ಮೂರು ವರ್ಷಗಳ ಹಿಂದೆ ಈ ದೃಶ್ಯಕೃತಿ ಪ್ರಕಟವಾದಾಗ ವಾಚಕ ವರ್ಗದ ಹೃದಯಾಕಾಶದಲ್ಲಿ ಗಾಳಿಯೆದ್ದು ಮೋಡ ಕವಿದು ಗುಡುಗು ಮಿಂಚಾಡಿದಾ ಕ್ಷೋಭೆ ಅಂದಿನ ಪತ್ರಿಕಾ ಸರೋವರಳಗಲ್ಲಿ ಪ್ರತಿಫಲಿತವಾಗಿತ್ತು ಗಣ್ಯರು ಗಣ್ಯರಲ್ಲದವರು ಅಲ್ಪಗಣ್ಯರು ಎಲ್ಲರೂ ತಮತಮಗೆ ತೋಚಿದುದನ್ನು ತೋಚಿದಂತೆ ಅವಸರವಸರವಾಗಿ ಉದ್ರೇಕಪೂರ್ಣವಾಗಿ ಬರೆದರು. ಕೆಲವರ ಬರವಣಿಗೆ “ಅಸೂಯಾಸದನನ್ ಸುಖ ದೂರನ್. ಅವನ ಮಾತೇಕಿದರೊಳ್?” ಎಂಬ ಹರಿಹರನ ಕಾವ್ಯೋಕ್ತಿಯನ್ನು ಮನಸ್ಸಿಗೆ ತರುವಂತಿದ್ದರೆ, ಮತ್ತೆ ಕೆಲವರದು.

“ಕ್ಷುದ್ರಂಗೆ ಸಕಲ ಸುಜನೋ
ಪದ್ರವರೂಪಂಗೆ ಪರರ ಕಾವ್ಯಾರ್ಥಮುಮಂ
ಛಿದ್ರಿಸುವಂಗತಿ ಶಬ್ದ ದ
ರಿದ್ರಂಗಕ್ಯುಮೆ ನವೀನ ಕಾವ್ಯಾರಂಭಂ”

“ಒಳಗೆರೆಯದೆ ಸತ್ಕಾವ್ಯದ
ಕಳೆಯರೆಯದೆ ಲಘುತರತ್ವದಿಂ ನಾಲ್ಕೆರಡಾ
ಯ್ಯುಳಿ ಮಾತಾಡಿ ನೆರೆ ಹೆ
ಕ್ಕಳ ಮಿಕ್ಕಿದೊಡೊಲ್ವರೇ ಕವೀಂದ್ರಾಭರಣರ್.”

ಎಂಬ ಹಳಸನ್ನೂ ಹೊಸತು ಮಾಡಿಸುವಂತಿತ್ತು.

ಆ ಉದ್ರೇಕಕ್ಕೆ ಮೂಲಕಾರಣ ಈ ಕೃತಿ ಜಾತಿಮಾತ್ಸರ್ಯದಿಂದ ಪ್ರೇರಿತವಾದ ಮೂದಲಿಕೆ ಎಂಬ ಅಜ್ಞ ಭಾವನೆ. ಆ ಭಾವನೆ ತೆಗಳಿಕೆಗೆ ಮಾತ್ರವಲ್ಲದೆ ಹೋಗಳಿಕೆಗೂ ಕಾರಣವಾಯಿತೆಂಬುದನ್ನು ನೆನೆದರೆ ವಿಷಾದವಾಗುತ್ತದೆ.** ಅಂತಹ ಪೂರ್ವಗ್ರಹ ಮತ್ತು ಪಕ್ಷಪಾತಗಳ ದೆಸೆಯಿಂದ ಕೃತಿಕಾರನ ಮುಖ್ಯಾಶಯ, ರಸಪ್ರಯೋಜನ ಶೀಲವಾದ ಸತ್ಯಬೋಧನ, ತತ್ಕಾಲಕ್ಕಾದರೂ ವ್ಯರ್ಥವಾಯಿತೆಂದು ತೋರುತ್ತದೆ. ಅ ಅಪಭಾವನೆ ತಾತ್ಕಾಲಿಕ ಎಂಬ ನಂಬುಗೆಯಿಲ್ಲದಿದ್ದರೆ ಈ ಮಾರ್ನುಡಿ ಹೊರಹೊಮ್ಮುತ್ತಿರಲಿಲ್ಲ.

ಎಲ್ಲರ ವಿಮರ್ಶೆಗಳನ್ನಾಗಲಿ ವಿಮರ್ಶೆಯ ಎಲ್ಲ ಮುಖಗಳನ್ನಾಗಲಿ ಗಮನಿಸಿ ಸಮಾಧಾನ ಹೇಳುವುದು ಪ್ರಕೃತ ಲೇಖನದ ಉದ್ದೇಶವಲ್ಲ. ಒಂದು ವಿಮರ್ಶೆಯನ್ನು ಮಾತ್ರ ಮಾದರಿಯಾಗಿಟ್ಟುಕೊಂಡು ಅಲ್ಲಿ ಬರುವ ಪ್ರಾತಿನಿಧಿಕವಾದ ಟೀಕೆಗಳಿಗೆ ಉಚಿತವೆಂದು ತೋರಬಹುದಾದ ಉತ್ತರಗಳನ್ನು ಸಂಗ್ರಹವಾಗಿ ಸೂಚಿಸಿದರೆ ಸಾಕೆಂದು ತೋರುತ್ತದೆ.

೧೯೪೪ ಜುಲೈ ತಿಂಗಳ “ಜೀವನ” ಮಾಸಪತ್ರಿಕೆಯಲ್ಲಿ ಕಾವ್ಯಾವಲೋಕನ ಎಂಬ ಹೆಸರಿನಲ್ಲಿ ಮಾ.ವೆಂ.ಅ.ರವರು ತಮ್ಮ ಅಭಿಪ್ರಾಯ ಸಮೂಹ ಮಾತ್ರ ಎನ್ನಬಹುದಾದ ವಿಮರ್ಶನ ಲೇಖನವನ್ನು ಬರೆದಿದ್ದಾರೆ. ಏತಕ್ಕೆ ಅಭಿಪ್ರಾಯ ಸಮೂಹ ಎನ್ನುವುದು ಎಂದರೆ ಅಲ್ಲಿಯ ಟೀಕೆಗಳಿಗೆ ಸಾಧಾರವಾದ ಕಾರಣಗಳನ್ನು ಹೇಳಿ ನಿದರ್ಶನಗಳನ್ನು ಕೊಡಲು, ಸ್ಥಳಾಭಾವದಿಂದ ಇರಬಹುದು, ಸಾಧ್ಯವಾಗಿಲ್ಲ. ಉದಾಹರಣೆಗಾಗಿ ಈ ಮಾತುಗಳನ್ನು ತೆಗೆದುಕೊಳ್ಳಬಹುದು:

