[ಶಂಬೂಕಾಶ್ರಮದ ವನ್ಯಸೀಮೆ. ಹುಣ್ಣಿಮೆಯ ಬೆಳ್ದಿಂಗಳಲ್ಲಿ ಮಿಂದಿದೆ. ಎಲ್ಲೆಲ್ಲಿಯೂ ನಿಶ್ಯಬ್ದ. ಹೂವಿನ ಹೊದೆ ಬೆಳೆದ ಒಂದು ಹುತ್ತದೆಡೆ ಬ್ರಾಹ್ಮಣ ಕುಮಾರನು ಬಿದ್ದಿದ್ದಾನೆ. ಕಳೇಬರಕ್ಕೆ ಸಮಿಪದಲ್ಲಿ ಛಾಯಾರೂಪಿ ಮೃತ್ಯು ನಿಂತಿರುವುದು ಕಂಡುಬರುತ್ತದೆ. ಅಲ್ಲಿಗೆ ಆನತಿ ದೂರದಲ್ಲಿಯೆ ಸಮಾಧಿಮಗ್ನನಾಗಿರುವ ಶಂಬೂಕ ಮಹರ್ಷಿಯ ಧ್ಯಾನಸ್ತಿಮಿತವಾದ ಆಕೃತಿಯೂ ಇಂಗಿತವಾಗಿ ಕಂಡುಬರುತ್ತದೆ. ಆತನ ಸುತ್ತಲೂ ಹಳು ಬೆಳೆದಿದೆ. ಶ್ಮಶ್ರುಮಯವಾದ ಮುಖವೂ ಜಟಾಸ್ರೋತಗಳೂ ಬಳ್ಳಿಗಳಲ್ಲಿ ಹೆಣೆಗೊಂಡಿವೆ. ಅರ್ಧಭಾಗದ ಮೆಯ್ಗೆ ಹುತ್ತವೂ ಬೆಳೆದಿದೆ. ಭವ್ಯ ದೃಶ್ಯವನ್ನಾವರಿಸಿ ಒಂದು ತೇಜಸ್ವಿನ ಪರಿವೇಷವೂ ಕಂಗೊಳಿಸುತ್ತದೆ. ಸಮೀಕ್ಷಿಸಿದರೆ ಮಾತ್ರವೇ ವೇದ್ಯವಾಗುವಷ್ಟರ ಮಟ್ಟಿಗೆ ಪ್ರಕೃತಿಲೀನವಾಗಿದೆ ಋಷ್ಯಾಕೃತಿ. ಇದ್ದಕ್ಕಿದ್ದ ಹಾಗೆ ವನದಲ್ಲಿ ಭಾವಸಂಚಾರವಾದಂತಾಗಿ, ಎಲರು ತೀಡಿ, ಹೂಬಳ್ಳಿ ಹೊದೆ ಎಲ್ಲವೂ ತಲೆಯೊಲೆಯುತ್ತವೆ. ಮೃತ್ಯುವೂ ಭಕ್ತಿಯಿಂದ ಬಾಗಿ ಕೈಮುಗಿಯುತ್ತದೆ. ದಿಕ್ಕಿನಿಂದಲೆ ಬ್ರಾಹ್ಮಣದ್ವಿತೀಯನಾಗಿ ಶ್ರೀರಾಮನು ಪ್ರವೇಶಿಸುತ್ತಾನೆ. ಆತನ ವದನ ಭಾವದೀಪ್ತವಾಗಿದೆ. ತನ್ನಾನಂದಕ್ಕೆ ತಾನೆ ಮಾತಾಡಿಕೊಳ್ಳುವಂತಿದೆ.]

ಶ್ರೀರಾಮ
ಏನ್ ಶಾಂತಿ ನೆಲಸಿರ್ಪುದೀ ಚೆಲ್ವಿನೊಳ್;
ಅನುಭವಮೆ ಪೇಳ್ವುದು ಇದು ಋಷಿಯ ಬೀಡೆಂದು.
ತಪೋಮೈಮೆಗೆಣೆಯುಂಟೆ?
[ರಸಾನುಭವ ಮಾಡುವವನಂತೆ ಧ್ಯಾನಭಂಗಿಯಿಂದ ನಿಲ್ಲುತ್ತಾನೆ.]

ಬ್ರಾಹ್ಮಣ
[ಸ್ವಗತ]
ಸೋಜಿಗಮಾಗಿರ್ಪುದೀ ರಾಜೆಂದ್ರನೀ ತೆರಂ!
ಅರಮನೆಯೊಳಿರ್ಪೀತಂಗೆ ಗಿರಿವನಪ್ರಕೃತಿಯೆನೆ
ಅದೇನ್ ಪ್ರೇಮವೋ? ಅದೇನ್ ಮೋಹವೋ?
ಸೀತೆಯನ್ ಅರಣ್ಯಕೆ ವಿಸರ್ಜಿಸಿದೀತಂಗೆ
ಅರಣ್ಯಮೆ ಸೀತೆಯಾಗಿರ್ಪಳ್!

