. ಅನುಭವ ಮಂಟಪ

ಶರಣರು ಕಟ್ಟಿದ ಅನುಭವ ಮಂಟಪ ನಾಲ್ಕು ಗೋಡೆಗಳ ಕಟ್ಟಡವನ್ನು ಹೊಂದಿರುವ ಸ್ಥಾವರವಲ್ಲ. ಅದು ಮುಕ್ತ ಚರ್ಚೆಯ, ಬಿಚ್ಚುಮನಸ್ಸಿನ ಅನುಭವದಲ್ಲರಳಿದ ಅಭಿವ್ಯಕ್ತಿ ಮಾಧ್ಯಮ. ಶರಣರು ಮುಕ್ತ ಚರ್ಚೆಯನ್ನು ಎಲ್ಲಿ ನಡೆಸುತ್ತಾರೋ ಅದೇ ಅನುಭವ ಮಂಟಪವಾಗಿತ್ತು. ಕಟ್ಟಡದ ಅನುಭವ ಮಂಟಪ ಇಂದು ನಮ್ಮ ಕಣ್ಣಿಗೆ ಕಾಣಲಿಕ್ಕಿಲ್ಲ, ಶರಣರ ವಚನಗಳನ್ನು ಸರಿಯಾಗಿ ಅರಿತವರಿಗೆ ಅವರ ಅಂತಃಕರಣೆಯ ಅನುಭವ ಮಂಟಪ ನಿರಂತರವಾದುದು, ಅದು ಚಲನಶೀಲವಾದುದೆಂದು ತಿಳಿಯುತ್ತದೆ.

ಶರಣರ ಅನುಭವ ಮಂಟಪದ ಅಸ್ತಿತ್ವದ ಬಗೆಗೆ ಉತ್ತಂಗಿ ಚೆನ್ನಪ್ಪನವರು ಈ ಮೊದಲೇ ಸ್ಪಷ್ಟಪಡಿಸಿದ್ದಾರೆ. ಹರಿಹರನ “ಬಸವರಾಜದೇವರ ರಗಳೆ” ಮತ್ತು ಭೀಮಕವಿಯ “ಬಸವ ಪುರಾಣ” ಕೃತಿಗಳಲ್ಲಿ “ಪುರಾತನರ ಸಮಿತಿ”, “ಓಲಗ”, “ಒಡ್ಡೋಲಗ”, “ಮಹಾ ಒಡ್ಡೋಲಗ” ಈ ಮುಂತಾದ ಪದಗಳು ಬಂದಿವೆ. ಅಲ್ಲಿ ನಡೆಯುತ್ತಿದ್ದ ಶಿವಾನುಭವ ಗೋಷ್ಠಿಗಳನ್ನು ಅನುಭವ ಗೋಷ್ಠಿ’ಗಳೆಂದು ಕರೆಯುತ್ತಿದ್ದರು. ಅನುಭವ ಮಂಟಪವನ್ನು ‘ಮಹಾಮನೆ’ ಎಂದೂ ಕರೆಯುತ್ತಿದ್ದರೆಂಬುದಕ್ಕೆ ಬಸವಣ್ಣನವರ ವಚನಗಳಲ್ಲಿ ಬರುವ ನುಡಿಗಳೇ ಸಾಕ್ಷಿಯಾಗಿವೆ. “ಕೂಡಲ ಸಂಗನ ಮಹಾಮನೆಯಲು ಮಾದರ ಚೆನ್ನಯ್ಯನ ಹೊಲಬಿಗನಯ್ಯಾ”, “ಕೂಡಲಸಂಗನ ಮಹಾಮನೆಯಲ್ಲಿ ಒಕ್ಕೂದನುಣ್ಣಾ ತೊತ್ತೇ” ಈ ಮುಂತಾದ ವಚನಗಳ ನುಡಿಗಳನ್ನು ಗಮನಿಸಿದಾಗ ಮಹಾಮನೆಯ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ಕಾಲಜ್ಞಾನದ ವಚನಗಳಲ್ಲಿಯೂ ಇದಕ್ಕೆ ಸಂಬಂಧಿಸಿದಂತೆ ಹೇಳಲಾಗಿದೆ. ‘ವಿಚಾರ ಮಂಟಪ’, “ಆಚಾರ ಸಂಪನ್ನರ ಅನುಭವ ಮಂಟಪ”, “ಎಲ್ಲದೇವರ ಅನುಭವ ಮಂಟಪ”-ಈ ಮುಂತಾದ ಪದಗಳು ಅಲ್ಲಿ ಕಾಣಿಸಿಕೊಂಡಿವೆ. ಹೀಗೆ ಹನ್ನೆರಡನೇ ಶತಮಾನದ ಶರಣರು ಅನುಭಾವಿಗಳಾಗಿದ್ದರು, ಅನುಭವ ಮಂಟಪದಲ್ಲಿ ಮುಕ್ತ ಚರ್ಚೆ ನಡೆಸುತ್ತಿದ್ದರು ಎಂಬ ವಿಷಯದ ಬಗೆಗೆ ಭಿನ್ನಾಭಪ್ರಾಯವೇ ಇಲ್ಲ. ಆದರೆ ಶೂನ್ಯಸಂಪಾದನೆಗಳಲ್ಲಿ ಆದದ್ದೇನು?.

ಶೂನ್ಯಸಂಪಾದನೆಗಳಲ್ಲಿ ಅನುಭವ ಮಂಟಪದ ಪರಿಕಲ್ಪನೆಯನ್ನೇ ಬುಡಮೇಲು ಮಾಡಲಾಗಿದೆ. ಇಲ್ಲಿಯೂ ಕೂಡ ಶರಣರಲ್ಲಿ ಪರಸ್ಪರ ಚರ್ಚೆ ನಡೆಯುತ್ತದೆ, ಆದರೆ ಅದು ಕೇಂದ್ರೀಕೃತವಾದ ಚರ್ಚೆ. ಅಲ್ಲಮಪ್ರಭು ಕೇಂದ್ರಿತ ಚರ್ಚೆ, ಅಂತೆಯೇ ಗೂಳೂರು ಸಿದ್ಧವೀರಣ್ಣೊಡೆಯರು ತಮ್ಮ ಶೂನ್ಯಸಂಪಾದನೆಗೆ “ಪ್ರಭುದೇವರ ಶೂನ್ಯಸಂಪಾದನೆ”ಯೆಂದೇ ಹೆಸರಿಟ್ಟಿದ್ದಾರೆ. ಹೀಗಾಗಿ ಇದು ಸಕಲಶರಣರ ಶೂನ್ಯ ಸಂಪಾದನೆಯಾಗಿರದೆ ಪ್ರಭುದೇವರ ಶೂನ್ಯ ಸಂಪಾದನೆಯಾಗಿದೆ.

