ಉತ್ತಮ ಶಿಲ್ಪಿ ಕಟ್ಟಿದ ದೇವಾಲಯದಲ್ಲಿ ಅದು ಹಳತಾಗುತ್ತ ಬಂದಂತೆಲ್ಲ, ಇಲಿ ಹಲ್ಲಿ ಬಾವಲಿ ಮೊದಲಾದ ಅನಾಹೂತ ಜೀವಜಂತುಗಳೂ ಗೂಡು ಬೀಡು ಮಾಡುವುದುಂಟು. ವಾಲ್ಮೀಕಿಯ ಮಹಾಕೃತಿಗೂ ಅಂತಹ ಗತಿ ಒದಗಿದರೆ ಅದು ಅದರ ಪುರಾತನತ್ವಕ್ಕೆ ಒಂದು ಅನಿವಾರ್ಯ ಲಕ್ಷಣವಾಗುತ್ತದೆ. ದೇವಾಲಯಕ್ಕೆ ಪೂಜೆಗೆಂದು ಹೋಗುವವರು ಯಾರೂ, ಅಲ್ಲಿವೆ ಎಂಬ ಒಂದು ಕಾರಣದಿಂದಲೆ, ಇಲಿ ಹಲ್ಲಿ ಬಾವಲಿಗಳನ್ನು ಹೇಗೆ ಪೂಜಿಸುವುದುಲ್ಲವೊ ಹಾಗೆಯೆ ಮಹಾಕವಿಯ ಕೃತಿಯಲ್ಲಿ ಬಂದಳಿಕೆಗಳಂತೆ ಸೇರಿಕೊಂಡಿರುವ ಅಲ್ಪದೃಷ್ಟಿಯ ಕುಕವಿ ಕೃತವಾದ ಪ್ರಕ್ಷಿಪ್ತಗಳನ್ನೂ ತಿಳಿದವರು ಯಾರೂ ಗೌರವಿಸುವುದಿಲ್ಲ. ಶ್ರೀಮದ್ ರಾಮಾಯಣದಲ್ಲಿ, ಅದರಲ್ಲಿಯೂ ಉತ್ತರಕಾಂಡದಲ್ಲಿ, ಅಂತಹ ಪ್ರಕ್ಷಿಪ್ತಗಳು ಅನೇಕವಿವೆ. ಶಂಬೂಕವಧಪ್ರಸಂಗವೂ ಅಂತಹದೊಂದು. ಆ ಕಥೆ ಹೀಗಿದೆ.

ಸೀತಾ ಪರಿತ್ಯಾಗಾನಂತರ ಒಂದು ದಿನ ವೃದ್ಧ ಬ್ರಾಹ್ಮಣನೊಬ್ಬನು ಮೃತ ಬಾಲಕನೊಬ್ಬನನ್ನು ಹೊತ್ತು ತಂದು, ಶ್ರೀರಾಮನ ಅರಮನೆಯ ಮುಂದೆ ಅನೇಕ ವಿಧವಾಗಿ ರೋಧಿಸಿ, ತನ್ನ ಮಗನ ಅಕಾಲಮರಣಕ್ಕೆ ದೊರೆಯ ದೋಷವನ್ನೆ ಕಾರಣವೊಡ್ಡುತ್ತಾನೆ:

ನೇದೃಶಂ ದೃಷ್ಟಪೂರ್ವಂ ಮೇ ಶ್ರುತಮ್ ವಾ ಘೋರದರ್ಶನಮ್ |
ಮೃತ್ಯುರಪ್ರಾಪ್ತಕಾಲಾನಾಂ ರಾಮಸ್ಯ ವಿಷಯೇ ಯಥಾ ||
ರಾಮಸ್ಯ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ |

