. ಅಸ್ಪೃಶ್ಯತೆ ನಿವಾರಣೆ

ಶತಮಾನಗಳಿಂದ ಬೇರುಬಿಟ್ಟಿದ್ದ ಅಸ್ಪೃಶ್ಯತೆಯನ್ನು ಹೊಡೆದೋಡಿಸಿ ಜಾತ್ಯಾತೀತ ಮೌಲ್ಯವನ್ನು ಹುಟ್ಟುಹಾಕುವುದೇ ವಚನ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯನೆಂದು ತಿಳಿಸಿದ ವಚನಕಾರರು, ತಮ್ಮದು ಮಾದಾರ ಚೆನ್ನಯ್ಯನ ಗೋತ್ರವೆಂದು ಹೆಮ್ಮೆಯಿಂದ ಹೇಳಿಕೊಂಡರು. ಹರಳಯ್ಯನ ಮಗನೊಂದಿಗೆ, ಮಧುವಯ್ಯನ ಮಗಳು ಮದುವೆಯಾದದ್ದು, ಅಂತರ್ಜಾತಿಯ ವಿವಾಹವನ್ನು ಜಾರಿಗೆ ತಂದದ್ದು, ವಚನ ಚಳುವಳಿಯ ಬಹುದೊಡ್ಡ ಸಾಧನೆ. ಮನುಷ್ಯ ಮನುಷ್ಯರಲ್ಲಿ ಜಾತಿಭೇದದ ಮೂಲಕ ಅಸಮಾನತೆಯನ್ನು ಹುಟ್ಟುಹಾಕಿದ ವರ್ಣವ್ಯವಸ್ಥೆಯನ್ನು ಧಿಕ್ಕರಿಸಿದ್ದು ಚಾರಿತ್ರಿಕವಾಗಿ ತುಂಬಾ ಮಹತ್ವವಾದದ್ದಾಗಿದೆ.

ಆದರೆ ಶೂನ್ಯಸಂಪಾದನೆಗಳಲ್ಲಿ ಇದರ ಬಗೆಗೆ ಪ್ರಸ್ತಾಪವೇ ಇಲ್ಲ. ವರ್ಣವ್ಯವಸ್ಥೆಯನ್ನು ವಿರೋಧಿಸುವ, ಮನುಷ್ಯ ಸಮಾನತೆಯನ್ನು ಸಾರುವ ಅನೇಕ ವಚನಗಳನ್ನು ಶರಣರು ರಚಿಸಿದ್ದಾರೆ. ಅಂತಹ ಯಾವುದೇ ಒಂದು ವಚನವನ್ನು ಕೂಡ ಇಲ್ಲಿ ಆಯ್ಕೆ ಮಾಡಿಕೊಂಡಿಲ್ಲ. ಎಲ್ಲಾ ಗಣಗಳ ಐಕ್ಯದವರೆಗೂ” ಶೂನ್ಯಸಂಪಾದನೆಯ ಬೆಳವಣಿಗೆ ಇದೆ. ಆದರೆ ವಚನ ಚಳುವಳಿಕಯ ಕೇಂದ್ರವಾದ ಜಾತಿ ಸಂಘರ್ಷದ ಪ್ರಸ್ತಾಪವನ್ನು ಶೂನ್ಯಸಂಪಾದನಾಕಾರರು ಯಾಕೆ ಕೈಬಿಟ್ಟರು?ಅಮುಖ್ಯವಾದ ವಿಷಯವಾದರೆ ಕೈಬಿಡಬಹುದು, ಆದರೆ ಅಸ್ಪೃಶ್ಯತೆ ಮತ್ತು ಜಾತಿ ಹೋರಾಟದಂತಹ ವಿಷಯಗಳು ಶರಣರ ಕ್ರಾಂತಿಯ ಮುಖ್ಯನೆಲೆಗಳು. ಅವುಗಳನ್ನೇ ಕೈಬಿಟ್ಟುಬಿಟ್ಟರೆ ಹೇಗೆ? ಇದರ ಹಿಂದಿರುವ ಉದ್ದೇಶವಾದರೂ ಏನು?

ಶೂನ್ಯಸಂಪಾದನೆಗಳು ಧಾರ್ಮಿಕ ಕೃತಿಗಳು ಆ ಕಾರಣಕ್ಕಾಗಿ ಇಲ್ಲಿ ಸಾಮಾಜಿಕ ವಿಷಯಗಳನ್ನು ಸೇರಿಸಲಾಗಿಲ್ಲವೆಂದು ಕಾರಣ ನೀಡಬಹುದು. ಆದರೆ ವಚನಕಾರರು ಕೇವಲ ಧಾರ್ಮಿಕ ಪುರುಷರಲ್ಲ. ಅವರ ಧರ್ಮಕ್ಕೂ ಸಮಾಜಕ್ಕೂ ಸಂಬಂಧವಿತ್ತು. ಸಮಾಜದಿಂದ ಅತೀತವಾದ, ಸಮುದಾಯದಿಂದ ದೂರವಿರುವ ಧರ್ಮವನ್ನವರು ಬೋಧಿಸಲಿಲ್ಲ. ಧರ್ಮ ಸಮಾಜ ಸಮುದಾಯ ಪ್ರತ್ಯೇಕ ಘಟಕಗಳಲ್ಲ. ನಿಜವಾದ ಧರ್ಮ ಪ್ರತ್ಯೇಕತೆಯನ್ನು ಹೇಳುವುದೇ ಇಲ್ಲ.

ನಿಜವಾಧ ಧಾರ್ಮಿಕ ಕೃತಿ, ನಿಜವಾದ ಸಾಮಾಜಿಕ ಕೃತಿಯೂ ಆಗಿರುತ್ತದೆ. ನಿಜವಾದ ರಾಜಕೀಯ ಕೃತಿಯೂ ಆಗಿರುತ್ತದೆ. ಶರಣರು ಸಾರಿದ್ದು ಅಂತಹ ಧರ್ಮ. ಅವರು ಸಮಾನತೆಯ ಸಮಾಜವನ್ನು ಕಟ್ಟಬಯಸಿದ್ದರು. ಜಾತ್ಯಾತೀತ ಸಮುದಾಯವನ್ನು ಬೆಳೆಸಬಯಸಿದ್ದರು. ಜಾತಿ ರಹಿತ ವ್ಯವಸ್ಥೆಗಾಗಿ ಹಂಬಲಿಸಿದ್ದರು.

