೧ನೆಯ ಚೌಕ
ಪಂಚಮಿ ಮುಂದ ಇರಟ್ಟೆಗಾಗಿ | ಹಂಚೀಕಿ ಹಾಕತಾಳ
ಸಂಜೀಗಿ ನಮ್ಮವರು ಬರತಾರೋ | ಏನು ಮಾಡತಾರೋ |
ಗೊಂಡ್ಯಾದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
ನಾಗರ ಪಂಚಮಿ | ನಾಡೀಗಿ ದೊಡ್ಡದು
ನಾಗೇಶಿಗ್ಹಾಲಾ ಎರೆಯುವರು | ಒಂದ್ಹೊತ್ತಿರೂದು |
ಎಂದಿದ್ದರ ನಮ್ಮವರು | ಮುಂದಾಗಿ ಬರೂದಿಲ್ಲ
ಸಂಜೀಗಿ ನನ್ನ ಎರೆಯುವರು | ಅಳ್ಳ ಹುರಿಯುವರು |
ಹಬ್ಬದ ದಿನ ಹರೆಹೊತ್ತಿಲೆ | ಜತ್ತಾಗಿ ಗೆಳತೇರು
ಹೊತ್ತೇರಿ ನೀರಾ ತರುವದು | ಭಾಳ ಮೆರೆಯುವದು ||
ಇಳಿಹೊತ್ತಿನ ಕಡದಿಂದ | ಗೆಳತೇರ ಕೂಡಿ ಹೋಗಿ
ಜೋಕಾಲಿ ಅಡಿ ಬಂದು ದಣಿಯುವದು | ಭಾಳ ಉಣ್ಣುವದು ||
||ಇಳುವು||
ಹಸರ ಡಪಳಾ | ಸೀರಿ ಪಪ್ಪಳಾ ಜರಕಾಟೀ
ನಿತ್ತ ನಿಲಗಿ ತೀಡಕ್ಕಿ ತುದಿಗಟ್ಟಿ ||
ಮಗ್ಗಿ ತಗಿಸಿ | ಒಗಸಿದ ಕುಬಸ ಕರವತಕಾಟೀ
ಹಂಗೇ ಇಟ್ಟಿದಿನವ್ವ ಗಂಟಿನಾಗ ಕಟ್ಟಿ ||
ಚಂದ ಚಂದ ಒಂದೇ ವಾರೀಗಿ ಗೆಳತೇರು ಹೊಸ ಧಾಟಿ
ಅದರಾಗೊಬ್ಬಾಕಿ ನನ್ನ ಸವತಿ ಖೊಟ್ಟಿ ||
||ಏರು||
ಜೋಡಿಯವರು ಗೆಳತೇರು | ನೋಡುವರು ನನ್ನ ದಾರಿ
ನಾನಾ ತರದ ಸೀರಿ ಉಡುವವರು | ನನ್ನ ಕರೆಯುವರು ||
ಗೊಂಡ್ಯಾದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
೨ನೆಯ ಚೌಕ
ಆಯಗಾರ್ರಿಗಿ ಅಳ್ಳಿಟ್ಟ | ಅವು ಬ್ಯಾರಿ ಮಾಡಿಟ್ಟ
ಹೋದ ಬಾರಿ ಇತ್ತು ನನ್ನ ಕಾರ್ಭಾರಾ | ಮಾಡಿದ ಪರಭಾರ
ತಂಬಿಟ್ಟಿನ ಉಂಡೀ ಒಳಗ | ಕಡಿಮಿ ಹಾಕಿ ಬೆಲ್ಲ ನಾ
ತಿನ್ನಾಕಿ ನೋಡಿ ಅದರ ಆಕಾರ | ಬೆಲ್ಲದ ಮಜಕೂರಾ ||
ಭಾಳ ಭಾಳ ಬೆಲ್ಲ ಹಾಕಿ | ಹಾಳ ಮಾಡ್ತಾರ ಮನಿಯಾಗ
ಹೇಳಕೇಳವರು ಯಾರಿಲ್ಲ ಹಿರಿಯರಾ | ತಮ್ಮ ಕಾರಭಾರ |
