. ಸಮಾರೋಪ

ಚಾಮರಸನ ಪ್ರಭುಲಿಂಗಲೀಲೆ ಕಾವ್ಯಕ್ಕೂ ಶೂನ್ಯಸಂಪಾದನೆಗಳಿಗೂ ನೇರವಾದ ಸಂಬಂಧವಿದೆ. ಚಾಮರಸ ಕೂಡಾ ನೂರೊಂದು ವಿರಕ್ತರ ಪರಂಪರೆಗೆ ಸೇರಿದ್ದನೆಂಬ ವಿಷಯ ಈಗಾಗಲೇ ಸ್ಪಷ್ಟವಾಗಿದೆ.. ಹದಿನೈದು ಹದಿನಾರನೇ ಶತಮಾನದಲ್ಲಿ ರಚನೆಗೊಂದ ಈ ವಿಶಿಷ್ಟ ಕೃತಿಗಳಿಗೂ, ಇದೇ ಅವಧಿಯಲ್ಲಿ ಹುಟ್ಟಿಕೊಂಡ ಮಲೆಮಾದೇಶ್ವರ ಮತ್ತು ಮಂಟೇಸ್ವಾಮಿಯಂತಹ ಜನಪದ ಮಹಾಕಾವ್ಯಗಳಿಗೂ, ವಸ್ತುವಿನ್ಯಾಸ ಆಶಯಗಳ ದೃಷ್ಟಿಯಿಂದ ತುಂಬಾ ವ್ಯತ್ಯಾಸವಿದೆ.

ಪ್ರಭುಲಿಂಗಲೀಲೆ ಶೂನ್ಯಸಂಪಾದನೆಯಂತಹ ಕೃತಿಗಳು ಧರ್ಮಕೇಂದ್ರಿತ ನೆಲೆಯಲ್ಲಿ ಸಾಗಿದರೆ, ಮಲೆಮಾದೇಶ್ವರ, ಮಂಟೇಸ್ವಾಮಿ ಕೃತಿಗಳು ಸಮಾಜಕೇಂದ್ರಿತ ನೆಲೆಯಲ್ಲಿ ಬಿಚ್ಚಿಕೊಳ್ಳುತ್ತವೆ. ಮಾದೇಶ್ವರ ಕಾವ್ಯದಲ್ಲಿ ಪ್ರಾಣದಾನ ಪವಾಡ, ಹರಳಯ್ಯನ ಪ್ರಸಂಗ ಬರುತ್ತವೆ. ಆದರೆ ಶೂನ್ಯ ಸಂಪಾದನೆಯಂತಹ ಕೃತಿಗಳಲ್ಲಿ ಬಹುಮುಖ್ಯವಾದ ಹರಳಯ್ಯನ ಪ್ರಸಂಗವೇ ಬರುವುದಿಲ್ಲ. ಮಾದೇಶ್ವರ ಮತ್ತು ಮಂಟೇಸ್ವಾಮಿ, ಜನಪದರ ಸಾಂಸ್ಕೃತಿಕ ವೀರರಾಗಿ ಕಾಣಿಸಿಕೊಂಡು, ದುಡಿವ ವರ್ಗದ ಕೆಳಜಾತಿಯಿಂದ ಬಂದ ನೀಲಗಾರರ ಗುಡ್ಡರ ದಲಿತರ ಮಹಾನಾಯಕರಾಗಿ ನಿಲ್ಲುತ್ತಾರೆ. ಮಾದೇಶ್ವರ‍ ಮಂಟೇಸ್ವಾಮಿ ಮಹಾಕಾವ್ಯಗಳಲ್ಲಿ ಸಮಸ್ತ ದಲಿತ ಬದುಕು ಅನಾವರಣಗೊಂಡರೆ, ಅದೇ ಸಂದರ್ಭದಲ್ಲಿ ಹುಟ್ಟಿದ ಪ್ರಭುಲಿಂಗಲೀಲೆಯಂತಹ ಕಾವ್ಯಕೃತಿಯಲ್ಲಿ ಪ್ರಭುವಿನ ವೈಭವೀಕರಣವಿದೆ. ಇದೇ ಆಶಯವನ್ನು ಹೊಂದಿದ್ದ ಶೂನ್ಯ ಸಂಪಾದನೆಗಳು ಖೊಟ್ಟಿವಚನಗಳ ಸೇರ್ಪಡೆಯ ಮೂಲಕ ಮತ್ತಷ್ಟು ವೈಭವೀಕರಣಗೊಳಿಸಿವೆ. ಹನ್ನೆರಡನೇ ಶತಮಾನದ ಕಲ್ಯಾಣಶರಣರ ಪ್ರಭಾವ ಮಾದೇಶ್ವರ ಮಂಟೇಸ್ವಾಮಿ ಕಾವ್ಯಗಳಲ್ಲಿ ಬಹುಮುಖಿ ನೆಲೆಯಲ್ಲಿ ಕಾಣಿಸಿದರೆ, ಪ್ರಭುಲಿಂಗಲೀಲೆ ಶೂನ್ಯಸಂಪಾದನೆ ಕೃತಿಗಳಲ್ಲಿ ಅದು ಏಕಮುಖಿ ನೆಲೆಯಲ್ಲಿ ಸ್ಥಗಿತಗೊಳ್ಳುತ್ತದೆ.

