೧ ನೆಯ ಚೌಕ

ಚಂದ್ರುಣಿ ಚಂದನದ ಗೊಂಬಿ | ರತ್ನದ ಕಂಬಿ |
ಆದಿ ಜಗದಂಬಿಹಂಗ ಡೌಲ |
ನಿನ್ನ ಸರಿ ಈಗ ದೇವತೇರು ಯಾರೂ ಇಲ್ಲ |
ಏನು ಬೇಡಿ ಬಂದೆ ಶಿವನಲ್ಲಿ ಎಷ್ಟು ಅಮಲ |

ಮದವೇರಿಸಿ ಹೊಂಟಂಗ ಆನಿ ಜಾತ ಪದ್ಮಿನಿ |
ಪಟ್ಟದಾ ರಾಣಿ ಗಾದಿ ಮ್ಯಾಲ ||

ನಿನ್ನ ಪ್ರಾಯ ತುಂಬಿದಾ ಹೊಳಿ | ಬಾಳಿಯ ಸುಳಿ |
ಚಂದ್ರನ ಕಳಿ ಕಸರಯಿಲ್ಲ |
ಆದಿ ವಿಷ್ಣು ಪಿಂಡ ಮಾಡಿದಾನ ತೆಗೆದ ಹೊಯ್ಲಾ |
ಬಿನ್ನ ಬ್ಯಾಸರಿಲ್ಲದೆ ತಿದ್ದಿ ಕೈ ಕಾಲ |

ಮಹೇಶ್ವರ ಜೀವದ ಧನಿ | ಬ್ರಹ್ಮ ಬರೆದ ಫಣಿ |
ಬೇಡಿ ಬಂದೆ ಜಾಣಿ ಸುಳ್ಳೇನಲ್ಲ ||

ನಿನ್ನ ಮೂಗ ಸಂಪಿಗೀ ತೆನಿ | ಮುತ್ತಿನ ಗೊನಿ |
ಕೋಗಿಲಂಗ ಧನಿ ಎಳಿಯ ಕಮಲ |
ಓಣಿ ಹಿಡಿದ ಹೊಂಟ ಕುಣಿದಂಗ ಗಂಡನವಿಲ |
ಮಂದಿ ದಂಗವರದ ನಿಂತನೋಡಿ ನಿನ್ನ ಮಜಲ |

ನಿನ್ನ ಒನಪ ನೋಡಿ ನಾ ಬೆರೆತ | ಮನಿಯ ಮಾರ ಮರತ |
ಹಾರಿತ ನನ್ನ ಸುರತ ಬಿದ್ದಂಗ ಸಿಡಲ ||

||ಇಳುವು||

ಈ ಹೆಣ್ಣ ತೇಜಿಯ ಮರಿ | ಉಚ್ಚಿದಂಗ ವರಿ |
ಅಲ್ಲ ಇಕಿ ಸರಿ ಶಿವನ ಮನಿ ರಂಬಾ ||
ಉಟ್ಟ ಶಾಲಿ ಪಿತಾಂಬರ ಜರದ | ಕಣ್ಣ ನೋಡಿ ತೆರೆದ
ಹೊರಟ ಮೂಗ ಮುರದ ಎಷ್ಟ ನಿನ್ನ ಜಂಬಾ ||
ನೀ ಹೆಣ್ಣ ರಾಧಿ ರುಕ್ಮಿಣಿ | ರತ್ನದಾ ಮಣಿ |
ಮಾವಿನ ಗೊನಿ ಉಚ್ಚಿದಂಗ ತುಂಬಾ |

||ಏರು||

ತುಂಬ ಉಚ್ಚಿದಂಗ ಮೈನರದಿ | ಭಾರದಾಗ ದೊರದಿ
ಕೇಳ ನನ್ನ ವರದಿ ಮಾಡಿ ಖುಲ್ಲಾ |
ನಿನ್ನ ಕಂಡು ಮರತ ಮನಿಮಾರ ಜಿಂದಗಿ ಎಲ್ಲ |
ಏನು ಬೇಡಿ ಬಂದೆ ಶಿವನಲ್ಲಿ ಎಷ್ಟು ಅಮಲ |

ಮದವೇರಿಸಿ ಹೊಂಟಂಗ ಆನಿ, ಜಾತ ಪದ್ಮಿನಿ
ಪಟ್ಟದಾ ರಾಣಿ ಗಾದಿ ಮ್ಯಾಲ ||

೨ನೆಯ ಚೌಕ

ಪರಸ್ತ್ರೀಯಳು ನಾ ಪತಿವರತಿ, ಗಂಡನುಳ್ಳ ಗರತಿ
ಮುಂದ ನಿಂದರತಿ ಯಾಕೊ ನಷ್ಟ |
ನನ್ನ ಕಂಡು ಯಾಸಿ ದೀಡಿ ಮಾತನಾಡುದು ಎಷ್ಟಾ |
ಅಣ್ಣಂತ ಕರೆದೆ ನಾ ಭಾಳ ಮಮತ ಇಟ್ಟಾ |

