೧ ನೆಯ ಚೌಕ

ಗಿಡ್ಡಪೋರಿ ಮಡ್ಡ ಹರಿ ಮಕ್ಕರ್, ಕಣ್ಣ ತಿರುವಿ ಚಕ್ಕರ್
ನಿಂತು ನೀ ನಕ್ಕರ ಉಳ್ಳತಾವ ಮುತ್ತ |
ವಸ್ತಕಾರಿಪಟ್ಟಿ ವಾಲಿಗಂಟಿ ಮೂಗನಾಗ ಸರಾಜಮನತ್ತ |
ಶ್ರೀಸಾನಿಧಪ ಪಧನೀಸ ಸರಿಗಮ ನಾರಿ ನಿನ ಗತ್ತ |
ನಮ್ಮ ಕಂಡು ಹೋಗ ಬ್ಯಾಡ ಚದರಿ | ಓಡಿದಾಂಗ ಬೆದರಿ ಕಾರ‍್ಹುಣವಿ ಎತ್ತ ||

ಏನು ಮುಂಗಾರಿ ಮಳಿಹಾಂಗ ಸಿಡಲ್ | ಬಿದ್ದಿತು ಖಡಲ್
ಎದಿ ಅಂತು ಧಡಲ್ ಆಗಿ ನಿಂತೆ ಮೂಕ |
ನಿನ್ನ ಸುರತ ಕಂಡು ಮೈ ಮರೆತ ಮಾತಾಡ ಧಾರಿತ ತರ್ಕ |
ಮತ್ತ ಯಾದ ಹಚ್ಚಿ ಶೋಧ ಮಾಡಿ ಕೇಳತ ನಿನಗೊಂದು ಸೋಕ |

ಕುಡು ಭರಸ ಮಾಡೂನು ಸರಸ ಬೆಳ್ಳ ಬೆಳತನಕಾ ||
ನಿನ್ನ ಎದಿ ಮ್ಯಾಲ ಕುಚಗಳು ಬಗರಿ | ನಿಂತವ ನಿಗರಿ
ಗಂಡೆರಳಿ ಚಿಗರಿ ಹಾಂಗ ನಿನ್ನ ರೂಕಾ |
ಸಣ್ಣ ಶಾಲಿ ಉಟ್ಟ ಓಣಿಗುಂಟ ಪೋರಿ ಎಷ್ಟ ಮಾಡತಿ ಮುರಕ |
ನೀರ ಥೆರೀ ಹಾಂಗ ನಿರಗಿ ಒದ್ದು ನಾರಿ ನಡೆವುದು  ನಾಜೂಕಾ |
ಆನಿ ನಡಿದಾಂಗ ಮಾಡಿ ಸಿಂಗಾರ ಮೈಮ್ಯಾಲ ಬಂಗಾರ ಬಿದ್ದಂಗ ಬೆಳಕ ||

ನಿನ್ನ ಬೆಲಿ ಹೇಳ ಬಾಲಿ ಎಷ್ಟರದ ಹೋಗಬ್ಯಾಡ ಮುರದ
ವಸ್ತ ಭಂಗರದ ತಗೊ ನಿನ್ನ ತೂಕ |
ಇದಕನುಮಾನ ಯಾಕಿನ್ನ ಬಿಡು ನಿನ್ನ ಮನದಾನ ತೊಡಕ |
ಈ ಜನ್ಮಕ ಬಂದ ಮೂರ ದಿನದ ಸಂತೀ ಮಾಡೂನು ಬಾ ಖಡಕ
ಈ ಹರೇ ಹೋದ ಮ್ಯಾಲಸರದ ಅಲ್ಲಿಂದ ಬರದ ಈಗಿನ ಧಮಕ ||

||ಇಳುವು||

ಈ ಭಾರದಾಗ ಕುಡು ಕೈಯ ಒಲ್ಲ ಅನಬ್ಯಾಡ
ನಡಿ ರಂಗಮಾಲದಾಗ ಬಂದ ಕೂಡ ನನ್ನ ಜೋಡ | ನನ್ನ ಜೋಡ

ಯಾವ ಮಾತಿಂದೇನು ಕೊರತಿಲ್ಲ ಮನ್ಯಾಗ ಉಂಡಾಡ | ಉಂಡಾಡ
ಸ್ವತ ನಡಿಸಿ ಕುಡತ ನನ್ನ ಜೀವದ ಮ್ಯಾಲ ನೀ ಕಾಡ | ನೀ ಕಾಡ