ರಾಜದ್ವಾರಿ ಮರಿಷ್ಯಾಮಿ ಪತ್ನ್ಯಾ ಸಾರ್ಧಮನಾಥವತ್ |
ಬ್ರಹ್ಮಹತ್ಯಾಂ ತತೋ ರಾಮ ಸಮುಪೇತ್ಯ ಸುಖೀ ಭವ ||

ರಾಜದೋಷ್ಯೆರ್ವಿಪೆದ್ಯಂತೇ ಪ್ರಜಾ ಹ್ಯವಿಧಿಪಾಲಿತಾಃ |
ಅಸದ್ವ್ ವೃತ್ತೇ ತು ನೃಪತಾವಕಾಲೇ ಮ್ರಿಯತೇ ಜನಃ ||

ಶ್ರೀರಾಮನು ಮಂತ್ರಿಸಭೆಯನ್ನು ಕರೆದು ಬ್ರಾಹ್ಮಣನು ಹೊರಿಸಿದ ಅಪರಾಧದ ವಿಚಾರವಾಗಿ ಪ್ರಶ್ನಿಸುತ್ತಾನೆ. ನಾರದ ಎಂಬುವನು ದೀರ್ಘವಾದ ಉಪನ್ಯಾಸ ಮಾಡಿ, ಶೂದ್ರನೊಬ್ಬನು ತಪಸ್ಸು ಮಾಡುತ್ತಿರುವುದರಿಂದಲೆ ಬ್ರಾಹ್ಮಣನ ಮಗನಿಗೆ ಅಕಾಲಮರಣವಾಗಿದೆ ಎಂದು ಸಿಧದ್ಧಾಂತಪಡಿಸುತ್ತಾನೆ:

ತ್ರಿಭ್ಯೋ ಯುಗೇಭ್ಯಸ್ತ್ರೀನ್ ವರ್ಣಾನ್ ಧರ್ಮಶ್ಚ ಪರಿನಿಷ್ಠಿತಃ |
ನ ಶೂದ್ರೋ ಲಭತೇ ಧರ್ಮಂ ಯುಗತಸ್ತು ನರರ್ಷಭ ||
ಹೀನವರ್ಣೋ ನೃಪಶ್ರೇಷ್ಠ ತಪ್ಯತೇ ಸಮಹತ್ತಪಃ ||
ಭವಿಷ್ಯಚ್ಛೂದ್ರಯೋನ್ಯಾಂ ವೈ ತಪಶ್ಚರ್ಯಾ ಕಲೌ ಯುಗೇ ||

ಅದ್ಯ ತಪ್ಯತಿ ದುರ್ಬುದ್ಧಿಸ್ತೇನ ಬಾಲವದೋ ಹ್ಯಯಮ್ |
ಯೋ ಹ್ಯಧರ್ಮಮಕಾರ್ಯಂ ವಾ ವಿಷಯೇ ಪಾರ್ಥಿವಸ್ಯ ತು ||

ಕರೋತಿ ಚಾಶ್ರೀಮೂಲಂ ತತ್ ಪುರೇ ವಾ ದುರ್ಮತಿರ್ನರಃ |
ಕ್ಷಿಪ್ರಂ ಚ ನರಕಂ ಯಾತಿ ಸ ಚ ರಾಜಾ ನ ಸಂಶಯಃ ||

ಶ್ರೀರಾಮನು ನಾರದನ ಮಾತಿನಂತೆ, ಬಾಲಕನ ಕಳೇಬರನನ್ನು ಎಣ್ಣೆಯಲ್ಲಿಡಿಸಿ, ಪುಷ್ಪಕ ವಿಮಾನವನ್ನೇರಿ ಹುಡುಕುತ್ತಾ ಹೊಗುತ್ತಾನೆ. ಎಲ್ಲ ದಿಕ್ಕುಗಳನ್ನೂ ಹುಡುಕಿ ಕೊನೆಗೆ ದಕ್ಷಿಣಕ್ಕೆ ತಿರುಗುತ್ತಾನೆ. ಅಲ್ಲಿ ಶಂಬೂಕ ತಪಸ್ವಿಯನ್ನು ಕಂಡು ‘ಧನ್ಯಸ್ತ್ವಮಸಿ ಸುವ್ರತ’ ಎಂದು ಅಭಿನಂದಿಸುತ್ತಾನೆ. ಪ್ರಶ್ನಿಸುತ್ತಾನೆ:

