೧ನೆಯ ಚೌಕ

ಸಂಪಿಗಿ ತೆನಿಯಂಥ ಹುಡುಗ | ಸಂತಾಗ್ಹಾಯ್ದು ಹೋಗ್ತಾನ
ಹಂತೀಲ್ಹೋಗಿ ಕೇಳಲೇನ ಹೆಸರ |
ನನ್ನ ಕಾಂತನ ರೂಪ ಹೊಂಟಂಗ ಹುಣ್ವಿ ಚಂದರ
ಇವನ ಚಿಂತಿಯೊಳಗೆ ಜೀವಕ್ಕಿಲ್ಲ ಸ್ಥಿರಾರ |

ಕನಸಿನಾಗ ಕಂಡಂಗಾಯ್ತು | ಮನಸಿನಂದು ಹೋಗವೊಲ್ದು
ಹಲಸಂಗಿ ಊರಾಗಿಲ್ಲ ಇವನಂಥವರ ||

ಇಂದ್ರಲೋಕದ ಪುರುಷ ಇವ | ಅರಸನ ಹೊಟ್ಟೀಲೆ ಹುಟ್ಟ್ಯಾನೇನ
ಸರಸ ಕಾಮನಾಟಕ್ಹಾನ ದುರುಳ |
ಇವಳ ತೋಳ ತೊಡಿ ಖ್ಯಾದಿಗಿ ಹೊಡಿ ಸರಳ |
ನನ್ನ ಜೋಡಿ ಹಾನ ನೋಡಿ ಆದೆ ಮರಳ |

ಇವನ ರೂಪ ಅಪರೂಪ | ಹಚ್ಚಿದಾಂಗ ಚಂದ್ರದೀಪ
ಏನು ತಿಳಪ ಹೊಟ್ಯಾಗಿನ ಕರಳ ||

ಕುಂತ್ರ ನಿಂತ್ರ ಇವನ ಧ್ಯಾನ | ಜೀವಕಿಲ್ಲ ಸಮಾಧಾನ
ನಿದ್ದಿಯಿಲ್ಲ ಕಣ್ಣೀಗಿ ಹಗಲಿರಳ |
ಇವನ ಹಸ್ತ ಏನ ಸಿಸ್ತ ಮಾವಿನ ತರಳ |
ಮ್ಯಾಲ ಕಂದಲದ್ಹರಳ ಉಂಗರೊಪ್ಪೊ ಬೆರಳ |

ಮನ ಸೋತು ನನ್ನ ಕೂಡ | ಮಾತ ಒಂದೂ ಆಡವೊಲ್ಲ
ಪ್ರೀತಿಯಿಟ್ಟು ನನ್ನ ಮ್ಯಾಲ ಸರಳ ||

||ಇಳುವು||

ಹುರಪಿನವನಲ್ಲ ಇವನ | ಧುರಪ ಏನ್ಹೇಳಲಿ ನಾಗ
ಸರ್ಪ ಭೋರಾಡಿದಂಗ ನೋಡಿ ನಾ ಬೆರತ |
ಇವನ ಚಿಂತಿಯೊಳಗ ಮನಿಮಾರ ಮರತ |
ಹಲ್ಲಗಲ್ಲ ಏನ ತಿಳಪ | ಕುಂಕುಮ ಕನ್ನಡಿಯಂಥ ಹೊಳಪ
ಸೂರ್ಯನಂಗ ಅವ್ವಾ, ಇವನ ಸುರತ |
ಜೀವ ತಾಳಲಾರ್ದೆ ಕೂತೀನವ್ವ ಬ್ಯಾಸತ್ತ ||

||ಏರು||

ಚಕ್ಕರಗಣ್ಣ ಕೊಕ್ಕರಮೀಸಿ | ನಕ್ಕರ ಚಂದ ನನ್ನ ಮುಂದ |
ತೊಟ್ಟ ಅಂಗಿ ಹೊತ್ತ ಶಾಲಿ ಜರತಾರ |
ಇಂವ ಹತ್ತು ಮಂದ್ಯಾಗ ಮುತ್ತಿನಂಥ ಸರದಾರ |
ಇವನ ಚಿಂತೆಯೊಳಗ ಜೀವಕಿಲ್ಲ ಸ್ಥಿರಾರ |
ಕನಸಿನಾಗ ಕಂಡಾಂಗಾಯ್ತು | ಮನಸಿನಂದು ಹೋಗವೊಲ್ದು
ಹಲಸಂಗಿ ಊರಾಗಿಲ್ಲ ಇವನಂಥವರ ||