ಶ್ರೀರಾಮ
(ಬ್ರಾಹ್ಮಣನಿಗೆ)
ತೋರಿಮ್ ಆ ತಾಣಮಂ.

ಬ್ರಾಹ್ಮಣ
ಬಾ, ಪ್ರಭೂ, ತೋರ್ದಪೆನ್.
(ಮುಂದೆ ನಡೆದು)
ನೋಡಲ್ಲಿ! ನೋಡಲ್ಲಿ, ಕೋಸಲೇಶ್ವರ,
ಕೆಡೆದಿರ್ಪುದೆನ್ನ್ ಕುಲಗೋಪುರದ ಕಲಶಮಣಿ;
[ಮುಂದೆ ನುಗ್ಗಿ]
ರಕ್ಷಿಸಯ್, ರಕ್ಷಿಸಯ್ ನನ್ನೀ ಕಣ್ಮಣಿಯಂ!
[ಶವದೆಡೆ ಕುಸಿಯುತ್ತಾನೆ]

ಶ್ರೀರಾಮ
[ಪ್ರಯತ್ನಿಸಿದರೂ ಸಾಧ್ಯವಾಗದೆ ಅಸ್ಥಿರನಾಗಿ ಕಣ್ ತೊಯ್ದು, ಸ್ವಗತ.]
ಸ್ಥಿತಪ್ರಜ್ಞಂಗುಂ ಅಧೈರ್ಯಮನೊಡರ್ಚುವುದೀ
ಪುತ್ರಶೋಕದ ದೃಶ್ಯಮೇಗಳುಮ್!
ನನ್ನಗಲ್ಕೆಗಂದು ಎದೆಬಿರಿಯಲ್ ಪಳಯಿಸಿದಾ
ನನ್ನಯ್ಯನಂ ಬಗೆಗೆ ತರ್ಪ್ಪನೀ ಮುದುಕ ತಂದೆ! ―
ಏನ್ ಮಾಯೆ?
ಅಮೃತ ಸಾಕ್ಷಾತ್ಕಾರಮಾದರ್ಗಂ
ಮೃತ್ಯು ಸಂಕಟಲರಂ!
ನಾಟಕದ ನಿಜವನರಿವಿದು
ನೇಪಥ್ಯಮಂ ಪೊಕ್ಕ ಮೇಲಲ್ತೆ?
[ಬ್ರಾಹ್ಮಾಣನ ಬಳಿಗೆಯ್ದಿ]
ರೋದಿಸದಿರ್ ಅಬೋಧನೊಲ್, ವೇದವೇತ್ತ.
ನಡೆದೊಂದಧರ್ಮಮಂ ಪರಿಹರಿಸಲೊಡಂ
ಅಮೃತನಕ್ಕುಮ್ ನಿನ್ನೀ ಚಿರಂಜೀವಿ!

ಬ್ರಾಹ್ಮಣ
[ಉನ್ನತ್ತ ಹರ್ಷದಿಂದ ಮೇಲೆದ್ದು]
“ಅಮೃತನಕ್ಕುಮ್ ನಿನ್ನೀ ಚಿರಂಜೀವಿ!”
ಸತ್ಯವಾಕ್ ನೀನ್, ಇಕ್ಷ್ವಾಕುಕುಲೇಂದ್ರ,
ಇನ್ ಎನ್ನ ಕಂದನ್ ಚಿರಂಜೀವಿ! ―
ಪರಿಹರಿಸಾ ಅಧರ್ಮಚಾರಿಯನ್ ಶೀಘ್ರದಿಂ.

ಶ್ರೀರಾಮ
[ಕೈಮುಗಿದು ನಿಂತಿದ್ದ ಮೃತ್ಯುದೇವತೆಯನ್ನು ಪ್ರಸನ್ನ ದೃಷ್ಟಿಯಿಂದ ನೋಡುತ್ತಾ]
ಇದೇನ್ ನೀನ್, ಈ ತಪೋವಿಪಿನದೊಳ್?
[ಮುಗುಳ್ನಗೆವೆರಸಿ]
ಉಪವಾಸಮಾಚರಿಸುತಿರ್ಪೆಯೇನ್?

ಮೃತ್ಯು
[ಹಸನ್ಮುಖಿಯಾಗಿ]
ತಂಪಂಗೆಯ್ಯುತಿರ್ಪೆನ್!

ಶ್ರೀರಾಮ
[ವಿನೋದದಿಂದ]
ಆರ ಅಮಂಗಳದ ಅದಾವ ಸಿದ್ಧಿಗೊ?

ಮೃತ್ಯು
ದೈತ್ಯವೈರಿಯ ಧರ್ಮಸಿದ್ದಿಗೆ!