ಮಾದೇಶ್ವರ ಮಂಟೇಸ್ವಾಮಿ ಕಾವ್ಯದಲ್ಲಿ ಬಸವಣ್ಣನೊಂದಿಗೆ ಸಂಬಂಧ ಕಲ್ಪಿಸುವ ಕಥಾ ಭಾಗಗಳು ಸಿಗುತ್ತವಾದರೂ ಹನ್ನೆರಡನೇ ಶತಮಾನದ ಬಸವಣ್ಣನಿಗೂ ಈ ಕಥಾ ಭಾಗಗಳಿಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಪ್ರಸ್ತಾಪಗೊಂಡಿರುವ ಬಸವಣ್ಣ ಹದಿನೈದನೇ ಶತಮಾನದ ಕೊಡೇಕಲ್ಲ ಬಸವಣ್ಣನಾಗಿದ್ದಾನೆ. “ರಾಚಪ್ಪಾಜಿ ಸಾಲು” ಮಂಟೇಸ್ವಾಮಿ ಕಾವ್ಯದಲ್ಲಿ ಬರುವುದರಿಂದ ಇಲ್ಲಿ ಉಲ್ಲೇಋವಾಗಿರುವ ಬಸವಣ್ಣ ಕೊಡೇಕಲ್ಲ ಬಸವಣ್ಣನೇ ಆಗಿದ್ದಾನೆಂಬುದು ಸ್ಪಷ್ಟವಾಗುತ್ತದೆ. ಸಿದ್ದಪ್ಪಾಜಿ ರಾಚಪ್ಪಾಜಿ ಮುಂತಾದವರು ಮಂಟೇಸ್ವಾಮಿಯ ಶಿಷ್ಯರಾಗಿ, ಅಂತಹ ಪರಂಪರೆಯೊಂದನ್ನು ಮುಂದವರಿಸುತ್ತಾರೆ.

ಮಂಟೇಸ್ವಾಮಿ ಕಾವ್ಯವು ಕಲ್ಯಾಣದಿಂದಲೇ ಆರಂಭವಾಗುತ್ತದೆ. ಮಂಟೇಸ್ವಾಮಿಯನ್ನು ಧರೆಗೆ ದೊಡ್ಡವರು, ಪ್ರಭುದೇವರು ಎಂದು ಕರೆಯಲಾಗಿದೆ. ಹೀಗೆಂದಾಕ್ಷಣ ಮಂಟೇಸ್ವಾಮಿಯೇ ಪ್ರಭುದೇವರಾಗುವುದಿಲ್ಲ. ಜನಪದರು ಮಂಟೇಸ್ವಾಮಿಯನ್ನು ಪ್ರಭುದೇವರ ಅವತಾರವೆಂದು ಭಾವಿಸಿದ್ದಾರೆ. ಅಂತೆಯೇ ಅನೇಕ ಸಂದರ್ಭಗಳಲ್ಲಿ ಮಂಟೇಸ್ವಾಮಿಯನ್ನು ಪ್ರಭುದೇವರಿಗೆ ಸಮೀಕರಿಸಿ ವರ್ಣಿಸಲಾಗಿದೆ.

ಶ್ರೇಣೀಕೃತ ಸಮಾಜ ವ್ಯವಸ್ಥೆಯ ಕೆಳವರ್ಗಕ್ಕೆ ಸೇರದ ಮಂಟೇಸ್ವಾಮಿ ಮಾದೇಶ್ವರ ಪರಂಪರೆಗಳು, ದೇವರಗುಡ್ಡರ ಸಾಂಪ್ರದಾಯಿಕ ಆಚರಣೆಗಳ ಮೂಲಕ ಇಂದಿಗೂ ಜೀವಂತವಾಗಿವೆ. ಪ್ರಧಾನ ಸಂಸ್ಕೃತಿಗೆ ಪರ್ಯಾಯವಾದ ಪ್ರತಿಸಂಸ್ಕೃತಿ ನಿರ್ಮಾಣ ಈ ಜನಪದ ಮಹಾಕಾವ್ಯಗಳಲ್ಲಿ ಕಾಣಿಸಿದರೆ, ಧರ್ಮದ ಕೇಂದ್ರೀಕೃತ ನೆಲೆ ಪ್ರಭುಲಿಂಗಲೀಲೆ ಹಾಗೂ ಶೂನ್ಯಸಂಪಾದನೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಎರಡೂ ನೆಲೆಗಳನ್ನು ಕುರಿತಂತೆ ತೌಲನಿಕವಾದ ಅಧ್ಯಯನದ ಅಗತ್ಯವಿದೆ.