೨ನೆಯ ಚೌಕ

ಕೇಳ ಬಾಲಿ ಹೊಯಮಲ್ಲಿ | ಮನಸ ಯಾಕ ನನ್ನ ಮ್ಯಾಲಿ
ಸಾಕು ಮಾಡ ಯಾಕ ಹೇಳ್ತಿ ಬಡಿವಾರ |
ಪ್ರತಿ ಪುರುಷರ ಮ್ಯಾಲ ಯಾಕ ನಿನ್ನ ನೆದರ |
ಮನೀ ಗಂಡನ ಬಿಟ್ಟೂ ತಿರುಗೂ ರಂಡಿ ಮುಡದಾರ |

ಕಂಡವರಿಗ್ಹೋಗಂವಲ್ಲ ನಾನ | ನಿನಗಿಲ್ಲ ಅಭಿಮಾನ
ಯಾಕ ನಿಂತ ಹೇಳ ನನ್ನ ಇದರ ||

ಪಾರ್ವತಿ ಸರಸ್ವತಿ | ಅವರ ಮ್ಯಾಲಿ ಭಾಳ ಪ್ರೀತಿ
ಬ್ರಹ್ಮ ಕಳಕೊಂಡಾನ ತನ್ನ ಮಂತರಾ
ಪಂಚಮುಖ ಆದ ತೊಟ್ಟು ಹಂಕಾರಾ
ಒಂದು ತಲಿ ಕೊಯ್ದು ಬಿಟ್ಟದಾನ ಶಂಕರಾ |

ಲೋಕದಲ್ಲಿ ಪೂಜಿ ಮಾಡಿ | ರೂಪ ಯಾರೂ ಕೇಳೂದಿಲ್ಲ
ಶಾಪ ಹತ್ತಿ ಆದ ಅಂವಾ ಧಿಕ್ಕಾರ ||

ಪರಸ್ತ್ರೀಯರ ಸಂಗಮಾಡಿ | ಯಾವ ಸೂಳೀಮಗ ಈಗ
ದ್ರವ್ಯಗಳಿಸಿ ಆಗಿದಾನ ಸಾವಕಾರ |
ಅಗ್ನಿ ದಿಕ್ಕಿನಲ್ಲಿ ಲಂಕಾ ಇತ್ತು ಬಂಗಾರ |
ಪುಂಡರಾಮರ ದಂಡ ಕೆಂಡ ಬಡಿದು ಸುಟ್ಟಾರ |

ಹೆಣ್ಣಿನ ಕಾಲಾಗ ಸತ್ತಿದಾರ | ಮಣ್ಣ ಮುಕ್ಕಿ ಭಾಳ ಮಂದಿ
ಯುದ್ಧ ಕಂಡು ಬಂದಾರ ದೇವ ದೈತ್ಯರ ||

||ಇಳುವು||

ಮತಿ ಮಂದ ಸತಿಸ್ನೇಹ | ಎಂದಿಗಾದ್ರೂ ಮಾಡಬಾರದು
ಮುಕ್ತಿದಾರಿ ಕೆಡಸೂದು ತನ್ನ ಯುಕ್ತೀಲಿ |
ಇಷ್ಟು ಖೊಟ್ಟಿ ಗುಣ ಆದ ಇದರ ಹಂತೀಲಿ |
ಕಾಮ ವಿಷಯಕಾಗಿ ಇಂದ್ರ | ಗೌತುಮ ಋಷಿ ಮನಿಗ್ಹೋಗಿ
ಕೋಳಿಯಾಗಿ ಕೂಗಿದಾನ ಕಪಟೀಲಿ |
ಅವರ ಶಾಪ ಹತ್ತಿ ಖಲಿ ಹತ್ತಿ ಕಪ್ಪೀಲಿ ||

||ಏರು||

ಇಷ್ಟು ನನಗೆ ತಿಳಿಲಿಕ್ಕಾಗಿ | ಸ್ಪಷ್ಟ ನಿನಗ ಬರೂದಿಲ್ಲ
ಗಟ್ಟಿ ಹೇಳತೇನ ಕೇಳ ಸುಂದರಾ |
ಸಂಗವೊಲ್ಲ ದುಷ್ಟ ಚಾಲ ಖೊಟ್ಟಿ ಹೆಂಗಸರ |
ಇವನ ಚಿಂತಿಯೊಳಗ ಜೀವಕ್ಕಿಲ್ಲ ಸ್ಥಿರಾರ |
ಕನಸಿನಾಗ ಕಂಡಂಗಾಯ್ತು | ಮನಸಿನಂದು ಹೋಗವೊಲ್ದು
ಹಲಸಂಗಿ ಊರಾಗಿಲ್ಲ ಇವನಂಥವರ ||