ಶ್ರೀರಾಮ
ಅನೇಕ ವಂದನಂಗಳ್ ನಿನಗೆ!

ಮೃತ್ಯು
ಧನ್ಯಳೆನ್!

ಬ್ರಾಹ್ಮಣ
ಅರೊಡನೆ ಸಂವಾದಮೀ ಆಕಾಶವರ್ಣಂಗೆ!

ಶ್ರೀರಾಮ
ದ್ವಿಜೋತ್ತಮ, ನೀಂ ಪೇಳ್ದಾ ಅನಧಿಕಾರಿ,
ಆ ಶೂದ್ರನ್
ತಪಮಿರ್ಪ ತಾಣಮಂ ತೋರ್ಪುದೆ ತಡಂ.

ಬ್ರಾಹ್ಮಣ
[ಕೈದೋರಿ]
ಅದೆ ನೋಡಾ ವಲ್ಮೀಕದೆಡೆ.

ಶ್ರೀರಾಮ
[ಸ್ವಗತ]
ಎನ್ ಜಿಹ್ವೆ ಈ ಪಾರ್ವನದು?
ಮಾತು ಮಾತಿನೊಳೆನ್ನ ಮರ್ಮಮಂ ಚುಚ್ಚುವನ್.
ವಲ್ಮೀಕಮೆಂಬಾ ಪದವನಾಲಿಸಿದೆನಗೆ
ಸೀತೆಯಂ ಸಲಹುತಿರ್ಪಾ ಮಹಾ ಕವೀಶ್ವರನ
ನೆನಹು ಮೊಳೆತು
ಏಕೊ ಉಕ್ಕುತಿರ್ಪುದು ಮನಕೆ ದಿವ್ಯದುಃಖಂ!
ಆ ಕವಿಋಷಿಯುಮೀ ಶಮ್ಬೂಕನೊಲೆ
ಶೂದ್ರನೈಸೆ?
ವ್ಯಾಧವೃತ್ತಿಯೊಳಿರ್ದವಂ ಉಗ್ರತಪದಿಂ
ಮಹರ್ಷಿತ್ವಕೇರ್ದನೈಸೆ?
ತಪೋಮಹಿಮೆಗೆಣೆಯುಂಟೆ?
[ಬ್ರಾಹ್ಮಣನು ಕೈದೋರಿದ ಕಡೆಗೆ ನೋಡುತ್ತಾ ಬಿಲ್ಲನ್ ಅಣಿಮಾಡುವ ನೆವದಿಂದಲೆಂಬಂತೆ ಶಂಬೂಕಮರ್ಷಿಗೆ ಕೈಜೋಡಿಸುತ್ತಾನೆ.]

ಬ್ರಾಹ್ಮಣ
(ಬೆಚ್ಚಿ ತನ್ನೊಳಗೆ)
ಇದೇನ್?
ತಪಂಗೆಯ್ವ ಪಾಷಂಡಿಗೆ ಕೈಮುಗಿವನೋ?
ಮೇಣ್, ಬಿಲ್ಲೆ ಹೆದೆಯಂ ಬಲಿವ ಬಿಜ್ಜೆಯ ಪಾಂಗೊ?
ಅರಿಯೆನೀ ಪಾರ್ಥಿವೇಂದ್ರನ ವಿಚಿತ್ರಕೃತಿಯಂ!
[ಬೆರಗುನೋಟದಿಂದ ನಿಲ್ಲುತ್ತಾನೆ.]

ಶ್ರೀರಾಮ
(ಬ್ರಾಹ್ಮಣನ ಕಡೆ ತಿರಿಗಿ)
ಭೂಸುರೋತ್ತಮ,
ಕ್ಷತ್ರಿಯನೊಂದು ಸಂದೇಹಮಂ ನಿವಾರಿಸಿ
ಕೃಪೆಗೆಯ್ಯವೇಳ್ಕುಮ್.

ಬ್ರಾಹ್ಮಣ
[ವಿನಯದಿಂದ]
ನನ್ನಲ್ಪಬುದ್ಧಿಗೆ ತೋರ್ಪುದಂ ಪೇಳ್ವೆನ್.

ಶ್ರೀರಾಮ
[ವ್ಯಂಗ್ಯದಿಂದಾದರೂ ಗಂಭೀರವಾಗಿ]
ಪೂಜ್ಯರ್ ಉದಾತ್ತ ಬುದ್ಧಿಯಿನ್ ಒರೆಯವೇಳ್ಕುಮ್.

ಬ್ರಾಹ್ಮಣ
ಯಥಾ ಸಾಮರ್ಥ್ಯಮನ್, ರಾಜೇಂದ್ರ.

ಶ್ರೀರಾಮ
ತಪಂ ಪೂಜ್ಯಕರ್ಮಮಲ್ತೆ, ದ್ವಿಜೇಂದ್ರ?