ಕಸ್ಯಾಂ ಯೋನ್ಯಾಂ ತಪೋವೃದ್ಧ ವರ್ತಸೇ ದೃಢವಿಕ್ರಮಃ |
ಕೌತೂಹಲಾತ್ ತ್ವಾಂ ಪೃಚ್ಛಾಮಿ ರಾಮೋ ದಾಶರಥಿರ್ಹ್ಯಹಮ್ ||

ಬ್ರಾಹ್ಮಣೋ ವಾಸಿ ಭಧ್ರಂ ತೇ ಕ್ಷತ್ರಿಯೋ ವಾಸಿ ದುರ್ಜಯಃ |
ವೈಶ್ಯತ್ತೃತೀಯ ವರ್ಣೋ ವಾ ಶೂದ್ರೋ ವಾ ಸತ್ಯವಾಗ್ಛವ ||

ನೀನು ಯಾವ ವರ್ಣದಲ್ಲಿ ಸಂಭವಿಸಿದವನು? ಸತ್ಯ ಹೇಳು ಎಂದ ಶ್ರೀರಾಮಗೆ, ಸತ್ಯಕಾಮ ಜಾಬಾಲಿ ತನ್ನ ಗುರುವಿಗೆ ಹೇಳಿದಂತೆ, ಶಂಬೂಕನೂ ತಾನು ಶೂದ್ರನೆಂದು ತಿಳಿಸುತ್ತಾನೆ. ಅವನು ಮಾತು ಮುಗಿಸುವುದಕ್ಕೆ ಮೊದಲೆ ರಾಮನ ಖಡ್ಗ ಅವನ ತಲೆಯನ್ನು ಕಡಿದು ಬೀಳಿಸುತ್ತದೆ. ಇಂದ್ರನನ್ನು ಮುಂದೆ ಮಾಡಿಕೊಂಡು ದೇವತೆಗಳೆಲ್ಲ ‘ಸಾಧು! ಸಾಧು!’ ಎಂದು ರಾಮನ ಕಾರ್ಯವನ್ನು ಹೊಗಳಿ ಹೂಮಳೆಗರೆಯುತ್ತಾರೆ. ನಿನ್ನ ಕೆಲಸಕ್ಕೆ ಮೆಚ್ಚಿದೆ, ವರವನ್ನು ಬೇಡು ಎಂದ ಇಂದ್ರಿನಿಗೆ ಶ್ರೀರಾಮನು ಬ್ರಾಹ್ಮಣ ಕುಮಾರನನ್ನು ಬದುಕಿಸಿಕೊಡಬೇಕೆಂದು ಹೇಳುತ್ತಾನೆ. ಶೂದ್ರನ ವಿನಿಪಾತವಾದೊಡನೆ ಬ್ರಾಹ್ಮಣ ಕುಮಾರನು ಬದಿಕಿದ್ದಾನೆ ಎಂದು ಅಮರೇಂದ್ರನು ಆಶ್ವಾಸನೆ ಕೊಡುತ್ತಾನೆ.

ಈ  ಕಥೆ ವಾಲ್ಮೀಕಿಯ ಅಂಕಿತದಲ್ಲಿರುವುದಂತೂ ಹಾಸ್ಯಕ್ಕೆ ಮೂರ್ಖ ಕಿರೀಟವಿಟ್ಟಂತಿದೆ. ಕಥೆಯ ಹಿಂದಿರುವ ಮನೋಧರ್ಮದಲ್ಲಿ ಎಂತಹ ಅಸಹ್ಯವಾದ ವರ್ಣಭ್ರಾಂತಿ ಅಡಗಿದೆ ಎಂಬುದು ಗೊತ್ತಾಗುತ್ತದೆ.