“ಭೈರವ ಮೃತ್ಯುಗಳ ಸಂಭಾಷಣೆ ಶಂಬೂಕನು ಎಷ್ಟು ಮಹಿಮಾವಂತನೆಂಬುದನ್ನು ತೋರಿಸುತ್ತದೆ. ಆದರೆ ಮಾತು ಅಲ್ಲಲ್ಲಿ ಇಂತಹ ದಿವ್ಯತತ್ವಗಳ ಹಿರಿತನಕ್ಕೆ ಅವಶ್ಯವಕವಾದ ಗಾಂಭೀರ್ಯದಿಂದ ತಪ್ಪುತ್ತದೆ.”

ಈ ಉಕ್ತಿ ಚರ್ಚಾಸ್ಪದವಾಗುತ್ತದೆ. ಸಾವಿನಂತಹ ದಿವ್ಯತತ್ವವನ್ನು “ಯಮ” ಎಂದು ಕರೆದಾಗ ಸಂವಾದದ ಮಟ್ಟ ಎಂತಿರಬೇಕು? “ಮೃತ್ಯು” ಎಂದು ಕರೆದಾಗ ಹೇಗಿರಬೇಕು? ಅದರಲ್ಲಿಯೂ ದುರ್ಮೃತ್ಯುವಾಗಿರುವಾಗ! ಅಲ್ಲಿ ಪುಲ್ಲಿಂಗದ ಔಚಿತ್ಯವೇನು? ಇಲ್ಲಿ ಸ್ತ್ರೀಲಿಂಗದ ಔಚಿತ್ಯವೇನು? “ಯಮನಸೋಲು” ನಾಟಕದಲ್ಲಿ ಯಮನ ಪಾತ್ರವನ್ನು ಜಗದ ಧರ್ಮಾಧಿಕಾರಿಯೆಂದೂ ಋತದ ಕಿಂಕರನೆಂದೂ ಚಿತ್ರಿಸಿ, ಅದಕ್ಕುಚಿತವಾದ ನಡೆನುಡಿಗಳನ್ನು ಅಳವಡಿಸಿದ ಕವಿಪ್ರತಿಭೆಗೆ “ದುರ್ಮೃತ್ಯು”ವನ್ನು ಯಾವ ಪ್ರತಿಮೆಯಿಂದ ಚಿತ್ರಿಸಬೇಕೆಂಬ ವಿಚಾರದಲ್ಲಿ ವಾಗ್ದೇವಿ ಕೃಪಣೆಯಾಗಿಲ್ಲವೆಂದು ನನಗೆ ತೋರುತ್ತದೆ. ಆದಕಾರಣ ವಾಚಕರ ಸ್ವೀಯ ಆಲಸ್ಯದಿಂದಲೋ ಪ್ರಜ್ಞಾ ಪರಿಮಿತಿಯಿಂದಲೋ ಸಂಭವಿಸುವ ಅನಿವಾರ್ಯಕ್ಕೆ “ಅಭಿಪ್ರಾಯ ಮಾತ್ರ”ವೆಂದು ಹೆಸರಿಡುವುದೂ ಅನಿವಾರ್ಯವಾಗುತ್ತದೆ.

ಹಾಗೆಯೆ ಇನ್ನೊಂದು ಕಡೆ ಹೀಗಿದೆ ಅಭಿಪ್ರಾಯ: “ಅಪರಾಧ ಯಾವುದು ಎಂಬ ವಿಷಯದಲ್ಲಿ ಉತ್ತರಕಾಂಡದ ಭಾವನೆಗೂ ಈ ದೃಶ್ಯದ ಭಾವನೆಗೂ ಬಹಳ ಅಂತರವಿದೆ ಎಂಬುದನ್ನು ಹೇಳಬೇಕಾಗಿಲ್ಲ. ಉತ್ತರಕಾಂಡದ ಕಥೆಯಲ್ಲಿ ಪ್ರಕಟವಾಗುವ ಮನೋಧರ್ಮ ವರ್ಣವ್ಯವಸ್ಥೆಯನ್ನು ಕುರಿತ ಒಂದು ತೀವ್ರವಾದ ಶ್ರದ್ಧೆ. ಈ ಕಾವ್ಯದಲ್ಲಿ ಅದನ್ನು ಜಾತಿಗರ್ವಾಂಧತೆ ಎಂದು ವರ್ಣಿಸಿರುವುದು ಕಾಣುತ್ತದೆ.”

ಈ ಅಭಿಪ್ರಾಯಕ್ಕೆ ಪ್ರತ್ಯಭಿಪ್ರಾಯ ಇನ್ನೂ ಹೆಚ್ಚು ಸಕಾರಣವಾಗಿ ಹೀಗೆನ್ನಬಹುದು: “ಅವಿವೇಕ ‘ತೀವ್ರವಾದ ಶ್ರದ್ಧೆ’ಯಾದರೂ ಅವಿವೇಕವಾಗಿಯೆ ನಿಲ್ಲುತ್ತದೆ. ಆದ್ದರಿಂದ ತನ್ನ ಶ್ರದ್ಧಾಂಶದಲ್ಲಿ ಅಲ್ಲದಿದ್ದರೂ ಅವಿವೇಕಾಂಶದಲ್ಲಿ ತಿದ್ದು ಪಡೆಯಬೇಕಾದುದೇ ಅತ್ಯಂತ ಅಗತ್ಯ.” ಈ ದೃಶ್ಯದಲ್ಲಿ ನಡೆದಿರುವ ಕೆಲಸವೂ ಅದೇ: ಶ್ರದ್ಧೆಯ ಖಂಡನೆಯಲ್ಲ, ಅವಿವೇಕದ ತಿದ್ದುಪಡಿ.