೩ನೆಯ ಚೌಕ

ಯಾಕೊ ನಲ್ಲ ನಿನ್ನ ಮ್ಯಾಲ | ನನ್ನ ಖ್ಯಾಲ ರಾತ್ರಿ ಹಗಲ
ಎಂಥ ಬುದ್ಧಿ ಖೊಟ್ಟಿ ನಿಂದು ಕಡಿತನಕ |
ನೀವು ಸುಳ್ಳಂದ್ರ ಕೇಳೊ ಪುರಾಣ ಪುಸ್ತಕ |
ಇಂದ್ರನ ಭೆಟ್ಟೀಗರ್ಜುನ ಹೋದ ಸಹಜsಕ |

ರಂಬಾ ಕುಂತು ಅವನ ಮ್ಯಾಗ | ಮನಸ ಮಾಡಿದಾಳ ಹ್ಯಾಂಗ
ಒಲ್ಲೇನಂದ್ರ ಶಾಪಕೊಟ್ಟಾಳ್ಯಾತಕ ||

ಶಾಪ ಹತ್ತಿ ಅರ್ಜುನಗ | ನಪುಂಸಕ ಆದಾನಾಗ
ವಿರಾಟರಾಯನ ಮನಿಯಾಗ ಬೇಲಾಸಕ್ಕ |
ಅಂವ ಹೆಂಗಸರ ಸಾಲೀ ಬರಿಸಿದಾ ಆ ಕಾಲಕ್ಕ |
ತಿರುಗಿ ಗಂಡರೂಪ ಬಂತು ಅವನ ಜನ್ಮಕ |

ಆದಿಶಕ್ತಿ ಅರ್ಧಾಂಗಿ ಶೋಕಿ | ದಾರೀಗಾದ್ರು ಬಿಟ್ಟಿಲ್ಲಾ ಕೀ |
ತಿಳಿದು ನೋಡಿ ಮುಂದ ನಡಿ ಮ್ಹಾಲಕ್ಕ ||

||ಇಳುವು||

ಭಕ್ತಿಯಿಟ್ಟು ಕರೀತಿನಿ | ನಗತ ಮಾಡೊ ನನ್ನ ಸಂಗ
ಒಲ್ಲೆನೆನ್ನುವ ಶಬ್ದ ಯಾಕ ಬಾಯೀಲಿ |
ನೀ ಗಂಡಸಾರೆ ಹೌದಲ್ಲೊ ಏನಲ್ಲೀ |
ಚಿಂತಿಯೊಳಗ ಚೈನಿಲ್ಲ | ಭ್ರಾಂತಿಗೆಟ್ಟು ತಿರುಗತೀನಿ
ಏನು ಕೊಟ್ರ ಬಂದಾ | ನನ್ನ ಹಂತೀಲಿ |
ಎಂದ ತೆಕ್ಕಿಮುಕ್ಕಿ ಹೊಡೆದು ಮಲಗೇನ ಪ್ರೀತೀಲಿ ||

||ಏರು||

ಆಲಪರೆದು ಚಾಲವರೆದು | ಕಾಲಬಿದ್ದು ಕರೀತೀನಿ
ಕರುಣಾ ಇಲ್ಲ ಏಳೊ ತುಸು ದರಕಾರ |
ನನ್ನ ಪ್ರಾಣಕೊಟ್ಟು ಕಾಣಸೇನು ಸರಕಾರ |
ಇವನ ಚಿಂತಿಯೊಳಗ ಜೀವಕ್ಕಿಲ್ಲ ಸ್ಥಿರಾರ |
ಕನಸಿನಾಗ ಕಂಡಾಂಗಾಯ್ತು | ಮನಸಿನಂದು ಹೋಗವಲ್ದು
ಹಲಸಂಗಿ ಊರಾಗಿಲ್ಲ ಇವನಂಥವರ ||

೪ನೆಯ ಚೌಕ

ಕಾಂತೀ ಮಾತ ಕೇಳಿ ಗೆಣ್ಯಾ | ಹಿಂದ ನೋಡ್ತಾನ ಎಂಥಾ
ವ್ಯಾಳೇ ತಂದಿ ಸ್ವಾಮಿ ಶಿವಶಂಕರ |
ಈ ರಂಡಿ ಅಬ್ರುದ ಮ್ಯಾಲ ನಿಂತಾಳ ನಿರ್ಧಾರ |
ಇದಕ ನೆವನ ಮಾಡಬೇಕೊಂದು ಫಿತೂರ |