ಧರ್ಮಗ್ರಂಥವನ್ನೇ ಬರೆಯುವುದು ಶೂನ್ಯಸಂಪಾದನಾಕಾರರ ಉದ್ದೇಶವಾಗಿದ್ದರೆ ಶರಣರ ವಚನಗಳಲ್ಲಿ ಬರುವ ವಿಚಾರಗಳನ್ನು ಕ್ರೋಡಿಕರಿಸಿ ಶಾಸ್ತ್ರ ಗ್ರಂಥವನ್ನು ಬರೆಯಬಹುದಾಗಿತ್ತು. ಶರಣರ ವಚನಗಳನ್ನು ಸಂಕಲಿಸಿ ಬರೆಯುವಾಗ ಅವರ ಮುಖ್ಯ ಆಶಯಗಳನ್ನೇ ಬಿಟ್ಟು ಬರೆಯುವುದು ಸೂಕ್ತವೇ? ಅಂದರೆ ಶೂನ್ಯಸಂಪಾದನಾಕಾರರ ಪ್ರಕಾರ ಶರಣರು ಕೇವಲ ಧರ್ಮಬೋಧಕರೆ? ಇಂತಹ ಅನೇಕ ಗೊಂದಲಗಳು ಇಂತಹ ಸಂಕಲಗಳಿಂದ ಹುಟ್ಟಿಕೊಂಡಿವೆ.

ಹರಿಹರನೂ ಕೂಡ ಭಕ್ತ ಕವಿ. ಧರ್ಮ ಮತ್ತು ಭಕ್ತಿಗೆ ಸಂಬಂಧಿಸಿದಂತೆ ಹರಿಹರನಲ್ಲಿದ್ದ ತಾತ್ತ್ವಿಕ ಬದ್ದತೆಯನ್ನು ಯಾರೂ” ಪ್ರಶ್ನಿಸಲಾರರು. ಆದರೆ ಹರಿಹರ ಶರಣರ ಭಕ್ತಿಯ ವಿಚಾರಗಳನ್ನು ಹೇಳುತ್ತಲೇ ಅವರ ಸಾಮಾಜಿಕ ವಿಷಯಗಳನ್ನು ತಿಳಿಸಿದ. ಹರಿಹರ ರಚಿಸಿರುವ ಮಾದಾರ ಚೆನ್ನಯ್ಯನ ರಗಳೆ, ಶ್ವಪಚಯ್ಯನ ರಗಳೆ ಈ ಮೊದಲಾದವುಗಳನ್ನಿಲ್ಲಿ ಉದಾಹರಿಸಬಹುದು.

ಹಾಗಾದರೆ ಶೂನ್ಯ ಸಂಪಾದನಾಕಾರರಿಗೆ ಮತ್ತು ಅಂದಿನ ನೂರೊಂದು ವಿರಕ್ತರಿಗೆ ವೀರಶೈವ ಜಾತಿವ್ಯವಸ್ಥೆಯನ್ನು ಹುಟ್ಟುಹಾಕುವುದೇ ಮುಖ್ಯ ವಿಚಾರವಾಗಿತ್ತೆ? ಈ ಬಗೆಗೆ ಸಂಶೋಧನೆಗಳಾಗಬೇಕಾಗಿದೆ.. ಏಕೆಂದರೆ ಅಂದಿನ ಸಂದರ್ಭದಲ್ಲಿ ಪರಕೀಯ ಧಾರ್ಮಿಕ ದಾಳಿ ಅತಿಯಾಗಿತ್ತು. ಮುಸ್ಲಿಂ ಸಾಮ್ರಾಟರ ಆಳ್ವಿಕೆಯಲ್ಲಿ ತತ್ತರಿಸಿಹೋಗಿದ್ದ ಈ ಜನತೆ ಧಾರ್ಮಿಕವಾಗಿ ಒಗ್ಗೂಡುವುದರ ಮೂಲಕ ಇಂತಹ ಪ್ರಯತ್ನಗಳನ್ನು ಮಾಡಿದರೆ? ಪ್ರೌಢದೇವರಾಯನ ಕಾಲವನ್ನು ವೀರಶೈವ ಪುನರುತ್ಥಾನದ ಯುಗವೆಂದು ಹೇಳಕಲು ಇದೇ ಮುಖ್ಯ ಕಾರಣಾಗಿರಬೇಕು. ಇವೇ ಕಾರಣಗಳಿರಬೇಕೆನ್ನುವುದಾದರೆ ಶೂನ್ಯ ಸಂಪಾದನೆಗಳಿಗೆ ಬಹಳಷ್ಟು ಮಿತಿಗಳು ಕಾಡುತ್ತವೆ. ಪ್ರಸ್ತುತ ಸಂದರ್ಭದ ಸವಾಲುಗಳನ್ನು ಎದುರಿಸುವ ಶಕ್ತಿ ವಚನಗಳಿಗೆ ವಚನಕಾರರಿಗೆ ಇರುವಂತೆ, ಶೂನ್ಯಸಂಪಾದನೆಗಳಿಗೆ ಮತ್ತು ಶೂನ್ಯೆ ಸಂಪಾದನಾಕಾರರಿಗೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಇದನ್ನೆಲ್ಲಾ ಗಮನಿಸಿದರೆ ಶೂನ್ಯಸಂಪಾದನಾಕಾರರಿಗೆ ವಚನಕಾರರ ನಿಜವಾದ ಧರ್ಮದ ಅರ್ಥವೇ ಆಗಿಲ್ಲವೆಂದು ತಿಳಿಯಬೇಕಾಗುತ್ತದೆ. ವಚನಕಾರರ ವಚನಗಳಲ್ಲಿ ಧರ್ಮವೆಂಬುದು ಪ್ರತ್ಯೇಕವಾಗಿಲ್ಲ.. ವಚನಧರ್ಮವಿರುವುದು ಕಾಯಕದಲ್ಲಿ ದಾಸೋಹದಲ್ಲಿ ಅಸ್ಪೃಶ್ಯತೆ ನಿವಾರಣೆಯಲ್ಲಿ ಲಿಂಗಭೇದ ನಿವಾರಣೆಯಲ್ಲಿ. ವಚನಕಾರರನ್ನು ಸರಿಯಾಗಿ ಅರ್ಥೈಸಿಕೊಂಡವರಿಗೆ ವಚನ ಧರ್ಮದ ತಿರುಳು ಸ್ಪಷ್ಟವಾಗಿಯೇ ಕಾಣಿಸುತ್ತದೆ.