ಹನ್ನೆರಡನೇ ಶತಮಾನದ ಪ್ರಭುವಿನ ಶೂನ್ಯಸಂಪಾದನೆಯಾಗಿದ್ದರೆ, ಅನುಭವ ಮಂಟಪದ ಆಶಯಕ್ಕೆ ಧಕ್ಕೆ ಬರುತ್ತಿರಲಿಲ್ಲ. ಆದರೆ ಇದು ನೂರೊಂದು ವಿರಕ್ತರು ಸೃಷ್ಟಿಸಿದ ಹದಿನೈದನೇ ಶತಮಾನದ ಪ್ರಭುವಿನ ಶೂನ್ಯಸಂಪಾದನೆಯಾಗಿದೆ. ಅಂತೆಯೇ ಪ್ರಭು ಹೇಳದೇ ಇರುವ ಅನೇಕ ವಿಷಯಗಳನ್ನು ಇವರೇ ಪ್ರಭುವಿನ ಹೆಸರಿನಲ್ಲಿ ಹೇಳುತ್ತಾ ಹೋಗುತ್ತಾರೆ. ಹದಿನೈದನೇ ಶತಮಾನದಲ್ಲಿದ್ದ ಒಬ್ಬ ವಚನಕಾರ ‘ಗುಹೇಶ್ವರಾ’ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾನೆ. ಇವುಗಳನ್ನೇ ಅಲ್ಲಮನ ವಚನಗಳೆಂದು ಶೂನ್ಯಸಂಪಾದನಾಕಾರರು ಸೇರಿಸಿದರೂ ಹೇಗೆ? ಈ ಬಗೆಗೆ ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ. “ಶಿವಯೋಗ ಚಿಂತಾಮಣಿ”ಯಲ್ಲಿ ಗುಹೇಶ್ವರ ಅಂಕಿತದಿಂದ ಸಮಾವೇಶಗೊಂಡಿರುವ ೩೯೭ ರಿಂದ ೪೦೪ರ ವರೆಗಿನ ವಚನಗಳು ತೋಂಟದ ಸಿದ್ಧಲಿಂಗ ಯತಿಯ ವಚನಗಳಾಗಿರುವುದನ್ನು ಗಮನಿಸಬೇಕು. ಇಂಥ ಇನ್ನೂ ಕೆಲವು ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ”[1] ಎನ್ನುವ ಡಾ. ಬಿ.ವ್ಹಿ. ಮಲ್ಲಾಪುರ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಅಲ್ಲಮಪ್ರಭು ದೇವರ ವಚನ ಸಂಪುಟ ಪ್ರಸ್ತಾವನೆಯಲ್ಲಿ ಅವರು ಈ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಂಪುಟದಲ್ಲಿ ಅಲ್ಲಮಪ್ರಭುವಿನ ೬೯೪ ವಚನಗಳನ್ನು ಮೊದಲನೇ ಕಾಂಡದಲ್ಲಿ ಸಂಪಾದಿಸಲಾಗಿದೆ. ಅಲ್ಲಮಪ್ರಭುವಿನ ನಿಜಾವದ ವಚನಗಳಿವು. ಎರಡನೇ ಕಾಂಡದಲ್ಲಿ ೬೯೫ರಿಂದ ೧೬೪೫ರ ವರೆಗೆ ಅಂದರೆ ೯೫೧ ಹೆಚ್ಚಿನ ವಚನಗಳನ್ನು ಸೇರಿಸಲಾಗಿದೆ. ಈ ಹೆಚ್ಚಿನ ವಚನಗಳು ಸಿಗುವುದು ಶೂನ್ಯ ಸಂಪಾದನೆಗಳಲ್ಲಿ ಮಾತ್ರ. ಈ ಮಾತನ್ನು ಈ ಸಂಪುಟದ ಸಂಪಾದಕರೇ ಒಪ್ಪಿಕೊಂಡಿದ್ದಾರೆ. “ಈ ಭಾಗದ ವಚನಗಳಲ್ಲಿ ಹೆಚ್ಚಿನವು ಶೂನ್ಯ ಸಂಪಾದನೆಗಳಲ್ಲಿಯವು. ಸಂದಿಗ್ಧ ಪರಿಹಾರಕ್ಕಾಗಿ ಕನ್ನಡ ಅಧ್ಯಯನ ಪೀಠದ ವಚನಭಂಡಾರದಲ್ಲಿಯ ಶೂನ್ಯಸಂಪಾದನೆಯ ಹಸ್ತಪ್ರತಿಗಳ ಸಹಾಯ ಪಡೆಯಲಾಗಿದೆ”[2] ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸಂಪಾದನೆ ಮಾಡಿರುವ ಡಾ.ಎಲ್‌. ಬಸವರಾಜು ಹಾಗೂ ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳ ‘ಅಲ್ಲಮಪ್ರಭುದೇವರ ವಚನಗಳ’ ಸಂಪುಟಗಳಲ್ಲಿ ಈ ಹೆಚ್ಚಿನ ವಚನಗಳು ಕಾಣಿಸುವುದಿಲ್ಲ. ಈ ವಿಷಯದ ಬಗೆಗೆ ಚರ್ಚೆಯಾಗಲೆಂದೇ ಡಾ. ಮಲ್ಲಾಪುರ ಅವರು ಹೆಚ್ಚಿನ ವಚನಗಳನ್ನು ಎರಡನೇ ಕಾಂಡದಲ್ಲಿ ಕೊಟ್ಟು ಇವು ಹೆಚ್ಚಿನ ವಚನಗಳೆಂದು ಸ್ಪಷ್ಟಪಡಿಸಿದ್ದಾರೆ.

ಅನುಭವ ಮಂಟಪದಲ್ಲಿ ಚರ್ಚೆಯಾಗದೇ ಇದ್ದ ವಿಷಯಗಳು ಶೂನ್ಯಸಂಪಾದನೆಗಳಲ್ಲಿ ಮಹತ್ವದ ಸ್ಥಾನ ಪಡೆದಿವೆ. ಚರ್ಚೆಯಾಗಿದ್ದ ಮುಖ್ಯ ವಿಷಯಗಳು ಶೂನ್ಯಸಂಪಾದನೆಗಳಿಂದ ಕಣ್ಮರೆಯಾಗಿವೆ. ಶೂನ್ಯ ಸಂಪಾದನೆಕಾರರು ವಚನ ಚಳವಳಿಯ ತಾತ್ವಿಕ ನೆಲಗೆ ಬದ್ಧರಾಗದೆ, ಶರಣರ ಹೆಸರಿನಲ್ಲಿ ಅನೇಕ ಖೊಟ್ಟಿವಚನಗಳನ್ನು ಸೃಷ್ಟಿಸಿ, ಧರ್ಮಪ್ರಚಾರದ ವೈಭವೀಕರಣ ಮಾಡಿದ್ದಾರೆ. ಶರಣರ ಮೂಲ ವಚನಗಳನ್ನು ತಿದ್ದುವ, ಬದಲಾಯಿಸುವ, ಅವರ ಹೆಸರಿನಲ್ಲಿ ಹೊಸದನ್ನು ಸೇರಿಸುವ ಅಧಿಕಾರ ಯಾರಿಗೂ ಇಲ್ಲ.

ವಚನಗಳ ತಿದ್ದುಪಡಿಯನ್ನು ಬದಲಾವಣೆಯನ್ನು ಶೂನ್ಯಸಂಪಾದನಾಕಾರರೇ ಮಾಡಿರಲಿ ಯಾರೇ ಮಾಡಿರಲಿ ಅದು ತಪ್ಪು. ಬೇಕಾದರೆ ಅವರು ತಾವು ಹೇಳಬೇಕೆಂದಿರುವ ವಿಚಾರಗಳನ್ನು ತಮ್ಮ ಸ್ವತಂತ್ರ ಕೃತಿಗಳಲ್ಲಿ ಹೇಳಲಿ ವಚನಗಳನ್ನು ತಿದ್ದುವ-ಬದಲಿಸುವ ಕಾರ್ಯ ಮಾತ್ರ ಖಂಡನೀಯವಾದುದು. ಶರಣರ ಮೂಲ ವಚನಗಳಾವುವು? ಶೂನ್ಯ ಸಂಪಾದನಾಕಾರರು ಸೇರಿಸಿದ ವಚನಗಳಾವುವು? ಎಂಬ ವಿಷಯದ ಬಗೆಗೆ ಸಂಶೋಧನೆ ನಡೆದರೆ ಶೂನ್ಯಸಂಪಾದನೆಗಳ ಸ್ವರೂಪವೇ ಬದಲಾಗಿಬಿಡುತ್ತದೆ. ಅಂತಹ ಪ್ರಯತ್ನಗಳು ನಡೆಯಲೆಂಬುದೇ ಇಲ್ಲಿಯ ಕಳಕಳಿಯಾಗಿದೆ.

ಅನುಭವ ಮಂಟಪದಲ್ಲಿ ಎಲ್ಲ ಶರಣರೂ ಕುಳಿತು ಮುಕ್ತವಾಗಿ ಚರ್ಚಿಸುತ್ತಿದ್ದರು. ಶಾಂತರಸನೆಂಬ ಶರಣ ಆ ವಚನಗಳನ್ನು ಬರೆದಿಡುತ್ತಿದ್ದ ಎಂಬಂತಹ ವಿಚಾರಗಳನ್ನು ಒಪ್ಪುವುದಾದರೆ, ಶೂನ್ಯಸಂಪಾದನೆಗಳಲ್ಲಿ ಬರುವ ಪ್ರಸಂಗಗಳನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಅಲ್ಲಮಪ್ರಭು ಬೇರೆ ಬೇರೆ ಕಡೆ ಹೋಗಿ ಬೋಧನೆ ಮಾಡುವುದೇ ಶೂನ್ಯ ಸಂಪಾದನೆಗಳ ಉದ್ದೇಶವಾಗಿದೆ.

ಮೊದಲು ಗೊಗ್ಗಯ್ಯನಿಂದ ಪ್ರಾರಂಭವಾದ ಪ್ರಭುವಿನ ಬೋಧನೆ, ಲಕ್ಕಂಡಿಯಲ್ಲಿ ಮುಕ್ತಾಯಕ್ಕಳೊಂದಿಗೆ, ಸೊಲ್ಲಾಪುರದಲ್ಲಿ ಸಿದ್ಧರಾಮನೊಂದಿಗೆ, ಕಲ್ಯಾಣದಲ್ಲಿ ಬಸವಣ್ಣನೊಂದಿಗೆ ನಡೆಯುತ್ತದೆ. ಅಕ್ಕಮಹಾದೇವಿಯೊಂದಿಗೂ ಚರ್ಚೆ ನಡೆಯುತ್ತದೆ. ನಂತರ ಪ್ರಭು ನಾನಾ ದೇಶಗಳನ್ನು ತಿರುಗಿ ಹನ್ನೆರಡು ವರ್ಷಗಳ ನಂತರ ಪುನಃ ಕಲ್ಯಾಣಕ್ಕೆ ಬರುತ್ತಾನೆಂದು ಡಾ. ಶಿರೂರ ಅವರು ತಿಳಿಸಿದ್ದಾರೆ.[3] ಪ್ರಭುವಿನ ಆಗಮನ ಅನುಭವ ಮಂಟಪದಲ್ಲಿ ಹೊಸ ಬೆಳಕು ಮೂಡಿಸುವುದಿಲ್ಲ. ಸ್ತುತಿ ಪ್ರತಿಸ್ತುತಿಗಳಿಂದ ಈ ಭಾಗ ತುಂಬಿಹೋಗಿದೆ. ಕೊನೆಗೆ ಪ್ರಭು ಶರಣರ ಅವಸಾನ ಕಾಲವನ್ನು ನೆನಪಿಸಿ, ತಾನು ಶ್ರೀಶೈಲದತ್ತ ಹೊರಟು ಹೋಗುತ್ತಾನೆ. ಇಲ್ಲಿಗೆ ಶೂನ್ಯ ಸಂಪಾದನೆ ಮುಗಿಯುತ್ತದೆ. ಶೂನ್ಯಸಂಪಾದನಾಕಾರರು ಅನುಭವ ಮಂಟಪಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲವೆಂದು ಇದರಿಂದ ಸ್ಪಷ್ಟವಾಗುತ್ತದೆ.