ಹನ್ನೆರಡನೇ ಶತಮಾನದ ವಚನ ಚಳವಳಿಯ ಪ್ರಭಾವ ಹದಿನೈದನೆಯ ಶತಮಾಣದ ಸಂದರ್ಭದಲ್ಲಿ ಎರಡು ರೀತಿಯ ನೆಲೆಗಳಲ್ಲಿ ಕಾಣಿಸಿಕೊಂಡಿದೆ. ಒಂದು ಶಿಷ್ಟಕಾವ್ಯ ಪರಂಪರೆಯಲ್ಲಿ, ಮತ್ತೊಂದು ಜನಪದಕಾವ್ಯ ಪರಂಪರೆಯಲ್ಲಿ ಶೂನ್ಯಸಂಪಾದನೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಎರಡೂ ನೆಲೆಗಳನ್ನು ಕುರಿತಂತೆ ತೌಲನಿಕವಾದ ಅಧ್ಯಯನದ ಅಗತ್ಯವಿದೆ.

ಹನ್ನೆರಡನೇ ಶತಮಾನದ ವಚನ ಚಳವಳಿಯ ಪ್ರಭಾವ ಹದಿನೈದನೆಯ ಶತಮಾನದ ಸಂದರ್ಭದಲ್ಲಿ ಎರಡು ರೀತಿಯ ನೆಲೆಗಳಲ್ಲಿ ಕಾಣಿಸಿಕೊಂಡಿದೆ.. ಒಂದು ಶಿಷ್ಟಕಾವ್ಯ ಪರಂಪರೆಯಲ್ಲಿ, ಮತ್ತೊಂದು ಜನಪದಕಾವ್ಯ ಪರಂಪರೆಯಲ್ಲಿ ಶೂನ್ಯಸಂಪಾದನೆಗಳು ಹಾಗೂ ಚಾಮರಸ ಪ್ರಭುಲಿಂಗಲೀಲೆಯ ಜತೆಗೆ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ, ಪಾಲ್ಕುರಿಕೆ ಸೋಮನಾಥನ ಬಸವಪುರಾಣ, ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ, ಕಲ್ಲುಮಠದ ಪ್ರಭುದೇವರ ಲಿಂಗಲೀಲಾ ವಿಲಾಸ ಚಾರಿತ್ಯ್ರ, ಸಿಂಗಿರಾಜನ ಅಮಲ ಬಸವಚಾರಿತ್ಯ್ರದಂತಹ ಶಿಷ್ಟ ಕೃತಿಗಳ ಜತೆಗೆ, ಮಲೆಮಾದೇಶ್ವರ ಹಾಗೂ ಮಂಟೇಸ್ವಾಮಿಯಂತಹ ಜನಪದ ಕೃತಿಗಳನ್ನಿಟ್ಟು ತೌಲನಿಕ ಅಧ್ಯಯನ ನಡೆಸಿದರೆ, ಅನೇಕ ಕುತೂಹಲಕಾರಿ ಸಂಗತಿಗಳು ಹೊರಬರುತ್ತವೆ.

ಈ ಮೇಲಿನ ಶಿಷ್ಟಕೃತಿಗಳು ಧಾರ್ಮಿಕ ಪಠ್ಯವಾಗಿ ಮಾತ್ರ ಉಳಿದರೆ, ಜನಪದ ಕಾವ್ಯ ಕೃತಿಗಳು ಸಾಂಸ್ಕೃತಿಕ ದಾಖಲೆಗಳಾಗಿ ಮುಂದುವರೆದಿವೆ. ಈ ಎರಡು ನೆಲೆಯ ಕೃತಿಗಳಲ್ಲಿ ಪವಾಡಗಳು ಕಾಣಿಸಿಕೊಂಡರೂ, ಜನಪದ ಕಾವ್ಯಗಳಲ್ಲಿ ಧರ್ಮದ ವಿಕೇಂದ್ರೀಕರಣವನ್ನು ಕಾಣಬಹುದಾಗಿದೆ. ಹದಿನೈದನೇ ಶತಮಾನದಲ್ಲಿ ಬಂದ ನೂರೊಂದು ವಿರಕ್ತರ ಪರಂಪರೆ ಮಠವ್ಯವಸ್ಥೆಯನ್ನು ಗಟ್ಟಿಗೊಳಿಸಿದರೆ, ಮಲೆಮಾದೇಶ್ವರ ಮಂಟೇಸ್ವಾಮಿಯಂತಹ ಕೃತಿಗಳು ಕಲ್ಯಾಣ ಶರಣರ ಮಹಿಮೆಯನ್ನು ಜನಸಮುದಾಯದತ್ತ ಕೊಂಡೊಯ್ದಿವೆ. ಮಾದೇಶ್ವರನ ಒಕ್ಕಲು ಮಂಟೇಸ್ವಾಮಿಯ ಒಕ್ಕಲು ಎಂದು ಹೇಳಿಕೊಳ್ಳುವ ಕಂಸಾಳೆ ಕಲಾವಿದರಾದ ಮಾದೇಶ್ವರ ಗುಡ್ಡರು, ತಂಬೂರಿ ಕಲಾವಿದರಾದ ನೀಲಗಾರರು ಇಂದು ತಮ್ಮ ಹಾಡುಗಳ ಮೂಲಕ ಶರಣರ ಭಕ್ತಿಪರಂಪರೆಯನ್ನು ಜನಸಮುದಾಯದ ಮೂಲಕ ಹುಟ್ಟುಹಾಕಿದರೆ, ಮಠವ್ಯವಸ್ಥೆಯನ್ನು ಬಲಪಡಿಸುವ ಜಗದ್ಗುರು ಪರಂಪರೆಗೆ ಸೇರಿದ ಸ್ವಾಮಿಗಳು ಇಂದು ಶರಣರ ಹೆಸರಿನಲ್ಲಿ ಆಸ್ತಿ ಮಾಡುವುದಕ್ಕೆ ಹೊರಟಿದ್ದಾರೆ. ಶರಣರ ವಿಚಾರಗಳು ಜನಪದ ಕಲಾವಿದರ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಪ್ರಸಾರಗೊಂಡರೆ, ಮಠವ್ಯವಸ್ಥೆಯಲ್ಲಿ ಸ್ಥಗಿತಗೊಂಡು ಬಿಟ್ಟಿವೆ.

