ಪ್ರಕೃತಿಯ ಅಧ್ಯಯನ ಮತ್ತು ತಿಳಿವಳಿಕೆಗೆ ಮೀಸಲಾದ ಸಂಘಗಳಲ್ಲಿ ಲಂಡನ್‌ನ ರಾಯಲ್ ಸೊಸೈಟಿ ಬಹಳ ಹಳೆಯದು. ಅದರ ಸ್ಥಾಪನೆಯಾದದ್ದು 1660ನೇ ನವೆಂಬರ್ 28ರಂದು.  ಜೀವಕೋಶಗಳನ್ನು ಮೊದಲಿಗೆ ಕಂಡ ರಾಬರ್ಟ್ ಹುಕ್, ಅನಿಲ ನಿಯಮವನ್ನು ಸಾರಿದ ರಾಬರ್ಟ್ ಬಾಯ್ಲ, ಜಾಗತಿಕ ಭಾಷೆ ಮತ್ತು ದಶಮಾನ ಪದ್ಧತಿಗಾಗಿ ಪ್ರಯತ್ನಿಸಿದ ಪಾದ್ರಿ ಜಾನ್ ವಿಲ್ಕಿನ್ಸ್, ಖ್ಯಾತ ಸರ್ಜನ್ ಜೊನಾಥನ್ ಗೊಡ್ಡಾರ್ಡ್, ಲಂಡನ್ ನಗರದ 51 ಚರ್ಚುಗಳ ವಿನ್ಯಾಸಕ್ಕಾಗಿ ಹೆಸರಾಗಿದ್ದ ಕ್ರಿಸ್ಟೊಫರ್ ರೆನ್ ಸೊಸೈಟಿಯ ಹನ್ನೆರಡು ಸ್ಥಾಪಕ ಸದಸ್ಯರುಗಳಲ್ಲಿ ಸೇರಿದ್ದರು. ಈ ಸೊಸೈಟಿಯ ಅಧ್ಯಕ್ಷರಾಗಿದ್ದವರಲ್ಲಿ ಸರ್ ಐಸಾಕ್ ನ್ಯೂಟನ್ ಕೂಡ ಒಬ್ಬ.

1666ರಲ್ಲಿ ನ್ಯೂಟನ್ ಗುರುತ್ವ ನಿಯಮವನ್ನು ಆವಿಷ್ಕರಿಸಿದ. ಇದನ್ನು ಪ್ರಚೋದಿಸಿದ್ದು ‘ಮರದಿಂದ ಬೀಳುತಿದ್ದ ಒಂದು ಸೇಬು’ ಎಂಬ ಆಖ್ಯಾಯಿಕೆ ಇದೆ. ಈ ಆಖ್ಯಾಯಿಕೆಗೆ  ಕಾರಣವಾದ ಮರವು ನ್ಯೂಟನ್ ದಿನಕಳೆಯುತ್ತಿದ್ದ ವುಲ್ಸ್‌ವರ್ತ್ ತೋಟದಲ್ಲಿತ್ತು.  ತಗ್ಗಿನಲ್ಲಿರುವ ಹಣ್ಣಾಗಲೀ ಎತ್ತರದಲ್ಲಿರುವ ಹಣ್ಣಾಗಲೀ ಬೀಳುತ್ತಿದ್ದುದು ನೆಲದ ಕಡೆಗೇ.  ಆದ್ದರಿಂದ ನೆಲದ ಕಡೆ ವಸ್ತುಗಳನ್ನೆಳೆಯುವ ಗುರುತ್ವ ಬಲ ಎಷ್ಟೇ ಎತ್ತರಕ್ಕೂ ಇರುತ್ತದೆ ಎಂದು ತಿಳಿಯುವಂತಾಯಿತಂತೆ!

