. ಪ್ರಾಸ್ತಾವಿಕ

ವಚನ ಚಳುವಳಿಯ ಸಾಧನೆ ಬಹುಮುಖಿಯಾದುದು. ವಿವಿಧ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ-ಗಹನ ಚಿಂತನೆ ನಡೆಸಿದಷ್ಟೂ ವಚನಕಾರರ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. “ಪ್ರತಿಯೊಂದು ವಚನ ಅರ್ಥದೃಷ್ಟಿಯಿಂದ ಸ್ವತಂತ್ರ, ಗಾತ್ರ ದೃಷ್ಟಿಯಿಂದ ಚಿಕ್ಕ, ರಚನಾ ದೃಷ್ಟಿಯಿಂಓದ ಸರಳವಾಗಿರುವ ಕಾರಣ ಇದಕ್ಕೆ ಬಿಡಿಸಿ ನೋಡಿದರೆ ಮುತ್ತಿನ ಬೆಲೆಯಿದೆ, ಕೂಡಿಸಿ ನೋಡಿದರೆ ಹಾರದ ಬೆಲೆಯಿದೆ[1]ಎಂಬ ಡಾ. ಕಲಬುರ್ಗಿಯವರ ಮಾತಿನಲ್ಲಿ ಸತ್ಯವಿದೆ. ಆದರೆ ತಮಗೆ ಬೇಕಾದ ಮುತ್ತುಗಳನ್ನಾರಿಸಿಕೊಂಡು ತಮಗಿಷ್ಟವಾದ ಹಾರವನ್ನು ಕಟ್ಟಿಕೊಳ್ಳುವ ಸ್ವಾತಂತ್ಯ್ರವೂ ಇಲ್ಲಿರುವುದರಿಂದ, ಕೆಲವೊಂದು ಸಲ ಇದು, ವಚನ ಚಳುವಳಿಯ ಮೂಲ ಉದ್ದೇಶವನ್ನೇ ಮರೆಮಾಚಿಬಿಡುವ ಅಪಾಯವೂ ಇದೆ. ಇಂತಹ ಅಪಾಯದ ಸೂಚನೆಯೆಂಬಂತೆ ಶೂನ್ಯ ಸಂಪಾದನೆಗಳಿವೆ. ಹಾಗೆಂದು ಶೂನ್ಯ ಸಂಪಾದನೆಗಳ ನಿರಾಕರಣೆಯಾಗಲಿ, ಶೂನ್ಯ ಸಂಪಾದನಾಕಾರರ ಪ್ರತಿಭೆಯನ್ನು ಅಲ್ಲಗಳೆಯುವುದಾಗಲಿ ಈ ಲೇಖನದ ಉದ್ದೇಶವಲ್ಲ. ಹಾಗೆ ನೋಡಿದರೆ ಶೂನ್ಯಸಂಪಾದನೆ ಅದ್ಭುತ ಸೃಷ್ಟಿ. “ಶೂನ್ಯ” ಎಂಬ ಹೆಸರೇ ತುಂಬಾ ಆಕರ್ಷಕವಾದುದು. ಆದರೆ ಕೆಲವೊಮ್ಮೆ ಇಂತಹ ಅದ್ಭುತಗಳೇ ವಾಸ್ತವವನ್ನು ಬುಡಮೇಲು ಮಾಡುತ್ತವೆಯೆಂಬುದನ್ನು ನೆನಪಿಡಬೇಕಾಗುತ್ತದೆ.

ವಚನ ಸಾಹಿತ್ಯದ ವರ್ಗೀಕರಣವನ್ನು ಡಾ.ಆರ್.ಸಿ. ಹಿರೇಮಠ ಅವರು ಮೂರು ರೀತಿಯಾಗಿ ಮಾಡಿದ್ದಾರೆ.[2] ಕೇವಲ ಸಂಕಲನಗಳು, ೨. ತಾತ್ವಿಕ ಸಂಕಲನಗಳು, ೩. ಸಂಪಾದನೆಗಳು. ಮೊದಲನೆಯ ಭಾಗದಲ್ಲಿ ಸರ್ವಪುರಾತನರ ವಚನಗಳು, ಬೆಡಗಿನ ವಚನಗಳು ಹಾಗೂ ಕಾಲಜ್ಞಾನದ ವಚನಗಳನ್ನು ಸೇರಿಸಿದ್ದರೆ, ಎರಡನೇ ಭಾಗದಲ್ಲಿ ಷಟ್‌ಸ್ಥಲ ವಚನಗಳು ಏಕೋತ್ತರ ಶತಸ್ಥಲ ವಚನಗಳು ಹಾಗೂ ಗಣವಚನರತ್ನಾವಳಿಗಳನ್ನು ಸೇರಿಸಲಾಗಿದೆ. ಮೂರನೇ ಭಾಗದಲ್ಲಿ ಶೂನ್ಯಸಂಪಾದನೆಗಳು ಮತ್ತು ಇತರ ಸಂಪಾದನೆಗಳು ಬರುತ್ತವೆ. ಇಲ್ಲಿ ಬರುವ ಮೊದಲನೆಯ ಭಾಗ ಅತಿ ಮುಖ್ಯವಾದುದು. ಇವೇ ಶರಣರ ನಿಜವಾದ ವಚನಗಳು. ಅವರ ರಚನೆಯ ಮೂಲ ಹಾಗೂ ಅಧಿಕೃತತೆ ಕಾಣುವುದು ಇದೇ ಭಾಗದಲ್ಲಿ. ಬಿಡಿ ಬಿಡಿಯಾದ ಈ ವಚನಗಳು ಬಿಡಿ ಬಿಡಯಾದ ಮುತ್ತುಗಳಂತಿವೆ. ಹೀಗೆ ಇವುಗಳನ್ನು ಇದ್ದಂತೆ, ಇದ್ದ ಹಾಗೆ ಉಳಿಸಿಕೊಂಡಾಗಲೇ ವಚನಕಾರರ ವಚನಗಳ ಮೂಲ ಉದ್ದೇಶ ಸ್ಪಷ್ಟವಾಗುತ್ತದೆ. ಎರಡು ಮತ್ತು ಮೂರನೇ ಭಾಗದಲ್ಲಿ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ, ತಮ್ಮ ಉದ್ದೇಶಕ್ಕನುಗುಣವಾಗಿ ವಚನಗಳನ್ನು ಸಂಕಲಿಸಿಕೊಂಡಿದ್ದಾರೆ. ಎರಡನೇ ಭಾಗದಲ್ಲಿ ಮಾಡಿರುವ ವಿಂಗಡಣೆ ವೀರಶೈವ ಧರ್ಮದ ತಾತ್ವಿಕ ಪ್ರಣಾಳಿಕೆಗೆ ಅನುಗುಣವಾಗಿದೆ. ಮೂರನೆಯ ಭಾಗವಂತೂ ವಚನಕಾರರ ಉದ್ದೇಶವನ್ನೇ ಅಳಿಸಿಹಾಕಿಬಿಟ್ಟಿದೆ. ಈ ಮೂರನೇ ಭಾಗದಲ್ಲಿಯೇ ಶೂನ್ಯ ಸಂಪಾದನೆಗಳು ಕಾಣಿಸಿಕೊಳ್ಳುತ್ತವೆ. ಈ ಶೂನ್ಯ ಸಂಪಾದನೆಗಳು ಇತ್ತ ವಚನಗಳ ಸಂಕಲನಗಳಾಗಿರದೆ, ಅತ್ತ ಸ್ವತಂತ್ರ ಕಾವ್ಯಗಳೂ ಆಗಿರದೆ ತುಂಬಾ ವಿಚಿತ್ರವಾದ ರೂಪವೊಂದನ್ನು ಪಡೆದುಕೊಂಡು ವಿವಾದಕ್ಕೆಡೆಮಾಡಿಕೊಟ್ಟಿವೆ. ಆ ವಿವಾದಗಳು ಯಾವುವು? ಶೂನ್ಯ ಸಂಪಾದನೆಗಳ ಹಿಂದಿರುವ ಉದ್ದೇಶವಾದರೂ ಏನು? ಶರಣರ ಮೂಲ ವಚನಗಳಿಗಿಂತಲೂ ಇವು ಹೆಚ್ಚು ಜನಪ್ರಿಯವಾಗಲು ಕಾರಣವೇನು? ವಚನ ಚಳುವಳಿಯ ಮೂಲ ಆಶಯಕ್ಕೆ ಇವು ಬದ್ಧವಾಗಿವೆಯೆ? ಇದೆಲ್ಲದರ ಹಿಂದಿರುವ ರಾಜಕೀಯವೇನು? ಎಂಬಂತಹ ಅನೇಕ ಸವಾಲುಗಳು ಪ್ರಸ್ತುತ ಸಂದರ್ಭದಲ್ಲಿ ಎದ್ದುನಿಲ್ಲುತ್ತವೆ. ಈ ಬಗೆಗೆ ಮುಕ್ತ ಹಾಗೂ ಪ್ರಾಮಾಣಿಕ ಚಿಂತನೆ ನಡೆಸುವುದೇ ಈ ಲೇಖನದ ಉದ್ದೇಶವಾಗಿದೆ. ಯಾವುದೇ ಒಂದು ಮಹತ್ವದ ಕೃತಿ ತನ್ನ ಸಮಕಾಲೀನ ಸಂದರ್ಭದ ಸತ್ಯಗಳನ್ನು ತನ್ನೊಡಲೊಳಗಿಟ್ಟುಕೊಂಡಿರುತ್ತದೆ. ಅತ್ಯಂತ ಮಹತ್ವದ ಕೃತಿ ತನ್ನ ಸಮಕಾಲೀನ ಸತ್ಯಗಳೊಂದಿಗೆ, ಸಾರ್ವಕಾಲಿಕ ಮೌಲ್ಯಗಳಿಗೂ ಸ್ಪಂದಿಸುತ್ತದೆ. ಶೂನ್ಯಸಂಪಾದನೆ, ತನ್ನ ಸಮಕಾಲೀನ ಸಂದರ್ಭದ ಅಗತ್ಯಗಳಿಗೆ ಸ್ಪಂದಿಸಿದರೆ, ಶರಣರು ರಚಿಸಿದ ಮೂಲ ವಚನಗಳು ಸಮಕಾಲೀನತೆಯ ಜತೆಗೆ ಸಾರ್ವಕಾಲಿಕ ಸತ್ಯಗಳನ್ನು ಹೇಳುತ್ತವೆ.