ಹಿಂಗ ಪೋರಿಗಿ ಹೇಳ್ಯಾನ ಬೆಳಸಿ | ಒಳಿತಾಗಿ ತಿಳಸಿ
ತಾಯಿ ತಂದಿ ಗಳಿಸಿ ಇಟ್ಟಾರ ಮಸ್ತ |
ಮತ್ತ ದೌಲತ ನಾವು ಕುಂತ ಉಣ್ಣೂನಂತ ಬಂಗಾರ ತುತ್ತ |
ಶ್ರೀ ಸಾನಿಧಪ ಪಧನಿಸ ಸರಿಗಮ ನಾರೀ ನಿನ್ನ ಗತ್ತ |
ನಮ್ಮ ಕಂಡು ಹೋಗಬ್ಯಾಡ ಚದರಿ ಓಡಿದಾಂಗ ಬೆದರಿ ಕಾರ‍್ಹುಣವಿ ಎತ್ತ

೨ ನೆಯ ಚೌಕ

ಯಾಕೊ ಗಂಡುಳ್ವ ಬಾಲೇರಿಗಿ ಹಟಕ್ | ಕೇಳತಿ ಕೀಟಕ್
ಅವನ ಮ್ಯಾಲ ಚಟಕ್ ಮುರದಾಳ ಬಟ್ಟ |
ನನ್ನ ಪುರುಷ ಹಾನ ದುರುಷ ಖಾಲೆ ಇರ್ಸ ಬೆಳಸಬ್ಯಾಡ ನೀ ತಂಟ
ನನ್ನ ಸೋದರ ಮಾವ ಕೆಟ್ಟಾವ ನಿನ್ನ ಜೀವ ಮಾಡ್ಯಾನು ಚಟ್ಟಾ
ನಿನ್ನ ಮನದಾಗ ನೋಡೋ ತಿಳಿದ | ಕಾಲ್ಹಿಡಿದೆಳದ ಕಿತ್ತ್ಯಾರೊ ಜುಟ್ಟಾ
ಕಂಡ ಕಂಡಲ್ಲಿ ತರಬತಿ ಸಂದ್ಯಾಗ | ಮಾನ ಕಳಿದೀ ಮಂದ್ಯಾಗ
ಹಾಕಿಸೇನು ಬಂದ್ಯಾಗ | ಇದ್ದಿ ಮರಸೋಟಾ |
ಖಾಲೆ ಭಂಡ ಮಾಡಿ ದಂಡ ಕೊಟ್ಟಿ ಹ್ವಾಂಡ ಇದ್ದಿ ಭಾಳ ಅಡಮುಟ್ಟ
ಈ ಸರ್ಕಾರೊಂಡು ಪ್ರಕಾರಾದ ಕಾಣಸ್ಯಾರು ತುರಂಗ ಘಾಟ

ನಿನಗ ಬೇಡೀ ಹಾಕಸೇನು ಒಯ್ದ | ಅಲ್ಲಿಂದ ಕಯ್ದ ಭೋಗಸುದು ಕಷ್ಟ ||
ಬಾಳಕೆಟ್ಟಾದ ಹೆಣ್ಣಿನ ಇರಸ | ಲಂಕಾದರಸ
ಮಂಡೋದರಿ ಪುರಷ ರಾವಣ ಕುಷ್ಟಾ |
ಮೈಗಿ ಬೂದಿ ಧರಿಸಿ ಸಾಧು ಆಗಿ ಸನ್ಯಾಸಿ ರೂಪ ತೊಟ್ಟ |
ಅವ ಕಪಟದಿಂದ ಹೋದ ಅಲ್ಲಿ ಸೀತಾನ ಬಲ್ಲಿ  ಬೇಡಿದಾ ಹಿಟ್ಟ |
ಮಂಡಲದೊಳಗಿದ್ದರೇನು ಕಿಮ್ಮತ ಹೊರಗ ಬರೂನಾಮಾತ
ಎತ್ತಗೊಂಡು ಹೊಂಟ ||

||ಇಳುವು||

ಸೀತಾನ ಸಲುವಾಗಿ ಲಂಕ ಸುಟ್ಟ ಮಾರುತಿ | ಮಾರುತಿ
ಭಾಳ ಮಂದಿ ಮಡೀತೋ ಮುಳುಗಿ ಹೋಯ್ತು ಸಂಪತಿ
ಕೌರವನ ಹೊಡಿಸಿ ಬಿಟ್ಟಾಳ ಪಾಂಡವರ ದ್ರೌಪತಿ | ದ್ರೌಪತಿ

||ಏರು||

ಭೀಮಸೇನಂದು ಇತ್ತು ಒಳೆ ಧಸಕ | ತುಳದಾನ ಕಚಕ
ಆವಾಗ ಕೀಚಕ ಸೊಕ್ಕ ಮುರಿದು ಸತ್ತ |
ಈ ಹೆಣ್ಣಿಗಾಗಿ ಮಣ್ಣಗೂಡಿ ಮುಳುಗಿ ಹೋಗ್ಯಾವ ದೌಲತ್ತ |
ಶ್ರೀಸಾನಿಧಪ ಪಧನಿಸ ಸರಿಗಮ ನಾರಿ ನಿನ ಗತ್ತ |
ನಮ್ಮ ಕಂಡು ಹೋಗಬ್ಯಾಡ ಚದರಿ ಓಡಿದಾಂಗ ಬೆದರಿ ಕಾರ‍್ಹುಣವಿ ಎತ್ತ ||