ಶೂನ್ಯಸಂಪಾದನೆಗಳು ಇಂದಿನ ಸಮಾಜ ವ್ಯವಸ್ಥೆಗೆ ಹೇಗೆ ಪ್ರಸ್ತುತವಾಗಬಲ್ಲವು? ಎಂಬಂತಹ ಮಹತ್ವದ ಪ್ರಶ್ನೆಯನ್ನೆತ್ತಿಕೊಂಡು ಚರ್ಚಿಸಿದರೆ, ಅನೇಕ ಸವಾಲುಗಳು ಹುಟ್ಟಿಕೊಳ್ಳುತ್ತವೆ.. ವಚನ ಚಳವಳಿಯ ಬಹುಮುಖ್ಯ ವಿಷಯವಾದ ಅಂತರ್ಜಾತಿ ವಿವಾಹ ಹಾಗೂ ಅಸ್ಪೃಶ್ಯತೆ ನಿವಾರಣೆಯಂತಹ ಪ್ರಸಂಗಗಳನ್ನೇ ಒಳಗೊಳ್ಳದ ಶೂನ್ಯಸಂಪಾದನೆಗಳು ಇಂದು ಹೇಗೆ ಪ್ರಸ್ತುತವಾಗುತ್ತವೆ? ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಶರಣರ ಸಾಮಾಜಿಕ ಪ್ರಜ್ಞೆ, ಆರ್ಥಿಕ ಚಿಂತನೆ, ಮಹಿಳಾ ವಿಮೋಚನೆಯಂತಹ ಮುಖ್ಯ ವಿಷಯಗಳನ್ನೇ ಶೂನ್ಯ ಸಂಪಾದನೆಗಳು ದೂರ ಸರಿಸಿವೆ. ಹೀಗಾಗಿ ವಚನ ಚಳವಳಿಗೂ ಶೂನ್ಯಸಂಪಾದನೆಗಳಿಗೂ ಸಂಬಂಧವೇ ಇಲ್ಲವೇನೊ ಎನ್ನುವಷ್ಟರ ಮಟ್ಟಿಗೆ ವ್ಯತ್ಯಾಸವಿದೆ.

ಶರಣರ ಆರ್ಥಿಕ ನೀತಿ ಅಂದಿನ ಸಮಾಜ ವ್ಯವಸ್ಥೆಯಲ್ಲಿ ಎಂತಹ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತೆಂದರೆ, ಸ್ವತಹ ಬಿಜ್ಜಳನೇ ಅದನ್ನು ಕಂಡು ಬೆರಗಾದ. ಬಿಜ್ಜಳ ಅರಸನಾದ ಮೇಲೆ ರಾಜ್ಯದ ಆರ್ಥಿಕ ಸ್ಥಿತಿ ಸರಿಯಾಗಿರಲಿಲ್ಲವೆಂಬುದಕ್ಕೆ ಶಾಸನಾಧಾರಗಳೇ ಇವೆ. ಬಸವಣ್ಣ ಮಂತ್ರಿಯಾದ ಮೇಲೆ, ವಚನ ಚಳವಳಿ ತೀವ್ರತೆಯನ್ನು ಪಡೆದ ನಂತರ ಬಿಜ್ಜಳನ ಬೊಕ್ಕಸ ತುಂಬುತ್ತಾ ಸಾಗಿತು. ವಚನ ಚಳವಳಿಯ ಪ್ರಭಾವದಿಂದ ಪ್ರತಿಯೊಂದು ವೃತ್ತಿಗಳೂ ಕಾಯಕಗಳಾದವು. ಸಹಭೋಜನ ಸಹಪಂಕ್ತಿಗಳು ದಾಸೋಹಗಳಾದವು..ಭಾಗವಹಿಸಿದ ಪ್ರತಿಯೊಬ್ಬನೂ ಶರಣನಾಗಿ ಬೆಳೆದ. ಆಗ ಹಣ ಸಂಗ್ರಹಣೆ, ಆಸ್ತಿ ಮಾಡುವಿಕೆ, ಕೂಡಿಡುವ ಸ್ವಾರ್ಥ ಕಾಣದಾದವು. ಆಸ್ತಿ ಸಂಗ್ರಹಣೆ ಮಾಡದೆ ಪ್ರತಿಯೊಬ್ಬರೂ ನಿಷ್ಠೆಯಿಂದ ದುಡಿದಾಗ ಸಹಜವಾಗಿಯೇ ರಾಜ್ಯದ ಬೊಕ್ಕಸ ತುಂಬಿ ತುಳುಕುತ್ತದೆ.

