೧ ನೆಯ ಚೌಕ

ಹೆಣ್ಣಸಲಜಾತ ಪದ್ಮಿನೀ | ಸುರತ ಚಂದ್ರುಣೀ |
ಹೊಂಟೆ ನಾಗಿಣೀ | ನೋಡ ತಿರುಗೀ
ಮರಿಗುದರಿ ಕುಣಿಸಿದಂಗ ನಾಜೂಕ ನಿನ್ನ ನಡಿಗಿ |
ಹೊಳಿನೀರ ತೆರಿಯ ಹೊಡಿದಂಗ ಒದುತೆ ನಿರಗೀ |

ತ್ರಿ ಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಿಗೀ |
ಗರಗರಾ ತಿರವತೇ ಕಣ್ಣ | ಕೆಂಪ ಮೈ ಬಣ್ಣ |
ಬೇತಲ ಸಣ್ಣ | ಕತ್ತಿಧಾರಿ |
ನಿನ್ನ ಕಂಡು ಪಕ್ಷಿಗಳು ನಿಂತು ಹೌವ್ವಹಾರಿ |
ನಿನ್ನ ನಡಿಗಿ ನೋಡಿ ನವಿಲ ಕುಣಿವುದ ಮರೆತಿತರಿ |

ನಿನ್ನ ಶಬ್ದ ಕೇಳಿ ಆಗಿ ಲುಬ್ದ | ಕೋಗಿಲೆ ನಾಚಿ ಕದ್ದ |
ವನಾ ಬಿಟ್ಟು ಎದ್ದ | ಹೋಯ್ತ ಹಾರಿ ||

ನಿನ್ನ ಕಂಡು ಬಂತು ಭವಳೀಕಿ | ಕಡದಂಗಾಯ್ತು ಚಿಕ್ಕಿ |
ಪಾರಿವಾಳದ್ಹಕ್ಕಿ | ಕೇಳ್ಯಾವ ಒದರಿ |
ಆದಿವಿಷ್ಣುನರ್ಧಾಂಗಿ ಅಲ್ಲ ಇಕಿಯ ಸರಿ |
ಇಕೀ ನಡಾ ನೋಡಿ ಸಿಂಹ ನಾಚಿ ತಿರುವಿತ ಮಾರಿ |

ಏನು ತಪ್ಪಿ ಹುಟ್ಟಿದಿ ತರುಣಿ | ಬತ್ತಿಸ ಲಕ್ಷಣಿ |
ಮಾತ ಕೇಳಿ ಗಿಣಿ | ನಾಚೀ ಬೆದರೀ ||

||ಇಳುವು||

ನಿನ್ನ ಮೂಗ ನೋಡಿ ಚವಣಕ್ಕಿ | ನಾಚಿ ಜೀವಥಾಕಿ |
ಇಲ್ಲ ಇಂಥಕ್ಕಿ | ಎಷ್ಟು ಇಕೀ ಝೋಕಾ ||
ಹಾಲಕ್ಕಿ ನೋಡಿ ಆಯ್ತು ಗಪ್ಪ | ಏನು ಇಕೀ ರೂಪ |
ಹಚ್ಚಿದಂಗ ದೀಪ | ಚಂದ್ರನ ಬೆಳಕ ||
ತಿದ್ದಿ ತೀಡಿ ಗೊಂಬಿಹಾಂಗ ಮಾಡಿ | ರಂಬಿ ನಿನ್ನ ತಾಡಿ
ಗರುಡ ಪಕ್ಷಿ ನೋಡಿ ನಾಚಿ ತನ್ನ ಜೀವಕ ||

||ಏರು||

ಭಲ್ಬಲಾ ಪಕ್ಷಿ ಹೋದು ಬೆರತ | ಹಾರಿತ ನನ್ನ ಸುರತ |
ಬಾರ ನೀ ಅರತ | ನನ್ನ ಮನಿಗೀ |
ನಾ ಬಿಟ್ಟಿನಿ ಅನ್ನ ನೀರ ನಿನ್ನ ಕಾಲಾಗ ಸೊರಗಿ |
ಹೊಳಿ ನೀರ ತೆರಿಯ ಹೊಡಿದಂಗ ಒದುತ ನಿರಗಿ |