೩ ನೆಯ ಚೌಕ

ಪೋರಿ ಹೇಳಬ್ಯಾಡ ನನಗೊಂದು ಅಕಲ | ಕೃಷ್ಣನ ಗೋಕುಲ |
ಒಳಗಿನ ದಾಖಲ | ಕೇಳ ಶಾಣೇರಗಿ |
ಆ ಶ್ರೀಹರಿ ಶರಾಸೂರಿ ಮಾಡಿದಾ ಗೌಳಗೆರಗಿ |
ಆಂವ ಹದಿನಾರು ಸಾವಿರ ಭೋಗಿಸಿದಾ ಗೋಪ್ಯಾರಿಗಿ |

ನೀ ತಗೀಬ್ಯಾಡ ಖಾಲೇ ಕುಸಲ ಮಾತಿನ ಹಾಸಲ ಕೇಳ ತುಸು ತಿರಗಿ |
ನಿನ್ನ ಮಾವಂದು ಇಟ್ಟಿದಿ ಹಿಮ್ಮತ | ಅವಂದೇನು ಕಿಮ್ಮತ
ಮಾಡೂನು ಬಾ ಗಮ್ಮತ | ಇಂದ ರಾತರಿಗಿ |
ಶಿವ ಹುಡುಕ್ಯಾಡಿ ಸಮಜೋಡಿ ಗಂಟ ಹಾಕ್ಯಾನ ಇಬ್ಬರಿಗಿ |
ನಿನ್ನ ದೈವ ಭಾಳ ಸವ್ವಮೊಳ ಹಾಂಗಂತ ದೊರೆದೆ ನನ್ನ ವಾರಿಗಿ |
ನಾ ಎಷ್ಟು ಹೇಳಲೆ ಹುಚ್ಚೀಗಿ ಐದು ಹೂವ ಹೆಚ್ಚೀಗಿ ಹಾಕ ದೇವರಿಗಿ ||

ನಿನ್ನ ಗಂಡಂದು ಹೇಳಬ್ಯಾಡ ಬಿರದ | ಅಂವ ಅಲ್ಲ ಮರದ |
ನುಂಗೇನ ಅರದ | ಅದು ಯಾವ ಭಾರಗಿ |
ಇಷ್ಟು ದಮ್ಮ ಬ್ಯಾಡ ಸುಮ್ಮ ಬಾ ಅಂಜಬ್ಯಾಡ ನೀ ಯಾರ‍್ಯಾರ್ಗಿ |
ನಿನ್ನ ಕೊಳ್ಳ ಆಣಿ ಸುಳ್ಳ ಅಲ್ಲ | ಕೇಳ ಉಬೇ ಊರಿಗಿ |
ನಾ ಸುಳ್ಳೇ ಹೇಳೂದಿಲ್ಲ ಬಡಾಯಿ ಮಾಡೇವು ಲಡಾಯಿ ಜಗಳ ಮಾರೀಗಿ ||

||ಇಳುವು||

ನೀ ಮಾಡಿ ನೋಡ ಹಾದರ ಅಂಬುದು ಹಸಿ ಹಾಲ | ಹಸಿ ಹಾಲ ||
ತಂದಂಗ ಸುಲದ ಕೇರಿ ಕರೀಕಬ್ಬ ಭಾಳ ಸವಿ ಬೆಲ್ಲ | ಸವಿ ಬೆಲ್ಲ ||
ಅಮೃತ ಫಲ ಜೇನುತುಪ್ಪ ಇದರ ಮುಂದಲ್ಲ | ಮುಂದಲ್ಲ ||

||ಏರು||

ಏನು ಮಾವಿನ ಕಾಯಿ ಬಂತು ಪಾಡಕ | ಗಿಣಿ ಕೂತು ಗಿಡಕ
ಕಡಿದು ಒಗೀತು ಬುಡುಕ | ಕೊಳತಿತು ವ್ಯರ್ಥ |
ಹಾಂಗ ಕೊಳತ ಹೋದೀ ಎಳತ ಯಾಕ ಹಚ್ಚಿದಿ ಮಾಡ ಖೂನ ಗುರುತ |
ಶ್ರೀಸಾನಿಧಪ ಪಧನಿಸ ಸರಿಗಮ ನಾರಿ ನಿನ ಗತ್ತ |
ನಮ್ಮ ಕಂಡು ಹೋಗಬ್ಯಾಡ ಚದರಿ | ಓಡಿದಂಗ ಬೆದರಿ ಕಾರ‍್ಹುಣವಿ ಎತ್ತ |