ವಚನ ಚಳವಳಿಯ ಸಂದರ್ಭದಲ್ಲೂ ಇದೇ ನಡೆಯಿತು. ಇದನ್ನೇ ಮುಂದಿನ ಪುರಾಣ ಕವಿಗಳು ಪವಾಡಗಳನ್ನಾಗಿ ನಿರ್ಮಿಸಿದರು. “ತಾಮ್ರಪತ್ರದಲ್ಲಿರುವ ವಿಷಯವನ್ನು ಯಾರಿಗೂ ಓದಲು ಬರುತ್ತಿರಲಿಲ್ಲ. ಬಸವಣ್ಣ ಅದನ್ನು ಓದಿ ಹೇಳಿ, ಸಿಂಹಾಸನದ ಕೆಳಗೆ ಇದ್ದ ನಿಧಿಯನ್ನು ಪತ್ತೆ ಹಚ್ಚಿ ಬಿಜ್ಜಳನ ಭಂಡಾರವನ್ನು ಹೆಚ್ಚಿಸಿದ” ಎಂಬಂತಹ ಈ ಪವಾಡವನ್ನು ಇಂದು ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಬೇಕಾಗಿದೆ. ಬಸವಣ್ಣ ಪವಾಡ ಮಾಡಿ ಭಂಡಾರವನ್ನು ಹೆಚ್ಚಿಸಲಿಲ್ಲ. ಕಾಯಕನಿಷ್ಠೆಯನ್ನು ಬೆಳೆಸಿದ, ಆಸ್ತಿ ಸಂಗ್ರಹವನ್ನು ನಿಲ್ಲಿಸಿದ, ದಾಸೋಹದ ಮೂಲಕ ಸಮುದಾಯ ಸಂಬಂಧವನ್ನು ಗಾಢವಾಗಿಸಿದ. ಆಗ ಸಹಜವಾಗಿಯೇ ಸಹಸ್ರಾರು ಶರಣರು ನಿಷ್ಠೆಯಿಂದ ದುಡಿದ ಹಣ, ರಾಜ್ಯದ ಸಂಪತ್ತನ್ನು ಹೆಚ್ಚಿಸಲು ಕಾರಣವಾಯಿತು. ಈ ಕಾರಣಕ್ಕಾಗಿಯೇ ಬಿಜ್ಜಳ, ಬಸವಣ್ಣನ ಹೋರಾಟಕ್ಕೆ ಅಡ್ಡಿಪಡಿಸಲಿಲ್ಲ. ಇದನ್ನೆಲ್ಲಾ ಗಮನಿಸಿದರೆ ಶರಣರು ಕೇವಲ ಭಕ್ತಿಪಂಥಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಧಾರ್ಮಿಕ ಕ್ಷೇತ್ರವೊಂದೇ ಅವರಿಗೆ ಸಂಬಂಧಿಸಿದ್ದಾಗುವುದಿಲ್ಲ.. ಧರ್ಮದ ಮೂಲಕವೇ ಅವರು ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದರು, ಧರ್ಮದ ಮೂಲಕವೇ ಅವರು ಜಾತಿವ್ಯವಸ್ಥೆಯನ್ನು ಕಿತ್ತೊಗೆದರು. ಚಳವಳಿಯೇ ಅವರ ನಿಜವಾದ ಧರ್ಮವಾಗಿತ್ತು..ಧರ್ಮವೇ ಚಳವಳಿಯಾಗಿತ್ತು.