ತ್ರಿಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಿಗೀ ||

೨ ನೆಯ ಚೌಕ

ಮಹಾ ಚತುರ ಕಾಣಿಸ್ತಿದಿ ಚದರ | ಎಲ್ಲಿ ಇಟ್ಟಿ ಖಬರ |
ಬಂದು ನನ್ನ ಇದರ | ಕೇಳುದ್ಯಾಕ |
ನಾ ಪಾತರದಾಕಿ ಅಲ್ಲ ಹಾದರ ಮಾಡುದಕ |
ನನ್ನ ಒಗೆತನ ಹರಿಸೀರಿ ನಿಮ್ಮ ಸಲಗಿ ಸಾಕ |

ಒಣ ಬಡವಾರ ಮಾತ ನಿಮಗ ಸಲುವಿ | ನಾ ಯಾವ ದೊಡ್ಡ ಚೆಲುವಿ |
ರಂಬಿ ನನ್ನ ನಿಲುವಿ | ನಾಚ್ಯಾಳಾಕ ||

ಸುಟ್ಟ ಹಂಚಿನಂಗ ಹೆಂಗಸ | ಮುಟ್ಟೆದರ ನಾಸ |
ಆಗೂದು ಖಾಸ | ಸಾವುತನಕ ||
ಯಾತಕ ಬಾರದಂಗ ಮಾಡೀನಂತಿರಿ ಮನಕ |
ನಾ ಮಾರಿ ಎತ್ತಿ ಹ್ಯಾಂಗ ತೋರಿಸಲೆವ್ವ ಜನಕ |

ನನ್ನಬರು ಹೋದೀತ ಕೈ ಮೀರಿ | ಬಿಡು ನನ್ನ ದಾರಿ |
ಬೆಂಕಿ ಹಚ್ಚರಿ | ಹಾದರ ಮಾಡುದಕ ||

ಗಂಡ ಜಾತಿ ಬೈಲ ಬಂಗಾರ | ನಿಮಗ ಏನು ಘೋರ |
ಕೇಳುವವರಾರ | ತಾಳಿರಿ ಬೆಳಕ |
ಬೇಕಾದ್ದು ಮಾಡಿದರ ನಿಮಗ ಏನು ಧೋಕ |
ಈ ಹೆಣ್ಣ ಜನ್ಮ ಶಿವ ಹುಟ್ಟಿಸಿದಾನ ಯಾಕ |
ಪತಿವ್ರತಾ ಹೋದೀತು ನಂದು ಕರಗಿ |  ಗಂಡನ ಸುರಗಿ |
ಬರಲಾರದಂಗ ತಿರುಗಿ | ಹೋದ ಬಳಿಕ ||

||ಇಳುವು||

ನಾ ಆದೇನು ಒಗೆತನಗೇಡಿ | ಜನದಾಗ ಖೋಡಿ |
ಹಾದರ ಮಾಡಿ | ಹರಲಿ ತಲಿಮ್ಯಾಲ ||
ಅಹಲ್ಯಾಂದು ಕೇಳಿಲ್ಲೇನು ಕತಿ | ಏನು ಆಯ್ತು ಗತಿ |
ಗೌತುಮಾಕೀ ಪತಿ | ಶಾಪ ಕೊಟ್ಟರಾಗಿ ಬಿದ್ದಳ ಕಲ್ಲ |
ಸೀತಾಗ ರಾವಣ ಒಯ್ದ ಇರ್ಷ | ರಾಮ ಆಕಿ ಪುರುಷ |
ಗೆದ್ದು ತಂದ ಅರಸ | ಹೊಡೆದು ಅವನ ಶಿರಸ |
ಸೀತಾಗ ಹೊಡಿ ಅಂತ ಹುಕಮ ಕೊಟ್ಟ ಖುಲ್ಲಾ ||

||ಏರು||

ಲಕ್ಷ್ಮಣಗ ಹುಕುಮ ರಾಮ ಕೊಟ್ಟ ಸೀತಾನ ತಗೊಂಡಹೊಂಟ
ಅರಣ್ಯದಾಗ ಬಿಟ್ಟ | ಬಂದ ತಿರುಗಿ |
ಸೀತಾಗ ವನವಾಸ ಸುಖ ಇಲ್ಲ ಘಳಗಿ |
ಹೊಳಿನೀರ  ಥೆರಿಯ ಹೊಡಿದಂಗ ಒದುತೆ ನಿರಗಿ |