ಸತ್ಯ ಹೇಳುವುದರಲ್ಲಿ ಸ್ವಲ್ಪಮಟ್ಟಿಗೆ ನಿಷ್ಠುರ ಪ್ರಕೃತಿಯಾದ ಭವಭೂತಿಗೂ ಅದು ಅಸಹ್ಯವಾಗಿ ತೋರಿದೆ. ತನ್ನ ‘ಉತ್ತರ ರಾಮಚರಿತ’ ನಾಟಕದಲ್ಲಿ ಈ ಕಥೆಯ ವಿಷದ ಹಲ್ಲನ್ನು ಮುರಿಯಲು ಪ್ರಯತ್ನಿಸಿದ್ದಾನೆ. ಆದರೂ ಅದರ ಹಾವುತನವನ್ನು ಮಾರ್ಪಡಿಸುವ ಉದ್ಯಮದಲ್ಲಿ ಅವನು ಕೃತಕೃತ್ಯನಾಗಿದ್ದಾನೆಯೆ ಎಂಬ ಪ್ರಶ್ನೆ ಚಿಹ್ನೆಗೆ ತಲೆಯೆತ್ತಿ ನೆಟ್ಟಗೆ ನಿಲ್ಲಲು ಸಾಧ್ಯವಾಗಲಾರದೆಂದೆ ತೋರುತ್ತದೆ.

‘ಉತ್ತರ ರಾಮಚರಿತ’ ದಲ್ಲಿ ಭವಭೂತಿಗೆ ರಾಮನನ್ನು ದಂಡಕಾರ್ಯಕ್ಕೆ ತರುವ ಉಪಾಯ ಶಂಬೂಕ ಪ್ರಸಂಗದಿಂದ ಸಿದ್ಧವಾಗುತ್ತದೆ. ಶೂದ್ರತಪಸ್ವಿಯ ಶಿಕ್ಷೆಗಾಗಿಯೆ ಅವನು ಅಲ್ಲಿಗೆ ಬರುತ್ತಾನೆ. ಆದರೆ ಅಲ್ಲಿ ಶ್ರೀರಾಮನು ತನ್ನಕೃತ್ಯಕ್ಕೆ ತಾನೆ ಹೇಸಿದಂತೆ ತೋರುತ್ತದೆ. ಶಂಬೂಕನನ್ನು ಕೊಲ್ಲುವ ಮುನ್ನ ತನ್ನ ಬಲಗೈಯನ್ನು ಸಂಬೋಧಿಸಿ ಹೀಗೆ ಭರ್ತ್ಸನೆ ಮಾಡುತ್ತಾನೆ:

ರೇ ಹಸ್ತದಕ್ಷಿಣ ಮೃತಸ್ಯ ಶಿಶೋರ್ದ್ವಿಜಸ್ಯ ಜೀವಾತವೇ ವಿಸೃಜ ಶೂದ್ರಮುನೌ ಕೃಪಾಣಮ್ |
ರಾಮಸ್ಯ ಗಾತ್ರಮಸಿ ನಿರ್ಭರಗರ್ಭ ಖಿನ್ನ ಸೀತಾವಿವಾಸನಪಟೋಃ ಕರುಣಾ ಕುತಸ್ತೇ ||