೪ನೆಯ ಚೌಕ  –

ಬಾಲಿ ತಿಳಿದಾಳೊ ತನ್ನ ಮನಕ | ನನ್ನ ಒಗತನಕ |
ಗರತೆಂಬು ಗುಣಕ | ಹಚ್ಚ ಬ್ಯಾಡ ಧಕ್ಕಿ |
ಬರೂ ರೀತಿಯಿಂದ ರಾತರ‍್ಯಾಗ ಬಂದು ಹೋಗೋ ಮಂದಿ ಅಂಜಿಕಿ |
ನನ್ನ ಮಾವ ಮುಪ್ಪಿನವ ಕಣ್ಣ ಹೋಗಿ ಕುಂತಾಳತ್ತಿ ಮುದಕಿ |

ಪೋರಿ ನಿಂತಾಳ ಗೆಣೆಯನ ಇದರ | ಹಿಡಿಸ್ಯಾಳ ಪದರ
ನನಗಿಲ್ಲ ಆಧಾರ | ಪರದೇಶಿ ಹಕ್ಕಿ |
ನನಗ ಪಿಂಜರದಾಗ ಹಾಕಿ ಒಯ್ದು ಸಾಕಿ ಮಾಡಂತಾಳ ಜೋಕಿ |
ಅವನೀಗಿ ಹೀಂಗಂದು ಮನೀಗಿ ತಂದು ಕುಂಡ್ರೆಂತ ಕೊಟ್ಟಾಳ ಚೌಕಿ |
ಪಂಚಾಮೃತ ಮಾಡ್ಯಾಳ ಅಡಗಿ | ಹಾಳ ಸಣ್ಣ ಹುಡುಗಿ ಇಲ್ಲ ಬ್ಯಾಸರಕೀ ||

ಗೆಣ್ಯಾ ನಗಲಾಗ ಹಾಲತುಪ್ಪ ಹಣಸಿ | ಮುಂದ ಕೂತು ಉಣಿಸಿ
ಮ್ಯಾಲ ಎಣ ಎಣಸಿ | ಕೊಟ್ಟಾಳೆಲಿ ಅಡಕಿ |
ಆಕಿ ಅಬೀರ ತಂದು ಅಷ್ಟಗಂಧ ಮೈಗೆಲ್ಲ ಹಚ್ಯಾಳ ತಿಕ್ಕಿ |
ಸಣ್ಣ ಕುಬಸಿನ ಗಂಟ ಬಿಚ್ಚಿ ಎದಿಗ್ಹಚ್ಚಿ ಹೊಡಿದಾಳ ತೆಕ್ಕಿ |
ಭೋಗ ಕುಡತಾಳ ಗುಲಗಲಸಿ | ಅವನಿಗಿ ಭುಲಾಸಿ ಬಿಟ್ಟಾಳ ಆಕಿ ||

||ಇಳುವು||

ಮನ ಸಂತೋಷಾಯ್ತು ಬೆಳಗಿದಂಗ ಮಳಿ ಕುಟ್ಟಿ | ಮಳಿ ಕುಟ್ಟಿ ||

ಸುತ್ತ ರಾಜ್ಯದಾಗ ಹಲಸಂಗಿ ಊರ ಕರಿ ಕೋಟಿ | ಕರಿ ಕೋಟಿ ||
ಗುಡುಬಾಳು ವಸ್ತಾದರ ಆ ಕಡಿ ನಡಗಟ್ಟಿ | ನಡಗಟ್ಟಿ ||

||ಏರು||

ಸಿದ್ದು-ಶಿವಲಿಂಗ ಹಾಡೂದು ವರಸಿ | ಧನಿ ಎತ್ತರಿಸಿ
ನುಡಿ ಕತ್ತರಿಸಿ | ಸುರಿದಾಂಗ ಮುತ್ತ |
ಶೇಕು ಬಾವಶ ಔಂದಶ ಹರದಾಸಿ ಕೇಳಿ ಆಂವ ಮರ್ತ |
ಶ್ರೀಸಾನಿಧಪ ಪಧನಿಸ ಸರಗಮ ನಾರಿ ನಿನ್ನ ಗತ್ತ
ನಮ್ಮ ಕಂಡು ಹೋಗಬೇಡ ಚದರಿ, ಒಡಿದಂಗ ಬೆದರಿ ಕಾರ‍್ಹುಣವಿ ಎತ್ತ ||

ರಚನೆ :
ಸಿದ್ಧು -ಶಿವಲಿಂಗ
ಕೃತಿ : ಜೀವನ ಸಂಗೀತ