ವಚನ ಚಳವಳಿಯ ಈ ಸತ್ಯಗಳನ್ನು ಶೂನ್ಯಸಂಪಾದನೆಗಳಲ್ಲಿ ಕಾಣಲಾಗುವುದಿಲ್ಲ. ಅದು ಶೂನ್ಯಸಂಪಾದನಾಕಾರರುದ್ದೇಶವೂ ಅಲ್ಲ. ಕೇವಲ ಧಾರ್ಮಿಕ ಪಠ್ಯವಾಗಿ ಉಳಿಯುವ ಶೂನ್ಯಸಂಪಾದನೆಗೆ ಅನೇಕ ಮಿತಿಗಳಿವೆಯೆಂಬುದನ್ನು ಗಮನಿಸಬೇಕು. ಶರಣರು ಹೇಳಿದ್ದೆಲ್ಲವೂ ಶೂನ್ಯಸಂಪಾದನೆಗಳಲ್ಲಿಲ್ಲ, ಶೂನ್ಯಸಂಪಾದನೆಗಳಲ್ಲಿದ್ದುದನ್ನೆಲ್ಲ ಶರಣರು ಹೇಳಿಲ್ಲ ಎಂಬ ಸತ್ಯವನ್ನು ತಿಳಿದುಕೊಂಡುಬಿಟ್ಟರೆ ಶೂನ್ಯಸಂಪಾದನೆಗಳನ್ನು ಕುರಿತು ಚರ್ಚಿಸಬೇಕಾದ ಪ್ರಮೇಯವೇ ಬರುವುದಿಲ್ಲ.

ಇಷ್ಟೆಲ್ಲಾ ಮಿತಿಗಳ ನಡುವೆಯೂ ಶೂನ್ಯಸಂಪಾದನೆಯ ಸಂಕಲನದ ಕೃತಿಗಳಿಗೆ ಕನ್ನಡದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. ಪ್ರಸ್ತುತ ಸವಾಲುಗಳಿಗೆ ಶೂನ್ಯಸಂಪಾದನೆಗಳಲ್ಲಿ ಉತ್ತರಗಳಿಲ್ಲದಿದ್ದರೂ, ಇವುಗಳ ರಚನೆಗೊಂಡ ಸಂದರ್ಭದಲ್ಲಿ ಇಂತಹ ಕೃತಿಗಳ ಅನಿವಾರ್ಯತೆ ಎದ್ದು ಕಾಣಿಸುತ್ತದೆ.

ಹದಿನೈದನೆಯ ಶತಮಾನ ಕರ್ನಾಟಕದಲ್ಲಿ ಪರಕೀಯರ ದಾಳಿಗಳನ್ನು ಕಂಡ ಕಾಲವಾಗಿತ್ತು. ಧರ್ಮವನ್ನು ಉಳಿಸಿಕೊಳ್ಳಬೇಕಾದ ಸಂದರ್ಭವಾಗಿತ್ತು. ಆ ಸಂದರ್ಭದಲ್ಲಿ ನೂರೊಂದು ವಿರಕ್ತರಿಗೆ ಇದು ಮುಖ್ಯ ಸವಾಲಾಗಿತ್ತು. ಹೀಗಾಗಿ ಅಂದಿನ ಸಮಕಾಲಿನ ಸವಾಲುಗಳನ್ನೆ ದುರಿಸಲು ಪ್ರಭುಲಿಂಗಲೀಲೆಯಂತಹ ಕಾವ್ಯಕೃತಿಗಳು, ಶೂನ್ಯಸಂಪಾದನೆಗಳಂತಹ ಸಂಕಲನಗಳು ರಚನೆಗೊಂಡವು. ಇಷ್ಟಲಿಂಗ ಪ್ರತಿಪಾದನೆಯೇ ಶೂನ್ಯಸಂಪಾದನೆಗಳ ಕೇಂದ್ರಬಿಂದುವಾಗಿರುವುದು ಕೂಡಾ ಇದೇ ಕಾರಣಕ್ಕಾಗಿಯೆಂಬ ಸತ್ಯವನ್ನು ಗಮನಿಸಬೇಕು.

ಹನ್ನೆರಡನೇ ಶತಮಾನದ ವಚನಕಾರರ ಸಾಮಾಜಿಕ ಆರ್ಥಿಕ ಚಿಂತನೆಗಳಿಗಿಂತ, ಶೂನ್ಯ ಸಂಪಾದನಾಕಾರರಿಗೆ ಧಾರ್ಮಿಕ ವಿಷಯವೇ ಮುಖ್ಯವಾಯಿತು. ಹೀಗಾಗಿ ಶರಣ ಧರ್ಮದ ಆಚರಣೆಗಳನ್ನು ಉಳಿಸಿಕೊಳ್ಳುವುದು ಅಂದು ಅವರಿಗೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ನೂರೊಂದು ವಿರಕ್ತಮಠಗಳು ಮಾಡಿದ ಕಾರ್ಯವನ್ನು ಪರಿಗಣಿಸಬೇಕಾಗುತ್ತದೆ. ಈ ಮಠಗಳು ಮುಂದೆ ಶೈಕ್ಷಣಿಕ ಕೇಂದ್ರಗಳಾಗಿ, ಧರ್ಮಪ್ರಚಾರಕ ಮಂಡಳಗಳಾಗಿ ತಮ್ಮದೇ ಆದ ರೀತಿಯಲ್ಲಿ ಜನಸಮುದಾಯದಲ್ಲಿ ಜಾಗೃತಿಯನ್ನುಂಟುಮಾಡಲು ಪ್ರಯತ್ನಿಸಿದವು. ಇಂದು ಗುರು ವಿರಕ್ತರ ನಡುವೆ ಎಂತಹವೇ ಭಿನ್ನಾಭಿಪ್ರಾಯವಿರಬಹುದು, ಇವರು ವಚನ ಚಳವಳಿಯ ಮುಖ್ಯ ಉದ್ದೇಶವನ್ನು ಪೂರ್ಣವಾಗಿ ಜಾರಿಗೆ ತರದೇ ಇರಬಹುದು. ಆದರೆ ಬಹುಸಂಖ್ಯಾತ ಜನ ಇವರನ್ನು ಶರಣರ ವಾರಸುದಾರರೆಂದೇ ನಂಬಿದ್ದಾರೆ.