ಆದರೆ ಶೂನ್ಯ ಸಂಪಾದನಾಕಾರರಿಗೆ ವಚನ ಧರ್ಮವನ್ನು ವಿಸ್ತರಿಸುವ ಉದ್ದೇಶವಾಗಲಿ, ವಚನ ಚಳುವಳಿಯನ್ನು ಮುಂದುವರಿಸುವ ಉದ್ದೇಶವಾಗಲಿ ಖಂಡಿತಾ ಇರಲಿಲ್ಲ. ವಚನಕಾರರನ್ನು ಮುಂದಿಟ್ಟುಕೊಂಡು ಗುರು ಲಿಂಗ ಜಂಗಮಕ್ಕೆ ಸಂಬಂಧಿಸಿದ ವಿಷಯವನ್ನು ವೈಭವೀಕರಿಸುವುದೇ ಆಗಿತ್ತು. ಶೈವ ಪರಂಪರೆಯ ಮೂಲ ನೆಲೆಗಳನ್ನುಳಿಸಿಕೊಂಡು ಮತ್ತೆ ಮಠ ವ್ಯವಸ್ಥೆಯನ್ನು ಹುಟ್ಟುಹಾಕುವುದೇ ಅವರ ಉದ್ದೇಶವಾಗಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ.

ಉಳಿದ ಧರ್ಮಗಳಿಗೂ, ಶರಣ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಉಳಿದ ಧರ್ಮಗಳಲ್ಲಿ, ಧರ್ಮಕ್ಕೆ ಸಂಬಂಧಿಸಿದ ಪ್ರತ್ಯೇಕ ಗ್ರಂಥಗಳೇ ಇರುತ್ತವೆ. ಆ ಧರ್ಮದ ಸಂಸ್ಥಾಪಕರ ಭವಾವಳಿಗಳಿರುತ್ತವೆ. ಅದರ ಪ್ರಚಾರಕರ ಪಡೆ ಇರುತ್ತದೆ. ಇದನ್ನೆಲ್ಲಾ ಗಟ್ಟಿಗೊಳಿಸುವ ಪುರೋಹಿತಶಾಹಿ ವ್ಯವಸ್ಥೆ ಆ ಧರ್ಮಗಳ ಮೂಲ ಕೇಂದ್ರವಾಗಿರುತ್ತದೆ. ಶರಣಧರ್ಮ ಅಥವಾ ವಚನಕಾರರು ಹೇಳಿದ ವಚನಧರ್ಮ ವೀರಶೈವವನ್ನು ಮೀರಿ ಬೆಳೆದ ಮಾನವೀಯ ಧರ್ಮವಾಗಿದೆ. ಕರ್ನಾಟಕದಾಚೆಗೂ ಪ್ರಸ್ತುವಾಗಬಲ್ಲ ಜಾಗತಿಕ ಧರ್ಮವಾಗಿದೆ. “ಎರೆದರೆ ನೆನೆಯದು, ಬಿಟ್ಟರೆ ಬಾಡದು. ಹುರುಳಿಲ್ಲ ಹುರುಳಿಲ್ಲ ಲಿಂಗಪೂಜೆ” ಎಂದು ಹೇಳಿದ ಶರಣರು, ಇಷ್ಟಲಿಂಗವನ್ನು ಮೀರಿ ಬೆಳೆದ ಮಹಾ ಸಾಧಕರಾಗಿದ್ದರು. ಸಾಧಕನೇ ಭಕ್ತನಾಗಿ-ಗುರುವಾಗಿ-ಲಿಂಗವಾಗಿ-ಜಂಗಮನಾಗಿ ಬೆಳೆಯುವ ಅದ್ಭುತ ಶಕ್ತಿ ವಚನಧರ್ಮಕ್ಕಿದೆ. ಆದರೆ ಶೂನ್ಯಸಂಪಾದನೆಗಳಲ್ಲಿ ಆದದ್ದೇನು? ಈ ವಿಷಯ ಗಂಭೀರ ಚರ್ಚೆಯನ್ನು ಬಯಸುತ್ತದೆ.

ವಚನ ಚಳುವಳಿಯೆಂದರೆ ಅದು ದಲಿತ ಚಳವಳಿಯೇ ಆಗಿತ್ತು. ವಚನಕಾರರ ಮೂಲ ಉದ್ದೇಶ ಅಸ್ಪೃಶ್ಯತೆ ನಿವಾರಣೆಯೇ ಆಗಿತ್ತು. ಹರಿಹರನಂತಹ ಭಕ್ತಕವಿ ಮಾದಾರ ಚೆನ್ನಯ್ಯನ ರಗಳೆಯನ್ನು ಬರೆದಿರುವಾಗ, ಆತನ ತರುವಾಯ ಬಂದ ಶೂನ್ಯಸಂಪಾದನಾಕಾರರು ಮಾದಾರ ಚೆನ್ನಯ್ಯನ ಸಂಪಾದನೆಯನ್ನು ಸೇರಿಸಬಹುದಾಗಿತ್ತು. ಬಸವಣ್ಣನವರು ಹೇಳಿದಂತೆ ಗೋತ್ರ ಪುರುಷನಾದ ಚೆನ್ನಯ್ಯನ ಸಂಪಾದನೆಯ ಮೂಲಕವೇ ಶೂನ್ಯಸಂಪಾದನೆ ಪ್ರಾರಂಭವಾಗಬಹುದಾಗಿತ್ತು. ಶೂನ್ಯಸಂಪಾದನೆಯ ಉದ್ದೇಶ ಆಧ್ಯಾತ್ಮಕ್ಕೆ ಮಾತ್ರ ಸೀಮಿತವೆಂದು ಇಟ್ಟುಕಂಡರೂ, ಅಸ್ಪೃಶ್ಯ ಸಮುದಾಯದಿಂದ ಬಂದ ವಚನಕಾರರು ಹೇಳಿದ ಆಧ್ಯಾತ್ಮ ಅನುಭಾವದ ವಿಷಯಗಳು ಯಾವುದರಲ್ಲಿಯೂ ಕಡಿಮೆಯಾಗಿಲ್ಲ. ಹೀಗಿದ್ದಾಗ ಅಸ್ಪೃಶ್ಯ ವಚನಕಾರರು ಶೂನ್ಯಸಂಪಾದನೆಗಳಲ್ಲಿ ಏಕ ಪ್ರವೇಶ ಪಡೆಯಲಿಲ್ಲ? ಈ ವಿಷಯವನ್ನು ಕುರಿತು ಮುಕ್ತ ಮನಸ್ಸಿನ ಚರ್ಚೆ ಪ್ರಾರಂಭ ವಾಗಬೇಕಾಗಿದೆ.