ಡಾ. ಆರ್.ಸಿ. ಹಿರೇಮಠ ಅವರು ತಾವು ಸಂಪಾದಿಸಿರುವ, ಗುಮ್ಮಳಾಪುರ ಸಿದ್ಧಲಿಂಗದೇವರು ಶೂನ್ಯಸಂಪಾದನೆಯ ಪ್ರಸ್ತಾವನೆಯಲ್ಲಿ ಒಂದು ಮಾತು ಹೇಳುತ್ತಾರೆ. “ಶೈವ ಪುರಾತನರ ಚರಿತ್ರೆಗಳಲ್ಲಿ ಶಿವನು ಬಗೆ ಬಗೆಯ ರೂಪದಿಂದ ಬಂದು ಭಕ್ತಜನರನ್ನು ಉದ್ಧರಿಸಿದಂತೆ ಸಾಕಾರ ಶಿವನಾದ ಈ ಪ್ರಭುದೇವರು ಬಗೆಬಗೆಯ ಹಾದಿಯಿಂದ ಭಕ್ತಪ್ರಮಥರನ್ನು ಉದ್ಧರಿಸುತ್ತಾನೆ.”[4] ಡಾ. ಆರ್.ಸಿ. ಹಿರೇಮಠರು ಈ ಶೂನ್ಯಸಂಪಾದನೆಗಳ ಮೂಲ ಉದ್ದೇಶವನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ ಶೂನ್ಯಸಂಪಾದನಾಕಾರರ ಈ ಉದ್ದೇಶ ವಚನಚಳವಳಿಯ ಧೋರಣೆಗೆ ಅನುಭವ ಮಂಟಪದ ಆಶಯಕ್ಕೆ ತದ್ವಿರುದ್ಧವಾಗಿದೆ. ಶಿವನನ್ನು ಕೇಂದ್ರೀಕರಿಸುವ ಭಕ್ತಿ ಶೈವಪುರಾತನರದಾದರೆ, ಶಿವನನ್ನು ವಿಕೇಂದ್ರೀಕರಿಸುವ, ಶಿವನಿಗಿಂತ ಶಿವಶರಣರೇ ಅಧಿಕವೆಂದು ಹೇಳುವ ಆಶಯ ವಚನಕಾರರದು. ಶಿವಕೇಂದ್ರಿತ ದೇವಾಲಯಗಳತ್ತ ಶೈವಪುರಾತನರು ಬಂದರೆ, ಜೀವಕೇಂದ್ರಿತ ಜನಸಮುದಾಯದತ್ತ ಹೋಗಲು ಶರಣರು ಹಾತೊರೆದಿದ್ದಾರೆ. ದೇವ ಭವ್ಯನಾಗುವ ಪರಿ ಅಲ್ಲಿದ್ದರೆ, ಜೀವ ದೇವನಾಗುವ ಹೋರಾಟ ಇಲ್ಲಿದೆ.

ದಾಸನ ವಸ್ತವ ಬೇಡದ ಮುನ್ನ
ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ
ಸಿರಿಯಾಳನ ಮಗನ ಬೇಡದ ಮುನ್ನ

ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ
ಬಲ್ಲಾಳನ ವಧುವ ಬೇಡದ ಮುನ್ನ
ಸ್ವಯಂ ಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ…”[5]

ಬಸವಣ್ಣನ ಈ ವಚನವನ್ನು ಅರ್ಥೈಸಿಕೊಂಡರೆ ವಚನಕಾರರ ಧೋರಣೇ ಏನಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಶೈವಪುರಾತನರ ವಿಚಾರವು ಹನ್ನೆರಡನೇ ಶತಮಾನದ ವಚನಕಾರರ ವಿಚಾರಕ್ಕೆ ತದ್ವಿರುದ್ಧವಾಗಿದೆ. ಇದನ್ನರಿಯದ ಶೂನ್ಯ ಸಂಪಾದನೆಕಾರರು ಪ್ರಭುದೇವನನ್ನು ಶಿವನ ಅವತಾರವೆಂಬಂತೆ ಕಲ್ಪಿಸಿರುವುದು ವಚನಕಾರರ ಪ್ರಜಾಸತ್ತಾತ್ಮಕ ಧೋರಣೆಗೆ ದೊಡ್ಡ ಹೊಡೆತವಾಗಿದೆ.

ಯಾವ ಕೇಂದ್ರಿಕೃತ ವ್ಯವಸ್ಥೆಯನ್ನು ಒಡೆಯಲು ವಚನಕಾರರು ಪ್ರಯತ್ನಿಸಿದರೊ, ಯಾವ ಅವತಾರಗಳನ್ನು ಶರಣರು ವಿರೋಧಿಸಿದರೊ ಅಂಥವುಗಳನ್ನೇ ಮತ್ತೆ ಸೃಷ್ಟಿಸಿ ವಚನ ಚಳುವಳಿಯ ಒಟ್ಟು ಧೋರಣೆಯನ್ನೇ ಶೂನ್ಯಸಂಪಾದನಕಾರರು ಮರೆಮಾಡಿದ್ದಾರೆ.

ಶರಣರ ವಚನಗಳನ್ನು ಓದಿದವರಿಗೆ, ಅವುಗಳಲ್ಲಿ ಹೆಚ್ಚು ವಚನಗಳು ಅನುಭವ ಮಂಟಪದಂತಹ ಮುಕ್ತ ಚರ್ಚೆಯ ಸಂದರ್ಭದಲ್ಲಿಯೇ ರಚನೆಯಾಗಿರಬೇಕೆನಿಸುತ್ತದೆ. ಆದರೆ ಶೂನ್ಯಸಂಪಾದನಾಕಾರರು ಶರಣರ ಅನುಭವ ಮಂಟಪದ ಮೂಲ ಪರಿಲ್ಪನೆಯನ್ನೇ ಕೈಬಿಟ್ಟಿದ್ದಾರೆ. ವೀರಶೈವ ಧರ್ಮದ ತತ್ವ ಪ್ರಣಾಲಿಕೆಯೇ ಇಲ್ಲಿ ಕೇಂದ್ರವಾಗಿ, ಜಂಗಮ ಮೂರ್ತಿಯಾದ ಅಲ್ಲಮಪ್ರಭುವೇ ಅದರ ಸೂತ್ರಧಾರನಾಗಿ ವೈಭವೀಕರಿಸಲ್ಪಟ್ಟಿದ್ದಾನೆ. ಸಿದ್ಧಮಾದರಿಯೊಂದು ಉದ್ದಕ್ಕೂ ಕಾಣಿಕಸುತ್ತ ಹೋಗುತ್ತದೆ. ಶರಣರು ಅನೇಕ ಜನಪರ ಮೌಲ್ಯಗಳನ್ನು ಹುಟ್ಟು ಹಾಕಿದರು. ಹನ್ನೆರಡನೇ ಶತಮಾನದ ಸಮಕಾಲೀನ ಬದುಕನ್ನು ಕುರಿತು ತಮ್ಮ ವಚನಗಳಲ್ಲಿ ಚರ್ಚಿಸಿದರು. ಅಂದಿನ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ವಿಷಯಗಳು ಚರ್ಚೆಗೊಳಗಾದವು. ಆದರೆ ಇಂತಹ ಮೌಲಿಕ ವಿಚಾರಗಳು ಶೂನ್ಯಸಂಪಾಧನೆಗಳಲ್ಲಿ ಬಂದಿಲ್ಲ. ಧಾರ್ಮಿಕ ವಿಷಯವನ್ನು ಹೊರತುಪಡಿಸಿದರೆ, ಅಲ್ಲಿ ಉಳಿದ ವಿಷಯಗಳು ಗೌಣವಾಗಿವೆ.