ಮನ್ಯಾಗ ನಿನ್ನ ಅತ್ತಿ ಮಾವ | ಅಂಜತಾದ ನನ್ನ ಜೀವ
ಧರ್ಮಸಾಲೀಗ್ಹೋಗೂನ್ನಡಿ ಪರಭಾರ ||

ಹೊತ್ತು ಮುಳುಗಿದ ಬಳಿಕ ಯಾರೀಗಿ | ಗೊತ್ತಿಲ್ದಾಂಗ ಮುಂದ್ಹೋಗಿ
ಕುಂಡ್ರತೀನಿ ನೀ ಬಾರ ಬಿನ್‌ಘೋರ |
ನೀ ಆರು ತಾಸ ರಾತ್ರೀಗಿ ಬಾರ ಸುಂದರ |
ಬೆಚ್ಚ ಬೆಳಗಾನ ಮಾಡೂನಂತ ಗರ್ದಿಜುಮ್ಮರ |

ಘಂಟಾ ಹೇಳಿ ಹೊಂಟ ಹೋದಾ | ಗೆಣ್ಯಾ ತನ್ನ ಮನೀಕಡಿ
ತಿಳೀಲಿಲ್ಲ ಮುಂದಿಂದಿಕೀಗಿ ಹೂಣಾರ ||

ಹತ್ತು ಮಂದಿ ದಾರಿಕಾದ್ರು | ದಾರಿ ಹಿಡಿದು ಹೋಗುವಾಗ
ಕತ್ತಲಾಯ್ತು ಅವರೀಗಿ ಅಂಧಕಾರ |
ಅವರು ಊರು ನೋಡಿ ವಸ್ತಿ ಅಲ್ಲಿ ಇಳಿದಾರ |
ಊಟಾ ಮಾಡಿ ಅವರು ಧರ್ಮಸಾಲ್ಯಾಗ ಮಲಗ್ಯಾರ |

ಅತ್ತಿ ಮಾವ ಗಂಡಗುಣಿಸಿ | ಎಲ್ಲಾರೀಗಿ ಮಲಗಿಸಿ
ಆರು ತಾಸ ರಾತ್ರೀಗಿ ಹೊಂಟಾಳ ಅವಸರ ||

||ಇಳುವು||

ಅವಸರದಿಂದ ಅಡಾಡಿ ಮಾಡಿ | ತನ್ನ ಗೆಣ್ಯಾ ಹಾನಂತ
ಎಬ್ಸೂತನ ಇದ್ದ ಅಂವಾ ಹಾದಿಕಾರ |
ಅವನ ಬಾಯೀ ಕೇಳಿ ಎದ್ದು ಕುಂತ್ರು ಎಲ್ಲಾರ |
ಅವರು ಎತ್ತಿ ಒಯ್ದರು ಬೆಳಗಾನ ತಮ್ಮ ಊರ ||
ಗೆಣ್ಯಾ ಆಶೀ ಹಚ್ಚಿ ಫಾಸೀ ಮಾಡಿ | ಘಾಸೀ ಆಯ್ತು ನನ್ನ ಜೀವ
ಕೂತು ಅಳತಾಳ ಖೋಡಿ ಅದೃಷ್ಟಾ |
ಆಕೀ ಗಂಡಗ ಸುದ್ದಿ ಹತ್ತಿ ಕೇಳ್ಯಾನ ಕಿವಿ ಮುಟ್ಟ ||

||ಏರು||

ಹಲಸಂಗಿ ಊರ ಮೋಜಿನ ಶಾರಾ | ದಾದೇಪೀರನ ಮತಿ ಪೂರ
ಸಂಗೂ ವಸ್ತಾದ ರಾಯಪ್ಪನ ಹೆಸರ |
ಖಾಜಾ ಲಾವಣಿ ಮಾಡಿದಾನ ಇಲ್ಲ ಕಸರ |
ಇವನ ಚಿಂತಿಯೊಳಗ ಜೀವಕ್ಕಿಲ್ಲ ಸ್ಥಿರಾರ |
ಕನಸಿನಾಗ ಕಂಡಾಂಗಾಯ್ತು | ಮನಸಿನಂದು ಹೋಗವಲ್ದು
ಹಲಸಂಗಿ ಊರಾಗಿಲ್ಲ ಇವನಂಥವರ ||

ರಚನೆ :  ಖಾಜಾಭಾಯಿ
ಕೃತಿ :  ಜೀವನ ಸಂಗೀತ