೧ ನೆಯ ಚೌಕ

ನೀ ಬಾರ ಕರ್ರನ ಕರೀ ಹುಡಿಗಿ | ಕರೀ ಸೀರಿ ಉಡಿಗಿ |
ನವಿಲಿನಾಂಗ ನಡಿಗಿ ನಡುತೆ ಸವನಾ |
ಕರಿ ಕೂದಲ ಬೇತಲಿ ತೀಡಿ ತೆಗೆದ ಸಣ್ಣ |
ಕರಿ ಹುಬ್ಬ ಕೊರೆದಂಗ ಕರಿಕಾಡಿಗಿಗಣ್ಣ |

ಏನು ಹೇಳಲಿ ನಾರಿ ನಿನ್ನ ಕಪ್ಪ | ಎಂಥ ನಿನ್ನ ರೂಪ
ಆಯಿತ ನೆಪ್ಪ ನೀಲದ್ದಣ್ಣ ||

ಕರಿ ಹಣಚಿಬಟ್ಟಿನ ಖಲಿ | ಗಲ್ಲದ ಮ್ಯಾಲ ಬಾಲಿ
ಹಲ್ಲಿಗಿ ಜಾವೇಲಿ ಹಚ್ಚಿದಿ ತುಂಬ |
ಕರಿ ಕರಿ ಮಣಿ ಕೊರಳಾಗ ಒಪ್ಪತಾವ ರಂಭಾ |
ಮೈನರೆದೆ ಉಚ್ಚಿಧಂಗ ಕರಿ ಮಾವಿನ ತುಂಬ |

ಕರಿಗೋಟ ಕೈಯಾಗ ಬಳಿ | ಚಿಕ್ಕ ಪ್ರಾಯ ಎಳಿ
ನಿನ್ನ ಈ ಬೆಳಿ ಕರಿ ಬಾಳಿಯ ಬಂಬಾ ||

ನೀ ಬಾರ ಕರ್ರನ ಕರಿ ಸ್ವಾಗಿ | ಆಯ್ತ ತಗಬೀಗಿ
ಹೋಗತೇ ಸಾಗಿ ಹಾಯ್ದು ಇಂಬಾ |
ಗಣಿ ಹೂಡಿ ಮಿಣಿಯ ಮ್ಯಾಲ ನಡೆದಾಂಗಾಯ್ತು ಡೊಂಬ |
ಏನು ಸುದ್ದ ತೋಳ ತೊಡಿ ಕರಿಕಾಜಿನ ಕಂಬಾ |

ಮದವೇರಿಸಿ ಹೊಂಟಂಗ ಗೂಳಿ | ಕರಿಯ ಗಂಡೆರಳಿ
ಖಂಡೋಬನ ಮುರಳಿ ಕುಚಾ ಕುಂಭಾ |

ಯಾರಾರು ಇಲ್ಲ ನಿನ್ನ ಸರಿ | ಸೃಷ್ಟಿಯೊಳು ಧೊರಿ
ಕಂಡಾಂಗ ಎರಿ ನೆಲಿಯ ಗುಂಬಾ |
ಮುಂಚ ಮಥನ ಮಾಡುವಾಗ ಹುಟ್ಟಿಸಿದನ ಸಾಂಬ |
ಕರಿ ಕತ್ತಲಿ ರೂಪಕ ಅನಿಸಿದೆ ಜಗದಂಬ |

ನಿನ್ನ ಕಂಡು ಹಾರಿತು ನನ್ನ ಹರಣ | ತುಸು ಇಲ್ಲ ಕರುಣ
ಕರೀ ನೀಲವರಣ | ನಿಂದು ಜಂಬಾ ||

||ಇಳುವು||

ಕರಿಚಂದ್ರಕಾಳಿ ಉಟ್ಟಿಸೀರಿ | ಕುಬಸ ಪುಟದೊರಿ
ನಿಂತ ಹೌಹಾರಿ | ನೋಡಿ ನಿನ್ನ ಡೌಲಾ ||
ನಿನ ಮೂಗ ಕಾಡಿಗೀ ತೆನಿ | ಹೆಣ್ಣನಾಗಿಣೀ
ಸಣ್ಣಸ್ವರ ಧನೀ | ಕರಿಯ ಕೋಗಿಲಾ ||
ನಿನ್ನ ಕಂಡು ಮರತೆ ನನ್ನ ಮನಿ | ಮಾತನಾಡ ಜಾಣಿ
ಕರಿಯ ಮದ್ದಾನಿ | ಏರಿದಂಗ ಅಮಲಾ ||