ಅನುಭವ ಮಂಟಪದ ಮೂಲ ಆಶಯವೇ, ಎಲ್ಲ ಶರಣರ ಚಿಂತನ ಮಂಥನಗಳಿಗೆ ಅವಕಾಶ ಕಲ್ಪಿಸಿಕೊಡುವುದಾಗಿದೆ. ಮುಕ್ತ ಚರ್ಚೆಯೇ ಅಲ್ಲಿಯ ಮುಖ್ಯ ಉದ್ದೇಶವಾಗಿದೆ. ಆದರೆ ಶೂನ್ಯ ಸಂಪಾದನೆಗಳಲ್ಲಿ ನಡೆದದ್ದೇನು? ತೋರಿಕೆಗೆ ಚರ್ಚೆ ಎಂದೆನಸಿದರೂ, ಆ ಚರ್ಚೆ, ಸಿದ್ಧಗೊಂಡ ಏಕಸೂತ್ರವನ್ನವಲಂಬಿಸಿದೆ. ಪ್ರಮುಖ ಪ್ರಸಂಗಗಳಲ್ಲಿ ಲಿಂಗದೀಕ್ಷೆ ಆಧ್ಯಾತ್ಮ ಇವೇ ಮುಖ್ಯವಾಗಿವೆ. ಶೂನ್ಯಸಂಪಾದನೆಗಳ ಎಲ್ಲ ಆಧ್ಯಾಯಗಳಲ್ಲಿಯೂ ಅಲ್ಲಮಪ್ರಭುವೇ ನಿರ್ಣಯ ಕೊಡುತ್ತ ಹೋಗುತ್ತಾನೆ. ಉಳಿದ ಶರಣರ ವಿಚಾರಗಳು ಅಲ್ಲಿ ಗೌಣವಾಗಿವೆ. ಹೀಗಾಗಿ ಅಲ್ಲಿ ನಡೆದಿರುವ ಚರ್ಚೆ ಬಹುಮುಖಿ ರೂಪತಾಳದೆ ಏಕಮುಖಿಯಾಗಿದೆ. ಶರಣರ ಬಹುಮುಖಿ ಚಿಂತನೆಗೆ ಶೂನ್ಯಸಂಪಾದನೆ ದೊಡ್ಡಪೆಟ್ಟು ಕೊಟ್ಟಿದೆ. ಅನೇಕ ವಚನಗಳನ್ನು ತಾವೇ ಸೃಷ್ಟಿಸಿ ಅವುಗಳನ್ನು ಅಲ್ಲಮಪ್ರಭುವಿನ ಮೂಲಕ ಹೇಳಿಸುತ್ತಾ, ವಚನ ಚಳವಳಿಯ ಒಟ್ಟು ಆಶಯವನ್ನೇ ಶೂನ್ಯ ಸಂಪಾದನಾಕಾರರು ಮುಚ್ಚಿಬಿಟ್ಟಿದ್ದಾರೆ. ಹೀಗಾಗಿ ಅನುಭವ ಮಂಟಪದ ಚರ್ಚೆಗೂ ಶೂನ್ಯಸಂಪಾದನೆಯ ಚರ್ಚೆಗೂ ಸಂಬಂಧವಿಲ್ಲದಂತಾಗಿದೆ.

ಕಾಯಕ

ಹನ್ನೆರಡನೇ ಶತಮಾನದ ಶಿವಶರಣರ ಬಹುದೊಡ್ಡ ಕೊಡುಗೆಯೆಂದರೆ ‘ಕಾಯಕ’. ಎಲ್ಲ ವೃತ್ತಿಗಳ ಗೌರವವನ್ನು ಹೆಚ್ಚಿಸಿ ಆ ವೃತ್ತಿಗಳನ್ನೆಲ್ಲಾ ಕಾಯಕವನ್ನಾಗಿಸಿ ಪರಿವರ್ತಿಸಿದವರು ಶರಣರು. ವೃತ್ತಿಗೂ-ಜಾತಿಗೂ ಅನ್ಯೋನ್ಯವಾದ ಸಂಬಂಧವಿದೆ. ಈ ದೇಶದ ಬಹುತೇಕ ಜಾತಿಗಳು ವೃತ್ತಿಗಳ ಮೂಲಕವೇ ಹುಟ್ಟಿದವುಗಳಾಗಿವೆ. ವೃತ್ತಿಸೂಚಕಗಳೇ ಇಲ್ಲಿ ಜಾತಿಸೂಚಕಗಳಾಗಿವೆ. ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ನುಲಿಯ ಚಂದಯ್ಯ ಈ ಮುಂತಾದ ಶರಣರ ಹೆಸರುಗಳಲ್ಲಿಯೇ ವೃತ್ತಿ-ಜಾತಿಗಳ ಸಂಗಮವಿದೆ. ಶರಣರು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ನೀಡಿ, ವೃತ್ತಿಗಳನ್ನು ಮಾಡುವವರಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿದರು. ವೃತ್ತಿಯನ್ನು ಕಾಯಕದ ಹಿಂತಕ್ಕೆ ಏರಿಸಿ ವರ್ಗ ತಾರತಮ್ಯವನ್ನು ನಿವಾರಿಸಿದರು. ಹೀಗಾಗಿ ಶರಣರ ಕಾಯಕ ತತ್ವವು, ಏಕಕಾಲದಲ್ಲಿಯೇ ವರ್ಣ ಸಂಘರ್ಷ ಹಾಗೂ ವರ್ಗ ಸಂಘರ್ಷಗಳನ್ನು ಹುಟ್ಟುಹಾಕಿತು. ಆಗ ವೃತ್ತಿಯೆಂಬುದು ಕಾಯಕವಾಗಿ ದೊಡ್ಡ ಮೌಲ್ಯವಾಗಿ ಬೆಳೆಯಿತು.

ವಚನ ಚಳುವಳಿಯಲ್ಲಿ ಕಾಯಕ ಎಲ್ಲರಿಗೂ ಕಡ್ಡಾಯ. ಗುರು-ಲಿಂಗ-ಜಂಗಮರ”ಊ ಇದಕ್ಕೆ ಹೊರತಲ್ಲ. ಶರಣರ ಕಾಯಕ ಚಳವಳಿಯಿಂದಲೇ ಬಿಜ್ಜಳನ ಭಂಡಾರ ಬೆಳೆದು ನಿಂತಿತು. ಅಂದು ನಡೆದ ಕ್ಷಿಪ್ರ ಆರ್ಥಿಕ ಕ್ರಾಂತಿಗೆ ಶರಣರ ಕಾಯಕ ತತ್ವವೇ ಮೂಲ ಕಾರಣವಾಯಿತು. ಕಾಯಕವೇ ಕೈಲಾಸವಾಯಿತು. ಹೀಗೆ ಕಾಯಕವು ಕೈಲಾಸವಾಗುವುದರ ಮೂಲಕ ಆರ್ಥಿಕ, ಧಾರ್ಮಿಕ ಕ್ಷೇತ್ರಗಳ ಸಮನ್ವಯವಾಯಿತು. ಶರಣರ ಕಾಯಕತತ್ವದಿಂದ ರಾಜ್ಯದ ಸಂಪತ್ತು ಹೆಚ್ಚಾದುದರಿಂದಲೇ ಬಿಜ್ಜಳನಂತಹ ಆಳರಸರು ಶರಣರ ಕ್ರಾಂತಿಯನ್ನು ಸಹಿಸಿಕೊಂಡರು. ಕೊಂಡೆಮಂಚಣ್ಣನಂಥವರು ಶರಣರ ಪ್ರಗತಿಪರ ವಿಚಾರಧಾರೆಗೆ ಎಷ್ಟೇ ವಿರೋಧ ಒಡ್ಡಿದರೂ, ಸಂಚು ನಡೆಸಿದರೂ ಬಿಜ್ಜಳನಂತಹ ಅರಸರು ಸೊಪ್ಪು ಹಾಕಲಿಲ್ಲ. ಅಂತಹ ಅದ್ಭುತ ಶಕ್ತಿ ಕಾಯಕದಲ್ಲಿದೆ. ಅಂತೆಯೇ ಶರಣರು ಅದನ್ನು ಕೈಲಾಸವೆಂದು ಕರೆದರು.

‘ಕಾಯಕ’ವನ್ನು ಒಂದು ಮೌಲ್ಯವನ್ನಾಗಿ ಬೆಳೆಸಿದ ಶರಣರು ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಏಕಾಗ್ರತೆ, ನಿಸ್ವಾರ್ಥತೆ ಇರಬೇಕೆಂದು ಸ್ಪಷ್ಟಪಡಿಸಿದರು. ವೃತ್ತಿ, ಕುಟುಂಬ ಮುಖಿಯಾಗಿದ್ದರೆ, ಕಾಯಕ ಸಮಾಜ ಮುಖಿಯಾಯಿತು. ವೃತ್ತಿಯಿಂದ ಪಡೆದದ್ದು ಊಟವಾದರೆ, ಕಾಯಕದಿಂದ ಪಡೆದದ್ದು ದಾಸೋಹವಾಯಿತು. ಕಾಯಕದಷ್ಟೇ ಮಹತ್ವ ದಾಸೋಹಕ್ಕೂ ಲಭಿಸಿತು.

“ಇಷ್ಟಲಿಂಗ ಗುರುವಿನ ಹಂಗು, ಚಿತ್ತ ಕಾಮ್ಯದ ಹಂಗು, ಎನ್ನ ದಾಸೋಹ ಆರ ಹಂಗೂ ಅಲ್ಲ” ಎನ್ನುವ ನುಲಿಯ ಚಂದಯ್ಯನ ವಚನದಲ್ಲಿ ಬರುವ ದಾಸೋಹದ ಮಹತ್ವವನ್ನು ಗಮನಿಸಬಹುದಾಗಿದೆ. ಆದರೆ ಶೂನ್ಯಸಂಪಾದನೆಯಲ್ಲಿ ದಾಸೋಹದ ಮಹತ್ವವನ್ನು ಹೇಳುವ ಈ ವಚನದ ಭಾವವನ್ನು ಗೌಣಗೊಳಿಸಲು ಮಡಿವಾಳಯ್ಯನ ವಚನವೊಂದನ್ನು ಜೋಡಿಸಿ ಹೇಳಲಾಗಿದೆ. “ಗುರುವಾದರೂ ಲಿಂಗವ ಪೂಜಿಸಬೇಕು, ಜಂಗಮವಾದರೂ ಲಿಂಗವ ಪೂಜಿಸಬೇಕು”[6] ಎಂದು ಮಡಿವಾಳಯ್ಯನ ಮೂಲಕ ಹೇಳಿಸುತ್ತಾ ದಾಸೋಹದ ಪರಿಕಲ್ಪನೆಯನ್ನೇ ಮೊಟಕುಗೊಳಿಸಲಾಗಿದೆ. ಹೀಗೆ ಶೂನ್ಯ ಸಂಪಾದನೆಗಳಲ್ಲಿ ಕಾಯಕ-ದಾಸೋಹದಂತಹ ಉನ್ನತ ಮೌಲ್ಯಗಳನ್ನು ತಿರುಚಿ ಬರೆಯಲಾಗಿದೆ.