ಶೂನ್ಯ ಸಂಪಾದೆನಗಳನ್ನು ಕುರಿತಂತೆ ಕನ್ನಡದಲ್ಲಿ ಈಗಾಗಲೇ ಅನೇಕ ಲೇಖನಗಳು ಕೃತಿಗಳು ಪ್ರಕಟವಾಗಿವೆ. ಈ ವಿಷಯದ ಬಗೆಗೆ ಪಿಎಚ್‌.ಡಿ ಮಹಾಪ್ರಬಂಧಗಳೂ ಬಂದಿವೆ. ಆದರೆ ಇವುಗಳಲ್ಲಿ ಹೆಚ್ಚಿನ ಬರಹಗಳು ಶೂನ್ಯ ಸಂಪಾದನೆಯ ವಿವರಣೆಗೆ, ವರ್ಣನೆಗೆ, ವೈಭವೀಕರಣಕ್ಕೆ ಸೀಮಿತವಾಗಿವೆ. ಕೆಲವು ಲೇಖನಗಳು ಪರಿಚಯಾತ್ಮಕವಾಗಿವೆ. “ಮಾರ್ಗ” ಒಂದನೇ ಸಂಪುಟದಲ್ಲಿ ಪ್ರಕಟವಾಗಿರುವ ಡಾ.ಎಂ.ಎಂ. ಕಲಬುರ್ಗಿಯವರ ಶೂನ್ಯ ಸಂಪಾದನೆ ಕುರಿತಾದ ಲೇಖನಗಳು ಮಾತ್ರ ಕೆಲವು ಮುಖ್ಯ ಸವಾಲುಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿವೆ. ಡಾ. ಎಂ. ಚಿದಾನಂದಮೂರ್ತಿಯವರ “ಶೂನ್ಯಸಂಪಾದನೆಯನ್ನು ಕುರಿತು” (೧೯೮೮) ಹಾಗೂ ಡಾ.ಎಚ್‌. ತಿಪ್ಪೇರುದ್ರಸ್ವಾಮಿಯವರ “ಶೂನ್ಯ ಸಂಪಾದನೆ ಮತ್ತು ಆಧುನಿಕ ಮೌಲ್ಯಗಳು” (೧೯೮೫) ಎಂಬ ಕೃತಿಗಳು ಶೂನ್ಯ ಸಂಪಾದನೆಯ ಸಾಂಸ್ಕೃತಿಕ ಅಧ್ಯಯನದ ಮುಖ್ಯ ರಚನೆಗಳಾಗಿವೆ. ಸಂ.ಶಿ. ಭೂಸನೂರಮಠರ “ಶೂನ್ಯ ಸಂಪಾದನೆಯ ಪರಾಮರ್ಶೆ” ಈ ಕ್ಷೇತ್ರದ ಮುಖ್ಯ ಆಕರವಾಗಿದೆ. ಈ ವಿಷಯದ ಬಗೆಗೆ ಪ್ರಕಟವಾದ ಡಾ.ವಿ. ಶಿವಾನಂದ ಹಾಗೂ ಡಾ. ಬಿ.ವ್ಹಿ. ಶಿರೂರ ಅವರ ಬಿಡಿ ಲೇಖನಗಳೂ ಗಮನ ಸೆಳೆಯುತ್ತವೆ.

. ಶೂನ್ಯಸಂಪಾದನೆಗಳು

ಇಲ್ಲಿಯವರೆಗೆ ನಾಲ್ಕು ಶೂನ್ಯಸಂಪಾದನೆಗಳು ಪ್ರಕಟವಾಗಿವೆ. ಇವುಗಳಲ್ಲಿ ಶಿವಗಣಪ್ರಸಾದಿ ಮಹಾದೇವಯ್ಯನವರ ಶೂನ್ಯಸಂಪಾದನೆಯೇ ಮೊಟ್ಟಮೊದಲನೆಯ ಶೂನ್ಯಸಂಪಾದನೆಯಾಗಿದೆ. ಇದರ ಕಾಲ ಸುಮಾರು ೧೪೨೦. ಕ್ರಿ.ಶ. ೧೪೯೦ರಲ್ಲಿ ರಚಿತವಾಗಿರಬಹುದಾದ ಹಲಗೆಯ ದೇವರ ಶೂನ್ಯಸಂಪಾದನೆ ಎರಡನೆಯದು. ಗುಮ್ಮಳಾಪುರ ಸಿದ್ಧಲಿಂಗ ಯತಿಗಳ ಶೂನ್ಯ ಸಂಪಾದನೆ ಮೂರನೆಯದು. ಇದು ಕ್ರಿ.ಶ. ೧೫೮೦ರಲ್ಲಿ ರಚನೆಯಾಗಿದೆ. ಕ್ರಿ.ಶ. ೧೬೧೬ರಲ್ಲಿ ರಚನೆಯಾಧ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆ ನಾಲ್ಕನೇ ಶೂನ್ಯ ಸಂಪಾದನೆಯಾಗಿದೆ. ಶಿವಗಣಪ್ರಸಾದಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಗುಮ್ಮಳಾಪುರ ಸಿದ್ಧಲಿಂಗ ಯತಿಗಳು ಮಾತ್ರ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಸೂರು ತಾಲೂಕಿನವರ್‌ಉ. ನಾಲ್ಕನೆಯವರಾದ ಗೂಳೂರು ಸಿದ್ಧವೀರಣ್ಣೊಡೆಯರು ಕೂಡ ತುಮಕೂರು ಜಿಲ್ಲೆಯ ಗೂಳೂರು ತಾಲೂಕಿನವರು.