ಮುಂದೆ ವಿಮರ್ಶಕರು ಈ ದೃಶ್ಯದ ಕೃತಿಕಾರನ ದೃಷ್ಟಿಯನ್ನೆ ಸಂಪೂರ್ಣವಾಗಿ ಒಪ್ಪಿ ಪ್ರತಿಪಾದಿಸುತ್ತಾ ಹೋಗಿ ಕೊನೆಯಲ್ಲಿ. “ಆದರೆ ಪೂಜ್ಯನಿಗೆ ನಮಸ್ಕಾರ ಮಾಡದಿದ್ದವನಿಗೆ ಸಾವು ಶಿಕ್ಷೆ ಎನ್ನುವುದು ಹಿಂದಣ ಕ್ರೌರ್ಯಕ್ಕೆ ಪ್ರತಿಯಾದ ಇನ್ನೊಂದು ಕ್ರೌರ್ಯವಾಗುತ್ತದೆ. ಜೊತೆಗೆ ತಂದೆಯ ಮಾತಿನಂತೆ ನಡೆದು ಎಳೆಯನು ಹೀಗೆ ಸಾಯುವುದು ಅಪ್ಪ ಸೋರೆಗಾಯಿ ತಿಂದರೆ ಮಗನಿಗೆ ಹೊಟ್ಟೆನೋವು ಎಂಬ ನೀತಿಯಾಗುತ್ತದೆ.”

ಈ ಟೀಕೆ ತನಗೆ ತಾನೆ ಸತ್ಯವಾದರೂ ಪ್ರಕೃತ ದೃಶ್ಯಕಾವ್ಯಕ್ಕೆ ಸ್ವಲ್ಪವೂ ಅನ್ವಯವಾಗುವುದಿಲ್ಲ. ಎಕೆಂದರೆ ಇಲ್ಲಿ ಬ್ರಾಹ್ಮಣ ಕುಮಾರ ಸಾಯುವುದಿಲ್ಲ, ಅಲ್ಲಿ ಶಂಬೂಕನು ತೀರಿಕೊಂಡಂತೆ; ಕೊನೆಯಲ್ಲಿ ಬದುಕುತ್ತಾನೆ. ಶ್ರೀರಾಮಚಂದ್ರನೆ ಆಶ್ವಾಸನೆ ಕೊಟ್ಟಿದ್ದಾನೆ: “ಅಮೃತನಕ್ಕುಂ ನಿನ್ನೀ ಚಿರಂಜೀವಿ” ಎಂದು. ಅವನು ನಿಜವಾಗಿಯೂ ಸತ್ತಿದ್ದರೆ ‘ಅಪ್ಪ ಸೋರೆಗಾಯಿ ತಿಂದರೆ ಮಗನಿಗೆ ಹೊಟ್ಟೆನೋವು ಎಂಬ ನೀತಿ’ ಒಪ್ಪಾಗುತ್ತಿತ್ತು. ಅಲ್ಲದೆ ಸಾಯುವುದು ಸತ್ತವನಿಗೆ ಶಿಕ್ಷೆಯಾಗುವುದಕ್ಕಿಂತ ಸಮಧಿಕತರವಾಗಿ ಬದುಕಿ ದುಃಖಿಸುವವರಿಗೆ ಶಿಕ್ಷೆಯಾಗುತ್ತದಲ್ಲವೆ? ಆ ದೃಷ್ಟಿಯಿಂದ ಶಿಕ್ಷೆ ಬ್ರಾಹ್ಮಣನಿಗಲ್ಲದೆ ಅವನ ಮಗನಿಗೆ ಅನ್ವಿತವಾಗುವುದಿಲ್ಲ. ಅವನ ಜೀವನವನ್ನು ಸೆಳೆದ ಮೃತ್ಯು, ಧರ್ಮ ಸ್ಥಾಪನೆಯ ಸಲುವಾಗಿ, ಅಮೃತಕ್ಷೇತ್ರವಾದ ತಪೋವನದಿಂದ ಬಾಲಕನ ಜೀವವನ್ನು ಕೊಂಡೊಯ್ಯುವುದೂ ಇಲ್ಲ. ಇಲ್ಲಿ ವಾಚಕರು ಅಧರ್ಮ ಪರಿಹಾರವಾದೊಡನೆ ಮಲಗಿದ್ದವನು ಏಳುವಂತೆ ಎದ್ದು ಕಣ್ಣುಜ್ಜಿಕೊಂಡು, ಸುತ್ತಲೂ ನೋಡಿ ತನ್ನ ತಂದೆಯನ್ನು ಕರೆಯುವ ಕುಮಾರನ ಮಾತನ್ನು ಗಮನಿಸಬೇಕು: “ಹೂ ಕುಯ್ಯುತಿದ್ದವನ್‌ ಇಲ್ಲಿಯೆ ಮಲಗಿದನೆ? ―” ಹುಡುಗನಿಗೆ ಆ ಅನುಭವಕ್ಕಿಂತ ಹೆಚ್ಚಿನ ಯಾವ ಶಿಕ್ಷೆಯೂ ವೇದ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಪೂರ್ವೋಕ್ತ ವಿಮರ್ಶನೋಕ್ತಿ ಅಪ್ರಕೃತವಾಗುತ್ತದೆ. ಈ ದೃಶ್ಯದ ಉದ್ದೇಶ ಒಟ್ಟಿನಲ್ಲಿ ಶಿಕ್ಷೆಯೂ ಅಲ್ಲ, ಕ್ರೌರ್ಯವೂ ಅಲ್ಲ. “ಈ ಶಾಠ್ಯ ಮೂರ್ಖಂಗೆಂತೊ ಬುದ್ಧಿ ಗಲಿಪೆನ್‌?” ಎಂಬುದೂ ಶ್ರೀರಾಮನ ಆಶಯ.