ಶರಣರು ಕಾಯಕಕ್ಕೆ ಎಂತಹ ಮಹತ್ವ ನೀಡಿದ್ದರೆಂಬುದಕ್ಕೆ ಅಲ್ಲಿಯ ಯಾವುದೇ ಶರಣನ ವಚನಗಳನ್ನು ಗಮನಿಸಿದರೂ ಅವರ ಆಶಯ ಸ್ಪಷ್ಟವಾಗುತ್ತದೆ. “ಕಾಯಕದಲ್ಲಿ ನಿರತನಾದಡೆ ಗುರುದರುಶನವಾದಡೂ ಮರೆಯಬೇಕು. ಲಿಂಗಪೂಜೆಯಾದಡೂ ಮರೆಯಬೇಕು ಜಂಗಮ ಮುಂದಿದ್ಡಡೂ ಹಂಗು ಹರಿಯಬೇಕು” ಎಂದು ಹೇಳುವ ಆಯ್ದಕ್ಕಿ ಲಕ್ಕಮ್ಮನ ವಚನ ಶಿಖರ ಪ್ರಾಯದಂತಿದೆ. ಕಾಯಕವನ್ನು ಬಳಲಿಸದೆ, ಚಿತ್ತಶುದ್ಧರಾಗದೆ, ತನುವನ್ನು ಕರಗಿಸದೆ ಮಾಡುವ ಕಾರ್ಯ ಕಾಯಕವಾಗಲಾರದೆಂದು ಶರಣರು ಸ್ಪಷ್ಟಪಡಿಸಿದರು. ಯಾರೇ ಇರಲಿ, ಎಷ್ಟೇ ದೊಡ್ಡವರಿರಲಿ ಕಾಯಕ ಮಾಡದಿದ್ದರ ಅಂಥವರ ಮುಖವನ್ನು ನೋಡಲಾಗದೆಂದು ಹೇಳಿದರು.

ಆದರೆ ಶೂನ್ಯಸಂಪಾದನೆಗಳೆಲ್ಲಿ ಆದದ್ದೇನು? ಗೂಳೂರು ಸಿದ್ಧವೀರಣ್ಣೊಡೆಯರ ‘ಪ್ರಭುದೇವರ ಶೂನ್ಯ ಸಂಪಾದನೆ’ಯಲ್ಲಿ ಬರುವ ಪ್ರಥಮಕೋದೇಶದಲ್ಲಿಯೇ ಕಾಯಕದಂತಹ ಮೌಲ್ಯವನ್ನು ತಿರುಚಲಾಗಿದೆ.

ಗೊಗ್ಗಯ್ಯನೆಂಬ ಶರಣ ಇನ್ನೊಬ್ಬರ ತಂಟೆಗೆ ಹೋಗದೆ ತನ್ನಷ್ಟಕ್ಕೆ ತಾನು ತೋಟ ಮಾಡಿಕೊಂಡು ತನ್ನ ಕಾಯಕದಲ್ಲಿ ನಿರತನಾದ ಸಾಧಕ. ತಾನು ಕಾಯಕದಲ್ಲಿ ನಿರತನಾಗುವುದರಿಂದಲೇ ತನಗೆ ಮೋಕ್ಷ ಲಭಿಸುತ್ತದೆಂದು ತಿಳಿದಿದ್ದ ಮುಗ್ಧಶರಣ. ಇಂತಹ ಶರಣನನ್ನು ಅಲ್ಲಮಪ್ರಭು ಪ್ರಾರಂಭದಲ್ಲಿಯೇ ಕೆಣಕುತ್ತಾನೆ. ತನ್ನದೊಂಧು ಕೃಷಿಯ ನೀತಿಯನ್ನು ಹೇಳಿ ಅವನು ಮಾಡುತ್ತಿದ್ದ ತೋಟದ ಕೆಲಸಕ್ಕಿಂತ ತನ್ನ ತೋಟಗಾರಿಕೆ ಭವ್ಯವೆಂದು ತಿಳಿಸುತ್ತಾನೆ.

“ತನುವ ತೋಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗಿದು ಕಳೆದನಯ್ಯ ಭ್ರಾಂತಿಯ ಬೇರ. ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆನಯ್ಯ ಬ್ರಹ್ಮಬೀಜವ. ಅಖಂಢ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ಮನಾಳದಿಂದ ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ, ಆವಾಗಳೂ ಈ ತೋಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ”.[7]

ಇಲ್ಲಿ ಆಧ್ಯಾತ್ಮದ ಕೃಷಿಯ ಬಗೆಗೆ ವಿವರಿಸಲಾಗಿದೆ. ಇಹದ ಕೃಷಿಯ ಜತೆಗೆ ಪರದ ಕೃಷಿಯೂ ಮುಖ್ಯವೆಂಬುದನ್ನು ಒಪ್ಪಬಹುದು. ಆದರೆ ಇಹದ ಕೃಷಿಯನ್ನು ಅಲ್ಲಗಳೆದು ಪರದ ಕೃಷಿಯೇ ಶ್ರೇಷ್ಠವೆಂದು ಬೋಧಿಸುವುದು ತರವಲ್ಲ. ಶರಣರು ಇಹವನ್ನು ತಿರಸ್ಕರಿಸದೆ, ಪರವನ್ನು ನಿರಾಕರಿಸದೆ ಇಹದ ಮೂಲಕವೇ ಪರವನ್ನು ಕಂಡರು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರೆಂದು ಹೇಳಿದರು. ಶರಣರ ಆಶಯ ಹೀಗಿರುವಾಗ ಇಲ್ಲಿ ಗೂಳೂರು ಸಿದ್ಧವೀರೊಣ್ಣೊಡೆಯ ಗೊಗ್ಗಯ್ಯನ ತೋಂಟದ ಕಾಯಕವನ್ನು ಪ್ರಭುವಿನ ಮೂಲಕ ಪ್ರಶ್ನಿಸುವ ರೀತಿ ಕಾಯಕಜೀವಿಗಳ ಚಳವಳಿಯ ಆಶಯಕ್ಕೆ ಧಕ್ಕೆ ತರುವಂತಿದೆ.

ಈ ಪ್ರಸಂಗವನ್ನು ಡಾ. ಆರ್.ಸಿ. ಹಿರೇಮಠರಂತಹ ವಿದ್ವಾಂಸರು ವಿಶ್ಲೇಷಿಸಿರುವುದು ಇನ್ನೂ ಅಪಾಯಕಾರಿಯಾಗಿದೆ. ಗುಮ್ಮಳಾಪುರದ ಸಿದ್ಧಲಿಂಗದೇವರ ಶೂನ್ಯಸಂಪಾದನೆಯ ಪ್ರಸ್ತಾವನೆಯಲ್ಲಿ ಹಿರೇಮಠರು ಹೀಗೆ ಹೇಳಿದ್ದಾರೆ. ‘ಕೊಂದವರಿಗೆ ಕೊಲೆ ತಪ್ಪದು, ಗೊಗ್ಗಯ್ಯನ ಕೃಷಿಯಲ್ಲಿ ಆತನ ನೇಗಿಲ ಬಾಯಿಗೆ ಸಿಲುಕಿ ಅದೆಷ್ಟು ಪ್ರಾಣಿಗಳ ಹಿಂಸೆಯಾಗಿದ್ದಿತೊ?”[8] ಸತ್ಯ ಶುದ್ಧ ಕಾಯಕದಿಂದ ಪ್ರಾಣಿಹಿಂಸೆಯಾಗುವುದುಂಟೆ? ಮೊಸರಿನಲ್ಲಿ ಕಲ್ಲು ಹುಡುಕುವ ಇಂತಹ ಪ್ರಸ್ತಾವನೆಯಿಂದ ಯಾರಿಗೆ ಪ್ರಯೋಜನ? ಓದುಗರೇ ಚರ್ಚಿಸಬೇಕು.

“ತನುವ ತೋಟವ ಮಾಡಿ ಮನವ ಗುದ್ದಲಿ ಮಾಡಿ” ಈ ವಚನ ಹಾಗೂ ಗೊಗ್ಗಯ್ಯನ ಪ್ರಸ್ತಾಪ ಉಳಿದ ಯಾವ ಶೂನ್ಯ ಸಂಪಾದನಾಕಾರರಲ್ಲಿಯೂ ಬರುವುದಿಲ್ಲ. ಇದು ಕೇವಲ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿ ಮಾತ್ರವಿದೆ. ಪ್ರಭುವಿನದೆಂದು ಹೇಳುವ ಈ ವಚನ, ಪ್ರಭುದೇವರ ಮೂಲವಚನಗಳಲ್ಲಿ ಇಲ್ಲ. ಹೆಚ್ಚಿನ ವಚನಗಳಲ್ಲಿ ಇದೆ. ಈ ಹೆಚ್ಚಿನ ವಚನಗಳು ಶೂನ್ಯ ಸಂಪಾದನೆಗಳಿಂದ ತೆಗೆದುಕೊಂಡವುಗಳೇ ಆಗಿವೆ. ಹಾಗಾದರೆ ಈ ವಚನವನ್ನು ಯರು ರಚಿಸಿದರು?