ಬಾಳ್ವೆಗೇಡಿ ಅಲ್ಲ ನಿನ್ನ ರೀತಿ | ಇದ್ದಿನಿ ಪತಿವರತಿ
ವ್ಯರ್ಥ ತಿಂದಿ ಲತ್ತಿ | ಬಲವಿನೇಟಾ ||
ಖಾನಖೂನ ಕೇಳತಿ ಗೊತ್ತ | ಬಂದ ಈ ಹೊತ್ತ
ಅಲ್ಲ ನಿನ್ನ ಮಾತ | ಇದ್ದೀ ಸೋಟ |
ನನ್ನ ಒಗತನ ಹರಿಸೀ ನಿಂದೇನು ಹೋಗೂದು ಗಂಟ |
ಜನದ್ಹರಲಿ ಹೊರಸಿ ಒಣಮಾಡಿಯೊ ಬೊಬ್ಬಾಟ |

ಮತಿಮಂದ ಮನಸ್ಯಾ ಪಾಮರ | ಎಲ್ಲಿ ಇಟ್ಟಿ ಖಬರ |
ತಿಳಿದು ನೋಡು ಪೂರ ಮನಸಗೊಟ್ಟಾ ||

ನಿನ್ನ ಎಲವು ಹಾಕಿಸೇನು ಗಾಳಿ | ಕಾಲ ಹಿಡಿದು ಸೀಳಿ
ಕಾಣಿಸ್ಯಾರು ಹೊಳಿ ಮಾಡಿ ಹಿಟ್ಟ |
ನನ್ನ ಭಾವ ಮೈದುನ ಗಂಡ ಭಾಳ ಕೆಟ್ಟ |
ಅವರು ಕೇಳಿದ್ರ ನಿನ್ನ ಪ್ರಾಣ ಕೊಂದಾರು ಸ್ಪಷ್ಟ |
ಇನ್ನು ಸರದ ಬಂತು ನಿನ್ನ ಆಶಿ | ಆದಿಯೊ ಘಾಸಿ
ಭಾಳ ಮಂದಿ ಫಾಸಿ ಬಿದ್ದಾರೊ ಎಷ್ಟ ||

||ಇಳುವು||

ನಿನ್ನ ಹೆಣ ಅಡವಿಯ ಪಾಲ | ಹಾದರಕ ಮೂಲ
ಒದಗಿ ಬಂತೊ ಕಾಲ ನಿನ್ನ ಸುತ್ತ ಕರ್ಮ |
ತಂಗೆಂತ ಕರೆದಿ ಈಸು ದಿನ | ಗಂಡನ ಬೈ ಮಾನ
ಕೆಡಿಸಿದಿ ಮಾನ | ಬೆಳೆಸಿದ್ಯೋ ವರ್ಮಾ ||
ಉಂಡಮನಿಗಳಾ ಎಣಿಸಾಂವ | ನಿಂದೆ ಆಡಾಂವ
ನಾಚಿಕಿಲ್ಲದಂವ | ಜೀವನಕ ತುಸು ಶರ್ಮಾ ||

||ಏರು||

ನಾ ನಿನಗ ಹೇಳತಿನಿ ತಿಳಿಸಿ | ತಿಳಿಯೊ ಮನದಾಸಿ
ನೋಡೋ ನೀ ಸೋಸಿ ಇನ್ನು ಮ್ಯಾಲ |
ಕಾಲೊದಗಿ ಬಂತು ನಿನ್ನ ಸುತ್ತ ಆಗಿ ಮೂಲ |
ಏನು ಬೇಡಿ ಬಂದಿ ಶಿವನಲ್ಲಿ ಎಷ್ಟು ಅಮಲ |
ಮದವೇರಿಸಿ ಹೊಂಟಂಗ ಆನಿ | ಜಾತ ಪದ್ಮಿನಿ
ಪಟ್ಟದ ರಾಣಿ ಗಾದಿ ಮ್ಯಾಲ ||