ಮುಂದಿನ ವಿಮರ್ಶೆಯಂತೂ ಸಂಪೂರ್ಣವಾದ ದೃಷ್ಟಿವೈಪರೀತ್ಯದಿಂದ ಕಲುಷಿತವಾಗಿ ಅನೌದಾರ್ಯಸ್ಪೃಶವಾಗುವಂತಿದೆ:

“ಈಗ ನಮಗೆ ಬೇಕಾಗಿರುವುದು, ಅಂದು ಒಂದು ಜಾತಿಯ ಹೆಸರಿನಲ್ಲಾದ ತಪ್ಪಿಗೆ ಇಂದು ಇನ್ನೊಂದು ಜಾತಿಯ ಹೆಸರಿನಲ್ಲಿ ಬದಲ ತಪ್ಪಲ್ಲ; ಆ ತಪ್ಪನ್ನು ತಿದ್ದಿ ಔದಾರ್ಯ ಅಲ್ಲದೆ, ಹೊಸ ತಪ್ಪು ಶಿಕ್ಷೆಯನ್ನು ಪ್ರತಿಪಾದಿಸುವುದರಲ್ಲಿ (ಇಲ್ಲಿ ಅರ್ಥ ಅಸುಷ್ಠುವಾಗಿರುವುದರಿಂದ ಏನಾದರೂ ಅಚ್ಚಿನ ತಪ್ಪಿದ್ದರೂ ಇರಬಹುದು) ಕವಿ ಬ್ರಾಹ್ಮಣನನ್ನು ಅನಾವಶ್ಯಕವಾಗಿ ಅವಿವೇಕಿಯನ್ನಾಗಿ ಮಾಡಿದ್ದಾರೆ. ಹಾಗೆಯೆ ರಾಮಚಂದ್ರನನ್ನು ಈ ಬ್ರಾಹ್ಮಣನೊಂದಿಗೆ ವ್ಯಂಗ್ಯವಾಡುವ, ಶೂದ್ರ ತಪಸ್ವಿಗೆ ಯಾವುದೋ ವ್ಯಾಜದಿಂದ ಕೈಮುಗಿಯುವ, ಮಿತ್ರನಂತೆ ನಟಿಸುತ್ತ ಬ್ರಾಹ್ಮಣನ ಕುತ್ತಿಗೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಒಬ್ಬ ಅಧೀರ ಅನುದಾತ್ತ ನಾಯಕನಾಗಿ ಮಾಡಿದ್ದಾರೆ.”

ಈ ವಿಮರ್ಶೆ ಪ್ರತ್ಯತ್ತರಕ್ಕೂ ಯೋಗ್ಯವಲ್ಲದಷ್ಟು ಅಪ್ರಾಜ್ಞವಾಗಿದೆ. ಇದು ಎಚ್ಚರಿಕೆಯಿಂದ ಓದಿಕೊಳ್ಳದ ಪ್ರಮಾದದಿಂದ ಉಂಟಾದುದೆಂದು ಭಾವಿಸುತ್ತೇನೆ. ಕಾವ್ಯದ ಧ್ವನಿಶಕ್ತಿಯ ವಿಧಾನದ ಅಪಾರ್ಥಪ್ರತಿಪಾದನೆಯೆ ಇಲ್ಲಿ ಮೂರ್ತಿಮತ್ತಾದಂತಿದೆ. ಓದಬೇಕಾದ ಧ್ವನಿಯಲ್ಲಿ ಓದಿಸಿ ಕೇಳಿದರೆ ಇಂತಹ ದೃಷ್ಟಿಯ ವಕ್ರತೆ ಋಜುವಾತಾಗುತ್ತದೆಂದು ಭರವಸೆ ಕೊಡುತ್ತೇನೆ. ಏಕೆಂದರೆ ವಾಸ್ತವವಾಗಿ ಇಲ್ಲಿ ಬ್ರಾಹ್ಮಣ ಕೊನೆಗೆ ವಿವೇಕಿಯಾಗಿ ಬೆಳಕು ಕಂಡು ಬೆಳಗುತ್ತಾನೆ. ಶ್ರೀರಾಮನೂ ಇಂಗಿತವಾದ ವಾಕ್‌ ಮತ್ತು ಕ್ರಿಯಾರೀತಿಗಳಿಂದ ಬ್ರಾಹ್ಮಣನ ಆತ್ಮಪ್ರಜ್ಞೆಯ ಬೋಧವನ್ನು ಎಚ್ಚರಗೊಳಿಸಿ ತಿದ್ದುವ ಅತ್ಯಂತ ಮಹೋದಾತ್ತ ವ್ಯಕ್ತಿಯಾಗಿ ಅಂತರ್ಯಾಮಿ ಶಕ್ತಿಯಾಗಿ ನಿಲ್ಲುತ್ತಾನೆ.

ಟೀಕೆ ಕೊಂಚ ಕಾಲುಜಾರಿತೆಂಬ ಭಾವನೆಯಿಂದಲೋ ಏನೋ ಮಿವರ್ಶಕರು ಕವಿಯ ಬೆನ್ನು ಸವರಿ ಅವನಿಗೆ ಧೈರ್ಯ ಹೇಳುವಂತೆ “ಇದರ ಹೊಣೆಯೆಲ್ಲ ಕವಿಯದಲ್ಲ. ಇದರ ಬಹುಭಾಗ ಮೂಲಭಾಗದಲ್ಲಿ ಅನಿವಾರ್ಯವಾದು”ದೆಂದು ಉಪಚಾರ ನುಡಿದಿದ್ದಾರೆ. ಆದರೆ ಅದೂ ಹುಸಿ ಮತ್ತು ಅನಾವಶ್ಯಕ. ಏಕೆಂದರೆ ಈ ಕೃತಿಯ ಸಂಪೂರ್ಣವಾದ ಹೊಣೆ ಕೃತಿಕಾರನಿಗೆ ಸೇರಿದ್ದೆ. ಹೇಗೆಂದರೆ, ಮೂಲದ ಕಥೆ ನಿಮಿತ್ತ ಮಾತ್ರವಾದುದು. ಕವಿಗದು “ಸೇರ”ದಿದ್ದರೆ ಅದರ ಗೋಜಿಗೆ ಹೋಗುತ್ತಲೆ ಇರಲಿಲ್ಲ. ಯಾವುದಾದರೂ ಅಂಶ ಸೇರದಿದ್ದರೆ ಅದನ್ನು ತನ್ನ ಇಚ್ಚೆಗೆ ಅದೀನವಾಗುವಂತೆ ಬದಲಾಯಿಸುವ ನಿಯತಿಕೃತ ನಿಯಮರಹಿತವಾದ ಸ್ವಾತಂತ್ರ್ಯ ಕವಿಯ ನಿರಂಕುಶಮತಿಯ ಹುಟ್ಟು ಹಕ್ಕಾಗಿದೆ. ಆದ್ದರಿಂದ ವಿಮರ್ಶಕನ ಕರ್ತವ್ಯ ಕಥಾಪ್ರತಿಮೆಯಲ್ಲಿ ಧ್ವನಿತವಾಗುವ ಕವಿಯ ‘ದರ್ಶನ’ವನ್ನು ತಿಳಿಯುವುದಾಗಿರಬೇಕೇ ಹೊರತು ತನ್ನ ಅಪ್ರಕೃತಾಶಯದ ಮಾನದಂಡದಿಂದ ಅದನ್ನು ಅಳೆಯ ಹೋಗುವುದಲ್ಲ ಎಂಬುದನ್ನು ಸೂಚಿಸಬಯಸುತ್ತೇನೆ.