ಈ ವಚನವನ್ನು ಪ್ರಭು ರಚಿಸಿರಲಿ, ಅಥವಾ ಬೇರೆಯವರೇ ರಚಿಸಿರಲಿ ಈ ವಚನದ ಕಾವ್ಯಶಿಲ್ಪ ತುಂಬಾ ಆಕರ್ಷಕವಾಗಿದೆ. ತನುವನ್ನು ತೋಟದ ಪ್ರತಿಮೆಯ ಮೂಲಕ ಚಿತ್ತಾರಗೊಳಿಸುವ ಕಾವ್ಯಕಲೆ ಅದ್ಭುತವಾಗಿದೆ. ಆದರೆ ಅದನ್ನು ನಿರೂಪಿಸುವ ವಿಧಾನ ವಚನ ಚಳವಳಿಯ ಆಶಯಕ್ಕೆ ಧಕ್ಕೆಯನ್ನುಂಟುಮಾಡಬಾರದು.

ನಮ್ಮದು ಕೃಷಿ ಸಂಸ್ಕೃತಿ. ತೋಟಪಟ್ಟಿಗಳೇ ನಮ್ಮ ಕೈಲಾಸದ ತಾಣಗಳು. ತೋಂಟದ ಕಾಯಕದಲ್ಲಿ ನಿರತನಾಗಿರುವ ಶರಣ ಗೊಗ್ಗಯ್ಯನಂಥವರು ನಮಗಿಂದು ಆದರ್ಶವಾಗಬೇಕಾಗಿದೆ. ತೋಟದ ಕೃಷಿಯ ಜತೆಗೆ ತನುವಿನ ಕೃಷಿಯೂ ನಡೆಯಲಿ. ಆದರೆ ತನುವಿನ ಕೃಷಿಗಾಗಿ ತೋಟದ ಕೃಷಿ ಒಣಗದಿರಲೆಂಬುದೇ ವಚನಕಾರರ ಮುಖ್ಯ ಆಶಯ. ಇದನ್ನರಿತುಕೊಂಡು ಇಂತಹ ಪ್ರಸಂಗಗಳನ್ನು ಅರ್ಥೈಸಿಕೊಳ್ಳಬೇಕೇ ಹೊರತು, ಕೊಂದವರಿಗೆ ಕೊಲೆ ತಪ್ಪದೆಂದು ನಿರೂಪಿಸುವುದಲ್ಲ.

ಗೊಗ್ಗಯ್ಯನ ಪ್ರಸಂಗ ಉಳಿದ ಮೂರು ಶೂನ್ಯ ಸಂಪಾದನೆಗಳಲ್ಲಿ ಬರುವುದಿಲ್ಲವೆಂದ ಮೇಲೆ ಗೂಳೂರು ಸಿದ್ಧವೀರಣ್ಣೊನೊಬ್ಬನೇ ಈ ಪ್ರಸಂಗವನ್ನು ಯಾಕೆ ಸೇರಿಸಿದ? ಈ ಬಗೆಗೆ ಚರ್ಚೆ ಅಗತ್ಯವೆನಿಸುತ್ತದೆ. ಗೊಗ್ಗಯ್ಯ ವಚನಗಳನ್ನು ರಚಿಸಲಿಲ್ಲ; ವಚನಗಳನ್ನು ಆತ ರಚಿಸಿದ್ದರೆ ತೋಂಟದ ಗೊಗ್ಗಯ್ಯನೆಂಬ ಅಂಕಿತದಲ್ಲಿಯೇ ವಚನಗಳನ್ನು ನಿರೂಪಿಸುತ್ತಿದ್ದನೊ ಏನೊ? ಹನ್ನೆರಡನೇ ಶತಮಾನದ ಶರಣ ತೋಂಟದ ಗೊಗ್ಗಯ್ಯನಿಗೂ, ಹದಿನೈದನೇ ಶತಮಾನದ ಶಿವಯೋಗಿ ತೋಂಟದ ಸಿದ್ಧಲಿಂಗ ಯತಿಗಳಿಗೂ ಇರುವ ಸಾಮ್ಯವಾದರೂ ಏನು? ತೋಂಟದ ಸಿದ್ಧಲಿಂಗ ಯತಿಗಳ ಶಿಷ್ಯ ಗೂಳೂರು ಸಿದ್ಧವೀರಣ್ಣೊಡೆಯ ಮಾತ್ರ ತೋಂಟದ ಗೊಗ್ಗಯ್ಯನ ಪ್ರಸಂಗವನ್ನು ಸೇರಿಸಿರಬೇಕಾದರೆ ಏನಾದರೂ ಕಾರಣವಿರಬೇಕಲ್ಲವೆ?

ತೊಂಟದ ಗೊಗ್ಗಯ್ಯ ಹಾಗೂ ತೋಂಟದ ಸಿದ್ಧಲಿಂಗೇಶ್ವರರಲ್ಲಿ ‘ತೋಟ’ ಮಾತ್ರ ಇಬ್ಬರ ಹೆಸರಿನ ಮೊದಲು ಬರುತ್ತದೆ. ಗೊಗ್ಗಯ್ಯನಿಗೆ ಈ ಹೆಸರು ಬರಲು ಆತ ತೋಟದ ಕಾಯಕ ಮಾಡುತ್ತಿದ್ದನೆಂಬುದು ಸ್ಪಷ್ಟವಿದೆ. ಆದರೆ ಸಿದ್ಧಲಿಂಗೇಶ್ವರರಿಗೆ ಏಕೆ ಈ ಅಡ್ಡಹೆಸರು ಬಂದಿರಬೇಕು? ಅವರು ತೋಟದಲ್ಲಿ ಅನುಷ್ಠಾನ ಮಾಡಿದ್ದರಿಂದ ಅವರಿಗೆ ‘ತೋಂಟ’ದ ಹೆಸರು ಬಂದಿರಬೇಕೆಂದು ಕೆಲವರ ಅಭಿಪ್ರಾಯವಾಗಿದೆ. ಹನ್ನೆರಡನೇ ಶತಮಾನದಲ್ಲಿ ಕಾಯಕಕ್ಕೆ ಹೆಸರಾಗಿದ್ದ ತೋಟ, ಹದಿನೈದನೇ ಶತಮಾನದ ಹೊತ್ತಿಗೆ ಅನುಷ್ಠಾನ ಅಥವಾ ಪೂಜೆಗೆ ಹೆಸರಾಯಿತು.. ಹನ್ನೆರಡನೇ ಶತಮಾನದಲ್ಲಿ ಕಾಯಕವೇ ಪೂಜೆಯಾಗಿದ್ದರೆ, ಹದಿನೈದನೇ ಶತಮಾನದಲ್ಲಿ ಪೂಜೆಯೇ ಕಾಯಕವಾಯಿತು. ಮೂರೇ ಶತಮಾನಗಳಲ್ಲಿ ನಡೆದ ಮಹತ್ವದ ಬದಲಾವಣೆಯಿದು. ಹೀಗಾಗಿ ಹದಿನೈದನೇ ಶತಮಾನ ವೀರಶೈವ ಧರ್ಮದ ಪುನರುತ್ಥಾನವಾಗುವುದರ ಜತೆಗೆ, ವನ ಚಳವಳಿಯನ್ನು ಮೂಲೆಗುಂಪು ಮಾಡಿತು. ಧರ್ಮದ ವೈಭವೀಕರಣ ಹೆಚ್ಚಾಗಿ ವಚನಕ್ರಾಂತಿಯ ಕಾವು ತಣ್ಣಗಾಯಿತು. ಆ ಸಂದರ್ಭದಲ್ಲಿ ಬಂದ ನೂರೊಂದು ವಿರಕ್ತರಿಗಾಗಲಿ, ಅವರನ್ನು ಅನುಸರಿಸಿದ ಶೂನ್ಯಸಂಪಾನಾಕಾರರಿಗಾಗಲಿ ಕಾಯಕವು ಅಡ್ಡಹೆಸರಾಗಿ ಬರೆದೆ, ಪೂಜೆ ಮಠಗಳೇ ಅಡ್ಡಹೆಸರುಗಳಾಗಿ ಬಂದವು.