ಬ್ರಾಹ್ಮಣ
ತಪಕ್ಕೆಣೆಯುಂಟೆ, ರಾಘವೇಂದ್ರ?

ಶ್ರೀರಾಮ
ತಪಂಗೆಯ್ವುನುಂ ಪೂಜ್ಯನಲ್ತೆ, ವಿಬುಧವರ್ಯ?

ಬ್ರಾಹ್ಮಣ
ದಿಟಂ, ಧರ್ಮಮೂರ್ತಿ.

ಶ್ರೀರಾಮ
ಪೂಜ್ಯ ಹನನಂ ಪಾಪಕರಮಲ್ತೆ, ಸತ್ತ್ವಶೀಲ?

ಬ್ರಾಹ್ಮಣ
ನಿಸ್ಸಂಶಯಂ, ವಾಲಿಸಂಹಾರಿ.

ಶ್ರೀರಾಮ
[ಹುಬ್ಬುಗಂಟಿಕ್ಕಿ ನಿಧಾನವಾಗಿ ಹೇಳುತ್ತಾನೆ]
ಅಂತೆವೋಲ್
ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ?

ಬ್ರಾಹ್ಮಣ
ವಸಿಷ್ಠ ಶಿಷ್ಯ,
ತರ್ಕಕೆ ಮಿಗಿಲ್ ಶ್ರುತಿವಾಕ್ಯಮೈಸೆ!
ತಪಕ್ಕನಧಿಕಾರಿ ಸೂದ್ರನ್
ಎಂಬುದದು ಶಾಸ್ತ್ರ ಪ್ರಸಿದ್ಧಂ.
ಕೃತಯುಗದೊಳ್ ತಪಕ್ಕರ್ಹರ್ ಬ್ರಾಹ್ಮಣರ್ ಮಾತ್ರಂ.
ತ್ರೇತೆಯೊಳ್ ಕ್ಷತ್ರಿಯರುಮ್ ಅರ್ಹರ್.
ವೈಶ್ಯರುಂ ತಪಂಗೆಯ್ವರಾ ದ್ವಾಪರದೊಳ್.
ಕಲಿಕಾಲಂ ಬರಲ್ ಶೂದ್ರನುಂ ತಪಸ್ವಿ!
ಅದು ಕಾರಣದಿಂ
ಕೃತಯುಗದೊಳ್ ನಾಲ್ಕುಂ ಕಾಲೊಳ್ ನಿಂತ ಧರ್ಮಂ
ತ್ರೇತೆಯೊಳ್ ಮೂಗಾಲಿಯಕ್ಕುಮ್;
ದ್ವಾಪರದೊಳ್ ದ್ವಿಪಾದಿ;
ಕಲಿಯುಗದೊಳ್ ಒಂಟಿಗಾಲೊಳ್ ಕುಂಟಿ
ತತ್ತರಿಸಿ ಸತ್ತುರುಳ್ವುದಾ ವಿಲಯದತ್ತಣ್ಗೆ. ―
ಕೇಳ್, ವರ್ಣಾಶ್ರಮ ಧರ್ಮಪಾಲಕ,
ಪಾಲ್ ಪೂಜ್ಯಮಾದೊಡಂ,
ಜೀವತುವಾದೊಡಂ,
ತ್ಯಾಜ್ಯಮಾ ನಾಯ ಪಾಲ್:
ನಾಯ ಪಾಲ್ಗೆಣೆ ಶೂದ್ರನ ತಪಂ!

ಶ್ರೀರಾಮ
[ಕೋಪವನ್ನು ತೋರಗೊಡದೆ ವ್ಯಂಗ್ಯದಿಂದ]
ಸಾರ್ಥಕಮ್ ನೀಂ ಕಲ್ತ ಬಿಜ್ಜೆ, ಆಚಾರ್ಯ!
(ಸುಯ್ಯನ್)
ನಿಮಗೆ ಸಮ್ಮತಮಲ್ತೆ ಬಾಣಪ್ರಯೋಗಂ?

ಬ್ರಾಹ್ಮಣ
ಅಪ್ಪುದಯ್, ಧನುರ್ಧರ,
ಶಿಕ್ಷೆಗರ್ಹನೀ ಶೂದ್ರತಪಸ್ವಿ.

ಶ್ರೀರಾಮ
ಶೂದ್ರನಪ್ಪೊಡಂ ತಪಂ ಶಕ್ತಿದಾಯಕಂ.
ಸಾಲದೀತನ ಕೊಲೆಗೆ ಸಾಮಾನ್ಯಸಾಯಕಂ.

ಬ್ರಾಹ್ಮಣ
ಆವ ದಿವ್ಯಾಸ್ತ್ರದಿಂ ದೈತ್ಯೇಂದ್ರ ರಾವಣನ
ದಶಶಿರಗಳುರುಳಿದುವೊ ಅದನೆ ತುಡು, ಅರಿಂದಮ;
ಪಾಪ ಕರ್ಮದೊಳೀತನತಂಗೆ ಕೀಳಲ್ಲ.

