಗಳ್ಗೆಲ್ಲ ನಾನೆ ಮೂಲಮೋ ಏನ್?
ಅಂದಸಗನಾಡಿದನ್; ಇಂದೀ ಪಾರ್ವನ್!
[ಬ್ರಾಹ್ಮಣನಿಗೆ]
ದ್ವಿಜೋತ್ತಮ, ಸತ್ಯಂ ಸರ್ವಪೂಜ್ಯಂ.
ಸತ್ಯಕಂಜಲ್ ತರಮೆ? ಪೇಸಲಿಲ್ಲವಗಂ
ಸತ್ಯಮನ್ನಾಲಿಸಲ್ಕೀ ದಶರಥಾತ್ಮಜಂ.
ಸತ್ಯಮಾರ್ಗಂ ಕ್ಷೇಮಮೇ, ಇಳೆಯ ಪಿರಿಯ,
ಪೇಳ್ವರ್ಗಂ, ಕೇಳ್ವರ್ಗಂ. ― ತಳ್ವದೆ ಪೇಳಿಂ!
ನನ್ನದೇನಪರಾಧಂ? ನನ್ನಿಂದಮೇನಧರ್ಮಂ?
ಜನ್ಮದಿಂ ಮಾತ್ರಮಲ್ಲದೆ ಕರ್ಮದಿಂದಮುಂ
ಗುರುಗಳಪ್ಪಿರಿ ನೀಮ್.
ಪೇಳಿಮ್, ತಳ್ವದೆ ಪೇಳಿಮ್!

ಬ್ರಾಹ್ಮಣ
ಶಿಷ್ಟಪರಿತ್ರಾಣ ಮೂರ್ತಿ, ಕೇಳ್:
ಇಂದು ಬೆಳಗುಂಬೊಳ್ತು ದೇವಾರ್ಚನೆಗೆ
ಪೂದಿರಿಯಲೆಂದು ನಾಂ ಪುತ್ರಕಂವೆರಸಿ
ಸಾರ್ದೆನೊರ್ವೆಸರ ಬನಮಂ.

ಶ್ರೀರಾಮ
ಪೆಸರಿರ್ಪುದೇನಾ ಬನಕೆ? ಇರ್ಪುದೆತ್ತಣ್ಗೆ?

ಬ್ರಾಹ್ಮಣ
ಪಾಪಕರಮೆಂದುಸಿರ್ದೆನಿಲ್ಲಾ ಪೆಸರನ್.
ಇರ್ಪುದದು ಮೃತ್ಯುದಿಶೆಯೊಳ್.

ಶ್ರೀರಾಮ
ಪೆಸರೊಳೇನ್ ಪಾಪಂ? ಉಸಿರಿಂ

ಬ್ರಾಹ್ಮಣ
ಶಂಬೂಕಾಶ್ರಮವೆಂದು ಕರೆವರಾ ಕಾಡನ್.

ಶ್ರೀರಾಮ
[ಚಿಂತಾಮಗ್ನನಾಗಿ, ಬಳಿಕ]
ಓಹೊ ಈಗಳೆನಗೆ ಬೆಳಕು ಮೂಡುತಿದೆ! ―
ಮುಂದೆ?

ಬ್ರಾಹ್ಮಣ
ಮುಂದೇನ್, ಮಹಾಪ್ರಭೂ?
ಕಂಡೆವಿರ್ವರುಮಾ ತಪಂಬಡುತ್ತಿರ್ದನಂ,
ಶೂದ್ರನಂ ಶಂಬೂಕವೆಸರಾಂತನಂ,
ಋಷೈವೇಷದಾ ಪಾಷಂಡಿಯಂ.
[ಶ್ರೀರಾಮನ ಹುಬ್ಬು ಗಂಟಿಕ್ಕುತ್ತವೆ. ಆಲೋಚಿಸುತ್ತಾ ನುಲ್ಲುತ್ತಾನೆ. ಬ್ರಾಹ್ಮಣನು ತನ್ನಲಿಯೆ ತಾನು ಹೇಳಿಕೊಳ್ಳುತ್ತಾನೆ.]
ಈಗಳಾ ಶೂದ್ರಂಗೆ ತಕ್ಕುದಕ್ಕುಂ.
ಅಧರ್ಮಶ್ರವಣಮಾತ್ರದಿಂ, ಕೋಪದಿಂ,
ಏಂ ರೌದ್ರಮಾದುದೀ ರಾವಣಾರಿಯ ಮುಖಂ!