ಇದೇ ರೀತಿಯ ಕಾಯಕದ ನಿಂದನೆ “ಸಿದ್ಧರಾಮಯ್ಯಗಳ ಸಂಪಾದನೆ”ಯಲ್ಲಿ ಬರುತ್ತದೆ. ಕೆರೆಯನ್ನು ಕಟ್ಟಿಸುವುದು, ಬಾವಿಯನ್ನು ತೋಡಿಸುವುದು ಲೋಕೋಪಯೋಗಿ ಕಾಯಕಗಳು. ಕೆರೆ-ಬಾವಿಗಳನ್ನು ನಿರ್ಮಿಸುವುದು ಪುಣ್ಯದ ಕಾರ್ಯವೆಂದೇ ಭಾರತೀಯ ಸಂಸ್ಕೃತಿಯಲ್ಲಿ ಹೇಳಲಾಗಿದೆ. ‘ಕೆರೆಗೆಹಾರ’ದಂತಹ ಜನಪದ ಕಥನಗೀತೆಗಳು ಕೆರೆಗಳ ಮಹತ್ವವನ್ನು ಹೇಳಿವೆ. “ಕೆರೆಯಂ ಕಟ್ಟಿಸು ಬಾವಿಯಂ ಬಳಿಸು” ಎಂಬಂತಹ ಮಾತುಗಳನ್ನು ಶಾಸನಗಳಲ್ಲಿಯೂ ಕಾಣಬಹುದಾಗಿದೆ. ಕೆರೆ-ಬಾವಿಗಳು ಬದುಕಿನ ಅನಿವಾರ್ಯತೆಗಳಾಗಿವೆ.. ಕೆರೆ ಕಟ್ಟಿಸುವಂತಹ ಪವಿತ್ರ ಕಾಯಕದಲ್ಲಿ ನಿರತನಾಗಿದ್ದ ಸಿದ್ಧರಾಮನನ್ನು ಕಂಡು ಅಲ್ಲಮಪ್ರಭು ಕೆಣಕುವ ರೀತಿ, ವಚನಕಾರರ ಕಾಯಕ ಚಳವಳಿಗೆ ಬಗೆದ ದ್ರೋಹವಾಗಿದೆ. ಗುಮ್ಮಳಾಪುರದ ಸಿದ್ಧಲಿಂಗದೇವರು ಹಾಗೂ ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಗಳಲ್ಲಿ ಈ ಪ್ರಸಂಗ ಪ್ರಸ್ತಾಪವಾಗಿದೆ.

ಸೊನ್ನಲಾಪುರಕ್ಕೆ ಬಂದ ಪ್ರಭು, ಸಿದ್ಧರಾಮ ಹಾಗೂ ಆತನ ಅನುಯಾಯಿಗಳು ಕೆರೆ ಕಟ್ಟಿಸುವುದನ್ನು ಕಂಡು ಹೀಗೆ ವಿಡಂಬಿಸುತ್ತಾನೆ.. “ಕೆರೆಯ ಕಟ್ಟಿಸುವೊಡ್ಡನ ಪ್ರತಾಪವನೇ ನೆಂಬೆನಯ್ಯಾ! ನೆಲನನಗಿದು ಜಲವ ತೆಗೆದಿಹನೆಂಬ ಬಳಲಿಕೆಯ ನೋಡಾ! ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೊ? ಗೂಹೇಶ್ವರಾ”[9] ಎನ್ನುವ ಪ್ರಭುವು ಈ ವಚನದಲ್ಲಿ ಸಿದ್ಧರಾಮಯ್ಯನನ್ನು ಒಡ್ಡರಾಮಯ್ಯನೆಂದೂ, ಒಡ್ಡನೆಂಧೂ ಸಂಬೋಧಿಸುತ್ತಾನೆ. ಇದು ಅಲ್ಲಮಪ್ರಭುವಿನ ವಚನವಾಗಿರಲಿಕ್ಕಿಲ್ಲ. ಈ ವಚನ ಡಾ. ಎಲ್‌. ಬಸವರಾಜು ಸಂಪಾದಿಸಿರುವ “ಅಲ್ಲಮನ ವಚನಗಳು” ಪುಸ್ತಕದಲ್ಲಿಲ್ಲ. ಶೂನ್ಯ ಸಂಪಾದನಾಕಾರರೇ ಸೃಷ್ಟಿಸಿದ ವಚನ ಇದಾಗಿದೆ. ಒಳಗೆ ತೊಳೆಯಬೇಕು, ಶರೀರ ಶುದ್ಧಿಮಾಡಿಕೊಳ್ಳಬೇಕು, ತನುವೆಂಬ ಏರಿಗೆ ಮನವೆಂಬ ಕಟ್ಟೆ ಇದೆಲ್ಲಾ ನಿಜ. ಇದನ್ನು ಬೇಡವೆಂದು ಸಿದ್ಧರಾಮ ಹೇಳಿಲ್ಲ. ತನ್ನಷ್ಟಕ್ಕೆ ತಾನು ಸತ್ಯ ಶುದ್ಧ ಕಾಯಕದಲ್ಲಿ ತೊಡಗಿದ್ದ ಸಿದ್ಧರಾಮನಂತಹ ಮಹಾಸಾಧಕನನ್ನು, ಅಲ್ಲಮನ ಮುಖಾಂತರ ಈ ಶೂನ್ಯ ಸಂಪಾದನಾಕಾರರು ವಿಡಂಬಿಸುವ ರೀತಿ ಕಾಯಕಜೀವಿಗಳ ಚಳವಳಿಗೆ ತುಂಬಾ ವಿರೋಧವಾಗಿದೆ.

ವೀರಶೈವ ಧರ್ಮ, ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಪ್ರಾಮುಖ್ಯತೆ ನೀಡುತ್ತದೆ. ಅವೆರಡೂ ಒಂದು ನಾಣ್ಯದ ಎರಡು ಮುಖಗಳಂತೆ. ಕ್ರಿಯೆಯೇ ಪ್ರಧಾನವಾಗಿದ್ದ ಸಿದ್ಧರಾಮನಿಗೆ ಜ್ಞಾನವನ್ನು ಬೋಧಿಸಲಿ, ತನು ಶುದ್ಧಮಾಡಿಕೊಳ್ಳುವ ಆಧ್ಯಾತ್ಮವನ್ನು ತಿಳಿಸಲಿ. ಆದರೆ ಸಹಸ್ರಾರು ಜನರಿಗೆ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆರೆಕಟ್ಟುವ ಪವಿತ್ರ ಕಾಯಕವನ್ನೇ ವಿಡಂಬಿಸಿ ಒಡ್ಡರಾಮನೆಂದು ಮೂದಲಿಸುವುದು ವಚನಕಾರರ ಆಶಯವನ್ನೇ ಮರೆತಂತಾಗುತ್ತದೆ. ಈ ಕ್ರಿಯೆ ಶೂನ್ಯಸಂಪಾದನೆಯ ಅನೇಕ ಪ್ರಸಂಗಗಳಲ್ಲಿ ಎದ್ದುಕಾಣುತ್ತದೆ. ದುಡಿದ ವರ್ಗದ ಶರಣರನ್ನು ಶೂನ್ಯಸಂಪಾದನೆಗಳಲ್ಲಿ ಗೌಣವಾಗಿ ಕಾಣಲಾಗಿದೆ.

ಸಿದ್ಧರಾಮನನ್ನು ಒಡ್ಡನೆಂದು ಅಲ್ಲಮಪ್ರಭು ಇಲ್ಲಿ ವಿಡಂಬಿಸಿದಾಗ, ಸಿದ್ಧರಾಮನ ಶಿಷ್ಯರಿಗೆ ಸಿಟ್ಟುಬರುತ್ತದೆ. ಅವರೆಲ್ಲರೂ ಕಾಯಕಜೀವಿಗಳೇ ಆಗಿದ್ದರು. ತಮ್ಮ ಕಾಯಕವನ್ನು, ತಮ್ಮ ಗುರುವನ್ನು ನಿಂದಿಸುವ ಅಲ್ಲಮನಿಗೆ ಕಲ್ಲು ಬಡಿಗೆಗಳಿಂದ ಹೊಡೆಯಲು ಹೋಗುತ್ತಾರೆ. ಗುರುನಿಂದೆಯನ್ನು ಸಹಿಸದೆ ಅಲ್ಲಮನ ಮೇಲೆ ಕೋಪಮಾಡಿಕೊಳ್ಳುತ್ತಾರೆ. ಇದನ್ನು ಶೂನ್ಯಸಂಪಾದನಾಕಾರರು ತಮ್ಮ ಗದ್ಯದಲ್ಲಿ ಹೇಳಿದ್ದಾರೆ. ಆದರೆ ಈ ಕಾಯಕಜೀವಿಗಳು ಅಲ್ಲಮನಿಗೆ ಬೀಸಿದ ಕಲ್ಲುಗಳು ತಿರುಗಿಬಂದು ಮತ್ತೆ ಇವರಿಗೇ ಬಡಿಯುತ್ತವೆಂದು ಶೂನ್ಯ ಸಂಪಾದನೆಕಾರರು ಪವಾಡಕತೆಗಳನ್ನು ಹೆಣೆದಿದ್ದಾರೆ. ಹನ್ನೆರಡನೇ ಶತಮಾನದ ಅಲ್ಲಮಪ್ರಭು ಪವಾಡಪುರುಷನಲ್ಲ. ಶರಣರು ಪವಾಡಗಳನ್ನು ಪುನರ್ಜನ್ಮಗಳನ್ನು ನಂಬುತ್ತಿರಲಿಲ್ಲ. ಆದರೆ ಶೂನ್ಯ ಸಂಪಾದನಾಕಾರರು ಸೃಷ್ಟಿಸಿದ ಈ ಹದಿನೈದನೇ ಶತಮಾನದ ಶೂನ್ಯ ಸಂಪಾದನೆಗಳ ನಾಯಕ ಅಲ್ಲಮಪ್ರಭು ಮಾತ್ರ ಈ ಕಾವ್ಯದುದ್ದಕ್ಕೂ ಅನೇಕ ಪವಾಡಗಳನ್ನು ಮೆರೆದಿದ್ದಾನೆ. ಇದನ್ನು ಚಾಮರಸ ಕವಿ ಪ್ರಭುಲಿಂಗಲೀಲೆಯಲ್ಲಿಯೇ ಮಾಡಿದ್ದಾನೆ. ಅನೇಕ ಪವಾಡ ಕತೆಗಳನ್ನು ಸೇರಿಸಿ ಅಲ್ಲಮಪ್ರಭುವಿನ ನಿಜ ಜೀವನವನ್ನೇ ಈ ಸಂಪಾದನಾಕಾರರು ಮರೆಮಾಚಿ ಬಿಟ್ಟಿದ್ದಾರೆ. ಯಾವ ಶರಣರು ಹನ್ನೆರಡನೇ ಶತಮಾನದಲ್ಲಿ ಏನಾಗಬಾರದೆಂದು ಬಯಸಿದ್ದರೊ, ಅದನ್ನೆಲ್ಲಾ ಹದಿನೈದನೇ ಶತಮಾನದಲ್ಲಿ ಶರಣರ ಹೆಸರಿನ ಮೂಲಕವೇ ಮಾಡಲಾಗಿದೆ. ಇದು ವಚನ ಚಳುವಳಿಯ ದುರಂತ.

ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿ ಬರುವ ಆಯ್ದಕ್ಕಿ ಮಾರಯ್ಯಗಳ ಸಂಪಾನೆಯಲ್ಲಿಯೂ ಕೂಡ ಕಾಯಕದ ಬಗೆಗೆ ಗೌರವವನ್ನು ತೋರಿಸಿಲ್ಲ. “ಕಾಯಕದಲ್ಲಿ ನಿರತನಾದರೆ ಗುರುದರುಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು. ಜಂಗಮಮುಂದಿದ್ದಡೂ ಹಂಗು ಹರೆಯಬೇಕು” ಎನ್ನುವ ವಚನವನ್ನು ಹೇಳುತ್ತಲೇ ಆಯ್ದಕ್ಕಿ ಮಾರಯ್ಯನ ಪ್ರವೇಶವಾಗುತ್ತದೆ. ಇದನ್ನು ಕೇಳಿ ಶೂನ್ಯಸಂಪಾದನಾಕಾರರ ಪ್ರಭುವು ಹೀಗೆ ಹೇಳುತ್ತಾನೆ. “ಮಾಡಿಹನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು ಆಯ್ದಕ್ಕಿಯ ಮಾರಯ್ಯ” ಎಂದು ವಿವರಿಸುವ ಪ್ರಭುವಿನ ಈ ವಚನ ಕೂಡಾ ಶೂನ್ಯ ಸಂಪಾದನಾಕಾರರ ಸೃಷ್ಟಿಯೇ ಆಗಿದೆ. ಡಾ.ಎಲ್‌. ಬಸವರಾಜು ಅವರು ಸಂಪಾದಿಸಿರುವ “ಅಲ್ಲಮನ ವಚನಗಳು” ಕೃತಿಯಲ್ಲಿ ಈ ವಚನವೂ ಇಲ್ಲ. ಇಂತಹ ಅನೇಕ ವಚನಗಳನ್ನು ಶೂನ್ಯಸಂಪಾದನಾಕಾರರು ತಾವೇ ಸೃಷ್ಟಿಸಿ ಪ್ರಭುವಿನ ಹೆಸರಿನಲ್ಲಿ ಬರೆದಿದ್ದಾರೆ.

ಇದಷ್ಟಕ್ಕೆ ಬಿಡದೆ ವಚನಗಳ ನಂತರ ಬರುವ ಗದ್ಯದಲ್ಲಿ, ಆಯ್ದಕ್ಕಿ ಮಾರಯ್ಯ ತಮ್ಮ ಕಾಯಕವನ್ನು ತಾವೇ ಜರೆದರೆಂದು ಗೂಳೂರು ಸಿದ್ಧವೀರಣ್ಣೊಡೆಯ ಹೇಳುತ್ತಾನೆ. ಆ ಸಾಲುಗಳು ಹೀಗಿವೆ. “ಈ ಹೀಗೆಂದು ಪ್ರಭುದೇವರು ಮಹಾಘನಲಿಂಗವ ನಿಜಪದದಲ್ಲಿ ಬೆರಸಿ ಎರಡಳಿದಿರಬೇಕೆಂದು ನಿರೂಪಿಸಲು, ಇದಕ್ಕೆ ಆಯ್ದಕ್ಕಿಯ ಮಾರಿತಂದೆಗಳು ಕೃತಿನಿಶ್ಚಯವನೆಯ್ದಿ, ತಮ್ಮ ಕಾಯಕವ ತಾವೆ ಜರೆದು, ಘನಲಿಂಗದ ನಿಜಸಮಾಧಿಯೊಳಗೆ ಬೆರಸಿನಿಂದು ಪ್ರಭುದೇವರ ಶ್ರೀ ಪಾದಕ್ಕೆ ನಮಸ್ಕರಿಸಿರುವ…..” ೧೮.((ಪ್ರೊ. ಸಂ.ಶಿ. ಭೂಸನೂರಮಠ(ಸಂ.), ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಪುಟ ೧೬೧, ವ. ೭, ೧೯೫೮.))

ಶೂನ್ಯ ಸಂಪಾದನಾಕಾರರು ಯಾಕೆ ಹೀಗೆ ಹೊಸ ವಚನಗಳನ್ನು ಶರಣರ ಹೆಸರಿನಲ್ಲಿ ರಚಿಸಿದರು? ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. “ಕಾಯಕದಲ್ಲಿ ನಿರತನಾದಡೆ ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು” ಎಂಬಂತಹ ಶರಣರ ವಚನಗಳು ಇವರಿಗೆ ಹಿಡಿಸಲಿಲ್ಲ. ಇಂತಹ ವಚನಗಳು ಪ್ರಚಾರವಾದರೆ ತಮ್ಮ ಗತಿಯೇನೆಂದು ಈ ವಿರಕ್ತಮಂಡಳಿ ಆಲೋಚಿಸಿತು. ಅದಕ್ಕಾಗಿ ಉದ್ದೇಶ ಪೂರ್ವಕವಾಗಿಯೇ ಇಂತಹ ನುಡಿಗಳನ್ನು ಅಲ್ಲಗಳೆಯಲು ಪ್ರಭುವಿನ ಹೆಸರಿನಲ್ಲಿಯೇ ಹೊಸ ವಚನಗಳನ್ನು ಸೃಷ್ಟಿಸಲಾಯಿತು. ವಚನಗಳ ನಂತರ ಬರುವ ತಮ್ಮ ಗದ್ಯದಲ್ಲಿ ಉದ್ದೇಶಕ್ಕೆ ತಕ್ಕಂತೆ ಅರ್ಥ ಬದಲಿಸಲಾಯಿತು.

 

[1]ಡಾ. ಬಿ.ವ್ಹಿ. ಮಲ್ಲಾಪುರ (ಸಂ.), ಅಲ್ಲಮಪ್ರಭುದೇವರ ವಚನ ಸಂಪುಟ, ಪುಟ xxii, ಕ.ಸಂ.ಇಲಾಖೆ, ೧೯೯೩.

[2]ಡಾ. ಬಿ.ವ್ಹಿ. ಮಲ್ಲಾಪುರ (ಸಂ), ಅಲ್ಲಮಪ್ರಭುದೇವರ ವಚನ ಸಂಪುಟ, ಪುಟ XXII, ಕ.ಸಂ.ಇಲಾಖೆ, ೧೯೯೩.

[3]ಡಾ.ಬಿ.ವ್ಹಿ. ಶಿರೂರ, ಶೂನ್ಯಸಂಪಾದನೆ, ವಿಶ್ವಪ್ರಭೆ ಸಂಪುಟ ೩, ಪುಟ ೪೩೨, ಮೂರು ಸಾವಿರ ಮಠ, ಹುಬ್ಬಳ್ಳಿ, ೧೯೯೧

[4]ಡಾ. ಆರ್.ಸಿ. ಹಿರೇಮಠ (ಸಂಂ), ಗುಮ್ಮಳಾಪುರ ಸಿದ್ಧಲಿಂಗದೇವರ ಶೂನ್ಯಸಂಪಾದನೆ, ಪ್ರಸ್ತಾವನೆ ಪುಟ ೯೬, ೧೯೮೪.

[5]ಡಾ. ಎಂ.ಎಂ. ಕಲಬುರ್ಗಿ(ಸಂ), ಬಸವಣ್ಣನವರ ವಚನ ಸಂಪುಟ, ಕ.ಸಂ.ಇಲಾಖೆ, ಪುಟ ೧೦೬,ವ.೪೪೪, ೧೯೯೩.

[6]ಪ್ರೊ.ಸಂ.ಶಿ.ಭೂಸನೂರಮಠ(ಸಂ), ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಪುಟ ೨೯ ೧, ವ. ೫, ೧೯೫೮.

[7]ಪ್ರೊ. ಸಂ.ಶಿ. ಭೂಸನೂರಮಠ(ಸಂ), ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಪುಟ ೧೦, ವ. ೨೯, ೧೯೫೮.

[8]ಡಾ.ಆರ್.ಸಿ. ಹಿರೇಮಠ, ಗುಮ್ಮಾಳಾಪುರದ ಸಿದ್ಧಲಿಂಗದೇವರ ಶೂನ್ಯಸಂಪಾದನೆ ಪ್ರಸ್ತಾವನೆ, ಪುಟ ೯೭, ೧೯೩೨

[9]ಪ್ರೊ. ಸಂ.ಶಿ. ಭೂಸನೂರಮಠ(ಸಂ), ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆ, ಪುಟ ೪೨, ವ. ೭, ೧೯೫೮.