ಭಾರತದಂತಹ ದೇಶದಲ್ಲಿ ಶರಣರ ಆಧ್ಯಾತ್ಮ ಚಿಂತನೆ ಹೆಚ್ಚು ಪ್ರಚಾರ ಪಡಿಯಿತೇ ಹೊರತು, ಅವರ ಸಾಮಾಜಿಕ ಆರ್ಥಿಕ ಚಿಂತನೆಗಳಲ್ಲ. ಧರ್ಮವೆಂದರೆ ಕೇವಲ ಆಧ್ಯಾತ್ಮ, ನೀತಿಬೋಧನೆ ಎಂದು ತಿಳಿದಿರುವ ಅಸಂಖ್ಯಾತ ಜನಸಾಮಾನ್ಯರಿಗೆ ಇಂದಿಗೂ ಶರಣರ ಆರ್ಥಿಕ-ಸಾಮಾಜಿಕ ಚಿಂತನೆಯ ಹೊಸ ಆಯಾಮಗಳು ತಲುಪದೇ ಹೋಗಿವೆ. ಹೀಗಾಗಿ ಶರಣರ ಒಂದು ಮುಖ ಮಾತ್ರ ಪರಿಚಯವಾಗಿದೆ.

ಶೂನ್ಯಸಂಪಾದನೆಯ ಹೆಸರೇ ತುಂಬಾ ಆಕರ್ಷಕವಾಗಿದೆ. ಶೂನ್ಯಸಂಪಾದನಾಕಾರರು ಬಹಳ ಬುದ್ಧಿವಂತರಾಗಿದ್ದರು ಮತ್ತು ಕಾವ್ಯದ ಹದವನ್ನು ತಿಳಿದವರಾಗಿದ್ದರು. ಸಂದರ್ಭಕ್ಕೆ ತಕ್ಕಂತೆ, ಸಂಭಾಷಣೆಗೆ ಅನುಗುಣವಾಗಿ ಅವರು ಸ್ವತಂತ್ರ ವಚನಗಳನ್ನೇ ರಚಿಸಿಬಿಟ್ಟರು. ರಚಿಸುವುದಷ್ಟೇ ಅಲ್ಲ ಅವುಗಳನ್ನು ಶರಣರ ವಚನಾಂಕಿತಗಳಲ್ಲಿ ಸೇರಿಸಿಯೂ ಬಿಟ್ಟರು. ಅದ್ಭುತವಾದ ನಾಟಕೀಯ ಗುಣವನ್ನು ಶೂನ್ಯಸಂಪಾದನೆಗಳಲ್ಲಿ ಕಾಣಬಹುದಾಗಿದೆ. ಶರಣರನ್ನು ಪಾತ್ರಧಾರಿಗಳನ್ನಾಗಿಸಿ ತಾವೇ ಸೂತ್ರಧಾರರಾದ ಶೂನ್ಯಸಂಪಾದನಾಕಾರರು ಸಾಮಾನ್ಯ ಸಂಕಲನಕಾರರಾಗಿರಲಿಲ್ಲ, ಅವರು ಪ್ರತಿಭಾನ್ವಿತ ಕವಿಗಳೇ ಆಗಿದ್ದರು.

ಈ ಹೀಗೆಂದು ಪ್ರಭುದೇವರು ತಮ್ಮ ನಿಜಪದದ ನಿಲುವ ನಿರೂಪಿಸಲು
ಇಂತು ನೊಸಲ ಕಣ್ಣಿನ ಕಿಚ್ಚಿಂಗೆ ಬೆಸವನಿತ್ತ ಸಿದ್ಧರಾಮಯ್ಯ
ಅಂಗಾಲೊಳಗೆ ಮೂಡಿದ ಕಂಗಳ ತೇಜವ ನೋಡಿ
ತನು ಮನ ಧನಂಗಳ ನಿಮಗರ್ಪಿಸಿ ಶುದ್ಧನಾಗಿಪ್ಪೆನೆಂದು
ಅಂಗಲಿಂಗ ಸಂಬಂಧವಿಲ್ಲದಿರ್ದರೆ ನಮ್ಮ ಶರಣರು ಒಪ್ಪರು

ಇಂತಹ ಅನೇಕ ಮಹತ್ವದ ಕಾವ್ಯಾತ್ಮಕವಾದ ಗದ್ಯವನ್ನು ಬರೆದಿರುವ ಗೂಳೂರು ಸಿದ್ಧವೀರಣ್ಣೊಡೆಯರು ಹಾಗೂ ಇತರ ಸಂಪಾದನಾಕಾರರು ಪ್ರತಿಭಾವಂತರಾಗಿದ್ದ ರೆಂಬುದರಲ್ಲಿ ಸಂಶಯವೇ ಇಲ್ಲ.