೩ ನೆಯ ಚೌಕ

ಭಲೆ ಭಲೆರೆ ಹೆಣ್ಣ ಹೊಯಮಲ್ಲಿ | ಬಲ್ಲೆ ನಿನ್ನ ನೆಲಿ |
ಮಾತ ನಿನ್ನಲ್ಲಿ ಎಷ್ಟು ಧಮಕಾ |
ಇಷ್ಟು ಧಾಕ ಹೇಳಿದರ ಅಂಜಾವಲ್ಲ ಜೀವಕ |
ಮುಂಚ ಮಲಗಂಟಿನೊಳೆ ಬರತಿದ್ದೆ ಮಂದಿರಕ |

ಬಲ್ಲಂಗ ಹಾಕಿದೆ ಗುದಮುರಗಿ | ನಂದ ನಿಂದು ವಾರಗಿ
ಮಾಡಿಸೆಂದ ಸರಗಿ ಕೊಳ್ಳಾಗ ಪದಕ ||

ಕುಚ ಹಿಡಿದರ ನಗತಿದ್ದ ಚಂದ | ಖುಷಿಯ ಮನದಂದ
ಅಕ್ಕರತಿಯಿಂದ | ಭಾಳ ಯಮಕ |

 ಮೈನರೆದಬಳಿಕ ಬರತೇನ ಅಂತ ಶಯನಕ |
ಮುಂಚೆ ನೀನೆ ಹೇಳಿದಿ ತಿಳಿದು ನೋಡ ಮನಕ |

ಕೇಳೂನಾ ಹಾರತಿ ಅಂತರಲಿ | ಎಷ್ಟು ನಿನ್ನ ಬಲಿ
ಎಳೆಯ ಕೋಮಲಿ ಸಾಕ ಮುರಕ ||

ನನ್ನ ಸುತ್ತ ಹಾಕತಿದ್ದಿ ಫೇರಿ | ಇದ್ದೆ ಸಣ್ಣ ಪೋರಿ |
ಕೊಂಡುಕೊಟ್ಟೆ ಕೊಬ್ಬರಿಯ ತಿನಲಾಕ |

 ಸುಳ್ಳಂದ್ರ ಸಾಕ್ಷಿ ನಿನ್ನ ಗೆಳತಿ ಹಾಳ ಇದಕ |
ಮಾಡಲಾರ್ದೆ ಬೊಬ್ಬಾಟ ಸುದ್ದಿ ಆಯ್ತ ಜನಕ |

ನೀಸುಳ್ಳೆ ಹೊತ್ತಿ ಒಣಹರಲಿ | ಯಾಕ ಬರವೊಲ್ಲಿ
ತಿಳಿಯೆ ಮನದಲ್ಲಿ ನಿನ್ನ ಜೀವಕ ||

||ಇಳುವು||

ನಿನ್ನ ಭಾವ ಮೈದುನ ಯಾವ | ಇಲ್ಲ ಅರಿದಾವ
ಎಲ್ಲಿ ಕಡಿದಾವ ಹೇಳಬ್ಯಾಡ ಫಂದ ||

ಕುಡುವಚನ ಗಳಿಸ ಮನಸ್ಯಾನ | ಇರಲಯೀ ಖೂನ
ಭಾಳ ದಿನ ತಾನ | ತಿಳಿದು ನೋಡ ಮುಂದ ||

ನೀ ಬೆಳೆಸಬ್ಯಾಡ ಒಣ ಹಿರಸ | ಮಾತಿನಾ ತುರಸ
ಹೇಡಿ ನಿನ ಪುರುಷ | ನೋಡಿದೆನ ಇಂದ ||

||ಏರು||

ಈ ವ್ಯರ್ಥ ಜನ್ಮ ಒಣಭ್ರಾಂತಿ | ಮಾತ ಕೇಳ ಕಾಂತಿ
ಮಾಡಿಕೊ ಸಂತಿ | ಇನ್ನ ಮ್ಯಾಲ

 ಈ ಪ್ರಾಯ ಮೀರಿದ ಮ್ಯಾಲ ಏನು ಮಾಡೂದು ತೊಗಲ |
ಏನು ಬೇಡಿ ಬಂದೆ ಶಿವನಲ್ಲಿ ಎಷ್ಟು ಅಮಲ |

ಮದವೇರಿಸಿ ಹೊಂಟಂಗ ಆನಿ | ಜಾತ ಪದ್ಮಿನಿ |
ಪಟ್ಟದ ರಾಣಿ | ಗಾದಿ ಮ್ಯಾಲ ||

೪ ನೆಯ ಚೌಕ

ನಾರಿ ಮರಳ ಆಗ್ಯಾಳ ತನ್ನ ಮನಕ | ಬರತ ಈ ಕ್ಷಣಕ |
ಬಂಗಾರಕ ತುಣಕ | ದೊರದಿ ನನಗ ||