ಎಲೈ ಬಲಗೈಯೆ, ಮೃತನಾದ ದ್ವಿಜಶಿಶುವಿನ ಪ್ರಾಣಯೋಗಕ್ಕಾಗಿ ಶೂದ್ರ ಮುನಿಯ ಮೇಲೆ ಕೃಪಾಣ ಪ್ರಯೋಗಮಾಡು. ರಾಮನ ಅಂಗವಲ್ಲವೆ ನೀನು? ತುಂಬು ಬಸಿರಿಯಾಗಿದ್ದ ಸೀತಾದೇವಿಯನ್ನು ಕಾಡಿಗಟ್ಟುವುದರಲ್ಲಿ ತನ್ನ ಪಟುತ್ವವನ್ನು ಸ್ಥಾಪಿಸಿದ ರಾಮನ ಗಾತ್ರದ ಒಂದು ಭಾಗವಲ್ಲದೆ ನೀನು? ನಿನಗೆಲ್ಲಿ ಬಂತು ಕರುಣೆ? ― ಎಂದು ಮನಸ್ಸಿಲ್ಲದ (ಕಥಂಚಿತ್ ಪ್ರಹೃತ್ಯ) ಕತ್ತರಿಸುತ್ತಾನೆ. ‘ಕೃತಂ ರಾಮಸದೃಶಂ ಕರ್ಮ’ ಎಂದು ತನ್ನನ್ನು ತಾನೆ ಮೂದಲಿಸಿಕೊಳ್ಳುವಂತೆ ಉದ್ಗಾರ ತೆಗೆಯುತ್ತಾನೆ.

ಇಲ್ಲಿ ಭವಭೂತಿ ಇಹಲೋಕದ ಕಾರ್ಪಣ್ಯವನ್ನು ಪರಲೋಕದ ಔದಾರ್ಯದಿಂದ ತಿದ್ದಲು ಪ್ರಯತ್ನಿಸಿರುವುದನ್ನು ಕಾಣುತ್ತೇವೆ. ಶಂಬೂಕನ ಮೃತ ಶರೀರದಿಂದ ಒಬ್ಬ ಗಂಧರ್ವನು ಮೈದೋರಿ ರಾಮನಿಗೆ ತನ್ನ ಕೃತಜ್ಞತೆಯನ್ನು ನಿವೇದಿಸಿ, ತಾನೊಂದು ಶಾಪದಿಂದ ಶೂದ್ರನಾಗಿ ಹುಟ್ಟಿ ತಪಸ್ಸು ಮಾಡುತ್ತಿದ್ದುದಾಗಿಯೂ, ರಾಮನ ಖಡ್ಗಹತಿಯಿಂದಲೆ ಶಾಪ ವಿಮೋಚನವಾದುದಾಗಿಯೂ ತಿಳಿಸಿ (ಸತ್ಯಂಗಜಾನಿ ನಿಧನಾನ್ಯಪಿ ತಾರಯಂತಿ) ಸತ್ಸಂಗದಿಂದ ಮರಣ ಸಂಭವಿಸಿದರೂ ಅದುಶ್ರೇಯಸ್ಕರ ಎಂಬ ಮಹಾಕಾವ್ಯವನ್ನು ಹೇಳುತ್ತಾನೆ. ಶ್ರೀರಾಮನೂ ಅತನ ತಪಸ್ಸಿನ ಮಹಿಮೆಯನ್ನು ಮನಕ್ಕೆ ತಂದುಕೊಂಡು, (ತದನುಭೂಯತಾಂಉಗ್ರಸ್ಯ ತಪಸಃ ಪರಿಪಾಕಃ) ಅವನಿಗೆ ಉತ್ತಮಲೋಕಗಳ ಉತ್ತಮಗತಿಗಳಾಗಲಿ ಎಂದು ಹರಸುತ್ತಾನೆ:

ಯತ್ರಾನಂದಾಶ್ಚ ಮೋದಾಶ್ಚ ಯತ್ರ ಪುಣ್ಯಾ ಹಿ ಸಂಪದಃ |
ವೈರಾಜಾ ನಾಮ ತೇ ಲೋಕಾಃ ತೈಜಸಾಃ ಸಂತು ತೇ ಶಿವಾಃ ||