 ತ್ರ್ರಿಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಿಗೀ ||

೩ ನೆಯ ಚೌಕ

ಗಂಡ ಜಾತಿ ಯಾತರಕ ಹೆಚ್ಚ | ಮಳ್ಳ ಆದ ಮುಂಚ |
ಭಿಲ್ಲಣಿಗಿ ಹುಚ್ಚ ಆದ ನೋಡಿ |
ಸಾಕ್ಷಾತ ಜಗದ್ಗುರು ಸಾಂಬ ತಿಳಿಯಗೇಡಿ |
ಹೆಂಗಸ ಮಾಯಿ ಗಂಡಸ ಹುಚ್ಚ ಖೋಡಿ |

ಇಬ್ಬರದು ಮಹತ್ವ ಆದ ಸವನ | ಸಿಂಪಗ್ಯಾನ ನೆವನ |
ಹಾದರಕ ಕವನ | ಸಾಂಬ ಮಾಡಿ ||

ನಿನ್ನ ಮಾತ ಅನುವದಿಲ್ಲ ಸುಳ್ಳ | ರತ್ನದ ಹಳ್ಳ |
ಆದೆ ನಾ ಮಳ್ಳ | ನಿನಗೆ ಖೋಡಿ |
ಈ ಹೆಣ್ಣಗಂಡ ಶಿವ ಹುಟ್ಟಿಸಿದಾನ ಜೋಡಿ |
ಇರವಿ ಎಂಬತ್ತುಕೋಟಿ ಜೀವರಾಸಿ ಮೊದಲ ಮಾಡಿ |

ಹೆಚ್ಚ ಕಮ್ಮ ಮಾಡಿಲ್ಲ ಗುರುರಾಯ | ತತ್ವದ ಕಾಯ |
ಮನ್ಮಥಕ ಮಾಯ ಪ್ರೀತಿ ಕೂಡಿ ||

ತಗದ್ಹೇಳ ಬ್ಯಾಡ ಒಣಕುಸಲ | ಜಾತಿಲಿದ್ದ ಮುಸಲ |
ಶಾಸ್ತ್ರದ ಶಿಕಲ | ಹೇಳ್ತ ಝಾಡಿ |

 ಎಷ್ಟೆಂದು ದೃಷ್ಟಾಂತ ನಾ ಹೇಳಲಿ ಖೋಡಿ |
ಪಾಂಡವರಿಗೆ ದ್ರೌಪದಿ ಪತಿವ್ರತಾ ಅನಸ್ಯಾಡಿ |

ಐದು ಮಂದಿ ಪುರುಷರನು ಬಿಟ್ಟ | ದ್ರೌಪದಿ ಮಾಡಿ ಕಪಟ |
ಕರ್ಣನಲಿ ಇಟ್ಟ | ಮನಸ ಮಾಡಿ ||

||ಇಳುವು||

ಎಲ್ಲ್ಯಾದ ನಿನ್ನ ಸುಟ್ಟ ಹಂಚ | ಹೇಳತಿದಿ ಮುಂಚ |
ಪತಿವ್ರತಾ ಅಂಚ | ಯಾವಾಕಿ ಹಾಳ ಗರತೀ ||

ಕಲಿ ಬರುವಾಗ ಏರಿತ ಕಲ್ಲ | ಗುಡ್ಡದ ಮ್ಯಾಲ |
ಕುಂಡಿಲೇ ಹುಲ್ಲ | ಮೇಯತಿತ್ತ ಕತ್ತೀ |
ಉಪರಾಟೆ ಕಲಿಯ ಕಾಲ | ಉಳಿಯಲಿಲ್ಲ ಶೀಲ |
ಗರತಿಗಿಲ್ಲ ಮೋಲ | ಹಾದರಗಿತ್ತ್ಯಾಗಿ ಕುಂತಾಳ ಗರತೀ ||

||ಏರು||

ಕಲಿಯಿದ್ದಾಂಗ ಮಾಡೂನು ರೀತಿ | ತಿನಿಸಬೇಡ ಗೊತ್ತಿ |

 ಬಿಟ್ಟು ಬಿಡು ಭೀತಿ | ತೊಳೆದು ಮನಸೀಗಿ |
ಶಿವ ಜೋಡಿ ನೋಡಿ ಗಂಟ ಹಾಕ್ಯಾನ ಇಬ್ಬರಿಗಿ |
ಹೊಳಿ ನೀರ ತೆರಿಯ ಹೊಡಿದಂಗ ಒದುತ ನಿರಿಗಿ |