“ತನ್ನ ಮಗ ಹೋದ ತಪ್ಪನ್ನು ರಾಜನಲ್ಲಿ ಆರೋಪಿಸುವ ಬ್ರಾಹ್ಮಣ ಎಷ್ಟು ತೊಳೆದರೂ ಕಪ್ಪಾಗಿಯೇ ನಿಲ್ಲಬೇಕು.” ಎನ್ನುತ್ತಾರೆ ವಿಮರ್ಶಕರು. ಅದು ಹೇಗೆ? ಅವನೇನು ತೆನ್ನಾಲಿ ರಾಮಕೃಷ್ಣನ ಕರಿನಾಯಿಯೆ? ಆ ಟೀಕೆಯ ಮಿಥ್ಯೆ ಈ ಕೃತಿಯನ್ನು ಗಮನವಿಟ್ಟು ಓದುವವರಿಗೆಲ್ಲ ಸ್ವಸುವೇಧ್ಯವಾಗುತ್ತದೆ. ಏಕೆಂದರೆ ಬ್ರಾಹ್ಮಣನು ತುದಿಯಲ್ಲಿ ಕಾಳಿಕೆ ಕಳೆದ ಹೊನ್ನಿನಂತೆ ಹೊಸ ತೇಜಸ್ಷಿನಿಂದ ಹೊಳೆಯುತ್ತಾನೆ. ನಿಜವಾಗಿಯೂ ಬ್ರಾಹ್ಮಣನಾಗುತ್ತಾನೆ. “ಬ್ರಾಹ್ಮಣೇತರ” ಕವಿ ತನ್ನ ಕಲಾಕೃತಿಯಲ್ಲಿ “ಬ್ರಾಹ್ಮಣ ದ್ವೇಷ”ದಿಂದ ಪ್ರೇರಿತನಾಗಿದ್ದರೆ ಅವನನ್ನು ವಿಮರ್ಶಕರ ಅಭಿಪ್ರಾಯಕ್ಕಿಂತಲೂ ಘನತರವಾದ ಕಪ್ಪು ಬಣ್ಣದಿಂದ ಚಿತ್ರಿಸಬೇಕಾಗಿತ್ತಲ್ಲವೆ? ಆದರೆ ಈ ಕೃತಿಯ ಉದ್ದೇಶ ತಾತ್ಕಾಲಿಕವಾದ ಹೊಟ್ಟೆಪಾಡಿನ ಕಚ್ಚಾಟದಲ್ಲಿ ಭಾಗವಹಿಸುವುದಲ್ಲ; ಚಿರಕಾಲದ ನಿತ್ಯಸತ್ಯಗಳನ್ನೂ ಶಾಶ್ವತವಾದ ರಸಾನುಭೂತಿಯನ್ನೂ ಸಹೃದಯರಿಗೆ ದಾನಮಾಡಿ, ಅವರನ್ನು ಜಾತಿ ಕುಲ ಧನ ಕ್ರಿಯಾದಿ ಭೇಧವಿಲ್ಲದೆ ರಸಸುಖಿಗಳನ್ನಾಗಿ ಮಾಡುವುದು.

ಇನ್ನು “ಇಂತಹ ತಪ್ಪು ತಿಳಿವಳಿಕೆ ರಾಜ್ಯದಲ್ಲಿ ವ್ಯವಹಾರದಲ್ಲಿರಬೇಕಾದರೆ ಅದನ್ನು ತಿದ್ದುವ ಯತ್ನ ಮಾಡದೆ (ಈ ದೃಶ್ಯದಲ್ಲಿ ಶ್ರೀರಾಮನು ಮಾಡಿರುವುದು ಮತ್ತಾವ ಯತ್ನವೊ?) ತಾನು ಕಂಡ ಸತ್ಯವನ್ನು ತನ್ನ ನಡತೆಯಲ್ಲಿ ಮಾತ್ರ ಬಳಸುತ್ತಿರುವ ರಾಜ ಅಧೀರನು ಅನುದಾತ್ತನೂ ಆಗದೆ ವಿಧಿಯಿಲ್ಲ” ಎಂಬ ಮಾತೂ, “ಈ ದೃಶ್ಯದಲ್ಲಿಯ ಕಲ್ಪನೆ ಒಟ್ಟಿನಲ್ಲಿ ಓದುವವರ ಮನಸ್ಸಿನಲ್ಲಿ ಅತೃಪ್ತಿಯನ್ನು (ಜಾತಿಮಾತ್ಸರ್ಯ ಕಾರಣವಾಗಿಯೇ ಎಂಬ ಪ್ರಶ್ನೆ ಮೂಡುತ್ತದೆ) ಉಂಟುಮಾಡುತ್ತದೆ.” ಎಂಬದೂ ವಿಮರ್ಶಕರ ಸ್ವಂತ ಕಾರಣಕ್ಕಾಗಿ ನೊಂದ ಮನಸ್ಸಿನ ಉದ್ರೇಕದ ಅಭಿಪ್ರಾಯಗಳೆಂದು ಭಾವಿಸಬೇಕಾಗುತ್ತದೆ. ಏಕೆಂದರೆ ಈ ಲೇಖಕನ ಕಣ್ಣಿಗೂ ಕಿವಿಗೂ ಬೇರೆಯ ತರಹದ ತೀರ ಭಿನ್ನವಾದ ಅಭಿಪ್ರಾಯಗಳೂ ಬಿದ್ದಿವೆ.