ಕ್ರಿ.ಶ. ೧೯೩೦ರಲ್ಲಿ, ಬಿಜಾಪುರದ ಶಿವಾನುಭವ ಗ್ರಂಥಾಮಾಲಾ ಪ್ರಕಾಶನದಿಂದ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆ, ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ವಚನ ಪಿತಾಮಹ ಫ.ಗು. ಹಳಕಟ್ಟಿಯವರು ಇದರ ಸಂಪಾದಕರು. ಮುಂದೆ ಇದೇ ಕೃತಿ ಗುಲಬರ್ಗಾ ಜಿಲ್ಲೆಯ ರಾವೂರ ಶ್ರೀ ಸಿದ್ಧಲಿಂಗೇಶ್ವರ ಮಠದಿಂದ ಸಂ.ಶಿ. ಭೂಸನೂರಮಠ ಅವರ ಸಂಪಾದಕತ್ವದಲ್ಲಿ ೧೯೫೮ ರಲ್ಲಿ ಪ್ರಕಟವಾಯಿತು. ಕ್ರಿ.ಶ. ೧೯೬೯ ರಲ್ಲಿ ಡಾ.ಎಲ್‌. ಬಸವರಾಜು ಅವರು ಸಂಪಾದನೆ ಮಾಡಿದ ಶಿವಗಣ ಪ್ರಸಾದಿ ಮಹಾದೇವಯ್ಯಗಳ ಶೂನ್ಯ ಸಂಪಾದನೆಯನ್ನು ಚಿತ್ರದುರ್ಗದ ಶ್ರೀ ಬೃಹನ್ಮಠ ಮಹಾಸಂಸ್ಥಾನ ಪ್ರಕಟಿಸಿತು. ಇದೇ ಶಿವಗಣ ಪ್ರಸಾದಿ ಮಹಾದೇವಯ್ಯಗಳ ಶೂನ್ಯಸಂಪಾದನೆಯನ್ನು, ಕರ್ನಾಟಕ ವಿಶ್ವವಿದ್ಯಾಲಯವು ಡಾ.ಆರ್.ಸಿ. ಹಿರೇಮಠರ ಸಂಪಾದಕತ್ವದಲ್ಲಿ ೧೯೭೦ರಲ್ಲಿ ಪ್ರಕಟಿಸಿತು. ಗುಮ್ಮಳಾಪುರ ಸಿದ್ಧಲಿಂಗ ಯತಿಗಳ ಶೂನ್ಯಸಂಪಾದನೆ ಕೂಡ ೧೯೭೨ರಲ್ಲಿ ಡಾ. ಆರ್.ಸಿ. ಹಿರೇಮಠ ಸಂಪಾದನೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಯಿತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿದ್ದ ಹಲಗೆದೇವರ ಶೂನ್ಯ ಸಂಪಾದನೆಯ ಹಸ್ತಪ್ರತಿ ಇತ್ತೀಚೆಗೆ ಕ್ರಿ.ಶ. ೧೯೯೮ರಲ್ಲಿ ಡಾ. ವಿದ್ಯಾಶಂಕರ ಹಾಗೂ ಪ್ರೊ. ಜಿ.ಎಸ್‌. ಸಿದ್ಧಲಿಂಗಯ್ಯನವರ ಸಂಪಾದಕತ್ವದಲ್ಲಿ ಪ್ರಕಟವಾಯಿತು.

ಶೂನ್ಯ ಸಂಪಾದನೆಗಳು ಸಂಖ್ಯೆಯ ದೃಷ್ಟಿಯಿಂದ ನಾಲ್ಕು ಇವೆ. ಕೆಂಚವೀರಣ್ಣೊಡೆಯ, ಹಲಗೆದೇವರ ಶಿಷ್ಯನಾಗಿದ್ದು ಈತನದು ಮತ್ತೊಂದು ಶೂನ್ಯಸಂಪಾದನೆಯಿಲ್ಲವೆಂದು ಈಗಾಗಲೇ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಈಗಿರುವ ನಾಲ್ಕು ಶೂನ್ಯ ಸಂಪಾದನೆಗಳನ್ನು ಕುರಿತು ಈಗಾಗಲೇ ತೌಲನಿಕ ಅಧ್ಯಯನಗಳು ನಡೆದಿವೆ. ಇಲ್ಲಿ ನಾಲ್ಕು ಶೂನ್ಯಸಂಪಾದನೆಗಳಿದ್ದರೂ ಅವು ಮುಖ್ಯವಾಗಿ ಎರಡು ಪರಂಪರೆಗೆ ಸೇರಿವೆ. ಶಿವಗಣಪ್ರಸಾದಿ ಮಹಾದೇವಯ್ಯ ಹಾಗೂ ಹಲಗೆದೇವರ ಶೂನ್ಯಸಂಪಾದನೆಗಳು ಹರಿಹರ ಕವಿಯ ಪರಂಪರೆಗೆ ಸೇರಿದರೆ, ಗುಮ್ಮಳಾಪುರ ಸಿದ್ಧಲಿಂಗದೇವರು ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಗಳು ಚಾಮರಸ ಕವಿಯ ಪರಂಪರೆಗೆ ಸೇರುತ್ತವೆ.

ಪ್ರಭುದೇವರು ಶಾಪದಿಂದ ಬಂದುದು, ಕಾಮಲತೆಯ ಪ್ರಸಂಗವಿರುವುದು, ಅಕ್ಕ-ಕೌಶಿಕರ ಸಂಬಂಧವಿರುವುದು ಮೊದಲಿನ ಎರಡು ಸಂಪಾದನೆಗಳಲ್ಲಿ ಕಂಡುಬಂದರೆ, ನಂತರ ರಚನೆಯಾದ ಗುಮ್ಮಳಾಪುರ ಹಾಗೂ ಗೂಳೂರು ಸಂಪಾದನೆಗಳಲ್ಲಿ ಈ ಪ್ರಸಂಗಗಳು ಕಾಣುವುದಿಲ್ಲ. ಆದರೆ ಸಿದ್ಧರಾಮನ ದಿಕ್ಷಾ ಪ್ರಸಂಗ ಶಿವಗಣಪ್ರಸಾದಿ ಸಂಪಾದನೆಯಲ್ಲಿ ಇಲ್ಲದೇ ಇರುವುದರಿಂದಲೇ ಮುಂದಿನ ಸಂಪಾದನೆಗಳು ಹುಟ್ಟಿಕೊಂಡಿವೆ. ಸಿದ್ಧರಾಮನ ದೀಕ್ಷಾಕ್ರಮವನ್ನು ವಿಶೇಷವಾಗಿ ಬಣ್ಣಿಸಿವೆ.

ಶಿವಗಣಪ್ರಸಾದಿಯಲ್ಲಿರದ ನುಲಿಯ ಚಂದಯ್ಯಗಳ ಸಂಪಾದನೆ ಹಲಗೆದೇವರ ಸಂಪಾದನೆಯಲ್ಲಿದ್ದರೆ, ಇವರಿಬ್ಬರಲ್ಲಿಯೂ ಕಾಣಿಸದ ಆಯ್ದಕ್ಕಿಮಾರಯ್ಯಗಳ ಸಂಪಾದನೆ ಗುಮ್ಮಳಾಪುರದ ಸಿದ್ಧಲಿಂಗದೇವರ ಕೃತಿಯಲ್ಲಿದೆ. ಈ ಮೂವರಲ್ಲಿಯೂ ಇರದ ಮೋಳಗೆ ಮಾರಯ್ಯ ಹಾಗೂ ಘಟ್ಟಿವಾಳಯ್ಯಗಳ ಸಂಪಾದನೆ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯಲ್ಲಿ ಸೇರಿಕೊಂಡಿದೆ. ಹೀಗೆ ಒಂದರಿಂದ ಮತ್ತೊಂದು ಸಂಪಾದನೆಯಲ್ಲಿ ಬೆಳವಣಿಗೆಯಿದೆ.