 ಕೈಹಿಡಿದು ಕರಿಯತಾಳ ರಂಗಮಾಲಿನೊಳಗ |
ಗಾದಿ ಲೇಪ ಹಾಸಿದಾಳ ಚಪ್ಪರ ಪಲ್ಲಂಗ |

ನನ್ನ ಉಪ್ಪರ ಕುಚ ಒತ್ತಿ ಹಿಡಿರಿ | ಮೆಲ್ಲಕ ಗಲ್ಲ ಕಡಿರಿ
ಅನ್ಮಾನ ಮಾಡಿಗಿಡಿರಿ | ಮನಸಿನೊಳಗ |

ಮನ್ಮಥ ಸುರಿಸಿದಾಂಗ ಮಳಿ | ಕಾಮನಾಟ ಬಳಿ
ಚಿಕ್ಕ ಪ್ರಾಯ ಎಳಿ | ಕಮಲಿನಾಂಗ |
ಮನಸೋತು ಮನಸ ಇಟ್ಟು ಮರಳ ಆಗ್ಯಾಳ ಅವಗ |
ಮದವೇರಿ ಮನಿಗಿ ಹೋಗಿ ಕರಿತಾಳ ಗೆಣೆಯಾಗ |
ಗೆಣ್ಯಾಅಂದ ಆಯ್ತ ನನ್ನ ಕೆಲಸ | ಕೆಟ್ಟವ ನಿನ್ನ ಪುರುಷ
ಯಾತರ ವಿಶ್ವಾಸ | ಅವಂದು ನನಗ ||

ಸವಿ ಹಚ್ಚಿ ಗೆಣ್ಯಾಸರಕೊಂಡ |ಗೆಳತಿ ಗಾಳಿಗೊಂಡ
ಎಂದ ಸತ್ತಾ ಗಂಡ | ಅಂತಾಳ ಆಗ |
ಅವನ ಕೊಲ್ಲುವ ಯುಕ್ತಿ ಮಾಡ್ಯಾಳ ಮನಸಿನೊಳಗ |
ವಿಷತಂದು ಕೂಡಿಸ್ಯಾಳ ಚಿನ್ನಿಯ ಸಕ್ಕರ‍್ಯಾಗ |

ಹಾಲು ತುಪ್ಪ ನೀಡಿದಾಗ ಹಣಿಸಿ | ಸಕ್ಕರಿ ಸುರಿಸಿ
ಹೋಳಿಗಿ ಎಣಿಸಿ | ಕೊಟ್ಟಳವಗ |

||ಇಳುವು||

ಗಂಡ ಹಸಿದ ಉಂಡ ಒಳಿತಾಗಿ | ವಿಷಬಿತ್ತು ಹೋಗಿ
ಜೀವ ತಗಬೀಗಿ | ಆಯ್ತು ಸಂಕಷ್ಟಾ |

ನಿಮಗಗ್ರ ಆಗ್ಯಾವ ಒಳೆನೇಟ | ನಂಜ ಆಯ್ತ ಊಟ
ಹೋಳಿಗಿದು ಅಷ್ಟ | ಹೊಡಿಯತಾಳ ಘಾಟಾ ||

ಧಗಿ ಬಿದ್ದು ಪ್ರಾಣ ಬಿಟ್ಟ ಸವನ | ಕೊಂದಿದಾಳ ಮಾವನ
ಮಾಡಿ ಆಕಿ ನೆವನ | ಅಳುದು ಆರ್ಭಾಟಾ

||ಏರು||

ಬಡಕೊಂಡು ಅಳ್ತಾಳ ಹಾರಾಡಿ | ಜನ ಬಂತ ಓಡಿ
ಶಿವಾ ಕಿಡಿಗೇಡಿ | ಒಯ್ದಾನಲ್ಲ |

 ನನ್ನ ಗಂಡನ ಮ್ಯಾಲಿಂದು ನಾನೇಸಾಯಲಿಲ್ಲ |
ಅಳುವುದು ನೋಡಿ ಜನಗೋಳ ಹಿಡಿತ ಎಲ್ಲ |

ಮದವೇರಿಸಿ ಹೊಂಟಂಗ ಆನಿ | ಜಾತ ಪದ್ಮಿನಿ
ಪಟ್ಟದ ರಾಣಿ | ಗಾದಿ ಮ್ಯಾಲ ||

೫ ನೆಯ ಚೌಕ

ಊರ ಮಂದಿ ಜನಾ ಆಯ್ತ ಗ್ವಾಳಿ | ಕಂಬಳಿ ಮಾಡಿ ಚಾಳಿ
ಬಂದಿದಾರ ಹುಗಳಿ | ಮುಗಿತ ಝಟ್ಟ |
ನಾರಿ ಮನಸಿನೊಳಗ ಖುಸಿಯಾಲ ಆಗ್ಯಾಳ ಎಷ್ಟ |
ಆ ಕ್ಷಣಕ ಗೆಣ್ಯಾನ ಮನಿಗಿಹೋಗಿ ಹಾಕ್ಯಾಳ ಗಂಟ |