ವಿಮರ್ಶಕರ ಇನ್ನೊಂದು ಟೀಕೆ ಸಾಹಿತ್ಯ ರಚನಾಮೀಮಾಂಸೆಗೆ ಸಂಬಂಧಪಟ್ಟದ್ದು: “ವಕ್ರ ದೃಷ್ಟಿಯ ಹಿಂದಿನ ಕಥೆಯನ್ನು ತಿದ್ದುವೆವೆಂದು ಹೋಗುವುದು ಬೇರೆಯವರು ಹಾಕಿದ ನೆಲಗಟ್ಟಿನ ಮೇಲೆ ನಮ್ಮ ಮನಸ್ಸಿಗೆ ಒಪ್ಪುವ ಭವನವನ್ನು ಕಟ್ಟುವೆವೆನ್ನುವ ಪ್ರಯತ್ನದಂತೆ. ಇಂದು ನಾವು ಏನು ಮಾಡಿದರೂ ಹಿಂದಿನ ಗೀರು ಇದ್ದೇ ಇರುತ್ತದೆ. ಹೊಸಕಾಲದ ಧರ್ಮವನ್ನು ಹೇಳುವುದಕ್ಕೆ ಹೊಸ ಕಥಯನ್ನೇ ಹೇಳುವುದು ಕ್ಷೇಮ ಎಂದು ನಾನು ಶ್ರೀ ಪುಟ್ಟಪನವರಿಗೆ ಸೂಚಿಸುತ್ತೇನೆ.”***

ಈ ಟೀಕೆ ಮತ್ತು ಸೂಚನೆ ಅತ್ಯಂತ ಆಶ್ಚರ್ಯಕರವೂ ಹಾಸ್ಯಾಸ್ಪದವೂ ಆಗಿ ತೋರುತ್ತದೆ. ‘ಅತ್ತ ಪುಲಿ ಇತ್ತ ದರಿ!’ ಹೊಸ ಕಾಲದ ಹೊಸ ಧರ್ಮವನ್ನು ಹೇಳಲು ಹೊಸ ಕಥೆಯನ್ನು ಕಟ್ಟಿದರೆ ಸಜೀವವಾದ ಜಾತಿವಿದ್ವೇಷದ ಉದ್ರೇಕಭೂತಗಳನ್ನು ಎಬ್ಬಿಸುತ್ತದೆ. ಆ ಸ್ಥಳದವರೂ ಈ ಮಠದವರೂ ಆ ಜಾತಿಯವರೂ ಈ ಕೋಮಿನವರೂ ಕೋರ್ಟಿಗೆ ಹೋಗುತ್ತೇವೆ ಎನ್ನುತ್ತಾರೆ. ಆ ರಗಳೆಯೆ ಬೇಡವೆಂದು ಹಳೆಯ ಕಥೆಗಳನ್ನು ಅಳವಡಿಸಿಕೊಂಡರೆ ವಿಮರ್ಶಕರು ನಮ್ಮ “ಕ್ಷೇಮ”ದ ವಿಚಾರವಾಗಿ ಕಾತರರಾಗಿ ಸೂಚನೆ ಕೊಡಹೋಗುತ್ತಾರೆ. ಎಂತಹ ವಿಚಿತ್ರ ಸನ್ನಿವೇಶ-ಸಾಹಿತ್ಯದ ಸಮಾಧಿಗೆ! ಅದಿರಲಿ. ಈ ದೃಶ್ಯಲ್ಲಿರುವುದೇನೂ ಹೊಸದಾದ ತತ್ವವಲ್ಲ. ಅತ್ಯಂತ ಪ್ರಾಚೀನವಾದುದು, ನಿತ್ಯವಾದುದು, ಅನಾದಿಯಾದುದು. ತಪಸ್ಸು ಶಕ್ತಿಯುಕ್ತವಾದುದು, “ತಪಂ ಪೂಜ್ಯಕರ್ಮಂ” “ತಪಕ್ಕೆಣೆಯುಂಟೆ?” “ತಪಂ ತಾನಿರ್ಪೆಡೆಯೊಳೆ ದೂರ ಕರ್ಮಿ” ಮೊದಲಾದ ತತ್ವಗಳು ನಿತ್ಯ ಸತ್ಯಗಳು. ಆದ್ದರಿಂದ ಹೊಸ ತತ್ವದ ಮಾತೆತ್ತುವುದು ಭ್ರಾಂತಿ.

ಅಲ್ಲದೆ ಹಳೆಯ ಕಥೆಯನ್ನು ಹೊಸಸಾಹಿತಿ ತನ್ನ ಕೃತಿಗೆ ತನ್ನಿಷ್ಟದಂತೆ ಉಪಯೋಗಿಸಿಕೊಳ್ಳುವ ಪದ್ಧತಿಯೂ ಮಹಾಕವಿ ಸಂಪ್ರದಾಯ ಸಿದ್ಧವಾದುದು. ನಾನು ತಪ್ಪಿದ್ದರೂ ಕಾಳಿದಾಸ, ಭಾಸ, ಪಂಪ, ಕುಮಾರವ್ಯಾಸಾದಿಗಳೊಡನೆ ತಪ್ಪಿದ್ದೇನೆ. ಮಹಿಮರೊಡನೆ ತಪ್ಪಿದರೆ ಆ ತಪ್ಪು ನನಗೊಪ್ಪು. “ಸತ್ಸಂಗಜಾನಿ ನಿಧನಾನ್ಯಪಿ ತಾರಯಂತಿ” ಎಂದಿಲ್ಲವೆ ಭವಭೂತಿ.****

ಇಲ್ಲ, ಅದೆಂದಿಗೂ ತಪ್ಪಲ್ಲ, ಉತ್ತಮ ವಿಮರ್ಶೆ ಅದನ್ನಾವಗಲೂ ಶ್ಲಾಘಿಸಿದೆ. ಹಿಂದೊಮ್ಮೆ ಈ ವಿಮರ್ಶೆಯ ಲೇಖಕರೇ ಗಯಟೆಯ ಮಾತುಗಳಲ್ಲಿ ಅದನ್ನು ಸಮರ್ಥಿಸಿದ್ದಾರೆಂದು ನನ್ನ ನೆನಪು. ಹೇಗೂ ಆಗಲಿ. ನನ್ನ ಕ್ಷೇಮದ ವಿಚಾರವಾಗಿ ಕಾತರರಾಗಿರುವ ಹಿರಿಯರಿಗೆ ಕೃತಜ್ಞನಾದರೂ ಅವರ ಈ ಸೂಚನೆಯನ್ನು ಸ್ಚೀಕರಿಸುವ  ಸ್ಥಿತಿಯಿಂದ ನಾನು ಬಹುದೂರ ಮುಂದುವರಿದಾಗಿದೆ ಎಂದು ವಿನಯದಿಂದ ಸೂಚಿಸುತ್ತೇನೆ. ಕಾರಣ, ಹತ್ತು ಹನ್ನೆರಡು ವರ್ಷಗಳ ಹಿಂದೆಯೆ ಹಳೆಯ ಕಥೆಯಾದ ರಾಮಾಯಣವನ್ನು ನನ್ನ ಮಹಾಕಾವ್ಯದ ಭಗವದ್ ವಿಷಯವನ್ನಾಗಿ ಅರಿಸಿಕೊಂಡು, ನಿತ್ಯ ಸತ್ಯಗಳ ದೃಷ್ಟಿಯಿಂದ ಸರಿಯೆಂದು ಸರಸ್ವತಿ ನನಗೆ ತೋರಿಸಿದ ಮಾರ್ಗದಲ್ಲಿ  ಬದಲಾವಣೆ ಮಾಡಿಕೊಂಡು, ಗುರುಕೃಪೆಯಿಂದ ಹಾಡಿ ಮುಗಿಸಿಬಿಟ್ಟಿದ್ದೇನೆ. ಅಲ್ಲದೆ ವಿಮರ್ಶಕರ ಸೂಚನೆಯಂತೆ ನಡೆದುಕೊಂಡಿದ್ದರೆ “ಬೆರಳ್ಗೆ ಕೊರಳ್” ಹುಟ್ಟುತ್ತಿರಲಿಲ್ಲ; “ಯಮನ ಸೋಲು” “ಸ್ಮಶಾನ ಕುರುಕ್ಷೇತ್ರಂ” “ವಾಲ್ಮೀಕಿಯ ಭಾಗ್ಯ” ಎಲ್ಲವನ್ನೂ ಇಲ್ಲಗೈಬೇಕಾಗುತ್ತಿತ್ತು.