ಸಿದ್ಧರಾಮನು ಶೈವನಾಗಿಯೇ ಉಳಿದನೆಂಬ ಅಂಶ ಶಿವಗಣಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆಯಲ್ಲಿ ಬರುತ್ತದೆ. ಈ ಅಂಶವನ್ನು ಹಲಗೆಯಾರ್ಯ ಪ್ರತಿಭಟಿಸುತ್ತಾನೆ. ಶಿವಗುಣಪ್ರಸಾದಿಯನ್ನು ಹೊರತುಪಡಿಸಿ, ಉಳಿದ ಶೂನ್ಯಸಂಪಾದನೆಕಾರರು ಸಿದ್ಧರಾಮನ ಲಿಂಗದೀಕ್ಷಾ ಪ್ರಕರಣವನ್ನು ಸೇರಿಸಿ, ಅವನು ವೀರಶೈವನೇ ಆಗಿ ಬಾಳಿದ್ದನೆಂದು ಹೇಳುತ್ತಾರೆ. ಮುಂದಿನ ಶೂನ್ಯಸಂಪಾದನೆಗಳ ಹುಟ್ಟಿಗೆ ಈ ಸಿದ್ಧರಾಮನ ಲಿಂಗದೀಕ್ಷಾ ಪ್ರಕರಣವೇ ಮುಖ್ಯ ಕಾರಣವಾಗಿದೆ. ಈ ದೀಕ್ಷಾ ಪ್ರಸಂಗದ ಹಿಂದಿರುವ ಸತ್ಯಾಸತ್ಯತೆಗಳೇನೆಂಬುದನ್ನು ಕುರಿತು ಚಿಂತಸಿದಾಗ ಒಂದು ಮಾತು ಸ್ಪಷ್ಟವಾಗುತ್ತದೆ.

ಶಿವಗಣಪ್ರಸಾದಿಯನ್ನು ಮುಂದಿನ ಮೂವರು ಸಂಪಾದನಾಕಾರರು ಸ್ಮರಿಸಿದ್ದಾರೆ. ಇವರನ್ನು ಬಿಟ್ಟರೆ ಶಿವಗಣಪ್ರಸಾದಿ ಬಗೆಗೆ ಹೆಚ್ಚಿನ ಉಲ್ಲೇಖಗಳು ದೊರೆಯುವುದಿಲ್ಲ. ಕ್ರಿ.ಶ. ೧೬೫೦ರಲ್ಲಿದ್ದ ಸಿದ್ಧನಂಜೇಶ ತನ್ನ ರಾಘವಾಂಕ ಚರಿತ್ರದಲ್ಲಿ ಸಂ. ೧,ಪು.೧೨ರಲ್ಲಿ ವೀರಶೈವ ಕವಿಗಳಾದ ಹರಿಹರ, ಕೆರೆಯ ಪದ್ಮರಸ, ಚಾಮರಸರನ್ನು ಉಲ್ಲೇಖಿಸುತ್ತ, ಶಿವಗಣ ಪ್ರಸಾದಿಯ ನಾಮಸ್ಮರಣೆಯನ್ನು ಮಾಡಿದ್ದಾರೆ. ಆ ಪದ್ಯದ ಕೊನೆಯ ಸಾಲುಗಳು ಹೀಗಿವೆ.

“……….ಮಹಾದೇವಯ್ಯರೆನಿಪ ಸದ್ಬ್ರಾಹ್ಮಣ್ಯ
ದಿರವಾದ ಗಣ್ಯಪುಣ್ಯರ ಚರಣಕೆನ್ನೆರ್ದೆಯನೊಸೆದುದು
ಪಾದುಕೆಗೆಯ್ವೆನು

ಈ ಸಾಲುಗಳಲ್ಲಿ ಬರುವ “ಸದ್ಬ್ರಾಹ್ಮಣ” ಪದವನ್ನು ಗಮನಿಸಬೇಕು. ಈ ಪದ ಎರಡು ಅರ್ಥಗಳನ್ನು ಕೊಡುತ್ತದೆ. ಶಿವಗಣಪ್ರಸಾದಿ ಮೊದಲಾದವರು ಶ್ರೇಷ್ಠ ವಿದ್ವಾಂಸರಾಗಿದ್ದರೆಂದು ಒಂದು ಅರ್ಥವಾದರೆ, ಶಿವಗಣಪ್ರಸಾದಿ ಬ್ರಾಹ್ಮಣ ಮನೆತನದವನೆ? ಎಂಬ ಮತ್ತೊಂದು ಅರ್ಥ ಹೊರಡುತ್ತದೆ. ಶಿವಗಣಪ್ರಸಾದಿ ಶೈವಬ್ರಾಹ್ಮಣನಾಗಿದ್ದು, ಸಿದ್ಧರಾಮನ ಲಿಂಗದೀಕ್ಷಾ ಕ್ರಮವನ್ನು ಕೈಬಿಟ್ಟಿರಬೇಕೆಂದು ಊಹಿಸಲು ಈ ಪದ್ಯದ ಸಾಲುಗಳು ಎಡೆಮಾಡಿಕೊಡುತ್ತವೆ. ಮುಂದಿನ ಸಂಪಾದನಕಾರರು ತೋಂಟದ ಶಿವಯೋಗಿಗಳ ಪರಂಪರೆಯಲ್ಲಿ ಬೆಳೆದವರಾದ್ದರಿಂದ ಅವರು ಸಹಜವಾಗಿಯೇ ಇಷ್ಟಲಿಂಗ ಪರಂಪರೆಗೆ ಬದ್ಧರಾದ್ದರಿಂದ ಸಿದ್ಧರಾಮನ ಲಿಂಗದೀಕ್ಷಾ ಪ್ರಕರಣವನ್ನು ಸೇರಿಸಲೆಂದೇ ಶೂನ್ಯಸಂಪಾದನೆಗಳನ್ನು ರಚಿಸಿರಬೇಕೆಂಬ ಮಾತಿನಲ್ಲಿ ಸತ್ಯಾಂಶವಿದೆ.

. ಶೂನ್ಯಸಂಪಾದನೆಯ ಮಿತಿಗಳು

“ಹಲಗೆದೇವ ಮಾತ್ರ ಮೂಲದ ಕಥೆಯನ್ನು ಬಹಳಷ್ಟು ಹಿಂಜಿ ಶೂನ್ಯಸಂಪಾದನೆಯ ಉದ್ದೇಶವನ್ನೇ ಹಾಳುಮಾಡಿದಂತಿದಿದೆ. ಸಿದ್ಧರಾಮನ ಲಿಂಗದೀಕ್ಷೆಯ ವಿಷಬೀಜವನ್ನು ಮೊತ್ತಮೊದಲಿಗೆ ಬಿತ್ತಿದವನೇ ಇವನು. ಚೆನ್ನಬಸವಣ್ಣನೇ ಪ್ರಭುವನ್ನು ಮೂದಲಿಸಿ ಸಿದ್ಧರಾಮನಿಗೆ ಲಿಂಗಕಟ್ಟಲೇ ಬೇಕೆಂದು ಪಟ್ಟು ಹಿಡಿದಂತೆ ಇಲ್ಲಿ ಚಿತ್ರಿಸಲಾಗಿದೆ. ಅಲ್ಲದೆ ಇಲ್ಲಿ ಸಿದ್ಧರಾಮನನ್ನು ವಿಷ್ಣುವಿನ ಅವತಾರವೆಂದು ಕಲ್ಪಿಸಿರುವುದೂ ಒಂದು ವಿಪರಾಸ್ಯವೇ ಸರಿ. ಮುಂದೆ ಬಂದ ಸಿದ್ಧಲಿಂಗದೇವರು ಈ ಪ್ರಸಂಗವನ್ನು ಔಚಿತ್ಯಪೂರ್ಣವಾಗಿ ಸಂಗ್ರಹಿಸಿದರೆ, ಸಿದ್ಧವೀರಣ್ಣೊಡೆಯರು ಇದನ್ನು ಇನ್ನೂ ಸಂಕ್ಷೇಪಿಸಿದ್ದಾರೆ[3] ಎಂದು ಹೇಳಿರುವ ಡಾ.ಬಿ.ವ್ಹಿ. ಶಿರೂರ ಅವರ ಮಾತುಗಳು ಹೊಸ ಚರ್ಚೆಗೆ ಅವಕಾಶವನ್ನು ಮಾಡಿಕೊಡುತ್ತವೆ. “ಸಿದ್ಧರಾಮನ ಲಿಂಗದೀಕ್ಷೆಯ ವಿಷಬೀಜ” ಎಂದು ಬಳಸಿರುವ ಅವರ ಈ ವಾಕ್ಯವನ್ನು ಗಂಭೀರವಾಗಿ ಚರ್ಚಿಸಲಾಗಿದೆ.