ಅಸ್ಪೃಶ್ಯ ವಚನಕಾರರಲ್ಲಿ ಕಂಡುಬರುವ ಆಧ್ಯಾತ್ಮದ ವಿಚಾರಗಳು, ಅನುಭಾವದ ಪರಿಕಲ್ಪನೆಗಳು ಕುತೂಹಲಕಾರಿಯಾಗಿವೆ.

ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ಕಂಬವ ನೆಟ್ಟು
ಆಗು ಚೇಗುಯೆಂಬ ದಡಿಗೋಲಿನಲ್ಲಿ
ಅಗಡದ ಎಮ್ಮೆಯ ಚರ್ಮವ ತೆಗೆದು,
ಉಭಯನಾಮವೆಂಬ ಸಾಲಿನಲ್ಲಿ ತಿತ್ತಿಯನೊಪ್ಪವ ಮಾಡಿ,
ಭಾವವೆಂಬ ತಿಗುಡಿನಲ್ಲಿ
ಸರ್ವಸಾರವೆಂಬ ಖಾರದ ನೀರ ಹೊಯಿದು
ಅಟ್ಟೆಯ ದುರ್ಗುಣ ಕೆಟ್ಟು
ಮೆಟ್ಟಡಿಯವರಿಗೆ ಮುಟಟಿಸಬಂದೆ….”
(ಸ.ವ.ಸಂ. ೮, ಪು. ೪೧೯, ವ. ೧೧೬೫)

ವೃತ್ತಿ ಪ್ರತಿಮೆಗಳ ಮೂಲಕ ಆಧ್ಯಾತ್ಮದ ನೆಲೆಗಳನ್ನು ಗುರುತಿಸುವ ಮಾದಾರ ಚೆನ್ನಯ್ಯನ ಈ ವಚನ ಗಮನಾರ್ಹವಾದುದು. “ಅಗಡದ ಎಮ್ಮೆಯ ಚರ್ಮ”, “ಅಟ್ಟೆಯ ದುರ್ಗುಣ”ದಂತಹ ಪದಗಳು ಇಡೀ ಭಾರತೀಯ ಆಧ್ಯಾತ್ಮ ಕ್ಷೇತ್ರಕ್ಕೆ ತುಂಬಾ ಹೊಸತಾದ ಪದಗಳು. ಇಂತಹ ಹಿರಿಯ ವಚನಕಾರರ ವಚನಗಳನ್ನು ನಂತರ ಬಂದ ಸಂಕಲನಕಾರರು ಕವಿಗಳು ಗಮನಿಸದೇ ಇರುವುದು ಶೋಚನೀಯವಾದುದು.

ಆಕಾಶ ಆಕಾರವಾಗಿ ತೋರಯಡಗುವನ್ನ ಬರ
ಬಯಲು ಬೆಳಗ ನುಂಗಿ, ಒಳಗಾಗಹನ್ನ ಬರ,
ವಾಯು ಗಂಧವ ಕೂಡುವನ್ನ ಬರ,
ಕಾಯದ ಇಷ್ಟವ ಜೀವವರಿವನ್ನ ಬರ
ಆವ ಭಾವವನೂ ಆಡಿ ಭಾವಜ್ಞರೆನಿಸಿಕೊಂಬರಲ್ಲದೆ
ಭಾವದ ಸೂತಕವುಳ್ಳನ್ನಕ್ಕ,
ಜೀವ ಆವಾವ ಭಾವಂಗಳಲ್ಲಿ ಬಹುದು ತಪ್ಪದು
ಇದಕ್ಕೆ ಎನಗಿನ್ನಾವುದು ಬಟ್ಟೆ? ಕಾಮಧೂಮ ಧೂಳೇಶ್ವರಾ
(ಸ.ವ.ಸಂ.೮, ಪು. ೪೨೬, ವ. ೧೧೮೩)

ಮಾದಾರ ಧೂಳಯ್ಯನ ಈ ವಚನದಲ್ಲಿ ಬರುವ ಅನುಭಾವದ ಒಳನೋಟಗಳನ್ನಿಲ್ಲಿ ಗಮನಿಸಬಹುದಾಗಿದೆ. ಆಕಾಶ ಬಯಲು ವಾಯು ಈ ಪಂಚತತ್ವಗಳ ಮೂಲಕ ಧೂಳಯ್ಯ ಕಂಡುಕೊಳ್ಳುವ ಸತ್ಯಶೋಧಗಳನ್ನು ಗಮನಿಸಿದಾಗ ಈ ವಚನಕಾರರ ಬಗೆಗೆ ಅಭಿಮಾನವೆನಿಸುತ್ತದೆ. ಶತಮಾನಗಳಿಂದ ಆಧ್ಯಾತ್ಮ ಕ್ಷೇತ್ರದಿಂದ ದೂರವಾಗಿದ್ದ ಅಸ್ಪೃಶ್ಯರು, ಹನ್ನೆರಡನೇ ಶತಮಾನದ ಶರಣ ಚಳವಳಿಯಲ್ಲಿ ಆಧ್ಯಾತ್ಮ ಅನುಭಾವ ಕ್ಷೇತ್ರದಲ್ಲಿ ಮಹತ್ವದ ವಿಚಾರಗಳನ್ನು ಪ್ರಕಟಿಸಿರುವುದು ಶರಣ ಸಂಸ್ಕೃತಿಯ ಹಿರಿಮೆಗೆ ಸಾಕ್ಷಿಯಾಗಿದೆ. ಇಂತಹ ಮಹತ್ವದ ದಾಖಲೆಗಳನ್ನು ಶೂನ್ಯಸಂಪಾದನೆಗಳು ನಿರ್ಲಕ್ಷಿಸಿವೆ.

. ವಚನಕಾರ್ತಿಯರು

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಅನೇಕ ಮಹಿಳೆಯರು ವಚನ ರಚನೆ ಮಾಡಿರುವ ವಿಷಯ ಈಗಾಗಲೇ ಸ್ಪಷ್ಟವಾಗಿದೆ. ಮೂವತ್ತೈದಕ್ಕೂ ಹೆಚ್ಚು ಸಂಖ್ಯೆಯ ಮಹಿಳೆಯರ ವಚನಗಳು ಈಗಾಗಲೇ ಪ್ರಕಟವಾಗಿವೆ.. ಅದರಲ್ಲಿ ಶೂದ್ರವರ್ಗದ ವಚನಕಾರ್ತಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ ಶೂನ್ಯಸಂಪಾದನೆಗಳಲ್ಲಿ ಶೂದ್ರ ವಚನಕಾರ್ತಿಯರ ಪ್ರಸ್ತಾಪವೇ ಇಲ್ಲ.