ಪುರಾಣಗಳನ್ನು ಪ್ರತಿಮಾ ದೃಷ್ಟಿಯಿಂದ ನೋಡದೆ ಪ್ರತಿಕೃತಿಯ ದೃಷ್ಟಿಯಿಂದ ನೋಡಿದರೆ ಈ ತರಹದ ಅನರ್ಥ ವಿಮರ್ಶೆ ಸಿದ್ಧವಾಗುತ್ತದೆ. ಪುರಾಣಗಳೆಂದರೆ ಸೂಕ್ಷ್ಮತರವಾದ ನಿತ್ಯಸತ್ಯಗಳಿಗೆ ಮಾನವಮತಿ ಕೆತ್ತಿರುವ ಸ್ಥೂಲವೂ ಸದೋಷವೂ ಆದ ಕಥಾಪ್ರತಿಮೆಗಳು. ಆದ್ದರಿಂದ ನಿತ್ಯಸತ್ಯಗಳಿಗೆ ಭಂಗಬಾರದಂತೆ ಆ ಕಥಾಪ್ರತಿಮೆಗಳನ್ನು ಆಯಾ ಕಾಲದ ಮನೋಧರ್ಮಕ್ಕನುಗುಣವಾಗಿ ತಮ್ಮ ತಮ್ಮ ಶಕ್ತಿ ಸಂಸ್ಕಾರ ಧೈರ್ಯ ದರ್ಶನಗಳ ಅಭಿವ್ಯಕ್ತಿಗೆ ಅನುಕೂಲವಾಗುವಂತೆ ಕವಿಗಳು ಮಾರ್ಪಡಿಸಿಕೊಂಡು ಸಾಹಿತ್ಯ ಸೃಷ್ಟಿಮಾಡುವುದು ಅತ್ಯಂತ ಅವಶ್ಯಕ ಎಂದು ಒತ್ತಿ ಹೇಳಬಯಸುತ್ತೇನೆ.

ಕೊನೆಯಲ್ಲಿ ಕೃತಿಯ ಛಂದಸ್ಸು ಭಾಷೆ ಇವುಗಳ ವಿಚಾರದಲ್ಲಿ ಒಂದೆರಡು ಟೀಕೆ ಮಾಡಿದ್ದಾರೆ. ಆ ಟೀಕೆಯಲ್ಲಿ ಅವರಿಗೆ ಅದಾವುದೂ ನನ್ನ ರೀತಿಯಲ್ಲಿ ಗ್ರಹಿಕೆಯಾಗಿಲ್ಲ ಎಂಬುದು ಮಾತ್ರ ಎದ್ದು ಕಾಣುತ್ತದೆ. ತಮ್ಮ ರೀತಿಯನ್ನೆ ನನ್ನಲ್ಲಿ ಕಾಣ ಬಯಸಿ ಆ ರೀತಿಯಿಂದ ಈ ರೀತಿಯನ್ನು ಅಳೆಯಹೋಗಿ ತಪ್ಪಿದ್ದಾರೆ. ನಮ್ಮಿಬ್ಬರ ರೀತಿಗಳು ಮೂಲತಃ ಬೇರೆ ಬೇರೆ. ಪರಿಹಾಸ್ಯ ಲವಲೇಶದ ಉದ್ದೇಶವೂ ಇಲ್ಲದೆ ನನ್ನ ಅಭಿಪ್ರಾಯ ಸ್ಪಷ್ಟೀಕರಣ ಮಾತ್ರಕ್ಕಾಗಿ ಹೇಳುವುದಾದರೆ, ಹಾರುವ ಹಕ್ಕಿ ಕುಪ್ಪಳಿಸುವ ಹಕ್ಕಿಯನ್ನಾಗಲಿ, ಕಾಂಗರು ಹರಿಣಚರಣ ವಿನ್ಯಾಸವನ್ನಾಗಲಿ ತಮ್ಮ ತಮ್ಮ ಗಮನ ಮಾನದಿಂದ ಪರಿಶೀಲಿಸಿದರೆ ಛಂಧೋನಿಯಮವೇನೂ ಇಲ್ಲದಂತೆಯೋ ಅಥವಾ ತಪ್ಪಿದಂತೆಯೋ ಕಾಣಬಹುದು. ಆದರೂ ಜಿಂಕೆ ಓಡಿದಾಗ, ಹಕ್ಕಿ ಹಾರಿದಾಗ ಅದರ ನೆಲಛಂದಸ್ಸು ಇದರ ಬಾನ್‌ಛಂದಸ್ಸು ಪ್ರತ್ಯಕ್ಷವಾಗಿ, ಮನಸ್ಸಿಗೆ ತೃಪ್ತಿಯಾಗುವುದರಲ್ಲಿ ಸಂದೇಹವಿಲ್ಲ.