ಶ್ರೀರಾಮ
ಬ್ರಹ್ಮಾಸ್ತ್ರಂ ಅತಿಭಯಂಕರಂ, ದ್ವಿಜನ್ಮ.
ತನ್ನರಿಯನ್ ಅರಿಯದೆಯೆ ಬಿಡದೆಂತಾದೊಡಂ.

ಬ್ರಾಹ್ಮಣ
ಈ ಪಾಷಂಡಿಗದು ತಕ್ಕುದೆ ವಲುಂ;
ತುಡು, ಕೋದಂಡಪಾಣಿ!
[ಶ್ರೀರಾಮನು ಬತ್ತಳಿಕೆಗೆ ಕೈಯಿಕ್ಕುತ್ತಾನೆ. ಭೂಮಿ ನಡುಗುತ್ತದೆ. ಗಗನ ಗುಡುಗುತ್ತದೆ. ಬ್ರಾಹ್ಮಣನು ಹೆದರಿ, ಸೆಡೆತು, ರಾಮನ ಮರೆಗೆ ಹೋಗುತ್ತಾನೆ. ಮೃತ್ಯು ಬೆಪ್ಪಾಗಿ ಕೂಗುತ್ತದೆ.]

ಮೃತ್ಯು
ತಾಳ್ ತಾಳ್, ಋತಪ್ರಭೂ!

ಶ್ರೀರಾಮ
(ಮೃತ್ಯುವನ್ನು ಲಕ್ಷಿಸಿ)
ನಿನದೇನ್ ತಲ್ಲಣಂ?

ಮೃತ್ಯು
ಇದೇನ್ ಆಟಮೋ ದಿಟಮೋ?
ನನಗರಿವುದೋರ್!
ನನಗಾವುದು ನಡೆವ ಬಟ್ಟೆ?

ಶ್ರೀರಾಮ
(ಹುಬ್ಬುಗಂಟಿಕ್ಕಿ)
ಮೃತ್ಯೂ,
ಅಲಂಘ್ಯಮೇಗಳುಂ ಕರ್ತವ್ಯಮಖಿಲರ್ಗಂ! ―
ಮಾರ್ಗದರ್ಶಿ ಈ ಮಹಾಸ್ತ್ರಂ.

ಮೃತ್ಯು
ಆಜ್ಞೆ!
(ತಲೆಬಾಗಿ, ಅನುಸಾರಿಯಾಗಲು, ಸಿದ್ಧವಾಗುತ್ತದೆ.)

[ಶ್ರೀರಾಮನು ಬ್ರಹ್ಮಾಸ್ತ್ರವನ್ನು ತೊಟ್ಟು ,”ಅರಸಿ ಕೊಳ್ ಅರಗುಲಿಯನ್!” ಎಂದು ಆಘೋಷಿಸಿ, ಸೆಳೆದು ಬಿದುತ್ತಾನೆ. ಮಿಂಚು ತಳಿಸುತ್ತದೆ. ಸಿಡಿಲೆರಗುತ್ತದೆ. ಬಿರುಗಾಳಿ ಭೋರಿಡುತ್ತದೆ. ಧೂಳಿ ಕವಿಯುತ್ತದೆ. ಅರಣ್ಯ ಸಮಸ್ತವೂ ತಪಿಸಿ ಚೀತ್ಕರಿಸುತ್ತದೆ. ಮೃತ್ಯುವಿನ ಕರಾಳಛಾಯೆ ರೌದ್ರರೋಷದಿಂದಲೂ ಶರವೇಗದಿಂದಲೂ ಅಸ್ತ್ರವನ್ನು ಹಿಂಬಾಲಿಸುತ್ತದೆ. ತಪಸ್ವಿಯ ಸಮೀಪಕೈದಿದ ಬ್ರಹ್ಮಾಸ್ತ್ರವು ತನ್ನ ಉಗ್ರತೆಯನ್ನುಳಿದು, ವಿನೀತವಾಗಿ, ಶಂಬೂಕ ಋಷಿಯನ್ನು ಬಲಗೊಂಡು ಅಡ್ಢಬೀಳುತ್ತದೆ. ಮೃತ್ಯುವು ಅದನ್ನೇ ಅನುಕರಸುತ್ತದೆ. ಬೆಬ್ಬಳಸಿ ನೋಡುತ್ತಿರುವ ಬ್ರಾಹ್ಮಣನಿಗೆ ಶ್ರೀರಾಮನು ಮುಗುಳುನಗೆಗೂಡಿ ಹೇಳುತ್ತಾನೆ.]

ಶ್ರೀರಾಮ
ಇದೇನ್‌, ಆಚಾರ್ಯ?