ಶೂನ್ಯಸಂಪಾದನೆಗಳಲ್ಲಿ ಮುಕ್ತಾಯಕ್ಕ ಮತ್ತು ಮಹಾದೇವಿಯಕ್ಕ ಅವರಿಗೆ ಸಂಬಂಧಿಸಿದಂತೆ ಮಾತ್ರ ಎರಡು ಅಧ್ಯಾಯಗಿವೆ. ಉಳಿದಂಥೆ ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಮ್ಮ, ಅಕ್ಕನಾಗಮ್ಮ ಮತ್ತು ನೀಲಮ್ಮ ಅವರ ಪ್ರಸ್ತಾಪಗಳು ಸಾಂದರ್ಭಿಬಂದಿವೆ. ಇದಿಷ್ಟನ್ನು ಬಿಟ್ಟರೆ ಶೂನ್ಯಸಂಪಾದನೆಗಳಲ್ಲಿ ಶೂದ್ರ ವಚನಕಾರ್ತಿಯರಿಗೆ ಸ್ಥಾನವೇ ಇಲ್ಲ.

ಕೆಳವರ್ಗ ಕೆಳಜಾತಿಗಳಿಂದ ಬಂದ ಮಹತ್ವದ ವಚನಕಾರ್ತಿಯರನ್ನು ಶೂನ್ಯ ಸಂಪಾದನೆಗಳು ಮರೆತುಬಿಟ್ಟಿವೆ. ಮುಕ್ತಾಯಕ್ಕ ಹಾಗೂ ಮಹಾದೇವಿಯಕ್ಕಗಳ ಬಗೆಗೆ ಶೂನ್ಯಸಂಪಾದನೆಗಳಲ್ಲಿ ಸ್ಥಾನ ದೊರೆತಿದ್ದರೂ, ಅವೆರಡೂ ಪರೀಕ್ಷೆಗೊಳಪಡುವ ಪಾತ್ರಗಳಾಗಿ ಬಂದಿವೆ. ಮುಕ್ತಾಯಕ್ಕ ಮತ್ತು ಮಹಾದೇವಿಯಕ್ಕಗಳ ವಚನಗಳನ್ನು ಗಮನಿಸಿದರೆ, ಅವರೆಂತಹ ಉದಾತ್ತ ಅನುಭಾವಿಗಳಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. ಆದರೆ ಶೂನ್ಯಸಂಪಾದನೆಗಳಲ್ಲಿ ಇವರು ಮೂಲರೂಪದಲ್ಲಿ ಪ್ರಕಟವಾಗಿಲ್ಲ.

ಮುಕ್ತಾಯಕ್ಕಗಳ ಅನುಭಾವದ ನಿಲುವು ಇಂದಿಗೂ ಪ್ರಸ್ತುತವಾದುದು. ಮಹಾದೇವಿಯಕ್ಕಗಳ ಚಿಂತನೆ ಅದ್ಭುತವಾದುದು. ಆದರೆ ಶೂನ್ಯಸಂಪಾದನೆಗಳಲ್ಲಿ ಇವರಿಗೆ ಸಿಗಬೇಕಾದ ಸ್ಥಾನಸಿಕ್ಕಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ.

ಶೂನ್ಯಸಂಪಾದನೆಗಳಲ್ಲಿ ಬಂದಿರುವ ಮುಕ್ತಾಯಕ್ಕನ ಪ್ರಸಂಗ ಪ್ರಶ್ನಾರ್ಹವಾಗಿದೆ. ಅಲ್ಲಮಪ್ರಭು ಮತ್ತು ಮುಕ್ತಾಯಕ್ಕ ಇವರಿಬ್ಬರು ಕಂಡುಕೊಂಡ ಅನುಭಾವ ಸತ್ಯಗಳು ಬೇರೆ ಬೇರೆಯಾಗಿವೆ. ಇಬ್ಬರ ತರ್ಕಗಳೂ ಕೂಡ ಭಿನ್ನವಾಗಿವೆ. ಇವರಿಬ್ಬರ ಚಿಂತನೆಗಳು ಅನುಭಾವದ ಕ್ಷೇತ್ರದಲ್ಲಿ ಎರಡು ಹೊಸ ಹೆದ್ದಾರಿಗಳನ್ನೇ ನಿರ್ಮಿಸಿವೆ.. ಈ ಸತ್ಯವನ್ನು ಶೂನ್ಯಸಂಪಾದನೆಕಾರರು ಎತ್ತಿ ಹಿಡಿಯಬಹುದಾಗಿತ್ತು. ಆ ಇಬ್ಬರ ಚಿಂತನೆಗಳನ್ನು ಬೆಳೆಸದೆ ಶೂನ್ಯಸಂಪಾದನಾಕಾರರು ಮುಕ್ತಾಯಕ್ಕಗಳ ಚಿಂತನೆಯ ಮೇಲೆ, ಅಲ್ಲಮನ ವಿಚಾರವನ್ನು ಹೇರಿದ್ದಾರೆ. ಪರೀಕ್ಷೆಗೊಳಗಾದ ವಿದ್ಯಾರ್ಥಿಯಂತೆ ಮುಕ್ತಾಯಕ್ಕ ಇಲ್ಲಿ ಚಿತ್ರಿತವಾಗಿದ್ದಾಳೆ. ಆದರೆ ಆಕೆಯ ವಚನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದವರು ಶೂನ್ಯ ಸಂಪಾದನಾಕಾರರ ಈ ನಿಲುವನ್ನು ಒಪ್ಪಲಾರರು. ಭಾರತೀಯ ಸಂದರ್ಭದಲ್ಲಿಯೇ ಮಹಿಳೆಯೊಬ್ಬಳು ಉನ್ನತವಾದ ಅನುಭಾವ ಪರಂಪರೆಯನ್ನು ಹುಟ್ಟುಹಾಕಿದ್ದು ಹನ್ನೆರಡನೇ ಶತಮಾನದಲ್ಲಿ, ಅಂತಹ ಮುಕ್ತಾಯಕ್ಕನ ಅನುಭಾವ ಪರಂಪರೆಯಲ್ಲಿ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಬಹುದಾಗಿದೆ.

ನುಡಿಯ ಹಂಗಿನ್ನೂ ನಿಮಗೆ ಹಿಂಗದು
ನಡೆಯನೆಂತು ಪರರಿಗೆ ಹೇಳುವಿರಿ”?

ಎನ್ನುವ ಮುಕ್ತಾಯಕ್ಕನ ನುಡಿ ಹೊಸ ಚಿಂತನೆಯ ಆವಿಷ್ಕಾರದಂತಿದೆ.. ಅಜಗಣ್ಣನ ಸೋದರಿಯಾಗಿ ಆತನ ಅದ್ಭುತವಾದ ಆಧ್ಯಾತ್ಮ ದೆತ್ತರವನ್ನು ಕಂಡಿದ್ದ ಮುಕ್ತಾಯಕ್ಕ, ಪ್ರಭುವಿನೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ತೂಕ ತಪ್ಪದಂತೆ ಮಾತನಾಡಿದ್ದಾಳೆ.. ಇದಕ್ಕೆ ಪ್ರಭು ಕೊಡುವ ಉತ್ತರಗಳು ಮಾತ್ರ ನೇರವಾಗಿರದೆ ಸುತ್ತಿ ಬಳಸಿ ಬಂದಿದೆ.

ಸಿಡಿಲು ಹೊಯಿದ ಬಾವಿಗೆ ಸೋಪಾನವೇಕೊ?”
ತನ್ನತಾನರಿದವಂಗೆ ಅರಿವೆ ಗುರು
ನುಡಿಯೆನೆಂಬಲ್ಲಿಯೆ ನುಡಿಯಿದೆ, ನಡೆಯನೆಂಬಲ್ಲಿಯೆ ನಡೆಯಿದೆ
ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೋ?”
ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ
ನಡೆದು ನಡೆದು ನಡೆಯ ಕಂಡವರು, ನಿಡಿದು ಹೇಳುತ್ತಿಹರೆ?”
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ?”

ಹೀಗೆ ಹಲವಾರು ನುಡಿಮುತ್ತುಗಳನ್ನು, ಅನುಭಾವದ ನೆಲೆಗಳನ್ನು ಮುಕ್ತಾಯಕ್ಕನ ವಚನಗಳಿಂದ ಆರಿಸಿ ತೆಗೆಯಬಹುದಾಗಿದೆ. ಇಂತಹ ಮಹಾನುಭಾವಿ ಮುಕ್ತಾಯಕ್ಕನನ್ನು ಶೂನ್ಯಸಂಪಾದನೆಗಳು ಗುರುತಿಸಿದ್ದರೂ, ಆಕೆಯ ಅನುಭಾವಿಕ ನೆಲೆಯನ್ನು ಒಂದು ಹೊಸ ಪರಂಪರೆಯನ್ನಾಗಿ ಕಟ್ಟಿಕೊಟ್ಟಿಲ್ಲ.

ಅಕ್ಕಮಹಾದೇವಿಯ ಪ್ರಸಂಗದಲ್ಲಿಯೂ ಇದೇ ರೀತಿಯಾಗಿದೆ. “ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾ” ಎನ್ನುತ್ತ ಕಲ್ಯಾಣವನ್ನು ಪ್ರವೇಶಿಸಿದ ಅಕ್ಕಮಹಾದೇವಿಗೆ ಪ್ರಾರಂಭದಲ್ಲಿಯೇ ಪರೀಕ್ಷೆ ಕಾದಿದೆ. ಕಿನ್ನರಿ ಬೊಮ್ಮಯ್ಯಗಳಿಂದ ಪರೀಕ್ಷೆಗೊಳಗಾದ ಅಕ್ಕನನ್ನು ಪ್ರಭುವೂ ಪ್ರಶ್ನಿಸುತ್ತಾನೆ.

ಉದಮದದ ಯೌವನವನೊಳಕೊಂಡ ಸತಿ ನೀನು ಇತ್ತಲೇಕೆ
ಬಂದೆಯವ್ವಾ? ಸತಿಯೆಂದರೆ ಮುನಿವರು ನಮ್ಮ ಶರಣರು
ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು. ಅಲ್ಲದರೆ ತೊಲಗು
ತಾಯೆ…”.
(ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆ, ಪು. ೩೨೫, ವ:೧೦)

ಇದು ಪ್ರಭುದೇವರ ವಚನವೆಂದು ಶೂನ್ಯಸಂಪಾದನಾಕಾರರು ಸೇರಿಸಿಕೊಂಡಿದ್ದಾರೆ. ಆದರೆ ಪ್ರಭುದೇವರ ಮೂಲದ ವಚನಗಳಲ್ಲಿ ಈ ವಚನವಿಲ್ಲ. ಇತ್ತೀಚೆಗೆ ಪ್ರಕಟವಾಗಿರುವ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಕಟನೆಯಾದ ‘ಅಲ್ಲಮಪ್ರಭುದೇವರ ವಚನ ಸಂಪುಟ’ದಲ್ಲಿ ಹೆಚ್ಚಿನ ವಚನಗಳು’ ಭಾಗದಲ್ಲಿ ಈ ವಚನ ಸೇರಿದೆ. ಇದರ ಸಂಪಾದಕರಾದ ಡಾ.ಬಿ.ವ್ಹಿ. ಮಲ್ಲಾಪುರ ಅವರು ಈ ಹೆಚ್ಚಿನ ವಚನಗಳೆಲ್ಲಾ ಶೂನ್ಯ ಸಂಪಾದನೆಗಳಿಂದ ತೆಗೆದುಕೊಂಡವುಗಳಾಗಿವೆಯೆಂದು ತಮ್ಮ ಸಂಪಾದಕೀಯದಲ್ಲಿ ಹೇಳಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ, ಇಂತಹ ವಚನಗಳನ್ನು ಯಾರು ರಚಿಸಿದರು? ಎಂಬ ಪ್ರಶ್ನೆ ಬಹುಮುಖ್ಯವಾಗುತ್ತದೆ. ಡಾ.ಎಲ್‌. ಬಸವರಾಜು ಮತ್ತು ಇಮ್ಮಡಿ ಶಿವಬಸವಸ್ವಾಮಿಗಳು ಸಂಪಾದಿಸಿರುವ ಸಂಕಲನಗಳಲ್ಲಿ ಇಂತಹ ವಚನಗಳು ಬಂದಿಲ್ಲ. ಅಂದಮೇಲೆ ಇಂತಹ ವಚನಗಳನ್ನು ಶೂನ್ಯಸಂಪಾದನಾಕಾರರೇ ಸೃಷ್ಟಿಸಿ ಪ್ರಭುವಿನ ಹೆಸರಿನಲ್ಲಿ ಸೇರಿಸಿದ್ದಾರೆಂಬುದು ಸ್ಪಷ್ಟವಾಗುತ್ತದೆ.