ಡಾ. ಶಿರೂರ ಅವರ ಈ ಮಾತಿಗೆ ಪೂರಕವಾಗಿ ಡಾ.ಡಿ.ಎಲ್‌. ನರಸಿಂಹಾಚಾರ್ಯರ ಮಾತು ಗಮನ ಸೆಳೆಯುತ್ತದೆ. “ಶೂನ್ಯ ಸಂಪಾದನೆಯ ಪರಿಷ್ಕರಣಗಳು ಮೇಲಿಂದ ಮೇಲೆ ಆದದ್ದಕ್ಕೆ ಮುಖ್ಯಕಾರಣ. ಸಿದ್ಧರಾಮನಿಗೆ ವೀರಶೈವದೀಕ್ಷೆಯನ್ನು ಕೊಡಿಸುವುದೇ ಆಗಿದೆ”[4] ಎಂದು ಡಿ.ಎಲ್‌.ಎನ್‌. ಸಿದ್ಧರಾಮಚರಿತ್ರೆಯ ಸಂಗ್ರಹದ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಹೀಗೆ ಇಲ್ಲದ ಪ್ರಸಂಗಗಳನ್ನು ಸೃಷ್ಟಿಮಾಡುತ್ತಾ ಹೋದದ್ದರಿಂದಲೇ ಮುಂದಿನ ಶೂನ್ಯಸಂಪಾದನೆಗಳಲ್ಲಿ ಅನೇಕ ಖೊಟ್ಟಿ ವಚನಗಳು ಸೇರಿಕೊಂಡಿವೆ. ಇದನ್ನು ಡಾ. ಕಲಬುರ್ಗಿಯವರು ಸ್ಪಷ್ಟವಾಗಿ ಗುರುತಿಸಿದ್ದಾರೆ.

“ಶೂನ್ಯ ಸಂಪಾದನೆಗಳಲ್ಲಿ ನಡೆದ ದೊಡ್ಡ ಸಾಹಸವೆಂದರೆ ಹೊಸ ವಚನಗಳನ್ನು ಕಟ್ಟಿ ಸೇರಿಸಿದುದು. ಬಹುಶಃ ಇಲ್ಲಿಯ ದೀರ್ಘವಚನಗಳೆಲ್ಲ ಈ ಸಾಹಸದ ಸಂತಾನಗಳೇ ಆಗಿರಬಹುದು. ಶೂನ್ಯಸಂಪಾದನೆಗಳು ಬಸವಣ್ಣನವ್ರ ೩೦೦ ವಚನಗಳನ್ನು ಬಳಸಿಕೊಂಡಿವೆ. ಇವುಗಳಲ್ಲಿ ೨೦೦ ವಚನಗಳು ಬೇರೆ ಯಾವ ಪ್ರಾಚೀನ ಸಂಗ್ರಹದಲ್ಲಿಯೂ ಸಿಗದೆ ಕೇವಲ ಶೂನ್ಯ ಸಂಪಾದನೆಯಲ್ಲಿಯೇ ಕಾಣುತ್ತವೆ. ಇವು ಇವರಿಗೆ ಎಲ್ಲಿಂದ ಸಿಕ್ಕವು? ಬೇರೆಯವರಿಗೆ ಏಕೆ ಸಿಗಲಿಲ್ಲ? ಈ ಪ್ರಶ್ನೆಗೆ ಬಹುಶಃ ಇವು ಸಂಪಾದನಾಕಾರರೇ ಕಟ್ಟಿದ ವಚನಗಳಿವು. ಹೀಗೆ ಬಸವಣ್ಣನವರ ೩೦೦ ವಚನಗಳಲ್ಲಿ ೨೦೦ ವಚನಗಳು ಸಂಪಾದನಾಕಾರರ ಸೃಷ್ಟಿಯಾಗಿರುವುದು ನಿಜವಿದ್ದರೆ, ಶೂನ್ಯಸಂಪಾದನೆ ಮೂರರಲ್ಲಿ ಎರಡು ಪಾಲು ಕೂಟವಚನಗಳನ್ನೊಳಗೊಂಡಿದೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ”[5] ಎಂದು ಹೇಳಿರುವ ಮಾತುಗಳು ತುಂಬಾ ಮುಖ್ಯವಾಗಿವೆ. “ಶೂನ್ಯಸಂಪಾದನೆಯ ರಚನೆಗಾಗಿ ಇವರು ಮಾಡಕೊಂಡ ವಚನಗಳ ಪಾಠ್ಯ ವ್ಯತ್ಯಾಸ, ಕೂಟ ವಚನಗಳ ಸೃಷ್ಟಿ ಒಂದು ದೃಷ್ಟಿಯಿಂದ ದೊಡ್ಡ ಅನ್ಯಾಯವೆಂದೇ ಹೇಳಬೇಕು”[6] ಎಂದು ಖಡಾಖಂಡಿತವಾಗಿ ಹೇಳಿರುವ ಡಾ. ಕಲಬುರ್ಗಿಯವರ ವಿಚಾರಗಳು ಸತ್ಯಶೋಧನೆಯ ಪ್ರತಿಪಾಧನೆಗಳಾಗಿವೆ.

ಹೀಗೆ ಶೂನ್ಯಸಂಪಾದನೆಗಳಲ್ಲಿ ಅನೇಕ ಸುಳ್ಳು ವಚನಗಳನ್ನು ಕಟ್ಟಿ ಸೇರಿಸಿರುವಂತೆ, ಶರಣರ ವಚನಗಳ ಮೂಲ ರಚನೆಗಳನ್ನೇ ತಿದ್ದಿ ತಮ್ಮ ಸಂದರ್ಭಕ್ಕನುಕೂಲವಾಗುವ ಹಾಗೆ ಜೋಡಿಡಿಸಿಕೊಂಡಿದ್ದಾರೆ.

ಅರಸು ವಿಚಾರ ಸಿರಿಯ ಸಿಂಗಾರ ಸ್ಥಿರವಲ್ಲ ಮಾನವಾ
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ
ಒಬ್ಬ ಜಂಗಮದ ಅಭಿಮಾನದಿಂದ ಚಾಳುಕ್ಯರಾಯನ ಆಳಿಕೆ
ತೆಗೆಯಿತ್ತು, ಸಂದಿತ್ತು ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ[7]

ಬಸವಣ್ಣನವರ ಈ ವಚನಗಳನ್ನು ಶೂನ್ಯ ಸಂಪಾದನೆಯಲ್ಲಿ ಬದಲಾಯಿಸಿಕೊಳ್ಳಲಾಗಿದೆ. “ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು ಸಂದಿತ್ತು” ಎಂಬ ವಾಕ್ಯಕ್ಕೆ ಬದಲಾಗಿ “ಜಗದೇವ ಮೊಲ್ಲೆಬೊಮ್ಮಣ್ಣಗಳ ಕೈಯಲ್ಲಿ ಮಡಿದಿಹನು ಬಿಜ್ಜಳನು” ಎಂಬ ವಾಕ್ಯವನ್ನು ಸೇರಿಸಲಾಗಿದೆ. ಹೀಗೆ ಅನೇಕ ವಚನಗಳನ್ನು ಶೂನ್ಯ ಸಂಪಾದನೆಯಲ್ಲಿ ಬದಲಾಯಿಸಿಕೊಳ್ಳಲಾಗಿದೆ. “ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು ಸಂದಿತ್ತು” ಎಂಬ ವಾಕ್ಯಕ್ಕೆ ಬದಲಾಗಿ “ಜಗದೇವ ಮೊಲ್ಲೆಬೊಮ್ಮಣ್ಣಗಳ ಕೈಯಲ್ಲಿ ಮಡಿದಿಹನು ಬಿಜ್ಜಳನು” ಎಂಬ ವಾಕ್ಯವನ್ನು ಸೇರಿಸಲಾಗಿದೆ. ಹೀಗೆ ಅನೇಕ ವಚನಗಳನ್ನು ಶೂನ್ಯಸಂಪಾದನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ, ಕೆಲವು ವಚನಗಳನ್ನು ವಿರೂಪಗೊಳಿಸಲಾಗಿದೆ. ಒಂದೇ ವಚನ ಶಿವಗಣಪ್ರಸಾದಿಯಲ್ಲಿ ಒಂದು ಸಂದರ್ಭಕ್ಕೆ ಬಳಕೆಯಾಗಿದ್ದರೆ, ಉಳಿದವರ ಸಂಪಾದನೆಗಳಲ್ಲಿ ಮತ್ತೊಂದು ಸಂದರ್ಭಕ್ಕೆ ಆ ವಚನಗಳನ್ನು ಬಳಸಿಕೊಳ್ಳಲಾಗಿದೆ. ವಚನಗಳ ಹಿಂದೆ ಮುಂದೆ ಅನೇಕ ಪೂರಕ ಮಾತುಗಳನ್ನು ಸಂಬೋಧನೆಗಳನ್ನು ಸೇರಿಸಿಕೊಳ್ಳಲಾಗಿದೆ.