ಬ್ರಾಹ್ಮಣ
ಹೇ ದಾಶರಥಿ, ಇದೆಲ್ಲಂ ಶೂದ್ರತಪಸ್ಸಿನ
ತಮಃಪ್ರಭಾವಮೆ ದಲ್‌!
ನೀನೆಚ್ಚ ಬ್ರಹ್ಮಾಸ್ತ್ರಮುಂ ಆಯ್ತೆ ನಿಷ್ಫಲಂ?

ಶೀರಾಮ
ಬ್ರಹ್ಮಾಸ್ತ್ರಮಾದಪುದೆ ನಿಷ್ಫಲಂ?
ಈಗಳೆಯೆ ಸಫಲಮಕ್ಕುಂ.

ಬ್ರಾಹ್ಮಣ
[ಅಚ್ಚರಿಯಿಂದ]
ಎಂತು?

ಶೀರಾಮ
ಋಷಿವರೆಗೆ ಮರ್ಯಾದೆಯಂ ಸಲಿಸಿ,
ತದನಂತರಂ, ಬರ್ಪುದಿತ್ತಣ್ಗೆ.

ಬ್ರಾಹ್ಮಣ
ಮತ್ತಮಿತ್ತಣ್ಗೆ ಅದೇಕಯ್?

ಶೀರಾಮ
ಧ್ವಂಸಗೆಯ್ಯಲ್ಕೆ ತನ್ನ ಹಗೆಯನ್‌!

ಬ್ರಾಹ್ಮಣ
ಆರನ್‌?

ಶೀರಾಮ
ಅಧರ್ಮಿಯನ್‌!

ಬ್ರಾಹ್ಮಣ
ಆ ಶೂದ್ರನನೆ?

ಶೀರಾಮ
ಅಲ್ತಲ್ತು. ಬ್ರಾಹ್ಮಣವರೇಣ್ಯನನ್‌!

ಬ್ರಾಹ್ಮಣ
ಬ್ರಾಹ್ಮಣವರೇಣ್ಯನನ್‌?

ಶೀರಾಮ
[ದರ್ಪಧ್ವನಿಯಿಂದ]
ಪೂಜ್ಯರನ್‌ ಅವಜ್ಞೆಗೆಯ್ದಾತನನ್‌!
ಶಾಸ್ತ್ರ ಸಂಭ್ರಾಂತನನ್‌, ದುರ್ವಿನೀತನನ್‌!

ಬ್ರಾಹ್ಮಣ
[ಶ್ರೀರಾಮನ ಇಂಗಿತಕ್ಕಳ್ಕಿ]
ಆಞಃ?!

ಶೀರಾಮ
[ಬ್ರಾಹ್ಮಣನ ಕಡೆಗೆ ನೋಡದೆ]
ನಿನ್ನನ್‌, ದ್ವಿಜೋತ್ತಮ!

ಬ್ರಾಹ್ಮಣ
ರಕ್ಷಿಸು, ಅನಾಥರಕ್ಷಕಾ, ದೀನಬಂಧೂ!
[ಕಾಲ್ವಿಡಿಯಲೆಳೆಸುತ್ತಾನೆ.]

ಶೀರಾಮ
[ಅವನ ಕಡೆಗೆ ನೋಡದೆ]
ನೀಮ್‌ ಅವಜ್ಞೆಗಯ್ದುದು ನನ್ನವಲ್ತು.

ಬ್ರಾಹ್ಮಣ
ಗತಿಯೇನೆನಗೆ ಬಟ್ಟೆದೋರಯ್‌,
ಕ್ಷಮಾಕನ್ಯಾ ಜೀವಿತೇಶ್ವರ!

ಶೀರಾಮ
[ಅವನ ಕಡೆಗೆ ನೋಡದೆ]
ಮಾರ್ಗದರ್ಶಿ ಆ ಮಹಾಸ್ತ್ರಂ!

ಬ್ರಾಹ್ಮಣ
ಅಂತೆಗೆಯ್ವೆನ್‌; ನಿನ್ನಾಜ್ಞೆ.

ಶೀರಾಮ
[ಅವನನ್ನು ನೋಡಿ ದಯೆಯಿಂದ]
ಸಾಲದಿಲ್ಲಗೆ ಬರಿಯ ಆಜ್ಞಾಪಾಲನಂ.
ಕಣ್‌ದೆರೆಯವೇಳ್ಕುಂ ಬುಧಪ್ರಜ್ಞೆಯಂ, ದ್ವಿಜನ್ಮ :
ತಂದೆಯಂ ಬರ್ದುಕುವನ್? ಕಂದನುಂ ಬಳ್ದಪನ್.

ಬ್ರಾಹ್ಮಣ
ಅಶಾಸ್ತ್ರಮೆಂದಳ್ಕುವೆನ್‌, ಕ್ಷತ್ತ್ರಿಯೋತ್ತಮ.