“ಸತಿಯೆಂದರೆ ಮುನಿವರು ನಮ್ಮ ಶರಣರು” ಎಂದು ಉಲ್ಲೇಖವಾಗಿರುವ ಈ ಮಾತೇ ಇಡೀ ವಚನ ಚಳವಳಿಗೆ ವಿರೋಧವಾದುದಾಗಿದೆ. “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶರಣರು ಹೇಳಿದ್ದಾರೆ. “ಕೂಡಲಸಂಗಮದೇವನ ನಿಲುವು ಕನ್ಯೆಯ ಸ್ನೇಹದಂತಿದ್ದಿತ್ತು” ಎಂದು ಬಸವಣ್ಣ ಸ್ಪಷ್ಪಪಡಿಸಿದ್ದಾನೆ. ಸತ್ಯ ಸಂಗತಿ ಹೀಗಿರುವಾಗ “ಸತಿಯೆಂದರೆ ಮುನಿವರು ನಮ್ಮ ಶರಣರು” ಎಂದು ಪ್ರಭುವಿನ ಮೂಲಕ ಹೇಳಿಸಿದ ಈ ಮಾತು ಶರಣರ ಧೋರಣೆಗೆ ವಿರುದ್ಧವಾದುದಾಗಿದೆ..“ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು, ಇಲ್ಲದಿರೆ ತೊಲಗು” ಎಂಬಂತಹ ಮುಂದಿನ ಮಾತು ಕೂಡ ವಿರೋಧಾಭಾಸದಿಂದ ಕೂಡಿದೆ.

ಕಾಯ ಸತಿಯೆಂದು ಹೇಸಿ ಕಳೆದೆ
ವಾಯದ ಮನ ಮಾಯೆಯೆಂದು ಹೇಸಿ ಬಿಟ್ಟೆ
ವಾಯದ ಸತಿ ಎಂಬ ಸಂದೇಹವೆಮಗೇಕೆ?
ಸತಿಯರ ಗೋಷ್ಠಿವಿಷ ಕಾಣವ್ವ……”
(ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆ, ಪು. ೩೨೫, ವ:೧೧)

ಎಂದು ಪ್ರಭು ಹೇಳುವ ಈ ವಚನವೂ ಕೂಡ ಮೂಲದಲ್ಲಿರದೆ ಹೆಚ್ಚಿನ ವಚನಗಳು ಭಾಗದಲ್ಲಿ ಕಾಣಿಸಿಕೊಂಡಿದೆ. ಈ ವಚನವನ್ನು ಕೂಡಾ ಶೂನ್ಯ ಸಂಪಾದನಾಕಾರರೇ ಪ್ರಭುವಿನ ಹೆಸರಿನಲ್ಲಿ ಬರೆದು ಸೇರಿಸಿದ್ದಾರೆ. “ಸತಿಯರಗೋಷ್ಠಿ ವಿಷ ಕಾಣವ್ವ” ಎಂದು ಪ್ರಭುವಿನಂತಹ ಅನುಭಾವಿ ಹೇಳಲು ಸಾಧ್ಯವೇ ಇಲ್ಲ. ಆದರೆ ಶೂನ್ಯಸಂಪಾದನಾಕಾರರು ತಮ್ಮ ಕೃತಿಗಳಲ್ಲಿ ಇಂಥವುಗಳನ್ನು ಸಾಧ್ಯಮಾಡಿ ತೋರಿಸಿದ್ದಾರೆ.

ಕಲ್ಯಾಣದಲ್ಲಿ ಅಲ್ಲಮನ ಸಮ್ಮುಖದಲ್ಲಿ ಪರೀಕ್ಷೆಗೊಳಗಾದ ಅಕ್ಕಮಹಾದೇವಿಯ ವಿಚಾರಧಾರೆ ಒಂದು ಹೊಸ ಪಂಥವಾಗಿ ಬೆಳೆಯುವಷ್ಟು ಶಕ್ತಿಶಾಲಿಯಾಗಿದೆ. ಶೂನ್ಯಸಂಪಾದನಾಕಾರರೂ ಈ ಸಂಗತಿಯನ್ನು ಕೊನೆಯ ಭಾಗದಲ್ಲಿ ಎತ್ತಿ ತೋರಿಸಿರುವರಾದರೂ, ಪ್ರಾರಂಭದಲ್ಲಿ ಪ್ರಭುವಿನ ಹೆಸರಿನಲ್ಲಿ ಹೆಚ್ಚಿನ ವಚನಗಳನ್ನು ಹೆಣೆದು ಸೇರಿಸಿರುವುದು ಔಚಿತ್ಯವಾಗಲಾರದು.

ಕಾಯ ಕರ್ರ‍‌ನೆ ಕಂದಿದಡೇನಯ್ಯಾ ಕಾಯ ಮಿರ್ರ‍‌ನೆ ಮಿಂಚಿದಡೇನಯ್ಯ-”
ಫಲ ಒಳಗೆ ಪಕ್ವವಾಗಿಯಲ್ಲದೆ ಹೊರಗಣಸಿಪ್ಪೆ ಒಪ್ಪಗೆಡದು
ಹಾವಿನ ಹಲ್ಲಕಳೆದು ಹಾವನಾಡಿಸಬಲ್ಲರೆ ಹಾವಿನ ಸಂಗವೇ ಲೇಸು
ಕಾಯದೊಳಗೆ ಅಕಾಯವಾಗಿತ್ತು, ಜೀವದೊಳಗೆ ನಿರ್ಜೀವವಾಗಿತ್ತು
ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೇ ಅಯ್ಯಾ?”
ಸತ್ತ ಹೆಣ ಕೂಗಿದುದುಂಟು ಬೈಚಿಟಟ ಬಯಕೆ ಕರೆದುದುಂಟು
ಚಂದನವ ಕಡಿದು ಕೊರೆದು ತೆಯ್ದಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?”
ಅಂಗಸಂಗಿಯಲ್ಲಿ ಲಿಂಗಸಂಗಿಯಾದೆ, ಲಿಂಗಸಂಗಿಯಲ್ಲಿ ಅಂಗಸಂಗಿಯಾದೆ

ಇಂತಹ ಅನೇಕ ಮಹತ್ವದ ನುಡಿಮುತ್ತುಗಳನ್ನು ತನ್ನ ವಚನಗಳಲ್ಲಿ ಪೋಣಿಸಿರುವ ಅಕ್ಕನ ಅನುಭಾವಿಕ ನೆಲೆಗಳನ್ನು ಪ್ರತ್ಯೇಕವಾಗಿಯೇ ಅಭ್ಯಸಿಸಬೇಕಾಗಿದೆ. ಅಕ್ಕನ ಈ ನುಡಿಗಳು ಕೇವಲ ತರ್ಕವಾಗಿ ಬಾರದ, ಅನುಭಾವಿಕ ಸತ್ಯಗಳಾಗಿ ಹೊರಹೊವಿದೆ.