ಶೂನ್ಯಸಂಪಾದನಾಕಾರರು ಹೀಗೆ ವಚನಗಳನ್ನು ಹಿಗ್ಗಿಸಿ-ಕುಗ್ಗಿಸಿ ತಾವು ಹೇಳಬೇಕಾಗಿರುವ ಸಂದರ್ಭಕ್ಕನುಗುಣವಾಗಿ ವಚನಗಳನ್ನು ಬಳಸಿಕೊಂಡಿದ್ದಾರೆ. ತಮ್ಮ ವಿಚಾರವನ್ನು ಪ್ರತಿಪಾದಿಸುವಲ್ಲಿ ವಚನಗಳು ಪೂರಕವಾಗದಿದ್ದಾಗ, ಹೊಸ ವಚನಗಳನ್ನೇ ಶರಣರ ಹೆಸರಿನಲ್ಲಿ ಸೃಷ್ಟಿಸಿ ತಮ್ಮ ಉದ್ದೇಶವನ್ನೀಡೇರಿಸಿಕೊಂಡಿದ್ದಾರೆ. ಈಗ ಪ್ರಕಟವಾಗಿರುವ ವಚನ ಸಂಪುಟಗಳಲ್ಲಿ ಎರಡನೇ ಭಾಗ ಮಾಡಿ “ಹೆಚ್ಚಿನ ವಚನಗಳು” ಎಂದು ಸೇರಿಸಲಾಗಿದೆ. ಈ ಹೆಚ್ಚಿನ ವಚನಗಳೆಲ್ಲಾ ಶೂನ್ಯಸಂಪಾದನಾಕಾರರ ಸೃಷ್ಟಿಗಳಾಗಿವೆ. ಇಂತಹ ಸುಳ್ಳುಸೃಷ್ಟಿಗಳ ಬಗೆಗೆ ಗಂಭೀರವಾದ ಚರ್ಚೆ ನಡೆಯಬೇಕಾಗಿದೆ.

ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆಯಲ್ಲಿ “ಸಮಯದ ವಾಕ್ಯ” ಎಂಬ ಹೊಸ ಪಾತ್ರ ಬರುತ್ತದೆ. ಸಮಯದ ವಾಕ್ಯವೆಂಬ ಹಸರಿನಲ್ಲಿ ಅನೇಕ ಖೊಟ್ಟಿವಚನಗಳನ್ನು ಸೇರಿಸಲಾಗಿದೆ. ಘಟ್ಟಿವಾಳಯ್ಯನ ಸಂಪಾದನೆಯನ್ನು ಹೊಸದಾಗಿ ಸೃಷ್ಟಿಸಿದ ಸಿದ್ಧವೀರಣ್ಣೊಡೆಯ ಇದೇ ಅಧ್ಯಾಯದಲ್ಲಿ ಸಮಯದ ವಾಕ್ಯ ಹೇಳುವ ವಚನಗಳನ್ನೂ ಸೇರಿಸಿದ್ದಾನೆ. ಇಲ್ಲಿಯೂ ಕೂಡ ಇಷ್ಟಲಿಂಗದ ಪ್ರಸ್ತಾಪವೇ ಮುಖ್ಯವಾಗಿದೆ. ಘಟ್ಟಿವಾಳಯ್ಯ ಮತ್ತು ಪ್ರಭು ದೇವರ ನಡುವೆ ಚರ್ಚೆಯಲ್ಲಿ, ಪ್ರಭುದೇವರ ಹೆಸರಿನಲ್ಲಿ ಅನೇಕ ಹೊಸ ವಚನಗಳು ಸೃಷ್ಟಿಯಾಗಿವೆ.

“ಅಂಡಜ ಮುಗ್ಧೆಯ ಮಕ್ಕಳಿರಾ, ಕೆಂಡದ ಮಳೆಕರೆವಲ್ಲಿ ನಿಮ್ಮ ಹೆಂಡಿರು, ಹಳು ಹೊಕ್ಕು ಹೋದಿರಲ್ಲಾ!” ಎಂದು ಘಟ್ಟಿವಾಳಯ್ಯ ವಿಡಂಬಿಸಿದಾಗ ಸಿದ್ಧವೀರಣ್ಣೊಡೆಯನಿಗೆ ಏನು ಹೇಳಬೇಕು, ಯಾವ ವಚನವನ್ನಿಲ್ಲಿ ಸೇರಿಸಬೇಕು? ಎಂಬುದು ಹೊಳೆಯದಂತಾಗಿರಬೇಕು. ಆಗ ಆತನೇ ವಚನಗಳನ್ನು ಸೃಷ್ಟಿಸಿ “ಸಮಯದ ವಾಕ್ಯ”ವೆಂದು ಸೇರಿಸಿಬಿಟ್ಟಿದ್ದಾನೆ. ಘಟ್ಟಿ ವಾಳಯ್ಯನ ಮೇಲಿನ ವಿಡಂಬನೆಗೆ ಸಮಯದ ವಾಕ್ಯ ಹೀಗೆ ಉತ್ತರ ಕೊಡುತ್ತದೆ.

ಫಳವ ಸುಲಿಸುವನ್ನಬರ ಬಿತ್ತು ಸಿಪ್ಪೆ ಉಭಯವೂ ಇರಬೇಕು
ಸಾರವ ಸವಿದಲ್ಲಿ ಸಮಯ ಉಳಿದಿತ್ತು
ಹಾಗರಿಯಬೇಕು ಘಟ್ಟಿವಾಳಣ್ಣಾ[8]

ಎಂದು ಹೇಳುವ ಸಮಯದ ವಾಕ್ಯವು ಒಬ್ಬ ಸ್ವತಂತ್ರ ವಚನಕಾರನಂತೆ ಅನೇಕ ವಚನಗಳನ್ನು ಹೇಳುತ್ತಾ ಹೋಗುತ್ತದೆ. ಹಳ್ಳದ ಹೊಡಕೆಯನ್ನೇ ಶಿವದಾರವನ್ನಾಗಿ ಮಾಡಿ, ಬೆಟ್ಟದ ಗುಂಡನ್ನೇ ಲಿಂಗವನ್ನಾಗಿ ಮಾಡಿ, ಮಡಕೆಯ ನೀರನ್ನೇ ಮಜ್ಜನವೆಂದು ತಿಳಿದು ಪೂಜಿಸುತ್ತಿದ್ದ ಘಟ್ಟಿವಾಳಯ್ಯನಿಗೆ ಇಷ್ಟಲಿಂಗ ಅಗತ್ಯವೆಂದು ಹೇಳಲು ಸಿದ್ಧವೀರಣ್ಣೊಡೆಯ ‘ಸಮಯದ ವಾಕ್ಯ’ ಹೆಸರಿನಲ್ಲಿ ಹೊಸ ವಚನಗಳನ್ನು ಬರೆದು ಜೋಡಿಸಿದ್ದಾನೆ.

ಶೂನ್ಯಸಂಪಾದನಾಕಾರರೂ ಹೀಗೆ ಅನೇಕ ವಚನಗಳನ್ನು ತರ್ಕಬದ್ಧವಾಗಿ ಜೋಡಿಸಿದ್ದಾರೆ. ಆ ಸಂದರ್ಭದಲ್ಲಿ ನಿಂತು ನೋಡಿದಾಗ ಅವು ಖೊಟ್ಟಿವಚನಗಳೆಂದು ಅನ್ನಿಸುವುದೇ ಇಲ್ಲ. ಅಷ್ಟೊಂದು ಸಹಜತೆ ಆ ರಚನೆಗಳಲ್ಲಿದೆ.