ಅಣ್ಣನ ಹೇಣತಿ | ಆಕಿ ಭಾಳ ಘಾಲಗಡಕಿ
ಆಣಿ ಹಾಕಿ ತರಬಿಕೇರ ಕಲಿಸವರಾ | ಮನಸ ಒಡಸವರ ||
||ಇಳುವು||
ಸಂಶಾ ಹೋಗಲಿಲ್ಲ ಮನಸಿನಂದು ತೀರಿ
ನೆನಸಿ ನೆನಸಿ ತವರ ಮನಿ ದಾರಿ ||
ತವರಮನಿಯಾಗ ನನ್ನ ಐಸಿರಿ
ನೆಪ್ಪಾಗಿ ಭುಗಿಲೆಂದು ಎದಿ ಹಾರಿ ||
ನನ್ನ ಹೊಟ್ಟ್ಯಾಗ ಬಿದ್ದಂಗ ಕಿಚ್ಚ ಉರಿ
ದೆವ್ವ ಬಡಿದಂಗ ಬಿದ್ದೇನ್ರೆ ಖಬರ್ಹಾರಿ ||
||ಏರು||
ಹೊತ್ತರೆ ಎಲ್ಲೈತಿ | ನಿತ್ತರ ಬರಲಿಲ್ಲ
ಎತ್ತರೆ ಆಗಿ ಹಾರಿತ ಖಬರು | ಉಳಿಲಿಲ್ಲ ಅಬರು |
ಗೊಂಡ್ಯಾದ ಹಣಿಪಟ್ಟಿನ ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
೩ನೆಯ ಚೌಕ
ಸೋದರತ್ತಿ ಮಗಳೊಬ್ಬಾಕಿ | ಹಾದರಗಿತ್ತಿ ಇದ್ದಾಳ್ರೆವ್ವ
ಬಂದವರೀಗಿ ಸೇರೂದಿಲ್ಲ ಘಾಲ್ಗಡಿಕಿ | ಇಂಥ ಕಾಲಗಡಕಿ ||
ಚಿಗವ್ವ ನಮ್ಮ ಕಾಕಾನ ಹೇಣತಿ
ಬ್ಯಾsಡಂತ ಅಂದಿದ್ದಾಳು ಬೆರಕಿ | ಮಾರಿ ಗಂಟ ಹಾಕಿ ||
ಮತ್ತೊಬ್ಬಾಕಿ ಸ್ವಾದರತ್ತಿ | ಹೋದರಕೀಗಿ ಹತ್ತೂದು ಬಿಸಿ
ಎಲ್ಲಾರೊಳಗರಸಿ | ಉಂಡು ತಿರಗಕ್ಕಿ | ಇದೆ ಕೆಲಸದಾಕಿ |
ಹೀನ ರಂಡಿ ಆಕಿ ಪುನಾ ಸೇರುವದಿಲ್ಲ
ದಿನಾ ನಾಕು ಮನಿ ತಿರಗಾಕಿ | ಇಂಥ ಬಾಯ್ಬಡಕೀ ||
||ಇಳುವು||
ಮಾಳಿಗಿ ಏರಿ ದಾರಿ ನೋಡಿದ ಹಗಲೆಲ್ಲಾ
ನೂಸಿ ಹರುವತಾವರೆ ನನ್ನ ಕಾಲ ||
ಮೂರುಸಂಜಿಲೆ ಎತ್ತೊಂದು ಕಂಡೇನ ದಾರಿ ಮ್ಯಾಲ
ನೋಡಿ ಮನಸೀಗಾದೆನ್ರೇ ಖುಸಿಯಾಲ ||
ಸನಿಯಾಕ ಬಂದಾಂಗ ಖೂನ ಹತ್ತಿತ್ರೇ ನಮ್ಮದಲ್ಲ
ಎದಿ ಒಡದು ಬಡಿದಂಗ ದೊಡ್ಡ ಕಲ್ಲ ||
||ಏರು||
ಅವ್ವ ಅಕ್ಕನ ಮುಂದ | ಏನು ಹೇಳಲಿ ಸುಖದುಃಖ
ಇಷ್ಟು ಕೇಳಿ ಮನಸಿನಾಗ ಮರಗುವರು | ದುಃಖ ಮಾಡುವರು ||
ಗೊಂಡೇದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
೪ನೆಯ ಚೌಕ
ಹೋದ ಬಾರಿ ಪಂಚಮ್ಯಾಗ | ಬೇಕಾದ್ದು ಮಾಡಿದೆನವ್ವ
ನೆನಪಾಗಿ ಕಡುತೈತಿ ನನ್ನ ಹೊಟ್ಟಿ | ಅದು ಏನು ಸುಟ್ಟಿ |
ಅಣ್ಣತಮ್ಮರ ಒಳಗ ನಮ್ಮ | ಸಣ್ಣ ತಮ್ಮನ ಹೇಣತಿ
ಪಣತೀ ಮಾರಿಯಾಕಿ ಬಲುಖೊಟ್ಟಿ | ನಿಂದ್ರಸ್ಯಾಳ ಗಟ್ಟಿ ||
ತಾಯಿ ತಂದಿ ಇವರು | ನಾಯೀ ಮರಿಯವರು
ಮಾಯಾಯಿಲ್ಲದೆ ಮರತಾರ ಬಿಟ್ಟಿ | ಹೊಡಿಸಬೇಕು ಕಟ್ಟಿ |
ಆಯಿ ಒಬ್ಬಾಕಿ ಇದಿ | ಮಾಯಿ ಕಡತಾಳ
ಎಂದ ಹರಿದೀತು ಇವಳ ರಗಟಿ | ಥಡಗಿಯ ಕಟ್ಟಿ ||
||ಇಳುವು||
ಕೊಬ್ಬರಿ ಸರಾ ಗಲ್ಲಕ ಬಡಿವ ಜೋಕಾಲಿ
ಭಾಳ ಸನೀ ನಮ್ಮ ಮನಿ ಬಲ್ಲಿ ||
ನೆಗವಿ ಕುಂಡರಸಾಗ ಸರದ ಬಿದ್ದಿತ್ರೇ ಜರದ ಶಾಲಿ
ಮ್ಯಾಲ ಹೊಚ್ಚಾಕಿ ಕರವತಕಾಟಿ ಒಲ್ಲಿ ||
ಭಾಳ ಜಗ್ಗಿ ತೂಗಾಕೆಲ್ಲವ್ವ ಜೋಕಾಲಿ
ಸರ್ತಿಗೊಮ್ಮೆ ಕೈಯಿಡಾಕಿ ಜ್ವಾಕೀಲಿ ||
||ಏರು||
ಸುಂದರ ಸಖಿಯರ ಮುಖ | ಎಂದಾರೆ ಕಂಡೇನೇನ
ಬಂದಾರೆ ಹೋಗಿರಬೇಕು ಎಲ್ಲಾರು | ನನ್ನ ಗೆಳತೇರು |
ಗೊಂಡೇದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
೫ನೆಯ ಚೌಕ
ಚಂದರ ಗೊಂಬಿ ನಿನ್ನ | ಎಂದಾರೆ ಕಂಡೇನೇನ
ಬಂದ ಬಂದು ಹೋಗಿರಬೇಕು ಬಸಲಿಂಗಿ | ಜಾಡರ ಶಿವಲಿಂಗಿ ||
ಬೆಳದಿಂಗಳ ಆಡಲಾಕ | ಬ್ಯಾಸರಿಕಿ ಇಲ್ಲದಾಕಿ
ಬಂದ ಬಂದು ಕರಯಾಕಿ ನಮ್ಮ ರಂಗಿ ಆರೇರ ಗಂಗಿ ||
ಗುಳ್ಳವ್ವನ ಇಡುವಾಗ | ಅರ್ತಿಲೆ ಗೆಳೆತೇರು
ಬರತಿದ್ದರು ಬಟ್ಟಗುಲಗಂಜೀಗಿ | ಕೊಡುತಿದ್ದೆನ ಹೋಗಿ ||
ಮೂರುಸಂಜಿಲೆ | ಗುಳ್ಳವ್ವನ ಬೆಳಗಲಾಕ
ಮನಿ ಮನಿ ಕರೆಯಾಕಿ ನಮ್ಮ ಸಂಗಿ | ಮಾಲಗಾರ ನಿಂಗಿ ||
||ಇಳುವು||
