ಕೈಲೆ ಕೊಟ್ಟ ಕಸಬೆರ್ನ ಹೋಗಬೇಕ ಖುಷಿಯಾಲಾ
ಗಂಡುಳ್ಳವರನ ಹೋಗುದು ಜೀವದ ಮ್ಯಾಲಾ     || ಪಲ್ಲ ||

ಒಂದ ಮಾತ ಹೇಳತಿನಿ ಮಾಡಬ್ಯಾಡ್ರಿ ಗುಲ್ಲಾ
ನೆಲೆ ಬೆಲಿ ಹೆಣ್ಣಿನ ಬಲಿ ಯಾವಗ ತಿಳಿದಿಲ್ಲಾ
ಗಂಡ ಹೆಂಡ್ರಿದ್ರ ಒಂದ ಊರ ಒಳಗ ಖುಷಿಯಾಲಾ
ಅವರವರಲ್ಲಿ ಪ್ರೀತಿ ಕೂಡಿದ್ಹಂಗ ಸಕ್ಕರಿ ಹಾಲಾ
ಗಂಡ ಇಲ್ಲದಾಗ ಹೆಣತಿ ಜೀವ ಆಗುದ ಹಾಲ ಚಾಲಾ
ಬೇಕಾದ್ದ ತಿನಿಸಿ ಕೈ ಕೈ ಎಳಿವುಳ ಮಾರಿಮ್ಯಾಲಾ
ಗಂಡ ಕಾಯಿ ವ್ಯಾಪಾರ ಮಾಡೋಣು ಕಡಗಿನ ಕಾಲಾ
ಒಂದು ದಿನ ಬಂದಿ ಹೇರಿ ಘಟ್ಟಕ ಹೊಂಟಾನಲ್ಲಾ
ನೋಡಿ ಹೆಣತಿ ಅಳತ ಕೊರಳಿಗೆ ಬಿದ್ದ ಖಬರಿಲ್ಲಾ
ನೀವ ಹ್ವಾದ ಮ್ಯಾಲ ಒಬ್ಬಾಕಿ ಜೋಡಿ ಯಾರಿಲ್ಲಾ

 

||ಚಾಲ||

ಎಲ್ಲಿ ಹೋಗಲಿ ಎನ್ನುವ ಮನಾ ಮ್ಯಾಲ ಹಗಣ ಮಾಡುತಾ
ಗಂಡ ಊರಿಗೆ ಹೋಗಾನಾ ಖುಷಿಯಾಲಾ ನಗತಾ
ಒಬ್ಬ ಗೆಣ್ಯಾನ ಮಾಡಬೇಕಂತಾ ಮಾಡ್ಯಾಳ ಮಸಲತ್ತಾ
ಕಂಡಾಪಟಿ ತಿರುಗಿ ಭಂಡಾಗಿ ಬರುವ ಈ ಮಾಲಾ
ನಾಳಿ ಗಂಡಗ ಸುದ್ದಿ ಹತ್ತಿರ ಆದೀತ ಘಾತಾ
ಕಂಡ ಕಂಡಾವನ ಮಾಡಬಾರದ ಗೌಡ ಕುಲಕರ್ಣಿ ಹೊರ್ತಾ

||ಏರು||

ಈ ಊರಿಗೆ ಹಿರಿಯರನ ಹಿಡದಿಂದ ಕೇಳಾವರ‍್ಯಾರಿಲ್ಲಾ
ಕೈಲೆ ಕೊಟ್ಟ ಕಸಬೆರ್ನ ಹೋಗಬೇಕ ಖುಷಿಯಲಾ||೧ನೆಯ ಚೌಕ||