ಶೀರಾಮ
ಸನ್ಮತಿಯ ಸತ್ಕೃತಿಗೆ ಶಾಸ್ತ್ರದ ನೆರಂ ಬೇಕೆ?
ಆದೊಡಂ ನಿನಗೋಸುಗಮ್‌ ಒರೆವೆನೊಂದನ್‌
ಶ್ಲೋಕಪ್ರಮಾಣಮನ್‌: ಕೇಳ್‌, ಶ್ರೋತ್ರಿಯ!

ಆಕಾಶವಾಕ್
“ಕೇವಲಂ ಶಾಸ್ತ್ರಮಾಶ್ರಿತ್ಯ ನ ಕರ್ತವ್ಯೋ ವಿನಿರ್ಣಯಃ!
ಯುಕ್ತಹೀನ ವಿಚಾರೇ ತು ಧರ್ಮಹಾನಿಃ ಪ್ರಜಾಯತೇ ||”

ಬ್ರಾಹ್ಮಣ
[ಎವೆಯಿಕ್ಕದೆ ಶ್ರೀರಾಮನ್ನೆ ನೋಡುತ್ತಾ ತುಸು ಹೊತ್ತು ನಿಂತು, ತೆಕ್ಕನೆ]
ಬೋಧಮಾಯ್ತೆನಗೀಗಳ್, ಮಹಾಪ್ರಾಜ್ಞ.
ಬುದ್ಧಿಗಲಿಸಿದಯ್ ಸಂಪ್ರದಾಯಬದ್ಧಂಗೆ,
ಶಾಸ್ತ್ರಸಂಮೂಢಂಗೆ, ಜಾತಿಗರ್ವಾಧಂಗೆ. ―
ಅವ ಜಾತಿಯ ತರುವೊ? ಇಂಧನಕೆ ಹೊರತುಂಟೆ?
ಬೆಂಕೆಗೇಂ ಭೇಧಮೆ? ದಳ್ಳುರಿಗೆ ದಾಕ್ಷಿಣ್ಯವೆ?
ಆರಾದರೇನ್‌? ಆರಾಧ್ಯರ್ ತಪೋಧನರ್!
ನಮಸ್ಕಾರಮೆ ಪುಣ್ಯಂ; ತಿರಸ್ಕಾರಮೆ ಪಾಪಂ!

ಶೀರಾಮ
ಅವರ್ಗೇನ್‌ ಗೆಯ್ದೊಡಂ ಪುಣ್ಯಮೆಂದರಿವಿರೀಗಳ್‌:
ಭೂಮದಿಂದೆಂತಾದೊಡಂ ಅಲ್ಪಫಲಮಕ್ಕಮೇ?
ಪೀಡಿಸಿದೊಡಂ ಇಕ್ಷು ಮಧುರಸವನೀವಂತೆ,
ಕಡೆದೊಡಮ್‌ ಕಡಲ್‌ ಅಮೃತಮಂ ಕೊಡುವಂತೆ,
ನಿಮಗೊಳ್ಳಿತಕ್ಕುಮ್‌, ವಿಪ್ರದೇವ!

[ಮುಂದೆ ಮುಂದೆ ತೂಣಗೊಂಡವನಂತೆ ನಡೆದು ಬ್ರಾಹ್ಮಣನು ಶಂಬೂಕ ಮಹರ್ಷಿಗೆ ಸಾಷ್ಟಾಂಪ್ರಣಾಮ ಮಾಡುತ್ತಾನೆ. ವನವೆಲ್ಲ ಸಸಂಭ್ರಮವಾಗುತ್ತದೆ. ಹೂಮಳೆಗೆರೆಯುತ್ತದೆ. ದೇವದುಂಭಿ ಮೊಳಗುತ್ತದೆ. ಮೃತ್ಯುಛಾಯೆ ಬೇಗ ಬೇಗನೆ ಓಡಿ ಕಣ್ಮರೆಯಾಗುತ್ತದೆ. ಬ್ರಾಹ್ಮಣಕುಮಾರನು ಮಲಗಿದ್ದವನು ಏಳುವಂತೆ ಎದ್ದು ಕಣ್ಣುಜ್ಜಿಕೊಂಡು, ಸುತ್ತಲೂ ನೋಡಿ, ತನ್ನ ತಂದೆಯನ್ನು ಕರೆಯುತ್ತಾನೆ.]

ಕುಮಾರ
ತಾತ! ತಾತ! ― ಓ ತಾತ ―
ಹೂ ಕುಯ್ಯುತಿದ್ದವನ್ ಇಲ್ಲಿಯೆ ಮಲಗಿದೆನೆ? ―
ಎತ್ತವೋದನೋ ತಾತನ್‌ ನನ್ನನಿಲ್ಲಿಯೆ ಬಿಟ್ಟು?
[ಹೂಬುಟ್ಟಿ ತೆಗೆದುಕೊಂಡು ಮುಂಬರಿದು ರಾಮನನ್ನು ನೋಡಿ]
ಆರೀತನ್ ರುಂದ್ರಸತ್ತ್ವನ್‌? ದೇವತೆವೋಲ್‌ ಪೊಳೆವನ್‌!