ಶ್ರೀರಾಮ
[ಸೌಮ್ಯನಾದವಂತೆ ಬ್ರಾಹ್ಮಣನ ಕಡೆಗೆ ತಿರುಗಿ]
ನಮಸ್ಕಾರಂಗೆಯ್ದಿರೇಂ?

ಬ್ರಾಹ್ಮಣ
(ಕಿವಿಮುಚ್ಚಿ)
ಶಿವ ಶಿವ ಶಿವ!
ಅಂತಪ್ಪ ಘೋರಮಂ ನಾವೆಸಗಿದೆವಲ್ತು.
ಅರಿಯದಾ ಕುವರಂ ಕೈಮುಗಿಯಲಿರ್ದನ್;
‘ಮಾಣ್, ಶೂದ್ರಂಗೆ ತುಳಿಲ್ ಗೆಯ್ಯಲಾಗ!’
ಎಂದಾಂ ಬುದ್ಧಿಯಂ ತಿದ್ಧಿ ತಡೆದೆನ್.

ಶ್ರೀರಾಮ
[ವ್ಯಂಗ್ಯವಾಗಿ]
ಎಂತಾದೊಡಂ ತಾಮ್ ವೇದಮೂರ್ತಿಗಳಲ್ತೆ!

ಬ್ರಾಹ್ಮಣ
ನಿನ್ನ ರಾಜ್ಯದೊಳಿರ್ದುಮ್
ಆನಿತೊಂದನಾದೊಡಂ ಅಧರ್ಮಮಂ
ತಡೆಯದಿರೆ ನರಕಮಾಗದೆ ನಮಗೆ?

ಶ್ರೀರಾಮ
ಓವೊ ದಿಟಂ; ಸ್ವರ್ಗಮಪ್ಪುದನೆಸಗಿದಿರಿ!
ಆ ಸೈಪಿನೊಂದು ಮೆಯ್ಮೆಗೇ ನಿಮ್ಮರ್ಭಕಂ
ಸ್ವರ್ಗಸ್ಥನಾದನೆಂಬಿರೇಂ?

ಬ್ರಾಹ್ಮಣ
ಅಲ್ತಲ್ತು, ರಾಮಚಂದ್ರ,
ಶೂದ್ರನ್ ತಪಂಗೆಯ್ವೊಂದು ಅಧರ್ಮಕ್ಕೆ,
ವರ್ಣಾಶ್ರಮ ಧರ್ಮದುಲ್ಲಂಘನೆಯ ಪಾಪಕ್ಕೆ,
ನಿನ್ನ ಬಾಲಪ್ರಜೆಯೊರ್ವನ್ ಬಲಿಯಾದನ್. ―
ಮುಂದಾವ ಮಹತ್ಕಾರ್ಯಮಂ ಗೆಯ್ಯಲಿರ್ದನೊ?
ಆವ ಶಾಸ್ತ್ರವನೊರೆಯಲಿರ್ದನೊ?
ಆವ ಕಬ್ಬಮಂ ಕಟ್ಟಲಿರ್ದನೊ?
ಆವ ತಪದಿಂದಾವ ಸಿದ್ಧಿಯ ಪಡೆಯಲಿರ್ದನೊ?
ಆ ಪ್ರಜೆ ಶೂದ್ರನ ತಪೋದುಷ್ಕೃತಿಗೆ ಬೇಳ್ವೆಯಾದನ್!
ಪಾವಗಿದು ತೀರ್ದನ್!
(ಅಳುತ್ತಾನೆ)