ಇಷ್ಟ ತಿಳದ ಓಣಿ ಹಿಡದ ಹೊಂಟಾಳಾಗ ಹೊಯ್ಮಾಲಿ
ದೂರ ನಿಂತ ಗೌಡನ ಕರದಾಳ ಕೈಯ ಸೊನ್ನಿಲಿ

ನೀವ ಬರ್ರಿ ಗೌಡ್ರ ಯಾರಿಲ್ಲ ನಮ್ಮ ಮನೆಯಲಿ
ನನ್ನ ಗಂಡ ಘಟ್ಟಕ ಹೋಗ್ಯಾನ ತಿಳಿರಿ ಮನದಲಿ

ಮಾತ ಕೇಳಿ ಮನಸಾತ ಆಕಿಯ ಮಾರಿಯ ನೋಡಿ
ನಸು ನಗುತ ಅಂತಾನ ಬರತೇನಿ ಮೂರು ಸಂಜೇಲಿ
ಗೌಡಗ ಹೇಳಿ ಘಟ್ಟಿ ಮಾಡಿ ಮುಂದಕ ನಡದಾಳ ಬಾಲಿ
ಒಳೇ ಡೌಲಾಗಿ ಕೂತಿದ್ದ ಕುಲಕರ್ಣಿ ಚಾವಡಿಯಲ್ಲಿ
ಮರಿಗೆ ಹೋಗಿ ಕೈಸೊನ್ನಿ ಮಾಡ್ಯಾಳ ಉಮ್ಮೇದದಲಿ
ಮಾರಿ ನೋಡಿ ಓಡಿ ಬಂದ ನಿಂತ ಆಕಿಯ ಹಂತೇಲಿ

||ಚಾಲ||

ಏನ ಬೇಡತಿ ಬೇಡ ಕೈಯಾಗ ಕೊಡತೇನ ಹಿಡಿ
ನೀವೇನ ಕೊಡ ಬ್ಯಾಡ್ರಿ ಇಂದ ಹಾಂಗ ಬರ್ರಿ ಮನಿಕಡಿ
ಇಷ್ಟ ತಜವೀಜ ಹೇಳಿ ಹೊಳ್ಳಿ ಬಂದಾಳ ಪ್ಯಾಟಿಗಿ ಓಡಿ
ದೂದಪೇಡೆ ಮಾಜುಮ್ಮಾ ತಗೊಂಡಾಳ ಬುಂದೇದುಂಡಿ
ಮನಿಗಿ ಹೋಗಿ ಮಂಚ ಹಾಕಿ ಮೆತ್ತಗ ಹಾಸಿಗಿ ಮಾಡಿ
ತಯಾರಾಗಿ ಕುಂತಾಳ ಗೌಡನ ಹಾದಿಯ ನೋಡಿ

||ಏರು||

ಅಷ್ಟರೊಳಗ ಗೌಡ ಬಂದ ನಿಂತ ಬಡದ ಬಾಗಲಾ
ಕೈಲೆ ಕೊಟ್ಟ ಕಸಬೆರ್ನ ಹೊಗಬೇಕ ಖುಷಿಯಾಲಾ||೨ನೆಯ ಚೌಕ||

ಗೌಡನ ಸಪ್ಪಳ ಕೇಳಿ ಎನ್ನ ದೊರಿ ಬಂದಂತಾ
ಪೇಡೆ ಬರ್ಪಿ ತಿನಸತಾಳ ಗೌಡನ ತೊಡಿಮ್ಯಾಲಿ ಕುಂತಾ
ಅಷ್ಟರೊಳಗ ಬಂದ ಕುಲಕರ್ಣಿ ಮಚ್ಚಿಯ ಬಡಕೋತಾ
ಅವನ ಸಪ್ಪಳಾ ಕೇಳಿಕ್ಯಾರ ಗೌಡ ಅಂಜಿ ನಡಗೂತಾ
ಇನ್ಯಾಂಗ ಮಾಡಲೆಂತಾ ಘಾಬರ‍್ಯಾಗಿ ಓಡಾಡುತಾ
ಹಾದರಗಿತ್ತೇರ ಹಗಣಾ ಯಾರಿಗೂ ತಿಳಿಯದು ಅಂತಾ
ಗೌಡಗ ಹೇಳ್ಯಾಳ ದೇವರ ಮನಿಯಾಗ ಕೂಡ್ರಂತಾ
ಅಡರಾಸಿ ದೇವರಮನ್ಯಾಗ ಹೊಕ್ಕ ಮೂಲ್ಯಾಗ್ಹೋಗಿ ಕುಂತಾ
ಕೈ ಹಿಡದ ಕುಲಕರ್ಣಿನ ಕರತಂದಾಳ ಅಂತಾಳ ಬಾ ಅಂತಾ
ಬುಂದೇದುಂಡಿ ಮಾಜುಮ್ಮಾ ಬರ್ಪಿ ಪೇಡೆ ತಿನಸೂತಾ