||ಏರು||

ಕರಿ ಕುತನಿಯಂಥ ಕಾಮಿನಿ | ಕಾರೆಳ್ಳದ ಗೊನಿ
ದೃಷ್ಟಿಯ ಮಣಿ | ಇದ್ದಂಗ ವರಣ
ಭಾಳ ಕಷ್ಟದಿಂದ ಶಿವ ಹುಟ್ಟಿಸಿ ನಿನ್ನ ಬಣ್ಣ
ಕರಿ ಹುಬ್ಬ ಕೊರೆದಂಗ ಕರಿ ಕಾಡಿಗಿ ಕಣ್ಣ |
ಏನು ಹೇಳಲಿ ನಾರಿ ನಿನ್ನ ಕಪ್ಪ | ಎಂಥ ನಿನ್ನ ರೂಪ
ಆಯಿತ ನೆಪ್ಪ ನೀಲದ್ಹಣ್ಣಾ||

೨ ನೆಯ ಚೌಕ-

ಕರಿ ರೂಪಕ ಕಿಗ್ಗಳ ಮಾಡಿ | ಅಡ್ತಿ ಯಾಸಿ ದೀಡಿ
ನಿನಗ ಏನು ಧಾಡಿ | ತಿಳಿಯೊಣಿಲ್ಲ |
ನನ್ನ ಕರಿಯ ರೂಪ ಹೆಚ್ಚಾದ ಸುಳ್ಳ ಅಲ್ಲ |
ನಿನ್ನ ಕೆಂಪ ರೂಪ ಯಾತಕ್ಕು ಬರುವುದಿಲ್ಲ |

ನಿನ್ನ ರೂಪಿಂಧೇಳತೀನಿ ಝಾಡಿ | ಉತ್ರ ಮಾಡಿ ತೋಡಿ
ಹೌದೊ ಅಲ್ಲೊ ನೋಡಿ ಮಾಡೊ ಕಬುಲ ||

ರಣದಾಗ ನನ್ನ ಸಾಮರ್ಥ | ಹೇಳತಿನಿ ಗುರ್ತ
ಕರಿಯ ಮದ್ದ ತುರ್ತ | ಆದ ಮಿಗಿಲ |
ಗುಂಡಹಾಕಿ ಹೊಡೆದರ ದಂಡ ಅಡವಿ ಪಾಲ |
ಕರಿ ಕಬ್ಬಿಣ ಹೊಡೆತಕ ಒಡೆದು ಹೊಯ್ತು ಕಲ್ಲ |

ನನ್ನಿಂದೆ ಆವ ಹತಿಯಾರ | ಕಾಳಮ್ಮನವತಾರ
ತುಬಾಕಿ ಬಂಧೂಕ ಕತ್ತಿ ಢಾಲ ||

ನನ ಕಂಡು ತೆರೆದನೋ ಬಾಯಿ | ರಾವಣ ಕಿಸುಬಾಯಿ
ನಾನೆ ಇದಿ ಮಾಯಿ ಹೋಗಿದ್ದೆ ಮೊದಲ |
ನಾ ಹೋದ ಬಳಿಕ ಹಿಂದಿಂದ ಬಂತೊ ಬಾಲ |
ರಾವಣನ ಸಂಪತಿ ಮಾಡುದಕಳಿಗಾಲ
ಕರಿಹಣಮ ಹಾನ ಮೂರ ಡೊಂಕಿ | ಹಾರಿದಾ ಲಂಕಿ
ಹಚ್ಚಿ ಅಂವ ಬೆಂಕಿ ಸುಟ್ಟ ಎಲ್ಲ