ಕೊನೆಯದಾಗಿ ಮಿವರ್ಶಕರೇ ಹೇಳಿರುವ ಲೋಕೋತ್ತರವಾದ ಮಾತುಗಳನ್ನು ಮತ್ತೊಮ್ಮೆ ಇಲ್ಲಿ ಒತ್ತಿ ಹೇಳುತ್ತೇನೆ: “ಜಾತಿ ಕುಲದ ಮಾತು ಬಂದಾಗ ಮನಸ್ಸನ್ನು ಉದ್ರೇಕಕ್ಕೆ ಬಿಡದೆ ಸಮಾಧಾನದಿಂದ ಚರ್ಚಿಸುವ ಬಲುಮೆ ಸಮಾಜದ ಶ್ರೇಯಸ್ಸಿನ ಮುಖ್ಯ ಸಾಧನಗಳ್ಲಿ ಒಂದು” ಸಾಹಿತ್ಯದಲ್ಲಂತೂ ಅಂತಹ ಪಕ್ಷೋದ್ರೇಕ ನಿಜವಾಗಿ ಅನರ್ಥಕರ, ಹಾನಿಕರ, ರಸಭಂಗಕರ: ಕೃತಿಕಾರನ ಮೇಲೆ ಉಕ್ಕುವ ದ್ವೇಷಾಸೂಯೆಗಳಿಂದ ಕೃತಿಸಮಸ್ತವೂ ದ್ವೇಷಪೂರ್ಣ, ವಿಷಮಯ, ನೀರಸ, ಅಧಮ ಎಂಬಂತೆ ತೋರಿ, ಕಲೆಯ ಉದ್ದೇಶವೆ ಕೊಲೆಹೋಗುತ್ತದೆ. ಕನ್ನಡಕ್ಕೆ ಅಂತಹ ದುರ್ಗತಿ ಒದಗದಿರಲಿ.

ಕುವೆಂಪು
೨೪-೭-೧೯೪೭
ಮೈಸೂರು


** ಬ್ರಾಹ್ಮಣೇತರರಲ್ಲಿ ಕೆಲವರು ಕೃತಿಯ ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟುಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಆದನ್ನು ಸ್ತುತಿಸಿದರೆಂದು ಕೇಳಿದ್ದೇನೆ.

*** ಶ್ರೀಕಾರಂತರು ಬರೆದಿದ್ದರೆ? ಅಥವಾ ಶ್ರೀರಂಗರೋ ಶ್ರೀಗೊರೂರು ರಾಮಸ್ವಾಮಿ ಐಯಂಗಾರರೋ ಬರೆದಿದ್ದರೆ? ― ವಿಮರ್ಶಕರು ಕೃತಿಯ ಮೇಲೆ ಅಚ್ಚಾಗಿರುವ ಕೃತಿಕಾರನ ಕಾವ್ಯನಾಮವನ್ನು ಬಳಸಿದ್ದರೆ ಚೆನ್ನಾಗಿತ್ತು. ಬಹುಶಃ ಕವಿ ಬ್ರಾಹ್ಮಣೇತರ ಎಂಬರಿವಿನಿಂದ ಬ್ರಾಹ್ಮಣನಿಂದೆಗಾಗಿಯೋ ಕೊಚೋದ್ಯಕ್ಕಾಗಿಯೋ ಕೃತಿ ರಚಿತವಾಗಿದೆ ಎಂಬ ವಿಕೃತಭಾವನೆಯಿಂದ ವಿಮರ್ಶೆ ಕಲುಷಿತವಾಗುವುದು ತಪ್ಪುತ್ತಿತ್ತೇನೊ!

**** ನಮ್ಮ ದೇಶದಲ್ಲಿ ನಮ್ಮ ಪುರಾಣ ಕಥೆಗಳ ವಸ್ತುಸಂಗ್ರಹ ಶಾಲೆಯ ನಿರ್ಜೀವ ಪ್ರಾಣಿಗಳಂತಿಲ್ಲ. ಅವು ಸಜೀವಶಕ್ತಿಗಳಾಗಿ ನಮ್ಮ ಜನರ ನಂಬುಗೆ ಆಶೆ ಆಕಾಂಕ್ಷೆ ಸಂಸ್ಕೃತಿಗಳನ್ನು ಪೋಷಿಸುತ್ತಿವೆ. ಕ್ರೈಸ್ತ ಮತವನ್ನು ಒಪ್ಪಿಕೊಂಡಿರುವ ಇಂಗ್ಲೇಂಡಿನಲ್ಲಿ ಗ್ರೀಕ್‌ ಪುರಾಣಕಥೆ ಪೂಜ್ಯವಲ್ಲ; ಅಥವಾ ಹೋಮರ್ ವಾಲ್ಮೀಕಿಯಂತೆ ಮಹರ್ಷಿ ಅಲ್ಲ. ಅಲ್ಲಿರುವ ಕಥೆಗಳೆಂದಾಗಲಿ ಅಲ್ಲಿ ಬರುವ ವ್ಯಕ್ತಿಗಳ ನಡತೆಯಿಂದಾಗಲಿ ಇಂಗ್ಲೀಷ್‌ ಜನ ತಮ್ಮ ನಿತ್ಯಜೀವನದ ಮತೀಯ ಮತ್ತು ಸಾಮಾಜಿಕ ಚೇಷ್ಟಿತಗಳನ್ನು ನಿರ್ಣಯಿಸುವ ಅಂಧಶ್ರದ್ಧೆಗೆ ಶರಣಾಗುವುದಿಲ್ಲ. ಆದರೆ ನಮ್ಮಲ್ಲಿ ರಾಮಾಯಣದಲ್ಲಿ ಬರುವ ಕಥೆ ಎಂದು ಹರಿಕಥೆ ಮಾಡಿಬಿಟ್ಟರೆ ಮುಂದೆ ಅದನ್ನು ವಿಚಾರಿಸುವ ಗೋಜಿಗೇ ಹೋಗದೆ ಅದರಂತೆ ಆಚರಿಸಲು ಮನಸ್ಸಿನಲ್ಲಾದರೂ ಒಪ್ಪಿ ಬಿಡುತ್ತಾರೆ. ಆದ್ದರಿಂದ ಅಂತಹ ತಪ್ಪುದೃಷ್ಟಿ ಕೊಡುವ ಕಥೆಗಳನ್ನು ಹೊಸ ದೃಷ್ಟಿಗೆ ತಿದ್ದಿ ಅಳವಡಿಸಿ ಪ್ರಚಾರಮಾಡುವುದು ಸಮಾಜ ಶ್ರೇಯಸ್ಸಿಗೆ ಬಹಳ ಅಗತ್ಯವಾಗುತ್ತದೆ.