ಶ್ರೀರಾಮ
ಅಂಜದಿರ್, ಬಾ ವತ್ಸ, ನಿನ್ನಯ್ಯನದೋ . . . .
[ತೋರುತ್ತಾನೆ.]

[ಎದ್ದು ಬರುತ್ತಿದ್ದಾ ಹೊಸ ತೇಜಸ್ಷಿನಿಂದ ಹೊಳೆಯುತ್ತಿದ್ದಾ ಬ್ರಾಹ್ಮಣನನ್ನು ನೋಡಿ ಕುಮಾರನುತಾತ! ತಾತ! ” ಎನ್ನುತ್ತಾ ಓಡಿಹೋಗಿ ತಬ್ಬಿಕೊಳುತ್ತಾನೆ. ಮಾತಿಲ್ಲದ ಹರ್ಷದಿಂದ ಕಣ್ಣಿರುಡುತ್ತಾ ಬ್ರಾಹ್ಮಣನು ಮಗನನ್ನು ರಾಮನಡೆಗೆ ಕರೆತರುತ್ತಾನೆ.]

ಬ್ರಾಹ್ಮಣ
[ಎವೆಯಿಕ್ಕದೆ ಶ್ರೀರಾಮನ್ನೆ ನೋಡುತ್ತಾ ತುಸು ಹೊತ್ತು ನಿಂತು, ತೆಕ್ಕನೆ]
ಕೈಮುಗಿ, ಕಂದಾ, ಸೀತಾಪತಿಗೆ.
ರಾಜರಾಜೆಂದ್ರಂಗೆ! ಶ್ರೀರಾಮಚಂದ್ರಂಗೆ!
ನಮ್ಮೀರ್ವರುಮನ್‌ ಪೊರೆದಂಗೆ!

[ಕುಮಾರನು ಹಿಗ್ಗಿ ಕೈಮುಗಿಯುತ್ತಾನೆ. ಶ್ರೀರಾಮನು ಅವನನ್ನೆತ್ತಿ ಮುದ್ದಾಡಿ, ಶಂಬೂಕ ಋಷಿಯನ್ನು ತೋರಿಸುತ್ತಾನೆ.]

ಶ್ರೀರಾಮ
ನಮಸ್ಕರಿಸಾ ಮಹಾತಪಸ್ವಿಗೆ, ದ್ವಿಜಕುಮಾರ.
ಋಷಿಕೃಪೆಯಿಂ ನೀನೀಗಳ್‌ ದಿಟದಿಂ ದ್ವಿಜನ್‌.
ತಪಂ ತಾನಿರ್ಪೆಡೆಯೊಳೆ ದೂರಕರ್ಮಿ!
[ಕುಮಾರನು ಕೈಮುಗಿಯುತ್ತಾನೆ.]
ನಿನ್ನ ಕೈಗಳೆ ನಿನ್ನನೆತ್ತಿರ್ಪೆನ್ನ ಕೈಗಳಕ್ಕೆ!
ಅಖಿಲರ್ಗಂ ಶ್ರೇಯಮಕೆ!
ರಾಜ್ಯಂ ನಿರ್ವಿಘ್ನಮಕ್ಕೆ! ಋತಂ ಗೆಲ್ಗೆ!

(ಕುಮಾರನಂತೆ ಬ್ರಾಹ್ಮಣನೂ ಕೈಮುಗಿಯುತ್ತಾನೆ. ಶಂಬೂಕಋಷಿಯನ್ನು ಸುತ್ತಿಮುತ್ತಿದ್ದ ಹೊದೆಯ ಹಳು ಅಲುಗುತ್ತದೆ. ತೋಳ್ಗಳೆರಡು ಹೊರದೋರಿ ಒಯ್ಯನೆ ಆಶೀರ್ವಾದ ಮುದ್ರೆಯಲ್ಲಿ ಸ್ಥಾಯಿಯಾಗುತ್ತದೆ. ದೇವವೀಣಾ ಗಾನವು ವಾಯುಮಂಡಲವನ್ನೆಲ್ಲ ತುಂಬುತ್ತದೆ. ಪುಷ್ಪವೃಷ್ಟಿಯಾಗಿ ಆ ವೃಷ್ಟಿ ಧಾರೆಯ ನೆಯ್ದ ಜವನಿಕೆಯೆಂಬಂತೆ ದೃಶ್ಯದ ಮೇಲೆ ತೆರೆ ಬೀಳುತ್ತದೆ.)