ವೀರಶೈವ ತತ್ವಜ್ಞಾನದ ತಿರುಳನ್ನೇ ಶೂನ್ಯಸಂಪಾದನೆಗಳು ಒಳಗೊಂಡಿವೆಯೆಂದು ವಿದ್ವಾಂಸರು ಹೇಳಿರುವ ಮಾತುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ. ಪರಮಾತ್ಮನನ್ನು ಶರಣರು ‘ಶೂನ್ಯಲಿಂಗ’ ಎಂದು ಕರೆದಿದ್ದಾರೆ. ಆತ್ಮವು ಪರಮಾತ್ಮನಲ್ಲಿ ಒಂದಾಗುವ ಪರಿಪೂರ್ಣಾವಸ್ಥೆಯನ್ನು ಅವರು ಬಯಲು, ನಿರ್ಬಯಲು ಎಂದು ಕರೆದಿದ್ದಾರೆ. ಈ ಬಯಲು ತತ್ವದ ಗಳಿಕೆಯನ್ನೇ ‘ಸಂಪಾದನೆ’ಯೆಂದು ಕರೆಯಲಾಗಿದೆ. ಇಲ್ಲಿ ಅಲ್ಲಮಪ್ರಭು ಕೇವಲ ಒಬ್ಬ ವಚನಕಾರನಲ್ಲ, ಆತನೇ ಶೂನ್ಯತತ್ವದ ಪ್ರತೀಕ. ಈ ಕಾರಣದಿಂದ ಪ್ರಭುವೇ ಇಲ್ಲಿ ಸರ್ವಸ್ವ. ಪ್ರಭುವಿನ ಮೂಲಕ ಪರಿಪೂರ್ಣತ್ವವನ್ನು ಕಾಣುವುದೇ ಶೂನ್ಯಸಂಪಾದನೆ. ಬೌದ್ಧರ ನಿರ್ವಾಣಕ್ಕೂ, ಶರಣರ ಶೂನ್ಯತತ್ವಕ್ಕೂ ಸಂಬಂಧವಿದೆ. “ನಿರ್ವಾಣವು” ಬೌದ್ಧರ ಆಶೆ ದ್ವೇಷಗಳು ನಿರಸನಗೊಂಡನಂತರ ಉಳಿಯುವ ಅಭಾವ ಸ್ಥಿತಿಯಾದರೆ, “ಬಯಲು” ಅವೆಲ್ಲಾ ನಿರಶನಗೊಂಡನಂತರ ವಿಕಾಸಗೊಳ್ಳುವ ಪರಿಪೂರ್ಣ ಸ್ಥಿತಿ. ಇಂತಹ ಶರಣರ ಶೂನ್ಯ ಸಂಪಾದನೆಯ ವಿಶೇಷತೆಯನ್ನು ಕುರಿತು ಈಗಾಗಲೇ ಅನೇಕ ವಿದ್ವಾಂಸರು ವರ್ಣನೆ ಮಾಡಿದ್ದಾರೆ, ವಿವರಣೆ ನೀಡಿದ್ದಾರೆ. ಇಂತಹ ಗ್ರಂಥಗಳನ್ನು ಪೂಜ್ಯಭಾವದಿಂದಲೇ ನೋಡಬೇಕೆಂದು ಅಪ್ಪಣೆಯನ್ನು ಕೊಡಿಸಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಶೂನ್ಯ ಸಂಪಾದನೆಗಳಿಗೆ ದೊಡ್ಡ ಸ್ಥಾನವಿದೆ. ಡಾ. ಆರ್.ಡಿ. ರಾನಡೆಯಂಥವರು “ಶೂನ್ಯಸಂಪಾದನೆ”ಯನ್ನು, ಜಗತ್ತಿನ ಶ್ರೇಷ್ಠ ಸಂವಾದ ಗ್ರಂಥವೆನಿಸಿದ ಪ್ಲೇಟೋನ “ಸಂಭಾಷಣೆ”ಯನ್ನು ಹೋಲುತ್ತದೆಂದು ಹೇಳಿದ್ದಾರೆ.

ಈಗ ಕುಂಬಳಕಾಯಿಯೂ ನಮ್ಮ ಮುಂದಿದೆ, ಕುಡುಗೋಲು ನಮ್ಮ ಮುಂದಿದೆ. ಹೇಗೆ ಹೆಚ್ಚಬೇಕು? ಏನನ್ನು ತಿನ್ನಬೇಕು? ಹೇಗೆ ತಿನ್ನಬೇಕು? ನಿರ್ಧಾರ ನಮಗೇ ಬಿಟ್ಟಿದ್ದಲ್ಲವೆ?