||ಚಾಲ||

ಇವರ ಗರ್ದಿ ಒಳಗ ಗಂಡ ಘಟ್ಟದಿಂದ ಬಂದಾ
ತನ್ನ ಹೆಣತಿಗಿ ಒದರಿ ಲಗು ಕದಾತಗಿ ಅಂದಾ
ಅಕಿ ಕಿಂವಿಗಿ ಸಪ್ಪಳ ಬಿದ್ದೀತ ಗಂಡ ಕರಿಯುದಾ
ಅಂಜಿ ಉಚ್ಚಿ ಹೋದಾಳ ಪಲಾಪಲಾ ಖಬರಿಲ್ಲದಾ
ಹೌಹಾರಿ ಕುಲಕರ್ಣಿ ದೇವರ ಮನಿಗಿ ಓಡಿದಾ
ನಡಗ ಹುಟ್ಟೀತ ಇಕಿಗಿ ಕೆಳತನಕ ಮ್ಯಾಲಿನಿಂದಾ

||ಏರು||

ಅವರಿಬ್ಬರನಡಗಿಸಿ ಬಂದ ತಗದಾಳ ಬಾಗಿಲಾ
ಕೈಲೆ ಕೊಟ್ಟ ಕಸಬೆರ್ನ ಹೊಗಬೇಕ ಖುಷಿಯಲಾ||೩ನೇ ಚೌಕ||

ಘಾಬರ‍್ಯಾಗಿ ಗಂಡಗ ಅಡಿಗಿ ಮಾಡ್ಯಾಳ ಓಡ್ಯಾಡುತಾ
ಉಂಡ ಮಲಗ್ಯಾರ ಇಬ್ಬರು ಮುಂದ ಕೇಳರಿ ಗಮ್ಮತಾ
ನೀರಡಿಸಿ ಕುಲಕರ್ಣಿ ತಾಳಲಾರದ ಒದರಿದಾ
ಅಯ್ಯಯ್ಯೋ ಸಾಯತೇನ ಲಗು ನೀರ ಕುಡಸೆಂದಾ
ಗಂಡ ಕೇಳತಾನ ಹೆಣತಿಗಿ ಏನ ಒದರತಾವಂತಾ
ಹೆಣತೆಂತಾಳ ಬಹಳ ದಿನಾ ಆದೀತ ದೇವರ ಹಸ್ತಾ
ಬೆಂಡ್ಲ ಹೆಣ್ಣ ಮಳ್ಳ ಗಂಡಗ ಹೇಳತಾಳ ಸನಮಂತಾ
ಗೆಣ್ಯಾಗ ಹೇಳ್ಯಾಳ ಜಗಲಿ ಮ್ಯಾಲ ಕಾಯಿ ಇಟ್ಟತಿ ಅಂತಾ
ಅದನೊಡದು ಕುಡಿ ನೀರ ಜೀವ ಮಾಡಿಕೊಳ್ಳೊ ಶಾಂತಾ
ಅಕಿ ಮಾತ ಕೇಳಿ ಕುಲಕರ್ಣಿ ಎದ್ದಾನ ಕಾಯಿ ಹುಡಕ್ಯಾಡುತಾ

||ಚಾಲ||

ಜಗಲಿ ಮ್ಯಾಲ ಇಟ್ಟ ಕಾಯಿ ಕುಲಕರ್ಣಿ ಕೈಯಾಗ ಹಿಡದಾ
ಕಾಯ ಒಡೀಲಾಕ ಕಲ್ಲ ಕಾಲಿಲೆ ಮನ್ಯಾಗ ಹುಡುಕಿದಾ
ಇದರಗಷ್ಟ ಮಾಡಿಸಿಕೊಂಡ ಗೌಡ ಮೂಲ್ಯಾಗ ಕೂತಿದ್ದಾ
ಹುಡಕ್ಯಾಡೂತ ಕುಲಕರ್ಣಿ ಅವನ ತೆಲಿಮ್ಯಾಗ ಕೈ ಊರಿದಾ
ಭಲೆ ಗುಂಡಗಲ್ಲ ದೊರಿತಂತ ಕಾಯಿ ಬಿರಿಸಿಲೆ ಒಡದಾ
ಘಾಬರ‍್ಯಾಗಿ ಗೌಡ ಗಡಬಡಿಸಿ ಲಬ್ಬಿ ಕೈ ಹೊಡದಾ