ಶೂನ್ಯ ಸಂಪಾದನಾಕಾರರು ಸಂಯೋಜಿಸಿದ ಅನೇಕ ಅಧ್ಯಾಯಗಳಲ್ಲಿ ಗುರು-ಲಿಂಗ-ಜಂಗಮದ ಪ್ರಾಮುಖ್ಯತೆಯನ್ನೇ ಹೆಚ್ಚು ವೈಭವೀಕರಿಸಿ ಹೇಳಲಾಗಿದೆ. ಸಿದ್ಧರಾಮನ ಲಿಂಗ ದೀಕ್ಷಾ ಪ್ರಸಂಗ, ನುಲಿಯ ಚಂದಯ್ಯಗಳ ಪ್ರಸಂಗ, ಘಟ್ಟಿವಾಳಯ್ಯಗಳ ಪ್ರಸಂಗ ಈ ಎಲ್ಲಾ ಸಂಪಾದನೆಗಳಲ್ಲಿ ಇಷ್ಟಲಿಂಗದ ಪ್ರಾಮುಖ್ಯತೆಯನ್ನೇ ಮತ್ತೆ ಮತ್ತೆ ವಿವರಿಸಲಾಗಿದೆ. ಗುಮ್ಮಳಾಪುರದ ಸಿದ್ಧಲಿಂಗದೇವರು, ಗೂಳೂರಯ ಸಿದ್ಧವೀರಣ್ಣೊಡೆಯ ಇವರೆಲ್ಲಾ ತೋಂಟದ ಸಿದ್ಧಲಿಂಗಯತಿಗಳ ಶಿಷ್ಯ ಪರಂಪರೆಗೆ ಸೇರಿರುವುದರಿಂದ ಇಷ್ಟಲಿಂಗದಂತಹ ಧಾರ್ಮಿಕ ಪಠ್ಯಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.

ಶರಣರ ಬಗೆಗೆ ಅವರ ಬದುಕಿನ ಬಗೆಗೆ ತಿಳಿದುಕೊಳ್ಳಲು ಮುಖ್ಯ ಆಕರಗಳೆಂದರೆ ಅವರು ರಚಿಸಿರುವ ವಚನಗಳು. ಆದರೆ ವಚನಗಳಲ್ಲಿ ಅವರು ತಮ್ಮ ಜೀವನದ ಬಗೆಗೆ ಏನನ್ನೂ ಹೇಳಿಲ್ಲ. ಹೀಗಾಗಿ ಅವರ ಬಗೆಗೆ ತಿಳಿದುಕೊಳ್ಳಲು ದೊರೆಯುವ ಎರಡನೆಯ ಮುಖ್ಯ ಆಕರವೆಂದರೆ ಹರಿಹರನ ರಗಳೆಗಳು. ಹರಿಹರನು ಶರಣರು ಬದುಕಿದ್ದ ಕಾಲಕ್ಕೆ ಸಮೀಪವಿದ್ದಂತಹ ಕವಿ. ಹರಿಹರ, ಶರಣರ ಆಶಯಗಳಿಗೆ ವಚನಗಳ ಧೋರಣೆಗಳಿಗೆ ಪೂರಕವಾಗಿಯೇ ತನ್ನ ರಗಳೆಗಳನ್ನು ರಚಿಸಿದ್ದಾನೆ. ಶರಣರ ಕಾಯಕತತ್ವವನ್ನು ಎತ್ತಿ ಹೇಳಿದ್ದಾನೆ. ಅನೇಕ ದಲಿತ ವಚನಕಾರರ ಬಗೆಗೆ ಸ್ವತಂತ್ರ ರಗಳೆಗಳನ್ನು ರಚಿಸಿ ಶರಣರು ಕಟ್ಟಿಕೊಟ್ಟ ಜಾತ್ಯಾತೀತ ಮೌಲ್ಯಗಳನ್ನು ದಾಖಲಿಸಿದ್ದಾನೆ. ಹೀಗಾಗಿ ಹರಿಹರ ಕವಿಯೇ ಎರಡನೆಯ ಮುಖ್ಯ ಆಕರವಾಗುತ್ತಾನೆ.

ಅಂತೆಯೇ ಶಿವಗಣಪ್ರಸಾದಿಗಳು ಹರಿಹರನನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಪ್ರಭು ದೇವ ಕಾಮಲತೆಯೊಂದಿಗೆ ಮದುವೆಯಾಗಿ ನಂತರ ವೈರಾಗ್ಯ ತಾಳಿ ಶರಣನಾಗುತ್ತಾನೆ. ಕೌಶಿಕ ರಾಜ ತನ್ನ ರಾಜಪ್ರಭುತ್ವದ ಅಧಿಕಾರದಿಂದ ಒತ್ತಾಯದಿಂದ ಅಕ್ಕಮಹಾದೇವಿಯನ್ನು ಮದುವೆಯಾದ ವಿಷಯವನ್ನು ಹರಿಹರ ಪ್ರಸ್ತಾಪಿಸುತ್ತಾನೆ. ಮುಂದೆ ಅಕ್ಕ ಕೌಶಿಕನನ್ನು, ಅವನ ರಾಜವೈಭವವನ್ನು ತಿರಸ್ಕರಿಸಿ ಕಲ್ಯಾಣಕ್ಕೆ ಬಂದ ವಿಷಯ ಅಲ್ಲಿ ಬರುತ್ತದೆ. ಶಿವಗುಣಪ್ರಸಾದಿಗಳಲ್ಲಿ ಹರಿಹರನ ಈ ಎಲ್ಲ ವಿಷಯಗಳೂ ಪ್ರಸ್ತಾಪವಾಗಿವೆ. ಆದರೆ ಚಾಮರಸ ಕವಿಯ ಪ್ರಭುಲಿಂಗಲೀಲೆ ಇದಕ್ಕೆ ತದ್ವಿರುದ್ಧವಾಗಿದೆ. ಚಾಮರಸನ ದಾರಿಯಲ್ಲಿಯೇ ಮುಂದಿನ ಶೂನ್ಯ ಸಂಪಾದನಕಾರರು ನಡೆದಿದ್ದಾರೆ.