ಶ್ರೀರಾಮ
[ಸ್ವಗತ. ಕನಿಕರದಿಂದಲೂ ಕೋಪದಿಂದಲೂ]
ಈ ವರ್ಣಗರ್ವಾಂಧಂಗೆ,
ಈ ಶಾಸ್ತ್ರಮೂರ್ಖಂಗೆಂತೊ ಬುದ್ಧಿಗಲಿಪೆನ್?
ಶಂಬೂಕನ್ ಮಹಾಯೋಗಿ.
ತಪಸ್ವಿಯ ತಿರಸ್ಕೃತಿಗೆ ಮುನಿದ ಧರ್ಮಂ
ತಂದುದೀತನ ಮುದ್ದು ಕಂದಂಗೆ
ನನ್ನ ರಾಜ್ಯದೋಳುಂ ಅಕಾಲ ಮೃತ್ಯುವಂ.
ತನ್ನ ತಪ್ಪನೆ ತಿಳಿಯಲಾರದೀತನ್,
ಮರೆಯಿಂದಮೆನ್ನನ್,
ಬಹಿರಂಗಮಾ ಶಂಬೂಕಯೋಗಿಯನ್
ನಿಂದಿಸಿತ್ತಿರ್ಪನ್
(ಆಲೋಚಿಸಿ, ನಿರ್ಣಯಿಸಿ, ಮತ್ತೆ)
ತೋರ್, ದ್ವಿಜನ್ಮ, ಶಂಬೂಕ ವಿಪಿನಮಂ.
ನಡೆವಮಾ ಎಡೆಗೆ, ತೊಡೆವಮ್ ಅಧರ್ಮಮಂ.
ರಾಮರಾಜ್ಯದೊಳ್ ಅಧರ್ಮಮೆ ಮೃತ್ಯು.
ಅಧರ್ಮ ಸಂಹಾರಮೆ ಮೃತ್ಯುವಿಜಯಂ:
ಅರನ ಗೆಲ್ ಯಮನ ಸೋಲ್!
ಬರ್ದುಕಲ್‌ ಧರ್ಮಂ ಬರ್ದುಕುವನ್‌ ನಿನ್ನಣುಗನ್‌!

ಬ್ರಾಹ್ಮಣ
[ಸ್ವಗತ]
ರಾಮ ನಿಂದೆಯುಮ್‌ ಅವ್ಯರ್ಥಮೆನಲ್‌
ಪೊಗಳ್ಕೆ ಇನ್ನೆಂತೊ ಸಫಲಮಕ್ಕುಂ?
[ರಾಮನಿಗೆ]
ಪೋಗುವಂ, ರಕ್ಷಸಾರಿ. ಧನ್ಯನಾದೆನ್.

ಶ್ರೀರಾಮ
ಬನ್ನಿಮ್.
[ಆಕಾಶದೆಡೆಗೆ ನೋಡುತ್ತ]
ಪುಷ್ಪಕವೇರ್ದು ಶಂಬೂಕಾಶ್ರಮಕ್ಕೈದುವಮ್.

[ಶ್ರೀರಾಮ ಉತ್ತರದಿಕ್ಕಿನ ಕಡೆಗೆ ನೋಡಿ ಪುಷ್ಪಕವನ್ನು ನೆನೆಯುತ್ತಾನೆ. ಬಹುಸಂಖ್ಯೆಯ ಕಿರುಗಂಟೆಯ ಟಿಂಟಿಣಿಯ ಮಧುರನಾದವು ಕೇಳಲಾರಂಭವಾಗುತ್ತದೆ. ಇಚ್ಛಾರೂಪದ ಕಾಮಗಮನದ ಬಾನ್ದೇರು, ಬೆಳ್ದಿಂಗಳೆ ಹೆಪ್ಪಾಯ್ತೊ ಎಂಬಂತೆ, ಮುಗಿಲ್ ಮುಗಿಲ್ ಗೋಚರವಾಗಿ ನೆಲಕ್ಕಿಳಿಯುತ್ತದೆ. ಶ್ರೀರಾಮನೊಡನೆ ಬ್ರಾಹ್ಮಣನೂ ತೇರಿಗೆ ತುಳಿಲ್ ಗೆಯ್ದು ಅಡರುತ್ತಾನೆ. ವಿಮಾನವು ಮೇಲೆದ್ದು ಹಾರಿ, ದೂರದೂರವಾಗಿ, ಕಣ್ಮರೆಯಾಗಿ, ನಾದಾವಶೇಷವಾಗುತ್ತದೆ.]

ತೆರೆ ಬೀಳುತ್ತದೆ