ಅಯ್ಯಾ ಶೂದ್ರ
ಯಾರಿಗೆ ಹೇಳಿಕೊಳ್ಳೋಣ ನಾವು ?
ನಮಗೆ ನಿಂತ ನೆಲವೆ ಅಭದ್ರ
ಕಾಲಕೆಳಗೆ ಸದಾ ಪಟ್ಟಭದ್ರ
ಹಿತಾಸಕ್ತಿಗಳ ಛಿದ್ರ.

ಕೂಡಿಸಿದರೆ ಕೂಡಲೊಲ್ಲದ
ಹತ್ತಿರವಿದ್ದೂ ಬೆರೆಯಲೊಲ್ಲದ
ಪ್ರತಿಷ್ಠೆ ತುಂಬಿದೀ ಜೋಬದ್ರ ಜನಕ್ಕೆ
ಏನು ಮಾಡೋಣ ?

ಇಲ್ಲ ಬಿಡು ಇವಕ್ಕೆ
ಶತಮಾನದಿಂದಲೂ ಬಂದ
ಯಾವುದೇ ಕಲೆಗಾರಿಕೆ.
ಕೊರಳಾಗುತ್ತವೆ ಎಲ್ಲಾ ಕುಣಿಕೆಗೆ
ಬೆನ್ನಾಗುತ್ತವೆ ಹಲವು ಸವಾರಿಗೆ
ಮಂತ್ರದ ಬಾಯಿಗೆ ಮರುಳಾಗುತ್ತವೆ
ಕ್ಷೌರದ ಕತ್ತಿಗೆ ತಲೆಯೊಡ್ಡುತ್ತವೆ
ನಾಮಕೆ, ಜುಟ್ಟಿಗೆ, ದಾರ, ವಿಭೂತಿಗೆ
ಸದಾ ಬಾಗುತ ಕಾಲೊತ್ತುತ್ತವೆ
ದಿಂಡುರುಳುತ್ತವೆ
ತೇರೆಳೆಯುತ್ತವೆ
ಚೂರುಪಾರಿಗೇ ಪರದಾಡುತ್ತವೆ.

ಹೀಗಿರುವೀ ಮಂದೆಯ ಕೂಡಿಸಿ
ಹೊಸ ಹೊಳೆಯಲ್ಲಿವನೆಲ್ಲವ ಮೀಯಿಸಿ
ತೊಳೆಯಬಹುದೆ ಶತಮಾನದ
ಕೊಳೆಯ ?
ಏನು ಮಾಡುವುದೊ, ಹೇಳೋ ಗೆಳೆಯ ?