||ಇಳುವು||

ಕೆಂಪ ಕೋತಿಯಂಥ ಜೋಕ್ಮಾರ | ಮೆರೆದ ಬಲ್ಭಾರ
ಕರಿಯ ಹೊಲಿಯಾರ | ಹೊಡದ ಅವನ ಪ್ರಾಣ
ಕೀಚಕ ನೋಡಿ ದ್ರೌಪದೀ ಕಳಿ ಕೂಡೇನಂದ ಬಳಿ
ಕರಿಯ ಭೀಮ ಸೀಳಿ, ಒಗೆದ ಅವನ ಹೆಣ ||
ಕರಿ ಪರಿಮಳೆ ಹೆಣ್ಣ ಪರವಾರ್ತ | ಆಕಿಯ ಸಾಮರ್ಥ |
ಫಾಲ್ಗುಣ ಪಾರ್ಥ | ಯುದ್ಧ ಮಾಡಿಕೊಟ್ಟ ಬಂದ ಬಿಲ್ಬಾಣ

||ಏರು||

ಆದಿ ಬುನಾದಿ ನನ್ನ ಕತ್ತಲಿ | ಓಂಕಾರದಲ್ಲಿ
ರೂಪ ನಂದು ಅಲ್ಲಿ | ಇತ್ತ ಖೂನಾ |
ಮುಂದ ಸೃಷ್ಟಿ ಮಾಡಿ ಭಾರ ತಾಳಿ ಚೌದಾ ಭುವನಾ |
ಸೂರ್ಯ ಚಂದ್ರ ಬೆಳಕ ನನ್ನಿಂದ ಆಯ್ತೊ ಮುನ್ನಾ |
ಏನು ಹೇಳಲಿ ನಾರಿ ನಿನ ಕಪ್ಪ ಎಂಥ ನಿನ್ನ ರೂಪ |
ಆಯಿತ ನೆಪ್ಪ ನೀಲದ್ಹಣ್ಣ ||

೩ ನೆಯ ಚೌಕ

ಕರಿರೂಪಿಂದ್ಹೇಳ್ತೆ ಬಡಿವಾರ | ಮಾಡಿ ಬಲ್ಭಾರ
ಹೇಳತಿನಿ ಪೊರ | ಮಾಡಿ ಖುಲ್ಲಾ |
ಮುಂಚ ಸಬಂದ ಬೆಳಕ ಸುವರ್ಣ ಇತ್ತ ಮೊದಲ |
ನಿಜ ವಸ್ತು ನಿರ್ವಿಕಾರ ಮಾಡಿದಾಗ ಅಮಲಾ |

ಅವಗಿಚ್ಚೆ ಬಂತು ಮನದಲ್ಲಿ | ಆಯಿತ ಕತ್ತಲಿ
ಮಾಯದ ಮಾಲಿ | ಬಿತ್ತು ಜಾಲ ||

ಖೋಲ್ಯಾಗ ಒಯ್ದು ಕತ್ತಲಿ | ಇಟ್ಟ ಜ್ವಾಕಿಲೀ
ಹಾಕಿದಾನ ಕೀಲಿ ಸುತ್ತ ಎಲ್ಲ |
ಏಳು ಲಕ್ಷ ವರ್ಷ ಅದರ ಕೈದ್ಯಾಗಿಟ್ಟನೆಲ್ಲಾ ||
ಮುಂಚ ಮಥನ ಮಾಡಿದವನ ಮೈಮಿಗಿ ಅಳತಿಲ್ಲ |
ಆಕಿ ಕೈದಿ ಬಿಟ್ಟಿದಾ ಪುನಃ | ಸೂರ್ಯ ಚಂದ್ರ ದಿನ
ಎರಡು ಮಾಡಿ ಸವನ | ರಾತ್ರಿ ಹಗಲ ||
ಕರಿ ಮದ್ದಿಂದು ಹೇಳತೆ ಬಡಿವಾರ | ಮಾಡಿ ಒಳೆಭಾರ
ಹೇಳತೀನಿ ಸಾರ | ತೆಗೆದು ಅಕಲಾ |
ನನ್ನ ಕೆಂಪ ಗಂಧಕ ಒಳಗ ಕೂಡ್ಯಾದ ಮಿಗಿಲ |
ಕೆಂಪ ಬೆಂಕಿ ಹಚ್ಚಿದರ ಮದ್ದ ಹಾರುದು ಮುಗಿಲ |