ನನ್ನ ಗಂಡಂದು ಹೇಳತಿದ್ದಿ ಧಾಕ | ಕೊಂದ ನಾಠೀಕ
ಅನುಮಾನಿನ್ನ್ಯಾಕ | ನಡಿರಿ ಲಗಟ ||

ಗೆಣ್ಯಾ ವಿಚಾರ ಮಾಡಿದಾ ತಿಳಿದ | ವಿಶ್ವಾಸೇನಿಕಿದ
ತನ್ನ ಗಂಡಂದ | ಪ್ರಾಣ ನಷ್ಟ |
ಜೀವ ಹೊಡಿಲಾಕ ಹಿಂದ ಮುಂದ ನೋಡಲಿಲ್ಲ ಎಳ್ಳಷ್ಟ |
ಒಂದು ಘಳಿಗಿಗೆಣ್ಯಾನಾ ಏನು ಇಕಿಗಿ ಸ್ಪಷ್ಟ ||

ಏಳ ರಂಡಿ ಯಾತರಿಶ್ವಾಸ |ಕೊಂದಿ ಮನಿ ಅರಸ
ನನಗ ಮಾಡೀ ಮೋಸ | ಹೋಗ ಹೊಂಟ ||

ಕೈಯಂದು ಬಾಯಂದು ಕಳಕೊಂಡ | ಕೊಂದ ನನ ಗಂಡ
ಆಯಿತವ್ವ ಭಂಡ | ನನ್ನ ಅದೃಷ್ಟ |
ನನ್ನ ಗಂಡ ಇರೂತನಕ ಮಾನವಿತ್ತ ಎಷ್ಟಾ
ಕರೆನಾಯಿ ಕೇಳದಂಗ ಈಗ ಆಯ್ತ ಇಷ್ಟಾ

ಊನಾಗಿ ಕುಂತ ನಾ ರಂಡಿ | ಎರವು ಆಯ್ತ ದಂಡಿ
ಭಾಗ್ಯದಾ ಬಂಡಿ ಹೋಯಿತ ಹೊಂಟ ||

||ಇಳುವು||

ಹಾದರಕ ಬೆಂಕಿ ಹಚ್ಚಲೆಂದ | ಗಂಡನ ಕೊಂದ
ತಿಳಿಯಲಿಲ್ಲ ಮುಂದ | ಅಂತಾಳ ಸುಂದರಾ ||
ಕಲಿ ಮಹಾತ್ಮದೊಳಗ ಇಲ್ಲ ಅಳತಿ | ಹೆಂಗಸರ ಜಗಳ ಅತಿ |
ರಾಣಿ ಇಲ್ಲ ಗರತಿ | ಉಳಿಯಲಿಲ್ಲ ಯಾರಾ ||
ಇರು ಗ್ರಾಮ ಹಲಸಂಗಿ ಊರ ಪ್ರಸನ್ನ ದಸ್ತಗೀರ
ದಾದೇಸಾಬ ಪೀರ | ಮತಿಯ ಕೊಟ್ಟ ಪೂರಾ ||

||ಏರು||

ಸಂಗುವಸ್ತಾದ ರಾಯಪ್ಪನ ಹೆಸರ | ಶಿಶಾ ಹಾನ ಶಿಖರ |
ಖಾಜಾ ಕವೀಶ್ವರ | ಅನಿಸಿ ಮಿಗಲ |
ಖಂಡೂನ ಸೂರ ವೈರೀಗಿ ಬಿತ್ತ ದಿಗಿಲ |
ಏನು ಬೇಡಿ ಬಂದಿ ಶಿವನಲ್ಲಿ ಎಷ್ಟು ಅಮಲ |
ಮದವೇರಿಸಿ ಹೊಂಟಂಗ ಆನಿ | ಜಾತ ಪದ್ಮಿನಿ
ಪಟ್ಟದ ರಾಣಿ | ಗಾದಿ ಮ್ಯಾಲ ||

ರಚನೆ : ಖಾಜಾಬಾಯಿ
ಕೃತಿ : ಜೀವನ ಸಂಗೀತ