||ಏರು||

ಅಯ್ಯಯ್ಯೋ ಸಾಯತನಂತ ಗೌಡ ಮಾಡಿದಾನ ಗುಲ್ಲಾ
ಕೈಲೆ ಕೊಟ್ಟ ಕಸಬೆರ್ನ ಹೊಗಬೇಕ ಖುಷಿಯಾಲಾ||೪ನೇ ಚೌಕ||
ತೆಕಮುಕ್ಕಿ ಹಾದ ನೆಗನೆಗವಿ ಒಗದ್ರ ಬಲ್ಲಂಗ
ಖಬರಿಲ್ದ ಕುಸ್ತಿ ಹಿಡದಾರ ದೇವರ ಮನಿಯಾಗ
ಇವರ ಗದ್ದಲಕ ಅಕಿ ಗಂಡ ಎದ್ದಾನ ಹಾಸಿಗ್ಯಾಗ
ತನ್ನ ಹೆಣತಿಗಿ ಅಂತಾನ ದೀಪಾ ಹಚ್ಚ ಲಗುಬ್ಯಾಗ
ಎಂತಾ ದೇವ್ರ ನೋಡೋಣಂತ ಒನಕಿ ತಕ್ಕೊಂಡ ಕೈಯಾಗ
ಕುಲಕರ್ಣಿ ಮಾರಿ ನೋಡಿದ ಮನಿಯಾಗ
ದೊಡ್ಡವರಂತ ಮಾನದ್ಲೆ ಹಾಕಿದ ಹೊರಗ
ಕರಾಕರಾ ಹಲ್ಲತಿಂದ ಸಿಟ್ಯಾದ ಹೆಣತಿಮ್ಯಾಗ
ತುರಬ ಹಿಡದ ಜಗ್ಗಿ ಹಾಕಿ ನಾಕ ಹೊಡದ ಬೆನ್ನಮ್ಯಾಗ
ರಟ್ಟಿ ಹಿಡದ ಜಗ್ಗಿ ಬಡದ ಮನಿ ಬಿಡಸಿ ಹಾಕಿದ ಹೊರಗ

||ಚಾಲ||

ಮಾನಗೇಡಿ ಮಾಡುದುಕ ಸೀರಿ ಕುಬಸ ಕಳಸಿ
ಸುಣ್ಣ ಕ್ಯಾಮಣ್ಣ ಮುಸಡಿಗಿ ಬಡದ ಓಣ್ಯಾಗ ನಿಲ್ಲಿಸಿ
ಊರ ತುಂಬ ಮೆರಸಿದಾರ ಕತ್ತಿ ಮ್ಯಾಲ ಕೂಡ್ರಿಸಿ
ಒಳೆ ಗರತಿ ಹೆಣತಿನ ಮಾಡಿಕೊಂಡ ಪುರಮಾಸಿ
ಸುತ್ತ ನಾಡೊಳಗ ಬಾಗೋಡಿ ಊರ ಒಳೆ ಬೇಸಿ
ಕಲಗಿ ಇಟ್ಟ ಡಪ್ಪ ಓಡಿ ಹೋದಾಳ ನಾಗೇಸಿ

||ಏರು||

ಕವಿ ಬಾಳಗೋಪಾಲನ ಹಾಡ ಹೊಡದ್ಹಂಗ ಮುಂಗಾರಿ ಸಿಡ್ಲಾ
ಕೈಲೆ ಕೊಟ್ಟ ಕಸಬೆರ್ನ ಹೊಗಬೇಕ ಖುಷಿಯಾಲಾ||೫ನೇ ಚೌಕ||

ರಚನೆ :  ಬಾಳಗೋಪಾಳ
ಕೃತಿ :  ಬಾಳಗೋಪಾಳನ ಲಾವಣಿಗಳು