ಅಗ್ನಿ ನಾರಾಯಣನ ಸಾಮರ್ಥ | ಕೆಂಪ ರೂಪ ತುರ್ತ
ಸುಟ್ಟು ಆದಿ ಭರತ | ಆಗ ಕಬುಲ ||

||ಇಳುವು||

ಮಾರುತಿದು ಹೇಳತಿನಿ ಉತ್ರ | ವಾಯು ಸುತ ಪುತ್ರ
ಸಾಂಬನವತಾರ | ಕೆಂಪ ರೂಪ ನೇಮ ||
ಬೆಂಕಿ ಹಚ್ಚಿದ ಲಂಕಾಕ ಹಾರಿ | ಕೆಂಪು ಅಗ್ನಿ ಉರಿ |
ಜಳಾ ಹತ್ತಿ ಮಾರಿ | ಕಪ್ಪ ಆಯ್ತು ಚರ್ಮ ||
ನಿನಗ್ಹೇಳತೀನಿ ದೃಷ್ಟಾಂತ | ಆತ್ಮನ ಗುರುತ
ವಾದ ಹಾಕಿ ವ್ಯರ್ಥ | ಆದ ನಿನ್ನ ಜನ್ಮ ||

||ಏರು||

ಕೆಂಪ ರೂಪಿನದೆಷ್ಟು ಐಸಿರಿ | ಪ್ರಭು ಹಾನ ಧೊರಿ |
ಅಲ್ಲ ಅವನ ಸರಿ | ನಿನ್ನ ಬಣ್ಣ |
ಅವನ ಬೆಳಕಿನಲ್ಲ ತಿರುಗಾಡಿ ಉಣ್ಣುದು ಜನ |
ನಿನ್ನ ಕತ್ತಲಿಯೊಳಗ ಉಪವಾಸ ಪರಿಪೂರ್ಣ |
ಏನು ಹೇಳಲಿ ನಾರಿ ನಿನ್ನ ಕಪ್ಪ ಎಂಥ ನಿನ್ನ ರೂಪ
ಆಯಿತ ನೆಪ್ಪ | ನೀಲದ್ಹಣ್ಣ||

೪ನೆಯ ಚೌಕ-

ನಿನ್ನ ಸಾಂಬಂದು ಹೇಳ್ತಿ ಸಾಮರ್ಥ | ಯಾವ ದೊಡ್ಡ ಪಾರ್ಥ |
ಸಾರತಿ ಅವನ ವಾರ್ತಾ | ನನ್ನ ಮುಂದ |
ಕರಿ ಭಿಲ್ಲಣಿಗ್ಯಾಕ ಬೆನ್ನ ಹತ್ತಿದ ಹಿಂದ ಮುಂದ
ಕರಿ ಡೊಂಬತಿ ಕಾಲಾಗ ಟೊಣ್ಣಿ ಏಟ ತಿಂದ |
ಕರಿ ವಿಷಾ ನುಂಗಿ ಶಂಕರ | ಧಗಿಯೆ ಬಿತ್ತು ಜೋರ
ತಲಿಯ ಮ್ಯಾಲ ಪೂರ | ಗಂಗಿ ಹೌದ ||