ಈ ಕತೆಗೆ ಕಾರಣವಾದ ಮರಕ್ಕೆ ತಾನಾಗಿ ಐತಿಹಾಸಿಕ ಮಹತ್ವ ಬಂತು. ಅದರ ಟೊಂಗೆಗಳಿಂದ ಮರಿಮರಗಳನ್ನು ಬೆಳೆಸಿದರು. 1815-1820ರ ವೇಳೆ ಮೂಲ ಮರ ಸತ್ತುಹೋಗಿರಬೇಕು. ಆದರೆ ಮರದ ಕೆಲವು ತುಂಡುಗಳನ್ನು ನ್ಯೂಟನ್‌ಗೆ ಸಂಬಂಧಿಸಿದ ಇತರ ಸ್ಮರಣಿಕೆಗಳೊಂದಿಗೆ ರಾಯಲ್ ಸೊಸೈಟಿಯಲ್ಲಿ ರಕ್ಷಿಸಿಟ್ಟರು.

ರಾಯಲ್ ಸೊಸೈಟಿಯ 350ನೇ ವರ್ಷವನ್ನು ಆಚರಿಸಲು ಬ್ರಿಟನ್ ಸಂಜಾತ ವ್ರೋಪೈಅರ್ಸ್ ಸೆಲ್ಲರ್ಸ್ ಒಂದು ಕಾರ್ಯಕ್ರಮವನ್ನು ರೂಪಿಸಿದರು. ಕಾರ್ಯಕ್ರಮ ರೂಪುರೇಷೆ ಇಷ್ಟೇ. ನ್ಯೂಟನ್ ಮರದ ಸುಮಾರು 10 ಸೆಂಟಿಮೀಟರ್ ಉದ್ದದ ತುಂಡನ್ನು ಅಟ್ಲಾಂಟಿಸ್ ವ್ರೋನೆಲದಿಂದ ಸುಮಾರು 8 ಕಿಲೊಮೀಟರ್ ಎತ್ತರದಲ್ಲಿರುವ ಅಂತರರಾಷ್ಟ್ರೀಯ ವ್ರೋಒಯ್ಯುವುದು ಹಾಗೂ ಅಲ್ಲಿ ಅದನ್ನು ಬೀಳಬಿಟ್ಟರೂ ಬೀಳದಿರುವುದನ್ನು – ಅರ್ಥಾತ್ ಗುರುತ್ವ ಬಲದ ಪರಿಣಾಮ ಕಾಣದಿರುವುದನ್ನು – ವೀಕ್ಷಿಸುವುದು.

ಅಟ್ಲಾಂಟಿಸ್ ಲಾಳಿಯನ್ನು 2010ನೇ ವರ್ಷ ಮೇ ತಿಂಗಳಲ್ಲಿ ಉಡ್ಡಯಿಸುತ್ತಾರೆ. ಗುರುತ್ವ ಪ್ರಭಾವವನ್ನು ತೋರಿಸದ ನ್ಯೂಟನ್ ಮರದ ತುಂಡನ್ನು ಲಂಡನ್‌ನಲ್ಲಿ ನಡೆಯಲಿರುವ ವಿಜ್ಞಾನೋತ್ಸವದಲ್ಲಿ  ರಾಯಲ್ ಸೊಸೈಟಿ ಪ್ರದರ್ಶನಕ್ಕಿಡಲಿದೆ.

ಮೇಲಿನ ಕಾರ್ಯಕ್ರಮದಲ್ಲಿ ತಿಳಿಯದಿರುವ ಹೊಸ ಪ್ರಾಯೋಗಿಕ ಸಂಗತಿ ಯಾವುದೂ ಇಲ್ಲ.  ರಾಯಲ್ ಸೊಸೈಟಿ ಮತ್ತು ನ್ಯೂಟನ್‌ರನ್ನು ಒಟ್ಟಾಗಿ ನೆನಪಿಸುವುದನ್ನೂ ಜನ ಸಂತೋಷಿಸುತ್ತಾರೆ ಎಂಬುದಷ್ಟೇ ಇಲ್ಲಿ ಎದ್ದು ತೋರುತ್ತದೆ.