ಖಡಕ ಶಡಕ ಸಿಪಾಯಿ ಭಡಕ
ಆಗಿ ಹೊಂಟಾನ ಖಾಸ ಪೋಷಾಕ
ತೊಟ್ಟಾನ ಮುತ್ತಿನ ಬಾವಲಿ
ಇಟ್ಟಾನ ಕುದರಿ ಕುಣಿಸುತ ಹೊಂಟಾನ
ಯಾವ ದೇಶದ ಧೊರಿಯೋ ಇವಾ
ನೋಡಿ ಹರುಷವಾಯಿತು ನನ್ನ ಜೀವಾ |
ಥೇಟ ಥಾಟ ಗಾಟ ಮಾಟ ಗಜೇಂದ್ರ ಬಂದಾ
ಹುಣ್ಣಿವಿ ಚಂದ್ರ ಇಳಿದು ಬಂದ ದೇವೇಂದ್ರಾ |
ರೂಪದಲ್ಲಿ ಸುಂದರಾ ಹ್ಯಾಂಗ ಬಂದಾನವ್ವ ಇಲ್ಲೆ
ಕಾಮ ಭೀಮನ ರೂಪ ಉಳ್ಳಾವಾ
ರೂಪ ನೋಡಿ ದೀಪ ಕತ್ತಲ
ಮನಿಯಾಗ ಹಚ್ಚಿದ್ಹಾಂಗ
ಬುಲ್ ತಾರೆ ಹೊಳಧಾಂಗ ಸುದ್ದ ಸೂರ‍್ಯ
ಮೂಡಿದ್ಹಾಂಗ ಕಸರಿಲ್ಲದ ಹುಟ್ಟಿಶ್ಯಾನ ಶಿವಾ
ಇವನ ಮ್ಯಾಗ ಆಯ್ತೆ ನನ್ನ ಮೋಹಾ |

||ಚಾಲ||

ಕೈಯಾಗಿಟ್ಟಾನ ಉಂಗುರಾ
ಕಂಠಿಸರ ಮುತ್ತಿನ ಹಾರಾ
ಸಿರಪೇಚ ಇಟ್ಟಾನ ಸುತ್ತ್ಯಾನ ಜರತಾರ
ಮುತ್ತೀನ ತುರಾಯಿ ವಜ್ಜರಾ |

||ಏರು||

ಕರೋಲಿ ಕೈಚೂರಿ ಬಾಕ ಹಿಡಿದು
ಪಟ್ಟೆ ಡಾಲ್ಲ ಬೆನ್ನ ಮ್ಯಾಲ ಮನಸಾತ ಇವನ ಮ್ಯಾಲ
ಹೋಗಿ ಹಿಡಿಯಲೇನ ಕಾಲ ಹ್ಯಾಂಗ ಬಂದಾನವ್ವ ಇವಾ
ನೋಡಿ ಹರುಷವಾಯ್ತು ನನ್ನ ಜೀವಾ||೧||
ಕೇಳಗರ್ತಿ ನೋಡಬೆರ್ತಿ ಮನಿಮಾರ ಮರ್ತಿ
ನಾವು ನೀವು ಯಾರಿಕ್ಯಾರ ಇಳಿದು ಹೋಗು ವಸ್ತಿಕಾರ
ನಮ್ಮ ನಮ್ಮ ಯಾತರ ಖೂನಾ
ಮಾಡಂತ ಕಟ್ಟಿ ಹಾಕತಿ ಎನ್ನಾ
ನಮ್ಮ ಧೊರಿ ಐಶ್ವರಿ ಮಸ್ತ ಕೊಟ್ಟಾನ
ದಂಡಿನ ಮ್ಯಾಳ ಇಟ್ಟಾನ ಸುದ್ದಿ ಕೇಳಿ ಸುಟ್ಟಾನ
ನಾವು ಮಾಡುವುದಿಲ್ಲ ಗೆಣತಾನ
ಹೆಣ್ಣಿಗಾಗಿ ಹೋಗ್ಯಾವ ಸಂಸ್ಥಾನ
ಸೊಟ್ಟ ಪಟ್ಟ ಕೆಟ್ಟ ಕೆಲಸ ಮಾಡವ ಅಲ್ಲ
ಶಿವ ಮೆಚ್ಚಲಾಕ ಇಲ್ಲ ಕೀರ್ತಿ ಬರುವ ಕೆಲಸ
ಹೊಂದದು ಹೋಗ ನಿನ್ನ ಒಗತಾನ
ಕೂಡಿಕೊಳ್ಳ ಮದುವಿ ಗಂಡನ್ನಾ |