ಎಲ್ಲಾ ಗ್ವಾಳಿ ಆಗವರ ಬಾಳಿಬಸಿ
ಪಂಚಮಿಗೊಮ್ಮೆ ಕೂಡವರ ಪುರಮಾನಸಿ ||
ಮೇಲ ಮಾಳಿಗೇರಾಕಿ ನನ್ನ ಕಾಸಿ
ಕೈಯ ಬೀಸಿ ಕರಿಯಾಕಿ ಹುಬ್ಬ ಹಾರ್ಸಿ ||
ನನ್ನ ಮಾತ ಮೀರವಳಲ್ಲವ್ವ ಕುಂಬಾರ ಶೇಷಿ
ಇಬ್ಬರು ಮುಂದ ಇರುವವರ ನೇಮsಸಿ ||
||ಏರು||
ಕಡಲಿಲ್ಲ ಗೆಳತೇರ ಬಳಗ | ನೋಡಲಿಲ್ಲ ಒಂದಿನ
ಮಾಡಲಿಲ್ಲ ದಾದ ನನಗ ತವರವರು | ಯಾಕ ಮರೆತಿದಾರು |
ಗೊಂಡೇದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
೬ನೆಯ ಚೌಕ
ಬರೂದಿದ್ರ ಬರೂದಿಂದ | ಹೋಗೂದಿದ್ರ ಹೋಗೂದಿಂದ
ಬರದಿದ್ದರ ನನ್ನ ಅದೃಷ್ಟ | ಇದು ಭಾಳ ಕೆಟ್ಟ |
ಹೀಂಗಂದು ನಿಂದ್ರೂದ್ರೊಳಗ | ಆಕಿ ಅಣ್ಣ ಬಂದಿದಾನ
ಹಂಡ ಹೋರಿಗ್ಹಾಕಿದಾನ ಮಗ್ಗಿ ಮುಟ್ಟ | ಹಿಗ್ಗಿದಾಳ ಎಷ್ಟ ||
ಅತ್ತೀ ಮಾವಗ ಹೇಳತಾಳ | ನಾ ಮಾತ್ರ ಹೋಗತೀನಿ
ನೀವು ಮಾತ್ರ ಕಳುಹಬೇಕು ಸಂಶ ಬಿಟ್ಟ | ಮನದಾನ ಸಿಟ್ಟ |
ನಾ ಮಾತ್ರ ಕಳುಹತೀನಿ | ನೀ ಮಾತ್ರ ಹಚಗೊಂಡು ಹೀಂಗ
ಹೇಳಿ ಆಕಿ ಮಾಂವ ಹಚಗೊಟ್ಟ | ಬುಗಡಿ ಸೀರಿ ಕೊಟ್ಟ ||
||ಇಳುವು||
ತೇರದಾಳ ಸಮೀಪ ಜನವಾಡ ಊರ
ಉಣುವ ಹೊತ್ತೀಗಿ ಬಂದಾರ ಅವಸರ ||
ಮಗಳು ಬಂದಾಳಂತ ತಾಯೀಗಿ ಆಯಿತ ಧೀರ
ತೆಕ್ಕೀಲಿ ಹೊಡೆದು ಸುರಸ್ಯಾಳೋ ಕಣ್ಣನೀರ ||
ಕರಿಲಾಕ ಬಂದಾರ ವಾರೀಗಿ ಗೆಳತೇರ
ಮಗಳೀಗಿ ಹೇಳತಾರ ಹೋಗವ್ವ ಉಂಡಕೇರಾ ||
||ಏರು||
ನಾನಾನ ತೋಡಿ ಮಾಡ್ಯಾರ ಜೋಡಿ | ವೈರಿ ನೋಡಿ ಹೋದಾಳ ಓಡಿ
ನಾಮಣ್ಣ ಮಾಡಿದ ಅಕ್ಷರಾ | ತೇರದಾಳ ಊರಾ
ಗೊಂಡ್ಯಾದ ಹಣಿಪಟ್ಟಿನ | ಹಂಡ ಹೋರಿ ನನಗಾಗಿ
ಕೊಂಡಾರ ನಮ್ಮವರು ತರತಾರೋ | ಇಂದ ಬರತಾರೋ ||
ರಚನೆ : ನಾಮಣ್ಣಕವಿ
ಕೃತಿ : ಜೀವನ ಸಂಗೀತ
Leave A Comment