ತ್ರಿಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಿಗೀ ||

೪ನೆಯ ಚೌಕ

ಕೇಳಿ ಮಾಯ ಬಂತ ಮನಕರಗಿ | ಹೇಳತಾಳ ತಿರಗಿ |
ಇಬ್ಬರದು ವಾರಗಿ | ಒಂದೆ ಜುತ್ತಾ |
ನಮನಿಮದು ಪಣಾ ಇಂದ ಕೂಡಿಬಂತು ವರತಾ |
ನಮ್ಮ ಮನಿಗಿ ಬಂದ್ರ ಬೊಬ್ಬಾಟ ಆಗುದು ತುರ್ತ |

ನಿಮ್ಮ ಮನಿಗಿ ಬರತ ನಡಿ ಚದರ | ಹಿಡಿದು ನಿಮ್ಮ ಪದರ ||
ಹುಣ್ಣಿವಿ ಚಂದರ | ನಿಮ್ಮ ಸುರತ ||

ಝಾಡಿ ಜಮಖಾನಿ ಜಾಜಮ ಹಾಸಿ | ಕುಂತಿದಾರ ಬೇಸಿ
ಯಾತರದ ಆಶಿ | ನಿಮ್ಮ ಹೊರತ |
ದ್ರವ್ಯದ ಕೊಡ ಇಂದ ಸಿಕ್ಕಂಗ ದೌಲತ |
ಕೈಲಾಸದಿಂದ ಶಿವ ಇಳದಂಗ ಈ ಹೊತ್ತ |
ಬತ್ತೀಸ ಕಾಮನಾಟಕ್ಹಚ್ಚಿ | ಮನ್ಮಥ ಹೆಚ್ಚಿ
ಮಾಯಕ ಮೆಚ್ಚಿ | ನಿಮಗೆ ಬೆರೆತ ||

ಕಮಲಾಕ್ಷಿ ಕಾಮಿನಿ ಕಸ್ತೂರಿ | ಉಲ್ಲಾಸ ಮಾಡಿ ಸೂರಿ |
ಕಲ್ಗಿಯವರ ಪೋರಿ | ಹಾಳ ಪತಿವ್ರತಾ |
ತುರಾಯ್ದವರ ಹುಡುಗನ ಕೂಡಿದಾಳ ಮರತ |
ಒಣ ಇರ್ಷದಿಂದ ವಾದ್ಹಾಕಿ ಆಯ್ತು ವ್ಯರ್ಥ |

ಪತಿವ್ರತಾ ಹೋಯ್ತು ಮಣ್ಕೂಡಿ | ಆಗಿ ಕುಂತ ಖೋಡಿ |
ನಿನಗ ಏನು ಧಾಡಿ ಮಾನ ಹೋಯ್ತು ||

||ಇಳುವು||

ಆಕಿ ಗಂಡಗ ಹತ್ತಿತ ಸುದ್ದಿ | ಕಳೆದೆ ರಂಡಿ ಬುದ್ಧಿ |
ಹಾಕಿದಾನ ಗುದ್ದಿ | ಹೋಗ ಹಳಿನಾಯಿ ||
ಸೆರಗ ಹರಿದ ಹೇಳ್ಯಾನೆಲ್ಲರಿಗಿ | ತವರ ಮನೀಗಿ |
ಬೀಬಿ ಇಂಗಳಗಿ | ಅಲ್ಲಿ ಇಕೀ ತಾಯಿ ||
ಗಂಡನಿಂದ ಇತ್ತು ನನಗ ಮಾನ | ಹೋಯ್ತ ಮುತ್ತೆಯ್ತನ |
ಆಗಿ ಕುತ್ತ ಊನ | ಆದೆ ಕಿಸಬಾಯಿ ||

||ಏರು||

ಕರನಾಟಕ ಹಲಸಂಗಿ ಊರ | ಮೆರಿಯತಾವ ತೂರ |
ಮಲಿಕ ಮೈತರ | ಹಚ್ಚಿ ವರಿಗಿ |
ಖಜ್ಯಾನ ಕವಿ ಸವಿ ಸಕ್ಕರಿ ಎಲ್ಲರಿಗಿ |
ಖಂಡೂನ ಸೂರ ಕೇಳಿ ಕಲ್ಲ ಮನಸ ಕರಗಿ |
ಹೊಳಿನೀರ ತೆರಿಯ ಹೊಡಿದಂಗ ಒದುತೆ ನಿರಗಿ |
ತ್ರಿಲೋಕ ತಿರುಗಿ ಬಂದ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಿಗೀ ||

ರಚನೆ : ಖಾಜಾಬಾಯಿ
ಕೃತಿ : ಜೀವನ ಸಂಗೀತ