ಮುಕ್ತಾಯಕ್ಕ ಹಾಗೂ ಮಹಾದೇವಿಯಕ್ಕಗಳ ಎರಡು ಪ್ರತ್ಯೇಕ ಪ್ರಸಂಗಗಳು ಶೂನ್ಯ ಸಂಪಾದನೆಗಳಲ್ಲಿ ಉಲ್ಲೇಖಗೊಂಡಿದ್ದರೂ, ಇವರಿಗೆ ಶೂನ್ಯಸಂಪಾದನಾಕಾರರೂ ನ್ಯಾಯವನ್ನೊದಗಿಸಿಲ್ಲವೆಂದೇ ಹೇಳಬೇಕಾಗುತ್ತದೆ. ಆಧ್ಯಾತ್ಮ ಕ್ಷೇತ್ರದಲ್ಲಿ ಎರಡು ಹೊಸ ಮಾರ್ಗಗಳನ್ನು ಹುಟ್ಟುಹಾಕಿದ ಈ ಇಬ್ಬರು ಶರಣೆಯರ ಬಗೆಗೆ ಎರಡು ಪ್ರತ್ಯೇಕ ಶೂನ್ಯಸಂಪಾದನೆಗಳೇ ಹುಟ್ಟಬೇಕಾದ ಅಗತ್ಯವಿದೆ.

ಮಹಾದೇವಿಯಕ್ಕ ಮುಕ್ತಾಯಕ್ಕಗಳಷ್ಟೇ ಪ್ರಮುಖರಾಗಿರುವ ಇನ್ನೂ ಕೆಲವು ವಚನಕಾರ್ತಿಯರು, ವಚನ ಚಳವಳಿಯ ಮೂಲಕ ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಅಕ್ಕಮ್ಮ, ಅಮುಗೆರಾಯಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಳವ್ವೆ, ಮೋಳಿಗೆ ಮಹಾದೇವಮ್ಮ, ಸತ್ಯಕ್ಕ, ಲಿಂಗಮ್ಮನಂತಹ ವಚನಕಾರ್ತಿಯರು ಮಹತ್ವದ ವಚನಗಳನ್ನು ರಚಿಸಿದ್ದಾರೆ. ಶರಣ ತತ್ವಕ್ಕೆ ಬದ್ಧರಾಗಿ ಬದುಕಿದ್ದಾರೆ. ವಚನ ಚಳವಳಿಯ ಮೌಲ್ಯಗಳನ್ನು ಎತ್ತಿಹಿಡಿದ ಈ ವಚನಕಾರ್ತಿಯರನ್ನು ಶೂನ್ಯಸಂಪಾದನಾಕಾರರು ಮರೆತುಬಿಟ್ಟಿದ್ದಾರೆ.

ಶೂನ್ಯಸಂಪಾದನಾಕಾರರು ಮರೆತರೂ, ಓದುಗರು ಈ ವಚನಕಾರ್ತಿಯರನ್ನು ಮರೆಯಲಾರರು. “ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರ ಕೂಡುವಾಗ ಗೆಲ್ಲ ಸೋಲದ ಕಾಳಗವೆ?” ಎಂದು ಕೇಳುವ ಅಕ್ಕಮ್ಮ. “ಅರೆಯ ಮೇಲೆ ಮಳೆ ಹೊಯಿದಂತೆ, ಅರಿವುಳ್ಳವರಲ್ಲಿ ಅಗಮ್ಯವುಂಟೆ” ಎಂದು ಪ್ರಶ್ನಿಸುವ ಅಮುಗೆ ರಾಯಮ್ಮ, “ತೊಬರದ ಕೊಳ್ಳಿಯಂತೆ ಉರಿವಾತ ಭಕ್ತನೆ? ಹುಸಿದು ತಂದು ಮಾಡುವಾತ ಭಕ್ತನೆ?” ಎಂದು ಆರ್ಭಟಿಸುವ ಕಾಳವ್ವೆ, “ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?” ಎನ್ನುವ ಲಕ್ಕಮ್ಮ, “ತಲೆಯ ಮೇಲೆ ತಲೆಯುಂಟೆ? ಹಣೆಯಲ್ಲಿ ಕಣ್ಣುಂಟೆ?ಗಳದಲ್ಲಿ ವಿಷವುಂಟೆ? ದೇವರೆಂಬರಿಗೆಂಟೊಡಲುಂಟೆ?” ಎಂದು ದೇವರನ್ನೇ ಪ್ರಶ್ನಿಸುವ ಸತ್ಯಕ್ಕನಂತಹ ಅನೇಕ ವಚನಕಾರ್ತಿಯರು ವಚನಚಳವಳಿಯ ಕೇಂದ್ರವಾಗಿದ್ದಾರೆ. ಇವರಲ್ಲಿ ಕಾಣುವ ಅನುಭಾವ, ಪ್ರಾಮಾಣಿಕತೆ, ನಿಷ್ಠೆ, ನೇರನುಡಿ, ನಿಷ್ಟುರತೆಯಂತಹ ಗುಣಗಳು ಬಹುಮುಖ್ಯವಾಗಿವೆ. ಇಂತಹ ವಚನಕಾರ್ತಿಯರ ಪ್ರಸ್ತಾಪ ಶೂನ್ಯ ಸಂಪಾದನೆಗಳಲ್ಲಿಲ್ಲ. ಇಂತಹ ಅನೇಕ ಮಿತಿಗಳನ್ನು ಶೂನ್ಯಸಂಪಾದನೆಗಳಲ್ಲಿ ಗುರುತಿಸುವುದರಿಂದ, ವಚನ ಚಳವಳಿಯ ಸಾಧ್ಯತೆಯನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.