||ಚಾಲ||

ಹಿಂಗ ಸಿಪಾಯಿ ಹೇಳ್ಯಾನ ಉತ್ತರ
ತಿಳಿಸಿದಾನ ನಾನಾತರಾ |
ಇದು ಮೂಲ ಕೆಟ್ಟ ಕಾರಭಾರಾ
ಬಹಳ ಘೋರಾ ಜನ್ಮ ಠಾರಾ |
ಸಿಟ್ಟಿನಿಂದ ಸಿಪಾಯಿ ಏರಿದ ಜನ
ನಿನ್ನ ಮಾತ ನಮ್ಮ ನಿಮ್ಮದೇನು ಗೊತ್ತು
ಪರ ಹೆಣ್ಣಿನ ಮ್ಯಾಲೆ ಚಿತ್ತ ಇಟ್ಟ ನೋಡಿದ್ದಿಲ್ಲ
ಹಿಂಗ ಹ್ಯಾಂಗ ಭಾವಕ್ಕ ಒಲಿದಾನ ಶಿವಾ||೨||
ಕೇಳ ಚದುರಿ ಮಾತಿನ ಮಧುರಿ ಅಂತಾಳ ಮನದಾಗ
ಇನ್ಮಾಡಬೇಕ ಹ್ಯಾಂಗ ಜೀವ ಇದ್ದು ಇಲ್ದಾಂಗ
ಆತ ಮಾರಿಗೆ ಬಡದಾಂಗ ಇವ ಮಾಡತಾನ ಬ್ಯಾಸರಾ
ಜನ್ಮ ಹೋಗವಲ್ಲದ್ಯಾಕ ನಂದ ಠಾರಾ
ನಮ್ಮ ನಿಮ್ಮ ಜೋಡ ಜತ್ತು ಕೂಡೈತೊಳೆ
ಹ್ಯಾಂಗ ಮುತ್ತಿನೊಳಗಿನ ಕುಂದಣದಾಂಗ
ಉಂಗುರಕ್ಹರಳ ಹಚ್ಚಿದ್ಹಾಂಗ
ನನ್ನ ಮಾತ ಕೇಳೋ ಸವಿಗಾರಾ
ನಿನಗೆ ಕೊಡುವೆನು ಮುತ್ತಿನ ಹಾರಾ
ನನ್ನ ಗಂಡ ಮನಿಯಲ್ಲಿ ದೊಡ್ಡ ಸಾವುಕಾರಾ
ತಂದೇನಿ ಬೆಳ್ಳಿ ಬಂಗಾರ ವಸ್ತಾ
ವಡವಿ ಅಲಂಕಾರಾ ಕೈ ಜೋಡಿಸಿ ನಿಂತಾಳ ಸುಂದರಾ
ಸಿಪಾಯಿ ಮನಸ ಆತ ಒಡದ ನೀರಾ |

||ಚಾಲ||

ಇಬ್ಬರು ಕೂಡ್ಯಾರು ಖುಷಿಯಿಂದಾ ಬಹುಚಂದಾ
ಆನಂದಾ ಕವಿ ಗುರಸಿದ್ಧನಕ್ಷರ ಚಂದಾ
ಕಟಿ ಬಂದಾ ಕೇಳೋ ಬಂದಾ

||ಏರು||

ಹುಬ್ಬಳ್ಳಿ ಶಹರ ಮೋಜೀನ ಊರ
ದೊಡ್ಡ ಪಟ್ಟಣ ಹಾರ‍್ಯಾಡ ಬ್ಯಾಡೋ
ಟಣಪಣ ಮುರದ ಚಲ್ಲೇನಿ ಗೋಣ
ಮೀಟಿ ತಗದೇನಿ ಕಣ್ಣು ಹಿಂದ
ಬಾಣ ಬಿಟ್ಟ ತುರೇದನೋ ಓಡಿ
ಹೋಗತಾನ ಹಿರೆ ಕಲಿಗಾಂವಾ

ರಚನೆ :  ಕವಿ ಗುರುಸಿದ್ಧ
ಕೃತಿ :  ಜಾನಪದ ಝೇಂಕಾರ