ಸಮುದರಕ ಮಾಡಿದಾ ಮಥುನ | ಚೌದಾ ಹೊಂಟು ರತನ |
ವಿಷಾ ಒಂದು ಜತನ | ತೆಗೆದು ಹಿರದ |
ವಿಷದುರುಪ ಬಿದ್ದು ಜಡಿಯೊಳಗ ಗಂಗಿನ ತಂದ |
ಕರಿ ನೀರಂದ್ಹೇಳಬ್ಯಾಡ ದಮ್ಮ | ಆಗಲಿಲ್ಲ ಕಮ್ಮ
ಶಬ್ದ ಅಂದ ರಾಮ |ಶಾಂತವಾದ ||

ಇಬ್ಬರದು ನಡಿತ ಹೀಂಗವಾದ | ಸಾಂಬ ಕೇಳಿದ ||
ಸಿಟ್ಟಿಗಿ ಬಂದ | ಕ್ರೋಧದಿಂದ
ಯಮನರಿಗಿ ಹೇಳಿದಾನ ಜೀವ ತರ್ರ್ಯೊನಂದ |
ಯಮ ಹೋಗಿ ಜಗ್ಗಿ ತನ್ನ ಜೀವ ಎಳೆದು ಒಯ್ದ |
ಬೆಳಕ್ಹಾರಿ ಹೋಯಿತು ಅಂತರಲಿ | ಬಿತ್ತ ಕತ್ತಲಿ |
ಗುರುವಿನ ಕೀಲಿ ತಿಳಿಯದು ಸಂದಾ ||

ಈ ದೇಹವೆಂಬುದು ಹೆಣ್ಣ | ಆಗೂದು ಮಣ್ಣ
ಗಂಡ ಜೀವ ಬಣ್ಣ | ಒಳಗ ಇರುದಾ |
ಜೀವ ಕಡಿಗಿ ಆದ ಮ್ಯಾಲ ದೇಹ ಕತ್ತಲಿಗೊಯ್ದಾ |
ಬೆಳಕ್ಹಾರಿ ಆಕಾಶದ ಕಡಿ | ಒಳಗಿನ ಕುಡಿ
ಹೋಯ್ತು ಇನ್ನು ಹಿಡಿ ಹಾರಿ ಜಿಗಿದಾ ||

 

||ಇಳುವು||

ಈ ಜ್ಯೋತಿ ಚಿರಂಜೀವ ಇರುದ ದೇಹ ಸಾವುದ |
ಹಾಕಬ್ಯಾಡ ವಾದ | ನೆನಿಯ ಪರಮಾತ್ಮ ||
ಗುರುಹರದಾಸ ಪ್ರಸನ್ನ | ವಸ್ತಾದಾನ ತಾನ |
ಸಂಗೂ ರಾಯಪನ | ಜ್ಞಾನದಲಿ ಪ್ರೇಮ ||
ಇರೂ ಠಿಕಾಣಿ ಹಲಸಂಗಿ ಗ್ರಾಮ | ಕತ್ತಲಾಯ್ತ ಕಮ್ಮ |
ಬೆಳಕ ಚಂದ್ರಾಮ | ತುರಾಯಿ ಹಚ್ಚಿ ಜೋಮ ||

||ಏರು||

ಸರ್ವಜನಕ ಮಾಡತಿನಿ ಶರಣ | ಇರಲಿ ಅಂತಃಕರಣ |
ಗುರುವಿನ ಚರಣ | ಹಿಡಿದು ಸವನ |
ಖಾಜಾನ ಕವಿಯ ನೋಡಿರಿ ಮುಡಿದಂಗ ದವನ |
ಈ ಜೀವ ದೇಹಕ ಲಾವಣಿ ಮಾಡಿ ರತನ |
ಏನು ಹೇಳಲಿ ನಾರಿ ನಿನ್ನ ಕಪ್ಪ | ಎಂಥಾ ನಿನ್ನ ರೂಪ |
ಆಯಿತ ನೆಪ್ಪ ನೀಲದ್ಹಣ್ಣಾ ||

 

ರಚನೆ : ಖಾಜಾಬಾಯಿ
ಕೃತಿ : ಜೀವನ ಸಂಗೀತ