ಚಾಮರಸ ನೂರೊಂದು ವಿರಕ್ತರಲ್ಲಿ ಒಬ್ಬ. ಗುಮ್ಮಳಾಪುರ ಸಿದ್ಧಲಿಂಗದೇವರು ಹಾಗೂ ಗೂಳೂರು ಸಿದ್ಧವೀರೊಣ್ಣೊಡೆಯರು ಕೂಡಾ ಇದೇ ಪರಂಪರೆಗೆ ಸೇರಿದವರು. ಇವರಿಗೆ ಶರಣರ ಆಶಯಕ್ಕಿಂತ ವೀರಶೈವ ಧರ್ಮದ ಪುನರುತ್ಥಾನವಾಯಿತೆಂದು ಹೇಳುತ್ತಾರೆ, ಇದು ಸತ್ಯ. ಅಂದು ಮುಸ್ಲೀಂ ಆಳರಸರ ದಬ್ಬಾಳಿಕೆಯಲ್ಲಿ ಇವರಿಗೆ ತಮ್ಮ ಧರ್ಮವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿತ್ತು. ವೀರಶೈವ ಧರ್ಮದ ಪ್ರಚಾರದ ಸಂದರ್ಭದಲ್ಲಿ ಇವರೆಲ್ಲಾ ಶರಣರ ಮುಖ್ಯ ಆಶಯಗಳನ್ನು ಮೂಲೆಗೆ ತಳ್ಳಿದರು. ಶರಣರ ಮುಕ್ತಚರ್ಚೆಯ ವಿಷಯ ಮರೆತುಹೋಗಿ ಇಷ್ಟಲಿಂಗ ಪ್ರತಿಪಾದನೆಯೇ ಮುಖ್ಯವಾಯಿತು. ಆಧ್ಯಾತ್ಮ ಸಾಧನೆ ಸಂಸಾರಿಗಳಿಗಲ್ಲ, ಅದು ಕೇವಲ ವಿರಕ್ತರ ಸೊತ್ತು ಎಂಬಂತಾಯಿತು. ಅಂತೆಯೇ ಇವರ ಕಾಲದಲ್ಲಿ ಒಬ್ಬ ಸಂಸಾರಿಯೂ ಆಧ್ಯಾತ್ಮ ಸಾಧನೆಯಲ್ಲಿ ಮುಂದೆ ಬರಲಿಲ್ಲ. ನೂರೊಂದು ವಿರಕ್ತರಲ್ಲಿ ಆಧ್ಯಾತ್ಮ ಸಾಧನೆಯೊಂದೇ ಮುಖ್ಯವಾಯಿತು. ಹೀಗಾಗಿ ಚಾಮರಸನ ಪ್ರಭುಲಿಂಗಲೀಲೆ ಅಲ್ಲಮನ ವಾಸ್ತವ ಬದುಕಿನಿಂದ ದೂರ ಸರಿಯಿತು. ಹರಿಹರನ ಕಾಮಲತೆ ಇಲ್ಲಿ ಮಾಯೆಯಾದಳು. ಹೆಣ್ಣು ಮಾಯೆಯಲ್ಲವೆಂದು ಹೇಳಿದ ಅಲ್ಲಮನೇ ಇಲ್ಲಿ ಹೆಣ್ಣನ್ನು ಮಾಯೆಯೆಂದು ಭಾವಿಸಿದ. ಮಾಯೆಯನ್ನು ಸೋಲಿಸಿ ಮಾಯಾಕೋಲಾಹಲನಾದ. ಹನ್ನೆರಡನೇ ಶತಮಾನದ ಶಿವಶರಣರ ಪ್ರಗತಿಪರ ವಿಚಾರಗಳೆಲ್ಲಾ ಶೂನ್ಯ ಸಂಪಾದನಾಕಾರರ ಕಾಲಕ್ಕೆ ಮೂಲೆಗುಂಪಾದವು. ಹೀಗಾಗಿ ಇದು ವೀರಶೈವ ಧರ್ಮದ ಪುನರುತ್ಥಾನವೇ ಹೊರತು, ವಚನ ಚಳವಳಿಯ ಪುನರುತ್ಥಾನವಲ್ಲ. ಇವರೆಲ್ಲಾ ವೀರಶೈವದ ಧಾರ್ಮಿಕ ಪಠ್ಯವನ್ನು ಪ್ರಚಾರ ಪಡಿಸಿದರೇ ಹೊರತು ಅದರ ಸಾಂಸ್ಕೃತಿಕ ಪಠ್ಯವನ್ನಲ್ಲ. ಹೀಗಾಗಿ ಇವರ ಕಾಲಕ್ಕೆ ವಚನಕಾರರ ಸಾಮಾಜಿಕ ಹೋರಾಟ-ಕ್ರಾಂತಿ ಎಲ್ಲಾ ತಣ್ಣಗಾದವು. ವಚನಕಾರರ ಸಾಧೆಗಳನ್ನು ಮುಂದುವರಿಸುವ ಬದಲು ಇವರು ವಚನಕಾರರ ಹೂಗಳು ಭಟ್ಟರಾದರು. ಶೂನ್ಯಸಂಪಾದನೆಗಳಲ್ಲಿ ಪ್ರಕಟವಾಗಿರುವ ಅರ್ಧಕ್ಕಿಂತ ಹೆಚ್ಚಿನ ವಚನಗಳು ಸ್ತೋತ್ರದ ವಚನಗಳೇ ಆಗಿವೆ. ಶರಣರು ಸ್ತೋತ್ರ ಸಂಸ್ಕೃತಿಯನ್ನು ವಿರೋಧಿಸಿ, ಸಮಸಂಸ್ಕೃತಿಯನ್ನು ಜಾರಿಗೆ ತಂದರು. ಆದರೆ ಶೂನ್ಯಸಂಪಾದನಾಕಾರರು ಸ್ತೋತ್ರ ಸಂಸ್ಕೃತಿಯನ್ನು ಪ್ರತಿಷ್ಠಾಪಿಸಿ ಶರಣರ ಹೋರಾಟದ ಛಲವನ್ನೇ ತಣ್ಣಗಾಗಿಸಿದರು. ಹರಿಹರನಲ್ಲಿ ಆತನ ರಗಳೆಗಳಲ್ಲಿ ಉಳಿದುಕೊಂಡಿದ್ದ ಶರಣರ ಕ್ರಾಂತಿಕಾರಕ ವಿಚಾರಗಳು ಚಾಮರಸನಲ್ಲಿ ಬುಡಮೇಲಾದವು. ಯಾವ ಬ್ರಾಹ್ಮಣಶಾಹಿಯನ್ನು, ಮೌಢ್ಯಾಚಾರಣೆಗಳನ್ನು ಶರಣರು ವಿರೋಧಿಸಿದ್ದರೋ, ಅದನ್ನು ಇವರು ಪುರಸ್ಕರಿಸಿದರು. ಶರಣರು ಮಠ ವ್ಯವಸ್ಥೆಯನ್ನು ವಿರೋಧಿಸಿದರು, ಆದರೆ ನೂರೊಂದು ವಿರಕ್ತರು ನೂರೊಂದು ಮಠಗಳನ್ನು ಕಟ್ಟಿಕೊಂಡರು. ಶರಣರ ಕಾಲದಲ್ಲಿ ಕಾಯಕವೇ ಪೂಜೆಯಾಗಿತ್ತು. ಇವರ ಕಾಲಕ್ಕೆ ಪೂಜೆಯೇ ಕಾಯಕವಾಯಿತು. ಅನೇಕ ಶರಣೆಯರು ಅನುಭವ ಮಂಟಪದ ಪ್ರಮುಖ ಅಂಗವಾಗಿದ್ದರು, ಆದರೆ ನೂರೊಂದು ವಿರಕ್ತರಲ್ಲಿ ಒಬ್ಬ ಶರಣೆಯೂ ಇಲ್ಲ. ನೂರಾರು ದಲಿತ ಶರಣರು ವಚನ ಚಳವಳಿಯ ಬೆನ್ನೆಲುಬಾಗಿದ್ದರು, ಆದರೆ ನೂರೊಂದು ವಿರಕ್ತರಲ್ಲಿ ಒಬ್ಬ ಶರಣೆಯೂ ಇಲ್ಲ. ನೂರಾರು ದಲಿತ ಶರಣರು ವಚನ ಚಳವಳಿಯ ಬೆನ್ನೆಲುಬಾಗಿದ್ದರು, ಆದರೆ ನೂರೊಂದು ವಿರಕ್ತರಲ್ಲಿ ಒಬ್ಬ ದಲಿತ ಶರಣನೂ ಕಾಣುವುದಿಲ್ಲ.

 

[1]ಡಾ. ಎಂ.ಎಂ. ಕಲಬುರ್ಗಿ, ಮಾರ್ಗ ಸಂಪುಟ-೧, ಪುಟ ೩೬೬, ೧೯೮೮.

[2]ಡಾ. ಆರ್.ಸಿ. ಹಿರೇಮಠ, ಗುಮ್ಮಳಾಪುರದ ಸಿದ್ಧಲಿಂಗದೇವರ ಶೂನ್ಯಸಂಪಾದನೆ, ಪ್ರಸ್ತಾವನೆ ಪುಟ ೨, ೧೯೮೪.

[3]ಡಾ. ಬಿ.ವ್ಹಿ. ಶಿರೂರ: ಶೂನ್ಯಸಂಪಾದನೆ ಲೇಖನ, ವಿಶ್ವಪ್ರಭೆ ಸಂಪುಟ-೩, ಪುಟ ೪೩೬, ಮೂರು ಸಾವಿರ ಮಠ ಹುಬ್ಬಳ್ಳಿ, ೧೯೯೧.

[4]ಡಾ.ಡಿ.ಎಲ್‌.ಎನ್‌: ಸಿದ್ಧರಾಮ ಚರಿತ್ರೆಯ ಸಂಗ್ರಹ, ಪ್ರಸ್ತಾವನೆ ಪುಟ ೫೧-೫೬.

[5]ಮತ್ತು

[6]ಡಾ.ಎಂ.ಎಂ. ಕಲಬುರ್ಗಿ, ಮಾರ್ಗ ಸಂಪುಟ-೧, ಪುಟ ೬೦೭-೬೦೮, ೧೯೮೮.

[7]ಡಾ.ಎಂ.ಎಂ. ಕಲಬುರ್ಗಿ(ಸಂ), ಬಸವಣ್ಣನವರ ವಚನಗಳು, ವ. ೬೨೫, ಕ.ಸಂ. ಇಲಾಖೆ

[8]ಸಂ.ಶಿ. ಭೂಸನೂರು ಮಠ (ಸಂ), ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆ, ಪುಟ ೩೧೨, ವ. ೩೪, ೧೯೫೮.