‘ಶೂದ್ರತಪಸ್ವಿ’ ಯಲ್ಲಿ ಶಂಬೂಕನ ಕಥೆಯ ಸಾಮಗ್ರಿ ಹೊಸ ರೀತಿಯಿಂದ ದೃಶ್ಯ ವಸ್ತುವಾಗಿದೆ. ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಟ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ ಮಹತ್ವನ್ನೂ ಹೊರಗಡೆಯ ಅಲ್ಪವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ.* ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋ ರಂಗಭೂಮಿಯಲ್ಲಿಯೆ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು. ದೃಶ್ಯರೂಪಿಯಾದರೂ ಅದು ಕಾವ್ಯಾತ್ಮಕವಾದುದು: ದೃಶ್ಯರೂಪಧಾರಣೆ ಮಾಡಿದ ಮಾತ್ರಕ್ಕೆ ಕಾವ್ಯವು ಟಿಕೀಟಿನ ಆಡಳಿತಕ್ಕೆ ಒಳಗಾಗಲೇಬೇಕೆಂಬ ದುರಾಗ್ರಹ ಹಳೆಯ ಪ್ರಯೋಜನದ ಒಂದು ನಿಷ್ಟ್ರಯೋಜಕವೂ ಅವಶೇಷಾತ್ಮಕವೂ ಆಗಿರುವ ಮನಃಸ್ಥಿತಿ ಎಂದೆ ಹೇಳಬೇಕಾಗುತ್ತದೆ. ಮನೋವೇದಿಕೆಯ ಸಜೀವತೆಯ ಮತ್ತು ಶ್ರೀಮಂತತೆಯ ಮುಂದೆ ಹೊರಗಡೆಯ  ನಾಟಕಶಾಲೆ ಒಂದು ದರಿದ್ರ ಪ್ರಯತ್ನವೆಂದು ಪ್ರತಿಭಾ ಪ್ರಭುಗಳೆಲ್ಲರಿಗೂ ನಿತ್ಯಾನುಭವವೇದ್ಯ. ಆದ್ದರಿಂದ “ಶೂದ್ರತಪಸ್ವಿ” ಯನ್ನು ಓದುವವರೆಲ್ಲರಿಗೂ ನನ್ನದೊಂದು ಬಿನ್ನಹ: ಯಾವ ಕಾರಣದಿಂದಾಗಲಿ, ಯಾವ ರೂಪದಿಂದಾಗಲಿ, ಯಾವ ಪೂರ್ವಗ್ರಹದಿಂದಾಗಲಿ, ಯಾವ ದುರಾಗ್ರಹದಿಂದಾಗಲಿ ಹೃದಯಪ್ರವೇಶ ಮಾಡುವ ದಾರಿದ್ರ್ಯವನ್ನು ದೂರೀಕರಿಸಿ, ಶುದ್ಧಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಅದನ್ನು ಓದಿದರೆ ಕೃತಿಗೂ ಕೃತಿಕಾರನಿಗೂ ನ್ಯಾಯಮಾಡಿದಂತಾಗುತ್ತದೆ.

ಕುವೆಂಪು
೨-೧-೧೯೪೪
ಬೆಂಗಳೂರು


* “ಬೆರಳ್‌ಗೆ ಕೊರಳ್” ಅಂತಹ ನಾಟಕವನ್ನೂ ಅತ್ಯದ್ಭುತವಾಗಿ ರಂಗಭೂಮಿಯ ಮೇಲೆ ಪ್ರೇಕ್ಷಕರು ರಸರೋಮಾಂಚಿತರಾಗುವಂತೆ ಪ್ರದರ್ಶಿಸಿ ಯಶಸ್ವಿಗಳಾಗಿರುವ ನಟಸಾಹಸಿಗಳಿಗೆ ಮುನ್ನುಡಿಕಾರನ ಈ ಉಕ್ತಿಯನ್ನೂ ಹುಸಿಗೊಳಿಸಲು ಸಾಧ್ಯವಾಗಬಹುದೆನೊ?
ಕುವೆಂಪು
೧೮-೮-೧೯೬೨